ಬೆಂಗಳೂರು: ಕಲ್ಯಾಣ ಕರ್ನಾಟಕ ವಿಭಾಗದ ಸಾರಿಗೆ ನಿಗಮವು ತನ್ನ ನೌಕರರಿಗೆ ಸಮವಸ್ತ್ರಕ್ಕಾಗಿ ನಿಗದಿಯಂತೆ ದರಪಟ್ಟಿಯನ್ನು ನಿಗದಿಪಡಿಸಿ ಆದೇಶವನ್ನು ಹೊರಡಿಸಿದ್ದು, ಇದರ ಪ್ರಕಾರ ನಿಗದಿಪಡಿಸಿರುವ ಮೊತ್ತದಲ್ಲಿ ಎರಡು ಜತೆ ಪ್ಯಾಂಟ್ ಶರ್ಟ್ ಇರಲಿ, ಸಂಪೂರ್ಣವಾಗಿ ಒಂದು ಜತೆ ಬಟ್ಟೆ ಹೊಲಿಸಲಿಕ್ಕೂ ಬರೊಲ್ಲ. 2 ಪ್ಯಾಂಟ್ 2 ಶರ್ಟ್ ಖಾಕಿ ಸೂಟಿಂಗ್ಸ್(ಒಟ್ಟು 5.6 ಮೀಟರ್ ನಂತೆ)ಗೆ ಒಂದು ವರ್ಷಕ್ಕೆ ಪಾವತಿಸುತ್ತೇನೆಂದು ಹೇಳಿರುವುದು 742 ರೂ. ನೀಲಿ ಸೂಟಿಂಗ್ಸ್ ಗೆ 750 ರೂ. ಹಾಗೆ ವೋಲ್ವೋ ಸಿಬ್ಬಂದಿಯ ಬಿಳಿ ಸೂಟಿಂಗ್ಸ್‌ಗೆ 731 ರೂ. ನಗದು ಪಾವತಿಸುವುದಾಗಿ ಸುತ್ತೋಲೆಯಲ್ಲಿ ತಿಳಿಸಿದೆ.
ಇನ್ನು ಮಹಿಳಾ ಸಿಬ್ಬಂದಿಗಳಿಗೆ 2 ಜತೆ ಖಾಕಿ ಮತ್ತು ನೀಲಿ ಸೀರೆ, ರವಿಕೆ (6.20 ರಿಂದ 6.30 ಮೀಟರ್) ಗೆ 1,707 ರೂ.ಗಳನ್ನು ನಗದಾಗಿ ಪಾವತಿಸಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ ವಾಸ್ತವದಲ್ಲಿ ಇದು ಸಾಧ್ಯವೇ ಎಂದು ನೋಡಿದರೆ ಹಸಿದ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ… ಆನೆ ಬಾಯಿಗೆ ಹಪ್ಪಳ ಎನ್ನುವಂತಾಗಿದೆ.
ರೇಮಂಡ್ಸ್ ಕಂಪೆನಿಯ ಬಟ್ಟೆಯಲ್ಲೇ ಪ್ಯಾಂಟ್-ಶರ್ಟ್ ಹೊಲೆದು ಪೂರೈಸುವ ಸಂಪ್ರದಾಯ ಸಾರಿಗೆ ನಿಗಮಗಳಲ್ಲಿದೆ. ಈಗಂತೂ ಬೆಲೆ ಸಾಕಷ್ಟು ಗಗನಮುಖಿಯಾಗಿದೆ. ಹೀಗಾಗಿ ನಿಗಮವು ಕಾರ್ಮಿಕರಿಗೆ ಬಟ್ಟೆ ಖರೀದಿಸಿ ಹೊಲಿದು ಪೂರೈಸುವ ಬದಲು ಅದರ ಹಣವನ್ನು ನೀಡುತ್ತೇವೆ, ನೀವೇ ಖರೀದಿಸಿ ಹೊಲಿಸಿಕೊಂಡು ಹಾಕಿಕೊಳ್ಳಿ. ಅದರಲ್ಲಿ ಉಳಿದರೆ, ನೀವೇ ಬಳಸಿಕೊಳ್ಳಿ ಎನ್ನುವಂತೆ ಸುತ್ತೋಲೆಯಲ್ಲಿ ತಿಳಿಸಿದೆ.
ಇಂದಿನ ದುಡಿಮೆ, ಸಂಬಳ, ಭತ್ಯೆಗಳು ಪಾತಾಳಮುಖಿಯಾಗಿದೆ, ಬಳಕೆಯ ವಸ್ತುಗಳು ಗಗನಮುಖಿಯಾಗಿವೆ. ಅಂತದ್ದರಲ್ಲಿ ಸಾರಿಗೆ ಕಾರ್ಮಿಕರಿಗೆ ಸಮವಸ್ತ್ರ ಕೊಂಡು ಹೊಲಿಸಿಕೊಳ್ಳೊಕ್ಕೆ ನೀಡಲು ಹೊರಟಿರುವ ದರ ಕೇಳಿದರೆ ಎಂಥವರಿಗೂ ಆಶ್ಚರ್ಯ ಹಾಗೂ ಗಾಬರಿ ಮೂಡಿಸುತ್ತೆ.
ನಿಗಮದ 3 ಮತ್ತು 4ನೇ ದರ್ಜೆ ಸೇವೆಯಲ್ಲಿರುವ ತರಬೇತಿ ಕಾರ್ಮಿಕರಿಗೆ 2019-20 ಮತ್ತು 2020-21ರ ಸಾಲಿಗೆ ಅನ್ವಯವಾಗುವಂತೆ ಸಮವಸ್ತ್ರಕ್ಕೆ ಬದಲಾಗಿ ನಗದು ಹಾಗೂ ಹೊಲೆಗೆ ವೆಚ್ಚವನ್ನು ಪಾವತಿಸುವುದಕ್ಕೆ ಸಂಬಂಧಿಸಿದಂತೆ ಹೊರಡಿಸಿರುವ ಸುತ್ತೋಲೆ ಕಂಡು ಸಾರಿಗೆ ನೌಕರರು ವಿರೋಧ ವ್ಯಕ್ತಪಡಿಸಿದ್ದಾರೆ.
1 ಮೀಟರ್ ಬಟ್ಟೆಗೆ ಕನಿಷ್ಟ 700 ರೂ. ಇದೆ. ಒಂದು ಪ್ಯಾಂಟ್ ಹೊಲಿಸಿಕೊಳ್ಳಲು 1.10 ಮೀಟರ್ ಬಟ್ಟೆ ಬೇಕು. ಶರ್ಟ್ ಗೆ 2.2 ಮೀಟರ್ ಬೇಕು. ಶರ್ಟ್ ಪ್ಯಾಂಟ್ ಹೊಲಿದುಕೊಡುವ ಕೂಲಿ ಎಲ್ಲಾ ಸೇರಿದ್ರೆ ಒಂದು ಜತೆ ಪ್ಯಾಂಟ್ ಗೆ 1000 ರೂ. ಆಗುತ್ತೆ. ಇದಕ್ಕೆ ಮತ್ತೊಂದು ಸೇರಿಸಿಕೊಂಡರೆ, ಮತ್ತೊಂದು ಸಾವಿರ ಆಗುತ್ತೆ. ಆದರೆ, 2 ಸಾವಿರ ಬೇಕಾಗುವ ಸಮವಸ್ತ್ರಕ್ಕೆ 742 ರೂ. ನಿಗದಿ ಮಾಡಿರುವ ಅಧಿಕಾರಿಗಳು ಕ್ರಮಕ್ಕೆ ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಮಹಿಳೆಯರ ವಿಚಾರಕ್ಕೆ ಬಂದರೆ, ಅವರಿಗೆ ಸಮವಸ್ತ್ರದಲ್ಲಿ ಚೂಡಿದಾರ್ ಅಥವಾ ಪ್ಯಾಂಟ್ ಸಾಕು… ಸೀರೆ ಯಾಕೆ ಬೇಕು ಎಂದು ಮೊದಲಿನಿಂದಲು ಮಹಿಳಾ ಸಿಬ್ಬಂದಿಗಳೇ ಹೇಳುತ್ತಲೇ ಬಂದಿದ್ದಾರೆ. ಆದರೆ, ಅವರ ಬೇಡಿಕೆಗೆ ಸ್ಪಂದಿಸದೆ ನೀಲಿ ಸೀರೆ ಮತ್ತು ರವಿಕೆ ನೀಡಲು ಹೊರಟಿದ್ದಾರೆ. ಮಹಿಳಾ ಸಿಬ್ಬಂದಿಗಳ ಸಮವಸ್ತ್ರಕ್ಕೆ ನಿಗದಿಯಾಗಿರುವ ಮೊತ್ತ 1,707 ರೂ. ಆಗಿದೆ. ಆದರೆ, ಇಷ್ಟು ಹಣದಲ್ಲಿ 2 ಜತೆ ಸಮವಸ್ತ್ರ ಖರೀದಿಸುವುದು, ಹೊಲೆಸುವುದು ಕಷ್ಟವಾಗುತ್ತದೆ ಎನ್ನುವುದು ಮಹಿಳಾ ಸಿಬ್ಬಂದಿಗಳ ವಾದ.
ಆಡಳಿತ ಮಂಡಳಿಗೂ ಇಷ್ಟೊಂದು ಕಡಿಮೆ ಮೊತ್ತದಲ್ಲಿ ಸಮವಸ್ತ್ರಕ್ಕೆ ಖರೀದಿ ಕಷ್ಟಸಾಧ್ಯ ಎನ್ನುವುದು ಗೊತ್ತಿದೆ. ಆದರೂ ಏನೋ ಕೊಟ್ಟಿದ್ದೀವಿ ಎಂದು ಹೇಳಿಕೊಳ್ಳೊಕ್ಕೆ ಈ ಮಾರ್ಗ ಅನುಸರಿಸುತ್ತಿದೆ ಎನ್ನುವುದು ನಿಗಮಗಳಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳ ಹೇಳಿಕೆಯಾಗಿದೆ.