ಮಂಗಳೂರು: ಮಂಗಳೂರು ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲ್ ವಿರುದ್ಧ ಕ್ರಮ ಕೈಗೊಳ್ಳಲು, ಮಂಗಳೂರು ನಗರದಿಂದ ವರ್ಗಾವಣೆಗೊಳಿಸಲು ಕೋರಿ ಸಿಪಿಐಎಂ ಮನವಿ ಮಾಡುತ್ತದೆ ಎಂದು ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.
ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲ್ ಅವರು ಎಡಪಕ್ಷಗಳು, ಜನಪರ, ಜಾತ್ಯತೀತ ಸಂಘಟನೆಗಳು, ಜನಸಾಮಾನ್ಯರ ಬೇಡಿಕೆಗಳ ಮೇಲಿನ ಪ್ರತಿಭಟನೆಗಳ ಕುರಿತು ಅಸಹನೆಯನ್ನು ಹೊಂದಿದ್ದಾರೆ. ಜನ ಸಾಮಾನ್ಯರ, ನೊಂದವರ ಸಮಸ್ಯೆಗಳನ್ನು ಇಟ್ಟು ಕೊಂಡು ನಡೆಸುವ ಧರಣಿ, ಪ್ರತಿಭಟನೆಗಳಿಗೆ ಅನುಮತಿ ನೀಡದೆ ಸತಾಯಿಸುತ್ತಾರೆ. ಭೇಟಿಗೆ ಹೋದರೆ ಅನಗತ್ಯವಾಗಿ ತಾಸುಗಟ್ಟಲೆ ಕಾಯಿಸುತ್ತಾರೆ. ಅದೇ ಸಂದರ್ಭ, ಕಮಿಷನರೇಟ್ ವ್ಯಾಪ್ತಿಯಲ್ಲಿ ಕೋಮುಶಕ್ತಿಗಳ ಚಟುವಟಿಕೆಗಳಿಗೆ, ನಿಯಮ ಉಲ್ಲಂಘನೆಯ ಕಾರ್ಯಕ್ರಮಗಳಿಗೆ ಮುಕ್ತ ಅವಕಾಶ ಒದಗಿಸುತ್ತಾ ಬಂದಿದ್ದಾರೆ.
ಬಿಜೆಪಿ ಹಾಗೂ ಸಂಘಪರಿವಾರ ಇಷ್ಟಪಡದ ಯಾವುದೇ ಪ್ರತಿಭಟನೆಗಳಿಗೆ ಕಮೀಷನರ್ ಅವರು ಅನುಮತಿ ನೀಡುತ್ತಿಲ್ಲ. ಕಲ್ಲಡ್ಕ ಪ್ರಭಾಕರ ಭಟ್ ರ ದ್ವೇಷ ಭಾಷಣ ಖಂಡಿಸಿ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ್ದರು, ಆ ಸಂದರ್ಭ ಕೇವಲ 25 ಕಾರ್ಯಕರ್ತರು, ಧ್ವನಿ ವರ್ಧಕ ಬಳಸದೆ ಸಾಂಕೇತಿಕ ಪ್ರತಿಭಟನೆ ನಡೆಸಿದ್ದೆವು. ಆ ಪ್ರತಿಭಟನೆಯಲ್ಲಿ ಭಾಗಿಯಾದ ಪ್ರತಿಯೊಬ್ಬರ ಮೇಲೂ ಎಫ್ಐಆರ್ ದಾಖಲಾಯಿತು. ಇದೆ ತಿಂಗಳ ಮೂರನೆ ತಾರೀಖು, ಪ್ಯಾಲೆಸ್ತೀನ್ ಮೇಲಿನ ಸಾಮ್ರಾಜ್ಯಶಾಹಿ ಧಾಳಿ ಖಂಡಿಸಿ ಎಡಪಕ್ಷಗಳು ರಾಷ್ಟ್ರಮಟ್ಟದಲ್ಲಿ ನೀಡಿದ ಕರೆಯ ಭಾಗವಾಗಿ ಪ್ರತಿಭಟನಾ ಸಭೆ ನಡೆಸಿದವು. ಆ ಸಭೆಗೂ ಕಮೀಷನರ್ ಕೊನೆಯ ಕ್ಷಣದಲ್ಲಿ ಅನುಮತಿ ನಿರಾಕರಿಸಿದರು.
ಇದನ್ನೂ ಓದಿ : ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲ್ ವರ್ಗಾವಣೆಗೆ ದಲಿತ ಸಂಘರ್ಷ ಸಮಿತಿ ಆಗ್ರಹ
ಆಗಲೂ, ಧ್ವನಿವರ್ಧಕ ಬಳಸದೆ, ಯಾರಿಗೂ ತೊಂದರೆ ಆಗದಂತೆ ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು. ಆ ಪ್ರತಿಭಟನೆ ನಡೆಸಿದ್ದಕ್ಕಾಗಿ ಎಡಪಕ್ಷಗಳ ಒಂಬತ್ತು ಮುಖಂಡರ ಮೇಲೆ ಎಫ್ಐಆರ್ ದಾಖಲಿಸಲಾಯಿತು. ಮೊನ್ನೆ ಇಪ್ಪತ್ತಾರನೇ ತಾರೀಖಿನಂದು ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳ ಪರಿಹಾರಕ್ಕೆ, ರಸ್ತೆ ಗುಂಡಿ ಮುಚ್ಚಲು ಒತ್ತಾಯಿಸಿ ಸಮಾನ ಮನಸ್ಕ ಸಂಘಟನೆಗಳು ಒಂದಾಗಿ ಧರಣಿ ನಡೆಸಿದವು. ಅನುಮತಿ ಕೋರಿ ಎರಡು ವಾರಗಳ ಮುಂಚಿತವಾಗಿಯೇ ಕಮೀಷನರ್ ಅವರಿಗೆ ನಿಯಮದಂತೆ ಪತ್ರ ನೀಡಲಾಗಿತ್ತು. ಈ ಧರಣಿಗೂ ಕೊನೆಯ ಕ್ಷಣದಲ್ಲಿ ಅನುಮತಿ ನಿರಾಕರಿಸಲಾಯಿತು. ಕೊನೆಗೆ, ಶಾಮಿಯಾನ ಹಾಕದೆ, ಧ್ವನಿ ವರ್ಧಕ ಬಳಸದೆ ಉರಿಬಿಸಿಲಿನಲ್ಲಿ, ರಸ್ತೆಯಿಂದ ದೂರದಲ್ಲಿ, ಸಂಚಾರಕ್ಕೆ ಯಾವುದೇ ತಡೆ ಆಗದ ರೀತಿ ಧರಣಿ ನಡೆಸಲಾಯಿತು. ಈ ಧರಣಿಯ ವಿರುಧ್ಧವೂ ಮುಖಂಡರ ಮೇಲೆ ಎಫ್ಐಆರ್ ಹಾಕಲಾಗಿದೆ ಎಂದು .
ಈ ರೀತಿ, ಪದೇ ಪದೆ ಜನಪರ ಸಂಘಟನೆಗಳು ಹಮ್ಮಿಕೊಳ್ಳುವ ಬೇಡಿಕೆ ಆಧಾರಿತ ಧರಣಿ, ಪ್ರತಿಭಟನೆಗಳನ್ನು ತಡೆಯುವುದು, ಮುಖಂಡರ ಮೇಲೆ ಮೊಕದ್ದಮೆ ಹೂಡುವುದು ಕಮೀಷನರ್ ಅವರಿಗೆ ಅಭ್ಯಾಸ ಆಗಿದೆ. ಮಂಗಳೂರು ನಗರ ವ್ಯಾಪ್ತಿಯಲ್ಲಿ ಶಾಸಕರು, ಸಂಸದರ, ನಗರಪಾಲಿಕೆಯ ವೈಫಲ್ಯಗಳ ವಿರುದ್ಧ ಧ್ವನಿ ಎತ್ತಲೇ ಅವಕಾಶ ನೀಡುತ್ತಿಲ್ಲ. ಕೋಮು ಶಕ್ತಿಗಳಿಗೆ ಮುಕ್ತ ಅವಕಾಶ ಕೊಟ್ಟು, ಜಾತ್ಯತೀತ, ಜನಪರ ಸಂಘಟನೆಗಳನ್ನು ಹತ್ತಿಕ್ಕುವ ಈ ಕ್ರಮ ಒಂದು ಪಿತೂರಿಯಂತೆ ನಮಗೆ ಕಾಣುತ್ತಿದೆ. ರಾಜ್ಯ ಸರಕಾರದ ನೀತಿಗೂ, ಪೊಲೀಸ್ ಕಮೀಷನರ್ ಅಗರವಾಲ್ ನಡೆಗೂ ಯಾವುದೇ ಹೊಂದಾಣಿಕೆ ಇಲ್ಲ. ಬಿಜೆಪಿ ಪಕ್ಷದ ನೀತಿಗಳನ್ನು ಕಾಂಗ್ರೆಸ್ ಸರಕಾರದ ಅಡಿಯಲ್ಲಿ ಜಾರಿಗೊಳಿಸಲು ಪೊಲೀಸ್ ಕಮೀಷನರ್ ಯತ್ನಿಸುತ್ತಿದ್ದಾರೆ. ಇಷ್ಟಲ್ಲದೆ, ನಗರದಲ್ಲಿ ಕ್ರೈಂ ಗಳು ವಿಪರೀತವಾಗಿ ಏರಿಕೆ ಕಂಡಿದೆ. ಅಕ್ರಮ ಮರಳು ಸಾಗಾಟ, ಬೆಟ್ಟಿಂಗ್, ಮಟ್ಕಾ, ಇಸ್ಪೀಟು ಕ್ಲಬ್ ಗಳು, ಅಕ್ರಮ ಮಸಾಜ್ ಪಾರ್ಲರ್ ಗಳು ನಾಯಿ ಕೊಡೆಗಳಂತೆ ತಲೆ ಎತ್ತಿವೆ. ಇದೆಲ್ಲವೂ ಕಮೀಷನರ್ ಅಗರವಾಲ್ ರ ಶ್ರೀ ರಕ್ಷೆಯಿಂದಲೇ ನಡೆಯುತ್ತಿರುವ ಆರೋಪಗಳಿವೆ.
ಇದೆಲ್ಲದರಿಂದಾಗಿ ಮಂಗಳೂರಿನ ನಾಗರಿಕರು ರೋಸಿ ಹೋಗಿದ್ದಾರೆ. ರಾಜ್ಯ ಸರಕಾರದ ವರ್ಚಸ್ಸಿಗೂ ಇದರಿಂದಾಗಿ ತೀವ್ರ ರೀತಿಯ ಧಕ್ಕೆ ಆಗುತ್ತಿದೆ. ಕೆಟ್ಟ ಹೆಸರು ಬರುತ್ತಿದೆ. ಇದೆಲ್ಲವನ್ನೂ ಮನಗಂಡು ತಾವುಗಳು ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲ್ ರವರ ಮೇಲೆ ತನಿಖೆಗೆ ಆದೇಶಿಸಬೇಕು, ಸೂಕ್ತ ಶಿಸ್ತು ಕ್ರಮ ಜರುಗಿಸಬೇಕು, ಮಂಗಳೂರು ನಗರದಿಂದ ಅವರನ್ನು ತಕ್ಷಣ ದಿಂದಲೇ ವರ್ಗಾಯಿಸಬೇಕು, ದಕ್ಷ, ಪ್ರಾಮಾಣಿಕ ಅಧಿಕಾರಿಯೋರ್ವರನ್ನು ಮಂಗಳೂರಿಗೆ ಪೊಲೀಸ್ ಆಯುಕ್ತರನ್ನಾಗಿ ನೇಮಿಸಬೇಕು ಎಂದು ತಮ್ಮಲ್ಲಿ ಕಳಕಳಿಯಿಂದ ಮನವಿ ಮಾಡುತ್ತಿದ್ದೇವೆ ಎಂದು ಮುನೀರ್ ಕಾಟಿಪಳ್ಳ ಹೇಳಿಕೆ ನೀಡಿದ್ದಾರೆ.
ಇದನ್ನೂ ನೋಡಿ : ಮಂಗಳೂರು | ನಗರ ಪೊಲೀಸ್ ಕಮೀಷನರ್ ಹಟಾವೋ ಎಂದ ಯುವಜನ ಕಾರ್ಯಕರ್ತರುJanashakthi Media