ಒಡಿಶಾ ರೈಲು ದುರಂತ: ಸಾವಿನ ಸಂಖ್ಯೆ 233ಕ್ಕೆ ಏರಿಕೆ, 900ಕ್ಕೂ ಅಧಿಕ ಮಂದಿಗೆ ಗಾಯ

ಭುವನೇಶ್ವರ್ : ಒಡಿಶಾದಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ 233 ಮಂದಿ ಮೃತಪಟ್ಟು, 900ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ತಮ್ಮ ಕುಟುಂಬದ ಸದಸ್ಯರನ್ನು ಕಳೆದುಕೊಂಡ ಕುಟುಂಬಗಳಲ್ಲಿ ಆಕ್ರಂದನ ಮುಗಿಲು ಮುಟ್ಟಿದ್ದು, ಗಾಯಾಳುಗಳ ಚೀರಾಟ ಮನಕಲಕುವಂತಿದೆ.

ನಿನ್ನೆ ಸಂಜೆ 7 ಗಂಟೆ ಹೊತ್ತಿನಲ್ಲಿ ಒಡಿಶಾದ ಬಾಲಸೋರ್ ಬಳಿಯ ಬಹನಾಗ ರೈಲು ನಿಲ್ದಾಣದ ಬಳಿ ದೊಡ್ಡ ದುರಂತ ಸಂಭವಿಸಿದೆ. ಪಶ್ಚಿಮ ಬಂಗಾಳದ ಹೌರಾ ನಗರದಿಂದ ತಮಿಳುನಾಡಿನ ಚೆನ್ನೈಗೆ ತೆರಳುತ್ತಿದ್ದ ಕೋರಮಂಡಲ್ ​ ಎಕ್ಸ್​ಪ್ರೆಸ್​ ರೈಲು, ಅದೇ ಹಳಿ ಮೇಲೆ ಬರ್ತಿದ್ದ ಗೂಡ್ಸ್‌ ಟ್ರೈನ್‌ಗೆ ಡಿಕ್ಕಿ ಹೊಡೆದಿದೆ. ಎರಡೂ ಟ್ರೈನ್‌ಗಳು ಡಿಕ್ಕಿ ಹೊಡೆದ ಪರಿಣಾಮ ರೈಲಿನ 3 ಸ್ಲೀಪರ್ ಕೋಚ್‌ಗಳನ್ನ ಹೊರತುಪಡಿಸಿ ಉಳಿದ 18 ಬೋಗಿಗಳು ಹಳಿ ತಪ್ಪಿ ಮತ್ತೊಂದು ಹಳಿಯ ಮೇಲೆ ಬಿದ್ದಿವೆ. ಈ ವೇಳೆ ಮತ್ತೊಂದು ಕಡೆಯಿಂದ ಬರುತ್ತಿದ್ದ ಯಶವಂತಪುರ-ಹೌರ ಸೂಪರ್​ಪಾಸ್ಟ್​ ಟ್ರೈನ್​ ಹಳಿ ಮೇಲೆ ಬಿದ್ದಿದ್ದ ಕೋರಮಂಡಲ್​ ಎಕ್ಸ್​ಪ್ರೆಸ್​ ರೈಲು, ಹಾಗೂ ಗೂಡ್ಸ್ ಗಾಡಿಯ ಬೋಗಿಗಳಿಗೆ ಡಿಕ್ಕಿ ಹೊಡೆದಿದೆ ಎಂದು ರೈಲ್ವೆ ಸಚಿವಾಲಯದ ವಕ್ತಾರ ಅಮಿತಾಬ್​ ಶರ್ಮ ಅವರು ತಿಳಿಸಿದ್ದಾರೆ.

ಮೂರು ರೈಲುಗಳ ಮಧ್ಯೆ ಸರಣಿ ಅಪಘಾತ ಸಂಭವಿಸುತ್ತಿದ್ದಂತೆ ಮುಂದಿನ ಭೋಗಿಯಲ್ಲಿದ್ದ ಬಹುತೇಕ ಮಂದಿ ಸಾವನ್ನಪ್ಪಿದ್ದಾರೆ. ಹಿಂಭಾಗದಲ್ಲಿದ್ದ ರೇಲ್ವೇ ಭೋಗಿಗಳು ಪಲ್ಟಿ ಹೊಡೆದಿದೆ. ಅಪಘಾತದಲ್ಲಿ ಸಿಲುಕಿದ್ದ ಹಲವು ಮಂದಿಯನ್ನ ರಕ್ಷಿಸಲು ರಕ್ಷಣಾ ಪಡೆ ಹರಸಾಹಸಪಡುತ್ತಿರುವ ದೃಶ್ಯಗಳು ಕಣ್ಣಿಗೆ ಕಟ್ಟುವಂತಿದೆ. ರೈಲಿನ ಒಳಗಡೆ ಪ್ರಯಾಣಿಕರ ಲಗೇಜ್‌ಗಳು, ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದ ದೃಶ್ಯಗಳು ಕಣ್ಣೀರು ಬರುಸುತ್ತಿವೆ.

ಸಚಿವರ ರಾಜೀನಾಮೆಗೆ ಒತ್ತಾಯ: ಒಡಿಶಾದಲ್ಲಿ ಸಂಭವಿಸಿದ ಘನಘೋರ ತ್ರಿವಳಿ ರೈಲು ದುರಂತದ ಅಪಘಾತಕ್ಕೆ ಸಂಬಂಧಿಸಿದಂತೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ರಾಜೀನಾಮೆಗೆ ವಿಪಕ್ಷಗಳು ಒತ್ತಾಯಿಸಿವೆ. ಕೇಂದ್ರ ಸರಕಾರ, ಪ್ರತಿಪಕ್ಷ ನಾಯಕರ ಮೇಲೆ ಕಣ್ಣಿಡಲು ಸಾಫ್ಟ್‌ವೇರ್‌ಗಾಗಿ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ. ಆದರೆ ಅಪಘಾತಗಳನ್ನು ತಡೆಯಲು ರೈಲುಗಳಲ್ಲಿ ಸಾಧನಗಳನ್ನು ಅಳವಡಿಸುವುದನ್ನು ನಿರ್ಲಕ್ಷಿಸುತ್ತಿದೆ. ರಾಜಕೀಯ ಲಾಭಕ್ಕಾಗಿ ವಂದೇ ಭಾರತ್ ರೈಲುಗಳು ಮತ್ತು ಹೊಸದಾಗಿ ನಿರ್ಮಿಸಲಾದ ರೈಲು ನಿಲ್ದಾಣಗಳ ಉದ್ಘಾಟನೆಯಲ್ಲಿ ತೊಡಗಿದೆ. ಆದರೆ, ಸುರಕ್ಷತಾ ಕ್ರಮಗಳನ್ನು ನಿರ್ಲಕ್ಷಿಸುತ್ತಿದೆ. ಹೀಗಾಗಿ ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿವೆ.

ಉನ್ನತ ಮಟ್ಟದ ತನಿಖೆಗೆ ಆದೇಶ: ಕಂಡು ಕೇಳರಿಯದ ರೀತಿಯಲ್ಲಿ ಸಂಭವಿಸಿದ ದುರಂತದಿಂದ ಭಾರೀ ಟೀಕೆ ವ್ಯಕ್ತವಾಗಿದ್ದು, ಕೇಂದ್ರ ಸರ್ಕಾರ ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. ಘಟನೆಯ ಕುರಿತು ಮಾತನಾಡಿದರು ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್, ಅಪಘಾತವು ದುರದೃಷ್ಟಕರವಾಗಿದೆ. ರೈಲು ಬೋಗಿಗಳು ಹಳಿ ತಪ್ಪಲು ಕಾರಣವೇನೆಂದು ತಿಳಿಯಲು ತನಿಖೆಗೆ ಆದೇಶಿಸಲಾಗಿದೆ ಎಂದು ಅವರು ಹೇಳಿದರು.

ಇದೇ ವೇಳೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶನಿವಾರ ಅಪಘಾತ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಭೀಕರ ಸ್ಥಳದಲ್ಲಿ ನಡೆಯುತ್ತಿರುವ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಳ್ಳಲು ಖರಗ್‌ಪುರದಿಂದ ಅಧಿಕಾರಿಗಳನ್ನು ಕಳುಹಿಸಲಾಗಿದೆ.

ಪರಿಹಾರ ಘೋಷಣೆ: ಕೇಂದ್ರ ರೈಲ್ವೆ ಸಚಿವ ಅಶ್ಬಿನಿ ವೈಷ್ಣವ್​ ಸ್ಥಳದಲ್ಲಿ ಬಿಡಾರ ಹೂಡಿದ್ದು, ರಕ್ಷಣಾ ಕಾರ್ಯಾಚರಣೆಗಳ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಈಗಾಗಲೇ ಕೇಂದ್ರ ರೈಲ್ವೆ ಇಲಾಖೆ ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ ಪರಿಹಾರ ಘೋಷಣೆ ಮಾಡಿದ್ದರೆ, ಗಾಯಾಳುಗಳಿಗೆ ತಲಾ 2 ಲಕ್ಷ ರೂ. ಹಾಗೂ ಸಣ್ಣ ಪುಟ್ಟ ಗಾಯಗೊಂಡವರಿಗೆ ತಲಾ 50 ಸಾವಿರ ರೂ ಘೋಷಣೆ ಮಾಡಿದೆ. ಪ್ರಧಾನಿ ಮೋದಿ ಘಟನೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಪ್ರಧಾನಿ ಧನ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ ಪರಿಹಾರ ಘೋಷಣೆ ಮಾಡಿದ್ದಾರೆ.

ಈ ಹಿಂದೆ ನಡೆದ ರೈಲು ದುರಂತದ ಅಂಕಿ ಅಂಶ : ಸ್ವಾಂತತ್ರ್ಯ ಭಾರತದ ನಂತರ ಸಂಭವಿಸಿದ ಅತ್ಯಂತ ಮಾರಾಣಾಂತಿಕ ಅಪಘಾತಗಳಲ್ಲಿ ಒಡಿಶಾ ರೈಲು ದುರಂತ ಕೂಡ ಒಂದಾಗಿದೆ ಎಂದು ಅಂಕಿ-ಅಂಶಗಳು ತಿಳಿಸಿವೆ.

ಭಾರತದ ಇತಿಹಾಸದಲ್ಲಿ ಸಂಭವಿಸಿರುವ ಅತ್ಯಂತ ಭೀಕರ ರೈಲು ಅಪಘಾತಗಳ ಚಿತ್ರಣ ಇಲ್ಲಿದೆ…

* 1981ರ ಜೂನ್​ 6ರಂದು ಭಾರತವು ಅತ್ಯಂತ ಭೀಕರ ರೈಲು ದುರಂತಕ್ಕೆ ಸಾಕ್ಷಿಯಾಯಿತು. ಬಿಹಾರದಲ್ಲಿ ಈ ದುರಂತ ಘಟಿಸಿತು. ಸೇತುವೆಯನ್ನು ದಾಟುವಾಗ ರೈಲು ಬಾಗಮತಿ ನದಿಗೆ ಬಿದ್ದು, ಸುಮಾರು 750ಕ್ಕೂ ಹೆಚ್ಚು ಮಂದಿ ಅಸುನೀಗಿದರು.

* 1995ರ ಆಗಸ್ಟ್​ 20ರಂದು ಉತ್ತರ ಪ್ರದೇಶದ ಫಿರೋಜಾಬಾದ್​ ಬಳಿ ಪುರುಷೋತ್ತಮ್​ ಎಕ್ಸ್​ಪ್ರೆಸ್​ ರೈಲು, ಸ್ಟೇಷನರಿ ಕಾಳಿಂದಿ ಎಕ್ಸ್‌ಪ್ರೆಸ್ ರೈಲಿಗೆ ಡಿಕ್ಕಿ ಹೊಡೆಯಿತು. ಈ ಭಯಾನಕ ಅಪಘಾತದಲ್ಲಿ 305ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡರು.

* 1988ರ ನೆವೆಂಬರ್​ 26ರಂದು ಪಂಜಾಬ್​ನ ಖನ್ನಾದಲ್ಲಿ ಫ್ರಂಟಿಯರ್ ಗೋಲ್ಡನ್ ಟೆಂಪಲ್ ರೈಲಿನ ಹಳಿತಪ್ಪಿದ ಮೂರು ಬೋಗಿಗಳಿಗೆ ಜಮ್ಮು ತವಿ-ಸೀಲ್ದಾ ಎಕ್ಸ್‌ಪ್ರೆಸ್ ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ 212 ಮಂದಿ ಅಸುನೀಗಿದರು.

* 1999ರ ಆಗಸ್ಟ್​ 2ರಂದು ಪಶ್ಚಿಮ ಬಂಗಾಳದ ಗೈಸಾಲ್​ನಲ್ಲಿ ರೈಲು ದುರಂತ ಸಂಭವಿಸಿತು. ಉತ್ತರ ಫ್ರಂಟಿಯರ್ ರೈಲ್ವೆ ಕತಿಹಾರ್ ವಿಭಾಗದ ಗೈಸಾಲ್ ನಿಲ್ದಾಣದಲ್ಲಿ ಬ್ರಹ್ಮಪುತ್ರ ರೈಲು, ಅವಧ್ ಅಸ್ಸಾಂ ಎಕ್ಸ್‌ಪ್ರೆಸ್‌ಗೆ ಅಪ್ಪಳಿಸಿತು. ಪರಿಣಾಮ 285 ಮಂದಿ ಮೃತಪಟ್ಟು, 300ಕ್ಕೂ ಅಧಿಕ ಮಂದಿ ಗಾಯಗೊಂಡರು. ಈ ದುರಂತದಲ್ಲಿ ಬಹುತೇಕ ಸಂತ್ರಸ್ತರು ಸೇನೆ, ಬಿಎಸ್​ಎಫ್​ ಮತ್ತು ಸಿಆರ್​ಪಿಎಫ್​ ಸಿಬ್ಬಂದಿಯಾಗಿದ್ದರು.

* 2016ರ ನವೆಂಬರ್​ 20ರಂದು ಇಂದೋರ್-ರಾಜೇಂದ್ರ ನಗರ ಎಕ್ಸ್‌ಪ್ರೆಸ್‌ನ 14 ಬೋಗಿಗಳು ಉತ್ತರ ಪ್ರದೇಶದ ಕಾನ್ಪುರದಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಪುಖ್ರಾಯನ್‌ನಲ್ಲಿ ಹಳಿತಪ್ಪಿದವು. ಈ ಅವಘಡದಲ್ಲಿ 152 ಮಂದಿ ಮೃತಪಟ್ಟು, 260ಕ್ಕೂ ಅಧಿಕ ಮಂದಿ ಗಾಯಾಳುಗಳಾದರು.

* 2002ರ ಸೆಪ್ಟೆಂಬರ್​ 9ರಂದು ಪಶ್ಚಿಮ ಬಂಗಾಳದ ಹೌರಾ ರಾಜಧಾನಿ ಎಕ್ಸ್‌ಪ್ರೆಸ್ ರೈಲು ಬಿಹಾರ ರಾಜ್ಯದ ಔರಂಗಾಬಾದ್ ಜಿಲ್ಲೆಯ ರಫಿಗಂಜ್‌ನ ಧಾವೆ ನದಿಯ ಸೇತುವೆಯ ಮೇಲೆ ಹಳಿತಪ್ಪಿ 140ಕ್ಕೂ ಹೆಚ್ಚು ಜನರು ಸಾವಿಗೀಡಾದರು. ಇದು ಉಗ್ರರ ಕೃತ್ಯ ಎಂಬ ಸುದ್ದಿಯು ಆಯಿತು.

* 1964ರ ಡಿಸೆಂಬರ್​ 23ರಂದು ಪಂಬನ್-ಧನುಷ್ಕೋಡಿ ಪ್ಯಾಸೆಂಜರ್ ರೈಲು ರಾಮೇಶ್ವರಂ ಸೈಕ್ಲೋನ್‌ನಿಂದ ಕೊಚ್ಚಿಹೋಗಿ, ಅದರಲ್ಲಿದ್ದ 126 ಪ್ರಯಾಣಿಕರು ಮೃತಪಟ್ಟರು.

* 2010ರ ಮೇ 28ರಂದು ಜ್ಞಾನೇಶ್ವರಿ ಎಕ್ಸ್‌ಪ್ರೆಸ್ ರೈಲು ಹಳಿತಪ್ಪಿ ಭೀಕರ ದುರಂತ ಸಂಭವಿಸಿತು. ಮುಂಬೈಗೆ ತೆರಳುತ್ತಿದ್ದ ರೈಲು ಜಾರ್‌ಗ್ರಾಮ್ ಬಳಿ ಹಳಿತಪ್ಪಿ, ಮುಂದೆ ಬರುತ್ತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆಯಿತು. ಇದರ ಪರಿಣಾಮ 148 ಪ್ರಯಾಣಿಕರು ಕೊನೆಯುಸಿರೆಳೆದರು.

Donate Janashakthi Media

Leave a Reply

Your email address will not be published. Required fields are marked *