ಬೆಂಗಳೂರು: ಕೊರೊನಾ ಹೊಡೆತದಿಂದ ಇದೀಗ ಚೇತರಿಕೆ ಕಾಣುತ್ತಿರುವ ಬಿಎಂಟಿಸಿ, ಕೆಎಸ್‌ಆರ್‌ಟಿಸಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ನಿಗಮಗಳ ಬಸ್ಗಳು ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಪರಿಣಾಮ ವರ್ಷವೊಂದರಲ್ಲಿಯೇ ಸಂಚಾರಿ ಪೊಲೀಸರಿಂದ ಬಾಕಿ ಇರುವ ಬರೋಬ್ಬರಿ ಒಂದು ಕೋಟಿಗೂ ಅಧಿಕ ದಂಡವನ್ನು ಪಾವತಿಸುವಂತೆ ನೋಟಿಸ್ ಜಾರಿ ಮಾಡಲಾಗಿದೆ.
ಕೆಎಸ್‌ಆರ್ಟಿಸಿ ಹಾಗೂ ಬಿಎಂಟಿಸಿ ಬಸ್ ಗಳು ಸಂಚಾರ ನಿಯಮ ಉಲ್ಲಂಘಿಸಿದ ಪರಿಣಾಮ ವರ್ಷವೊಂದರಲ್ಲಿಯೇ ಬಾಕಿ ಇರುವ ಒಂದು ಕೋಟಿಗೂ ಅಧಿಕ ದಂಡವನ್ನ ಪಾವತಿಸುವಂತೆ ಸಂಚಾರಿ ಪೊಲೀಸರು ನೋಟೀಸ್ ನೀಡಿದ್ದಾರೆ. ಡಿಪೋಗೂ ಸೇರಿದಂತೆ ಚಾಲಕರಿಗೂ ನೋಟೀಸ್ ನೀಡಿದ್ದಾರೆ. ಇದು ಚಾಲಕ ಹಾಗೂ ಕಂಡಕ್ಟರ್ ಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.
ಅತಿ ವೇಗದ ಚಾಲನೆ, ನೋ ಪಾರ್ಕಿಂಗ್, ಸಿಗ್ನಲ್ ಜಂಪ್ ಸೇರಿದಂತೆ ಹಲವು ನಿಯಮಗಳನ್ನ ಉಲ್ಲಂಘಿಸಿದ್ದಾರೆ. ಬಸ್ ಗಳ ನಂಬರ್ ಉಲ್ಲೇಖಿಸಿಯೇ ನೋಟೀಸ್ ನೀಡಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ಸಂಚಾರಿ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ನಿಗಮಗಳ ಮೇಲೆ 35,048 ಪ್ರಕರಣ ದಾಖಲಾಗಿವೆ. ಇವೆಲ್ಲ ಕೇಸ್ಗಳಿಂದ ಕೆಎಸ್‌ಆರ್ಟಿಸಿ ಮತ್ತು ಬಿಎಂಟಿಸಿ ಬರೋಬ್ಬರಿ 1,94,83,200 ರೂಪಾಯಿ ದಂಡ ಬಾಕಿ ಉಳಿಸಿಕೊಂಡಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಚಾಲಕರಿಗೆ ‘ದಂಡದ’ ಹೊಣೆ : ದಂಡದ ಮೊತ್ತವನ್ನ ಚಾಲಕರೇ ಪಾವತಿಸಬೇಕೆಂದು ಡಿಪೋ ಮ್ಯಾನೇಜರ್ ತಿಳಿಸಿದ್ದಾರೆ ಎನ್ನಲಾಗಿದೆ. ಕಟ್ಟದೆ ಇದ್ದಲ್ಲಿ ಅವರ ಸಂಬಳದಲ್ಲಿ ಕಡಿತಗೊಳಿಸುವುದಾಗಿ ವ್ಯವಸ್ಥಾಪಕರು ಹೇಳುತ್ತಿದ್ದಾರೆ ಎನ್ನಲಾಗಿದೆ. ಇದರಿಂದ ಸಹಜವಾಗಿಯೇ ಚಾಲಕರು ಕಂಗಲಾಗಿದ್ದಾರೆ.
ಮೊದಲೇ ಕೊರೊನಾದಿಂದ ತತ್ತರಿಸಿದ್ದ ಸಾರಿಗೆ ಇಲಾಖೆ ಇನ್ನು ಸಂಪೂರ್ಣವಾಗಿ ವೇತನ ನೀಡುತ್ತಿಲ್ಲ. ಹೀಗಿರುವಾಗ ಅಷ್ಟು ದೊಡ್ಡ ಮೊತ್ತ ಪಾವತಿ ಮಾಡೋದು ಹೇಗೆ ಅನ್ನೋದು ಚಾಲಕರ ಪ್ರಶ್ನೆ. ಆದ್ರೆ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದು ಅವರದ್ದೇ ತಪ್ಪು, ಹೀಗಾಗಿ ಚಾಲಕರೇ ದಂಡ ಪಾವತಿಸಬೇಕೆಂಬುದು ನಿಗಮದ ವಾದವಾಗಿದೆ. ನೌಕರ ಸಂಬಳದಲ್ಲಿ ಕಡಿತ ಮಾಡುವುದು ಸರಿಯಾದ ವಿಧಾನವಲ್ಲ, ನಿಗಮಗಳು ಸರಕಾರದ ಜೊತೆ ಮಾತನಾಡಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಸಾರಿಗೆ ನೌಕರರ ಸಂಘಟನೆಗಳು ಆಗ್ರಹವನ್ನು ಮಾಡಿವೆ. ಒಟ್ಟಾರೆ ಒಂದು ಕೋಟಿಗೂ ಅಧಿಕ ಮೊತ್ತವನ್ನ ಹೇಗೆ ಪಾವತಿ ಮಾಡ್ತಾರೆ ಅನ್ನೋದೆ ಪ್ರಶ್ನೆಯಾಗಿದೆ.