ವಸಂತರಾಜ ಎನ್ ಕೆ
ಎಡ-ಪ್ರಗತಿಪರ ಮೈತ್ರಿಕೂಟ ನ್ಯೂ ಪಾಪ್ಯುಲರ್ ಫ್ರಂಟ್ (ನವ ಜನಪ್ರಿಯ ರಂಗ – NFP) 29% ಕ್ಕಿಂತ ಹೆಚ್ಚು ಮತಗಳನ್ನು ಗೆದ್ದು ಎರಡನೇ ಸ್ಥಾನ ಗಳಿಸುವ ಮೂಲಕ ಅಧ್ಯಕ್ಷ ಮ್ಯಾಕ್ರಾನ್ ಅವರ ನಡುಪಂಥೀಯ ನವ ಉದಾರವಾದಕ್ಕೆ ಗಮನಾರ್ಹ ಹೊಡೆತವನ್ನು ನೀಡಿದೆ. ಉಗ್ರ ಬಲಪಂಥೀಯ ‘ರಾಷ್ಟ್ರೀಯ ರ್ಯಾಲಿ’ (RN) ಗಿಂತ ಕೇವಲ ಶೇ, 5 ರಷ್ಟು ಮಾತ್ರ ಹಿಂದೆ ಇದೆ. ಫ್ರಾನ್ಸ್
ಫ್ರಾನ್ಸ್ ನಲ್ಲಿ ನಡೆದ ಮೊದಲ ಸುತ್ತಿನ ಸಂಸತ್ ಚುನಾವಣೆಯ ನಂತರ ಉಗ್ರ ಬಲಪಂಥೀಯ ರಾಷ್ಟ್ರೀಯ ರ್ಯಾಲಿ ಮುನ್ನಡೆಯಲ್ಲಿದೆ. ಮರೀನ್ ಲೆ ಪೆನ್ ಅದರ ಮಿತ್ರಪಕ್ಷಗಳು ಸುಮಾರು 34% ಮತಗಳನ್ನು ಪಡೆದುಕೊಂಡವು. ಜೂನ್ ನಲ್ಲಿ ಯುರೋಕೂಟದ ಚುನಾವಣೆಯಲ್ಲಿ ಭಾರೀ ಸೋಲಿನ ನಂತರ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಅವರು ಘೋಷಿಸಿದ ಕ್ಷಿಪ್ರ ಚುನಾವಣೆಯ ನಂತರ ರೂಪುಗೊಂಡ ಎಡ-ಪ್ರಗತಿಪರ ಮೈತ್ರಿ NFP ಎರಡನೇ ಅತಿದೊಡ್ಡ ಮತಗಳ ಪಾಲನ್ನು (29%) ದಾಖಲಿಸಿದೆ. ಮ್ಯಾಕ್ರಾನ್ ಅವರ ಉದಾರವಾದಿ ನಡುಪಂಥೀಯ ಒಕ್ಕೂಟವು (ENS) 21% ರಷ್ಟು ಮತ ಗಳಿಸಿ ಹಿಂದುಳಿದಿದೆ. ನಾಲ್ಕನೆಯ ರಂಗವಾದ ಬಲಪಂಥೀಯ ರಿಪಬ್ಲಿಕನ್( LR) 10% ಮತ ಗಳಿಸಿ ಕೊನೆಯ ಸ್ಥಾನದಲ್ಲಿದೆ. ಫ್ರಾನ್ಸ್
ವಿಶ್ಲೇಷಕರ ಪ್ರಕಾರ, ಜೂನ್ 30 ರ ಭಾನುವಾರದ ಚುನಾವಣೆಯು 1980 ರ ದಶಕದ ಅಂತ್ಯದ ನಂತರ ಅತಿ ಹೆಚ್ಚು (66.7%) ಮತದಾನವಾಗಿದೆ ಎಂದು ಗುರುತಿಸಲಾಗಿದೆ. ಎರಡನೇ ಸುತ್ತು ಜುಲೈ 7 ರಂದು ನಡೆಯಲಿದೆ. ಅಲ್ಲಿ ಎರಡು ಅಥವಾ ಹೆಚ್ಚಿನ ಅಭ್ಯರ್ಥಿಗಳ ನಡುವಿನ ಸ್ಪರ್ಧೆಯಲ್ಲಿ ಮೊದಲ ಸುತ್ತಿನಲ್ಲಿ ಸ್ಪಷ್ಟ ವಿಜೇತರಿಲ್ಲದೆ ಕ್ಷೇತ್ರಗಳನ್ನು ಯಾರು ಪ್ರತಿನಿಧಿಸುತ್ತಾರೆ ಎಂಬುದನ್ನು ನಿರ್ಧರಿಸುತ್ತದೆ.
ಇದನ್ನೂ ಓದಿ: ಮತಾಂತರ ಮುಂದುವರಿದರೆ, ಭಾರತದ ಬಹುಸಂಖ್ಯಾತರು ಅಲ್ಪಸಂಖ್ಯಾತರಾಗುತ್ತಾರೆ: ಅಲಹಾಬಾದ್ ಹೈಕೋರ್ಟ್
ಮೊದಲ ಸುತ್ತಿನಲ್ಲಿ ಗೆಲ್ಲಲು, ಅಭ್ಯರ್ಥಿಯು ಚಲಾವಣೆಯಾದ ಮತಗಳಲ್ಲಿ 50% ಕ್ಕಿಂತ ಹೆಚ್ಚು ಮತಗಳನ್ನು ಪಡೆದುಕೊಳ್ಳಬೇಕು, ಕನಿಷ್ಠ 25% ನೋಂದಾಯಿತ ಮತದಾರರನ್ನು ಪ್ರತಿನಿಧಿಸಬೇಕು. ಈ ಚುನಾವಣೆಗಳಲ್ಲಿ, ಮೊದಲ ಸುತ್ತಿನಲ್ಲಿ 76 ಅಭ್ಯರ್ಥಿಗಳು – ಮ್ಯಾಕ್ರಾನ್ (ENS) ಪಟ್ಟಿಯಿಂದ 2, ಎಡರಂಗ (NFP) ದಿಂದ 21 ಮತ್ತು ರಾಷ್ಟ್ರೀಯ ರ್ಯಾಲಿ (RN) ಯಿಂದ 38 ಅಭ್ಯರ್ಥಿಗಳು ಚುನಾಯಿತರಾಗಿದ್ದಾರೆ.
ಎರಡನೇ ಸುತ್ತಿನಲ್ಲಿ 501 ಸೀಟುಗಳು ಭರ್ತಿಯಾಗಲು ಉಳಿದಿವೆ. ಎಡರಂಗ ಮತ್ತು ರಾಷ್ಟ್ರೀಯ ರ್ಯಾಲಿಯ ನಡುವಿನ ಅಂತರವನ್ನು ಕಡಿಮೆ ಮಾಡಲು ಇದು ಮತ್ತೊಂದು ಅವಕಾಶವನ್ನು ನೀಡುತ್ತದೆ. ಮುಂಬರುವ ವಾರದಲ್ಲಿ ಅಭಿಯಾನವು ಇನ್ನಷ್ಟು ತೀವ್ರಗೊಳ್ಳುವ ನಿರೀಕ್ಷೆಯಿದೆ ಮತ್ತು ಉಗ್ರ ಬಲಪಂಥೀಯರ ಉದಯವನ್ನು ಖಂಡಿಸುವ ಪ್ರತಿಭಟನೆಗಳು ಈಗಾಗಲೇ ಪ್ರಾರಂಭವಾಗಿವೆ.
ಫ್ರೆಂಚ್ ಚುನಾವಣಾ ಪದ್ಧತಿಯ ಪ್ರಕಾರ ಮೊದಲನೆಯ ಸುತ್ತಿನ ಮೊದಲ ಎರಡು ಸ್ಥಾನ ಪಡೆದ ಅಭ್ಯರ್ಥಿಗಳು ಮತ್ತು ಪಟ್ಟಿಯಲ್ಲಿರುವ ಮತದಾರರ ಸಂಖ್ಯೆಯ ಶೇ.12.5 ರಷ್ಟು ಮತ ಪಡೆದ ಅಭ್ಯರ್ಥಿಗಳು ಸಹ ಎರಡನೆಯ ಸುತ್ತಿನ ಸ್ಪರ್ಧೆಯಲ್ಲಿ ಇರುತ್ತಾರೆ. ಎರಡನೆಯ ಸುತ್ತಿಗೆ ಹೋಗಲಿರುವ 501 ಸೀಟುಗಳಲ್ಲಿ 306 ಸೀಟುಗಳಲ್ಲಿ ಮೂರು ಮತ್ತು 5 ಸೀಟುಗಳ್ಲಲಿ 4 ಅಭ್ಯರ್ಥಿಗಳು ಇರುತ್ತಾರೆ. ಎರಡನೆಯ ಸುತ್ತಿನ ಸ್ಪರ್ಧೆಯಲ್ಲಿ ದೊಡ್ಡ ಪ್ರಮಾಣದ (54%) ಸೀಟುಗಳಲ್ಲಿ 3-4 ಅಭ್ಯರ್ಥಿಗಳು ಇರುವುದು ಈ ಬಾರಿಯ ಇನ್ನೊಂದು ವಿಶೇಷ. 1988ರ ನಂತರ ಎರಡನೆಯ ಸುತ್ತಿನ ಸ್ಪರ್ಧೆಯಲ್ಲಿ 3-4 ಅಭ್ಯರ್ಥಿಗಳು ಇರುವ ಸೀಟುಗಳ ಸಂಖ್ಯೆ 15ನ್ನು ದಾಟಿದ್ದು ಕೇವಲ ಎರಡು ಬಾರಿ (2012- 46 ಮತ್ತು 1997 – 105). ಎರಡನೆಯ ಸುತ್ತಿನಲ್ಲಿ ಅಭ್ಯರ್ಥಿಗಳಿಗೆ ಹಿಂತೆಗೆಯುವ ಅವಕಾಶವೂ ಇರುತ್ತದೆ.
ಎರಡನೆಯ ಸುತ್ತಿನಲ್ಲಿ 444 ಸೀಟುಗಳಲ್ಲಿ ರಾಷ್ಟ್ರೀಯ ರ್ಯಾಲಿ (RN), ಎಡರಂಗ (NFP) 414 ಸೀಟುಗಳಲ್ಲಿ, ಮ್ಯಾಕ್ರಾನ್ (ENS) ರಂಗ 321 ಸೀಟುಗಳಲ್ಲಿ, ರಿಪಬ್ಲಿಕನ್ (LR) 88 ಸೀಟುಗಳಲ್ಲಿ ಸ್ಪರ್ಧೆಯಲ್ಲಿದ್ದಾರೆ. ಯಾರು ಯಾರ ಪರವಾಗಿ ಹಿಂತೆಗೆಯುತ್ತಾರೆ ಎನ್ನುವುದರ ಮೇಲೆ ಅಂತಿಮ ಬಲಾಬಲ ನಿರ್ಧಾರವಾಗುತ್ತದೆ. ರಾಷ್ಟ್ರೀಯ ರ್ಯಾಲಿ (RN) ವಿರುದ್ಧ ಉಳಿದೆಲ್ಲರೂ ಒಂದಾಗಬೇಕೆಂದು ಅಧ್ಯಕ್ಷ ಮ್ಯಾಕ್ರಾನ್ ಕರೆ ಕೊಟ್ಟಿದ್ದಾರೆ. ಫ್ರಾನ್ಸ್
ಸ್ಟ್ರಾಸ್ಬರ್ಗ್, ಲಿಲ್ಲೆ ಮತ್ತು ಪ್ಯಾರಿಸ್ ನಲ್ಲಿ ಉಗ್ರ ಬಲಪಂಥೀಯರ ಉದಯವನ್ನು ಪ್ರತಿಭಟಿಸುವ ಪ್ರದರ್ಶನಗಳು ವರದಿಯಾಗಿವೆ. ಪ್ಯಾರಿಸ್ನಲ್ಲಿ, ಎಡರಂಗ ಮೈತ್ರಿಕೂಟವನ್ನು ಮುನ್ನಡೆಸುತ್ತಿರುವ ನಾಯಕರು ಅಭ್ಯರ್ಥಿಗಳು ಮತ್ತು ಕಾರ್ಯಕರ್ತರು ಗುಂಪನ್ನು ಉದ್ದೇಶಿಸಿ, ಮುಂಬರುವ ದಿನಗಳಲ್ಲಿ ಸಜ್ಜುಗೊಳಿಸುವಿಕೆಯನ್ನು ಮುಂದುವರಿಸಲು ಒತ್ತಾಯಿಸಿದರು. “ಇಂದಿನ ಮನಸ್ಥಿತಿಯು ಸಂತೋಷ ಅಥವಾ ದುಃಖದಿಂದಲ್ಲ, ಆದರೆ ಹೋರಾಟದಿಂದ ಕೂಡಿದೆ” ಎಂದು ಎಡರಂಗದ ಪ್ರಮುಖ ನಾಯಕ ಮ್ಯಾನುಯೆಲ್ ಬೊಂಪಾರ್ಡ್ ಹೇಳಿದರು. ಫ್ರಾನ್ಸ್
ಈ ಚುನಾವಣೆಗಳಲ್ಲಿ NFP ಯ ಪ್ರಭಾವಶಾಲಿ ಪ್ರದರ್ಶನವು,ಕಳೆದ ಹಲವಾರು ವರ್ಷಗಳಿಂದ ಬೃಹತ್ ಬೀದಿ ಪ್ರತಿಭಟನೆಗಳನ್ನು ಹುಟ್ಟುಹಾಕಿದ್ದ, ಅಧ್ಯಕ್ಷ ಮ್ಯಾಕ್ರಾನ್ ನ ನವ ಉದಾರವಾದಿ, ನಡುಪಂಥೀಯ ನೀತಿಗಳ ವಿರುದ್ಧದ ವಿಜಯವಾಗಿ ಕಂಡುಬಂದಿದೆ,. NFP ಫ್ರೆಂಚ್ ರಾಜಕೀಯದಲ್ಲಿ ಪ್ರಮುಖ ಎಡ ಮತ್ತು ಪ್ರಗತಿಪರ ಪಕ್ಷಗಳನ್ನು ಒಟ್ಟುಗೂಡಿಸುತ್ತದೆ. ಇದು ಕಮ್ಯುನಿಸ್ಟ್ ಪಕ್ಷ ಮತ್ತು ಜೀನ್-ಲುಕ್ ಮೆಲೆನ್ಚಾನ್ ಅವರ France Unbowed ನಂತಹ ಆಮೂಲಾಗ್ರ ಬದಲಾವಣೆಗೆ ಕರೆ ಕೊಡುವ ಪಕ್ಷಗಳು ಹಾಗೂ ಸೋಶಲಿಸ್ಟ್ ಮತ್ತು ಗ್ರೀನ್ ನಂತಹ ನಡು-ಎಡಪಂಥೀಯ ಪಕ್ಷಗಳನ್ನೊಳಗೊಂಡಿದೆ. ಫ್ರಾನ್ಸ್
ಅವರು ಉಗ್ರ ಬಲಪಂಥೀಯ ಮತ್ತು ಮ್ಯಾಕ್ರಾನ್ ಎರಡಕ್ಕೂ ಭಿನ್ನವಾಗಿ ನಿಂತಿರುವ ಪ್ರಗತಿಪರ ವೇದಿಕೆಯ ಸುತ್ತಲೂ ಒಂದಾಗಿದ್ದಾರೆ. ನಿವೃತ್ತಿ ವಯಸ್ಸನ್ನು ಕಡಿಮೆ ಮಾಡುವುದು, ಎಲ್ಲರಿಗೂ ವಸತಿ ಹಕ್ಕನ್ನು ಖಾತರಿಪಡಿಸುವುದು ಮತ್ತು ಏರುತ್ತಿರುವ ಆಹಾರ ಮತ್ತು ಇಂಧನ ಬೆಲೆಗಳನ್ನು ನಿಗ್ರಹಿಸುವುದನ್ನು ಒಳಗೊಂಡಿರುತ್ತದೆ. ಅವರು ಪ್ಯಾಲೇಸ್ಟಿನಿಯನ್ ಸ್ವಾತಂತ್ರ್ಯ ಬೆಂಬಲಿಸಲು ಮತ್ತು ಗಾಜಾದಲ್ಲಿ ಶಾಶ್ವತ ಕದನ ವಿರಾಮಕ್ಕೆ ಪಣ ತೊಟ್ಟಿದ್ದಾರೆ.
ಪ್ಯಾರಿಸ್ ನಲ್ಲಿ ಭಾನುವಾರ ರಾತ್ರಿ ನಡೆದ ರ್ಯಾಲಿಯಲ್ಲಿ, NFP ನಾಯಕ ಮೆಲೆನ್ಚಾನ್ ಘೋಷಿಸಿದರು, “ಯಾರ ದಾರಿಯಲ್ಲಿ ಅ ಡ್ಡವಾಗಿ, ಯಾರ ಪರವಾಗಿ ಅಥವಾ ವಿರುದ್ಧ ನಿಲ್ಲುವುದು ನಮ್ಮ ಉದ್ಧೇಶವಲ್ಲ. ನಾವು ಎಲ್ಲವನ್ನೂ ಬದಲಾಯಿಸಲು ಬಯಸುತ್ತೇವೆ!”
ಇದನ್ನೂ ನೋಡಿ: ಮೋದಿಯವರೆ….! ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ತಡಿಯೋಕೆ ಆಗುತ್ತಿರಲಿಲ್ಲವೆ?!! Janashakthi Media