ದಾಖಲೆ ಬರೆದ ಟೊಮೆಟೊ ದರ :ಕೆಜಿಗೆ 150 ರೂ!

ಬೆಂಗಳೂರು : ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಕೃಷಿಗೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಪರಿಣಾಮ ಮಾರುಕಟ್ಟೆಯಲ್ಲಿ ಟೊಮೆಟೊ ದರ ಕೆಜಿಗೆ  ಬರೋಬ್ಬರಿ 150 ರೂ ನಂತೆ ಮಾರಾಟವಾಗುವ ಮೂಲಕ ಇತಿಹಾಸ ಸೃಷ್ಟಿಸಿದೆ.

ಭಾರೀ ಮಳೆಯ ಕಾರಣ ಹೊಲದಲ್ಲಿಯೇ ಟೊಮೋಟೊ ಸೇರಿ ವಿವಿಧ ಬೆಳೆ ಹಾಳಾಗಿದ್ದು, ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಟೊಮೇಟೊ ಪೂರೈಕೆಯಾಗುತ್ತಿದೆ. ಇದರ ಪರಿಣಾಮ ಟೊಮೆಟೊ ದರ ದಿಢೀರ್ ಏರಿಕೆ ಕಂಡಿದೆ. ಚಿಲ್ಲರೆ ಮಳಿಗೆಗಳಲ್ಲಿ ಒಂದು ಕೆಜಿಗೆ 150 ರೂ.ನಂತೆ ಮಾರಾಟವಾಗಿದೆ.

ಕಳೆದ 15 -20 ದಿನಗಳಿಂದ ಟೊಮೆಟೊ ದರ ಏರುಗತಿಯಲ್ಲಿ ಸಾಗುತ್ತಿದೆ. ಚಿಲ್ಲರೆ ಮಳಿಗೆಗಳಲ್ಲಿ ಕೆಜಿಗೆ 100 ರೂ.ವರೆಗೂ ತಲುಪಿದ್ದ ದರ ನಂತರ 125 ರೂ.ಗೆ ಈಗ 150 ರೂ.ಗೆ ಏರಿಕೆಯಾಗಿದೆ. ದರ ಇಷ್ಟೊಂದು ಏರಿಕೆ ಆದರೂ ಕೂಡ ಟೊಮೆಟೊ ಬೆಳೆಗಾರರಿಗೆ ಈಗಲೂ ಜುಜುಬಿ ಹಣ ಸಿಗುತ್ತಿದೆ. ದಲ್ಲಾಳಿಗಳು ಮಾತ್ರ ಹಣ ಮಾಡುತ್ತಿದ್ದಾರೆ.  ಇತ್ತ ಮಳೆಯಿಂದ ಬೆಳೆ ನಾಶಗೊಂಡು ರೈತರು ತತ್ತರಿಸಿದ್ದಾರೆ.

ಇದನ್ನೂ ಓದಿ : ಪೆಟ್ರೋಲ್ ಡೀಸೇಲ್ ಬೆನ್ನಲ್ಲೆ ಶತಕ ಬಾರಿಸಿದ ತರಕಾರಿ!

ಟೊಮೆಟೊ ಮಾತ್ರವಲ್ಲ, ಬಹುತೇಕ ಎಲ್ಲ ತರಕಾರಿಗಳ ದರ ಕೂಡ ಏರಿಕೆಯಾಗಿದೆ. ತರಕಾರಿ ದರ 50 ರಿಂದ 80 ರೂ.ವರೆಗೆ ಇದ್ದು, ಸೊಪ್ಪಿನ ದರ ಹೆಚ್ಚಳವಾಗಿದೆ. ಮೊದಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನರಿಗೆ ತರಕಾರಿ ಬೆಲೆ ಭಾರಿ ಏರಿಕೆಯಾಗುತ್ತಿರುವುದು ಗ್ರಾಹಕರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಚೆನ್ನೈ, ಬೆಂಗಳೂರು ಸೇರಿದಂತೆ ಮಲೆನಾಡು, ಕರಾವಳಿ ಮತ್ತಿತರ ಭಾಗಗಳಲ್ಲಿ ಮಳೆಯಾಗುತ್ತಿದೆ. ಈ ಮಳೆಯಿಂದ ರೈತರು ತತ್ತರಿಸಿದ್ದು, ರಾಗಿ, ಭತ್ತ, ಅಡಕೆ, ಕಾಫಿ, ಮೆಣಸು, ಶೇಂಗಾ, ಮೆಕ್ಕೆಜೋಳ ಇತ್ಯಾದಿ ಆಹಾರ ಧಾನ್ಯಗಳ ಕೃಷಿ ಹಾಳಾಗಿದ್ದರೆ, ತರಕಾರಿ ಬೆಳೆ ಕೊಳೆಯುತ್ತಿದೆ. ಇದು ದರ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.

Donate Janashakthi Media

Leave a Reply

Your email address will not be published. Required fields are marked *