ಬೆಂಗಳೂರು : ಈಗಾಗಲೇ ದೇಶದ ಅನೇಕ ನಗರಗಳಲ್ಲಿ ಪೆಟ್ರೋಲ್ ದರ 100 ರೂಪಾಯಿ ಗಡಿದಾಟಿದೆ. ರಾಜ್ಯದಲ್ಲಿ ಕೂಡ ಪೆಟ್ರೋಲ್ ದರ 100 ರೂಪಾಯಿ ದಾಟಿದ್ದು, ಮೊದಲೇ ಸಂಕಷ್ಟದಲ್ಲಿರುವ ಜನಸಾಮಾನ್ಯರಿಗೆ ಬರೆ ಎಳೆದಂತಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಒಂದು ಲೀಟರ್ ಪೆಟ್ರೋಲ್ 100.22 ರೂಪಾಯಿ, ದಾವಣಗೆರೆಯಲ್ಲಿ 100.17 ರೂಪಾಯಿ, ಬಳ್ಳಾರಿ ನಗರದಲ್ಲಿ 100.08 ರೂಪಾಯಿ ಆಗಿದೆ. ಚಿಕ್ಕಮಗಳೂರು, ಶಿವಮೊಗ್ಗ ಸೇರಿ ಹಲವೆಡೆ 100 ರೂ. ಸನಿಹದಲ್ಲಿದೆ. ಇತ್ತೀಚಿನ ದಿನಗಳಲ್ಲಿ ಏರುಗತಿಯಲ್ಲೇ ಸಾಗುತ್ತಿರುವ ಇಂಧನ ದರ ಒಂದು ತಿಂಗಳಲ್ಲಿ 18 ಸಲ ಹೆಚ್ಚಳ ಮಾಡಲಾಗಿದೆ.
ಕೊರೋನಾ ಲಾಕ್ಡೌನಿಂದ ಸಂಕಷ್ಟದಲ್ಲಿ ಸಿಲುಕಿರುವ ಜನರಿಗೆ ಬೆಲೆಯೇರಿಕೆಯ ಶಾಕ್ ಕೂಡ ಉಂಟಾಗಿದೆ. ಕರ್ನಾಟಕದಲ್ಲಿ ಮೊದಲ ಬಾರಿಗೆ ಪೆಟ್ರೋಲ್ ಬೆಲೆ 100 ರೂ. ಗಡಿ ದಾಟಿದೆ. ಕರ್ನಾಟಕ ಸೇರಿ ಭಾರತದ 6 ರಾಜ್ಯಗಳಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 100 ರೂ. ಗಡಿ ದಾಟಿದೆ.
ಇದನ್ನೂ ಓದಿ : ಹೈಕಮಾಂಡ್ ಸೂಚಿಸಿದ ತಕ್ಷಣ ರಾಜೀನಾಮೆ ನೀಡುತ್ತೇನೆ – ಯಡಿಯೂರಪ್ಪ.
ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೇರಿದೆ. ಕಳೆದ 2 ವರ್ಷಗಳಲ್ಲಿ ಪೆಟ್ರೋಲ್ ದರ ಇದುವರೆಗಿನ ಎಲ್ಲ ದಾಖಲೆಗಳನ್ನೂ ಮುರಿದಿದೆ. ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರದಲ್ಲಿ 1 ಲೀಟರ್ ಪೆಟ್ರೋಲ್ ದರ 100 ರೂ. ಗಡಿ ದಾಟಿ 101 ರೂ.ನತ್ತ ಸಾಗಿದೆ. ಇದು ಇದುವರೆಗೂ ದಾಖಲಾದ ಅತಿ ಹೆಚ್ಚಿನ ಪೆಟ್ರೋಲ್ ಬೆಲೆ ಎನ್ನಲಾಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಪ್ರತಿದಿನ ಏರಿಳಿತಗಳು ಉಂಟಾಗುತ್ತಲೇ ಇರುತ್ತವೆ. ಕಳೆದ 1 ವರ್ಷದಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಭಾರೀ ಹೆಚ್ಚಳವಾಗುತ್ತಿದೆ. ಕೆಳ ಮತ್ತು ಮಧ್ಯಮ ವರ್ಗದ ಜನರಿಗೆ ಪೆಟ್ರೋಲ್ ದರ ಏರಿಕೆಯಿಂದ ಮತ್ತೊಂದು ಸಂಕಷ್ಟ ಎದುರಾಗಿದೆ.
ಭಾರತದ ಕೆಲವು ನಗರಗಳಲ್ಲಿ ಡೀಸೆಲ್ ಬೆಲೆ ಏರಿಕೆಯಾಗಿದೆ. ಬೆಂಗಳೂರು, ಮುಂಬೈ, ಹೈದರಾಬಾದ್, ಜೈಪುರ, ಭುವನೇಶ್ವರ, ತಿರುವನಂತಪುರದಲ್ಲಿ 1 ಲೀಟರ್ ಡೀಸೆಲ್ ಬೆಲೆ 93 ರೂ. ದಾಟಿದೆ. ವಿವಿಧ ನಗರಗಳಲ್ಲಿ ಇಂದಿನ ಡೀಸೆಲ್ ಬೆಲೆ ಹೀಗಿದೆ. ನವದೆಹಲಿಯಲ್ಲಿ ಇಂದು 1 ಲೀಟರ್ ಡೀಸೆಲ್ಗೆ 86.01 ರೂ. ಇದೆ. ಚೆನ್ನೈನಲ್ಲಿ 90.38 ರೂ, ಮುಂಬೈನಲ್ಲಿ 93.35 ರೂ, ಬೆಂಗಳೂರಿನಲ್ಲಿ 90.81 ರೂ, ಹೈದರಾಬಾದ್ನಲ್ಲಿ 93.38 ರೂ. ಇದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಹೆಚ್ಚಳವಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸುವುದು, ಹಾಗೆಯೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಕಡಿಮೆಯಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಇಳಿಸುವುದು ಸಾಮಾನ್ಯವಾದ ಸಂಗತಿ. ಆದರೆ ಈಗ ಕ್ರೂಡ್ ಆಯಿಲ್ ದರ ನಾಲ್ಕು ತಿಂಗಳಿಂದ ಯಥಾಸ್ಥಿತಿ ಇದೆ. ಆದರೆ ಭಾರತದಲ್ಲಿ ಮಾತ್ರ ಪೆಟ್ರೋಲ್, ಡೀಸೆಲ್ ದರ ಹೆಚ್ಚಳವಾಗುತ್ತಿದೆ.
ಕೊರೋನಾ ಮಹಾಮಾರಿಯಿಂದ ಜನ ಸಾಯುತ್ತಿದ್ದಾರೆ. ಲಾಕ್ಡೌನ್ನಿಂದ ಕೋಟ್ಯಾಂತರ ಜನಕ್ಕೆ ನಿತ್ಯದ ಜೀವನ ನಿರ್ವಹಣೆಯೇ ದುಸ್ತರವಾಗಿದೆ. ದೇಶದ ಆರ್ಥಿಕ ಚಟುವಟಿಕೆಗೆ ಪಾರ್ಶ್ವವಾಯು ಬಡಿದಿದೆ. ಆದರೂ ಪೆಟ್ರೋಲ್ ಬೆಲೆ ಮಾತ್ರ ಕಡಿಮೆಯಾಗಿಲ್ಲ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾದರೆ ಸಹಜವಾಗಿ ನಿತ್ಯ ಬಳಕೆಯ ಬೇರೆಲ್ಲಾ ವಸ್ತುಗಳ ಬೆಲೆ ಹೆಚ್ಚಳವಾಗುತ್ತದೆ. ಇದರಿಂದ ಜನಸಾಮಾನ್ಯರಿಗೆ ಮತ್ತಷ್ಟು ಹೊರೆಯಾದಂತಾಗಿದೆ.
ಸೆಸ್ ಕಡಿತ ಮಾಡಿ ಎಚ್.ಡಿ.ಕೆ : ದಿನನಿತ್ಯ ತೈಲ ಬೆಲೆ ಏರಿಕೆಯಾಗುತ್ತಿರುವುದಕ್ಕೆ ತೀವ್ರ ಆಕ್ರೋಶ ವ್ಯಕಪಡಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಯಾವುದೇ ತೀರ್ಮಾನ ಕೈಗೊಂಡರೂ ಜನ ಒಪ್ಪುತ್ತಾರೆ ಎಂಬ ಉದ್ಧಟತನದಿಂದ ಸರ್ಕಾರ ವರ್ತಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಕಾರು ಮಾಲೀಕರು ಹಾಗೂ ಲಾರಿ ಮಾಲೀಕರಲ್ಲದೆ ಪ್ರತಿಯೊಬ್ಬ ಸಾಮಾನ್ಯ ನಾಗರಿಕನಿಗೂ ಅನ್ವಯ ಆಗಲಿದ್ದು, ರೈತನಿಂದ ಗ್ರಾಹಕನವರೆಗೂ ಇದರ ಬಿಸಿ ತಟ್ಟಲಿದೆ ಎಂದು ಹರಿಹಾಯ್ದಿದ್ದಾರೆ. ಗ್ರಾಮೀಣ ಭಾಗಗಳಲ್ಲಿ ಬೀಜ ಹಾಗೂ ಗೊಬ್ಬರ ತರುವುದಕ್ಕೆ ಜನರು ಹೋಗಬೇಕಾಗುತ್ತದೆ. ರೈತರಿಗೆ ತೊಂದರೆಯಾಗುತ್ತಿರುವುದರಿಂದ ಸೆಸ್ ಕಡಿತ ಮಾಡಬೇಕಿದೆ ಎಂದು ಒತ್ತಾಯಿಸಿದ್ದಾರೆ. ಇದರಿಂದ ಮೂರರಿಂದ ನಾಲ್ಕು ರೂ. ಕಡಿಮೆ ಮಾಡಬಹುದಾಗಿದೆ.