ಆಳುವ ವರ್ಗ ತನ್ನ ಆಸ್ತಿ ಮತ್ತು ಅಧಿಕಾರವನ್ನು ಉಳಿಸಿಕೊಳ್ಳಲು ಶ್ರಮಿಕ ವರ್ಗವನ್ನು ನಿರಂತರವಾಗಿ ಶೋಷಣೆ ಮತ್ತು ದಮನಕ್ಕೆ ಒಳಪಡಿಸುತ್ತ ಬಂದಿದೆ. ಈ ಶೋಷಣೆ ಮತ್ತು ದಮನಕ್ಕೆ ಬೇಕಾದ ವಿಚಾರಧಾರೆಯನ್ನು ಪುರೋಹಿತಶಾಹಿ ಒದಗಿಸುತ್ತದೆ. ಆಳುವವರ್ಗ ಶ್ರಮಿಕವರ್ಗದ ದೇಹಕ್ಕೆ ಬಂಧನ ವಿಧಿಸಿದರೆ, ಪುರೋಹಿತಶಾಹಿ ವರ್ಗ ಶ್ರಮಿಕ ವರ್ಗದ ಮೆದುಳಿಗೆ ಬಂಧನ ವಿಧಿಸುತ್ತದೆ. ಸಿನಿಮಾ
ಇದಕ್ಕಾಗಿ ಸಿನಿಮಾರಂಗವನ್ನು ತನ್ನ ವಿಚಾರಗಳನ್ನು ಹರಡಲು ಬಳಕೆ ಮಾಡಿಕೊಳ್ಳುತ್ತಾರೆ. ಇದರ ನಡುವೆಯೂ ಭಾರತದಲ್ಲಿ ದಲಿತ ಸಮುದಾಯ ಮತ್ತು ಇತರೆ ಸಮುದಾಯದ ಶ್ರಮಿಕ ವರ್ಗಗಳು ಶತಮಾನಗಳಿಂದ ಎದುರಿಸುತ್ತಿರುವ ಕ್ರೂರ ದಮನವನ್ನು ತಿಳಿಸಲು ಸಮರ್ಥವಾಗಿರುವ ಸಿನಿಮಾಗಳು ಬರತೊಡಗಿವೆ. ಈ ಸಿನಿಮಾಗಳು ದಲಿತರ ಮೇಲಿನ ದಬ್ಬಾಳಿಕೆಯನ್ನು ರೋಮ್ಯಾಂಟಿಕ್ ಮಾಡುವ ಬದಲು, ದುಃಖ, ಶೋಷಣೆ ಮತ್ತು ಪ್ರತಿರೋಧದ ಕಥೆಗಳನ್ನು ಅನುಭವದ, ಭೌತವಾದಿ ದೃಷ್ಟಿಕೋನದಿಂದ ನಿರೂಪಿಸಲು ಸಮರ್ಥವಾಗಿವೆ. ಈ ಕುರಿತಂತೆ ಎಸ್.ಶಂಕರ್ ಅವರ ವಿಶ್ಲೇಷಣೆ.
ಭಾರತದಲ್ಲಿ ಪುರೋಹಿತಶಾಹಿಯ ವಿಚಾರಧಾರೆ `ಮನುಸ್ಮೃತಿ’ಯು ವರ್ಣವ್ಯವಸ್ಥೆಯಾಗಿದೆ. ಈ ವಿಚಾರಧಾರೆಯಲ್ಲಿ ಆಳುವ ವರ್ಗಗಳಿಂದ ಶೂದ್ರ, ದಲಿತ ಮತ್ತು ಶ್ರಮಿಕ ವರ್ಗದ ಮೇಲೆ ಶೋಷಣೆ ಮತ್ತು ದಮನಗಳು ನಡೆಯುತ್ತವೆ. ಭಾರತಕ್ಕೆ ಬ್ರಿಟಿಷರು ಬರುವುದಕ್ಕೂ ಮೊದಲು ಇಲ್ಲಿ ಆಡಳಿತ ನಡೆಸುತ್ತಿದ್ದವರು ಮನುಸ್ಮೃತಿಯ ಬ್ರಾಹ್ಮಣರು, ಪ್ರಧಾನ ಶೋಷಕ ವರ್ಗವಾದ ಕ್ಷತ್ರಿಯರು ಅಥವಾ ದೊರೆಗಳು, ರಾಜ, ಮಹಾರಾಜ, ಸುಲ್ತಾನರು, ಜಮೀನ್ದಾರರು.
ಬ್ರಿಟಿಷರು ನಾಲ್ಕನೇ ಆಂಗ್ಲ-ಮೈಸೂರು ಯುದ್ಧವನ್ನು ಗೆದ್ದ ಮೇಲೆ ತಮ್ಮ ಸಾಮ್ರಾಜ್ಯ ವಿಸ್ತರಣೆಗೆ ನಡೆಸಿದ ನಿರಂತರ ಯುದ್ಧಗಳು, ಯುದ್ಧಗಳಿಗಾಗಿ ಭಾರತೀಯರ ಮೇಲೆ ಹೊರಿಸುತ್ತಿದ್ದ ತೆರಿಗೆಗಳು ಸೈನಿಕರ ಮತ್ತು ಶ್ರಮಿಕ ವರ್ಗದ ಬಂಡಾಯಕ್ಕೆ ಕಾರಣವಾಗಿ, 1857ರ ಪ್ರಥಮ ಸ್ವಾತಂತ್ರö್ಯ ಸಂಗ್ರಾಮಕ್ಕೆ ಕಾರಣವಾಯಿತು. ಬ್ರಿಟಿಷರು ಆ ಬಂಡಾಯವನ್ನು ಧಮನಮಾಡಿದರು.
ಬ್ರಿಟಿಷರು ಆಡಳಿತವನ್ನು ಸಂಘಟಿಸಲು ಜನಗಣತಿ ಆರಂಭಿಸಿದಾಗ ಬೌದ್ಧ, ಮುಸ್ಲಿಂ, ಕ್ರೈಸ್ತರಲ್ಲದ ವೃತ್ತಿ ಆಧಾರಿತ ಜಾತಿಯ ಜನರನ್ನು ‘ಹಿಂದು’ ಎಂಬ ಶಬ್ದದಿಂದ ಗುರುತಿಸಿದರು. ಭಾರತೀಯ ಸಮಾಜದ ಶ್ರಮಿಕವರ್ಗದ ಮೇಲೆ ತನ್ನ ಹಿಡಿತ ಕಡಿಮೆಯಾಗುತ್ತಾ ಬರುತ್ತಿದ್ದಂತೆ ಮನಸ್ಮೃತಿಯ ಬ್ರಾಹ್ಮಣರು ಜಾಗೃತರಾಗಿ ‘ಹಿಂದೂ ಮಹಾಸಭಾ’ ಕಟ್ಟಿದರು. ಈ ಹಿಂದೂ ಮಹಾಸಭಾ ಆರ್‌ಎಸ್‌ಎಸ್ ಅನ್ನು ಸ್ಥಾಪಿಸಿ ದೇಶದಾದ್ಯಂತ ವ್ಯವಸ್ಥಿತವಾಗಿ ಕಟ್ಟಿತು.
ಕಾರ್ಮಿಕ ಮತ್ತು ರೈತ ವರ್ಗ ಸಂಘಟನೆಗಳು ಜಾತಿಗಳ ಒಳಗೆ ಮುಚ್ಚಿರುವ ವರ್ಗ ಶೋಷಣೆಯನ್ನು ಮುಚ್ಚುಮರೆ ಇಲ್ಲದೆ ತೋರಿಸಿದವು. ವರ್ಗ ಸಂಘಟನೆಗಳ ಜೊತೆ ಜೊತೆಗೆ ಬಂದ ಕಮ್ಯುನಿಸ್ಟರು, ಸಮಾಜವಾದಿಗಳು, ಅಂಬೇಡ್ಕರ್, ದಲಿತ ಚಳುವಳಿಗಳಿಂದಾಗಿ ಭಾರತೀಯ ಸಮಾಜದಲ್ಲಿ ಶ್ರಮಿಕ ವರ್ಗ ಒಂದಾಗುತ್ತ, ಆಳುವ ವರ್ಗದ ಮೇಲೆ ತನ್ನ ಎಲ್ಲಾ ಹಕ್ಕುಗಳಿಗೆ ಹೋರಾಡುತ್ತಿದ್ದಂತೆ, ಆಳುವ ವರ್ಗವು ಶ್ರಮಿಕ ವರ್ಗವನ್ನು ದಾರಿ ತಪ್ಪಿಸುವ ತಂತ್ರವಾಗಿ ಆರ್‌ಎಸ್‌ಎಸ್ ಅನ್ನು ಒಳಗಿನಿಂದಲೇ ಬಲಪಡಿಸುತ್ತಾ ಬಂತು.
ಭಾರತದ ಪುರೋಹಿತಶಾಹಿ ಮನಸ್ಮೃತಿಯ ಬ್ರಾಹ್ಮಣರು ಶ್ರೇಷ್ಠತೆಯನ್ನು ಎತ್ತಿ ಹಿಡಿಯಲು ಜಾತಿ ವ್ಯವಸ್ಥೆಯನ್ನು ಬಲಪಡಿಸುವ ಹಿಂದೂ ಪದವನ್ನು ಬಳಸಿ, ಆರ್‌ಎಸ್‌ಎಸ್ `ಮನಸ್ಮೃತಿಯ ವೈಶ್ಯರ ಆಡಳಿತದ(ಬಂಡವಾಳಶಾಹಿ) ಕಾಲಕ್ಕೆ ಹೊಂದಿಸಿತು. ಮುಸ್ಲಿಂ ಮತ್ತು ಕ್ರೈಸ್ತ ಅಲ್ಪಸಂಖ್ಯಾತರ ಮೇಲೆ ದ್ವೇಷವನ್ನು ಬೆಳೆಸಿತು. ರಾಮನವಮಿ, ಗಣೇಶನ ಉತ್ಸವ ಮೊದಲಾದ ರೂಪದಲ್ಲಿ ಜಾತಿ ಭಾವನೆಗಳನ್ನು ಹಿಂದೆ ಸರಿಸಿ, ಕೋಮು ಭಾವನೆಗಳನ್ನು ನಿರಂತರವಾಗಿ ಬಲಪಡಿಸಿತು. ಸ್ವಾತಂತ್ರ ಹೋರಾಟಗಳು, ಜಮೀನ್ದಾರಿ ವಿರುದ್ಧ, ಬಂಡವಾಳಶಾಹಿ ವಿರುದ್ಧ, ಅಸ್ಪೃಶ್ಯತೆ ವಿರುದ್ಧದ ಶ್ರಮಿಕ ವರ್ಗದ ಹೋರಾಟಗಳು ತೀವ್ರವಾಗುತ್ತಾ ಹೋದಂತೆ ಆಳುವವರ್ಗ, ಆರ್‌ಎಸ್‌ಎಸ್ ಮತ್ತು ಮುಸ್ಲಿಂ ಲೀಗ್ ಅನ್ನು ಬಲಪಡಿಸುತ್ತ ಹೋಗಿ ದೇಶ ವಿಭಜನೆಗೆ ಕಾರಣವಾಯಿತು.
ದೇಶ ಸ್ವತಂತ್ರವಾದ ನಂತರ ಆರ್‌ಎಸ್‌ಎಸ್ ಎಲ್ಲಾ ರಂಗದಲ್ಲಿ ಒಳ ನುಸುಳಿ ನಿಧಾನವಾಗಿ ಸಮಾಜವನ್ನು ಜಾತಿ, ಧರ್ಮಗಳ ಆಧಾರದಲ್ಲಿ ಒಡೆಯುವ ಭಾವನೆಗಳನ್ನು ತುಂಬತೊಡಗಿತು. ಈ ಕಾರ್ಯಕ್ಕೆ ಹೆಚ್ಚು ವ್ಯವಸ್ಥಿತವಾಗಿ ಬಳಸಿಕೊಂಡ ಕ್ಷೇತ್ರ ಸಿನಿಮಾರಂಗ. ಆರ್‌ಎಸ್‌ಎಸ್ ಸಿನಿಮಾ ರಂಗದಲ್ಲಿ ಒಳ ನುಸುಳಿ ಮನಸ್ಮೃತಿಯ ವಿಚಾರಧಾರೆಯನ್ನು ಜನರ ಮನಸ್ಸಿನಲ್ಲಿ ಹನಿ ಹನಿಯಾಗಿ ತುಂಬುತ್ತ ಬಂದು, ಭಾರತೀಯ ಚಿತ್ರರಂಗದಲ್ಲಿ ಆಳವಾಗಿ ಬೇರೂರಿತು.
ರಾಜೀವ್ ಗಾಂಧಿಯವರು 1986ರಲ್ಲಿ ಬಾಬರಿ ಮಸೀದಿಯ ಬಾಗಿಲು ತೆಗೆಸಿದ ಕೃತ್ಯವು 1989ರಲ್ಲಿ ರಾಮ ಮಂದಿರದ ಶಿಲನ್ಯಾಸಕ್ಕೆ ಅವಕಾಶ ಮಾಡಿಕೊಟ್ಟಿತು. ವಿ.ಪಿ.ಸಿಂಗ್ ಆಡಳಿತದಲ್ಲಿ ಜಾರಿಗೆ ಬಂದ ಮಂಡಲ್ ಆಯೋಗದ ವರದಿ ಶೂದ್ರ, ದಲಿತ ಜಾತಿಗಳಿಗೆ, ಇತರೆ ಹಿಂದುಳಿದ ಜಾತಿಗಳಿಗೆ ನೀಡಿದ ಮೀಸಲಾತಿ ಮತ್ತು ಆರೆಸ್ಸೆಸ್ ನ ರಾಜಕೀಯ ಸಂಘಟನೆಯಾದ ಬಿಜೆಪಿ ನಾಯಕ ಅಡ್ವಾನಿಯ ರಥಯಾತ್ರೆ, ಇವುಗಳಿಂದಾಗಿ ಅದು ರಾಜಕೀಯವಾಗಿ ಬೆಳೆಸಲು ಅವಕಾಶವಾಯಿತು. 1991ರ ಉದಾರೀಕರಣ, ಜಾಗತೀಕರಣ ಮತ್ತು ಖಾಸಗೀಕರಣ ನೀತಿಗಳಿಂದ ಆಳುವ ವರ್ಗ ಮತ್ತು ಆರೆಸ್ಸೆಸ್ ಮತ್ತಷ್ಟು ಬೆಸೆದುಕೊಂಡವು. ಆಳುವ ವರ್ಗಗಳ ಜೊತೆ ಸಂಘಪರಿವಾರ ಎಲ್ಲೆಡೆ ವಿಜೃಂಭಿಸತೊಡಗಿತು. ಪ್ರಭುತ್ವದ ಅಧಿಕಾರದೊಳಗೆ ಸ್ಥಾಪಿತಗೊಂಡಿತು.
ಇದು ಸಿನಿಮಾ ಮಾಧ್ಯಮ, ಟಿವಿ, ಮುದ್ರಣ ಮಾಧ್ಯಮ, ಸಾಮಾಜಿಕ ಮಾಧ್ಯಮಗಳಲ್ಲಿ ಗೋಚರಿಸತೊಡಗಿತು. ಮೊದಲನೆಯದು; ದೇವರು, ದೆವ್ವ, ಭೂತಗಳ ಗ್ರಾಫಿಕ್ ತಂತ್ರಜ್ಞಾನದ ಸಿನಿಮಾ, ಟಿವಿ ದಾರವಾಹಿಗಳಾಗಿ. ಎರಡನೆಯದು; ಬಂಡವಾಳಶಾಹಿ ಮೌಲ್ಯಗಳನ್ನು ಬಿತ್ತುವ “ಏನಾದರೂ ಮಾಡಿ ದುಡ್ಡು ಮಾಡು”, “ಮೋಜು ಮಸ್ತಿ ಮಾಡು” ಎಂಬುದಾಗಿದೆ. ಇದಕ್ಕೆ ಬೇಕಾದಂತೆ ನೂರಾರು ಕೋಟಿ ಒಡೆಯರ, ಜಮೀನ್ದಾರರ, ಮೇಲ್ಮಧ್ಯಮ ವರ್ಗದ ಜೀವನವನ್ನು ಆಧರಿಸಿದ ಸಿನಿಮಾಗಳು, ದಾರವಾಹಿಗಳಲ್ಲಿ, ಸಾಂಸ್ಕೃತಿಕ ಆಚರಣೆಯ ದೃಶ್ಯಗಳಲ್ಲಿ ಕೇಸರಿ ಬಾವುಟ, ಮೊದಲಾದ ಬ್ರಾಹ್ಮಣ್ಯದ ಶ್ರೇಷ್ಠತೆಯನ್ನು ಎತ್ತಿ ತೋರಿಸುವ, ಮದ್ಯಪಾನ, ದೂಮಪಾನ ಮಾಡುವ ದೃಶ್ಯಗಳನ್ನು ತುಂಬಲಾಯಿತು. ಬಹುತೇಕ ನೂರರಲ್ಲಿ 95 ಚಲನಚಿತ್ರ, ಟಿವಿ ಧಾರವಾಹಿಗಳಲ್ಲಿ ಹಿಂಸೆಯನ್ನು ಪ್ರಚೋದಿಸುವ ದೃಶ್ಯಗಳನ್ನು ತೋರಿಸಲಾಯಿತು. ಸಾಮಾಜಿಕ ಮಾಧ್ಯಮದಲ್ಲಿ ಕ್ಷಣ ಕ್ಷಣವೂ ಸುಳ್ಳು ಸುದ್ದಿಗಳನ್ನು ಹಬ್ಬಿಸಲು ಅದು ಬಳಸಿಕೊಂಡಿತು.
ದೇವರು, ದೆವ್ವ, ಭೂತ, ಮೋಜು ಮಸ್ತಿ, ಮದ್ಯಪಾನ, ಧೂಮಪಾನದ ದೃಶ್ಯಗಳು ಆಳುವ ವರ್ಗ ನಮ್ಮ ಎಲ್ಲ ಕಷ್ಟಗಳಿಗೂ ಕಾರಣವಲ್ಲ ಎಂದು ದಿಕ್ಕು ತಪ್ಪಿಸುತ್ತವೆ. ದೇವರ ದರ್ಶನ, ದೇವಾಲಯಗಳ ಯಾತ್ರೆ, ಪೂಜೆ ಪುರಸ್ಕಾರ, ಹೋಮ ಹವನಗಳು ಶ್ರಮಿಕ ವರ್ಗದ ಹಣವನ್ನು ಪುರೋಹಿತಶಾಹಿಗಳ ಕೈ ಸೇರುವಂತೆ ಮಾಡಿದರೆ, ಮೋಜು-ಮಸ್ತಿ, ದೂಮಪಾನ, ಮದ್ಯಪಾನಗಳು ಉದಾರೀಕರಣದಿಂದ ಸರ್ಕಾರಗಳು ಶ್ರೀಮಂತರಿಗೆ ತೆರಿಗೆ ಕಡಿಮೆ ಮಾಡಿ, ಈ ಕೊರತೆಯನ್ನು ಶ್ರಮಿಕ ವರ್ಗದಿಂದ ತುಂಬುವ ಸಾಧನವಾಗಿಸಿತು. ಇದರ ಇನ್ನೊಂದು ಪರಿಣಾಮ ಶ್ರಮಿಕ ವರ್ಗದಲ್ಲಿ ಸಂಪತ್ತು ಶೇಖರಣೆಯಾಗದಂತೆ ನೋಡಿಕೊಂಡು, ಅವರನ್ನು ಸದಾಕಾಲ ದಟ್ಟ ದಾರಿದ್ರö್ಯತೆಯಲ್ಲಿ ಇಡುವುದಾಗಿದೆ. ಇನ್ನು ಹಿಂಸೆಯ ದೃಶ್ಯಗಳಂತು ಆಳುವ ವರ್ಗದ ಮೇಲಿರುವ ಕೋಪವನ್ನು ಅಲ್ಪಸಂಖ್ಯಾತರ ಕಡೆಗೆ ತಿರುಗಿಸುವುದಾಗಿದೆ. ಸುಳ್ಳು ಸುದ್ದಿಗಳಂತೂ ಮನುವಾದಿಗಳ ಹುಟ್ಟುಗುಣವಾಗಿದೆ. ಸುಳ್ಳುಗಳಿಲ್ಲದೆ ‘ಮನಸ್ಮೃತಿ’ಯ ಪುರೋಹಿಶಾಹಿಗಳು ಅಥವಾ ಆರ್‌ಎಸ್‌ಎಸ್ ಇಲ್ಲ.
ಕಾರಣ ಹೀಗಿದ್ದಾಗ್ಯೂ ಆಳುವ ವರ್ಗಕ್ಕೆ ಎದುರಾಗಿ ಶ್ರಮಿಕ ವರ್ಗದ ಬದುಕು ಭವಣೆಗಳನ್ನು ತೋರಿಸುವ `ಜೈ ಭೀಮ್’ `ಮಾಮನ್ನನ್’ (ಮಹಾರಾಜ), `ಕಾಟೇರ’, ‘ತಂಗಳಾನ್’, ‘ವಾಳೈ’ ಮೊದಲಾದ ಚಿತ್ರಗಳು ಶ್ರಮಿಕ ವರ್ಗದ ಬದುಕಿನ ಪ್ರಶ್ನೆಗಳನ್ನು ಬೇರೆ ಬೇರೆ ಆಯಾಮಗಳಲ್ಲಿ ಮುನ್ನಡೆಗೆ ತಂದಿವೆ. ಈ ಚಿತ್ರಗಳು ಜನತೆಯ ಪ್ರೀತಿ ಸಂಪಾದಿಸಿ ಉತ್ತಮ ಗಳಿಕೆಯನ್ನು ಸಂಪಾದಿಸಿವೆ. ಸಿನಿಮಾರಂಗ ಬಹುಪಾಲು ಕಾರ್ಪೊರೇಟೀಕರಣ ಮತ್ತು ಕೋಮುವಾದೀಕರಣಕ್ಕೆ ಒಳಗಾಗಿರುವ ಮತ್ತು ಸಿನಿಮಾ ನಿರ್ಮಾಣಕ್ಕೆ ಕೋಟ್ಯಂತರ ರೂ.ಗಳ ಹೂಡಿಕೆ ಮಾಡಿ ಹಿಂಪಡೆಯುವುದು ದೊಡ್ಡ ಸವಾಲಾಗಿರುವ ಇಂದಿನ ಕಠಿಣ ಸಂದರ್ಭದಲ್ಲಿ ಈ ಚಿತ್ರಗಳಲ್ಲಿ ಹಣ ತೊಡಗಿಸಿದ ನಿರ್ಮಾಪಕರು ನಿರ್ದೇಶಕರು, ನಟರುಗಳು ಹಾಗೂ ಸಂಪೂರ್ಣ ಚಿತ್ರತಂಡಕ್ಕೆ ಧನ್ಯವಾದ ಮತ್ತು ಅಭಿನಂದನೆಗಳನ್ನು ಸಲ್ಲಿಸಬೇಕಾಗಿದೆ.
‘ಜೈ ಭೀಮ್’ ಸಂವಿಧಾನಬದ್ಧ ಹಕ್ಕಿಗೆ ಹೋರಾಡಿದರೆ ‘ಮಾಮನ್ನನ್’ ಒಬ್ಬ ದಲಿತ ಜಮೀನ್ದಾರನ ಎಲ್ಲಾ ಕುತಂತ್ರಗಳನ್ನು ಸೋಲಿಸಿ ಶಾಸಕನಾಗಿ ಗೆಲ್ಲುವುದಾಗಿದೆ. ‘ಪೋಟೋ’ ಅವೈಜ್ಞಾನಿಕ ಲಾಕ್ ಡೌನ್ ನಿಂದ ಶ್ರಮಿಕವರ್ಗ ಅನುಭವಿಸಿದ ಅಮಾನವೀಯ ನೋವನ್ನು ಹಾಗೂ ನಷ್ಟದ ದಾಖಲೆಯನ್ನು ನೀಡುತ್ತದೆ. ‘ಕಾಟೇರ’ ಜಮೀನ್ದಾರಿ ಮತ್ತು ಬ್ರಾಹ್ಮಣ ಶ್ರೇಷ್ಠತೆಯ ಶೋಷಣೆಯ ವಿರುದ್ಧವಾಗಿದ್ದರೆ, ‘ಭೀಮ’ ಮಿಣ ಮಿಣ ಮಿನುಗುವ ಬೆಂಗಳೂರಿನ ಒಳಗಿರುವ 300 ಸ್ಲಂಗಳು ನಿರ್ದೇಶಕ ವಿಜಯಕುಮಾರ್ ಹೇಳುವಂತೆ ಬಡವರ ಕಾಲೋನಿಯ ಜನರ ಬದುಕಿನ ಮಾದಕದ್ರವ್ಯದ ವ್ಯಸನದ ಕುರಿತಾಗಿದೆ. ಕಪ್ಪು ಸಿನಿಮಾ ನಾಯಕಿ, ಕಪ್ಪು ಮಹಿಳಾ ದಕ್ಷ ಪೊಲೀಸ್ ಅಧಿಕಾರಿಯು ಮಾದಕ ದ್ರವ್ಯ ಮಾಫಿಯಾ ವಿರುದ್ಧ ನಾಯಕನ ಜೊತೆಗೆ ಕೈಜೋಡಿಸಿ ಹೋರಾಡುವುದು, ಮಾಫಿಯಾಗೆ ಸಂಪೂರ್ಣ ಬೆಂಬಲ ನೀಡುವ ಶಾಸಕ ಮತ್ತು ಅವನ ಮಗ, ಆತನ ಚೇಲಾಗಳು ಇವೆಲ್ಲವೂ ನಿಜಜೀವನಕ್ಕೆ ಹತ್ತಿರವಾದಂತೆ ‘ಭೀಮ’ ಸಿನಿಮಾ ಕಣ್ಣ ಮುಂದೆ ನಡೆದಂತೆ ಭಾಶವಾಗುತ್ತದೆ.
ವಾಳೈ ಸಿನಿಮಾದಲ್ಲಿ ಪರಿಶಿಷ್ಟ ಜಾತಿಯ ಜನರ ಮತ್ತು ಕೂಲಿ ಕಾರ್ಮಿಕರ ಶೋಷಣೆಯನ್ನು ಮತ್ತು ಇವುಗಳ ವಿರುದ್ದದ ಕೂಲಿ ಕಾರ್ಮಿಕರ ಹೋರಾಟ ಇವುಗಳನ್ನು ಕೇಂದ್ರೀಕರಿಸಿ ಚಿತ್ರಕಥೆ ರಚಿಸಿದ್ದಾರೆ ನಿರ್ದೇಶಕರು.
‘ತಂಗಳಾನ್’ ಸಿನಿಮಾ ಒಂದು ಶ್ರಮಿಕ ವರ್ಗದ 250 ವರ್ಷಗಳ ಹಿಂದಿನ ಬದುಕಿನ ಚಿತ್ರಣವನ್ನು ನೀಡುತ್ತದೆ. ಶ್ರಮಿಕ ವರ್ಗವನ್ನು ಕೆಲಸಕ್ಕೆ ಬಾರದ ಅಪ್ರಯೋಜಕರು ಎಂದು ಬಿಂಬಿಸುವುದನ್ನು ವಿಶ್ಲೇಷಿಸಿ ಈ ನೆಲದ ಮೂಲನಿವಾಸಿಗಳಾದ ಆದಿವಾಸಿಗಳು, ಶೂದ್ರರು, ದಲಿತರು ಭೂಮಿಯಿಂದ ಬೆಳೆ ಮತ್ತು ಬಂಗಾರ ತೆಗೆಯುವ ಜ್ಞಾನ ಸಂಪನ್ನರು ಎಂದು ಹೇಳುತ್ತಲೇ, ಬೌದ್ಧ ಧರ್ಮವನ್ನು ನಾಶಪಡಿಸಿ ಮನುವಾದವನ್ನು ಏರಿಕೆ ಮಾಡಿದ ಕುರಿತು ಹೇಳುತ್ತದೆ. ಶ್ರಮಿಕವರ್ಗದ ಶ್ರಮ ಜಮೀನ್ದಾರನಿಗೆ ಬೇಕು, ಚಿನ್ನ ತೆಗೆಯಲು ಬ್ರಿಟಿಷ್ ಅಧಿಕಾರಿಗೂ ಬೇಕು. ಶ್ರಮಿಕವರ್ಗ ಪ್ರಕೃತಿ ನಿಯಮದ ಆಧಾರದಲ್ಲಿ ಬದುಕುವ, ಪ್ರಕೃತಿಯನ್ನು ಲಾಭ ದುರಾಸೆಯಿಂದ ದೋಚದೆ ರಕ್ಷಿಸುವ ವರ್ಗವಾಗಿದೆ. ಇದು ವೈಜ್ಞಾನಿಕ ವಿಧಾನವಾಗಿದೆ.
ಭಾರತೀಯ ಸಂವಿಧಾನ ಭಾರತದ ಜನತೆಯನ್ನು `ನಾಗರಿಕರು’ ಎಂದು ಹೇಳುತ್ತದೆ. ‘ನಾಗರಿಕ’ ಎಂದರೆ ಸಂವಿಧಾನ ಕೊಟ್ಟಿರುವ ಕರ್ತವ್ಯಗಳನ್ನು ನಿಭಾಯಿಸುವುದು ಮತ್ತು ಸಂವಿಧಾನ ಕೊಡುವ ಹಕ್ಕುಗಳನ್ನು ಪಡೆಯುವುದು. “ವೈಜ್ಞಾನಿಕ ಮನೋಭಾವನೆ, ಮಾನವೀಯತೆ ಜಿಜ್ಞಾಸೆಯ ಮತ್ತು ಸುಧಾರಣೆಯ ಅನುಕಂಪ ತೋರಿಸುವುದು” 51ಎ(ಎಚ್) ಸಂವಿಧಾನದ ಕಲಂನಲ್ಲಿ ಹೇಳಲಾಗಿದೆ. ಇಂದು ನಮ್ಮ ಕೈಯಲ್ಲಿರುವ ಸ್ಮಾರ್ಟ್ ಫೋನ್ ಕ್ಷಣದಲ್ಲಿ ನಮಗೆ ವಿಶ್ವದ ಜ್ಞಾನವನ್ನು ನೀಡುತ್ತದೆ. ಭಾರತದ ಆಳುವವರ್ಗ ಮತ್ತು ಸಂಘಪರಿವಾರದ ಎಲ್ಲಾ ಕುತಂತ್ರಗಳನ್ನು ಶೂದ್ರ, ದಲಿತ ಎಡಪಂಥೀಯ, ಪ್ರಗತಿಪರರು, ಬುದ್ಧಿಜೀವಿಗಳು ಮೊದಲಾದ ಶ್ರಮಿಕವರ್ಗದ ಮಿತ್ರರು ಕ್ಷಣದಲ್ಲಿ ಬಯಲಿಗೆಳೆದು ಪ್ರತಿ ಸವಾಲನ್ನು ಒಡ್ಡುತ್ತಿದ್ದು, ಇಂದು ತಳಮಟ್ಟದಲ್ಲಿ, ಪ್ರತಿ ಮನೆಯಲ್ಲಿ, ಪ್ರತಿ ವ್ಯಕ್ತಿಯ ದೇಹ ಮತ್ತು ಮನಸ್ಸನ್ನು ಮನೋದೈಹಿಕವಾಗಿ ವಿಕಾಸಗೊಳಿಸಿ, ಸಾಂವಿಧಾನಿಕ ಬದ್ಧ ಹಕ್ಕುಗಳನ್ನು ಅವರು ಇರುವಲ್ಲಿಗೆ ತಲುಪಿಸುವ ತುರ್ತು ಕೆಲಸ ಮಾಡಬೇಕಾಗಿದೆ. ಅದಕ್ಕಾಗಿ ಶ್ರಮಿಕವರ್ಗ ಮತ್ತು ಅವರ ಮಿತ್ರರು, ಹಿತೈಷಿಗಳು ಸನ್ನದ್ದರಾಗಿ, ಸಂವಿಧಾನ ಕೊಟ್ಟ ಕರ್ತವ್ಯಗಳನ್ನು ನಿಭಾಯಿಸುವ ಹಕ್ಕನ್ನು ಕೇಳುವಂತೆ ಪ್ರತಿ ನಾಗರೀಕರನ್ನು ತರಬೇತಿಗೊಳಿಸಬೇಕಾಗಿದೆ.
ಇದನ್ನೂ ನೋಡಿ: ರಾಜ್ಯಲ್ಲಿರುವುದು 60% ಸರ್ಕಾರವೇ? – ಜಸ್ಟೀಸ್ ಸಂತೋಷ ಹೆಗಡೆJanashakthi Media