ಬೆಂಗಳೂರು : ʼಅಪ್ಪು ನೀನು ಹುಟ್ಟಿದಾಗ ನಮ್ಮ ಮನೆಯಲ್ಲಿ ಉಲ್ಲಾಸ ಉಕ್ಕಿ ಹರಿಯುತ್ತಿತ್ತು. ನಿನ್ನ ಕಣ್ಣಲ್ಲಿದ್ದ ಹೊಳಪು ನೀನು ಪವರ್ ಸ್ಟಾರ್ ಆಗೋದನ್ನ ಆವಾಗ್ಲೇ ಹೇಳ್ತಾ ಇತ್ತು. ನೀನು ನಕ್ಕರೆ ಎಲ್ರು ನಗ್ತಾ ಇದ್ರು. ನೀನು ಕುಣಿದರೆ ಎಲ್ಲರೂ ರೋಮಾಂಚನದಿಂದ ನೋಡ್ತಾ ಇದ್ರು, ನೀನು ಕುಣಿದರೆ ಎಲ್ಲರೂ ರೋಮಾಂಚನದಿಂದ ನೋಡ್ರಾ ಇದ್ರು, ಮನೆಗೆ ಬಂದ ಅತಿಥಿ ನೆಂಟರುಗಳಿಗೆಲ್ಲ ನೀನೇ ಬೇಕು. ಅಂತಹ ಪುಟ್ಟ ಅಪ್ಪು ಮಿಂಚಿನಂತೆ ತೆರೆಯ ಮೇಲೆ ಬಂದು ಹೆಮ್ಮರವಾಗಿ, ಕೋಟ್ಯಾಂತರ ಜನರಿಗೆ ನೆರಳಾಗಿದ್ದನ್ನು ಹತ್ತಿರದಿಂದ ನೋಡಿದ ನಾನೇ ಪುನೀತ. ನಿನ್ನನು ಎತ್ತಿ ಆಡಿಸಿದ ಅಣ್ಣನಾಗಿ, ನಿನ್ನ ಜೊತೆ ಕೂಡಿ ಆಡಿದ ಸ್ನೇಹಿತನಾಗಿ, ನಿನ್ನ ಕೆಲಸಗಳನ್ನು ಮೆಚ್ಚಿ ಅಪ್ಪಿಕೊಂಡ ಕನ್ನಡಿಗನಾಗಿ, ಹಬ್ಬ ಯಾವುದೇ ಆಗಿದ್ರೂ ನಿನ್ನ ಹೆಸರಿನಲ್ಲಿ ಪಟಾಕಿಗಳನ್ನು ಹಚ್ಚೋ ಅಭಿಮಾನಿಗಳಲ್ಲಿ ಒಬ್ಬನಾಗಿ ಹೇಳ್ತಾ ಇದೀನಿ, ನೀನು ಹುಟ್ಟಿದ್ದೇ ಒಂದು ಉತ್ಸವ. ನೀನು ಬೆಳೆದಿದ್ದು ಇತಿಹಾಸ, ನಿನ್ನ ಜೀವನ ಒಂದು ದಂತಕಥೆ. ನಿನ್ನ ನೆನಪುಗಳು ಎಂದಿಗೂ ಅಮರ. ಹುಟ್ಟುಹಬ್ಬದ ಶುಭಾಶಯಗಳು ಅಪ್ಪುʼ.
ಹೀಗೆ ತಮ್ಮ ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ ಪುನೀತ್ ರಾಜ್ ಕುಮಾರ್ ಕುರಿತು ವಿಶೇಷ ಬರಹದ ಮೂಲಕ ಪ್ರೀತಿಯನ್ನು ಹಂಚಿಕೊಂಡಿದ್ದಾರೆ ನಟ ಡಾ. ಶಿವರಾಜ್‌ಕುಮಾರ್, ಈ ಮೂಲಕ ಪ್ರೀತಿಯ ತಮ್ಮನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
https://www.instagram.com/p/Cp4IF1nP1HJ/?igshid=ZTE2MDY0MWU=
ಕನ್ನಡ ಚಿತ್ರರಂಗದ ನಟ ಪುನೀತ್ ರಾಜ್‌ಕುಮಾರ್ ರವರ 49 ನೇ ವರ್ಷದ ಜನ್ಮದಿನವಿಂದು. ಅಪ್ಪು ಅವರು 2021 ರ ಅಕ್ಟೋಬರ್ 29ರಂದು ನಿಧನರಾದರು. ದೈಹಿಕವಾಗಿ ಅವರು ಇಲ್ಲದಿದ್ದರೂ ಕೂಡ ಅವರ ಸಾಮಾಜಿಕ ಕಾರ್ಯಗಳು, ಸಿನಿಮಾಗಳ ಮೂಲಕ ಸದಾ ಜೀವಂತವಾಗಿದ್ದಾರೆ ಎನ್ನುತ್ತಾರೆ ಅವರ ಅಭಿಮಾನಿಗಳು.
ಪುನೀತ್ ಹುಟ್ಟು ಹಬ್ಬದ ಪ್ರಯುಕ್ತ 1 ಲಕ್ಷ ಜನರಿಗೆ ಊಟದ ವ್ಯವಸ್ಥೆ:
ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿನ ಪುನೀತ್ ರಾಜ್‌ಕುಮಾರ್ ಸಮಾಧಿ ಬಳಿ ಸಹಸ್ರಾರು ಅಭಿಮಾನಿಗಳು ಬಂದು ಅಪ್ಪು ದರ್ಶನವನ್ನು ಪಡೆಯುತ್ತಿದ್ದಾರೆ. ಅಪ್ಪು ಸಮಾಧಿ ಬಳಿ ಅಕ್ಷರಶಃ ಜನಜಾತ್ರೆಯಾಗಿದೆ, ಅಲ್ಲಿಗೆ ಬರುವ ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಕೂಡ ಮಾಡಲಾಗಿದೆ. ಇಂದು 1 ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ : ಕನ್ನಡ ಚಿತ್ರರಂಗದ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಬೆಳೆದು ಬಂದ ದಾರಿಯ ಮೆಲುಕು
ಅಪ್ಪು ನಮಗೆ ಇನ್ನೂ 2 ವರ್ಷದ ಮಗು :
ರಾಘವೇಂದ್ರ ರಾಜ್‌ಕುಮಾರ್ ಅವರು ಪತ್ನಿ ಮಂಗಳಾ, ಮಕ್ಕಳಾದ ಯುವ ರಾಜ್‌ಕುಮಾರ್, ವಿನಯ್ ರಾಜ್‌ಕುಮಾರ್ ಹಾಗು ಪುನೀತ್ ರಾಜ್‌ಕುಮಾರ್ ದ್ವಿತೀಯ ಪುತ್ರಿ ವಂದಿತಾ ಅವರು ಪುನೀತ್ ಸಮಾಧಿಗೆ ಭೇಟಿ ನೀಡಿ, ಪೂಜೆ ಸಲ್ಲಿಸಿದ್ದಾರೆ. “ಇಂದು ಇಲ್ಲಿಗೆ ಬರುತ್ತಿರುವ ಜನರನ್ನು ನೋಡಿದರೆ ಅಪ್ಪು ಅಭಿಮಾನಿಗಳಲ್ಲಿ ಜೀವಂತವಾಗಿದ್ದಾನೆ ಅಂತ ಅನಿಸುತ್ತದೆ. ಅಪ್ಪು ನಮಗೆ ಇನ್ನೂ 2 ವರ್ಷದ ಮಗುವೇ. ಜನ್ಮದಿನದ ಶುಭಾಶಯಗಳು ಅಪ್ಪು” ಎಂದು ರಾಘವೇಂದ್ರ ರಾಜ್‌ಕುಮಾರ್ ಅವರು ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ.
ಪುನೀತ್ ನಡೆದುಬಂದ ಹಾದಿ :
1975, ಮಾರ್ಚ್ 17 ರಂದು ಚೆನ್ನೈನ ಕಲ್ಯಾಣಿ ಆಸ್ಪತ್ರೆಯಲ್ಲಿ ವರನಟ ಡಾ.ರಾಜಕುಮಾರ್ ಮತ್ತು ಪಾರ್ವತಮ್ಮರವರ ಕಿರಿಯ ಪುತ್ರನಾಗಿ ಜನಿಸಿದರು. ಇವರ ಹಿರಿಯ ಸಹೋದರರಾದ ಶಿವರಾಜಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ ಕೂಡ ಕನ್ನಡ ಚಿತ್ರರಂಗದ ಯಶಸ್ವಿ ನಾಯಕನಟರು.
ಇವರು ರಾಜ್ ದಂಪತಿಗಳ ಕಿರಿಯ ಮಗುವಾಗಿದ್ದರಿಂದ ಬಹು ಅಕ್ಕರೆಯಲ್ಲಿ ಬೆಳೆದರು. ಪುನೀತ್ ಮತ್ತು ಸಹೋದರಿ ಪೂರ್ಣಿಮಾರನ್ನು,ರಾಜ್ ತಮ್ಮ ಬಹುತೇಕ ಚಿತ್ರಗಳ ಶೂಟಿಂಗ್‌ಗೆ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಹೀಗಾಗಿ ಬಾಲ್ಯದಿಂದಲೇ ಕಲೆಯ ಜೊತೆಗಿನ ನಂಟು ಆರಂಭವಾಯಿತು.
ಪುನೀತ್ ಆರು ತಿಂಗಳು ಮಗುವಿದ್ದಾಗ 1976 ರಲ್ಲಿ ತೆರೆಕಂಡ ಪ್ರೇಮದ ಕಾಣಿಕೆ’ ಚಿತ್ರದ ಮೂಲಕ ತೆರೆಯ ಮೇಲೆ ಕಾಣಿಸಿಕೊಂಡರು. ನಂತರ ಬಂದ ಸನಾದಿ ಅಪ್ಪಣ್ಣ’,ತಾಯಿಗೆ ತಕ್ಕ ಮಗ’,ವಸಂತ ಗೀತ’,ಭೂಮಿಗೆ ಬಂದ ಭಗವಂತ’,ಭಾಗ್ಯವಂತರು’ ಮುಂತಾದ ಚಿತ್ರಗಳಲ್ಲಿ ನಟಿಸಿ ತಮ್ಮ ಅಭಿನಯ ಪ್ರೌಡಿಮೆ ಮೆರೆದರು.
ಭಾಗ್ಯವಂತ ಚಿತ್ರದ ಬಾನ ದಾರಿಯಲ್ಲಿ ಸೂರ್ಯ’, ಚಲಿಸುವ ಮೋಡಗಳು ಚಿತ್ರದ ಕಾಣದಂತೆ ಮಾಯವಾದನೋ’,ಯಾರಿವನು ಚಿತ್ರದ ಕಣ್ಣಿಗೆ ಕಾಣುವ ದೇವರು’ ಮುಂತಾದ ಗೀತೆಗಳನ್ನು ಹಾಡಿ ಹಿನ್ನೆಲೆ ಗಾಯಕರಾಗಿಯೂ ಪ್ರಶಂಸೆ ಪಡೆದರು. ಚಲಿಸುವ ಮೋಡಗಳು’ ಮತ್ತು ಎರಡು ನಕ್ಷತ್ರಗಳು’ ಚಿತ್ರದ ಅಭಿನಯಕ್ಕಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ ಪಡೆದರು.
ಬಾಲಕಲಾವಿದನಾಗಿ ಪುನೀತ್ ಅಭಿನಯಿಸಿದ ಉತ್ಕೃಷ್ಟ ಚಿತ್ರ ಬೆಟ್ಟದ ಹೂ’. 1984 ರಲ್ಲಿ ತೆರೆಕಂಡ ಎನ್ ಲಕ್ಷ್ಮಿ ನಾರಾಯಣ ನಿರ್ದೇಶನದ ಈ ಚಿತ್ರದಲ್ಲಿ ಪುನೀತ್ ಬಾಲಕ ರಾಮು ಆಗಿ ನಟಿಸಿದರು. ಶಾಲೆಗೆ ಹೋಗುವ ಬಡ ಬಾಲಕನೊಬ್ಬನ ತಳಮಳಗಳನ್ನು ಚಿತ್ರ ಚೆನ್ನಾಗಿ ಬಿಂಬಿಸಿತು. ಈ ಚಿತ್ರ ಇಂಗ್ಲೀಷ್ ಕಾದಂಬರಿ ವಾಟ್ ದೆನ್ ರಾಮನ್’ ಆಧಾರಿತವಾಗಿತ್ತು. ಈ ಚಿತ್ರದ ಅಭಿನಯಕ್ಕಾಗಿ ಪುನೀತ್‌ಗೆ ರಾಷ್ಟ್ರ ಪ್ರಶಸ್ತಿ ದೊರೆಯಿತು.
2002 ರಲ್ಲಿ ತೆರೆಕಂಡ ಪುರಿ ಜಗನ್ನಾಥ ನಿರ್ದೇಶನದ ಅಪ್ಪು’ ಚಿತ್ರದಿಂದ ನಾಯಕನಟನಾಗಿ ಕನ್ನಡ ಚಿತ್ರರಂಗದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿದರು. ಈ ಚಿತ್ರ ಅದ್ಧೂರಿ ಯಶಸ್ಸು ಕಂಡಿತು. ನಂತರ ತೆರೆಗೆ ಬಂದ ಅಭಿ,ವೀರ ಕನ್ನಡಿಗ,ಮೌರ್ಯ,ಆಕಾಶ್ ,ನಮ್ಮ ಬಸವ, ಅಜಯ್ ಮುಂತಾದ ಚಿತ್ರಗಳು ಬಾಕ್ಸಾಫೀಸಿನಲ್ಲಿ ಒಳ್ಳೆ ದಾಖಲೆ ಮಾಡಿ ಅದ್ದೂರಿ ಪ್ರದರ್ಶನ ಕಂಡವು.