ಬೆಂಗಳೂರು: ಮೇ 29 ರಂದು ನಾಡಿನ ಶಿಕ್ಷಣ ತಜ್ಞರು, ಸಾಹಿತಿಗಳು, ಹೋರಾಟಗಾರರು ಸೇರಿ ಹಿರಿಯ ಸಾಹಿತಿಗಳಾದ ಕೆ. ಮರಳುಸಿದ್ದಪ್ಪ ಹಾಗೂ ಎಸ್ ಜಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಶೈಕ್ಷಣಿಕ ವಿಚಾರಗಳ ಸಂಬಂಧಿಸಿ ಮಾನ್ಯ ಮುಖ್ಯಮಂತ್ರಿ ಅವರಿಗೆ ಬೇಟಿ ಮಾಡಿ ಮನವಿ ಸಲ್ಲಿಸಿದ್ದು ಸರಿಯಾದ ಕ್ರಮವಾಗಿದೆ ರಾಜ್ಯ ಸರಕಾರ ಆ ಮನವಿಯನ್ನು ಪುರಸ್ಕರಿಸಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಆಗ್ರಹಿಸಿದೆ.
ಕಳೆದ ವರ್ಷ ಪಠ್ಯ ಪುಸ್ತಕ ಗೊಂದಲದಿಂದಾಗಿ ಸುಮಾರು 6 ತಿಂಗಳ ಕಾಲ ಮಕ್ಕಳಿಗೆ ಪಠ್ಯ ಪುಸ್ತಕ ತಲುಪಿರಲಿಲ್ಲಾ ಆದರೆ ಈ ಶೈಕ್ಷಣಿಕ ವರ್ಷದಲ್ಲಿ ಸಮಯಕ್ಕೆ ಸರಿಯಾಗಿ ಸರ್ಕಾರ ಪಠ್ಯ ಪುಸ್ತಕ, ಸಮವಸ್ತ್ರ, ಅತಿಥಿ ಶಿಕ್ಷಕರ ನೇಮಕ ಕುರಿತು ಸಮರ್ಪಕವಾಗಿ ಕೆಲಸ ಮಾಡುತ್ತಿರುವುದನ್ನು ಸಂಘಟನೆಯು ಸ್ವಾಗತಿಸಿದೆ.
ಇದರಲ್ಲಿ ಪ್ರಮುಖವಾಗಿ ಪಠ್ಯ ಪುಸ್ತಕ ಪರಿಷ್ಕರಣೆಯ ವಿವಾದಕ್ಕೆ ಎಡೆಮಾಡಿಕೊಡದೆ ಕೇಸರಿಮಯವಾಗಿರುವಂತಹ ಮತ್ತು ವಿವಾದಾತ್ಮಕವಾದಂತಹ, ಹೆಗಡೇವಾರ ಅವರ ಆದರ್ಶ ಪುರುಷನಾಗುವುದು ಹೇಗೆ?, ಚಕ್ರವರ್ತಿ ಸೂಲಿಬೆಲಿ ಅವರ ಪಾಠಗಳನ್ನು ಕೈ ಬಿಟ್ಟು ಪರ್ಯಾಯವಾಗಿ ದೇವನೂರು ಮಹಾದೇವ ಅವರ ಎದೆಗೆ ಬಿದ್ದ ಅಕ್ಷರ, ಸಾರಾ ಅಬೂಬಕ್ಕರ್ ಅವರ ಯುದ್ಧ, ನಾರಾಯಾಣಗುರು, ಕುವೆಂಪು, ಬುದ್ದ, ಬಸವ, ಅಂಬೇಡ್ಕರ್, ಭಗತ್ ಸಿಂಗ್, ಅವ್ವ ಹಾಗೂ ನಾಡಿಗೆ ಒಳಿತು ಮಾಡಿದ ಸೌರ್ಹಾದತೆ ಎತ್ತಿ ಹಿಡಿದ ಯಾವುದೇ ಪಾಠಗಳನ್ನು ಬೋಧಿಸಲು ಸರ್ಕಾರ ಸಂಬಂಧಪಟ್ಟ ಶಿಕ್ಷಣ ಇಲಾಖೆ ಮೂಲಕ ತಕ್ಷಣ ಸುತ್ತೋಲೆ ಹೊರಡಿಸಬೇಕು.
ನಾಡಿನ ಸಾಹಿತಿಗಳು ನೀಡಿರುವ ಮನವಿಯಂತೆ ಮುಂದಿನ ಶೈಕ್ಷಣಿಕ ವರ್ಷದ ಆರಂಭವಾಗುವ ಮುನ್ನ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಲು ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ ಎಫ್ ಐ) ರಾಜ್ಯ ಸಮಿತಿಯು ಒತ್ತಾಯಿಸುತ್ತದೆ ಎಂದು ಎಸ್ ಎಫ್ ಐ ನ ರಾಜ್ಯ ಅಧ್ಯಕ್ಷರಾದ ಅಮರೇಶ ಕಡಗದ, ರಾಜ್ಯ ಕಾರ್ಯದರ್ಶಿ ಬೀಮನಗೌಡ ಸುಂಕೇಶ್ವಹಾಳ, ರಾಜ್ಯ ಪದಾಧಿಕಾರಿಗಳಾದ ದಿಲೀಪ್ ಶೆಟ್ಟಿ, ಗಣೇಶ ರಾಠೋಡ್, ಸದಸ್ಯರಾದ ಮಧು, ಮನು ಪ್ರಕಟಣೆಯ ಮೂಲಕ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರ ಪಠ್ಯ ಪುಸ್ತಕಗಳನ್ನು ಕೇಸರೀಕರಣ ಮಾಡುವ ಮೂಲಕ ವಿವಾದಕ್ಕೆ ಗುರಿಯಾಗಿತ್ತು. ಕಳೆದ ವರ್ಷ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ ಎಫ್ ಐ) ನಾಡಿನ ಶಿಕ್ಷಣ ತಜ್ಞರು, ಸಾಹಿತಿಗಳು, ಪೋಷಕರು ಒಳಗೊಂಡಂತೆ ಪ್ರಗತಿಪರ ವಿದ್ಯಾರ್ಥಿ ಸಂಘಟನೆಗಳ ಜೊತೆ ಸೇರಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹೋರಾಟ ನಡೆಸಿತ್ತು.