ಚೆನ್ನೈ: ತಮಿಳುನಾಡಿನಲ್ಲಿ ದಲಿತರ ಮೇಲೆ ಹೆಚ್ಚುತ್ತಿರುವ ಹಿಂಸಾಚಾರದ ಬಗ್ಗೆ ದುಃಖ ವ್ಯಕ್ತಪಡಿಸಿರುವ ದಲಿತ ಇಂಟಲೆಕ್ಚುವಲ್ ಕಲೆಕ್ಟಿವ್, ರಾಜ್ಯದಲ್ಲಿ ಜಾತಿ ದೌರ್ಜನ್ಯಗಳಿಗೆ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸರ್ಕಾರದ ನೀರಸ ಪ್ರತಿಕ್ರಿಯೆಯನ್ನು ಟೀಕಿಸಿದೆ. ಕ್ರೂರ ಹಿಂಸಾಚಾರದಿಂದ ರಾಜ್ಯದಲ್ಲಿ ದಲಿತರನ್ನು ರಕ್ಷಿಸಲು ರಾಜ್ಯವು ತಕ್ಷಣದ, ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ನವೆಂಬರ್ 4 ರಂದು ಬಿಡುಗಡೆ ಮಾಡಿದ ಸಾರ್ವಜನಿಕ ಹೇಳಿಕೆಯಲ್ಲಿ ಕಲೆಕ್ಟಿವ್ ಒತ್ತಾಯಿಸಿದೆ.
ಕೃಷ್ಣಗಿರಿ, ಪೆರಂಬಲೂರು ಮತ್ತು ತಿರುನೆಲ್ವೇಲಿಯಲ್ಲಿ ನಡೆದ ಜಾತಿ ದೌರ್ಜನ್ಯಗಳ ಇತ್ತೀಚಿನ ಉದಾಹರಣೆಗಳನ್ನು ಉಲ್ಲೇಖಿಸಿರುವ ಕಲೆಕ್ಟಿವ್, “ಈ ಘಟನೆಗಳು ತಮಿಳುನಾಡಿನಲ್ಲಿ ಸಾಮಾಜಿಕ ನ್ಯಾಯವಿದೆ ಎಂಬ ಪ್ರಚಾರದ ಹಿಂದಿನ ಕರಾಳ ಸತ್ಯವನ್ನು ಸಹ ಬಹಿರಂಗಪಡಿಸುತ್ತವೆ. ಡಿಎಂಕೆ ಸರ್ಕಾರದ ಈ ಅಮಾನವೀಯ ಕೃತ್ಯಗಳಿಗೆ ನೀರಸ ಪ್ರತಿಕ್ರಿಯೆಯು ಆತಂಕಕಾರಿಯಾಗಿದೆ” ಎಂದು ಕಳವಳ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಬರ ಪರಿಹಾರ ವಿಚಾರದಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ| ಸಿಎಂ ಸಿದ್ದರಾಮಯ್ಯ ವಾಗ್ದಾಳಿ
“ನ್ಯಾಯಾಂಗ ತನಿಖಾ ಆಯೋಗಗಳಿಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗಿದೆ. ಆದರೆ ಆಯೋಗದ ವರದಿಯ ಮೇಲೆ ಯಾವುದೇ ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಳ್ಳಲಾಗಿಲ್ಲ. ದಲಿತರ ವಿರುದ್ಧ ಅಥವಾ ಅವರನ್ನು ಅವಮಾನಿಸದಂತೆ ವರ್ತಿಸುವುದನ್ನು ತಡೆಯಲು ಮುಖ್ಯಮಂತ್ರಿ ತಮ್ಮ ಪಕ್ಷದ ಪದಾಧಿಕಾರಿಗಳಿಗೆ ಬಹಿರಂಗ ಹೇಳಿಕೆ ನೀಡಬೇಕು” ಎಂದು ಕಲೆಕ್ಟಿವ್ ಒತ್ತಾಯಿಸಿದೆ. ಜಾತಿ ದೌರ್ಜನ್ಯ
ಅಕ್ಟೋಬರ್ 30 ರಂದು ತಮಿಳುನಾಡು ಸಾರಿಗೆ ಸಚಿವ ಎಸ್.ಎಸ್. ಶಿವಶಂಕರ್ ಮತ್ತು ಪೆರಂಬಲೂರ್ ಡಿಎಂಕೆ ಶಾಸಕ ಎಂ. ಪ್ರಭಾಕರನ್ ಅವರು ಪಂಚಾಯತ್ ಅಧ್ಯಕ್ಷರಾದ ದಲಿತ ಸಮುದಾಯದ ಕೆ. ಕಲೈಸೆಲ್ವನ್ ಅವರನ್ನು ಪೆರಂಬಲೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಲ್ಲು ಕ್ವಾರಿಗಳ ಹರಾಜಿಗೆ ಬಿಡ್ ಸಲ್ಲಿಸದಂತೆ ತಡೆದಿರುವ ಘಟನೆ ಬಗ್ಗೆ ಕಲೆಕ್ಟಿವ್ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಈ ಘಟನೆಯಲ್ಲಿ, ಬಿಡ್‌ನಲ್ಲಿ ಭಾಗವಹಿಸಿದ್ದ ವನ್ನಿಯಾರ್ ಸಮುದಾಯಕ್ಕೆ ಸೇರಿದ ಡಿಎಂಕೆ ಕಾರ್ಯಕರ್ತರು ಕಲೈಸೆಲ್ವನ್ ಅವರ ಮೇಲೆ ಹಲ್ಲೆ ನಡೆಸಿ ಅರೆಬೆತ್ತಲೆಯಾಗಿ ಕುಳಿತುಕೊಳ್ಳುವಂತೆ ಮಾಡಿದ್ದರು. ಸಚಿವ ಶಿವಶಂಕರ್ ಮತ್ತು ಶಾಸಕ ಪ್ರಭಾಕರನ್ ಇಬ್ಬರೂ ಕೂಡ ವನ್ನಿಯಾರ್ ಜಾತಿಗೆ ಸೇರಿದವರಾಗಿದ್ದಾರೆ.
ಇದನ್ನೂ ಓದಿ: ತೆಲಂಗಾಣ | ಕಾಂಗ್ರೆಸ್ ಜೊತೆ ಇನ್ನೂ ಮೈತ್ರಿ ಭರವಸೆಯಲ್ಲಿರುವ ಸಿಪಿಐ!
ಅಕ್ಟೋಬರ್ 31 ರಂದು ಮಾರಾವರ್ ಸಮುದಾಯದ ಜನರು ತಿರುನೆಲ್ವೇಲಿಯಲ್ಲಿ ಇಬ್ಬರು ದಲಿತರನ್ನು ವಿವಸ್ತ್ರಗೊಳಿಸಿ, ಥಳಿಸಿ, ಮೂತ್ರ ವಿಸರ್ಜನೆ ಮಾಡಿದ ಘಟನೆ ಹಾಗೂ ಇಬ್ಬರು ಹದಿಹರೆಯದ ದಲಿತ ಸಹೋದರರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ಅದೇ ಜಿಲ್ಲೆಯ ನುಂಗೇನ್ರಿ ಹಿಂಸಾಚಾರವನ್ನು ಕೂಡಾ ಕಲೆಕ್ಟಿವ್ ಹೇಳಿಕೆಯಲ್ಲಿ ಉಲ್ಲೇಖಿಸಿದೆ.
ಅಷ್ಟೆ ಅಲ್ಲದೆ, ಅಕ್ಟೋಬರ್ 29 ರಂದು, ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಚೊಕ್ಕಾಡಿ ಗ್ರಾಮದಲ್ಲಿ ದಲಿತರ ಮೇಲೆ ಗೌಂಡಾ ಸಮುದಾಯಕ್ಕೆ ಸೇರಿದ ಎಡಿಎಂಕೆ ಬ್ಲಾಕ್ ಕಾರ್ಯದರ್ಶಿ ನೇತೃತ್ವದ ಗುಂಪು ಹಲ್ಲೆ ನಡೆಸಿರುವ ಘಟನೆಯನ್ನು ಕೂಡಾ ಕಲೆಕ್ಟವ್ ತನ್ನ ಹೇಳಿಕೆಯಲ್ಲಿ ನೆನಪಿಸಿದೆ.
“ದಲಿತರ ಮೇಲಿನ ಇಂತಹ ಅವಿರತ ದೌರ್ಜನ್ಯಗಳು ಕೇವಲ ಕಾನೂನು ಮತ್ತು ಸುವ್ಯವಸ್ಥೆಯ ವಿಚಾರ ಮಾತ್ರವಲ್ಲ, ಬದಲಾಗಿ ಇದು ಗಂಭೀರ ಜಾತಿ ದ್ವೇಷದ ರಾಜಕೀಯ ಕೂಡಾ ಆಗಿದೆ. ರಾಜ್ಯದಲ್ಲಿ ದಲಿತ ವಿರೋಧಿ ಹಿಂಸಾಚಾರ ಸಾಮಾನ್ಯವಾಗಿಬಿಟ್ಟಿದೆ” ಎಂದು ಕಲೆಕ್ಟಿವ್ ಹೇಳಿದೆ.
ವಿಡಿಯೊ ನೋಡಿ: ಪಿಚ್ಚರ್ ಪಯಣ – 141 ಸಿನೆಮಾ : ಓಮರ್ನಿರ್ದೇಶಕ : ಹನಿ ಅಬು ಅಸಾದ್ಪ್ರಸ್ತುತಿ: ಎಮ್.ನಾಗರಾಜ ಶೆಟ್ಟಿJanashakthi Media