ಪ್ರಕಾಶ್ ಕಾರತ್
ಸತತ ಹೋರಾಟಗಳು ಮತ್ತು ಅಪಾರ ಆಕ್ರಮಣಗಳನ್ನು ಎದುರಿಸಿ ಗಟ್ಟಿಗೊಂಡಿರುವ ಸಿಪಿಐ(ಎಂ) ಮತ್ತು ಎಡ ಪಕ್ಷಗಳು, ತಮ್ಮ ಜಾತ್ಯತೀತ ಮಿತ್ರರೊಡನೆ ಸೇರಿಕೊಂಡು ಜನರ ಪ್ರಶ್ನೆಗಳಿಗಾಗಿ ಮತ್ತು ಟಿಎಂಸಿ ಆಡಳಿತದ ವಿರುದ್ಧ ಹೋರಾಟವನ್ನು ಮುಂದುವರಿಸಲಿವೆ.
ಪಶ್ಚಿಮ ಬಂಗಾಳದಲ್ಲಿ ನಡೆದ ಮೂರು-ಹಂತದ ಪಂಚಾಯತ್ ಚುನಾವಣೆಗಳಲ್ಲಿ ಆಳುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷವು ರಾಜಕೀಯ ವಿರೋಧಿಗಳು ಮತ್ತು ತನ್ನ ವಿರುದ್ಧ ಮತ ನೀಡುವವರೆಂದು ಭಾವಿಸಲಾದ ಜನರ ವಿರುದ್ಧ ನಡೆಸುವ ಹಿಂಸಾಚಾರದ ಪುನರಾವರ್ತನೆಗೆ ಸಾಕ್ಷಿಯಾಗಿದೆ.
ನಾಮಪತ್ರ ಸಲ್ಲಿಕೆ, ಪ್ರಚಾರ, ಜುಲೈ 8ರ ಮತದಾನದ ದಿನ ಮತ್ತು ಮತ ಎಣಿಕೆಯ ಜುಲೈ 11-ಹೀಗೆ ಚುನಾವಣೆಯ ಪ್ರತಿಯೊಂದೂ ಹಂತದಲ್ಲಿಯೂ ಅಭ್ಯರ್ಥಿಗಳು, ಪ್ರತಿಪಕ್ಷಗಳ ಬೆಂಬಲಿಗರ ಮೇಲೆ ಹಲ್ಲೆ, ಮತಗಟ್ಟೆಗೆ ಹೋಗುವ ಮತದಾರರಿಗೆ ಹಿಂಸೆ ಮತ್ತು ಮತದಾನಕ್ಕೆ ಹೋಗದಂತೆ ಅಡ್ಡಿ, ಮತಪೆಟ್ಟಿಗೆಗಳು ಮತ್ತು ಮತಗಟ್ಟೆಗಳನ್ನು ವಶಪಡಿಸಿಕೊಳ್ಳುವುದು ಮತ್ತು ದೊಡ್ಡ ಪ್ರಮಾಣದಲ್ಲಿ ಮತದಾನ ಪ್ರಕ್ರಿಯೆಯಲ್ಲಿ ವಂಚನೆ ನಡೆಸುವುದು ಸೇರಿದಂತೆ ವಿವಿಧ ಅಕ್ರಮಗಳನ್ನು ನಡೆಸಲಾಯಿತು. ಅಂತಿಮವಾಗಿ, ಮತದಾನ ತನ್ನ ಪರವಾಗಿ ನಡೆದಿಲ್ಲ ಎಂಬ ಸುಳಿವು ಪಡೆದ ನಂತರ ಪ್ರತಿಪಕ್ಷಗಳ ಏಜೆಂಟರನ್ನು ಎಣಿಕೆ ಕೇಂದ್ರದಿಂದ ಹೊರಗೆ ಓಡಿಸುವುದು, ಪ್ರತಿಪಕ್ಷ ಅಭ್ಯರ್ಥಿಗಳ ಮತಪತ್ರಗಳನ್ನು ನಾಶಮಾಡುವುದು ಮತ್ತು ಫಲಿತಾಂಶಗಳನ್ನು ಸುಳ್ಳುಗೊಳಿಸುವ ಕೆಲಸಗಳನ್ನು ಮಾಡಲಾಯಿತು.
ಸಿಪಿಐ(ಎಂ) ಆಯ್ಕೆ
ಸಿಪಿಐ(ಎಂ)ನ ಅನೇಕ ಹುರಿಯಾಳುಗಳು ಆಯ್ಕೆಯಾಗಿ ಅವರಿಗೆ ಚುನಾವಣಾ ಪ್ರಮಾಣಪತ್ರ ನೀಡಲಾಗಿದ್ದರೂ ಅವುಗಳನ್ನು ಟಿಎಂಸಿ ಗೂಂಡಾಗಳು ಕಸಿದುಕೊಂಡು ನಾಶ ಮಾಡಿದ ಹಲವು ವರದಿಗಳೂ ಬಂದಿವೆ. ಭಾನ್ಗರ್ ಎಂಬಲ್ಲಿ ಅತ್ಯಂತ ಅನಪೇಕ್ಷಿತ ಘಟನೆ ನಡೆದಿದೆ. ಅಲ್ಲಿ ಐಎಸ್‌ಎಫ್ ಅಭ್ಯರ್ಥಿ ಜೆಹನಾರಾ ಬೀಬಿ ಎಂಬುವವರು ಜಿಲ್ಲಾ ಪರಿಷತ್ ಸ್ಥಾನದಲ್ಲಿ ಗೆಲುವು ಸಾಧಿಸುತ್ತಿರುವ ಹಂತದಲ್ಲಿ ಟಿಎಂಸಿ ಅಭ್ಯರ್ಥಿ ಗೆದ್ದಿದ್ದಾರೆಂದು ಘೋಷಿಸಲಾಯಿತು. ಇದರಿಂದ ಸಿಟ್ಟಿಗೆದ್ದ ಸ್ಥಳೀಯರು ರಾತ್ರೋರಾತ್ರಿ ಪ್ರತಿಭಟನೆಗಿಳಿದಾಗ ಪೊಲೀಸರು ನಡೆಸಿದ ಗೋಲಿಬಾರ್‌ಗೆ ಮೂರು ಜನರು ಸ್ಥಳದಲ್ಲೇ ಬಲಿಯಾದರು. ಒಟ್ಟಾರೆಯಾಗಿ ರಾಜ್ಯದಲ್ಲಿ ಚುನಾವಣೆ ಸಂಬಂಧಿತ ಹಿಂಸಾಚಾರಗಳಲ್ಲಿ ಕನಿಷ್ಠ 60 ಜನರು ಮೃತಪಟ್ಟಿದ್ದಾರೆ. ರಾಜ್ಯದ ಆಡಳಿತ ಮತ್ತು ಪೊಲೀಸರು ಆಳುವ ಪಕ್ಷದ ಎಲ್ಲಾ ಅಕ್ರಮ ಚಟುವಟಿಕೆಗಳಲ್ಲಿ ಕೈಜೋಡಿಸಿದ್ದು ಇನ್ನೊಂದು ಕಳವಳಕಾರಿ ಸಂಗತಿಯಾಗಿದೆ. ರಾಜ್ಯ ಚುನಾವಣಾ ಆಯುಕ್ತರ ಪಾತ್ರವೂ ಚುನಾವಣೆಯ ಪ್ರಕ್ರಿಯೆಯುದ್ದಕ್ಕೂ ನಾಚಿಕೆಗೇಡಿನದ್ದಾಗಿತ್ತು. ಅದುವರೆಗೆ ಘೋಷಿಸಲಾದ ಫಲಿತಾಂಶಗಳಲ್ಲಿ ಟಿಎಂಸಿ ಭಾರಿ ಗೆಲುವು ಸಾಧಿಸಿದೆ ಎಂದು ಮುಖ್ಯವಾಹಿನಿ ಮಾಧ್ಯಮಗಳು ಪ್ರಕಟಿಸಿದವು. ಯಾವುದೇ ರಾಜಕೀಯ ನಿರ್ಣಯಗಳಿಗೆ ಬರಲು ಈ ಫಲಿತಾಂಶವನ್ನು ವಿಶ್ಲೇಷಿಸಲು ಪ್ರಯತ್ನಿಸುವಲ್ಲಿ ಯಾವ ಅರ್ಥವೂ ಇಲ್ಲ.
ಪ್ರಹಸನವಾದ ಪ್ರಕ್ರಿಯೆ ಜನತಂತ್ರದ ಕಗ್ಗೊಲೆ
ಇಡೀ ಪ್ರಕ್ರಿಯೆ ಒಂದು ಪ್ರಹಸನವಾಗಿತ್ತು ಮತ್ತು ಎಲ್ಲಾ ಪಂಚಾಯತಿ ಸಂಸ್ಥೆಗಳಲ್ಲಿ ಅಧಿಕಾರ ಹಿಡಿಯುವ ಟಿಎಂಸಿ ಹಪಾಹಪಿಯಿಂದಾಗಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿತ್ತು. ಆದರೆ ಈ ಪ್ರಜಾಪ್ರಭುತ್ವ-ವಿರೋಧಿ ದಬ್ಬಾಳಿಕೆಯಿಂದ ಕೆಲವು ಮನಕಲಕುವ ವಿಚಾರಗಳನ್ನು ಮುಚ್ಚಿಹಾಕಲು ಸಾಧ್ಯವಿಲ್ಲ. 2018ರ ಪಂಚಾಯತ್ ಚುನಾವಣೆಗಳ ಸಮಯದಂತಲ್ಲದೆ ಈ ಸಲ ಟಿಎಂಸಿ ಗೂಂಡಾಗಳ ದೌರ್ಜನ್ಯಕ್ಕೆ ಜನರ ಪ್ರತಿರೋಧ ವ್ಯಾಪಕವಾಗಿತ್ತು. ಸಿಪಿಐ(ಎಂ) ಮತ್ತು ಎಡ ರಂಗದ ಅಭ್ಯರ್ಥಿಗಳು ಮತ್ತು ಬೆಂಬಲಿಗರ ಮೇಲೆ ನಡೆದ ಬೆದರಿಕೆಗಳು ಹಾಗೂ ದೈಹಿಕ ಆಕ್ರಮಣಗಳನ್ನು ದೃಢವಾಗಿ ಎದುರಿಸಿ ನಿಂತ ನೂರಾರು ಪ್ರಕರಣಗಳಿವೆ. ಮತದಾನದ ದಿನದಂದು, ಸಾವಿರಾರು ಜನರು ಟಿಎಂಸಿಯ ತಂಡಗಳು ಮತ್ತು ಬ್ಯಾರಿಕೇಡ್‌ಗಳನ್ನು ಮುರಿದು ಮುನ್ನುಗ್ಗಿ ಮತ ಚಲಾಯಿಸಿದರು. ಈ ಅನುಭವದಿಂದ ಕಂಗೆಟ್ಟ ಆಳುವ ಟಿಎಂಸಿ, ಮತ ಎಣಿಕೆ ಪ್ರಕ್ರಿಯೆ ವೇಳೆ ಫಲಿತಾಂಶದ ಬಗ್ಗೆ ಸುಳ್ಳು ಹರಡುವ ಕೃತ್ಯದಲ್ಲಿ ತೊಡಗಿತು. ಎಡ ಪಕ್ಷಗಳು ಮತ್ತು ಕಾಂಗ್ರೆಸ್, ಆಳುವ ಟಿಎಂಸಿ ಆಡಳಿತದ ಭಯೋತ್ಪಾದನೆ ತಂತ್ರಗಳಿಗೆ ಗರಿಷ್ಠ ಪ್ರತಿರೋಧ ತೋರಿದ್ದವು ಎನ್ನುವುದನ್ನು ಕೂಡ ಪಂಚಾಯತ್ ಚುನಾವಣೆಗಳ ಫಲಿತಾಂಶ ತೋರಿಸಿಕೊಟ್ಟಿದೆ. ಆದ್ದರಿಂದಲೇ ಈ ಪಕ್ಷಗಳು ಟಿಎಂಸಿಯ ಪ್ರಮುಖ ಟಾರ್ಗೆಟ್ ಆಗಿದ್ದವು.
ಟಿಎಂಸಿ ಆಕ್ರಮಣಕ್ಕೆ ಬಿಜೆಪಿ ಟಾರ್ಗೆಟ್ ಆಗಿದ್ದು ತುಂಬಾ ಕಡಿಮೆಯೇ. ಬಿಜೆಪಿ ಮತ್ತು ಟಿಎಂಸಿಗಳೆರಡೂ ಒಂದೇ ಬಗೆಯ ವರ್ಗ ಆಧಾರವನ್ನು ಹೊಂದಿವೆ ಹಾಗೂ ಗ್ರಾಮೀಣ ಶ್ರೀಮಂತರು ಹಾಗೂ ಅವರ ಪರೋಪಜೀವಿ ಶಕ್ತಿಗಳ ನಡುವೆ ಈ ಎರಡೂ ಪಕ್ಷಗಳಿಗೆ ಬೆಂಬಲವಿದೆ. ಕಳೆದ ಒಂದು ದಶಕದಿಂದ ಸೃಷ್ಟಿಸಿದ ಜಾಲ ಮತ್ತು ಕಾರ್ಯಾಚರಣೆಗಳು ಗ್ರಾಮೀಣ ಪ್ರದೇಶಗಳಲ್ಲಿ ಟಿಎಂಸಿ ಪ್ರಾಬಲ್ಯ ಗಳಿಸಲು ಕಾರಣವಾಗಿದೆ. ಗ್ರಾಮೀಣ ಭಾಗಗಳ ನವ-ಕುಬೇರರು ಟಿಎಂಸಿಯ ಪ್ರಮುಖ ಬೆನ್ನೆಲುಬಾಗಿದ್ದಾರೆ. ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳ ಹಣವನ್ನು ನುಂಗಿ ಹಾಕುವ ಎಲ್ಲಾ ಹಂತಗಳ ಟಿಎಂಸಿ ಕಾರ್ಯಕರ್ತರು ಬಯಸುವ `ಬಾಡಿಗೆ’ ಗ್ರಾಮೀಣ ಬಂಗಾಳದ ರಾಜಕೀಯ ಆರ್ಥಿಕತೆಯಾಗಿದೆ. ಅದು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಂದ ಕೀಳುವ ಕಮಿಷನ್ ಆಗಿದೆ. ನವ-ಕುಬೇರರು ಮತ್ತು ಅವರ ಏಜೆಂಟರ ಈ ಭ್ರಷ್ಟ ಮತ್ತು ಬಲಿಷ್ಠ ಜಾಲವು ಟಿಎಂಸಿಯ ಆದೇಶಗಳನ್ನು ಶಿರಸಾ ಪಾಲಿಸುತ್ತದೆ. ಬಾಡಿಗೆ (ಭ್ರಷ್ಟ ಕಮಿಷನ್ ಹಣ) ಮತ್ತು ಲೂಟಿಗೆ ಪಂಚಾಯತ್‌ಗಳನ್ನು ವಶಪಡಿಸಿಕೊಂಡು ನಿಯಂತ್ರಿಸುವುದು ನಿರ್ಣಾಯಕವಾಗುತ್ತದೆ.
ಇದನ್ನೂ ಓದಿ:ನವ ಶೀತಲ ಸಮರ, ನವ ಅಲಿಪ್ತ ಚಳುವಳಿ ಮತ್ತು ಮೋದಿ ಯು.ಎಸ್ ಭೇಟಿ
ಈ ಜಾಲದೊಳಗೇ ವೈರುಧ್ಯ ಮತ್ತು ಸಂಘರ್ಷವಿದ್ದು ಅಕ್ರಮ ಹಣದಲ್ಲಿ ಪಾಲಿನ ವಿಚಾರವಾಗಿ ಘರ್ಷಣೆಗಳು ನಡೆಯುತ್ತವೆ. ಅದೇ ಹೊತ್ತಿಗೆ, ಪೋಷಣೆಯ ಈ ಜಾಲ ಮತ್ತು ಕೊಳಕು ಶಕ್ತಿಗಳೇ ರಾಜಕೀಯ ವಿರೋಧಿಗಳು ಮತ್ತು ಅಸಮಾನತೆ ಮತ್ತು ಯೋಜನೆಗಳ ಫಲದಿಂದ ವಂಚಿತರಾಗುವ, ಅದರ ವಿರುದ್ಧ ಧ್ವನಿಯೆತ್ತುವ ಯಾರೇ ಆದರೂ ಅವರ ವಿರುದ್ಧ ಟಿಎಂಸಿಯ ಆಯುಧಗಳಾಗಿವೆ. ಈ ಭ್ರಷ್ಟ-ಕ್ರಿಮಿನಲ್ ಮೈತ್ರಿಕೂಟವನ್ನು ಸಿಪಿಐ(ಎಂ) ಮತ್ತು ಎಡ ಶಕ್ತಿಗಳು ವಿರೋಧಿಸುತ್ತವೆ ಹಾಗೂ ಅದರ ವಿರುದ್ಧ ಹೋರಾಡುತ್ತವೆ. ಅಸೆಂಬ್ಲಿ ಚುನಾವಣೆಗಳು ಮುಗಿದ ನಂತರದ ಕಳೆದ ಎರಡು ವರ್ಷಗಳಿಂದ ಟಿಎಂಸಿಯ ಭ್ರಷ್ಟ ಮೈತ್ರಿ ಕೂಟಕ್ಕೆ ಎಡ ಪಕ್ಷಗಳ ನೇತೃತ್ವದಲ್ಲಿ ಪ್ರತಿರೋಧ ಬೆಳೆಯುತ್ತಿದೆ. ಆ ಕಾರಣದಿಂದಲೇ ಅವುಗಳು ಪಂಚಾಯತ್ ಚುನಾವಣೆಗಳಲ್ಲಿ ಹೆಚ್ಚು ಆಕ್ರಮಣಗಳು ಮತ್ತು ಹಿಂಸಾಚಾರದ ಬಿಸಿಯನ್ನು ಅನುಭವಿಸಿದವು. ಸತತ ಹೋರಾಟಗಳು ಮತ್ತು ಅಪಾರ ಆಕ್ರಮಣಗಳನ್ನು ಎದುರಿಸಿ ಗಟ್ಟಿಗೊಂಡಿರುವ ಸಿಪಿಐ(ಎಂ) ಮತ್ತು ಎಡ ಪಕ್ಷಗಳು, ತಮ್ಮ ಜಾತ್ಯತೀತ ಮಿತ್ರರೊಡನೆ ಸೇರಿಕೊಂಡು ಜನರ ಪ್ರಶ್ನೆಗಳಿಗಾಗಿ ಮತ್ತು ಟಿಎಂಸಿ ಆಡಳಿತದ ವಿರುದ್ಧ ಹೋರಾಟವನ್ನು ಮುಂದುವರಿಸಲಿವೆ. ಅದೇ ಹೊತ್ತಿಗೆ, ಅತ್ಯಂತ ಕೆಟ್ಟ ಪರ್ಯಾಯವಾದ ಬಿಜೆಪಿಯನ್ನೂ ಅವುಗಳು ದೃಢವಾಗಿ ವಿರೋಧಿಸಲಿವೆ. ಬಿಜೆಪಿ ವಿರುದ್ಧ ಸೆಣಸಲು ಪ್ರತಿಪಕ್ಷಗಳು ಸಜ್ಜಾಗುತ್ತಿರುವಾಗ ಬಂಗಾಳದಲ್ಲಿ ಟಿಎಂಸಿಯ ಪ್ರಜಾಪ್ರಭುತ್ವ-ವಿರೋಧಿ ದಾಳಿಗಳು, ಪ್ರಜಾತಂತ್ರದ ರಕ್ಷಕ ಎಂದು ಬಿಜೆಪಿಯನ್ನು ಬಿಂಬಿಸಲು ಅವಕಾಶ ಕಲ್ಪಿಸುವ ಮೂಲಕ ಪ್ರತಿಪಕ್ಷಗಳ ಒಗ್ಗಟ್ಟಿಗೆ ಗಂಭೀರ ಅಡ್ಡಿ ಉಂಟುಮಾಡುತ್ತವೆ.
ಅನು: ವಿಶ