ಬಿಜೆಪಿ ಸಂಸದ ಸ್ಥಾನಕ್ಕೆ ಬಾಬುಲ್ ಸುಪ್ರಿಯೋ ರಾಜೀನಾಮೆ

ನವದೆಹಲಿ: ಬಿಜೆಪಿ ಪಕ್ಷನ್ನು ತೊರೆದು ತೃಣಮೂಲ ಕಾಂಗ್ರೆಸ್(ಟಿಎಂಸಿ) ಪಕ್ಷ ಸೇರಿರುವ ಮಾಜಿ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ದೆಹಲಿಯಲ್ಲಿಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಅಧಿಕೃತ ನಿವಾಸಕ್ಕೆ ಭೇಟಿ ನೀಡಿ ಬಿಜೆಪಿ ಸಂಸದ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.

ರಾಜೀನಾಮೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಾಬುಲ್ ಸುಪ್ರಿಯೋ ಬಿಜೆಪಿಯೊಂದಿಗೆ ಅಧಿಕೃತವಾಗಿ ಸಂಬಂಧ ಕಡಿದುಕೊಳ್ಳುತ್ತಿರುವುದು ಮನಸ್ಸನ್ನು ಭಾರಗೊಳಿಸಿದೆ. ನನ್ನ ರಾಜಕೀಯ ಜೀವನ ಆರಂಭವಾಗಿದ್ದು ಬಿಜೆಪಿ ಪಕ್ಷದಿಂದ. ಈಗ ಆ ಪಕ್ಷವನ್ನು ತೊರೆಯುತ್ತಿರುವುದು ನನ್ನ ಪಾಲಿಗೆ ಅಷ್ಟು ಸುಲಭವಲ್ಲ ಎಂದು ಹೇಳಿದರು.

ಇದನ್ನು ಓದಿ: ಪಶ್ಚಿಮ ಬಂಗಾಳದ ಇಬ್ಬರು ಬಿಜೆಪಿ ಶಾಸಕರು ರಾಜೀನಾಮೆ

ನನ್ನ ಮೇಲೆ ನಂಬಿಕೆಯಿಟ್ಟು ಪಕ್ಷ ಮತ್ತು ಸರ್ಕಾರದಲ್ಲಿ ಜವಾಬ್ದಾರಿ ನೀಡಿದ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಈಗ ಬಿಜೆಪಿ ಪಕ್ಷದ ಭಾಗವಲ್ಲ, ಹೀಗಾಗಿ ಪಕ್ಷದಿಂದ ಆಯ್ಕೆಯಾದ ಸಂಸದ ಸ್ಥಾನವನ್ನು ಉಳಿಸಿಕೊಳ್ಳುವುದು ನೈತಿಕವಾಗಿ ಸರಿಯಲ್ಲ. ಹೀಗಾಗಿ ರಾಜೀನಾಮೆ ನೀಡಿದ್ದೇನೆ ಎಂದು ಬಾಬುಲ್ ಸುಪ್ರಿಯೋ ಸ್ಪಷ್ಟಪಡಿಸಿದರು.

ತಮ್ಮನ್ನು ನಿರಂತರವಾಗಿ ಟೀಕಿಸುತ್ತಿರುವ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರಿಗೆ ಸೂಕ್ತ ತಿರುಗೇಟು ನೀಡಿದ ಬಾಬುಲ್ ಸುಪ್ರಿಯೋ, ಇಷ್ಟು ದಿನ ಟಿಂಎಸಿ ಪಕ್ಷದ ನಾಯಕರಾಗಿದ್ದು ಈಗ ಬಿಜೆಪಿ ಸೇರಿದ ಬಳಿಕ ನನ್ನ ಬಗ್ಗೆ ಕಹಿ ಮಾತುಗಳನ್ನಾಡುವುದು ಸಹಜ ಎಂದು ಹೇಳಿದರು. ನನ್ನನ್ನು ಟೀಕಿಸುವುದಕ್ಕೂ ಮೊದಲು ಸುವೇಂದು ಅಧಿಕಾರಿ ತಮ್ಮ ತಂದೆ ಮತ್ತು ಸಹೋದರನಿಗೆ ಟಿಎಂಸಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಹೇಳಲಿ. ಸುವೇಂದು ಅಧಿಕಾರಿ, ಅವರ ತಂದೆ ಮತ್ತು ಸಹೋದರ ಟಿಎಂಸಿ ತೊರೆದಿದ್ದಾರೆ. ಹೀಗಾಗಿ ಅವರೂ ಕೂಡ ಟಿಎಂಸಿಯಿಂದ ಆಯ್ಕೆಯಾದ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಾಬುಲ್ ಸುಪ್ರಿಯೋ ಒತ್ತಾಯಿಸಿದರು.

2021ರ ಎಪ್ರಿಲ್‌ ತಿಂಗಳಿನಲ್ಲಿ ನಡೆದ ಪಶ್ಚಿಮ ಬಂಗಾಳ ರಾಜ್ಯ ವಿಧಾನಸಭೆ ಚುನಾವಣೆ ಬಳಿಕ ಕೇಂದ್ರ ಸಂಪುಟ ಪುನರ್‌ ರಚನೆಯಲ್ಲಿ, ಬಾಬುಲ್ ಸುಪ್ರಿಯೋ ಅವರನ್ನು ಸಚಿವ ಸ್ಥಾನದಿಂದ ಕೈಬಿಡಲಾಗಿತ್ತು. ಇದರಿಂದ ನೊಂದಿದ್ದ ಬಾಬುಲ್ ಸುಪ್ರಿಯೋ, ಬಿಜೆಪಿ ತೊರೆದು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಾಬುಲ್‌ ಸುಪ್ರಿಯೋ ಬಿಜೆಪಿ ಸಂಸದರಾಗಿದ್ದುಕೊಂಡು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ ವಿಧಾನಸಭೆ ಚುನಾವಣೆಯಲ್ಲಿ ಅವರು ಸೋಲನ್ನು ಅನುಭವಿಸಿದರು. ಸುಪ್ರಿಯೋ ಸಲ್ಲಿಸಿರುವ ರಾಜೀನಾಮೆಯನ್ನು ಸ್ಪೀಕರ್ ಓಂ ಬಿರ್ಲಾ ಅಂಗೀಕರಿಸಿದರು.

Donate Janashakthi Media

Leave a Reply

Your email address will not be published. Required fields are marked *