ಭ್ರಷ್ಟ ರಾಜಕಾರಣಿಯತ್ತ ಶೂ ತೋರಿ ‘ಕಳ್ಳ ಕಳ್ಳ’ ಎಂದು ಕೂಗಿದ ಜನರು

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಗೆ ಹೊಡೆತದ ಮೇಲೆ ಹೊಡೆತ ಬೀಳುತ್ತಿದೆ. ಕಳೆದ ಕೆಲವು ದಿನಗಳ ಹಿಂದಷ್ಟೇ ಟಿಎಂಸಿ ನಾಯಕ ಪಾರ್ಥ ಚಟರ್ಜಿ ಅವರನ್ನು ಶಿಕ್ಷಕರ ನೇಮಕಾತಿ ಹಗರಣದ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಇದೀಗ ಮತ್ತೊಬ್ಬ ಟಿಎಂಸಿ ನಾಯಕನನ್ನು ಸಿಬಿಐ ಬಂಧಿಸಿದೆ.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಪ್ತ ಅನುಬ್ರತ ಮೊಂಡಲ್ ಅವರನ್ನು ಸಿಬಿಐ ಗುರುವಾರ ಬೆಳಗ್ಗೆ ಬಂಧಿಸಿದೆ. 2020ರ ಜಾನುವಾರು ಕಳ್ಳಸಾಗಣೆ ಮತ್ತು ಮೇವು ಹಗರಣದ ಪ್ರಕರಣದ ಭಾಗವಾಗಿ ಕೇಂದ್ರೀಯ ತನಿಖಾ ಸಂಸ್ಥೆ- ಸಿಬಿಐ ಈ ಕ್ರಮಗಳನ್ನು ಕೈಗೊಂಡಿದೆ. ಅನುಬ್ರತಾ ಮೊಂಡಲ್ ಪ್ರಸ್ತುತ ಟಿಎಂಸಿ ಬಿರ್ಭುಮ್ ಜಿಲ್ಲಾ ಅಧ್ಯಕ್ಷರಾಗಿದ್ದಾರೆ.

ಒಂದು ತಿಂಗಳ ಅವಧಿಯಲ್ಲಿ ಟಿಎಂಸಿ ಇಬ್ಬರು ನಾಯಕರನ್ನು ಬಂಧಿಸಿದಂತಾಗಿದೆ. ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದ ಭಾಗವಾಗಿ ಮಮತಾ ಬ್ಯಾನರ್ಜಿ ಅವರ ಆಪ್ತ ಸ್ನೇಹಿತ ಮತ್ತು ಮಾಜಿ ಸಚಿವ ಪಾರ್ಥ ಚಟರ್ಜಿ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಆತನಿಗೆ ಅತ್ಯಂತ ಹತ್ತಿರವಾಗಿದ್ದ ಅರ್ಪಿತಾ ಮುಖರ್ಜಿಯನ್ನೂ ಬಂಧಿಸಲಾಗಿತ್ತು. ನಂತರ ಇಡಿ ನಡೆಸಿದ ದಾಳಿಯಲ್ಲಿ 50 ಕೋಟಿಗೂ ಅಧಿಕ ನಗದು ಹಾಗೂ ಬೆಲೆಬಾಳುವ ಚಿನ್ನಾಭರಣ ಪತ್ತೆಯಾಗಿತ್ತು.

ಕಳ್ಳ ಕಳ್ಳ ಎಂದು ಕೂಗಿದ ಸಾರ್ವಜನಿಕರು : ಅಸನ್ಸೋಲ್‌ನ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಅನುಬ್ರತ ಮೊಂಡಲ್ ಅವರನ್ನು ಹಾಜರುಪಡಿಸುವಾಗ ಕೋಪಗೊಂಡ ಸ್ಥಳೀಯರು ಆತನಿಗೆ ಶೂಗಳನ್ನು ತೋರಿಸಿ ‘ಕಳ್ಳ, ಕಳ್ಳ’ ಎಂದು ಕೂಗಿದ್ದಾರೆ. ಪೊಲೀಸರ ವಶದಲ್ಲಿದ್ದ ಮೊಂಡಲ್ ಸಾರ್ವಜನಿಕರು ಬಹಿರಂಗವಾಗಿ ವ್ಯಕ್ತಪಡಿಸಿದ ಆಕ್ರೋಶದಿಂದ ತೀವ್ರ ಮುಜುಗರಕ್ಕೆ ಒಳಗಾಗಿದ್ದು ಕಂಡುಬಂತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಂಡಲ್​ನನ್ನು ಸಿಬಿಐ 10 ದಿನಗಳ ಕಾಲ ಕಸ್ಟಡಿಗೆ ಪಡೆದಿದೆ.

Donate Janashakthi Media

Leave a Reply

Your email address will not be published. Required fields are marked *