ಉಡುಪಿ: ಗಂಗೊಳ್ಳಿ ಅಳಿವೆ ಸಮೀಪ ಮರದ ದಿಮ್ಮಿಯು ದುರಸ್ತಿಗೆಂದು ಕೊಂಡೊಯ್ಯುತ್ತಿದ್ದ ಮಲ್ಪೆ ಬಂದರಿನ ಮೀನುಗಾರಿಕಾ ಬೋಟಿಗೆ ಡಿಕ್ಕಿ ಹೊಡೆದ ಪರಿಣಾಮ ಬೋಟ್ ಭಾಗಶಃ ಮುಳುಗಡೆಗೊಂಡು ಅಪಾರ ನಷ್ಟ ಉಂಟಾಗಿದೆ.
ಸಂಜಾತ ರ ಮಾಲಕತ್ವದ ತವಕಲ್ ಎನ್ನುವ ಹೆಸರಿನ ಮೀನುಗಾರಿಕೆ ಬೋಟನ್ನು ದುರಸ್ತಿಗೆಂದು ಮೀನುಗಾರರಾದ ರವಿ ಸಾಲ್ಯಾನ್ ಮತ್ತು ಹರೀಶ್ ಮಲ್ಪೆ ಬಂದರಿನಿಂದ ಗಂಗೊಳ್ಳಿಗೆ ಕೊಂಡು ಹೋಗುತ್ತಿದ್ದರು.
ಇದನ್ನೂ ಓದಿ: UGC ಕರಡು ನಿಯಮ ಪ್ರಕಟ ; ಕುಲಪತಿ ಹುದ್ದೆಗೆ ನೇರ ನೇಮಕ!
ಗಂಗೊಳ್ಳಿ ಬಂದರಿನ ಅಳಿವೆಯಿಂದ ಸುಮಾರು 2 ನಾಟಿಕಲ್ ಮೈಲು ದೂರದಲ್ಲಿ ಚಲಿಸುತ್ತಿರುವಾಗ ರಾತ್ರಿ 7.30ರ ವೇಳೆಗೆ ದೊಡ್ಡದಾದ ಮರದ ದಿಮ್ಮಿ ಬಂದು ಬೋಟಿಗೆ ಡಿಕ್ಕಿ ಹೊಡೆದಿದೆ.
ಇದರ ಪರಿಣಾಮ ಬೋಟಿನ ಮುಂಭಾಗದ ತಳಬದಿಯಲ್ಲಿ ಹಾನಿಯಾಗಿ ನೀರು ಒಳ ಬರಲು ಪ್ರಾರಂಭಿಸಿತ್ತು. ಬೋಟು ಮುಳುಗುವ ಸಂಭವ ಇರುವುದನ್ನು ಗಮನಿಸಿದ ತಾಂಡೇಲ ರವಿ ಸಾಲ್ಯಾನ್ ಅವರು ದುರಸ್ತಿ ಕೆಲಸ ಮಾಡುವ ಗಂಗೊಳ್ಳಿ ಪುಂಡಲೀಕ ಹರಾಟೆ ಅವರನ್ನು ಸಂಪರ್ಕಿಸಿದ್ದು, ಅವರು ಜಲರಾಣಿ ಎಂಬ ಹೆಸರಿನ ಬೋಟನ್ನು ನೆರವಿಗೆ ಕಳುಹಿಸಿದ್ದರು.
ಜಲರಾಣಿ ಬೋಟಿನವರು ಮುಳುಗಡೆಗೊಳ್ಳುತ್ತಿದ್ದ ಬೋಟಿನಲ್ಲಿದ್ದ ರವಿ ಸಾಲ್ಯಾನ್ ಮತ್ತು ಹರೀಶ್ ಅವರನ್ನು ರಕ್ಷಣೆ ಮಾಡಿ ಬೋಟನ್ನು ತನ್ನ ಬೋಟಿಗೆ ಹಗ್ಗ ಕಟ್ಟಿ ಗಂಗೊಳ್ಳಿಗೆ ಎಳೆದು ತಂದಿದ್ದಾರೆ. ಬೋಟು ಹಾನಿಗೊಂಡಿದ್ದು, ಸುಮಾರು 65 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಇದನ್ನೂ ನೋಡಿ: ಬಯ್ಯಾರೆಡ್ಡಿಯವರ ಹೃದಯ ಸದಾ ಹೋರಾಟಗಳಿಗೆ ಮಿಡಿಯುತ್ತಿತ್ತು – ಸಿಎಂ ಸಿದ್ದರಾಮಯ್ಯ Janashakthi Media