ಬೆಳಗಾವಿ: ಇಲ್ಲಿನ ಕೇಂದ್ರ ಕಾರಾಗೃಹ ಕಿಡಿಗೇಡಿಯೋರ್ವ ಗೋಡೆಯ ಮೇಲಿಂದ ಮೊಬೈಲ್, ಡ್ರಗ್ಸ್ ಎಸೆದಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಡಿ.29ರ ಮಧ್ಯರಾತ್ರಿ ಘಟನೆ ನಡೆದಿದೆ.
ಹಿಂಡಲಗಾ ಗ್ರಾಮದಲ್ಲಿರುವ ಜೈಲಿಗೆ ಬೆಳಗ್ಗೆ 3 ಗಂಟೆಗೆ ಮುಖಕ್ಕೆ ಮಾಸ್ಕ್ ಕಟ್ಟಿಕೊಂಡು ಬಂದಿರುವ ಆತ, ಬಟ್ಟೆಯಲ್ಲಿ ಕಟ್ಟಿದ ವಸ್ತುಗಳನ್ನು ಎಸೆದು ಪರಾರಿಯಾಗಿದ್ದಾನೆ.
ಡಿ.29ರಂದು ಕಾರಾಗೃಹದ ಮುಖ್ಯ ವೀಕ್ಷಕ ಡಿ.ಎಂ.ಗೋಠೆ ಅವರು ಕರ್ತವ್ಯ ನಿರ್ವಹಿಸುತ್ತಿರುವಾಗ ಸರ್ಕಲ್ ನಂ.2, ಬ್ಯಾರೆಕ್ ನಂ.2 ಮೂಲೆಯಲ್ಲಿ ಒಂದು ಮೊಬೈಲ್ ಪತ್ತೆಯಾಗಿದೆ. ಜೈಲಿನ ಸಹಾಯಕ ಅಧೀಕ್ಷಕ ಮಲ್ಲಿಕಾರ್ಜುನ ಕೊಣ್ಣೂರ ಅವರು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ, ನಿಷೇಧಿತ ವಸ್ತುವನ್ನು ಇಟ್ಟುಕೊಂಡಿರುವ ಮತ್ತು ಬಳಸಿರುವ ಕೈದಿಗಳನ್ನು ಪತ್ತೆ ಮಾಡಬೇಕು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ನವದೆಹಲಿ | ತಪ್ಪಿತಸ್ಥರಿಗೆ ಶಿಕ್ಷೆಗೆ ಆಗ್ರಹ : ತ್ರಿಪುರದ ವಿದ್ಯಾರ್ಥಿಯ ಹತ್ಯೆ ಪ್ರಕರಣ
ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದು, ತನಿಖೆ ಕೈಗೊಂಡಿದ್ದಾರೆ. ಜೈಲಿನ ಹೊರಗಡೆಯ ಇಂಥ ಕೃತ್ಯಗಳನ್ನು ಹತೋಟಿಗೆ ತರಲು ಪೊಲೀಸರು, ಜೈಲು ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ.
ಬೆಂಗಳೂರಿನ ಪರಪ್ಪನ ಅಗ್ರಹಾರದ ಕಾರಾಗೃಹದಲ್ಲಿ ಕೆಲ ಕೈದಿಗಳಿಗೆ ವಿಶೇಷ ಆತಿಥ್ಯ ದೊರೆಯುತ್ತಿರುವ ವಿಡಿಯೋಗಳು ಇತ್ತೀಚೆಗೆ ವೈರಲ್ ಆಗಿದ್ದವು. ಆ ಬಳಿಕ ಕಾರಾಗೃಹದಲ್ಲಿನ ಉಗ್ರ ಜುಹಾಬ್ ಶಕೀಲ್ ಮನ್ನಾ, ಸೀರಿಯಲ್ ಕಿಲ್ಲರ್ ಉಮೇಶ್ ರೆಡ್ಡಿ, ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ತರುಣ್ ಕೊಂಡಾರು ವಿರುದ್ಧ ದೂರು ದಾಖಲಾಗಿತ್ತು. ಈ ಪ್ರಕರಣ ಸಂಬಂಧ ಕಾರಾಗೃಹದ ಅಧೀಕ್ಷಕ ಮ್ಯಾಗೇರಿ, ಸಹಾಯಕ ಅಧೀಕ್ಷಕ ಅಶೋಕ್ ಭಜಂತ್ರಿ ಅವರನ್ನು ಸರ್ಕಾರ ಅಮಾನತುಗೊಳಿಸಿ, ಕಾರಾಗೃಹದ ಮುಖ್ಯ ಅಧೀಕ್ಷಕರು ಕೆ.ಸುರೇಶ್ ಅವರನ್ನು ವರ್ಗಾವಣೆಗೊಳಿಸಿ ಆದೇಶಿಸಿತ್ತು.
ಈ ಸಂದರ್ಭದಲ್ಲಿ, 33 ಮೊಬೈಲ್ ಫೋನ್‌ಗಳು, 22 ಸಂಖ್ಯೆ ಸಿಮ್ ಕಾರ್ಡ್‌ಗಳು, 5 ಚಾರ್ಜರ್‌ಗಳು, 4 ಇಯರ್ ಬಡ್ಸ್, 49 ಸಾವಿರ ರೂಪಾಯಿ ನಗದು, 1 ಇಯರ್ ಫೋನ್, 3 ಚಾಕು ತರಹದ ವಸ್ತುಗಳು ದೊರೆತಿದ್ದವು. ಈ ಹಿನ್ನೆಲೆ ರಾಜ್ಯ ಕಾರಾಗೃಹ (ತಿದ್ದುಪಡಿ) ಕಾಯ್ದೆಯಡಿ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಜರುಗಿಸುವಂತೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಜೈಲಾಧಿಕಾರಿಗಳು ಎಫ್ಐಆರ್ ದಾಖಲಿಸಿದ್ದರು. ಈ ಬೆನ್ನಲ್ಲೇ ಜೈಲಾಧಿಕಾರಿಗಳು ಪರಪ್ಪನ ಅಗ್ರಹಾರದ ಕೆಲ ಬ್ಯಾರಕ್‌ಗಳಲ್ಲಿ ದಿಢೀರ್ ತಪಾಸಣೆ ನಡೆಸಿದಾಗ ಕೈದಿಗಳ ಬಳಿ ಮೊಬೈಲ್ ಫೋನ್, ನಗದು, ಮತ್ತಿತರ ಎಲೆಕ್ಟ್ರಾನಿಕ್ ಉಪಕರಣಗಳು ಪತ್ತೆಯಾಗಿದ್ದವು.
ಇದನ್ನೂ ನೋಡಿ : ಅಖ್ಲಾಕ್ ಗುಂಪು ಹತ್ಯೆ ಪ್ರಕರಣ & ಸೇಂಗಾರ್‌ಗೆ ವಿಧಿಸಲಾದ ಶಿಕ್ಷೆ ಅಮಾನತು ಏನು ಹೇಳುತ್ತಿವೆ? Janashakthi Media
