ರಾಮನಗರ: ನಗರದ ಎಪಿಎಂಸಿ ಹಿಂಭಾಗದಲ್ಲಿರುವ ಐಜೂರಿನ ನೇತಾಜಿ ಪಬ್ಲಿಕ್ ಶಾಲೆಯ ಪಕ್ಕದಲ್ಲಿ ನಿರ್ಮಾಣ ಹಂತದ ಮ್ಯಾನ್‌ಹೋಲ್ ನಲ್ಲಿ ಯಾವುದೇ ಸುರಕ್ಷತಾ ಸಾಧನೆಗಳಿಲ್ಲದೆ ಕೆಲಸಕ್ಕೆ ಮುಂದಾದ ಮೂವರು ಕಾರ್ಮಿಕರು ಮರಣಹೊಂದಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಶವಗಳನ್ನು ಹೊರಕ್ಕೆ ತೆಗೆದಿದ್ದಾರೆ.
ಬೆಂಗಳೂರಿನ ಕಮಲಾನಗರದ ನಿವಾಸಿಗಳಾದ ಮಂಜುನಾಥ್ (29), ಮಂಜುನಾಥ್ (32) ಹಾಗೂ ರಾಜೇಶ್ (40) ಮೃತರು. ಆಯತಪ್ಪಿ ಬಿದ್ದ ಒಬ್ಬನನ್ನು ರಕ್ಷಿಸಲು ಮುಂದಾದ ಇಬ್ಬರು ಕಾರ್ಮಿಕರೂ ಸೇರಿ, ಮೂವರೂ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಈ ಕಾರ್ಮಿಕರು ಮ್ಯಾನ್ ಹೋಲ್ ಮೂಲಕ 15 ಅಡಿ ಆಳಕ್ಕೆ ಇಳಿದಿದ್ದರು. ಮೊದಲಿಗೆ ರಾಜೇಶ ಕೆಳಗೆ ಇಳಿದಿದ್ದು, ಆಯಾ ತಪ್ಪಿ ಬಿದ್ದಿದ್ದಾರೆ. ಈ ಸಂದರ್ಭ ತಲೆಗೆ ಪೆಟ್ಟಾಗಿದೆ. ಇವರನ್ನು ರಕ್ಷಿಸಲು ಉಳಿದ ಇಬ್ಬರೂ ಕೆಳಗೆ ಇಳಿದಿದ್ದು, ಉಸಿರುಗಟ್ಟಿ ಅಲ್ಲಿಯೇ ಸಾವನ್ನಪ್ಪಿದರು.
ಇದನ್ನು ಓದಿ: SSLC ಪರೀಕ್ಷೆ ರದ್ದು ಇಲ್ಲ ಆದರೆ, ಪಿಯುಸಿ ಪರೀಕ್ಷೆ ರದ್ದು
ಮ್ಯಾನ್‌ಹೋಲ್‌ಗೆ ಕಾರ್ಮಿಕರನ್ನು ಇಳಿಸಬಾರದು ಎಂದು ಈಗಾಗಲೇ ಹಲವು ಬಾರಿ ತಿಳಿಸಲಾಗಿದ್ದರೂ, ಪ್ರತಿಭಟನೆಗಳು ನಡೆದಿದ್ದರೂ ಸಹ ಮತ್ತೆ ಮತ್ತೆ ಇಂತಹ ಘಟನೆಗಳು ಮರುಕಳಿಸುತ್ತಿವೆ.
ಹರೀಶ್ ಎಂಬುವವರಿಗೆ ಮ್ಯಾನ್‌ಹೋಲ್ ಕಾಮಗಾರಿಯ ಗುತ್ತಿಗೆಯನ್ನು ನೀಡಲಾಗಿತ್ತು. ರಾಮನಗರದ ಎಪಿಎಂಸಿ ಹಿಂಭಾಗದಲ್ಲಿ ಈ ಘಟನೆ ನಡೆದಿದೆ. ನಗರಸಭೆಗೆ ಮಾಹಿತಿಯೇ ಕೊಡದೇ ಕಾರ್ಮಿಕರು ಇಳಿದಿದ್ದರು ಎನ್ನಲಾಗಿದೆ.
ಈ ಬಗ್ಗೆ ಉಪಮುಖ್ಯಮಂತ್ರಿ ಡಾ. ಅಶ್ವಥ ನಾರಾಯಣ ಸಿ ಎನ್ ಆವರು ರಾಮನಗರದಲ್ಲಿ ದುರದೃಷ್ಟವಶಾತ್ ಮ್ಯಾನ್ ಹೋಲ್ ನಲ್ಲಿ ಮೂವರು ಕಾರ್ಮಿಕರು ಸಿಲುಕಿ ಅಸುನೀಗಿದ ಘಟನೆ ನಡೆದಿರುವುದು ವಿಷಾದನೀಯ ಎಂದು ಟ್ವೀಟ್ ಮಾಡಿದ್ದಾರೆ.
ಮ್ಯಾನ್‌ಹೋಲ್ ಸ್ಚಚ್ಛಗೊಳಿಸಲು ಕೆಲಸ ಮುಂದಾದ ಹೊರ ಗುತ್ತಿಗೆಯ ಮೂವರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ರಾಮನಗರದಲ್ಲಿ ನಡೆದಿರುವುದು ಅತ್ಯಂತ ದುಖಃಕರವಾದ ಸಂಗತಿ. ಇದಕ್ಕಾಗಿ ತೀವ್ರ ಕಂಬನಿ ಮಿಡಿಯುತ್ತೇನೆ. ಇದೊಂದು ಮನಕಲಕುವ ಸರಣಿ ಸಾವು. ಬೇಜವಾಬ್ದಾರಿತನದಿಂದ ಗುತ್ತಿಗೆ ಕಾರ್ಮಿಕರ ಸಾವಿಗೆ ಕಾರಣನಾದ ಗುತ್ತಿಗೆದಾರನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತೇನೆ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಸೂಚಿಸಿದ್ದಾರೆ.