ರಾಯಚೂರು: ಜಮೀನಿನಲ್ಲಿ ಮಲಗಿದ್ದ ಮೂವರ ಮೇಲೆ ಜೆಸಿಬಿ ಹರಿದು ಸಾವನ್ನಪ್ಪಿರುವ ಘಟನೆ ಜಲ್ಲೆಯ ದೇವದುರ್ಗ ತಾಲೂಕಿನ ನಿಲವಂಜಿ ಗ್ರಾಮದ ಬಳಿ ನಡೆದಿದೆ.
ಮೃತರನ್ನು ಛತ್ತೀಸ್‌ಗಢ ಮೂಲದ ಮೂವರ ಕಾರ್ಮಿಕರಾದ ಕೃಷ್ಣಾ(25), ಶಿವುರಾಮ್(30), ಬಲರಾಮ(28) ಗುರುತಿಸಲಾಗಿದೆ. ನಿಲವಂಜಿ ಗ್ರಾಮದ ಜಮೀನೊಂದಲ್ಲಿ ಬೋರ್‌ವೆಲ್ ಕೊರೆಯಲು ಆಗಮಿಸಿದ್ದರು. ಮಂಗಳವಾರ ರಾತ್ರಿ, ಜಮೀನಿನಲ್ಲಿ ಬೋರ್‌ವೆಲ್ ಕೊರೆದು ಕಾಲುದಾರಿಯಲ್ಲಿಯೇ ರಾತ್ರಿ ಮೂವರು ಮಲಗಿದ್ದರು. ಈ ವೇಳೆ ಕಾಲುದಾರಿಯಲ್ಲಿ ಬಂದ ಜೆಸಿಬಿ, ಮೂವರು ಮೇಲೂ ಹರಿದು ಸ್ಥಳದಲ್ಲೇ ಧಾರುಣ ಅಂತ್ಯ ಕಂಡಿದ್ದಾರೆ.
ಇದನ್ನೂ ಓದಿ : ನಾನು ಯಾಕೆ ಸಿಎಂ ಆಗಬಾರದು: ಪರಮೇಶ್ವರ್ ಪ್ರಶ್ನೆ
ಬಾಲಯ್ಯ ಎಂಬುವರಿಗೆ ಸೇರಿದ್ದ ಜೆಸಿಬಿ ವಾಹನವನ್ನು ಅದರ ಚಾಲಕ ಜಮೀನಿನಲ್ಲಿ ಚಲಾಯಿಸಿಕೊಂಡು ಬಂದಿದ್ದ. ಆತನಿಗೂ ಈ ಕಾರ್ಮಿಕರು ರಸ್ತೆಯಲ್ಲೇ ಮಲಗಿದ್ದಾರೆ ಎಂಬ ವಿಚಾರ ತಿಳಿದಿರಲಿಲ್ಲ. ಅಲ್ಲಿ ಮಲಗಿದ್ದ ಮೂವರ ಮೇಲೆ ಹರಿದ ಮೇಲಷ್ಟೇ ಆತನಿಗೆ ತಾನು ಒಂದು ದೊಡ್ಡ ಅನಾಹುತ ಮಾಡಿದ್ದರ ಅರಿವಾಯಿತು.
ಆದರೆ ಅಷ್ಟು ಹೊತ್ತಿಗೆ ಮೂವರು ಒದ್ದಾಡಿ ಒದ್ದಾಡಿ ಪ್ರಾಣ ಕಳೆದುಕೊಂಡಿದ್ದರು. ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಜೆಸಿಬಿಯನ್ನು ವಶಕ್ಕೆ ಪಡೆದಿದ್ದಾರೆ.