ಬೆಂಗಳೂರು : ನಗರದಲ್ಲಿ ಮೂವರು ಬಾಲಕಿಯರು ನಾಪತ್ತೆಯಾಗಿರೋ ಪ್ರಕರಣ ಬೆಳಕಿಗೆ ಬಂದಿದೆ. ಪುಲಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸೇಂಟ್ ಜೋಸೆಫ್ ಕಾನ್ವೆಂಟ್ ಹೈ ಪ್ರೈಮರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ 3 ವಿದ್ಯಾರ್ಥಿನಿಯರು ನಾಪತ್ತೆಯಾಗಿದ್ದಾರೆ. ಸೆಪ್ಟೆಂಬರ್ 6 ರಂದು ಮೂವರು ಬಾಲಕಿಯರು ನಾಪತ್ತೆಯಾಗಿದ್ದು, ಈ ಸಂಬಂಧ ಪೋಷಕರು ಪುಲಕೇಶಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಾಪತ್ತೆಯಾದ ವಿದ್ಯಾರ್ಥಿನಿಯರನ್ನು ಶಕ್ತಿಶ್ವರಿ (15), ವೆರುಣಿಕಾ (16), ನಂದಿನಿ (15) ಎಂದು ಗುರುತಿಸಲಾಗಿದೆ. ಮಂಗಳವಾರ, ಸೆಪ್ಟೆಂಬರ್ 6 ರಂದು ಶಾಲೆಗೆ ತೆರಳಿದ ತಮ್ಮ ಮಕ್ಕಳು ಮನೆಗೆ ಹಿಂದಿರುಗಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ.ವರುಣಿಕ ಮತ್ತು ನಂದಿನಿ ಸೆಂಟ್ ಜೋಸೆಫ್ ಕಾನ್ವೆಂಟ್ ಹಾಸ್ಟೆಲ್ ನಲ್ಲಿ ಉಳಿದುಕೊಂಡಿದ್ದರು. ಶಕ್ತೀಶ್ವರಿ ಮನೆಯಿಂದಲೇ ಶಾಲೆಗೆ ಬಂದು ಹೋಗುತ್ತಿದ್ದರು.
ಶಾಲೆಯಲ್ಲಿ ಪ್ರಾಂಶುಪಾಲರು ಮತ್ತು ಶಿಕ್ಷಕರು ನಿಂದಿಸಿದ್ದಾರೆಂಬ ಆರೋಪ ಕೇಳಿ ಬಂದಿದ್ದು, ನೀವೆಲ್ಲ ಸ್ಲಂ ನವರು, ಜೋಪಡಿಯವರು ಎಂದು ಶಾಲೆಯಲ್ಲಿ ನಿಂದಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ ಶಾಲೆ ಆಡಳಿತ ಮಂಡಳಿಗೆ ಮಕ್ಕಳ ಬಗ್ಗೆ ಕೇಳಿದರೆ ಬಾಯ್ ಫ್ರೆಂಡ್ಸ್ ಜೊತೆಗೆ ಹೋಗಿದ್ದಾರೆಂದು ಉತ್ತರಿಸಿದ್ದಾರೆ. ಹೀಗಾಗಿ ಶಾಲೆ ಎದುರು ಮೂವರು ಬಾಲಕಿಯರ ಪೋಷಕರು ಪ್ರತಿಭಟಿಸಿದ್ದು,ಶಾಲೆ ಮುಂಭಾಗದ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುತ್ತಿದೆ. ಪ್ರಾಂಶುಪಾಲರ ಜೊತೆಗೆ ಮಾತನಾಡಲು ಪೋಷಕರನ್ನು ಒಳಗೆ ಬಿಡದಂತೆ ಸೆಕ್ಯೂರಿಟಿ ಗಾರ್ಡ್ ಗೆ ತಿಳಿಸಲಾಗಿದೆಯಂತೆ. ಹೀಗಾಗಿ ಪೋಷಕರು ಶಾಲೆ ಗೇಟ್ ತಳ್ಳಿ ಒಳಗೆ ನುಗ್ಗಲು ಯತ್ನಿಸಿದ್ದು, ಘಟನಾ ಸ್ಥಳಕ್ಕೆ ಪುಲಕೇಶಿನಗರ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.
Okay