-ವಿಜಯಕುಮಾರ ಗಾಣಿಗೇರ
ಧರ್ಮವನ್ನು ಸುತ್ತಿಕೊಂಡ ರಾಜಕಾರಣ ಈಗ ಕ್ರೀಡೆಗೂ ವ್ಯಾಪಿಸಿಕೊಂಡಿತೇ ಎನ್ನುವ ಪ್ರಶ್ನೆಯೊಂದು ಉದ್ಭವಿಸಿದೆ. ಈ ಚರ್ಚೆ ಮುನ್ನಲೆಗೆ ಬರಲು ಪ್ರಮುಖ ಕಾರಣವೂ ಇದೆ. ಸದ್ಯ ನಡೆಯುತ್ತಿರುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ಕೇವಲ ಎರಡು ಕಂಚಿನ ಪದಕ ಗೆದ್ದು, ಹೆಚ್ಚು ಪದಕಗಳನ್ನು ಗೆದ್ದ ದೇಶಗಳ ಪಟ್ಟಿಯಲ್ಲಿ 33ನೇ ಸ್ಥಾನದಲ್ಲಿದೆ. ಇನ್ನು ಈ ಪಟ್ಟಿಯಲ್ಲಿ ಜಪಾನ್, ಚೀನಾ, ಆಸ್ಟ್ರೇಲಿಯಾ ಕ್ರಮವಾಗಿ 1, 2 ಹಾಗೂ 3 ಸ್ಥಾನದಲ್ಲಿವೆ. ಈ ಮಧ್ಯೆ ಹೊರ ಬಿದ್ದ ಅಂಕಿಸಂಖ್ಯೆಯೊಂದು ವ್ಯಾಪಕ ಟೀಕೆ, ವಿಮರ್ಶೆಗೆ ಒಳಪಟ್ಟಿದೆ. ಪಕ್ಷಪಾತ
ಹೌದು. ಬಿಜೆಪಿ ಆಡಳಿತವಿರುವ ರಾಜ್ಯಗಳಿಗೆ ಕ್ರೀಡಾ ನಿಧಿಯ ಪಕ್ಷಪಾತದ ಹಂಚಿಕೆಯನ್ನು ಭಾರತೀಯ ಹಾಕಿ ತಂಡದ ಮಾಜಿ ನಾಯಕ ಪರ್ಗತ್ ಸಿಂಗ್ ದಾಖಲೆ ಸಮೇತ ಬಯಲಿಗೆ ಎಳೆದಿದ್ದಾರೆ.
‘ಪ್ಯಾರಿಸ್ ಒಲಿಂಪಿಕ್ಸ್‌ಗೆ 48 ಅಥ್ಲೀಟ್‌ಗಳನ್ನು ಕಳುಹಿಸಿದ್ದರೂ, ಪಂಜಾಬ್ ಮತ್ತು ಹರಿಯಾಣ ಕ್ರಮವಾಗಿ 78 ಕೋಟಿ ರೂಪಾಯಿ ಮತ್ತು 66 ಕೋಟಿ ರೂಪಾಯಿ ಪಡೆದಿದ್ದರೆ, ಉತ್ತರ ಪ್ರದೇಶ ಮತ್ತು ಗುಜರಾತ್ ಕೇವಲ 9 ಕ್ರೀಡಾಪಟುಗಳನ್ನು ಕಳುಹಿಸಿ 438 ಕೋಟಿ ಮತ್ತು 426 ಕೋಟಿ ರೂಪಾಯಿ ಪಡೆದುಕೊಂಡಿವೆ. ಇದು ಪಕ್ಷಪಾತದ ಹಂಚಿಕೆಯಲ್ಲವೇ? ರಾಜ್ಯಗಳ ವಿರುದ್ಧ ಬಿಜೆಪಿ ಈ ತಾರತಮ್ಯವನ್ನು ಎಷ್ಟು ದಿನ ಮುಂದುವರಿಸುತ್ತದೆ?” ಎಂದು ಪರ್ಗತ್ ಸಿಂಗ್ ಕುಟುಕಿದ್ದಾರೆ.
ಇದನ್ನೂ ಓದಿ: ಪ್ಯಾರೀಸ್ ಒಲಂಪಿಕ್ಸ್ ನಲ್ಲಿ ಮನು ಭಾಕರ್,ಸರಬ್ ಜಿತ್ ಸಿಂಗ್, ಕಂಚಿನ ಪದಕ

ಜಲಂಧರ್ ಕಂಟೋನ್ಮೆಂಟ್ ಶಾಸಕರಾಗಿರುವ ಪರ್ಗತ್ ಸಿಂಗ್ ಅವರು ಕೇಂದ್ರ ಸರ್ಕಾರದ ಖೇಲೋ ಇಂಡಿಯಾ ಯೋಜನೆಯಡಿ ಕ್ರೀಡಾ ಮೂಲಸೌಕರ್ಯಗಳ ಅಭಿವೃದ್ಧಿಗೆ ಬಿಡುಗಡೆಯಾದ ಹಣದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶವಾರು ವಿವರಗಳ ಪಟ್ಟಿಯನ್ನು ಹಂಚಿಕೊಂಡಿದ್ದಾರೆ.
ಯೋಜನೆಯಡಿ ಬಿಡುಗಡೆಯಾದ 2,168.78 ಕೋಟಿ ರೂಪಾಯಿಗಳಲ್ಲಿ, ಸಿಂಹಪಾಲು ನಿಧಿಯು ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ (ರೂ. 438 ಕೋಟಿ) ಮತ್ತು ಗುಜರಾತ್ (ರೂ. 426 ಕೋಟಿ) ಎರಡಕ್ಕೂ ಹೋಗಿದೆ. ಮತ್ತೊಂದೆಡೆ, ಪಂಜಾಬ್‌ಗೆ ಕೇವಲ 78.02 ಕೋಟಿ, ಹರಿಯಾಣಕ್ಕೆ 66.59 ಕೋಟಿ ರೂ., ಆಂಧ್ರಪ್ರದೇಶಕ್ಕೆ 21.91 ಕೋಟಿ ರೂ. ಹಾಗೂ ತೆಲಂಗಾಣಕ್ಕೆ 17.77 ಕೋಟಿ ರೂಪಾಯಿ ನೀಡಲಾಗಿದೆ.
ಆದಾಗ್ಯೂ, ಭಾರತದ 117 ಸದಸ್ಯರ ಒಲಿಂಪಿಕ್ ತಂಡದಲ್ಲಿ, ಪಂಜಾಬ್ 19 ಅಥ್ಲೀಟ್‌ಗಳನ್ನು ಹೊಂದಿದೆ ಮತ್ತು ಹರಿಯಾಣ 24 ಕ್ರೀಡಾಪಟುಗಳನ್ನು ಹೊಂದಿದೆ. ಇದು ರಾಜ್ಯವಾರು ಕೊಡುಗೆಯ ವಿಷಯದಲ್ಲಿ ದೊಡ್ಡದಾಗಿದೆ. ಮತ್ತೊಂದೆಡೆ, ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ನಲ್ಲಿ ಗುಜರಾತ್‌ನಿಂದ ಇಬ್ಬರು ಮತ್ತು ಉತ್ತರ ಪ್ರದೇಶದ ಏಳು ಕ್ರೀಡಾಪಟುಗಳು ಮಾತ್ರ ಭಾಗವಹಿಸುತ್ತಿದ್ದಾರೆ.
ಕೇಂದ್ರ ಸರ್ಕಾರ ಈ ವರ್ಷ ಕ್ರೀಡಾ ಸಚಿವಾಲಯಕ್ಕೆ 3,442.32 ಕೋಟಿ ರೂ. ಕ್ರೀಡಾ ಬಜೆಟ್‌ನ ಸಿಂಹಪಾಲನ್ನು ಖೇಲೋ ಇಂಡಿಯಾಕ್ಕೆ ನಿಗದಿಪಡಿಸಲಾಗಿದೆ. ಇದು ತಳಮಟ್ಟದ ಕ್ರೀಡೆಗಳನ್ನು ಉತ್ತೇಜಿಸುವ ಪ್ರಸ್ತುತ ಸರ್ಕಾರದ ಪ್ರಮುಖ ಕಾರ್ಯಕ್ರಮವಾಗಿದೆ. ಆದರೆ ಕ್ರೀಡೆಯಲ್ಲಿ ರಾಜಕೀಯ ಆಧಾರದ ಮೇಲೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಯಾಕೆ ಎನ್ನುವ ಪ್ರಶ್ನೆಗೆ ಪ್ರಧಾನಿ ಮೋದಿ ಸರ್ಕಾರವೇ ಉತ್ತರ ಕೊಡಬೇಕಿದೆ.
ಇದನ್ನೂ ನೋಡಿ: ಶಿರೂರು ಗುಡ್ಡ ಕುಸಿತ : ಸ್ವಚ್ಚತಾ ಕಾರ್ಯದಲ್ಲಿ ತೊಡಗಿರುವ ಸಿಪಿಐಎಂ ಶಾಸಕರ, ನಾಯಕರ ಮಾದರಿ ನಡೆJanashakthi Media