ಈ ಸುಲಿಗೆ ಸರ್ಕಾರವನ್ನು ಮೊದಲು ಕಿತ್ತೊಗೆಯಬೇಕು : ಬಿಜೆಪಿ ವಿರುದ್ಧ ದೇವನೂರ ಮಹಾದೇವ ಆಕ್ರೋಶ

ಬೆಂಗಳೂರು : ಸಂಘ ಪರಿವಾರದ ಸರ್ಕಾರವನ್ನು ಗುಜರಿಗೆ ಹಾಕಿ.ಒಂದು ಎಂಜಿನ್‍ನಲ್ಲಿ ದ್ವೇಷ ತುಂಬಿಕೊಂಡಿದೆ.ಇನ್ನೊಂದು ಎಂಜಿನ್ ನುಂಗುವ ಕೆಲಸ ಮಾಡುತ್ತಿದೆ. ಎಂಜಿನ್ ಜೋರಾಗಿ ಸದ್ದು ಮಾಡುತ್ತಿವೆ. ಅದು ಚಲಿಸುತ್ತಲೇ ಇಲ್ಲ. ಹಾಗಾಗಿ ಮೊದಲು ಈ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಬಿಜೆಪಿ ಸರ್ಕಾರದ ವಿರುದ್ಧ ಹಿರಿಯ ಸಾಹಿತಿ ದೇವನೂರ ಮಹಾದೇವ ಅವರು ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಎದ್ದೇಳು ಕರ್ನಾಟಕ ನಾಗರಿಕ ಅಭಿಯಾನ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಮತದಾರರು ಹೆಚ್ಚು ಜಾಗೃತರಾಗಿದ್ದಾರೆ ಎಂದು ಅನ್ನಿಸುತ್ತಿದೆ. ಹಿಂದಿನ ಯಾವ ಚುನಾವಣೆಯಲ್ಲೂ ನಾನು ಇಷ್ಟೊಂದು ಜಾಗೃತ ಪ್ರಜ್ಞೆಯನ್ನು ಕಂಡಿಲ್ಲ. ಮತಯಾಚಿಸಿ ಬಂದ ಅಭ್ಯರ್ಥಿಗಳಿಗೆ ಮತದಾರರು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಿದ್ದಾರೆ. ಸ್ಪರ್ಧಿಗಳಿಗೆ ಬೆವರಿಳಿಸುತ್ತಿದ್ದಾರೆ ಎಂದರು.

ಡಬಲ್ ಎಂಜಿನ್ ಸರ್ಕಾರ ಅಂತಾ ಕೇಳಿ ಕೇಳಿ ಕಿವಿ ತೂತು ಆಗಿದೆ. ಡಬಲ್ ಎಂಜಿನ್ ಸರ್ಕಾರ ಎಂದು ಹೇಳಿ ಅಭಿವೃದ್ಧಿಯ ಬುಡ ಅಲ್ಲಾಡಿಸುತ್ತಾರೆ. ಬಿಜೆಪಿ ನಾಯಕರು ಬಾಯಿ ಬಿಟ್ಟರೆ ಕಾಂಗ್ರೆಸ್ ಏನ್ ಮಾಡಿದೆ ಎಂದು ಕೇಳುತ್ತಾರೆ. ಸಾರ್ವಜನಿಕ ಆಸ್ತಿಗಳನ್ನು ಕಾಂಗ್ರೆಸ್ ರಕ್ಷಣೆ ಮಾಡಿದೆ. ಡಬಲ್ ಎಂಜಿನ್‍ನ ಒಂದು ಎಂಜಿನ್‍ನಲ್ಲಿ ಧರ್ಮದ ದ್ವೇಷ, ಇನ್ನೊಂದು ಎಂಜಿನ್‍ನಲ್ಲಿ 40% ಕಮಿಷನ್ ಸೌಂಡ್ ಮಾಡುತ್ತಿದೆ. ಬಿಜೆಪಿ ಸರ್ಕಾರವನ್ನು ಗುಜರಿಗೆ ಹಾಕಿ ಎಂದು ಕರೆ ನೀಡಿದರು.

ಡಬಲ್ ಎಂಜಿನ್ ಸರ್ಕಾರ ಎಂಬ ಮಾತನ್ನು ಬಿಜೆಪಿಯ ಚಿಕ್ಕವರಿಂದ ದೊಡ್ಡನಾಯಕರವರೆಗೂ ಹೇಳಿ ಹೇಳಿ ಈಗ ಕರ್ನಾಟಕದ ಜನತೆಯ ಕಿವಿ ತೂತಾಗಿಬಿಟ್ಟಿರಬಹುದು. ಕೇಂದ್ರದಲ್ಲೂ ರಾಜ್ಯದಲ್ಲೂ ಒಂದೇ ಪಕ್ಷದ ಡಬಲ್ ಎಂಜಿನ್ ಸರ್ಕಾರ ಇದ್ದರೆ ಮಾತ್ರ ಅಭಿವೃದ್ಧಿಯೇ? ಇಂತಹ ಮಾತುಗಳನ್ನು ಪ್ರಜಾಪ್ರಭುತ್ವ, ಜನತಂತ್ರ ವ್ಯವಸ್ಥೆಯಲ್ಲಿ ಹೇಳುವುದು ಸರಿಯೆ? ಈ ಡಬಲ್ ಎಂಜಿನ್ ಸರ್ಕಾರ ಇದ್ದಲ್ಲಿ ಹೆಚ್ಚು ಅಭಿವೃದ್ಧಿ ಎನ್ನುವುದು ಒಕ್ಕೂಟ ವ್ಯವಸ್ಥೆಯ ಬುಡ ಅಲ್ಲಾಡಿಸಿದಂತಾಗುವುದಿಲ್ಲವೇ? ಎಂದು ಪ್ರಶ್ನೆಸಿದರು.

ಇದನ್ನೂ ಓದಿ :ಮೊದಲ ದಲಿತ ಬಂಡಾಯ ಮಹಾಡ್ ಕಂಪನಗಳು : ದೇವನೂರ ಮಹಾದೇವ

ಮೊನ್ನೆ ತಾನೇ, ಚುನಾವಣಾ ಸಮೀಕ್ಷೆ ನಡೆಸುತ್ತಿದ್ದ ಟಿವಿ ಚಾನೆಲ್‍ಗೆ ನಮ್ಮ ಹಳ್ಳಿಗಾಡಿನ ವ್ಯಕ್ತಿಯೊಬ್ಬ ಡಬಲ್ ಎಂಜಿನ್ ಸರ್ಕಾರ ಅಂತಾರೆ! ಕಾಂಗ್ರೆಸ್ ಸರ್ಕಾರ ಇದ್ದಾಗ 10 ಕೆ.ಜಿ ಅಕ್ಕಿ ಕೊಡುತ್ತಾ ಇತ್ತು. ಬಿಜೆಪಿಯ ಈ ಡಬಲ್ ಎಂಜಿನ್ ಸರ್ಕಾರ 20 ಕೆ.ಜಿ ಕೊಡಬೇಕಿತ್ತು ತಾನೇ?. ಈ ಅನುಭವದ ಮಾತು, ಇಂದಿನ ಭ್ರಮಾತ್ಮಕ ಅಭಿವೃದ್ಧಿಗೆ ಮುಖಾಮುಖಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಜೋಡೊ ಯಾತ್ರೆ ಬಳಿಕ ಕಾಂಗ್ರೆಸ್ ಚೇತರಿಕೆ ಕಾಣುತ್ತಿದೆ:
ವರುಣಾದಲ್ಲಿ ಪ್ರಚಾರದ ವೇಳೆ ಸಂಸದ ಪ್ರತಾಪ್ ಸಿಂಹ ಅವರನ್ನು ಜನ ತರಾಟೆಗೆ ತೆಗೆದುಕೊಂಡ ವಿಷಯದ ಬಗ್ಗೆ ಮಾತನಾಡಿ, ಪ್ರತಾಪ್ ಸಿಂಹಗೆ ಮೊನ್ನೆ ವರುಣಾದಲ್ಲಿ ಜನ ಬೆವರಿಳಿಸಿದರು.. ಹಿಗ್ಗಾಮುಗ್ಗಾ ಜಾಡಿಸಿದರು.ಭಾರತ್ ಜೋಡೊ ಯಾತ್ರೆಯ ಬಳಿಕ ಕಾಂಗ್ರೆಸ್ ಚೇತರಿಕೆ ಕಾಣುತ್ತಿದೆ. ಕಾಂಗ್ರೆಸ್ ಬಲವಾಗಿ ಇಲ್ಲದ ಕಡೆ ಜೆಡಿಎಸ್‍ ಗೆಲ್ಲಿಸೋಣ. ಬಿಜೆಪಿಯನ್ನು ಸೋಲಿಸೋಣ ಎಂದು ಕರೆ ಕೊಟ್ಟರು.

ಯಾವ ಪಕ್ಷಕ್ಕೆ ಮತ ನೀಡಬೇಕು? :
ಬಹುತೇಕ ಕಾಂಗ್ರೆಸ್ ಪಕ್ಷಕ್ಕೇನೇ ಮತ ನೀಡಬೇಕಾಗಿದೆ. ಪ್ರಗತಿಪರ ಪಕ್ಷಗಳು ಎಲ್ಲಿ ಸ್ಪರ್ಧೆ ನೀಡುತ್ತಿವೆ ಎಂದು ಭರವಸೆ ಇರುತ್ತದಯೋ ಅಲ್ಲಿ ಬೆಂಬಲಿಸಬೇಕಾಗಿದೆ. ಮತ್ತೊಂದು ಸಂದಿಗ್ಧ. ಕಾಂಗ್ರೆಸ್ ಮೂರನೆ ಸ್ಥಾನದಲ್ಲಿ ಇರುವ ಕಡೆ ಜೆಡಿಎಸ್ ಎಲ್ಲೆಲ್ಲಿ ಬಿಜೆಪಿಯ ನೇರಸ್ಪರ್ಧಿಯಾಗಿರುವುದು ಖಚಿತವೋ ಅಲ್ಲಿ ಜೆಡಿಎಸ್‍ಗೆ ಮತ ನೀಡಬೇಕು. ಒಟ್ಟಿನಲ್ಲಿ ಸಂಘಪರಿವಾರದ ಬಿಜೆಪಿ ಸೋಲಬೇಕು. ಈ ದುಷ್ಟಶಕ್ತಿಯ ಹಲ್ಲು ಉಗುರು ಕಿತ್ತು ಅದರ ಜೀವವನ್ನೂ ಉಳಿಸಬೇಕು. ಇದು ನಮ್ಮೆಲ್ಲರ ಹೆಗಲ ಮೇಲಿರುವ ಹೊಣೆಗಾರಿಕೆ ಎಂದರು.

ಮುಂಬರುವ ಚುನಾವಣೆಯಲ್ಲಿ ಯಾವ ಪಕ್ಷ ಗೆಲ್ಲುತ್ತದೆ ಎಂಬುದಕ್ಕಿಂತ, ʼಈ ಸುಲಿಗೆ ಸರ್ಕಾರ ಮೊದಲು ಸೋಲಬೇಕು.ʼ ಆಮೇಲೆ ಗೆದ್ದವರ ಜೊತೆ ಜನಹಿತದ ಮರುಸ್ಥಾಪನೆಗಾಗಿ ಗುದ್ದಾಡಬೇಕು. ಇದೇ ಪ್ರಜಾಪ್ರಭುತ್ವ ಉಳಿಸಿಕೊಳ್ಳುವ ಪ್ರಕ್ರಿಯೆ ಎಂದು ದೇವನೂರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಚಿಂತಕರಾದ ಯೋಗೇಂದ್ರ ಯಾದವ್, ತಾರಾ ರಾವ್, ತ್ರಿಲೋಚನ್ ಶಾಸ್ತ್ರಿ, ಯೂಸುಫ್ ಕಣ್ಣಿ, ವೀರಸಂಗಯ್ಯ ಮತ್ತು ಪ್ರೊ. ಜಾಫೆಟ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *