ಲಖನೌ: ಉತ್ತರ ಪ್ರದೇಶ ಸರ್ಕಾರಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಯೋಗಿ ಆದಿತ್ಯನಾಥ್ ಸರ್ಕಾರದ ಮೂರನೇ ಸಚಿವ ರಾಜೀನಾಮೆ ನೀಡುವ ಮೂಲಕ ಬಿಜೆಪಿಗೆ ಶಾಕ್ ನೀಡಿದ್ದಾರೆ.
ಉತ್ತರ ಪ್ರದೇಶದ ಸಚಿವ ಧರಂ ಸಿಂಗ್ ಸೈನಿ ಇಂದು ಬಿಜೆಪಿಗೆ ರಾಜೀನಾಮೆ ನೀಡಿದ್ದು, ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳಿರುವಾಗ ಬಿಜೆಪಿ ತೊರೆಯುವ ಮೂಲಕ ಕಮಲ ಪಾಳಯಕ್ಕೆ ಶಾಕ್ ನೀಡಿದ್ದಾರೆ. ಈ ಮೂಲಕ ಧರಂ ಸಿಂಗ್ ಸೈನಿ ಕಳೆದ 3 ದಿನಗಳಿಂದ ಬಿಜೆಪಿಗೆ ರಾಜೀನಾಮೆ ನೀಡಿದ 9ನೇ ಶಾಸಕ ಹಾಗೂ 3ನೇ ಸಚಿವರಾಗಿದ್ದಾರೆ.
ಬಿಜೆಪಿಯ ಉತ್ತರ ಪ್ರದೇಶದ ಸಚಿವ ಸ್ವಾಮಿ ಪ್ರಸಾದ್ ಮೌರ್ಯ 2 ದಿನಗಳ ಹಿಂದೆ ರಾಜೀನಾಮೆ ನೀಡಿದ್ದರು. ಅದರ ಬೆನ್ನಲ್ಲೇ ನಿನ್ನೆಯಷ್ಟೇ ಸಚಿವ ದಾರಾ ಸಿಂಗ್ ಚೌಹಾಣ್ ರಾಜೀನಾಮೆ ನೀಡಿದ್ದರು. ಇಂದು ಧರಂ ಸಿಂಗ್ ಸೈನಿ ರಾಜೀನಾಮೆ ನೀಡಿದ್ದಾರೆ. ಮೊದಲು ರಾಜೀನಾಮೆ ನೀಡಿದ್ದ ಸ್ವಾಮಿ ಪ್ರಸಾದ್ ಮೌರ್ಯ ಅವರೊಂದಿಗೆ ಇನ್ನೂ ಕೆಲವರು ಶಾಸಕರು ರಾಜೀನಾಮೆ ನೀಡಿದ್ದರು. ಇನ್ನೂ ಹಲವು ಶಾಸಕರು ಹಾಗೂ ಸಚಿವರು ಬಿಜೆಪಿಗೆ ರಾಜೀನಾಮೆ ನೀಡಲಿದ್ದಾರೆ ಎಂದು ಮೌರ್ಯ ಹೇಳಿದ್ದರು.
ಇಂದು ರಾಜೀನಾಮೆ ನೀಡಿರುವ ಧರಂ ಸಿಂಗ್ ಸೈನಿ, ದಲಿತರು, ಹಿಂದುಳಿದವರು, ರೈತರು, ನಿರುದ್ಯೋಗಿ ಯುವಕರು ಮತ್ತು ಸಣ್ಣ ವ್ಯಾಪಾರಿಗಳ ಬಗ್ಗೆ ತೀವ್ರ ನಿರ್ಲಕ್ಷ್ಯ ತೋರುತ್ತಿರುವ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ನಾನು ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ. ಅಷ್ಟೆ ಅಲ್ಲದೆ ಜನವರಿ 20ವರೆಗೆ ಪ್ರತಿ ದಿನವೂ ಯೋಗಿ ಆದಿತ್ಯನಾಥ್ ಸರ್ಕಾರದ ಒಬ್ಬರು ಸಚಿವ ಹಾಗೂ ಬಿಜೆಪಿಯ ಓರ್ವ ಶಾಸಕ ಬಿಜೆಪಿಗೆ ರಾಜೀನಾಮೆ ನೀಡಲಿದ್ದಾರೆ ಎಂದಿದ್ದಾರೆ.
ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಸೈನಿ ಅವರೊಂದಿಗೆ ಇರುವ ತಮ್ಮ ಚಿತ್ರವನ್ನು ಗುರುವಾರ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಸೈನಿ ಎಸ್‌ಪಿ ಸೇರುವುದು ಖಚಿತವಾಗಿದೆ.