ಜಾವೆಲಿನ್ ಎಸೆತದಲ್ಲಿ ವಿಶ್ವದಾಖಲೆಯನ್ನು ನಿರ್ಮಿಸಿದ ಮತ್ತು ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಮೊತ್ತ ಮೊದಲ ಬಾರಿಗೆ ಚಿನ್ನದ ಪದಕ ಗಳಿಸಿಕೊಟ್ಟ ನೀರಜ್ ಚೋಪ್ರಾ ಸಾಧನೆ ಭಾರತೀಯರೆಲ್ಲರಿಗೂ ಹೆಮ್ಮೆ ತಂದ ಸಂಗತಿ. ಆದರೆ ‘ಗೋದಿ ಮೀಡಿಯಾ’ದವರಿಗೆ ಅವರು ಪಾಕಿಸ್ತಾನದ ಸ್ಪರ್ಧಾಳುವನ್ನು ಸೋಲಿಸಿದ್ದೇ ಮುಖ್ಯವಾಗಿರುವಂತೆ ಕಾಣುತ್ತದೆ. ನೀರಜ್ ತಾಯಿ ಅಂತವರಿಗೆ ಮುಟ್ಟಿ ನೋಡಿಕೊಳ್ಳುವಂತಹ ಏಟು ನೀಡಿದ್ದಾರೆ ಎಂಬುದು ಬಹಳ ಮಂದಿಗೆ ಹರ್ಷವುಂಟು ಮಾಡಿದೆ. ಆಟದ ಮೈದಾನ
“ಮೊದಲನೆಯದಾಗಿ, ಪಾಕಿಸ್ತಾನದ ಆಟಗಾರನನ್ನು ಸೋಲಿಸಿದ್ದಕ್ಕೆ ನಿಮಗೆ ಹೇಗನ್ನಿಸುತ್ತದೆ” ಎಂಬ ವರದಿಗಾರನ ಪ್ರಶ್ನೆಗೆ ಉತ್ತರಿಸುತ್ತ, ನೀರಜ್ ಚೋಪ್ರಾ ಅವರ ತಾಯಿ ಸರೋಜಾ ದೇವಿ- “ನೋಡು, ಮೈದಾನದಲ್ಲಿ ಎಲ್ಲರೂ ಆಟಗಾರರೇ, ಯಾರಾದರೂ ಗೆದ್ದರೆ ಪಾಕಿಸ್ತಾನ ಅಥವಾ ಹರಿಯಾಣದ ಪ್ರಶ್ನೆಯಿರುವುದಿಲ್ಲ. ಮತ್ತು ಪಾಕಿಸ್ತಾನಿ ಗೆದ್ದಿರುವ ಬಗ್ಗೆಯೂ ನನಗೆ ತುಂಬಾ ಸಂತೋಷವಾಗಿದೆ. ಆತನಿಗೂ ಆಗಿದೆ” ಎಂದು ಉದ್ವೇಗವಿಲ್ಲದೆ ಹೇಳಿದರು. ಆಗಲೂ ಪಟ್ಟು ಬಿಡದ ‘ಗೋದಿ’ ವರದಿಗಾರ “ನಿನ್ನೆ ಅತ್ಯಂತ ಆಸಕ್ತಿದಾಯಕ ಪಂದ್ಯವಾಯಿತು ಏಕೆಂದರೆ ಅದು ಪಾಕಿಸ್ತಾನದೊಂದಿಗಿನ ಪಂದ್ಯವಾಗಿತ್ತು ಮತ್ತು
ಪಾಕಿಸ್ತಾನವು ಎರಡನೇ ಸ್ಥಾನದಲ್ಲಿತ್ತು” ಎಂದ. ತಾಯಿ ಸರೋಜಾ ದೇವಿ – “ನೋಡಪ್ಪಾ, ಸ್ಪರ್ಧೆ ಸಮಾನವಾಗಿತ್ತು, ಯಾರಾದರೊಬ್ಬರು ಮೆಡಲ್ ತರಬೇಕಿತ್ತು, ನೀರಜ್ ತಂದ. ಹಾಗೆ ನೋಡಿದರೆ ಆ ಹುಡುಗನೂ ಚೆನ್ನಾಗಿಯೇ ಆಡಿದ್ದ” ಎಂದರಂತೆ. ಆ ವರದಿಗಾರನಿಗೆ ಕೆದಕಲು ಮತ್ತೇನೂ ಉಳಿದಿರಲಿಲ್ಲ.
ನೀರಜ್ ಚೋಪ್ರಾ 88.17 ಮೀ. ದೂರ ಎಸೆದಿದ್ದರೆ, ಎರಡನೇ ಸ್ಥಾನ ಪಡೆದ ಪಾಕಿಸ್ತಾನದ ಅರ್ಷದ್ ನದೀಂ 87.82 ಮೀ. ದೂ ಎಸೆದಿದ್ದರು.
ಇದನ್ನೂ ಓದಿ:ಸಿಎಜಿ ವರದಿಗಳು : ಇವುಯಾರು“ತಿಂದ”ಕತೆಗಳೋ
ಅದೇ ಚಾಂಪಿಯನ್‌ಶಿಪ್‌ನಲ್ಲಿ 4×400 ರಿಲೇ ಪಂದ್ಯದಲ್ಲಿ ಭಾರತದ ಪುರುಷರ ತಂಡ ಏಷ್ಯನ್ ದಾಖಲೆಯನ್ನು ಮುರಿದು ಭಾರತ ಈ ಚಾಂಪಿಯನ್‌ಶಿಪ್‌ನ
ಫೈನಲಿಗೆ ಮೊದಲ ಬಾರಿಗೆ ಪ್ರವೇಶಿಸುವಂತಾಗಿದೆ. ಈ ತಂಡದ ಸದಸ್ಯರ ಹೆಸರುಗಳನ್ನು ನೋಡಿ: ಮಹಮ್ಮದ್ ಅನಾಸ್ ಯಾಹ್ಯ, ಅಮೋಲ್ ಜೇಕಬ್, ಮುಹಮ್ಮದ್ ಅಜ್ಮಲ್ ವರಿಯಥೋಡಿ ಮತ್ತು ರಾಜೇಶ್ ರಮೇಶ್.
ಒಂದೆಡೆಯಲ್ಲಿ ಮುಸ್ಲಿಮ್ ಬಾಲಕನ ಕೆನ್ನೆಗೆ ಬಾರಿಸಲು ಸಹಪಾಠಿಗಳಿಗೆ ಆದೇಶ, ನಮಾಜಿಗೆಂದು ಎರಡು ನಿಮಿಷ ಬಸ್ ನಿಲ್ಲಿಸಿದ್ದಕ್ಕೆ ಹಿಂದು ಕಂಡಕ್ಟರನ ವಜಾ ಮತ್ತು ಅದರಿಂದಾಗಿ ಆತನ ಆತ್ಮಹತ್ಯೆ, ಕೆಲವು ಸಮಯದ ಮೊದಲು ಕೇವಲ ಮುಸ್ಲಿಮರೆಂಬ ಕಾರಣಕ್ಕೆ ಮೂವರು ರೈಲು ಪ್ರಯಾಣಿಕರ ಕಗ್ಗೊಲೆ ಮತ್ತು ಇವೆಲ್ಲದರ ಬಗ್ಗೆ ‘ವಿಶ್ವ ಗುರು’ಗಳ ಎಂದೂ ಮುರಿಯದಂತೆ ಕಾಣುವ ಮೌನ-ಇವೆಲ್ಲವುಗಳ ನಡುವೆ ಈ ವಾರ ಇವೆರಡು, ದೇಶದ ಪ್ರಜಾಪ್ರಭುತ್ವವಾದಿಗಳು ತುಸು ಸಮಾಧಾನ ಪಡುವಂತೆ ಮಾಡಿರುವ ಸಂಗತಿಗಳು.