“ನಿರ್ಗತಿಕರ ದಾನ”

ರವೀಂದ್ರ ನಾಥ್ ಟ್ಯಾಗೋರ್, ಕನ್ನಡಕ್ಕೆ : ಟಿ ಸುರೇಂದ್ರ ರಾವ್‌
“ನಿರ್ಗತಿಕರ ದಾನ”

“ಆ ಮಂದಿರದಲ್ಲಿ ದೇವರಿಲ್ಲ ಎಂದ ಆ ಸಂನ್ಯಾಸಿ ”
ಎಂದು ಅರಮನೆಯ ಪರಿಚಾರಕ ಹೇಳಿದ,
“ಮಹಾರಾಜ, ಎಷ್ಟು ಗೋಗರೆದರೂ,
ಮಾನವರಲ್ಲಿ ಅತ್ಯುತ್ತಮನಾದ ಆ ಸಂನ್ಯಾಸಿ
ನಿಮ್ಮ ಸುವರ್ಣ ಮಂದಿರದಿ ಆಶ್ರಯ ಒಲ್ಲೆನೆಂದ,
ರಸ್ತೆಯAಚಿನ ಮರದ ಕೆಳಗೆ ದೇವರ ಗೀತೆ ಹಾಡುತಿದ್ದಾನೆ.
ಬಹಳ ಭಕ್ತರು ಸುತ್ತುವರಿದಿದ್ದರು, ಉಕ್ಕಿಹರಿಯುತ್ತಿದ್ದ ಅವರ ಆನಂದಬಾಷ್ಪ
ಧರೆಯ ಧೂಳನು ಒದ್ದೆಯಾಗಿಸಿತ್ತು.
ಮಂದಿರ ಯಾರೂ ಇಲ್ಲದೆ ನಿರ್ಜನವಾಗಿತ್ತು;
ಚಿನ್ನಲೇಪದ ಜೇನಮಡಿಕೆಯ ಜೇನುಹುಳಗಳು ತೊರೆದಂತೆ
ಹೂವ ಪರಿಮಳದಿಂದ ಹುಚ್ಚೆದ್ದು ವೇಗದಿ ರೆಕ್ಕೆಗಳ ಬಿಚ್ಚಿ ಹಾರಿದವು
ಪೊದೆಯೊಳು ಅರಳಿದ ದಳಗಳತ್ತ ದಾಹ ತಣಿಸಲು ಕಾತುರದಿ,
ಅಂತೆಯೇ ಜನರು, ಸ್ವರ್ಣದರಮನೆಯತ್ತ ಕಣ್ಣು ಹಾಯಿಸದೆ
ಭಕ್ತರ ಹೃದಯದೊಳು ಇರುವ ಹೂವು ಸಗ್ಗದ ಪರಿಮಳ ಬೀರಿದಂತೆ.
ಬರಿದಾದ ಮಂದಿರದಿ ಅಲಂಕೃತ ಪೀಠದೊಳು ದೇವನೊಬ್ಬನೆ ಕುಳಿತಿಹನು.”

ಆ ಹೊತ್ತಲಿ,
ಚಿಂತಾಕ್ರಾAತ ಮಹಾರಾಜ ಸಿಂಹಾಸನದಿAದ ಕೆಳಗಿಳಿದ
ಮರದ ಕೆಳಗೆ ಕುಳಿತಿಹ ಸಂನ್ಯಾಸಿ ಇದ್ದಲ್ಲಿ ಹೋಗಲು.
ತಲೆಬಾಗಿ, ಹೇಳಿದನವನು,
“ಓ ದೇವನೇ, ಆಕಾಶದೆತ್ತರ ಇರುವ ಭವ್ಯ ಸ್ವರ್ಣ ಭವನವಾದ ದೇವರ ಉನ್ನತ ವಾಸಸ್ಥಾನವ ಕೈಬಿಟ್ಟು
ಇಲ್ಲೇಕೆ ಮರದ ಅಡಿಯಲಿ ದೇವಗೆ ವಿಜಯಗೀತೆಯ ಹಾಡುತಿರುವೆ?”

“ಆ ಮಂದಿರದಲಿ ದೇವರಿಲ್ಲ” ಎಂದ ಸಂನ್ಯಾಸಿ.

ಉಗ್ರನಾಗಿ,
ಮಹಾರಾಜ ಹೇಳಿದ, “ದೇವರಿಲ್ಲ! ದೇವರಿಲ್ಲದ ಮನುಷ್ಯರಂತೆ ಮಾತನಾಡುತಿರುವೆ,
ಸಂನ್ಯಾಸಿ. ರತ್ನಖಚಿತ ಸಿಂಹಾಸನದಲಿ ರತ್ನಖಚಿತ ವಿಗ್ರಹ, ಅದು ಶೂನ್ಯ ಎನ್ನುವಿಯಾ ನೀನು?”

“ಶೂನ್ಯವಲ್ಲ, ಅದರಲ್ಲಿ ರಾಜನ ದುರಹಂಕಾರವಿದೆ,
ನೀನೇ ಅದನ್ನು ಪ್ರತಿಷ್ಠಾಪಿಸಿರುವೆ, ಲೋಕದ ದೇವರನ್ನಲ್ಲ.”

ಮುಖಗಂಟಿಕ್ಕಿ ಹೇಳಿದ ಮಹಾರಾಜ, “ನಾನು ನಿರ್ಮಿಸಿದ ಮಂದಿರ
ಇಪ್ಪತ್ತು ಲಕ್ಷ ವರಹಗಳಿಂದ, ಆಕಾಶದೆತ್ತರದ,
ಎಲ್ಲಾ ಮತಾಚರಣೆಗಳ ಮೂಲಕ ದೇವರಿಗೆ ಮುಡಿಪಿಟ್ಟ
ಈ ನಿಷ್ಕಳಂಕ ಭವನದಲ್ಲಿ – ಅಲ್ಲಿ ದೇವರಿಗೆ ಸ್ಥಳವಿಲ್ಲ ಎನ್ನುತ್ತಿದ್ದೀಯಾ! ”

ಪ್ರಶಾಂತನಾಗಿ ಸಂನ್ಯಾಸಿ ಹೇಳಿದ, “ಬೆಂಕಿ ಉಲ್ಬಣವಾದ ಆ ವರ್ಷ
ಮತ್ತು ಇಪ್ಪತ್ತು ಸಾವಿರ ಪ್ರಜೆಗಳು ನಿರ್ವಸತಿಕರಾದಾಗ, ನಿರ್ಗತಿಕರಾದಾಗ, ನಿನ್ನ ಮನೆ ಬಾಗಿಲಿಗೆ ಬಂದು
ಸಹಾಯ ಕೋರಿ ನಿರರ್ಥಕ ಮನವಿ ಮಾಡಿದಾಗ, ಮತ್ತು ಕಾಡಿನಲ್ಲಿ, ಗುಹೆಗಳಲ್ಲಿ, ಮರಗಳ ನೆರಳಿನಲ್ಲಿ, ಹಾಳುದೇಗುಲಗಳಲ್ಲಿ,
ಆಶ್ರಯ ಪಡೆದಿದ್ದಾಗ, ಆಗ ನೀನು ಬಂಗಾರದ ಹೊದಿಕೆಯ ಕಟ್ಟಡವನ್ನು
ಇಪ್ಪತ್ತು ಲಕ್ಷ ವರಹಗಳಿಂದ ದೇವರಿಗಾಗಿ ನಿರ್ಮಿಸಿದೆ,
ಆಗ ದೇವರು ಹೇಳಿದ, ‘ನನ್ನ ಶಾಶ್ವತ ಮನೆಯು ನೀಲಿಯ ಅನಂತ ಗಗನದಲ್ಲಿ
ಅಗಣಿತ ದೀಪಗಳಿಂದ ಬೆಳಗಿದೆ; ಸತ್ಯ, ಶಾಂತಿ, ಅನುಕಂಪ, ಪ್ರೀತಿ ಇವುಗಳು ಅದರ
ಶಾಶ್ವತ ಅಡಿಪಾಯಗಳಾಗಿವೆ. ಈ ದುರ್ಬಲ ಜಿಪುಣ ತನ್ನ ನಿರ್ವಸಿತ ಪ್ರಜೆಗಳಿಗೆ ಮನೆಗಳನ್ನು
ನೀಡದವ ನನಗೆ ಒಂದು ಮನೆ ನೀಡುತ್ತಾನೆ ಎಂಬ ನಿರೀಕ್ಷೆಯೆ!’ ಆ ಕ್ಷಣದಲ್ಲಿ
ಮರಗಳಡಿಯಲ್ಲಿ ವಾಸಿಸುತ್ತಿದ್ದ ಬಡವರೊಡನೆ ಇರಲು ದೇವರು ಹೊರಟ.
ನಿನ್ನ ಮಂದಿರವು ಆಳ ವಿಶಾಲ ಸಾಗರದ ಅಡಿಯಲ್ಲಿನ ನೊರೆಗಳಂತೆ ಟೊಳ್ಳು,
ಬ್ರಹ್ಮಾಂಡದಡಿಯಲ್ಲಿ ಕಳೆದುಹೋದ ಚಿನ್ನ ಮತ್ತು ಅಹಂಕಾರದ ಗುಳ್ಳೆಗಳಂತೆ ಅಷ್ಟೆ.”

ಕ್ರೋಧದಿಂದ ಉರಿಯುತ್ತಾ,
ಆ ಮಹಾರಾಜ ಹೇಳಿದ, “ನೀನು ಸುಳ್ಳು ಮೋಸಗಾರ, ಈ ಕೂಡಲೇ ನನ್ನ
ರಾಜ್ಯದಿಂದ ಹೊರಡು.”

ಸಂನ್ಯಾಸಿ ಪ್ರಶಾಂತವಾಗಿ ನುಡಿದ,
“ಭಕ್ತರ ಪ್ರೀತಿಸುವವನನ್ನು ನೀನು ಗಡೀಪಾರು ಮಾಡಿದ್ದೀಯ.
ಈಗ ಭಕ್ತರನ್ನೂ ಅದೇ ಗಡೀಪಾರಿಗೆ ಕಳಿಸು, ಮಹಾರಾಜ.”

 

ಇದು 1900 ರಲ್ಲಿ ರವೀಂದ್ರ ನಾಥ್ ಟ್ಯಾಗೋರ್ ಅವರೆ ಕವಿತೆ.

(ಬಂಗಾಳಿಯಿಂದ ಅನುವಾದ ಮಾಡಿದ್ದು: ಅರುಣವ ಸಿನ್ಹಾ)

(ಇಂಗ್ಲಿಷ್ ನಿಂದ ಕನ್ನಡಕ್ಕೆ ತಡಗಳಲೆ ಸುರೇಂದ್ರ ರಾವ್)

Donate Janashakthi Media

Leave a Reply

Your email address will not be published. Required fields are marked *