ಹಾಸನ:ಯುವಕನೊಬ್ಬ ತನ್ನ ಮೇಲೆ ದಾಳಿ ಮಾಡಿದ ಚಿರತೆಯೊಂದಿಗೆ ಸೆಣಸಾಡಿ ಸೆರೆ ಹಿಡಿದು, ಅದರ ಕಾಲುಗಳನ್ನು ಹಗ್ಗದಿಂದ ಕಟ್ಟಿಕೊಂಡು ಅದನ್ನು ತನ್ನ ಬೈಕ್ ಹಿಂದೆ ಹಾಕಿಕೊಂಡು ಬಂದು ಅದನ್ನು ಅರಣ್ಯ ಇಲಾಖೆಗೆ ಒಪ್ಪಿಸಿರುವ ಘಟನೆ ನಿನ್ನೆ ಜುಲೈ-14 ರಂದು ನಡೆದಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:ತಿಂಗಳಿಂದ ಆತಂಕ ಮೂಡಿಸಿದ ಚಿರತೆ ಸೆರೆ; ಖಚಿತಪಡಿಸಲು ಗ್ರಾಮಸ್ಥರ ಪಟ್ಟು
ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಬಾಗಿವಾಳು ಗ್ರಾಮದಲ್ಲಿ ವೇಣುಗೋಪಾಲ್ ಅಲಿಯಾಸ್ ಮುತ್ತು ಎಂಬ ಯುವಕ ತಮ್ಮ ಜಮೀನಿಗೆ ಬಂದ ಚಿರತೆಯನ್ನು ಸೆರೆಹಿಡಿದಿದ್ದಾನೆ. ವೇಣುಗೋಪಾಲ್ ತನ್ನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಆತನ ಮೇಲೆ ಚಿರತೆ ದಾಳಿ ಮಾಡಿದ್ದು, ಈ ವೇಳೆ ಚಿರತೆ ಮೇಲೆ ಪ್ರತಿದಾಳಿ ಮಾಡಿದ ವೇಣುಗೋಪಾಲ್ ಅದನ್ನು ಮಣಿಸಿ ಅದರ ಕೈಕಾಲು ಕಟ್ಟಿದ್ದಾನೆ. ಚಿರತೆಯೊಂದಿಗಿನ ಸೆಣಸಾಟದ ವೇಳೆ ವೇಣುಗೋಪಾಲ್ ಗೂ ಕೊಂಚ ಗಾಯಗಳಾಗಿದ್ದು ಆತನಿಗೂ ವೈದ್ಯರು ಚಿಕಿತ್ಸೆ ನೀಡಿದ್ದಾರೆ ಎನ್ನಲಾಗಿದೆ.
ನಂತರ ಸೆರೆಹಿಡಿದ ಚಿರತೆಯನ್ನು ವೇಣುಗೋಪಾಲ್ ತನ್ನ ಬೈಕ್‌ನಲ್ಲಿ ಕಟ್ಟಿಕೊಂಡು ಗಂಡಸಿ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಅದಕ್ಕೆ ಚಿಕಿತ್ಸೆ ಕೊಡಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾನೆ. ಈ ಘಟನೆ ಗಂಡಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ವ್ಯಕ್ತಿ ಧೈರ್ಯ ಮತ್ತು ಆತನ ಕರ್ತವ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.