“ದ್ವೇಷಕಾರಲು ‘ಪಾಕಿಸ್ತಾನ’ ಎಂಬ ಪದವನ್ನು ಚತುರತೆಯಿಂದ ಹೆಣೆದಿದ್ದಾರೆ”

ದಿಲ್ಲಿಯ ‘ನ್ಯಾಯಮಂತ್ರಿ’ಗಳ ಬಗ್ಗೆ ದಿಲ್ಲಿಯ ನ್ಯಾಯಾಲಯದ ಟಿಪ್ಪಣಿ!

2020 ರ ದೆಹಲಿ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಇಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಮತ್ತು ಸಾಮಾಜಿಕ ಮಾಧ್ಯಮದಲ್ಲಿನ ಹೇಳಿಕೆಗಳಿಗಾಗಿ ಜನತಾ ಪ್ರಾತಿನಿಧ್ಯ ಕಾನೂನಿನ ಸೆಕ್ಷನ್‍ 125 ರ ಅಡಿಯಲ್ಲಿ, ಅಂದರೆ ಚುನಾವಣೆಗೆ ಸಂಬಂಧಪಟ್ಟಂತೆ ಜನವರ್ಗಗಳ ನಡುವೆ ವೈರತ್ವವನ್ನು ಪ್ರಚೋದಿಸುವ ಆರೋಪಕ್ಕೆ ಒಳಗಾಗಿರುವ ಬಿಜೆಪಿ ನಾಯಕ ಮತ್ತು ಈಗ ದಿಲ್ಲಿ ಸರಕಾರದಲ್ಲಿ ಕಾನೂನು ಮತ್ತು ನ್ಯಾಯ ಮಂತ್ರಿಯಾಗಿರುವ ಕಪಿಲ್‍ ಮಿಶ್ರರವರು ತಮಗೆ ನೀಡಿದ ಸಮನ್ಸಿನ ವಿರುದ್ಧ ಹಾಕಿರುವ ಪರಿಷ್ಕರಣ ಅರ್ಜಿಯನ್ನು ದಿಲ್ಲಿಯ ರೌಸ್‍ ಅವೆನ್ಯೂ ನ್ಯಾಯಾಲಯವೊಂದು ವಜಾಮಾಡಿದೆ. ಮಿಶ್ರಾ ಅವರ ಪದದ ಬಳಕೆಯು ದ್ವೇಷವನ್ನು ಪ್ರಚೋದಿಸುವ ಉದ್ದೇಶಪೂರ್ವಕ ಪ್ರಯತ್ನವಾಗಿದೆ ಎಂದು ವಿಶೇಷ ನ್ಯಾಯಮೂರ್ತಿ ಜಿತೇಂದ್ರ ಸಿಂಗ್ ತಮ್ಮ ಆದೇಶದಲ್ಲಿ ಖಾರವಾಗಿ ಟಿಪ್ಪಣಿ ಮಾಡಿರುವುದಾಗಿ ವರದಿಯಾಗಿದೆ. ದ್ವೇಷ

2020ರ ದಿಲ್ಲಿ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆಯಲ್ಲಿ ಕಪಿಲ್‍ ಮಿಶ್ರ “ದಿಲ್ಲಿ ಮೇಂ ಛೋಟೇ ಛೋಟೇ ಪಾಕಿಸ್ತಾನ್‍ ಬನೇಂ”(ದಿಲ್ಲಿಯಲ್ಲಿ ಸಣ್ಣ-ಸಣ್ಣ ಪಾಕಿಸ್ತಾನಗಳಾಗಿವೆ) ಮತ್ತು “ಶಾಹೀನ್‍ ಬಾಗ್‍ ಮೇಂ ಪಾಕ್‍ ಕೀ ಎಂಟ್ರಿ”(ಶಾಹೀನ್‍ ಬಾಗ್‍ ನಲ್ಲಿ ಪಾಕಿಸ್ತಾನದ ಪ್ರವೇಶ) ದಂತಹ ಹೇಳಿಕೆಗಳನ್ನು ಕೊಟ್ಟಿರುವುದಲ್ಲದೆ, ತನ್ನ ಸಾಮಾಜಿಕ ಮಾಧ್ಯಮದಲ್ಲಿ , ಫೆಬ್ರುವರಿ 8ರಂದು (ಅಂದರೆ ಚುನಾವಣಾ ದಿನದಂದು) ದಿಲ್ಲಿಯ ಬೀದಿಗಳಲ್ಲಿ ಇಂಡಿಯಾ-ಪಾಕಿಸ್ತಾನ್ ಸ್ಪರ್ಧೆ ನಡೆಯುತ್ತದೆ ಎಂದು ಪೋಸ್ಟ್ ಮಾಡಿರುವುದು ಮಾದರಿ ಚುನಾವಣಾ ಸಂಹಿತೆ ಮತ್ತು ಜನತಾ ಪ್ರಾತಿನಿಧ್ಯ ಕಾಯ್ದೆ(ಆರ್‍ ಪಿ ಎ)ಯ ಉಲ್ಲಂಘನೆ ಎಂದು ಚುನಾವಣಾ ಅಧಿಕಾರಿ ದೂರು ದಾಖಲಿಸಿದ್ದರು. ದ್ವೇಷ

ನವಂಬರ್ 11, 2023ರಂದು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪ ಪಟ್ಟಿ ಸಲ್ಲಿಸಲಾಯಿತು. ಇದಕ್ಕೆ ಸಂಬಂಧಪಟ್ಟಂತೆ ಜೂನ್‍22, 2024ರಂದು ಅಡಿಷನಲ್ ಮುಖ್ಯ ಮೆಟ್ರೋಪಾಲಿಟನ್‍ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಕಪಿಲ್‍ ಮಿಶ್ರರವರಿಗೆ ಸಮನ್ಸ್ ಹೊರಡಿಸಿತು. ಮಿಶ್ರ , ಒಂದು ತಿಂಗಳ ನಂತರ ಪರಿಷ್ಕರಣ
ಅರ್ಜಿ ಸಲ್ಲಿಸಿದರು. ಮಿಶ್ರರವರ ಹೇಳಿಕೆಗಳಲ್ಲಿ ಎಲ್ಲಿಯೂ ಯಾವುದೇ ಜಾತಿ, ಸಮುದಾಯ, ಧರ್ಮ ಜನಾಂಗ ಅಥವ ಭಾಷೆಯ ಉಲ್ಲೇಖವಿಲ್ಲ, ಒಂದು ದೇಶದ ಉಲ್ಲೇಖವಷ್ಟೇ ಇದೆ, ಇದು ಆರ್.ಪಿ.ಎ.(ಕಾಯ್ದೆ)ಯ ಅಡಿಯಲ್ಲಿ ನಿಷಿದ್ಧವಲ್ಲ ಎಂದು ಮಿಶ್ರ ಪರ ವಕೀಲರು ವಾದಿಸಿದರು. ದ್ವೇಷ

ಇದನ್ನೂ ಓದಿ: ಹೈದರಾಬಾದ್| ದಲಿತ ವ್ಯಕ್ತಿಯ ಹತ್ಯೆ ಮಾಡಿದ ಆರೋಪಿಗೆ ಗಲ್ಲು ಶಿಕ್ಷೆ

“ಇದು ವಿವೇಚನಾಶೂನ್ಯ ಮತ್ತು ಅತ್ಯಂತ ಅಸಮರ್ಥನೀಯ ವಾದ, ಈ ಹೇಳಿಕೆಗಳಲ್ಲಿನ ನಿರ್ದಿಷ್ಟ ದೇಶದ ಸೂಚ್ಯ ಉಲ್ಲೇಖ ನಿಸ್ಸಂದೇಹವಾಗಿಯೂ ಒಂದು ನಿರ್ದಿಷ್ಟ ಧಾರ್ಮಿಕ ಸಮುದಾಯದ ವ್ಯಕ್ತಿಗಳನ್ನು ಕುರಿತ ಕೊಂಕುನುಡಿ, ಧಾರ್ಮಿಕ ಸಮುದಾಯಗಳ ನಡುವೆ ವೈರತ್ವವನ್ನು ಉಂಟು ಮಾಡುವಂತದ್ದೆಂದು ಕಾಣುತ್ತದೆ, ಇದನ್ನು ಒಬ್ಬ ವಿವೇಚನಾಶೀಲರು ಮಾತ್ರವಲ್ಲ, ಒಬ್ಬ ಸಾಮಾನ್ಯರೂ ಸುಲಭವಾಗಿ ಅರ್ಥಮಾಡಿಕೊಳ್ಳಬಹುದು” ಎಂದು ವಿಶೇಷ ನ್ಯಾಯಾಧೀಶರು ಟಿಪ್ಪಣಿ ಮಾಡಿದರು. ದ್ವೇಷ

“ವಿಭಜಕ ಮತ್ತು ಹೊರಗಿಡುವ ರಾಜಕೀಯದ ಫಲಿತಾಂಶ”

ಪರಿಷ್ಕರಣ ಅರ್ಜಿ ಸಲ್ಲಿಸಿದವರು ಆರೋಪಿತ ಹೇಳಿಕೆಗಳಲ್ಲಿ ಪಾಕಿಸ್ತಾನ ಎಂಬ ಪದವನ್ನು ಕೇವಲ ಚುನಾವಣೆಗಳಲ್ಲಿ ಮತ ಗಿಟ್ಟಿಸಿಕೊಳ್ಳಲು, ಅದು ಕೋಮುವಾದಿ ಧ್ರುವೀಕರಣ ಉಂಟು ಮಾಡಬಹುದೆಂಬ ಪರಿವೆಯಿಲ್ಲದೆ ದ್ವೇಷ ಉಗುಳಲು ಅತ್ಯಂತ ಚತುರತೆಯಿಂದ ಹೆಣೆದಿದ್ದಾರೆ ಎಂದು ತನ್ನ ಆದೇಶದಲ್ಲಿ ಹೇಳುತ್ತ , “ನಿಜ ಸಂಗತಿಯೆಂದರೆ, ಈ ಹಂತದಲ್ಲಿ, ಪರಿಷ್ಕರಣ ಅರ್ಜಿದಾರರ ಆರೋಪಿತ ಹೇಳಿಕೆಗಳು ದುರದೃಷ್ಟವಶಾತ್ ಸಾಮಾನ್ಯ ಮಾತುಕತೆಗಳಲ್ಲಿ ಒಂದು ನಿರ್ದಿಷ್ಟ ಧರ್ಮದ ಸದಸ್ಯರನ್ನು ಸೂಚಿಸುವ ಒಂದು ದೇಶದ ಬಗ್ಗೆ ಪರೋಕ್ಷವಾಗಿ ಹೇಳುವ ಮೂಲಕ ಧರ್ಮದ ಆಧಾರದಲ್ಲಿ ವೈರತ್ವವನ್ನು ಉತ್ತೇಜಿಸುವ ಒಂದು ನಗ್ನ ಪ್ರಯತ್ನ” ಎನ್ನುತ್ತಲೇ ಕಪಿಲ್ ಮಿಶ್ರರವರ ಅರ್ಜಿಯನ್ನು ವಜಾ ಮಾಡಿದರು ಎಂದು ವರದಿಯಾಗಿದೆ. ದ್ವೇಷ

ಈ ಸಂದರ್ಭದಲ್ಲಿ ನ್ಯಾಯಾಧೀಶರು ಹೇಳಿದ ಮಾತುಗಳು ಅತ್ಯಂತ ಗಮನಾರ್ಹ. ಭಾರತದಲ್ಲಿ ಮತಗಳನ್ನು ಗಳಿಸಲು ಕೋಮು ಭಾವನೆಯ ಭಾಷಣಗಳನ್ನು ಆಶ್ರಯಿಸುವ ಪ್ರವೃತ್ತಿ ಇದೆ ಎಂದು ಮುಂದುವರೆದು ಅವರು ಹೇಳಿದರು. ಅಭ್ಯರ್ಥಿಗಳು ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳನ್ನು ದುರ್ಬಲಗೊಳಿಸಬಹುದಾದ ಉಗ್ರ ನಿಂದನೆಯಲ್ಲಿ ತೊಡಗುವುದನ್ನು ತಡೆಯುವುದು ಚುನಾವಣಾ ಆಯೋಗದ ಸಾಂವಿಧಾನಿಕ ಬಾಧ್ಯತೆ ಎಂದು ಒತ್ತಿಹೇಳಿದ ಅವರು ಆರ್‌ಪಿ ಕಾಯ್ದೆಯ ಸೆಕ್ಷನ್ 125 ರ ಅಡಿಯಲ್ಲಿ ಅಪರಾಧವನ್ನು ಗಮನಕ್ಕೆ ತೆಗೆದುಕೊಳ್ಳಲು ಚುನಾವಣಾ ಅಧಿಕಾರಿಯ ದೂರು ಮತ್ತು ಅದನ್ನು ಸಮರ್ಥಿಸುವ ದಾಖಲೆಗಳಿವೆ ಎನ್ನುತ್ತ ನ್ಯಾಯಾಲಯ ಅರ್ಜಿದಾರರಿಗೆ ಹೊರಡಿಸಿದ ಸಮನ್ಸ್ ಆದೇಶವನ್ನು ಎತ್ತಿಹಿಡಿದರು. ದ್ವೇಷ

ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳು ಯಾವುದೇ ಚೈತನ್ಯಶೀಲ ಪ್ರಜಾಪ್ರಭುತ್ವದ ಅಡಿಪಾಯ, ಅದರಲ್ಲಿ ಕೋಮು ಸಾಮರಸ್ಯವನ್ನು ಕಾಪಾಡಿಕೊಳ್ಳುವ ಮಹತ್ವವನ್ನು ಅವರು ಒತ್ತಿ ಹೇಳಿದರು. ಭಾರತವು ಧಾರ್ಮಿಕ ವೈವಿಧ್ಯತೆಯನ್ನು ಅಳವಡಿಸಿಕೊಂಡಿದ್ದು, ಧಾರ್ಮಿಕ ಭಾವನೆಗಳನ್ನು ಸುಲಭವಾಗಿ ಹೊತ್ತಿಸಬಹುದಾದ ನಾಜೂಕಿನ ವಾತಾವರಣ ಅಸ್ತಿತ್ವದಲ್ಲಿದೆ ಎಂದು ಗಮನಿಸಿದ ನ್ಯಾಯಾಧೀಶರು ಇದು ದೇಶದ ಪ್ರಜಾಪ್ರಭುತ್ವ ಮತ್ತು ಬಹುತ್ವದ ಹಂದರಕ್ಕೆ ಬೆದರಿಕೆಯಾಗಿರುವ ವಿಭಜಕ ಮತ್ತು ಹೊರಗಿಡುವ ರಾಜಕೀಯದ ಫಲಿತಾಂಶವಾಗಿದೆ, ವಸಾಹತುಶಾಹಿಯ ಒಡೆದು ಆಳುವ ನೀತಿಯು ಭಾರತದಲ್ಲಿ ಇನ್ನೂ ಆಚರಣೆಯಲ್ಲಿದೆ ಎಂಬುದು ವಿಷಾದಕರ ಎಂದು ಹೇಳಿದರು.

2020ರ ದಿಲ್ಲಿ ಗಲಭೆಗಳು ಮತ್ತು ಹಾಲಿ ‘ನ್ಯಾಯಮಂತ್ರಿ’

ಇದಕ್ಕೆ ಎರಡು ದಿನಗಳು ಹಿಂದೆ, ಅದೇ 2020ರಲ್ಲಿ ಈಶಾನ್ಯ ದಿಲ್ಲಿಯಲ್ಲಿ 53 ಮಂದಿಯ ಪ್ರಾಣಹಾನಿ, ನೂರಾರು ಜನರಿಗೆ ಗಾಯ ಮತ್ತು ಹಲವಾರು ಕುಟಂಬಗಳಿಗೆ ಅಪಾರ ಹಾನಿ ತಂದೊಡ್ಡಿದ ಕೋಮುವಾದಿ ಹಿಂಸಾಚಾರದಲ್ಲಿ ಕಪಿಲ್‍ ಮಿಶ್ರ ಶಾಮೀಲಾಗಿದ್ದು ಅವರು ಮತ್ತು ಇತರರ ಮೇಲೆ ಎಫ್‍ಐಆರ್‍ ಹಾಕಬೇಕೆಂಬ ಅರ್ಜಿಗೆ
ಸಂಬಂಧಪಟ್ಟಂತೆ ದಿಲ್ಲಿ ಪೋಲೀಸ್, ಇದು ಕಪಿಲ್‍ ಮಿಶ್ರ ರವರ ವಿರುದ್ಧ ದು ಸಂಚಾಗಿದೆ, ತಾವು ಈ ಬಗ್ಗೆ ಈಗಾಗಲೇ ತನಿಖೆ ನಡೆಸಿದ್ದು, ಅವರ ವಿರುದ್ಧ ಯಾವುದೇ ಸಾಕ್ಷ್ಯ ದೊರೆತಿಲ್ಲ ಎಂದು ರೌಸ್‍ ಅವೆನ್ಯೂ ಕೋರ್ಟಿನ ಎಸಿಜೆಎಂ ಮುಂದೆ ಲಿಖಿತ ಹೇಳಿಕೆ ಸಲ್ಲಿಸಿದೆ, ನ್ಯಾಯಾಲಯ ಮಿಶ್ರ ಮತ್ತು ಇತರರ ಮೇಲೆ ಪ್ರಕರಣ
ದಾಖಲಿಸಬೇಕೇ ಬೇಡವೇ ಎಂಬ ಬಗ್ಗೆ ಮಾರ್ಚ್‍ 24ರಂದು ಆದೇಶ ನೀಡುವುದಾಗಿ ಹೇಳಿದೆ ಎಂದು ವರದಿಯಾಗಿತ್ತು.

ಈ ಹಿಂಸಾಚಾರ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟಿಸುತ್ತಿದ್ದ ಕಾರ್ಯಕರ್ತರು, ವಿದ್ಯಾರ್ಥಿಗಳು ಮತ್ತು ಸ್ಥಳೀಯ ರಾಜಕಾರಣಿಗಳು ಹುಟ್ಟು ಹಾಕಿದ ಮೋದಿ ಸರಕಾರದ ಹೆಸರುಗೆಡಿಸುವ ಸಂಚಿನ ಭಾಗವಾಗಿತ್ತು ಎಂದು ದಿಲ್ಲಿ ಪೋಲೀಸ್ ಹೇಳುತ್ತಿದ್ದು, ಈ ಗಲಭೆಗಳ ಸಂದರ್ಭದಲ್ಲಿ ತಮ್ಮ ದೂರುಗಳನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ್ದರಿಂದ ಕೆಲವು ನಾಗರಿಕರು ನ್ಯಾಯಾಲಯದ ಮೊರೆ ಹೋದರು.

ಮಿಶ್ರಾ ಮುಸ್ಲಿಂ ಸಮುದಾಯದ ವಿರುದ್ಧ ಹಿಂಸಾಚಾರ ಪ್ರಚೋದಿಸುವಲ್ಲಿ ನೇರ ಮತ್ತು ಸಕ್ರಿಯ ಪಾತ್ರ ವಹಿಸಿದ್ದರು ಎಂದು ಹಲವು ಅರ್ಜಿಗಳಲ್ಲಿ ಆರೋಪಿಸಲಾಗಿದೆ, ಕೆಲವು ಅರ್ಜಿಗಳು ಪೋಲೀಸರೂ ಇದರಲ್ಲಿ ಶಾಮೀಲಾಗಿದ್ದರು ಎಂದು ಆರೋಪಿಸಿದ್ದವು.

ಈ ನಡುವೆ ದಿಲ್ಲಿ ಅಲ್ಪಸಂಖ್ಯಾತರ ಆಯೋಗ ನೇಮಿಸಿದ್ದ ಸತ್ಯಶೋಧನಾ ಸಮಿತಿ ಈ ಗಲಭೆಗಳಿಗೆ ಮಿಶ್ರಾ ಸೇರಿದಂತೆ ಬಿಜೆಪಿ ನಾಯಕರ ಪ್ರಚೋದನಾಕಾರಿ ಟಿಪ್ಪಣಿಗಳು ಕಾರಣ ಎಂಬ ತೀರ್ಮಾನಕ್ಕೆ ಬಂದಿದೆ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಇದನ್ನೂ ನೋಡಿ: CITU| ಶ್ರಮಿಕರ ಅಹೋರಾತ್ರಿ ಹೋರಾಟ 5ನೇ ದಿನಕ್ಕೆ | ಅಂಗವಾಡಿ ನೌಕರರ ಸಂಘಟನೆಯಿಂದ ಧರಣಿ

Donate Janashakthi Media

Leave a Reply

Your email address will not be published. Required fields are marked *