ಬಿಜೆಪಿ ತನ್ನ ಇಬ್ಬರು ಅಧಿಕೃತ ವಕ್ತಾರರ ಮೇಲೆ ಕ್ರಮ ಜರುಗಿಸಿರುವುದು, ಅವರನ್ನು ‘ಕ್ಷುಲ್ಲಕ ಮಂದಿ’ ಎಂದಿರುವುದು ಬಿಜೆಪಿಯ ಬೂಟಾಟಿಕೆಯನ್ನು ಎದ್ದು ಕಾಣಭುವಂತೆ ಮಾಡಿದೆ. ಈ ಮೂಲಕ ಬಿಜೆಪಿ ಸ್ವಯಂ ತನ್ನನ್ನೇ ಖಂಡಿಸಿ ಕೊಂಡಂತಾಗಿದೆ. `ಕ್ಷುಲ್ಲಕ ಶಕ್ತಿಗಳೇ’ ಪಕ್ಷದ ಮುಖ್ಯವಾಹಿನಿ ಎಂದು ಅದು ದೃಢಪಡಿಸಿದೆ. ಬಿಜೆಪಿ ಮತ್ತು ಮೋದಿ ಸರ್ಕಾರದ ಹಿಂದುತ್ವ ಅಜೆಂಡಾವು ಹೆಚ್ಚೆಚ್ಚಾಗಿ ಅಂತಾರಾಷ್ಟ್ರೀಯ ಪರೀಕ್ಷಣೆಗೆ ಒಳಪಡುತ್ತಿದೆ. `ವಿಶ್ವ ಗುರು’ವನ್ನು ಜಗತ್ತು ಒಂದು ಕರಾಳ ಹಾಗೂ ಅಮಂಗಳಕಾರೀ ಬೆಳಕಿನಲ್ಲಿ ನೋಡುತ್ತಿದೆ ಎಂಬುದನ್ನು ಇದು ತೋರಿಸುತ್ತಿದೆ.
ಪ್ರಕಾಶ ಕಾರಟ್
ಬಿಜೆಪಿ ಮತ್ತು ಮೋದಿ ಸರ್ಕಾರ ತಮ್ಮ ಆಟಾಟೋಪಕ್ಕೆ ತಾವೇ ಬೆಲೆ ತೆರುತ್ತಿವೆ. ಅವುಗಳ ಮುಸ್ಲಿಂ-ವಿರೋಧಿ ಧೋರಣೆ ಅವುಗಳಿಗೇ ತಿರುಗುಬಾಣ ಆಗುತ್ತಿದೆ. ವ್ಯವಸ್ಥಿತವಾದ ಮುಸ್ಲಿಂ- ವಿರೋಧಿ ಪ್ರಚಾರ ಹಾಗೂ ಇಸ್ಲಾಂಭೀತಿಯ ಕಾಯಿಲೆಯನ್ನು ಪ್ರಚೋದಿಸಿದ ನಂತರ ಸರ್ಕಾರ ಮತ್ತು ಆಳುವ ಪಕ್ಷ ಬಹುತೇಕ ಮುಸ್ಲಿಂ ದೇಶಗಳಿಂದ ಬಲವಾದ ರಾಜತಾಂತ್ರಿಕ ಹಿಂದೇಟು ಅನುಭವಿಸಿವೆ. ಸಂಯುಕ್ತ ಅರಬ್ ಅಮೀರೇಟ್ (ಯುಎಇ), ಕತಾರ್, ಕುವೇಟ್, ಸೌದಿ ಅರೇಬಿಯಾ, ಇರಾನ್, ಇರಾಕ್, ಇಂಡೋನೇಷ್ಯಾ, ಮಲೇಷ್ಯಾ ಮತ್ತು ಟರ್ಕಿ ಆ ಪೈಕಿ ಪ್ರಮುಖ ದೇಶಗಳಾಗಿವೆ.
ಇಬ್ಬರು ಬಿಜೆಪಿ ವಕ್ತಾರರು, ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಹಾಗೂ ದೆಹಲಿ ಬಿಜೆಪಿ ವಕ್ತಾರ ನವೀನ್ ಜಿಂದಾಲ್ ಕ್ರಮವಾಗಿ ರಾಷ್ಟ್ರೀಯ ದೂರದರ್ಶನ ಹಾಗೂ ಸಾಮಾಜಿಕ ಮಾಧ್ಯಮದಲ್ಲಿ ಪ್ರವಾದಿ ಮಹಮದರ ವಿರುದ್ಧ ಅವಹೇಳನಕಾರಿ ಟಿಪ್ಪಣಿಗಳನ್ನು ಮಾಡಿದ್ದರು. ನೂಪುರ್ ಶರ್ಮಾ ಮೇ 27ರಂದು ನೀಡಿದ್ದ ಖಂಡನೀಯ ಹೇಳಿಕೆಗೆ ದೇಶದಾದ್ಯಂತ ವ್ಯಾಪಕ ಪ್ರತಿರೋಧ ವ್ಯಕ್ತವಾಗಿತ್ತು. ಮುಸ್ಲಿಮರು ಮತ್ತು ಜಾತ್ಯತೀತ ಸಂಘಟನೆಗಳ ಈ ಪ್ರತಿಭಟನೆಗಳನ್ನು ಬಿಜೆಪಿ ಕಡೆಗಣಿಸಿತ್ತು. ಕಾನ್ಪುರದಲ್ಲಿ ಪ್ರತಿಭಟನೆಕಾರರನ್ನು ಅಧಿಕಾರಿಗಳು ಬರ್ಬರವಾಗಿ ನಡೆಸಿಕೊಂಡಿದ್ದರು. ಅನೇಕ ಮುಸ್ಲಿಮರನ್ನು ರಾಷ್ಟ್ರೀಯ ಭದ್ರತಾ ಕಾನೂನು (ಎನ್‌ಎಸ್‌ಎ) ಅಡಿ ಬಂಧಿಸಲಾಗಿದೆ.
ಆದರೆ, ಜೂನ್ 5 ರಂದು ಕತಾರ್ ಸರ್ಕಾರ, ಭಾರತೀಯ ರಾಯಭಾರಿಯನ್ನು ಕರೆಸಿಕೊಂಡು ಪ್ರತಿಭಟನೆಯನ್ನು ದಾಖಲಿಸಿತ್ತು. ನಂತರ ಕುವೇಟ್ ಮತ್ತು ಇತರ ಕೊಲ್ಲಿ ರಾಷ್ಟ್ರಗಳು ಕೂಡ ಪ್ರತಿಭಟನೆ ದಾಖಲಿಸಿದವು. ಈ ಹಿನ್ನೆಲೆಯಲ್ಲಿ, ಬಿಜೆಪಿ ನೂಪುರ್ ಶರ್ಮರನ್ನು ಪಕ್ಷದಿಂದ ಅಮಾನತು ಮಾಡಿತು ಮತ್ತು ನವೀನ್ ಜಿಂದಾಲ್‍ರನ್ನು ಉಚ್ಚಾಟಿಸಿತು.
ಹಿಂದುತ್ವ ಸಿದ್ಧಾಂತದಲ್ಲೇ ಅಡಕವಾದ ಕಾಯಿಲೆ
ಅವಹೇಳನಕಾರಿ ಟಿಪ್ಪಣಿಗಳು ಸರ್ಕಾರದ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ ಎಂದು ಕತಾರ್‌ನ ರಾಯಭಾರಿ ಮೂಲಕ ಭಾರತ ಹೇಳಿತು. ಅವುಗಳು ಕೆಲವು `ಕ್ಷುಲ್ಲಕ ಶಕ್ತಿಗಳ’ ಕೆಲಸವಾಗಿದೆ ಎಂದು ಸರ್ಕಾರ ಸಮಜಾಯಿಷಿ ನೀಡಿತು. ಈ ಹೇಳಿಕೆಯ ಬೂಟಾಟಿಕೆ ಎದ್ದು ಕಾಣುವಂತಿದೆ. ಪಕ್ಷದ ಅಧಿಕೃತ ವಕ್ತಾರರನ್ನೇ `ಕ್ಷುಲ್ಲಕ ಶಕ್ತಿ’ಗಳು ಎನ್ನುವ ಮೂಲಕ ಬಿಜೆಪಿ ಪಕ್ಷ ಸ್ವಯಂ ತನ್ನನ್ನೇ ಖಂಡಿಸಿ ಕೊಂಡಂತಾಗಿದೆ. `ಕ್ಷುಲ್ಲಕ ಶಕ್ತಿಗಳೇ’ ಪಕ್ಷದ ಮುಖ್ಯ ವಾಹಿನಿ ಎಂದು ಅದು ದೃಢಪಡಿಸಿದೆ. ವಾಸ್ತವಾಗಿ, ಇಸ್ಲಾಂಭೀತಿಯ ಕಾಯಿಲೆ ಬಿಜೆಪಿಯ ಘೋಷಿತ ಹಿಂದುತ್ವ ಸಿದ್ಧಾಂತದಲ್ಲೇ ಅಡಕವಾಗಿದೆ.
ಮುಸ್ಲಿಂ-ವಿರೋಧಿ ಪದಪುಂಜಗಳು ಬಿಜೆಪಿಯ ಅಧಿಕೃತ ನಿಲುವಾಗಿದೆ. ಇತ್ತ ನೂಪುರ್ ಶರ್ಮಾರ ಟಿಪ್ಪಣಿಗಳು ಟಿವಿಯಲ್ಲಿ ಪ್ರಸಾರವಾಗುತ್ತಿದ್ದಾಗ ಅತ್ತ ಆಸ್ಟ್ರೇಲಿಯಾದಲ್ಲಿ ಬಿಜೆಪಿ ಸಂಸದ ಹಾಗೂ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ, ಭಾರತದ ಮೇಲೆ ಮುಸ್ಲಿಮರ ಆಕ್ರಮಣವು “ಜಗತ್ತಿನ ಇತಿಹಾಸದಲ್ಲೇ ಅತ್ಯಂತ ರಕ್ತಸಿಕ್ತ ಅಧ್ಯಾಯ’ ಎಂದು ಹೇಳುತ್ತಿದ್ದರು. `ಇಸ್ಲಾಂ ಇತಿಹಾಸವೇ ರಕ್ತಪಾತ ಹಾಗೂ ಹಿಂಸೆಯಿಂದ ಕೂಡಿದ್ದಾಗಿದೆ’ ಎಂದೂ ಅವರು ಹೇಳಿದರು. ಮುಸ್ಲಿಂ ವಿದ್ಯಾರ್ಥಿ ಸಂಘಟನೆಗಳು ಮತ್ತು ನಾಗರಿಕ ಹಕ್ಕುಗಳ ಗುಂಪುಗಳ ಪ್ರತಿಭಟನೆಯಿಂದಾಗಿ ಅಧಿಕೃತ `ಆಸ್ಟ್ರೇಲಿಯಾ-ಭಾರತ ಯುವ ಸಂವಾದ’ ಕಾರ್ಯಕ್ರಮದಲ್ಲಿ ಸೂರ್ಯ ಭಾಗವಹಿಸುವುದನ್ನು ರದ್ದುಪಡಿಸಲಾಯಿತು.
57 ಸದಸ್ಯ ದೇಶಗಳಿರುವ ಇಸ್ಲಾಮಿಕ್ ಸಹಕಾರ ಸಂಸ್ಥೆಯ (ಒಐಸಿ) ಕಾರ್ಯದರ್ಶಿ ಮಂಡಳಿಯ ಹೇಳಿಕೆಯನ್ನು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರರು ಬಲವಾಗಿ ಖಂಡಿಸಿದರು. ಒಐಸಿ ಹೇಳಿಕೆ ಕೋಮುವಾದಪ್ರೇರಿತ ಹೇಳಿಕೆಯಾಗಿದೆ ಎಂದವರು ವರ್ಣಿಸಿದರು. ಯಾವ ಸಂದರ್ಭದಲ್ಲಿ ಪ್ರವಾದಿ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಲಾಗಿದೆ ಎಂಬುದನ್ನು ಒಐಸಿ ಹೇಳಿಕೆಯು ನಿಖರವಾಗಿ ತಿಳಿಸಿತ್ತು. ಹೀಗಾಗಿ ಸರ್ಕಾರ ಈ ರೀತಿಯ ಪ್ರತಿಕ್ರಿಯೆ ವ್ಯಕ್ತಪಡಿಸಿದೆ. `ಇಸ್ಲಾಂ ವಿರುದ್ಧ ಹೆಚ್ಚುತ್ತಿರುವ ದ್ವೇಷ ಮತ್ತು ಮಾನಹಾನಿಕರ ಹೇಳಿಕೆಗಳ ಪ್ರವಾಹ’ ಮತ್ತು ಭಾರತದ ಕೆಲವು ರಾಜ್ಯಗಳ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಲು ನಿರ್ಬಂಧಿಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ನೋಡಿದರೆ ಭಾರತೀಯ ಮುಸ್ಲಿಮರ ಆಚರಣೆಗಳ ವಿರುದ್ಧ ವ್ಯವಸ್ಥಿತ ಪ್ರಚಾರ ನಡೆಯುತ್ತಿದ್ದು ಆಳುವ ಪಕ್ಷದ ವಕ್ತಾರರ ಹೇಳಿಕೆ ಅದರ ಭಾಗವಾಗಿದೆ. ಮುಸ್ಲಿಮರ ಆಸ್ತಿಪಾಸ್ತಿ ನಾಶ ಹಾಗೂ ಅವರ ವಿರುದ್ಧ ಹೆಚ್ಚುತ್ತಿರುವ ಹಿಂಸಾಚಾರದ ಭಾಗವೂ ಆಗಿದೆ ಎಂದು ಒಐಸಿ ಹೇಳಿಕೆ ಟಿಪ್ಪಣಿ ಮಾಡಿತ್ತು. ವಾಸ್ತವವನ್ನು ಇದ್ದಂತೆ ಹೇಳಿದ್ದರಿಂದ ಮೋದಿ ಸರ್ಕಾರ ಈ ರೀತಿಯ ನಟನಾಭರಿತ ಪ್ರತಿಕ್ರಿಯೆ ನೀಡಿದೆ.
ದುಷ್ಫಲಗಳನ್ನು ಉಣ್ಣಬೇಕಾಗಿ ಬಂದಿದೆ
ಮುಸ್ಲಿಂ-ವಿರೋಧಿ ಅಜೆಂಡಾವು ರಾಷ್ಟ್ರೀಯ ಏಕತೆಯ ಮೇಲೆ ಗಂಭೀರ ದುಷ್ಪರಿಣಾಮ ಬೀರುತ್ತಿದ್ದು ಎಲ್ಲ ಬಗೆಯ ಉಗ್ರಗಾಮಿ ಹಿಂಸಾಚಾರ ಆರಂಭವಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಅದರ ವಿನಾಶಕಾರಿ ರೂಪ ಕಾಣುತ್ತಿದೆ. ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ವಿಸರ್ಜಿಸಿ ಅದರ ವಿಶೇಷ ಸ್ಥಾನಮಾನ ತೆಗೆದು ಹಾಕಿದ್ದು ಕಾಶ್ಮೀರಿ ಮುಸ್ಲಿಮರನ್ನು ಮತ್ತು ಕಣಿವೆಯ ಮುಖ್ಯ ವಾಹಿನಿಯ ರಾಜಕೀಯ ಪಕ್ಷಗಳನ್ನು ಅಂಚಿಗೆ ತಳ್ಳಲು ಭೂಮಿಕೆಯನ್ನು ಸಿದ್ಧಪಡಿಸಲು ನೆರವಾಗಿದೆ. ಕಣಿವೆಯಲ್ಲಿ ಮೂಲಭೂತ ಹಕ್ಕುಗಳನ್ನು ಬರ್ಬರವಾಗಿ ದಮನಿಸಲಾಗುತ್ತಿದೆ. ಇದರಿಂದಾಗಿ ಮುಸ್ಲಿಂ ಉಗ್ರವಾದಿ ಚಟುವಟಿಕೆ ಹೆಚ್ಚಿ ಕಾಶ್ಮೀರಿ ಪಂಡಿತರು ಮತ್ತು ವಲಸೆ ಕಾರ್ಮಿಕರನ್ನು ಗುರಿಯಾಗಿಸಿ ಭಯೋತ್ಪಾದಕ ಗುಂಪುಗಳವರು ಕೊಲ್ಲುತ್ತಿದ್ದಾರೆ. ಇದರ ಫಲವಾಗಿ ಮೋದಿ ಸರ್ಕಾರದ ಜಮ್ಮು ಮತ್ತು ಕಾಶ್ಮೀರ ನೀತಿ ಚಿಂದಿಯಾಗಿದೆ. ಧರ್ಮಾಂಧತೆಯ ದುಷ್ಫಲಗಳನ್ನು ಉಣ್ಣಬೇಕಾಗಿ ಬಂದಿದೆ.
ಧಾರ್ಮಿಕ ಭಾವನೆಗಳಿಗೆ ಘಾಸಿ ಮಾಡುವ ಪೋಸ್ಟ್ ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿದ ಅಥವಾ ಕೋಮು ಸೌಹಾರ್ದತೆ ಕೆಡಿಸಿದ ಆರೋಪದ ಮೇಲೆ ಈ ಹಿಂದೆ ಅನೇಕ ಮುಸ್ಲಿಮರನ್ನು ಬಂಧಿಸಲಾಗಿತ್ತು. ಆದರೆ, ನೂಪುರ್ ಶರ್ಮಾ ಅಥವಾ ನವೀನ್ ಜಿಂದಾಲ್ ವಿರುದ್ಧ ಆ ರೀತಿಯ ಯಾವುದೇ ಕ್ರಮವನ್ನು ಕೈಗೊಳ್ಳಲಾಗಿಲ್ಲ. ಅದರ ಬದಲು, ಜೀವ ಬೆದರಿಕೆ ಇದೆ ಎಂಬ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿರುವ ದೆಹಲಿ ಪೊಲೀಸರು ನೂಪುರ್‌ಗೆ ರಕ್ಷಣೆ ಒದಗಿಸಿದ್ದಾರೆ.
ಆಕೆಯ ಪಕ್ಷದ ಸದಸ್ಯತ್ವವನ್ನು ಅಮಾನತು ಮಾಡಿರುವುದು ಬಿಜೆಪಿ ಮತ್ತು ಆರ್‌ಎಸ್‌ಎಸ್ ಬೆಂಬಲಿಗರಿಗೆ ಪಥ್ಯವಾಗಿಲ್ಲ ಎನ್ನುವುದು ಸ್ಪಷ್ಟ. ಈ ಕ್ರಮ ಕೈಗೊಂಡಿದ್ದು ಕೂಡ ಬಾಹ್ಯ ಒತ್ತಡದ ಪರಿಣಾಮವಾಗಿ ಎನ್ನುವುದನ್ನು ಗಮನಿಸಬೇಕು. ಬಿಜೆಪಿ ನಾಯಕತ್ವ ನೀಡಿದ್ದ ಹೇಳಿಕೆಯು ನೂಪುರ್ ಹೇಳಿಕೆಯನ್ನು ಬಲವಾಗಿ ಖಂಡಿಸಿಯೂ ಇಲ್ಲ ತನಗೂ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿಯೂ ಇಲ್ಲ ಎನ್ನುವುದೂ ಗಮನಾರ್ಹ.
ತನ್ನ ಸರ್ಕಾರ ಎಲ್ಲ ಧರ್ಮಗಳನ್ನು ಗೌರವಿಸುತ್ತದೆ ಎಂದು ಮೋದಿ ಸರ್ಕಾರ ಹೇಳಿದರೆ ಸಾಲದು. ಮುಸ್ಲಿಮರನ್ನು ಎಲ್ಲ ವಿಚಾರಗಳಲ್ಲಿ ಸಮಾನ ನಾಗರಿಕರಾಗಿ ನೋಡಿಕೊಳ್ಳಲಾಗುತ್ತದೆ ಹಾಗೂ ಮುಸ್ಲಿಂ-ವಿರೋಧಿ ಚಟುವಟಿಕೆಗಳನ್ನು ಕಾನೂನು ಮೂಲಕ ಹತ್ತಿಕ್ಕಲಾಗುತ್ತದೆ ಎಂದು ಅದು ಇಡೀ ದೇಶ ಮತ್ತು ಜಗತ್ತಿಗೆ ಖಾತರಿ ನೀಡಬೇಕು.
ಆ ರೀತಿ ದೃಢವಾಗಿ ಹೇಳುವುದಿಲ್ಲವೆಂದರೆ, ರಾಜತಾಂತ್ರಿಕ ಆಕ್ರೋಶ ತಣಿಯುವ ವರೆಗೆ ಬಿಜೆಪಿ ಹಾಗೂ ಸರ್ಕಾರ ಕಾದು ನೋಡುತ್ತದೆ, ಆಕ್ರೋಶ ತಣ್ಣಗಾದ ಮೇಲೆ ಮತ್ತೆ ಮುಸ್ಲಿಂ-ವಿರೋಧಿ ಆಟಾಟೋಪ ಶುರು ಮಾಡುತ್ತದೆ ಎಂದೇ ಅರ್ಥವಾಗುತ್ತದೆ. ಆದರೆ ನೂಪುರ್ ಶರ್ಮಾ ಪ್ರಕರಣ ತೋರಿಸಿ ಕೊಟ್ಟಿರುವಂತೆ, ಬಿಜೆಪಿ ಮತ್ತು ಮೋದಿ ಸರ್ಕಾರದ ಹಿಂದುತ್ವ ಅಜೆಂಡಾವು ಹೆಚ್ಚೆಚ್ಚಾಗಿ ಅಂತಾರಾಷ್ಟ್ರೀಯ ಪರೀಕ್ಷಣೆಗೆ ಒಳಪಡುತ್ತಿದೆ. `ವಿಶ್ವ ಗುರು’ವನ್ನು ಜಗತ್ತು ಒಂದು ಕರಾಳ ಹಾಗೂ ಅಮಂಗಳಕಾರೀ ಬೆಳಕಿನಲ್ಲಿ ನೋಡುತ್ತಿದೆ.
ವರ್ಷಗಳ ದ್ವೇಷ ಸಂಗ್ರಹ ಮತ್ತು ಒಂದು ಸಣ್ಣ ಕಿಡಿ (ವ್ಯಂಗ್ಯಚಿತ್ರ ಕೃಪೆ: ಸತೀಶ ಆಚಾರ್ಯ)
ಅನು: ವಿಶ್ವ