ಹೊಸದಿಲ್ಲಿ : ಭಾರತೀಯ ಸೇನಾಪಡೆಗಳಲ್ಲಿ ಅಲ್ಪಾವಧಿಗೆ ಸೇವೆ ಸಲ್ಲಿಸಲು ಯುವಕರಿಗೆ ಕೇಂದ್ರ ಸರಕಾರ ಜಾರಿಗೆ ತಂದಿರುವ ನೂತನ ‘ಅಗ್ನಿಪಥ’ ಯೋಜನೆಯ ಪರವಾಗಿ ದಿಲ್ಲಿ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಎರಡು ಪ್ರತ್ಯೇಕ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.
ಫೆ 27 ರಂದು ದಿಲ್ಲಿ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಗೋಪಾಲ್ ಕೃಷ್ಣ ಮತ್ತು ವಕೀಲ ಎಂ.ಎಲ್. ಶರ್ಮಾ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ಸುಪ್ರೀಂಕೋರ್ಟ್ ಪುರಸ್ಕರಿಸಲು ನಿರಾಕರಿಸಿದೆ.
ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾ ಪಿಎಸ್ ನರಸಿಂಹ ಹಾಗೂ ನ್ಯಾ ಜೆಬಿ ಪರ್ದಿವಾಲಾ ಅವರಿದ್ದ ಪೀಠ, “ಕ್ಷಮಿಸಿ, ನಾವು ಹೈಕೋರ್ಟ್ ತೀರ್ಪಿನಲ್ಲಿ ಹಸ್ತಕ್ಷೇಪ ಮಾಡಲು ಬಯಸುವುದಿಲ್ಲ. ಈ ವಿಷಯದಲ್ಲಿ ಹೈಕೋರ್ಟ್ ಎಲ್ಲಾ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ತೀರ್ಪು ನೀಡಿದೆ,”ಎಂದು ಹೇಳಿದೆ.
ಆದಾಗ್ಯೂ, ಅಗ್ನಿಪಥ ಯೋಜನೆಯನ್ನು ಪ್ರಾರಂಭಿಸುವ ಮೊದಲು ಭಾರತೀಯ ವಾಯು ಪಡೆಯಲ್ಲಿ (ಐಎಎಫ್) ನೇಮಕಾತಿ ಕುರಿತು ಪ್ರಶ್ನಿಸಲಾದ ಅರ್ಜಿಯನ್ನು ಏ 17 ರಂದು ವಿಚಾರಣೆ ನಡೆಸುವುದಾಗಿ ನ್ಯಾಯಪೀಠ ಅರ್ಜಿದಾರರಿಗೆ ತಿಳಿಸಿದೆ. ಭಾರತೀಯ ವಾಯುಪಡೆಯಲ್ಲಿ ನೇಮಕಾತಿ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗೆ ಸೂಕ್ತ ಉತ್ತರ ನೀಡುವಂತೆ ನ್ಯಾಯಪೀಠವು ಕೇಂದ್ರ ಸರಕಾರಕ್ಕೆ ಸೂಚಿಸಿದೆ.
ಇದನ್ನೂ ಓದಿ : ಅಗ್ನಿಪಥ್ ಯೋಜನೆ ರದ್ದತಿ ಕೋರಿ ಸುಪ್ರೀಂನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಗಳು ದೆಹಲಿ ಹೈಕೋರ್ಟಿಗೆ ವರ್ಗ
ಅಗ್ನಿಪಥ ಯೋಜನೆ ಘೋಷಣೆಗೂ ಮುನ್ನ ಸೇನಾ ನೇಮಕಾತಿ ರಾಲಿಗಳಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಅಗ್ನಿವೀರರಾಗಲು ಹಕ್ಕು ಇರುತ್ತದೆ. ಇದಕ್ಕೆ ಕೇಂದ್ರ ಸರಕಾರ ಅವಕಾಶ ಕಲ್ಪಿಸಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾದ ಅರ್ಜಿಗಳಲ್ಲಿ ಒತ್ತಾಯಿಸಲಾಗಿತ್ತು.