ಬೆಂಗಳೂರು : ಟೋಲ್ ಸಂಗ್ರಹ ಆರಂಭವಾದ 17 ದಿನಗಳಲ್ಲೇ ಮತ್ತೆ ಟೋಲ್ ದರ ಹೆಚ್ಚಳವಾಗುವ ಮೂಲಕ ಬೆಂಗಳೂರು- ಮೈಸೂರು ದಶಪಥ ಹೆದ್ದಾರಿ ವಾಹನ ಸವಾರರಿಗೆ ಮತ್ತೆ ಬರೆ ಎಳೆದಿರುವುದನ್ನು ಖಂಡಿಸಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಸುರತ್ಕಲ್ ನ ಸಂಚಾಲಕರಾದ ಮುನೀರ್ ಕಾಟಿಪಳ್ಳ ಅವರು ಇಂದು ಪತ್ರಿಕಾಗೋಷ್ಠಿಯನ್ನು ನಡೆಸಿದ್ದಾರೆ.
ಬೆಂಗಳೂರು, ಮೈಸೂರು ಎಕ್ಸ್ ಪ್ರೆಸ್ ವೇ ಮಾತ್ರವಲ್ಲದೆ ರಾಜ್ಯಾದ್ಯಂತ ಎಲ್ಲಾ ಟೋಲ್ ಗೇಟ್ ಗಳಲ್ಲಿಯೂ ಸುಮಾರು 22 ಶೇಕಡಾ ದರ ಹೆಚ್ಚಳ ಮಾಡಿರುವುದರ ಬಗ್ಗೆ ಆಕ್ರೋಶ ವ್ಯಕ್ಷಪಡಿಸಿದ ಅವರು ಜನತೆಯ ವಿರೋಧದ ಹೊರತಾಗಿಯು ಕೇಂದ್ರದ ಬಿಜೆಪಿ ಸರಕಾರ ಟೋಲ್ ದರವನ್ನು ಶೇಕಡಾ 22 ರಷ್ಟು ಏರಿಕೆ ಮಾಡಿದೆ. ಮೊದಲೇ ದರ ಏರಿಕೆಯಿಂದ ತತ್ತರಿಸಿರುವ ಜನ ಸಾಮಾನ್ಯರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದು ಹೆದ್ದಾರಿ ಗುತ್ತಿಗೆಗಳನ್ನು ಪಡೆದಿರುವ ದೊಡ್ಡ ಕಂಪೆನಿಗಳ ಪರವಾದ ನಿರ್ಲಜ್ಜ ಸುಲಿಗೆಯಲ್ಲದೆ ಮತ್ತೇನು ಅಲ್ಲ ಎಂದು ಕಿಡಿಕಾರಿರುವ ಅವರು ಇಂತಹ ಹೆದ್ದಾರಿ ಸುಲಿಗೆ ನೀತಿಗಾಗಿ ಮುಂಬರುವ ಚುನಾವಣೆಯಲ್ಲಿ ಜನತೆ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು ಎಂದು “ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಸುರತ್ಕಲ್” ಜನತೆಯಲ್ಲಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇ : ನಾಳೆಯಿಂದ ಶೇಕಡಾ 22ರಷ್ಟು ಟೋಲ್ ದರ ಹೆಚ್ಚಳ
ಬೆಂಗಳೂರು, ಮೈಸೂರು ಎಕ್ಸ್ ಪ್ರೆಸ್ ವೇ ಮಾತ್ರವಲ್ಲದೆ ರಾಜ್ಯಾದ್ಯಂತ ಎಲ್ಲಾ ಟೋಲ್ ಗೇಟ್ ಗಳಲ್ಲಿಯೂ ದರ ಹೆಚ್ಚಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿರುವ ಐದು ಟೋಲ್ ಗೇಟ್ ಗಳಲ್ಲಿಯೂ ಅತಿ ಹೆಚ್ಚಿನ ಪ್ರಮಾಣದಲ್ಲಿ ದರ ಏರಿಸಲಾಗಿದೆ. ಜನತೆ ಇಂದು ಪ್ರಯಾಣಕ್ಕಾಗಿ ಹೆದ್ದಾರಿಗಳನ್ನು ಪ್ರವೇಶಿಸಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಪ್ರತಿಭಟನೆ, ಹೋರಾಟದ ಜೊತೆಗೆ ರಾಜಕೀಯ ಪ್ರಜ್ಞಾವಂತಿಕೆ ಪ್ರದರ್ಶಿಸಿದರೆ ಮಾತ್ರ ಆಳುವ ಸರಕಾರಗಳಿಗೆ, ರಾಜಕೀಯ ಪಕ್ಷಗಳಿಗೆ ಭಯ ಮೂಡಲು ಸಾಧ್ಯ. ಜನರು ಆರ್ಥಿಕ ಮುಗ್ಗಟ್ಟಿನಿಂದ ಕಂಗೆಟ್ಟಿರುವ ಸಂದರ್ಭದಲ್ಲಿ ಈ ಮಟ್ಟಿಗಿನ ದರ ಏರಿಕೆಗೆ ಪ್ರಬಲವಾದ ಪ್ರತಿರೋಧ ತೋರಿಸಲೇಬೇಕಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಮೂಲಕ ಖಾಸಗಿ ಕಂಪೆನಿಗಳ ಲಾಭಕೋರತನಕ್ಕಾಗಿ ಜನರ ಹಿತ ಬಲಿಕೊಡುವ ಸರಕಾರಗಳಿಗೆ ಸ್ಪಷ್ಟ ಎಚ್ಚರಿಕೆ ನೀಡಬೇಕು ಎಂದು ಪ್ರಕಟಣೆಯಲ್ಲಿ ತಿಳಸಿದ್ದಾರೆ.