ಬೆಂಗಳೂರು: ವಾಣಿಜ್ಯ ವಾಹನಗಳ ಎಫ್.ಸಿ ನವೀಕರಣಕ್ಕೆ ಕ್ಯೂಆರ್ ಕೋಡ್ ಇರುವ ರೆಟ್ರೋ ರಿಫ್ಲೆಕ್ಟರ್ ಟೇಪ್ ಅಳವಡಿಸಿಕೊಂಡು ಬರುವಂತೆ ಸರ್ಕಾರ ಹೊರಡಿಸಿರುವ ಆದೇಶಕ್ಕೆ ಕರ್ನಾಟಕ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘಗಳ ಒಕ್ಕೂಟ ವಿರೋಧ ವ್ಯಕ್ತಪಡಿಸಿದೆ.
‘ಬೆಂಗಳೂರು ನಗರದಲ್ಲಿ ಸರಕು-ಸಾಗಣೆ ವಾಹನಗಳ ಪ್ರವೇಶ ರದ್ದು ಪಡಿಸಿರುವುದನ್ನು ಖಂಡಿಸಿ ಇದೇ 17ರ ಮಧ್ಯರಾತ್ರಿಯಿಂದ ಅಗತ್ಯ ವಸ್ತುಗಳ ಪೂರೈಕೆಯನ್ನು ಸ್ಥಗಿತಗೊಳಿಸಿ ಪ್ರತಿಭಟನೆ ಮಾಡಲಾಗುವುದು’ ಎಂದು ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಜಿ.ಆರ್. ಷಣ್ಮುಖಪ್ಪ, ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಾರುಕಟ್ಟೆಯಲ್ಲಿ 1 ಮೀ. ರೆಟ್ರೋ ರಿಫ್ಲೆಕ್ಟರ್ ಟೇಪುಗಳಿಗೆ ₹60ರಿಂದ ₹70ರವರೆಗೂ ದರವಿದೆ. ಆದರೆ 1 ಮೀ. ಕ್ಯೂಆರ್ ಕೋಡ್ ಟೇಪ್‌ಗೆ ₹120 ದರ ನಿಗದಿಪಡಿಸಲಾಗಿದೆ. ಟೇಪ್ ಅಳವಡಿಸಲು ಕೇವಲ ನಾಲ್ಕು ಕಂಪನಿಗಳಿಗೆ ಮಾತ್ರ ಗುತ್ತಿಗೆ ನೀಡಿದೆ. ಈ ಮೂಲಕ ಸರ್ಕಾರ ವಾಹನಗಳ ಮಾಲೀಕರನ್ನು ಸುಲಿಗೆ ಮಾಡಲು ಹೊರಟಿದೆ. ಆದ್ದರಿಂದ ಈ ಆದೇಶವನ್ನು ಕೂಡಲೇ ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.
‘ಪ್ರಧಾನಿ ನರೇಂದ್ರ ಮೋದಿ ಭಾನುವಾರ ಉದ್ಘಾಟಿಸಿದ ಬೆಂಗಳೂರು-ಮೈಸೂರು ದಶಪಥ ರಸ್ತೆಯಲ್ಲಿ ಮೈಸೂರಿನಿಂದ ಬೆಂಗಳೂರಿಗೆ ತಲುಪಲು ₹1 ಸಾವಿರ ಟೋಲ್ ಕಟ್ಟಬೇಕು. ಆದ್ದರಿಂದ ಲಾರಿ ಬಾಡಿಗೆಯ ಜೊತೆಗೆ ಟೋಲ್ ಹಣವನ್ನೂ ವಸೂಲಿ ಮಾಡಲಾಗುವುದು. ಈ ದಶಪಥ ರಸ್ತೆಯಲ್ಲಿ ದ್ವಿಚಕ್ರ ವಾಹನ, ಟ್ರ್ಯಾಕ್ಟರ್ ಮತ್ತು ಆಟೋಗಳನ್ನು ನಿಷೇಧಿಸಬೇಕು. ಇವುಗಳಿಂದಲೇ ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿವೆ. ಈಗಾಗಲೇ ಇಲ್ಲಿ 82 ಜನ ಅಸುನಿಗಿದ್ದಾರೆ’ ಎಂದು ಮಾಹಿತಿ ನೀಡಿದರು.
‘ನೈಸ್ ರಸ್ತೆಯಲ್ಲಿ ದಿನದಿಂದ ದಿನಕ್ಕೆ ಟೋಲ್ ದರ ಹೆಚ್ಚಿಸುವುದರ ಮೂಲಕ ಹಗಲು ದರೋಡೆ ಮಾಡಲಾಗುತ್ತಿದೆ. ಕಳೆದ ಆರು ತಿಂಗಳಿನಿಂದ ತುಮಕೂರು ಮತ್ತು ಹೊಸೂರು ರಸ್ತೆಯವರೆಗೂ ಕಾಮಗಾರಿ ನಡೆಯುತ್ತಿದೆ. ಇದರಿಂದ ಏಕಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿವೆ. ಆದ್ದರಿಂದ ಸುಂಕ ವಸೂಲಿ ಮಾಡುವುದನ್ನು ಸ್ಥಗಿತಗೊಳಿಸಬೇಕು’ ಎಂದು ಒತ್ತಾಯಿಸಿದರು.