ದೆರ‍್ನಾ ಎಂಬ ಪಟ್ಟಣದ ಕತೆ

ಕೆ.ಎಸ್‌. ರವಿಕುಮಾರ್‌ ಹಾಸನ

ಚರಿತ್ರೆಯ ಹೆದ್ದಾರಿಯಲ್ಲಿ ಅಳಿಸದ ಹೆಜ್ಜೆಗುರುತು ಮೂಡಿಸುತ್ತ ಬಂದಿದ್ದ ಪಟ್ಟಣವೊಂದು ನೆರೆಗೆ ಪುಡಿಗಟ್ಟಿದ ಕತೆಯಿದು. ಕೆರಳಿದ ನಿಸರ್ಗಕ್ಕೆ ಮನುಷ್ಯರ ಅಸಡ್ಡೆಗಳ ಒತ್ತಾಸೆಯೂ ಸೇರಿಬಿಟ್ಟರೆ ದುರಂತಗಳಿಗೆ ಕರೆಯೋಲೆ ಎಂದು ತಳಮಳಿಸಿದ ಬರಹವಿದು. 

ದೆರ‍್ನಾ ಪಟ್ಟಣದ ಮೇಲೆ ತಾರೀಕು 11.09.2023ರ ಸೋಮವಾರ ಬೆಳಗಿನ ಜಾವ ೦2.3೦ಕ್ಕೆ ನುಗ್ಗಿಬಂದ ನೆರೆಯ ನೀರು ಅಂದಾಜು 6೦ ಅಡಿಯಷ್ಟು ಎತ್ತರವಿತ್ತು, ಅಂದರೆ 6 ಮಹಡಿಗಳಷ್ಟು ಎತ್ತರ! ಹೊಳೆದಡದಿಂದ ಆಚೀಚೆ 5೦-6೦ ಮೀಟರ್ ಮಿತಿಯೊಳಗೆ ಇದ್ದ ಕಟ್ಟಡಗಳು ನೆರೆಯ ಹೊಡೆತಕ್ಕೆ ಯಾವ ರೀತಿ ಸಿಲುಕಿದವೆಂದರೆ ತಮ್ಮ ತಳಪಾಯದೊಂದಿಗೇ ಕೊಚ್ಚಿಹೋದವು. ಇದ್ದುದರಲ್ಲಿ ಗಟ್ಟಿಮುಟ್ಟು ಎಂಬಂತಿದ್ದ ಬಹುಮಹಡಿ ಅಪಾರ್ಟ್‌ಮೆಂಟ್ ಮತ್ತು ವಾಣಿಜ್ಯ ಕಟ್ಟಡಗಳು ಮಚ್ಚುಬೀಸಿ ಕತ್ತರಿಸಲ್ಪಟ್ಟ ಬಾಳೆಯ ಗಿಡಗಳ ಹಾಗೆ ತುಂಡರಿಸಿಹೋದವು. ಒಂದಷ್ಟು ಎತ್ತರದ ಜಾಗದಲ್ಲಿದ್ದಂತಹವು ಮುಳುಗಿದರೂ ಅರೆಬರೆ ಚಾವಣಿಗಳು ಮತ್ತು ಗೋಡೆಗಳೊಂದಿಗಷ್ಟೆ ನಿಂತವು. ಮತ್ತೊಂದಷ್ಟು ಕಟ್ಟಡಗಳು ಹೇಗೋ ನೆರೆಯ ಒತ್ತಡಕ್ಕೆ ಸೆಡ್ಡು ಹೊಡೆದು ನಿಂತಿದ್ದವು. ಆದರೆ ನೆರೆಯೊಂದಿಗೆ ತಡಬಡಾಯಿಸಿ ಉರುಳಿಬಂದ ಹೆಬ್ಬಂಡೆಗಳ ಡಿಕ್ಕಿಗೆ ಅವು ಚಪ್ಪುಚೂರಾಗಿ ಕಡಲಿನ ಕಡೆಗೆ ತೇಲಿಹೋದವು. ಬೇರು ಕಿತ್ತುಬಂದ ಗಿಡಮರಗಳು ಬಾಗಿಲು ಕಳಚಿಹೋಗಿದ್ದ ಕಿಟಕಿ ಮತ್ತು ನಿಲಗಳೊಳಗೆ ತೂರಿಕೊಂಡವು. ಚಾವಣಿಯ ತನಕ ಕೊಟಡಿಗಳನ್ನು ತುಂಬಿಕೊಂಡ ಕೆಸರು ಸಾವಿರಾರು ಬದುಕುಗಳನ್ನು ಉಸಿರುಗಟ್ಟಿಸಿತು.

ಬೆಳಗಾಗುವ ಹೊತ್ತಿಗೆ 21 ಸಾವಿರಕ್ಕೂ ಹೆಚ್ಚು ಪಟ್ಟಣವಾಸಿಗಳ ಬದುಕಿನ ನಾಳೆಗಳು ನೆರೆಯಲ್ಲಿ ಮುಳುಗಿಹೋದವು. ಜನ ನಿದ್ದೆಹೋದ ಸಮಯವಾದ್ದರಿಂದ ಸಾವಿನ ಸಂಖ್ಯೆ ಇಷ್ಟೊಂದು ಹೆಚ್ಚಾಗಲು ಕಾರಣವಾಯಿತು. ಹೊಳೆಯ ಗುಂಟ ಬಹುತೇಕ ನಾಶಗೊಂಡ ದರ‍್ನಾ ಪಟ್ಟಣದ ಭೀಕರ ನೋಟವನ್ನು ಮುಂಜಾವು ಕಂಡು ಬದುಕುಳಿದವರು ತಲ್ಲಣಿಸಿಹೋದರು. ಮುಂದಿನ ಕೆಲವು ದಿನಗಳಲ್ಲಿ 11,3೦೦ಕ್ಕೂ ಹೆಚ್ಚು ಮಂದಿಯ ಕಳೇಬರಗಳನ್ನು ಗುರುತಿಸಲಾಯಿತು. ಹಾಳುಳಿಕೆ (rubble)ಗಳಡಿ ಸಿಕ್ಕಿ ಹೊರಬರಲಾಗದವರು ಮತ್ತು ಕಡಲಿಗೆ ಕೊಚ್ಚಿಹೋದವರನ್ನು ನಾಪತ್ತೆಯಾದವರು ಎಂದು ಪರಿಗಣಿಸಿ ಅವರ ಕಳೇಬರಗಳಿಗೆ ತೀವ್ರ ತಲಾಶು ನಡೆಸಲಾಯಿತು. ನಾಪತ್ತೆಯಾದವರ ಸಂಖ್ಯೆ ಗುರುತು ಪತ್ತೆಯಾದವರ ಸಂಖ್ಯೆಗಿಂತ ಹೆಚ್ಚಬಹುದೆಂಬ ಆತಂಕದ ನಡುವೆಯೂ ತಮ್ಮವರ ಕಳೇಬರವನ್ನು ಅಲೆಗಳು ತೀರಕ್ಕೆ ತೇಲಿಸಿ ತರಬಹುದೆಂದು ನೂರಾರು ಮಂದಿ ರಾತ್ರಿ ಹಗಲು ಕಡಲತಡಿಯಲ್ಲಿ ಕಾದು ನಿಂತರು.

ಕಾಲು ಜಾರಿಸುವ ಕೆಸರಿನ ನಡುವೆ ಏಳುತ್ತ ಬೀಳುತ್ತ್ತ ಹಾಳುಳಿಕೆಗಳನ್ನು ಅತ್ತಿತ್ತ ಸರಿಸುತ್ತ ತಮ್ಮ ಕುಟುಂಬದರು ಯಾರಾದರೂ ಕುಟುಕು ಜೀವಹಿಡಿದು ನರಳುತ್ತಿರಬಹುದೇ ಎಂದು ಹುಡುಕುವವರ ಕಣ್ಣೀರನ್ನೆ ಒಟ್ಟುಗೂಡಿಸಿದ್ದರೆ ಇನ್ನೊಂದು ನೆರೆಗದು ಸಾಲುತ್ತಿತ್ತೇನೊ! Sky News ಚಾನೆಲ್ಲಿನ ವರದಿಗಾರ್ತಿ ಅಲೆಕ್ಸ್ ಕ್ರಾಫರ್ಡ್ ‘ಯಾರೋ ಇಡೀ ದರ‍್ನಾ ಪಟ್ಟಣವನ್ನು ಒಮ್ಮಲೆ ಕಿತ್ತು ಮೇಲಕ್ಕೆತ್ತಿ ನೆಲಕ್ಕೆ ರಭಸದಿಂದ ಕುಕ್ಕಿದ ಹಾಗಿದೆ’ ಎಂದು ಬಣ್ಣಿಸಿದ್ದಾರೆ. ಆ ‘ಯಾರೋ’ ಮತ್ತಾರೂ ಅಲ್ಲ, ಡೇನಿಯಲ್ ಹೆಸರಿನ ಸೈಕ್ಲೋನ್ ತಂದ ಮಳೆಯ ನೆರೆ ನೀರು. ಅಬ್ಬಾ! ಒಂದು ನೆರೆ ಇಷ್ಟೊಂದು ಭೀಕರವಿರಬಹುದೆ? ವೈದ್ಯಕೀಯ ನೆರವು ಮತ್ತು ಪರಿಹಾರ ಕಾರ್ಯಕ್ಕೆಂದು ಬಂದ ಹೊರದೇಶಗಳ ಒಪ್ಪಾಳು(volunteer)ಗಳು ನೆರೆಯ ಕೋಟಲೆಗಳನ್ನು ಕಂಡು ‘‘violent and brutal’ (ಹಿಂಸಾತ್ಮಕ ಮತ್ತು ಕ್ರೂರ) ಎಂದು ಉದ್ಗಾರ ತೆಗೆದರು. ದೆರ‍್ನಾ ಇರುವ ಸೈರೆನೇಯ್ಕಾ ಪ್ರದೇಶದಲ್ಲಿ ಕ್ರಿ.ಶ. 365ರಲ್ಲಿ ಜರುಗಿದ್ದ ಭೂಕಂಪ ಬಿಟ್ಟರೆ ಈಗಿನ ನೆರೆಯೆ ಅತ್ಯಂತ ಭೀಕರ ನೈಸರ್ಗಿಕ ವಿಪತ್ತು ಇರಬಹುದೆಂದು ಊಹಿಸಲಾಗಿದೆ! ರಸ್ತೆಗಳು ಮತ್ತು ಸೇತುವೆಗಳೆಲ್ಲ ಕೊಚ್ಚಿಹೋಗಿ ಹಲವು ದಿನಗಳವರೆಗೆ ನೆರೆಪೀಡಿತ ದೆರ‍್ನಾವನ್ನು ತಲುಪುವುದೇ ದೊಡ್ಡ ಸಾಹಸವಾಗಿತ್ತು.

ನೆರೆ ದೆರ‍್ನಾ ಪಟ್ಟಣದ 6 ಚದರ ಕಿ.ಮೀ. ವಿಸ್ತೀರ್ಣದಲ್ಲಿ ತನ್ನ ಸಾವಿನ ಕೈಗಳನ್ನು ಚಾಚಿತ್ತು. ಅದರ ಹಲ್ಲೆಗೆ ನೇರ ತುತ್ತಾದ 1,5೦೦ ಕಟ್ಟಡಗಳಲ್ಲಿ 891 ಕಟ್ಟಡಗಳು, ಪೆನ್ಸಿಲ್‌ನಲ್ಲಿ ಗೀಚಿದ ತುಣುಕು ಗೆರೆಯನ್ನು ರಬ್ಬರಿನ ಒಂದೇ ಎಳೆತದಲ್ಲಿ ಅಳಿಸಿದ ಹಾಗೆ, ಒಂಚೂರೂ ಗುರುತುಳಿಸದಂತೆ ಅಳಿಸಿ ಹೋದವು. 211 ಕಟ್ಟಡಗಳು ಪೂರ್ಣ ಕುಸಿಯದಿದ್ದರೂ ಬಿರುಕುಗಳಿಂದಾಗಿ ರಿಪೇರಿಗೂ ತಕ್ಕುವಾಗಿ ಉಳಿಯಲಿಲ್ಲ. ಆದರೆ ಅವುಗಳ ಬಾಗಿಲು ಕಿಟಕಿಗಳಿಂದ ಮನುಷ್ಯರನ್ನೂ ಸೇರಿಸಿದಂತೆ ಹೊರಗೊಯ್ಯಬಹುದಾದ ಒಳಗಿನ ಸಾಮಾನು, ಸರಂಜಾಮು, ಸರಕು, ಸಾಮಾಗ್ರಿಗಳನ್ನೆಲ್ಲ ನೆರೆನೀರು ಒಯ್ದುಬಿಟ್ಟಿತ್ತು. 398 ಕಟ್ಟಡಗಳು ಪೂರ್ತಿಯಾಗಿ ಕೆಸರಿನಡಿ ಹೂತುಹೋದವು. ಆ ಕಟ್ಟಡಗಳಲ್ಲಿ ವಾಸಿಸಿದ್ದ ಬಹುತೇಕ ಮಂದಿ ಅಸುನೀಗಿದರು. ಬದುಕುಳಿದ ಬೆರಳೆಣಿಯಷ್ಟು ಮಂದಿ ತಾವುಳಿದದ್ದು ಪವಾಡ ಎಂದೇ ನಂಬಿದರು. ಒಬ್ಬ ಸದಸ್ಯರೂ ಉಳಿಯದ ಸಂಸಾರಗಳ ಸಂಖ್ಯೆಯೆ ಸಾವಿರದ ಮೇಲಿತ್ತು. ಹೊಳೆ ಒಯ್ದ ಕೆಸರು ಹಲವಾರು ಕಿ.ಮೀ. ದೂರದವರೆಗೆ ಕಡಲಿನ ನೀರನ್ನು ಕೆಂಬಣ್ಣಕ್ಕೆ ತಿರುಗಿಸಿತ್ತು. ವಾರ ಕಳೆದರೂ ತೀರಸನಿಹದ ಕಡಲು ಕೆಂಪಾಗಿಯೇ ಇತ್ತು.9೦ ಸಾವಿರದಷ್ಟು ಜನಸಂಖ್ಯೆ ಇರುವ ದೆರ‍್ನಾದಲ್ಲಿ ಈಗಾಗಲೆ 3೦ ಸಾವಿರದಷ್ಟು ಸಂತ್ರಸ್ತರು ನಿರಾಶ್ರಿತ ಶಿಬಿರಗಳಲ್ಲಿದ್ದಾರೆ. ಸತ್ತವರ ಸಂಖ್ಯೆ ದಿನೇ ದಿನೇ ಏರುತ್ತಿದ್ದು ಡಿ.ಎನ್.ಎ. ಪರೀಕ್ಷೆಯ ಮೂಲಕ ಕಳೇಬರಗಳ ಗುರುತು ಪತ್ತೆಮಾಡಿ ನಂಟರಿಗೆ ಒಪ್ಪಿಸಲಾಗುತ್ತಿದೆ.

ಚರಿತ್ರೆಯಲ್ಲಿ ದೆರ‍್ನಾ

ದೆರ‍್ನಾ ಪೂರ್ವ ಲಿಬಿಯಾದ ಒಂದು ಪಟ್ಟಣ. ಮೆಡಿಟರೇನಿಯನ್ ಕಡಲಿನ ಮುಖ್ಯ ಬಂದರು ಪಟ್ಟಣ. ತನ್ನ ಚರಿತ್ರೆಯುದ್ದಕ್ಕೂ ದಮನಿಸುವ ಪ್ರಭುತ್ವಗಳ ವಿರುದ್ಧ ದನಿಯೆತ್ತುತ್ತಿದ್ದ ಪಟ್ಟಣವಿದು. ನೋವು ನರಳಿಕೆಗಳು ಅದಕ್ಕೆ ಹೊಸದಲ್ಲ. ಪುರಾತನ ಗ್ರೀಕರ ದಾರ್ನಿಸ್ ಎಂಬ ಕಾಲೊನಿಯ ಹಾಳುಳಿಕೆಗಳಿದ್ದ ಜಾಗದಲ್ಲಿ 15ನೇ ಶತಮಾನದಲ್ಲಿ ದೆರ‍್ನಾ ಪಟ್ಟಣವನ್ನು ನೆಲೆಗೊಳಿಸಲಾಯಿತು. 1816ರಲ್ಲಿ ಪ್ಲೇಗ್ ದೆರ‍್ನಾವನ್ನು ತತ್ತರಗೊಳಿಸಿತು. 1834ರಲ್ಲಿ ಅದು ಕಾಲರಾ ಸಾಂಕ್ರಾಮಿಕ ಮತ್ತು ಭೂಕಂಪಗಳಿಗೆ ತುತ್ತಾಯಿತು.1850ರ ದಶಕದವರೆಗೂ ದೆರ‍್ನಾ ಬಂದರಿನಿಂದ ಗುಲಾಮರ ರಫ್ತುವ್ಯಾಪಾರ ಜರುಗುತ್ತಿತ್ತು. 1

911ರಲ್ಲಿ ಲಿಬಿಯಾ ಇಟಲಿಯ ಕಾಲೊನಿಯಾದ ಮೇಲೆ ದೆರ‍್ನಾ ಕೂಡಾ 29 ವರುಷ ಇಟಲಿಯ ದಬ್ಬಾಳಿಕೆಗೆ ಒಳಗಾಯಿತು. 1925ರಿಂದ ಮುಂದೆ 20 ವರುಷ ಮುಸಲೋನಿಯ ಕೆಟ್ಟ ಫ್ಯಾಸಿಸ್ಟ್ ಆಡಳಿತವನ್ನೂ ಕಂಡಿತು. ನಂತರ ಹಿಟ್ಲರ್‌ನ ನಾಜೀ ಜರ್ಮನಿಯ ಹಿಡಿತದಲ್ಲಿ ತುಸು ಕಾಲವಿತ್ತು. ಎರಡನೇ ಮಹಾಯುದ್ಧದ ವೇಳೆ ದೆರ‍್ನಾದಲ್ಲಿ ಜರ್ಮನಿ ಮತ್ತು ಬ್ರಿಟಿಷ್ ಪಡೆಗಳ ನಡುವೆ ಹಣಾಹಣಿ ಕಾಳಗ ಜರುಗಿತು. 1942ರಿಂದ ಅದು ಬ್ರಿಟಿಷರ ಪಾಲಾಯಿತು. ಸ್ವಾತಂತ್ರ್ಯನಂತರ ಮೊದಲನೇ ಇದ್ರಿಸ್ ಎಂಬ ರಾಜನ ಆಳ್ವಿಕೆಯಲ್ಲಿತ್ತು. 1969ರಿಂದ 2011ರವರೆಗೆ ಮುವಮ್ಮರ್ ಗಡಾಫಿಯ ಸರ್ವಾಧಿಕಾರದ ಯುಗ. ಆತನ ಕಾಲದಲ್ಲಿ ದೆರ‍್ನಾ ಇರುವ ಪೂರ್ವ ಲಿಬಿಯಾ ಪೂರಾ ಕಡೆಗಣಿಸಲ್ಪಟ್ಟಿತ್ತು. ಶುರುವಿನಿಂದಲೆ ದೆರ‍್ನಾದ ಮಂದಿ ಗಡಾಫಿಯನ್ನು ವಿರೋಧಿಸುವವರಾಗೆ ಉಳಿದರು. ಪರಿಣಾಮ ಸರ್ಕಾರದ ಕಡೆಯಿಂದ ಜಾರಿಗೊಳ್ಳುವ ಎಲ್ಲ ಬಗೆಯ ಆಧುನಿಕ ಅಭಿವೃದ್ಧಿಗಳಿಗೆ ಸಾಕ್ಷಿಯಾಗುವ ಅವಕಾಶಗಳಿಂದ ದೆರ‍್ನಾ ವಂಚಿತಗೊಂಡಿತು.

ಸುಸಜ್ಜಿತ ಶಾಲೆಗಳಿಲ್ಲದೆ, ಆಸ್ಪತ್ರೆಗಳಿಲ್ಲದೆ, ವಾಣಿಜ್ಯ ಬೆಳವಣಿಗೆ, ನೌಕರಿ ಸೃಷ್ಟಿಸುವ ಅವಕಾಶಗಳಿಲ್ಲದೆ ನರಳಿತು. ದೆರ‍್ನಾದ ಆರ್ಥಿಕತೆ ನೆಲ ಕಚ್ಚಿತ್ತು. ನ್ಯಾಟೊ ಕೂಟ 2011ರಲ್ಲಿ ಗಡಾಫಿಯ ಸಾವಿಗೆ ಷರಾ ಬರೆಸಿದ ಮೇಲೆ ಲಿಬಿಯಾ ಮತ್ತೆ ಮತ್ತೆ ರಾಜಕೀಯ ಹೊಯ್ದಾಟಕ್ಕೆ ಒಳಗಾಯಿತು. ಸಾಮಾನ್ಯವಾಗಿ ನ್ಯಾಟೊ ಕೂಟ ಇಸ್ಲಾಮಿಕ್ ದೇಶಗಳಲ್ಲಿ ನುಗ್ಗಿದ ಎಡೆಯಲ್ಲೆಲ್ಲ ಇಸ್ಲಾಮಿಕ್ ಉಗ್ರ ಸಂಘಟನೆಗಳು ವ್ಯವಸ್ಥೆಯೊಳಗೆ ತೂರಿಕೊಂಡು ನೆತ್ತರ ಕಾಲುವೆ ಹರಿಸಿರುವುದನ್ನು ಚರಿತ್ರೆಯಲ್ಲಿ ಕಾಣಬಹುದು. ಹಾಗೆ ದೆರ‍್ನಾವನ್ನು ಹತೋಟಿಗೆ ಪಡೆವ ಅಲ್-ಖೈದಾ ಮತ್ತು ಇಸ್ಲಾಮಿಕ್ ಸ್ಟೇಟ್‌ಗಳ ಆಟ ಹೆಚ್ಚುಕಾಲ ಅಲ್ಲಿ ನಡೆಯಲಿಲ್ಲ. ಮತಾಂಧರಲ್ಲದ ದೆರ‍್ನಾ ಜನ ಈ ಕ್ರೂರ ಮೂಲಭೂತವಾದಿಗಳನ್ನೆಂದಿಗೂ ಸಹಿಸಲಿಲ್ಲ.

ತಮ್ಮೊಳಗೆ ಅವರು ಬೇರುಬಿಡದಂತೆ ಹೊರಗಟ್ಟಿದರು.

ಗಡಾಫಿಯ ನಂತರ ಇಡೀ ಲಿಬಿಯಾ ಒಳಕಾಳಗದ ಸುಳಿಗೆ ಬಿತ್ತು. ಲಿಬಿಯಾದಲ್ಲಿ ಪ್ರಜಾಪ್ರಭುತ್ವ ಸ್ಥಾಪಿಸುವೆನೆಂದು ಕೊಚ್ಚಿಕೊಂಡ ಅಮೆರಿಕಾ ಮತ್ತದರ ಬಾಲಂಗೋಸಿ ನ್ಯಾಟೊ ಕೂಟವು ಹತಾರಗಳನ್ನು ಪೊರೈಸಿ ಅಧಿಕಾರಕ್ಕೆ ಹಪಹಪಿಸುವ ದೇಶೀಯ ಪಂಗಡಗಳ ನಡುವಿನ ಹಿಂಸಾತ್ಮಕ ತಿಕ್ಕಾಟಗಳಿಗೆ ಹುಲುಸಾದ ಹಾದಿಗಳನ್ನು ತೆರೆದಿಟ್ಟಿತು. ಒಂದು ದಶಕದಲ್ಲಿ ಏಳೆಂಟು ಸಡಿಲ ಸರ್ಕಾರಗಳು ಬಂದುಹೋದವು. ಕಡೆಗೆ ಪೂರ್ವ ಲಿಬಿಯಾದಲ್ಲಿ ಬೀಡುಬಿಟ್ಟ ‘ಲಿಬಿಯಾ ರಾಷ್ಟ್ರೀಯ ಸೇನೆ’ಯ ಖಲೀಫಾ ಹಫ್ತಾರ್ ನಾಯಕತ್ವದ ಮಿಲಿಟರಿ ಸರ್ಕಾರ ಮತ್ತು ಪಶ್ಚಿಮ ಲಿಬಿಯಾದಲ್ಲಿ ನೆಲೆಗೊಂಡ ವಿಶ್ವಸಂಸ್ಥೆ ಗುರುತಿಸಲ್ಪಟ್ಟ ಹಂಗಾಮಿ ಸರ್ಕಾರಗಳ ನಡುವೆ ಈಗ ಲಿಬಿಯಾ ಹೋಳಾಗಿಹೋಗಿದೆ. ಈ ಖಲೀಫಾ ಹಫ್ತಾರ್ ಮೊದಲು ಗಡಾಫಿಗೆ ನಂಬಿಕಸ್ತನಾಗಿದ್ದು ನಂತರ ಆತನಿಗೆ ಎರಡುಬಗೆದವನು. ಸದ್ಯ ತನ್ನ ನಾಲ್ವರು ಗಂಡು ಮಕ್ಕಳೊಂದಿಗೆ ನೆಪಮಾತ್ರದ ಒಂದು ಸರ್ಕಾರ ರಚಿಸಿ ಅದರ ನೆರಳಿನಲ್ಲಿ ಪೂರ್ವ ಲಿಬಿಯಾದಲ್ಲಿ ದಬ್ಬಾಳಿಕೆ ನಡೆಸಿದ್ದಾನೆ. ಬಹಳ ಕಾಲ ಸೆಡ್ಡುಹೊಡೆದು ನಿಂತಿದ್ದ ದೆರ‍್ನಾ ಹಫ್ತಾರನ ಹಿಡಿತಕ್ಕೆ ದಕ್ಕಿರಲಿಲ್ಲ. ಎರಡು ವರುಷಗಳ ಸೆಣೆಸಾಟದ ನಂತರ 2018ರಲ್ಲಿ ದೆರ‍್ನಾದ ಮೇಲೆ ಹಫ್ತಾರನ ಸೇನೆ ಹತೋಟಿ ಸಾಧಿಸಿತು.

ನೋವಿನ ನಡುವೆಯೂ ದನಿಯೆತ್ತಿದರು

ದೆರ‍್ನಾ ಮೊನ್ನೆ ಸುನಾಮಿಯಂತಹ ನೆರೆಯಲ್ಲಿ ತೊಳೆದುಹೋದಾಗ ಕಾಟಾಚಾರಕ್ಕೆ ಪರಿಶೀಲನೆಗೆ ಬಂದಿದ್ದ ಖಲೀಫಾ ಹಫ್ತಾರನ ಮಗ ಮತ್ತು ಬ್ರಿಗೇಡಿಯರ್ ಜನರಲ್ ಸದ್ದಾಮ್ ಹಫ್ತಾರ್‌ನಿಗೆ ವರದಿಗಾರರು ‘ದೆರ‍್ನಾದ ನೆರೆದುರಂತವನ್ನು ತಡೆಯಲು ನಿಮ್ಮ ಸರ್ಕಾರ ತಕ್ಕ ಕ್ರಮ ಕೈಗೊಂಡಿಲ್ಲವೆಂಬ ಮಾತುಗಳು ಕೇಳಿಬರುತ್ತಿದೆಯಲ್ಲ’ ಎಂದು ಕೇಳಿದಾಗ ಕಾರಿಂದ ಇಳಿಯದೆಯೆ ಆತ ‘everything is going well’ ಎಂದು ಉಡಾಫೆ ಉತ್ತರ ನೀಡಿ ನುಣುಚಿಕೊಂಡ.

ಎರಡು ಅಣೆಕಟ್ಟುಗಳನ್ನು ರಿಪೇರಿ ಮಾಡಿಸದ ಹಫ್ತಾರ್ ಸರ್ಕಾರದ ಬೇಜವಾಬುದಾರಿಯನ್ನು ವಿರೋಧಿಸಿ ದೆರ‍್ನಾ ಪಟ್ಟಣಿಗರು ಕಣ್ಣೀರಿಡುತ್ತಲೆ 18.೦9.2023 ರಂದು ದೊಡ್ಡ ಪ್ರತಿಭಟನೆಯನ್ನು ನಡೆಸಿದರು. ಪ್ರಭುತ್ವಗಳನ್ನು ಪ್ರಶ್ನಿಸುವ ದೆರ‍್ನಾದ ಕೆಚ್ಚಿನ ಪರಂಪರೆಯನ್ನು ಅವರು ಹೀಗೆ ಮುಂದುವರಿಸಿದ್ದರು. ಇದರ ಬೆನ್ನಲ್ಲೆ ಹಫ್ತಾರನ ಸರ್ಕಾರವು ದೇಶಿ ಹಾಗೂ ವಿದೇಶಿ ಮಾಧ್ಯಮಗಳ ವರದಿಗಾರರಿಗೆ ವರದಿಮಾಡಬಾರದು ಮತ್ತು ಪರಿಹಾರಕಾರ್ಯಗಳಲ್ಲಿ ತೊಡಗಿಕೊಳ್ಳಲು ಇನ್ನುಮುಂದೆ ದೆರ‍್ನಾಕ್ಕೆ ಯಾರೂ ಬರಬಾರದೆಂದು ಖಡಕ್ ಸೂಚನೆ ನೀಡಿತು. ಇಂಟರ್‌ನೆಟ್ ಸಂಪರ್ಕಗಳನ್ನು ಕಡಿಯಲಾಯಿತು. ವಿದೇಶಗಳಿಂದ ಬಂದ ಪರಿಹಾರ ಸಾಮಾಗ್ರಿಗಳನ್ನು, ದೇಣಿಗೆಯನ್ನು ಸರಿಯಾಗಿ ವಿತರಿಸದೆ ಸತಾಯಿಸುವ ತಂತ್ರವನ್ನು ಅನುಸರಿಸಿತು. ಅದೆಷ್ಟೊ ಗೆಲುವಿನ ಮಿಲಿಟರಿ ಕಾಯಾಚರಣೆಗಳನ್ನು ನಡೆಸಿರುವ ಖಲೀಫಾ ಹಫ್ತಾರ್ ನೆರೆಯಿಂದ ನೊಂದವರ ಪ್ರತಿಭಟನೆಗೆ ಕಂಗಾಲಾಗಿದ್ದಾನೆ. ಹೌದು ನಿಸರ್ಗ ತಂದೊಡ್ಡುವ ಸವಾಲುಗಳನ್ನು ಯಾವ ದೊಣೆನಾಯಕನ ಮಿಲಿಟರಿ ಎದುರಿಸೀತು? ಖಲೀಫಾ ಹಫ್ತಾರ್ ಇವತ್ತಿಗೂ ದೆರ‍್ನಾದ ಜನರನ್ನು ನಂಬಿಲ್ಲ. ಅವರೊಳಗೆ ತನ್ನ ವಿರುದ್ಧ ಮುಂದೆಂದೊ ಕೊನರಬಹುದಾದ ಪ್ರತಿರೋಧದ ಬೀಜ ಇನ್ನೂ ಇದೆ ಎಂದೇ ಭಾವಿಸಿದ್ದಾನೆ.

ಬದುಕಿನ ಕಟ್ಟೆ ಒಡೆದ ಅಣೆಕಟ್ಟುಗಳು

ಈಗ ದೆರ‍್ನಾ ಪಟ್ಟಣಕ್ಕೆ ಸಮೀಪವಿರುವ ಎರಡು ಅಣೆಕಟ್ಟುಗಳ ವಿಚಾರಕ್ಕೆ ಬರೋಣ. ದೆರ‍್ನಾ ಒಂದು ವಿಶಿಷ್ಟ ಚೆಲುವಿನ ಭೌಗೋಳಿಕ ಪರಿಸರದಲ್ಲಿ ನೆಲೆಗೊಂಡಿದೆ. ಕಡಲು, ಮರಳುಗಾಡು ಮತ್ತು ಬೆಟ್ಟಗುಡ್ಡಗಳಿಂದ ಸುತ್ತುವರಿಯಲ್ಪಟ್ಟಿದೆ. ದೆರ‍್ನಾದ ಹಿನ್ನೆಲೆಗೆ ಲಿಬಿಯಾದಲ್ಲಿ ಇನ್ನೆಲ್ಲೂ ಕಾಣಬರದ ಹಸಿರು ಕುರುಚಲು ಕಾಡುಗಳಿರುವ ಜೆಬೆಲ್ ಅಕ್ಹ್ದರ್ (Green Mountains) ಬೆಟ್ಟಗುಡ್ಡಗಳಿವೆ. ವರುಷಕ್ಕೆ 20 ಇಂಚಿನವರೆಗೂ ಅವು ಮಳೆ ಪಡೆಯುತ್ತವೆ. ಪಟ್ಟಣದ ನಡುವೆ ಬೆಟ್ಟಗಳ ಕಡೆಯಿಂದ ಹರಿದುಬರುವ ದೆರ‍್ನಾವಾಡಿ ಎಂಬ ಹೊಳೆಹರಿವಿನ ಖಾಲಿ ಪಾತ್ರವಿದೆ. ಹೌದು ಈ ಹೊಳೆ ವರುಷಪೂರ್ತಿ ನರ‍್ತುಂಬಿ ಹರಿಯುವ ಪೈಕಿಯದಲ್ಲ. ಮಳೆ ಬಂದಾಗ ಬೆಟ್ಟಗಳ ಮೇಲಿನ ನೀರು ಕಿರಿದಾದ ಕಣಿವೆಗಳಲ್ಲಿ ಒಗ್ಗೂಡಿ ದೆರ‍್ನಾವಾಡಿಯಲ್ಲಿ ಹರಿದುಬರುತ್ತದೆ. ಉಳಿದಂತೆ ವರುಷದ ಬಹುಕಾಲ ಬಣಗುಡುತ್ತದೆ.

ಈ ಹೊಳೆಗೆ ಬೆಟ್ಟಗಳ ನಡುವೆ 1970ರ ದಶಕದಲ್ಲೆ ಹಿಂದಿನ ಯುಗೊಸ್ಲಾವಿಯ ಕಂಪೆನಿಯೊಂದರ ನೆರವಿನಿಂದ ಅಬುಮನ್ಸೂರ್ ಮತ್ತು ಅಲ್-ಬಿಲಾದ್ ಹೆಸರಿನ ಅಣೆಕಟ್ಟುಗಳನ್ನು ಎರಡು ಕಡೆ ಕಟ್ಟಲಾಗಿತ್ತು. ಗಡಾಫಿಯ ನಂತರ ಲಿಬಿಯಾದಲ್ಲಿ ಆಡಳಿತ ಹಳಿತಪ್ಪಿದ ಮೇಲೆ ಈ ಅಣೆಕಟ್ಟುಗಳ ನಿರ್ವಹಣೆಯನ್ನು ಬಹುತೇಕ ಕಡೆಗಣಿಸಲಾಗಿತ್ತು. ಸರ್ಕಾರಗಳು ಪದೇಪದೇ ಬದಲಾಗುತ್ತಿದ್ದುದರಿಂದ ಅಣೆಕಟ್ಟುಗಳು ಯಾರಿಗೂ ಮುಖ್ಯ ಅನಿಸಿರಲಿಲ್ಲ. ಕಾಳಗ ಗೆಲ್ಲುವುದು ಮತ್ತು ಪೆಟ್ರೊಲಿಯಮ್ ತೈಲ ಮಾರಿ ರೊಕ್ಕ ಬಾಚುವುದರ ಹೊರತಾಗಿ ಬೇರೆ ಅಜೆಂಡಾಗಳಿಲ್ಲದ ಸರ್ವಾಧಿಕಾರಿ ಹಫ್ತಾರನ ಸರ್ಕಾರಕ್ಕೆ ಈ ಎರಡು ಅಣೆಕಟ್ಟುಗಳು ಮುಂದೊಂದು ದಿನ ದೆರ‍್ನಾ ಪಟ್ಟಣಕ್ಕೆ ಮಾರಕವಾಗಬಹುದು ಎಂಬ ಕಲ್ಪನೆಯೆ ಇರಲಿಲ್ಲ. ಹಾಗೆ ನೋಡಿದರೆ ಹಿಂದೆ ದೆರ‍್ನಾ ಬೇಕಾದಷ್ಟು ಬಿರುಗಾಳಿ, ಬಿರುಮಳೆಗಳನ್ನು ಕಂಡಿದೆ. ಈ ಬಿರುಮಳೆಗಳು ಬೆಟ್ಟಗಳ ಕಡೆಯಿಂದ ತರುವ ಹಠಾತ್ ನೆರೆಯನ್ನು ತಡೆಯಲೆಂದೆ ಎರಡು ಅಣೆಕಟ್ಟುಗಳನ್ನು ಕಟ್ಟಿದ್ದು. ನೆರೆ ತಡೆಯುವುದರ ಜೊತೆಗೆ ನೀರಿರುವಷ್ಟು ಕಾಲ ಕುಡಿಯುವ ನೀರು, ವಿದ್ಯುತ್ ತಯಾರಿಕೆ ಮತ್ತು ಬೇಸಾಯದ ಚಟುವಟಿಕೆಗಳಿಗೆ ಅಣೆಕಟ್ಟುಗಳ ನೀರನ್ನು ಬಳಸಿಕೊಳ್ಳಲಾಗುತ್ತಿತ್ತು.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಹಿಂದೂಗಳಿಂದ ಚಪ್ಪಲಿ ಕ್ಲೀನ್ ಮಾಡಿಸುತ್ತೇನೆಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆನ್ನುವುದಕ್ಕೆ ಆಧಾರಗಳಿಲ್ಲ!

ಕಳೆದ ಇಪ್ಪತ್ತು ವರುಷಗಳಿಂದೀಚೆಗೆ ಈ ಅಣೆಕಟ್ಟುಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದವು. ಹಲವು ಬಾರಿ ಸರ್ಕಾರಗಳಿಗೆ ದುರಸ್ತಿ ಮಾಡಿಸಲು ಒತ್ತಾಯ, ಬೇಡಿಕೆ, ಕೋರಿಕೆ, ಅಹವಾಲುಗಳು ಸಲ್ಲಿಸಲ್ಪಟ್ಟಿದ್ದವು. ಮೊನ್ನಿನ ನೆರೆಗೆ ಕೆಲವೇ ದಿನಗಳ ಮೊದಲು ಪಟ್ಟಣದ ಹಲವರು ಸಭೆಸೇರಿ ರಿಪೇರಿಗೆ ಒತ್ತಾಯಿಸುವ ಗೊತ್ತುವಳಿಯನ್ನು ಅಂಗೀಕರಿಸಿದ್ದರು. ಅಜ್ದಾಬಿಯ ವಿಶ್ವವಿದ್ಯಾನಿಲಯದ ಭೂವಿಜ್ಞಾನಿ ಸಲೇಹ್ ಎಮ್ಹಾನ್ನ ‘ಹಿಂದಿನಿಂದಲೂ ಮೇಲಿಂದಮೇಲೆ ನೆರೆಗಳಿಗೆ ತುತ್ತಾಗಿರುವ ಈ ಅಣೆಕಟ್ಟುಗಳನ್ನು ನೆಚ್ಚಿಕೊಳ್ಳುವಂತಿಲ್ಲ. ಅವು ತಮ್ಮ ಕಸುವು ಕಳೆದುಕೊಂಡಿವೆ’ ಎಂದು ಮಾಧ್ಯಮಗಳ ಜೊತೆಗಿನ ಮಾತುಕತೆಯಲ್ಲಿ ಎಚ್ಚರಿಸಿದ್ದರು. ಹಾಗೆಯೆ ಒಮರ್ ಅಲ್-ಮುಖ್ತಾರ್ ವಿಶ್ವವಿದ್ಯಾನಿಲಯದ ‘ಹೈಡ್ರಾಲಜಿಸ್ಟ್’ ಅಬ್ದೆಲ್‌ವಾನೀಸ್ ಅಶೂರ್ ‘ದೆರ‍್ನಾ ಇರುವ ತಾಣ ನೆರೆಗೆ ಹೇಳಿಮಾಡಿಸಿದಂತಿದೆ.

1942ರಿಂದ ಅದು ಐದು ದೊಡ್ಡ ನೆರೆಗಳನ್ನು ಕಂಡಿದೆ. ಅಣೆಕಟ್ಟುಗಳು ಎಷ್ಟುಬೇಗ ದುರಸ್ತಿಯಾಗುತ್ತವೊ ಅಷ್ಟೂ ಒಳ್ಳೆಯದು’ ಎಂದು ತಮ್ಮ ಸಂಶೋಧನಾ ಬರಹದಲ್ಲಿ ಎಚ್ಚರಿಸಿದ್ದರು. 2012-13ರಲ್ಲಿ 20 ಲಕ್ಷ ಡಾಲರುಗಳನ್ನು ಅವುಗಳ ರಿಪೇರಿಗೆ ಬಿಡುಗಡೆ ಮಾಡಿದ್ದರೂ ಅವು ಅಣೆಕಟ್ಟಿನ ಪಾಲಾಗುವ ಬದಲು ಸರ್ಕಾರಿ ಭ್ರಷ್ಟರ ಪಾಲಾಗಿದ್ದವು ಎಂಬುದನ್ನು 2021ರ ಸರ್ಕಾರಿ ಆಡಿಟಿಂಗ್‌ನಿಂದಲೇ ತಿಳಿದುಬಂದಿತ್ತು. ಹಾಗೆ ನೋಡಿದರೆ ಈ ಅಣೆಕಟ್ಟುಗಳು ಮಾತ್ರವಲ್ಲ, ಇನ್ನೂ ಬಹಳಷ್ಟು ಅತ್ಯಗತ್ಯದ ತಳರಚನೆಯ ಅನುಕೂಲಗಳನ್ನು ಲಿಬಿಯಾದಲ್ಲಿ ಕಡೆಗಣಿಸಲಾಗಿದೆ. ಒಂದು ದೇಶದಲ್ಲಿ ಒಂದು ಸರ್ಕಾರವಿದ್ದೆ ಎಷ್ಟೋ ಯಡವಟ್ಟುಗಳು ಜರುಗುತ್ತವೆ. ಇನ್ನು (ಪರಸ್ಪರ ಕತ್ತಿಮಸೆಯುವ) ಎರಡು ಸರ್ಕಾರಗಳಿದ್ದರೆ ಬಿಡಿಸಿ ಹೇಳಬೇಕೆ? ಹೀಗಾಗಿ ಲಿಬಿಯಾದ ಜನರ ಪರಿಸ್ಥಿತಿ ಈಗ ತೀರ ಕಳಪೆಯಾಗಿದೆ. ಇಡೀ ದೇಶದ ಕತೆಯೆ ಹೀಗಿರುವಾಗ ದೆರ‍್ನಾದ ಕತೆ ಬೇರೆಯಿರಲು ಸಾಧ್ಯವೆ?

ಡೇನಿಯಲ್ ಎಂಬ ‘ಡೆವಿಲ್’

ಮೆಡಿಟರೇನಿಯನ್ ಕಡಲು ಮತ್ತು ಅದರ ಆಸುಪಾಸಿನ ಯುರೋಪ್, ಏಶಿಯಾ ಮತ್ತು ಆಫ್ರಿಕಾದ ತಾಣಗಳು ಬೇಸಗೆಯಲ್ಲಿ ಮುಂಚಿನಂತೆ ಜೀವಸಂಕುಲಗಳು ತಾಳಬಲ್ಲ ತಾಪವನ್ನು ದಾಖಲಿಸುತ್ತಿಲ್ಲ. ನಿಡುಗಾಲದ ಬಿಸಿಯಲೆಗಳ ಹೊಡೆತ ಮತ್ತು ಅಸಹನೀಯ ತಾಪದೇರಿಕೆಗೆ ತುತ್ತಾಗುತ್ತಿವೆ. ಸ್ಪೇಯಿನ್, ಫ್ರಾನ್ಸ್, ಇಟಲಿ, ಮಾಲ್ಟಾ, ಅಲ್ಬೇನಿಯಾ, ಕ್ರೊಯೇಶಿಯ, ಗ್ರೀಸ್, ಸೈಪ್ರಸ್, ಟರ್ಕಿ, ಲೆಬನಾನ್, ಟ್ಯುನಿಸಿಯಾ, ಅಲ್ಜೀರಿಯಾ, ಮೊರೊಕ್ಕೊ ಮುಂತಾದ ದೇಶಗಳು 2021ರಿಂದೀಚೆಗೆ ಸಾಲುಸಾಲು ಕಾಡ್ಗಿಚ್ಚುಗಳಿಗೆ ಸಿಕ್ಕು ಬೇಯುತ್ತಿವೆ. ಒಟ್ಟಾರೆ ಮೆಡಿಟರೇನಿಯನ್ ಕಡಲು ಹೆಚ್ಚೆಚ್ಚು ಬಿಸಿಯಾಗುತ್ತ ಹೆಚ್ಚೆಚ್ಚು ನೀರಾವಿಯ ಮೋಡಗಳನ್ನು ಉತ್ಪಾದಿಸಿ ಆಗಸಕ್ಕೆ ಕಳಿಸುತ್ತಿದೆ. ಸಹಜವಾಗಿ ಅಲ್ಲಿ ಅತ್ಯಂತ ‘ಕೊಲೆಗಡುಕ’ ಸೈಕ್ಲೋನುಗಳೇಳುವ ಸಾಧ್ಯತೆ ಮತ್ತು ಮಳೆಯ ಪ್ರಮಾಣವೂ ಹೆಚ್ಚುತ್ತಿವೆ. ವಿಶ್ವಸಂಸ್ಥೆಯ ಹವಾಮಾನ ಪರಿಣಿತರು ಈ ಸಂಬಂಧ ಎಚ್ಚರಿಸುತ್ತಲೇ ಬಂದಿದ್ದಾರೆ. ಹಾಗೆ ನೋಡಿದರೆ ಮೆಡಿಟರೇನಿಯನ್ ಕಡಲು ಪೆಸಿಫಿಕ್, ಅಟ್ಲಾಂಟಿಕ್ ಮತ್ತು ಇಂಡಿಯನ್ ಹೆಗ್ಗಡಲುಗಳಂತಲ್ಲ, ಅತಿಕಮ್ಮಿ ಹರಹನ್ನು ಹೊಂದಿದ್ದು ಭಾರೀ ದೊಡ್ಡ ಸೈಕ್ಲೋನುಗಳಿಗೆ ಹುಟ್ಟುಕೊಡುವಷ್ಟು ನೀರಿನ ಸಂಗ್ರಹವನ್ನು ಪಡೆದಿಲ್ಲ. ಹೆಚ್ಚೆಂದರೆ 1ನೇ ಪಂಗಡದ ಸೈಕ್ಲೋನುಗಳಿಗದು ತವರುಮನೆ ಅಷ್ಟೆ. ಇದು ಈವರೆಗಿನ ತಿಳುವಳಿಕೆ. ಆದರೆ ವಾತಾವರಣದ ತಾಪದ ಸತತ ಏರಿಕೆ ತಿಂಗಳುಗಟ್ಟಲೆ ದಾಖಲಾಗುತ್ತಿರುವುದು ಮತ್ತು ಅದರ ಹರಡಿಕೆ ಹೆಚ್ಚುತ್ತಿರುವುದಕ್ಕೆ ಈ ಪುಟ್ಟ ಕಡಲೂ ಈಗ ತಲ್ಲಣಗೊಂಡಿದೆ. ಕಳೆದ 40 ವರುಷಗಳಲ್ಲಿ ಮೆಡಿಟರೇನಿಯನ್ ಕಡಲಿನ ಸರಾಸರಿ ತಾಪ 2 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಿದೆ. ಸ್ಪೇಯಿನಿನ Mediterranean Center for Environmental Studies  ಸಂಸ್ಥೆಯ ಅಧ್ಯಯನದ ಪ್ರಕಾರ ಈ ವರುಷ ಬೇಸಗೆಯ ಜುಲೈ ಮತ್ತು ಆಗಸ್ಟ್‌ಗಳಲ್ಲಿ ಮೆಡಿಟರೇನಿಯನ್ ಕಡಲಿನ ಸರಾಸರಿ ತಾಪ ಈವರೆಗಿನ ಅತಿ ಹೆಚ್ಚು ಅಂದರೆ 28 ಡಿಗ್ರಿ ಸೆಲ್ಸಿಯಸ್‌ಗೇರಿತ್ತು. ವರುಷಕ್ಕೊಂದು ಬಾರಿ ಉಷ್ಣವಲಯದಲ್ಲೇಳುವಂತಹ ಬಿರುಸಿನ ಸೈಕ್ಲೋನು ಬೇಸಗೆಯ ಕಡೆಯಲ್ಲಿ ಮೆಡಿಟರೇನಿಯನ್ ಕಡಲಿನಲ್ಲಿ ಏಳುತ್ತದೆ. ಈ ಹಿಂದೆ ಇಂತಹವು ಎದ್ದಿದ್ದರೂ ದೆರ‍್ನಾವನ್ನು ಅಪ್ಪಳಿಸಿದ ಡೇನಿಯಲ್ ತರಹ ಈಪಾಟಿ ಗಾಬರಿ ಹುಟ್ಟಿಸಿರಲಿಲ್ಲ, ಅತಿ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಮಳೆಯನ್ನು ಸುರಿದಿರಲಿಲ್ಲ.

ಡೇನಿಯಲ್ ಸೈಕ್ಲೋನು ಸೆಪ್ಟೆಂಬರ್ 9ರಂದು ಲಿಬಿಯಾಕ್ಕೆ ಆಗಮಿಸುವ ಮೊದಲು ಗ್ರೀಸ್, ಬಲ್ಗೇರಿಯಾ, ಟರ್ಕಿಗಳ ಮೇಲೆ ೩೫ ಇಂಚಿನಷ್ಟು (910 ಮಿ.ಮೀ.) ಮಳೆ ಸುರಿಸಿ ಸಾಕಷ್ಟು ಹಾವಳಿ ನಡೆಸಿಯೇ ಬಂದಿತ್ತು. ಅದೇನು ಒಮ್ಮೆಲೆ ಎದ್ದು ಎರಗಿದ್ದಲ್ಲ. ಆಡಳಿತಗಳಿಗೆ ಎಚ್ಚರಗೊಳ್ಳಲು ಸಾಕಷ್ಟು ಸಮಯ ನೀಡಿಯೇ ಇತ್ತು. ಮನುಷ್ಯ ಪುಸಲಾಯಿಸಿದ ಹವಾಮಾನ ಬದಲಾವಣೆಯು ಮೆಡಿಟರೇನಿಯನ್ ಪ್ರದೇಶದಲ್ಲಿ ಡೇನಿಯಲ್ ತರಹದ ಸೈಕ್ಲೋನುಗಳ ಸಾಧ್ಯತೆಯನ್ನು ಶೇಕಡಾ 50ರಷ್ಟು ಹೆಚ್ಚಿಸಿದೆ ಮತ್ತು ಶೇಕಡಾ 40ರಷ್ಟು ಮಳೆಯ ಹೆಚ್ಚಳವನ್ನು ದಾಖಲಿಸಬಹುದಾಗಿದೆ ಎಂದು ಹವಾಮಾನ ಪರಿಣಿತರು ಲೆಕ್ಕಿಸಿದ್ದಾರೆ. ಲಿಬಿಯಾ ಇರುವ ಉತ್ತರ ಆಫ್ರಿಕಾ ಇನ್ನುಮುಂದೆ ಡೇನಿಯಲ್‌ನಂತಹ ಸೈಕ್ಲೋನುಗಳ ಹೊಡೆತಕ್ಕೆ ಮತ್ತೆಮತ್ತೆ ಸಿಲುಕಬಹುದಾಗಿದೆ ಎಂದೂ ಕಳವಳಪಟ್ಟಿದಾರೆ. ಆದರೆ ಲಿಬಿಯಾದ ನಿಗ್ಗೇಡಿ ಸರ್ಕಾರಗಳಿಗೆ ಇಂತಹ ಲೆಕ್ಕಾಚಾರಗಳು ಬೇಕಿಲ್ಲ. ಅವಕ್ಕೆ ಮತೀಯ ಜಿಗುಟುತನವನ್ನು ಕಾಪಾಡಿಕೊಳ್ಳುವುದು, ಅಮೆರಿಕಾದಿಂದ ಯುದ್ಧಹತಾರಗಳನ್ನು ಕೊಳ್ಳುವುದು, ಕಚ್ಚಾತೈಲ ಮತ್ತು ನೈಸರ್ಗಿಕ ಅನಿಲಗಳಿಂದ ಲಾಭ ಹಿರಿಯುವುದು, ಅಧಿಕಾರವನ್ನು ಮಡುಗಟ್ಟಿಸಿಕೊಳ್ಳಲು ರಾಜಕಾರಣಕ್ಕೆ ಧರ್ಮ ಬೆರೆಸುವುದು, ಪದೇಪದೇ ಸೆಣಸಾಡುತ್ತ ಹಗೆತನದ ಪೈಶಾಚಿಕ ಹಸಿವನ್ನು ತಣಿಸಿಕೊಳ್ಳುವುದು ಇಷ್ಟೇ ಮುಖ್ಯವಾದ್ದರಿಂದ ವಿಜ್ಞಾನದ ಬೆಳವಣಿಗೆ ಮತ್ತು ನಿಸರ್ಗದ ಕುರಿತು ಹೆಚ್ಚುವರಿ ತಿಳುವಳಿಕೆ ಎರಡೂ ಬೇಕಿಲ್ಲ.

ದೆರ‍್ನಾದ ಜನಕ್ಕೂ ತೀರ ನಾಟಕೀಯವಾಗಿ ಬದಲಾಗುತ್ತಿರುವ ಜಗತ್ತಿನ ನಿಸರ್ಗದ ಅರಿವಿರಲಿಲ್ಲವೇನೊ. ಪ್ರಜಾಪ್ರಭುತ್ವ ಎಷ್ಟೆ ಕಳಪೆಯಾಗಿದ್ದರೂ ಅದರ ಎಲ್ಲೋ ಒಂದು ಮೂಲೆಯಲ್ಲಿ ಆಡಳಿತಗಳು ಮತ್ತು ಅಧಿಕಾರಸ್ಥರನ್ನು ಪ್ರಶ್ನಿಸಲು ಪುಟ್ಟ ನೆಲೆ ಮತ್ತು ಗಟ್ಟಿ argumentಗಳಾದರೂ ಇರುತ್ತವೆ. ಮತಾತೀತವಾಗಿ ಎಲ್ಲರನ್ನೂ ಒಳಗೊಳ್ಳುವ ದರ‍್ನಾದಲ್ಲಿ ಪ್ರಶ್ನಿಸುವ ದನಿಗಳಿದ್ದವು. ಆದರೆ ಅವಕ್ಕೆ ಹುರುಪು ಕೊಡುವಂತಹ progressive ಚಳವಳಿಗಳ ನೆರವಿಲ್ಲವಾದ್ದರಿಂದ ಅಲ್ಲೆಂದೂ ಹವಾಮಾನ ಬದಲಾವಣೆಯ ಚರ್ಚೆ ಮುನ್ನೆಲೆಗೆ ಬರಲಿಲ್ಲ. ಅಣೆಕಟ್ಟುಗಳೊಡ್ಡಬಹುದಾದ ಮರಣಾಂತಿಕ ಸವಾಲನ್ನು ಡೇನಿಯಲ್ ಹಿಡಿದ ಕನ್ನಡಿಯಲ್ಲಿ ಮುಂದಾಗಿ ಕಾಣಲು ದೆರ‍್ನಾದ ಆಡಳಿತಗಳಿಗೆ ಸಾಧ್ಯವಾಗಲಿಲ್ಲ.

ಡೇನಿಯಲ್ ಸೈಕ್ಲೋನು 24 ತಾಸುಗಳಲ್ಲಿ 411.1ಮಿ.ಮೀ.ನಷ್ಟು (16.3೦ ಇಂಚುಗಳು) ಮಳೆಯನ್ನು ದೆರ‍್ನಾದ ಪರಿಸರದಲ್ಲಿ ಸುರಿಸಿತ್ತು. ಸಾಮಾನ್ಯವಾಗಿ ಸೆಪ್ಟೆಂಬರ್‌ನಲ್ಲಿ ಸರಾಸರಿ 1.5 ಮಿ.ಮೀ. ಮಳೆಬೀಳುವ ಕಡೆ ಸೈಕ್ಲೋನೊಂದು ತರಬಹುದಾದ ಹೆಚ್ಚುವರಿ ಮಳೆಯ ಬಗ್ಗೆ ಆಡಳಿತಗಳಿಗೆ ಒಂದು ಅಂದಾಜು ಇರಲೇಬೇಕಿತ್ತು. ವರುಷಕ್ಕೆ ದೆರ‍್ನಾ ಪಡೆಯುವ ಮಳೆಯೆ ಸರಾಸರಿ 274 ಮಿ.ಮೀ.ಗಳು (10.8ಇಂಚುಗಳು). ಲಿಬಿಯಾದ ಹವಾಮಾನ ಇಲಾಖೆ ಡೇನಿಯಲ್ ಅಪ್ಪಳಿಸುವ ಮೂರು ದಿನ ಮುಂಚೆ ಮುನ್ಸೂಚನೆಯನ್ನೇನೊ ನೀಡಿತ್ತು. ಖಲೀಫಾ ಹಫ್ತಾರನ ಸರ್ಕಾರ ಈ ಮುನ್ಸೂಚನೆಯನ್ನು ದೆರ‍್ನಾ ನಿವಾಸಿಗಳಿಗೆ ತಿಳಿಸಿತ್ತಂತೆ. ಕಡಲಿನಿಂದ ಹೆದ್ದೆರೆಗಳೆದ್ದು ಹೊಳೆಪಾತ್ರದ ಮೂಲಕ ಪಟ್ಟಣದೊಳಕ್ಕೆ ನುಗ್ಗಿ ನೆರೆ ತರಬಹುದೆಂದು ಭಾವಿಸಿ ಕಡಲು ಮತ್ತು ಹೊಳೆದಡದ ಜನಗಳಿಗೆ ಸುರಕ್ಷಿತ ತಾಣಗಳಿಗೆ ಹೊರಟುಹೋಗಿ ಎಂತಲೂ ಸೂಚಿಸಿತ್ತಂತೆ. ತಪ್ಪಿದ್ದುದು ಇಲ್ಲೇ. ಸರ್ಕಾರ ಬೆಟ್ಟಗಳ ಕಡೆಯಿಂದ ಬರುವ ನೆರೆಯನ್ನು ಎದುರುನೋಡುವ ಬದಲು ಕಡಲಿನ ಕಡೆಯಿಂದ ಎರಗಬಹುದಾದ ಅಪಾಯವನ್ನು ಎದುರುನೋಡಿತ್ತು. ದೆರ‍್ನಾದ ಜನರೂ ಇಲ್ಲೆ ತಪ್ಪಿದರೇನೊ. ಆದರೆ ಡೇನಿಯಲ್ ಮಾಮೂಲಿನಂತಿರಲಿಲ್ಲ.

ಅಪರ ಹೆಂಡ ಹೀರಿ ಚಿತ್ತಾದ ಕುಡುಕನಂತೆ ಹೇಗೇಗೊ ಚಲಿಸಿಬಂದ ಅದು ಯಾವ ಕಡೆಯಿಂದಲಾದರು ನೆರೆ ತರಬಹುದಾಗಿತ್ತು. ಗ್ರೀಸ್, ಬಲ್ಗೇರಿಯಾ, ಟರ್ಕಿಗಳಲ್ಲಿ ಅದು ಎಸಗಿಬಂದ ಹಾವಳಿಯ ಕಡೆ ಒಮ್ಮೆ ಗಮನ ಹರಿಸಿದ್ದರೂ ಸಾಕಿತ್ತು, ದೆರ‍್ನಾದ ಬಡಪಾಯಿಗಳನ್ನು ಬಚಾವು ಮಾಡಬಹುದಿತ್ತೇನೊ. ಈ ಹಿಂದಿನ ನೆರೆ ಅನುಭವಗಳ ಮೇಲೆ ಹೊಳೆದಡಕ್ಕೆ ಹತ್ತಿರವಿದ್ದವರನ್ನಾದರೂ ಸುರಕ್ಷಿತ ತಾಣಗಳಿಗೆ ಒಯ್ಯಬಹುದಿತ್ತು. ಆದರೆ ಹಫ್ತಾರನ ಸರ್ಕಾರದ ಮಿದುಳಿಗೆ ಇದೆಲ್ಲ ಹೊಳೆಯಬೇಕಿತ್ತಲ್ಲ. ಈ ಎಲ್ಲ ಕೊರೆಗಳ ನಡುವೆ ಅಣೆಕಟ್ಟುಗಳು ತಮ್ಮ ಕೈಚಳಕ ತೋರಿಸಲು ಕಾದಿದ್ದವೇನೊ. ಮೊದಲು ಅಬುಮನ್ಸೂರ್ ಅಣೆಕಟ್ಟು ಒಡೆಯಿತು, ಅದರ ನೀರು ಹುಚ್ಚುವೇಗದಲ್ಲಿ ನುಗ್ಗಿಬಂದು ಪಟ್ಟಣಕ್ಕೆ ಸಮೀಪವಿದ್ದ ಅಲ್-ಬಿಲಾದ್ ಅಣೆಕಟ್ಟಿನ ಮೇಲೆ ಮುಗ್ಗರಿಸಿಬಿತ್ತು. ಅದೂ ಒಡೆದು ಬಹುಶಃ ಈತನಕ ಇಡೀ ಆಫ್ರಿಕಾ ಖಂಡದ ಚರಿತ್ರೆಯಲ್ಲಿ ಯಾರೂ ಕಲ್ಪಿಸದಿದ್ದ ಮತ್ತು ಕಾಣದಿದ್ದ deadliest ನೆರೆಗೆ ಟಿಪ್ಪಣಿ ಬರೆಯಿತು. ಹವಾಮಾನ ಬದಲಾವಣೆಗಳ ಬಗ್ಗೆ ಮುನ್ನರಿವಿಲ್ಲದಿರುವ ಹೆಗಲಿಗೆ ಆಡಳಿತದ ಅಸಡ್ಡೆಗಳ ಹೆಗಲು ಕೂಡಿಕೊಂಡುದರ ಪರಿಣಾಮವೇ ದೆರ‍್ನಾದ ಕೊಲೆಗಡುಕ ನೆರೆ. ಚರಿತ್ರೆಯುದ್ದಕ್ಕೂ ಹೆಚ್ಚಾಗಿ ಮನುಷ್ಯನ ಕಾರಣಕ್ಕೆ ಪ್ರತಿಭಟಿಸಿ ನೋವು, ಯಾತನೆಗಳನ್ನು ಕಂಡ ದೆರ‍್ನಾ ಸದ್ಯ ನಿಸರ್ಗದ ತುಳಿತಕ್ಕೆ ಹೊಸಗಿಹೋಗಿದೆ.

ದುವಸ್ಥೆಗೆ ದುರ್ಬೀನು ಹಿಡಿದರೆ…

World Meteorological Organisation ನ ಕಾರ್ಯದರ್ಶಿ ಪೆಟೆರಿ ತಾಲಾಸ್ ಲಿಬಿಯಾದ ಹವಾಮಾನ ಇಲಾಖೆಯ ದುರವಸ್ಥೆಯ ಬಗ್ಗೆ ಹೇಳಿದ್ದಾರೆ. ಅಲ್ಲಿ ಅಗತ್ಯವಿರುವಷ್ಟು ಸಂಖ್ಯೆಯಲ್ಲಿ ವಿಜ್ಞಾನಿಗಳು ಮತ್ತು ಸಿಬ್ಬಂದಿಗಳಿಲ್ಲ. ಕಾಲಕಾಲಕ್ಕೆ ಅಗತ್ಯವಿರುವ ತಾಂತ್ರಿಕ ಅನುಕೂಲಗಳು ಸೇವೆಗೆ ಸೇರ್ಪಡೆಗೊಳ್ಳುವುದಿಲ್ಲ. ಮಾಹಿತಿ ತಂತ್ರಜ್ಞಾನ ಬಹಳ ಹಿಂದುಳಿದಿದೆ. ಹವಾಮಾನದ ಕುರಿತು ಪಡೆಯುವ ದತ್ತಾಂಶಗಳಲ್ಲಿ ನಿರಂತರತೆ ಇಲ್ಲ. ಲಿಬಿಯಾದ ಸರ್ಕಾರಗಳು ಮತ್ತು ಸ್ಥಳೀಯ ಆಡಳಿತಗಳು ಸರಿಹೊತ್ತಿನಲ್ಲಿ ನೆರೆಪಾತ್ರದ ಜನರನ್ನು ಎಚ್ಚರಿಸಿ ಸ್ಥಳಾಂತರಿಸಿದ್ದರೆ ಸಾಕಷ್ಟು ಜೀವಹಾನಿಯನ್ನು ತಪ್ಪಿಸಬಹುದಿತ್ತು ಎಂದೂ ಅವರು ಹೇಳಿದ್ದಾರೆ. ವಿಪತ್ತುಗಳನ್ನು ಹೇಗೆ ಎದುರಿಸಬೇಕು ಮತ್ತು ಪರಿಹಾರದ ಕಾರ್ಯಗಳಿಗೆ ಹೇಗೆ ಮುಂದಾಗಬೇಕು ಎಂಬುದನ್ನು ನಿಖರಗೊಳಿಸಲು ಹವಾಮಾನ ಇಲಾಖೆಗಳು ನೀಡುವ ಮುನ್ಹೊಳಹುಗಳು ಬಹಳ ನೆರವಾಗುತ್ತವೆ. ಲಿಬಿಯಾ ಈ ವಿಚಾರದಲ್ಲಿ ಬಹಳ ಹಿಂದುಳಿದಿದೆ. ಹಾಗೆಂದು ಸುಸಜ್ಜಿತ ಸರ್ಕಾರವಿರುವ ಕಡೆ ಎಲ್ಲವೂ ಸರಾಗವಾಗಿ, ಸಲೀಸಾಗಿ ನಿಭಾಯಿಸಲ್ಪಡುತ್ತವೆ ಎಂದು ನೆಮ್ಮುಗೆಯಿಂದ ಇರುವಂತಿಲ್ಲ. ಅಲ್ಲಿ ಹವಾಮಾನ ಇಲಾಖೆಗಳು ಚೆನ್ನಾಗಿ ಕೆಲಸ ನಿರ್ವಹಿಸಬಹುದು.

ಆದರೆ ಸರ್ಕಾರಗಳು ಹಾಗೆ ಮಾಡುತ್ತವೆ ಎನ್ನುವಂತಿಲ್ಲ. ಉತ್ತರಾಖಂಡದ ಹೆಮ್ಮಳೆ ಮತ್ತು ನೆಲಕುಸಿತಗಳು, ಪಾಕಿಸ್ತಾನದ ಹೆನ್ನೆರೆ, ಇಂಗ್ಲೆಂಡಿನ ಬಿಸಿಯಲೆಗಳು, ಸ್ಪೇಯಿನಿನ ಬರಗಾಲ, ಕೆನಡಾದ ಕಾಡ್ಗಿಚ್ಚುಗಳು, ಅಮೆರಿಕಾದ ಬಾಂಬ್ ಸೈಕ್ಲೋನಿನ ಸಂದರ್ಭಗಳಲ್ಲಿ ಸಂಬಂಧಿಸಿದ ಸರ್ಕಾರಗಳು (ತೋರಿಸಿಕೊಳ್ಳದಿದ್ದರೂ) ಕಂಗಾಲಾಗಿದ್ದುದನ್ನು ಕಂಡಿದ್ದೇವೆ. ಹೀಗೆ ಯಾಕೆಂದರೆ ಹವಾಮಾನ ಬದಲಾವಣೆಯನ್ನು ಇನ್ನೂ ಗಂಭೀರವಾಗಿ ಪರಿಗಣಿಸದಿರುವ ಸರ್ಕಾರಗಳ ಜಡ್ಡುತನ, ಸರಿಹೊತ್ತಿಗೆ ಎಚ್ಚರಗೊಳ್ಳದಿರುವ ಹೊಣೆಗೇಡಿತನಗಳು ಅಷ್ಟೆ. ಮುಂದೆ ಹೀಗಾಗಬಾರದಲ್ಲವೆ?ಮುಂಬರುವ ದಿನಗಳು ನಾವೆಲ್ಲ ಮೈಮರೆತು ಬದುಕುವ ದಿನಗಳಲ್ಲ. ಜಗತ್ತಿನ ಯಾವ ತಾಣವೂ ಸುರಕ್ಷಿತವಲ್ಲ. ನಿಸರ್ಗದಲ್ಲಿ ಅತಿಮಳೆ, ತೀವ್ರಬರ, ನೆರೆ, ಕಾಡ್ಗಿಚ್ಚು, ಸೈಕ್ಲೋನುಗಳು, ಬಿರುಸಿನ ಧೂಳು ಮತ್ತು ಮರಳುಗಾಳಿಗಳು, ಅಸಹಜ ಗಾತ್ರದ ಆಲಿಕಲ್ಲುಗಳ ದಾಳಿ, ಬಿಸಿಯಲೆಗಳು, ಅತಿಚಳಿ, ಅತಿಮಂಜು ಹೀಗೆ ಹಲವು ಅತಿರೇಕದ ಬದಲಾವಣೆಗಳಲ್ಲಿ ಯಾವುದಾದರೂ ಒಂದು ಸ್ಥಳೀಯ ಭೌಗೋಳಿಕ ಸನ್ನಿವೇಶಕ್ಕೆ ತಕ್ಕಂತೆ ಈಗ ಯಾವಾಗ ಬೇಕಾದರೂ ಒಕ್ಕರಿಸಬಹುದು. ನಾವು ಅವುಗಳ ಬಗ್ಗೆ ಮೂಲಭೂತ ಮಾಹಿತಿಗಳನ್ನು ಪಡೆದು ಎಚ್ಚರದಿಂದಿರಬೇಕು. ವಿಪತ್ತು ಎರಗಿದಾಗ ನೆರವಿಗೆ ಧಾವಿಸಲು ಸರ್ಕಾರಗಳು ಸದಾ ಸಜ್ಜಾಗಿರಬೇಕು. ಮಾಧ್ಯಮಗಳು ಆಳುವವರ ಮುಖಸ್ತುತಿ ಬಿಟ್ಟು ಹವಾಮಾನ ಬದಲಾವಣೆಯ ವಿಚಾರಗಳನ್ನು ಜನರಿಗೆ ತಲುಪಿಸುವ ತುಡಿತ ಹೊಂದಿರಬೇಕು. ಬೇಜವಾಬುದಾರಿ ಆಡಳಿತಗಳ ಅಸಡ್ಡೆಯನ್ನು ಜನ ಅಸಡ್ಡೆ ಮಾಡಬಾರದು.

***

ಕವಿಯ ವಿದಾಯ

ಮಳೆ
ಬೀದಿಗಳನು ತೋಯಿಸಿದೆ
ಕೈಚೆಲ್ಲಿದ ಸರ್ಕಾರವನ್ನು,
ಗುತ್ತಿಗೆದಾರನ ತಗಲೂಫಿಯನು
ಹೊರಗೆಡಹಿದೆ

ಮಳೆ
ಎಲ್ಲವನು ತೊಳೆದೊಯ್ಯುತ್ತದೆ
ಹಕ್ಕಿಯ ಗರಿಗಳನ್ನು,
ಬೆಕ್ಕಿನ ತುಪ್ಪಳವನ್ನು

ಮಳೆ
ಬಡವರಿಗೆ ನೆನಪಿಸುತ್ತದೆ
ಅವರ ಲಡ್ಡು ಚಾವಣಿಗಳನು
ತೊಟ್ಟ ಚಿಂದಿ ಬಟ್ಟೆಗಳನು

ಮಳೆ
ಕಣಿವೆಗಳನು
ಜೋಂಪಿನಿಂದೆಚ್ಚರಿಸುತ್ತದೆ
ಪಸೆಯಿರದ ಮಣ್ಣಪದರುಗಳನು
ಅಲುಗಿಸಿ ಎಬ್ಬಿಸುತ್ತದೆ
ದೂಳೆದ್ದು ಆಕಳಿಸುತ್ತದೆ

ಮಳೆ
ಒಳ್ಳೆಯತನದ ಕುರುಹು
ಭರವಸೆಯ ನೆರವು
ಒಂದು ಎಚ್ಚರಿಕೆಯ ಗಂಟೆ

ದೆರ‍್ನಾವನ್ನು ಲಿಬಿಯಾದ ‘ಹೊಸ ಆಲೋಚನೆಗಳ ಶಹರ’ (The City of Intellectualism) ಎಂದು ಕರೆಯಲಾಗುತ್ತದೆ. ರಂಗ ಪ್ರಯೋಗಗಳಿಗೆಂದು ಲಿಬಿಯಾದ ಮೊದಲ ಥಿಯೇಟರನ್ನು ಕಟ್ಟಿಕೊಂಡವರು ದೆರ‍್ನಾದ ಮಂದಿ. ಕಲಾವಿದರು, ಬರಹಗಾರರು ಕಾಲಕಾಲಕ್ಕೆ ದೆರ‍್ನಾದ ಚರಿತ್ರೆಯಲ್ಲಿ ಆರೋಗ್ಯಕರ ಚರ್ಚೆಗಳನ್ನು ಹುಟ್ಟುಹಾಕಿ ಸಲಹುತ್ತ ಬಂದಿದ್ದಾರೆ. ಚರಿತ್ರೆಯುದ್ದಕ್ಕೂ ದೆರ‍್ನಾ ಪ್ರತಿರೋಧದ ಕುಲುಮೆಯಾಗುಳಿಯಲು ಈ ಚರ್ಚೆಗಳೇ ಕಾರಣ. ಒಟ್ಟೊಮನ್ ಟರ್ಕರು, ಇಟಲಿಯ ಫ್ಯಾಸಿಸ್ಟರು, ಜರ್ಮನಿಯ ನಾಜಿಗಳು, ಬ್ರಿಟಿಷ್ ವಸಾಹತುಶಾಹಿಗಳು, ಗಡಾಫಿಯ ಸರ್ವಾಧಿಕಾರ, ನ್ಯಾಟೋದ ಅಮಾನುಷ ಬಾಂಬ್ ದಾಳಿಗಳು, ಅಲ್-ಖೈದಾ ಮತ್ತು ಇಸ್ಲಾಮಿಕ್ ಸ್ಟೇಟ್‌ನ ರಕ್ತಪಿಪಾಸುಗಳು, ಖಲೀಫಾ ಹಫ್ತಾರ್‌ನ ಮಿಲಿಟರಿ…ಹೀಗೆ ಎಲ್ಲರನ್ನೂ ಎದುರುಹಾಕಿಕೊಂಡ ದೆರ‍್ನಾ ಪಟ್ಟಣಿಗರ ಹೆಗ್ಗೆಚ್ಚನ್ನು ಉಳಿಸಿರುವುದೇ ಅವರು ನೆಚ್ಚುವ ಹೊಸ ಆಲೋಚನೆಗಳು. ಈ ಆಲೋಚನೆಗಳ ಪರಂಪರೆಯಲ್ಲಿ activist ಆಗಿ ಬಂದವರೇ ಕವಿ ಮುಸ್ತಾಫ ಅಲ್-ತ್ರಾಬೆಲ್ಸಿಯವರು. ಆeಡಿಟಿಚಿ Derna Cultural House ಅನ್ನು ಸ್ಥಾಪಿಸಿದವರಲ್ಲಿ ಅವರೂ ಒಬ್ಬರು.

ಇದನ್ನೂ ಓದಿ: ಕಮಲ “ದಳವನ್ನು” ನುಂಗುತ್ತಾ? ಜೆಡಿಎಸ್‌ ಶವಪೆಟ್ಟಿಗೆಗೆ ಅಂತಿಮ ಮೊಳೆ ಹೊಡೆಯಲಿದೆಯೇ ಬಿಜೆಪಿ?

ಅರೆಬಿಕ್ ಕಲಿಸುವ ಪ್ರೊಫೆಸರ್ ಮುಸ್ತಾಫ ನೆರೆಗೆ ನಾಲ್ಕು ದಿನ ಮುಂಚೆ ಅಣೆಕಟ್ಟೆಗಳ ದುರಸ್ತಿಗೆ ಸ್ಥಳೀಯ ನಾಯಕರನ್ನು ಒತ್ತಾಯಿಸುವ ಸಭೆಯೊಂದರಲ್ಲಿ ಪಾಲ್ಗೊಂಡಿದ್ದರು. ಅಲ್ಲಿ ಮೇಲಿನ ಕವಿತೆಯನ್ನು ಮೆಲುದನಿಯಲ್ಲಿ ಓದುವ ಮೂಲಕ ತಮ್ಮ ಅನಿಸಿಕೆಯನ್ನು ದಾಖಲಿಸಿದ್ದರು. ಡೇನಿಯಲ್ ತಂದ ಹೆಮ್ಮಳೆಗಳು ಮತ್ತು ದೆರ‍್ನಾವಾಡಿಯಲ್ಲಿ ಏರುತ್ತಿದ್ದ ನೆರೆನೀರನ್ನು ಕಂಡು ಅವರು ಪಟ್ಟಣಕ್ಕೇನೊ ಕೇಡು ಕಾದಿದೆ ಎಂದು ಊಹಿಸಿದ್ದರು. ಸೆಪ್ಟೆೆಂಬರ್ 10ರ ಸಂಜೆಯಷ್ಟೆ ಅವರು ಈ ಕವಿತೆಯನ್ನು ತಮ್ಮ ಫೇಸ್‌ಬುಕ್ ಪುಟದಲ್ಲಿ ಕಾಣಿಸಿದ್ದರು. ದುರದೃಷ್ಟವಶಾತ್ ಆ ರಾತ್ರಿ ಅವರೂ ನೆರೆಯಲ್ಲಿ ಕೊಚ್ಚಿಹೋದರು. ಕಡುಭ್ರಷ್ಟ ಖಲೀಫಾ ಹಫ್ತಾರನನ್ನು ‘ಸರ್ವಾಧಿಕಾರಿ’ ಎಂದು ಕರೆಯಲು ಮುಸ್ತಾಫ ಎಂದೂ ಹಿಂದೆಮುಂದೆ ನೋಡಿದವರಲ್ಲ. ಅವರೆಂದೂ ಅಧಿಕಾರಸ್ಥರನ್ನು ಓಲೈಸಿ ಬರೆಯಲಿಲ್ಲ. ಈ ದಿಟ್ಟ ಕವಿ ಈಗ ನೆನಪು ಮಾತ್ರ. ಲಿಬಿಯಾದ ಇನ್ನೊಬ್ಬ ಕವಿ ಖ್ಹಾಲಿದ್ ಮತಾವ ಅರೆಬಿಕ್‌ನಲ್ಲಿ ಮುಸ್ತಾಫ ಬರೆದಿದ್ದ ಈ ಕವಿತೆಯನ್ನು ಇಂಗ್ಲಿಷಿಗೆ ತರ್ಜುಮೆ ಮಾಡಿದರು (ಇಂಗ್ಲಿಷಿನಿಂದ ಕನ್ನಡಕ್ಕೆ ನಾನು ತರ್ಜುಮೆ ಮಾಡಿದೆ). ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ಕವಿತೆ ಲೆಕ್ಕವಿಲ್ಲದಷ್ಟು ಬಾರಿ ಕಾಣಿಸಿಕೊಂಡು ದೆರ‍್ನಾದ ನೆರೆ ದುರಂತಕ್ಕೆ ಸಾಹಿತ್ಯಿಕ ಸಂವೇದನೆಯನ್ನು ಕಸಿಮಾಡಿಬಿಟ್ಟಿದೆ. ಓಹ್…! ಮುಸ್ತಾಫ ಈಗ ಬದುಕಿದ್ದಿದ್ದರೆ, ನೋವಿಗೆ ಮಿಡಿಯಬಲ್ಲ ಕವಿತೆಗಳನ್ನು ಬರೆಯುತ್ತಿದ್ದರೊ ಏನೊ, ಅಥವಾ ಏನೂ ಬರೆಯಲಾಗದ ಆಘಾತಕ್ಕೆ ಸಿಲುಕುತ್ತಿದ್ದರೊ ಏನೊ.

ಹೌದು, ಮಳೆ ದೆರ‍್ನಾದಂತಹ ಮರಳು ನಾಡಿನ ಊರಿಗೆ ನೆರವಿನ ಭರವಸೆಯಾಗಿದೆ. ನಿಜ, ಅದು ನಿಸರ್ಗದ ಒಳ್ಳೆಯತನಕ್ಕೆ ಕುರುಹಾಗಿದೆ. ಆದರೆ ಹವಾಮಾನ ಬದಲಾವಣೆಯ ಈ ಕಾಲಕ್ಕೆ ಅದು ಎಚ್ಚರಿಕೆಯ ಗಂಟೆಯೂ ಆಗಿದೆ. ಮುಸ್ತಾಫ ದೆರ‍್ನಾದ ಜನ ಮತ್ತು ಆಡಳಿತಗಳನ್ನಷ್ಟೆ ಎಚ್ಚರಿಸಿದ್ದಲ್ಲ. ಅವರ ಊರಿನಿಂದ ಬಲುದೂರದಲ್ಲಿರುವ ನಿಮ್ಮ ನಮ್ಮನ್ನೂ ಎಚ್ಚರಿಸಿದ್ದಾರೆ.

***

ವಿಡಿಯೋ ನೋಡಿ: ಸಂವಿಧಾನ ರಕ್ಷಣೆಯ ಹೊಣೆ ನಮ್ಮೆಲ್ಲರ ಮೇಲಿದೆ – ಪಿ.ಸಾಯಿನಾಥ್ Janashakthi Media

Donate Janashakthi Media

Leave a Reply

Your email address will not be published. Required fields are marked *