ಕಮಲ “ದಳವನ್ನು” ನುಂಗುತ್ತಾ? ಜೆಡಿಎಸ್‌ ಶವಪೆಟ್ಟಿಗೆಗೆ ಅಂತಿಮ ಮೊಳೆ ಹೊಡೆಯಲಿದೆಯೇ ಬಿಜೆಪಿ?

ಗುರುರಾಜ ದೇಸಾಯಿ
ಬಹುದಿನಗಳಿಂದ ರಾಜ್ಯ ರಾಜಕೀಯದಲ್ಲಿ ಚರ್ಚೆಗೊಳಗಾಗಿದ್ದ ಬಿಜೆಪಿ-ಜೆಡಿಎಸ್ ಮೈತ್ರಿಗೆ ಅಂತೂ ಅಧಿಕೃತ ಮುದ್ರೆ ಬಿದ್ದಿದೆ. ರಾಜಕೀಯದಲ್ಲಿ ಯಾರಿಗೆ ಯಾರೂ ಮಿತ್ರರೂ ಅಲ್ಲ,  ಶತ್ರುಗಳೂ ಅಲ್ಲ ಎಂಬುದು ಆ ಮೂಲಕ ದೃಢಪಟ್ಟಿದೆ. ಜೆಡಿಎಸ್‌ ಎಂದರೆ ಉರಿದುಬೀಳುತ್ತಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ನಿಖಲ್‌ ಕುಮಾರಸ್ವಾಮಿಗೆ ಆಶಿರ್ವಾದ ಮಾಡುವ ಮೂಲಕ ಖಚಿತ ಪಡಿಸಿದ್ದಾರೆ.

2024ರ ಲೋಕಸಭಾ ಚುನಾವಣೆಯನ್ನು ಮೈತ್ರಿಮೂಲಕ ಎದುರಿಸಲು ಜೆಡಿಎಸ್‌ ಸಜ್ಜಾಗಿದೆ.  ಎನ್‌ಡಿಎ ಕೂಟಕ್ಕೆ ಸೇರುವ ಮೂಲಕ ತನ್ನ ನೆಲೆಯನ್ನು ಉಳಿಸಿಕೊಳ್ಳುವ ಲೆಕ್ಕಾಚಾರವನ್ನು ಹಾಕುತ್ತಿದೆ. ಆದರೆ ಬಿಜೆಪಿ ಜೆತೆಗಿನ ಮೈತ್ರಿಯ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚಿಸಿಲ್ಲ ಎಂದು ಜೆಡಿಎಸ್‌ನ ಶಾಸಕರು ಬಹಿರಂಗವಾಗಿಯೇ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಜೆಡಿಎಸ್‌

ಚುನಾವಣೆಗೆ 10 ತಿಂಗಳು ಬಾಕಿ ಇರುವಂತೆ ಲೋಕಸಭಾ ಚುನಾವಣೆಯ ಚರ್ಚೆ ಕಾವು ಪಡೆದುಕೊಂಡಿದೆ. ಬಿಜೆಪಿಯೇತರ ಪಕ್ಷಗಳೆಲ್ಲ ಒಂದೆಡೆ ಸೇರಿ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ತಂತ್ರಗಳನ್ನು ರೂಪಿಸುತ್ತಿವೆ. ಇಂಡಿಯಾ ಎಂಬ ಹೆಸರಿನಲ್ಲಿ ಈಗಾಗಲೇ ಮೂರು ಸುತ್ತಿನ ಸಭೆಗಳನ್ನು ಪಾಟ್ನಾ, ಬೆಂಗಳೂರು, ಮುಂಬೈನಲ್ಲಿ ನಡೆಸುವ ಮೂಲಕ 56 ಇಂಚಿನ ಎದೆಯೊಳಗೆ ಅವಲಕ್ಕಿ ಕುಟ್ಟುವಂತೆ ಮಾಡಿದೆ. ಇದಕ್ಕೆ ತಾನೇನು ಕಮ್ಮಿ ಇಲ್ಲ ಎಂಬಂತೆ ಬಿಜೆಪಿ ಪಕ್ಷ ಕೂಟ ಪ್ರಾದೇಶಿಕ ಪಕ್ಷಗಳನ್ನು ತನ್ನತ್ತ ಸೆಳೆದುಕೊಂಡು ಮತಗಳಿಕೆ ಹೆಚ್ಚಿಸುವ ಕಾರ್ಯವನ್ನು ರೂಪಿಸುತ್ತಿದೆ. ಮತಗಳಿಕೆ ಹೆಚ್ಚಿಸುವ ಕೆಲಸವನ್ನು ಬಿಜೆಪಿ ಕರ್ನಾಟಕದಿಂದಲೇ ಆರಂಭಿಸಿದೆ. ಬಹು ಮುಖ್ಯ ಪ್ರಾದೇಶಿಕ ಪಕ್ಷವಾದ ಜಾತ್ಯಾತೀತ ಜನತಾದಳವನ್ನು ತನ್ನ ತೆಕ್ಕೆಗೆ ಬೀಳಿಸಿಕೊಳ್ಳುವ ಮೂಲಕ ತಂತ್ರಗಳನ್ನು ಹೆಣೆಯುತ್ತಿದೆ. ಆ ತಂತ್ರಗಳನ್ನು ತಿಳಿಯುವ ಮೊದಲು ಪ್ರಾದೇಶಿಕ ಪಕ್ಷಗಳ ಸುತ್ತ ಒಂದಿಷ್ಟು ಕಣ್ಣು ಹಾಯಿಸೋಣ.

ಭಾರತದಲ್ಲಿ ಪ್ರಾದೇಶಿಕ ಪಕ್ಷಗಳು : ಹೆಚ್ಚಿನ ಸಂಖ್ಯೆಯ ಪ್ರಾದೇಶಿಕ ಪಕ್ಷಗಳು  ಭಾರತೀಯ ರಾಜಕೀಯ ವ್ಯವಸ್ಥೆಯ ಪ್ರಮುಖ ಲಕ್ಷಣವಾಗಿದೆ. ಪ್ರಾದೇಶಿಕ ಪಕ್ಷಗಳು ಎಲ್ಲಾ ಹಂತಗಳಲ್ಲಿ ಅಂದರೆ ಸ್ಥಳೀಯ ರಾಜ್ಯ ಮತ್ತು ರಾಷ್ಟ್ರೀಯ ರಾಜಕೀಯದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾ ಬಂದಿವೆ.

ಭಾರತದಲ್ಲಿ ಪ್ರಾದೇಶಿಕ ಪಕ್ಷಗಳು ಸಾಕಷ್ಟು ವೈಶಿಷ್ಟ್ಯಗಳನ್ನು ಹೊಂದಿವೆ. ಇವುಗಳು ಸಾಮಾನ್ಯವಾಗಿ ನಿರ್ದಿಷ್ಟ ರಾಜ್ಯ ಅಥವಾ ನಿರ್ದಿಷ್ಟ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತವೆ. ಅದರ ಚುನಾವಣಾ ನೆಲೆ ಒಂದೇ ಪ್ರದೇಶಕ್ಕೆ ಸೀಮಿತವಾಗಿವೆ.  ಇವುಗಳು ಪ್ರಾದೇಶಿಕ ಹಿತಾಸಕ್ತಿಗಳನ್ನು ವ್ಯಕ್ತಪಡಿಸುತ್ತವೆ ಮತ್ತು ನಿರ್ದಿಷ್ಟ ಸಾಂಸ್ಕೃತಿಕ, ಧಾರ್ಮಿಕ, ಭಾಷಾ ಅಥವಾ ಜನಾಂಗೀಯ ಗುಂಪಿನೊಂದಿಗೆ ಗುರುತಿಸಿಕೊಳ್ಳುತ್ತವೆ. ಇವುಗಳು ಪ್ರಾಥಮಿಕವಾಗಿ  ಸ್ಥಳೀಯ ಅತೃಪ್ತಿಯ ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತವೆ, ಇಲ್ಲವೆ  ಭಾಷೆ, ಜಾತಿ, ಸಮುದಾಯ, ಪ್ರದೇಶದ ಆಧಾರದ ಮೇಲೆ ವಿವಿಧ ಮೂಲ ಬೇಡಿಕೆಗಳನ್ನು ಸಂರಕ್ಷಿಸುವುದರೊಂದಿಗೆ ಹುಟ್ಟಿಕೊಳ್ಳುತ್ತವೆ. ಈ ಪಕ್ಷಗಳು ಸ್ಥಳೀಯ ಅಥವಾ ಪ್ರಾದೇಶಿಕ ಸಮಸ್ಯೆಗಳ ಮೇಲೆ ಕೇಂದ್ರೀಕರಿಸುತ್ತವೆ. ಮತ್ತು ರಾಜ್ಯ ಮಟ್ಟದಲ್ಲಿ ರಾಜಕೀಯ ಅಧಿಕಾರವನ್ನು ಹಿಡಿಯುವ ಗುರಿಯನ್ನು ಹೊಂದಿರುತ್ತವೆ. ಜೆಡಿಎಸ್‌

ಭಾರತದಲ್ಲಿನ ವಿವಿಧ ಪ್ರಾದೇಶಿಕ ಪಕ್ಷಗಳನ್ನು ಈ ಕೆಳಗಿನಂತೆ ವರ್ಗೀಕರಿಸಬಹುದು:

  1. ಪ್ರಾದೇಶಿಕ ಸಂಸ್ಕೃತಿ ಮತ್ತು ಜನಾಂಗೀಯತೆಯನ್ನು ಆಧರಿಸಿದ ಪ್ರಾದೇಶಿಕ ಪಕ್ಷಗಳು. ಇವುಗಳಲ್ಲಿ ಶಿರೋಮಣಿ ಅಕಾಲಿದಳ, ನ್ಯಾಷನಲ್ ಕಾನ್ಫರೆನ್ಸ್, ಡಿಎಂಕೆ, ಎಐಎಡಿಎಂಕೆ, ತೆಲುಗು ದೇಶಂ, ಶಿವಸೇನೆ, ಅಸೋಮ್ ಗಣ ಪರಿಷತ್, ಮಿಜೋ ನ್ಯಾಷನಲ್ ಫ್ರಂಟ್, ಜಾರ್ಖಂಡ್ ಮುಕ್ತಿ ಮೋರ್ಚ್ ಮುಂತಾದವು ಸೇರಿವೆ.
  2. ಅಖಿಲ ಭಾರತ ದೃಷ್ಟಿಕೋನವನ್ನು ಹೊಂದಿರುವ ಆದರೆ ರಾಷ್ಟ್ರೀಯ ಚುನಾವಣಾ ನೆಲೆಯನ್ನು ಹೊಂದಿರದ ಪ್ರಾದೇಶಿಕ ಪಕ್ಷಗಳು. ಉದಾಹರಣೆಗೆ ಭಾರತೀಯ ರಾಷ್ಟ್ರೀಯ ಲೋಕದಳ, ಅಖಿಲ ಭಾರತ ಫಾರ್ವರ್ಡ್ ಬ್ಲಾಕ್, ಕ್ರಾಂತಿಕಾರಿ ಸಮಾಜವಾದಿ ಪಕ್ಷ, ಸಮಾಜವಾದಿ ಪಕ್ಷ, ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಇತ್ಯಾದಿ.
  3. ರಾಷ್ಟ್ರೀಯ ಪಕ್ಷಗಳ ವಿಭಜನೆಯಿಂದ ರೂಪುಗೊಂಡ ಪ್ರಾದೇಶಿಕ ಪಕ್ಷಗಳು. ಉದಾಹರಣೆಗೆ, ಬಾಂಗ್ಲಾ ಕಾಂಗ್ರೆಸ್, ತೆಲಂಗಾಣ ಪ್ರಜಾ ಸಮಿತಿ, ತೃಣಮೂಲ ಕಾಂಗ್ರೆಸ್, ವೈಎಸ್ಆರ್ ಕಾಂಗ್ರೆಸ್ ಹೀಗೆ.
  4. ಆ ಪ್ರಾದೇಶಿಕ ಪಕ್ಷಗಳು ತಮ್ಮ ವರ್ಚಸ್ಸಿನ ವ್ಯಕ್ತಿತ್ವದ ಆಧಾರದ ಮೇಲೆ ವೈಯಕ್ತಿಕ ನಾಯಕರಿಂದ ರಚಿಸಲ್ಪಟ್ಟಿವೆ. ಇವುಗಳನ್ನು ವೈಯಕ್ತೀಕರಿಸಿದ ಪಕ್ಷಗಳು ಎಂದು ಕರೆಯಲಾಗುತ್ತದೆ ಮತ್ತು ಅವು ಅಲ್ಪಕಾಲಿಕವಾಗಿರುತ್ತವೆ. ಉದಾಹರಣೆಗೆ ಲೋಕ ಜನಶಕ್ತಿ ಪಕ್ಷ, ಹರಿಯಾಣ ವಿಕಾಸ್ ಪಕ್ಷ, ಹಿಮಾಚಲ ವಿಕಾಸ್ ಕಾಂಗ್ರೆಸ್ ಇತ್ಯಾದಿ.

ಪ್ರಮುಖ ಪ್ರಾದೇಶಿಕ ಪಕ್ಷಗಳು

ಕ್ರ.ಸಂ ಪ್ರಾದೇಶಿಕ ಪಕ್ಷಗಳು ಚಿಹ್ನೆಗಳು
1. ಬಹುಜನ ಸಮಾಜ ಪಕ್ಷ (BSP) ಆನೆ
2. ಸಮಾಜವಾದಿ ಪಕ್ಷ (SP) ಬೈಸಿಕಲ್
3. ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಗಡಿಯಾರ
4. ಶಿವಸೇನೆ (SS) ಬಿಲ್ಲು ಬಾಣ
5. ತೆಲಂಗಾಣ ರಾಷ್ಟ್ರ ಸಮಿತಿ (TRS) ಕಾರು
6. ಬಿಜು ಜನತಾ ದಳ (ಬಿಜೆಡಿ) ಶಂಖ ಶೆಲ್
7. ರಾಷ್ಟ್ರೀಯ ಜನತಾ ದಳ (RJD) ಲ್ಯಾಂಟರ್ನ್
8. ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಹೂ ಮತ್ತು ಹುಲ್ಲು
9. ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಉದಯಿಸುತ್ತಿರುವ ಸೂರ್ಯ
10 ಜಾತ್ಯಾತೀತ ಜನತಾದಳ (ಜೆಡಿಎಸ್) ತೆನೆಹೊತ್ತ ಮಹಿಳೆ

ಇದನ್ನೂ ಓದಿ : ಬಿಜೆಪಿ-ಜೆಡಿಎಸ್‌ ಮೈತ್ರಿ:ಸೀಟು ಹಂಚಿಕೆ ಬಗ್ಗೆ ಚರ್ಚೆ ನಡೆದಿಲ್ಲ ಸ್ಪಷ್ಟಪಡಿಸಿದ ಎಚ್‌.ಡಿ.ಕೆ

ಪ್ರಾದೇಶಿಕ ಪಕ್ಷಗಳ ಉದಯಕ್ಕೆ ಕಾರಣವೇನು? ಭಾರತದಲ್ಲಿ ಪ್ರಾದೇಶಿಕ ಪಕ್ಷಗಳ ಉದಯಕ್ಕೆ ಹಲವಾರು ಅಂಶಗಳು ಕಾರಣವೆಂದು ಹೇಳಬಹುದು. ಪ್ರಾದೇಶಿಕ ಅಸಮತೋಲನ, ಆರ್ಥಿಕ ಅಸಮತೋಲನ, ಭಾಷೆಯ ಆದಾರದಲ್ಲಿ ಸರ್ಕಾರಗಳು ಆ ಪ್ರದೇಶಗಳಿಗೆ ಅನ್ಯಾಯವನ್ನು ಎಸೆಗಿದಾಗ ಈ ಪಕ್ಷಗಳು ಹುಟ್ಟಿಕೊಂಡಿವೆ.  ಪಕ್ಷದೊಳಗಿರುವ ಬಣ ರಾಜಕೀಯ, ಆಪರೇಷನ್‌ ಮೂಲಕ ಶಾಸಕರನ್ನು ಖರೀದಿಸುವ ಸಮಯದಲ್ಲಿ ಪ್ರಾದೇಶಿಕ ಪಕ್ಷಗಳು ಹುಟ್ಟಿದ್ದನ್ನು ಕಾಣಬಹುದು. ಕೆಲ ಪ್ರಾದೇಶಿಕ ಪಕ್ಷಗಳ ಹುಟ್ಟಿಗೆ ಕಾಂಗ್ರೆಸ್‌ ಕಾರಣವಾದರೆ, ಇನ್ನೊಂದಿಷ್ಟು ಪಕ್ಷದ ಹುಟ್ಟಿಗೆ ಬಿಜೆಪಿ ಕಾರಣವಾಗಿದೆ. ಸಣ್ಣ ಪಕ್ಷಗಳನ್ನು ಹೆಬ್ಬಾವಿನಂತೆ ನುಂಗುವುದು ಎರಡು ಪಕ್ಷಗಳಿಗೂ ಸರಳ.

ಭಾರತದ ಚುನಾವಣಾ ಆಯೋಗದ  ಬಿಡುಗಡೆ ಮಾಡಿದ ಇತ್ತೀಚಿನ ಪ್ರಕಟಣೆಯ ಪ್ರಕಾರ , 6 ರಾಷ್ಟ್ರೀಯ ಪಕ್ಷಗಳು, 55 ರಾಜ್ಯ ಪಕ್ಷಗಳು ಮತ್ತು 2796 ಗುರುತಿಸಲಾಗದ ಪಕ್ಷಗಳೊಂದಿಗೆ ಭಾರತದಲ್ಲಿ ನೋಂದಾಯಿತ ಪ್ರಾದೇಶಿಕ ಪಕ್ಷಗಳ ಒಟ್ಟು ಸಂಖ್ಯೆ 2858 ಆಗಿದೆ. ಭಾರತದಲ್ಲಿ ಪ್ರಾದೇಶಿಕ ಪಕ್ಷಗಳ ಪಾತ್ರ ಮತ್ತು ಮಹತ್ವವು ಪ್ರಾದೇಶಿಕ ಆಕಾಂಕ್ಷೆಗಳನ್ನು ಉನ್ನತೀಕರಿಸುವ ಮತ್ತು ಉನ್ನತೀಕರಿಸುವ ಪಕ್ಷಗಳನ್ನು ಆಯ್ಕೆಮಾಡುವಲ್ಲಿ ಮತದಾರರಿಗೆ ಸಹಾಯ ಮಾಡುತ್ತದೆ.

ಬಿಜೆಪಿ ಜೊತೆಗಿ ಸಖ್ಯ ಪಕ್ಷಕ್ಕೆ ಬಾಗಿಲು ಹಾಕಿದಂತೆ : ಬಿಜೆಪಿ ಜೊತೆ ಪ್ರಾದೇಶಿಕ ಪಕ್ಷಗಳು ಸಖ್ಯ ಬೆಳಸಿದರೆ, ಆ ಪಕ್ಷಗಳು ಹಲ್ಲುಕಿತ್ತ ಹಾವಿನಂತಾಗಿ ಕ್ರಮೇಣವಾಗಿ ಮಾಯವಾಗಿ ಬಿಡುತ್ತವೆ. ಪಕ್ಕದ ತಮಿಳುನಾಡಿನಲ್ಲಿ ಏನಾಯಿತೆಂದು ನಮಗೆ ತಿಳಿದಿದೆ. ಅಲ್ಲಿ ಎರಡು ಪ್ರಮುಖ ಪ್ರಾದೇಶಿಕ ಪಕ್ಷಗಳಿವೆ. ಡಿಎಂಕೆ ಮತ್ತು ಎಐಎಡಿಎಂಕೆ. ಈ ಎರಡೂ ಪಕ್ಷಗಳಿಗೆ ಸುದೀರ್ಘ ವಾದ ಹಿನ್ನೆಲೆಯಿದೆ. ಸ್ವಾತಂತ್ರ್ಯಪೂರ್ವ ಕಾಲಘಟ್ಟದಲ್ಲಿ ಸಕ್ರಿಯವಾಗಿದ್ದ ಸ್ವತಂತ್ರ ಪಕ್ಷವು ವಾಸ್ತವವಾಗಿ ‘ಸ್ವತಂತ್ರ ದ್ರಾವಿಡ ಸ್ಥಾನ’ ದ ಬೇಡಿಕೆಯನ್ನು ಮುಂದಿಟ್ಟು, ಉತ್ತರ ಭಾರತದ ‘ಆರ‌್ಯ ಕೇಂದ್ರಿತ’ ಚಿಂತನಾ ಕ್ರಮವನ್ನು ದಿಟ್ಟವಾಗಿ ವಿರೋಧಿಸಿತ್ತು. ಇದರ ಜತೆಗೆ ಜಸ್ಟೀಸ್ ಪಕ್ಷವು ‘ತಮಿಳು ಹೆಮ್ಮೆ’ಯನ್ನು ಆಧರಿಸಿ, ಹಿಂದಿಯ ಹೇರಿಕೆಯ ಬಗ್ಗೆ ಹೋರಾಟ ನಡೆಸಿತ್ತು. ನಿಧಾನವಾಗಿ ಈ ಎರಡೂ ಪಕ್ಷಗಳೂ ಒಟ್ಟು ಸೇರಿ ಡಿಎಂಕೆ ಆಯಿತು. ಡಿಎಂಕೆಯು ಪ್ರತ್ಯೇಕ ದ್ರಾವಿಡ ಸ್ಥಾನದ ಬೇಡಿಕೆಯನ್ನು ಕೈಬಿಟ್ಟು, ಭಾರತದ ಒಕ್ಕೂಟ ವ್ಯವಸ್ಥೆಯಡಿಯಲ್ಲಿ ‘ತಮಿಳುನಾಡಿಗೆ’ ಬೇಡಿಕೆ ಸಲ್ಲಿಸಿತು, ಅದರಲ್ಲಿ ಯಶಸ್ವಿಯಾಯಿತು. ಉತ್ತರ ಭಾರತದ ಸಾಂಸ್ಕೃತಿಕ ಆಕ್ರಮಣ, ಬ್ರಾಹ್ಮಣೀಕರಣ, ಹಿಂದಿ ಹೇರಿಕೆ, ಮತ್ತು ‘ಆರ್ಯ ವಿರೋಧೀ’ ಧೋರಣೆಗಳು ತಮಿಳುನಾಡಿನ ಜನರನ್ನು ಪ್ರಾದೇಶಿಕ ಪಕ್ಷ ಡಿಎಂಕೆಯ ಕಡೆಗೆ ಭಾವನಾತ್ಮಕವಾಗಿ ಸೆಳೆದವು. ಇದು ಸ್ವಲ್ಪ ಕಾಲ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದು ನಿಜ, ಆದರೆ 1972ರಲ್ಲಿ ಎಂ ಜಿ ರಾಮಚಂದ್ರನ್ ಅವರು ಪ್ರತ್ಯೇಕ ಪಕ್ಷವೊಂದನ್ನು ಕಟ್ಟಿದಾಗ ಚಳವಳಿ ದುರ್ಬಲವಾಯಿತು ಮಾತ್ರವಲ್ಲ ಮುಂದೆ ಜಯಲಲಿತಾ ಅವರು ಬಿಜೆಪಿ ಜತೆ ಸಖ್ಯ ಮಾಡಿಕೊಂಡಲ್ಲಿಗೆ ಅದರ ಪ್ರಾದೇಶಿಕ ಹೋರಾಟದ ಸ್ವರೂಪ ವಿರೂಪಗೊಂಡಿತು. ಮುಂದೆ ಡಿಎಂಕೆ ಕಾಂಗ್ರೆಸ್‌ನೊಂದಿಗೆ ಕೈ ಜೋಡಿಸಿತು. ತಮಿಳುನಾಡಿನ ಮಾದರಿಯಲ್ಲಿಯೇ 1982ರಲ್ಲಿ ‘ತೆಲುಗು ಸಾಂಸ್ಕೃತಿಕ ಹೆಮ್ಮೆ’ಯನ್ನು ಆಧರಿಸಿ ತೆಲುಗುದೇಶಂ ಅಸ್ತಿತ್ವಕ್ಕೆ ಬಂದು ಸ್ವಲ್ಪ ಕಾಲ ಸದ್ದು ಮಾಡಿತು, ಅದರೆ ಮುಂದೆ ಚಂದ್ರಬಾಬು ನಾಯಿಡು ಕಾಲದಲ್ಲಿ ಅದು ಕೂಡಾ ರಾಷ್ಟ್ರಿಯ ಪಕ್ಷವಾದ ಬಿಜೆಪಿ ಜತೆ ಸಖ್ಯ ಮಾಡಿಕೊಂಡಿತು. ಅಲ್ಲಿಗೆ ಅದರ ತೆಲುಗು ಹೆಮ್ಮೆಯ ಕತೆ ಕೊನೆಯಾಯಿತು.

ಪಂಜಾಬ್ ಪರಿಸರದಲ್ಲಿ ಅಸ್ತಿತ್ವಕ್ಕೆ ಬಂದ ಅಕಾಲಿ ದಳವು ಸ್ವಾತಂತ್ರ್ಯಪೂರ್ವದಲ್ಲಿ ‘ಸಿಖ್ ಧರ್ಮ’ ವನ್ನು ಆಧರಿಸಿ ‘ಪ್ರಾದೇಶಿಕ’ ಬೇಡಿಕೆಯನ್ನು ಮಂಡಿಸಿತು. ಪರಿಣಾಮವಾಗಿ 1966ರಲ್ಲಿ ‘ಪಂಜಾಬ್’ ರಚನೆಯಾಯಿತು, ಆದರೆ ಮುಂದೆ ಅಕಾಲಿದಳದಲ್ಲಿದ್ದ ಕೆಲವು ಉಗ್ರಗಾಮಿಗಳು ಪ್ರತ್ಯೇಕ ಖಾಲಿಸ್ಥಾನಕ್ಕೆ ಬೇಡಿಕೆಯಿಟ್ಟರು. ಆದರೆ ಅದು ವಿಫಲ ವಾಯಿತು. ‘ಪಂಜಾಬೀ ಹೆಮ್ಮೆ’ಯ ತೀವ್ರ ಪ್ರತಿಪಾದಕರಾದ ಅಕಾಲಿದಳವು ಕೂಡಾ ಮುಂದೆ ಬಿಜೆಪಿಯ ತೆಕ್ಕೆಗೆ ಸೇರಿಕೊಂಡಿತು.

ಮಹಾರಾಷ್ಟ್ರ ಮತ್ತು ಅಸ್ಸಾಮಿನಲ್ಲಿ ಪ್ರಾದೇಶಿಕ ಪಕ್ಷಗಳ ರಚನೆಗೆ ಕಾರಣವಾದದ್ದು ‘ಮಣ್ಣಿನ ಮಕ್ಕಳ’ ಪರಿಕಲ್ಪನೆ. ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಅಸ್ಸಾಮನ್ನು ಪೂರ್ವ ಬಂಗಾಳದೊಂದಿಗೆ ಸೇರಿಸಲಾಗಿತ್ತು. ಕಾರಣ ಬಂಗಾಳಿಗಳು ಅಸ್ಸಾಮಿನ ಉದ್ದಗಲಗಳಲ್ಲಿ ಇರುವುದು ಸಹಜವಾಗಿತ್ತು. ಅಸ್ಸಾಂನಿಂದ ಬಂಗಾಲಿಗಳನ್ನು ಹೊರಹಾಕುವ ಮತ್ತು ಮುಸ್ಲಿಮರನ್ನು ದ್ವೇಷಿಸುವ ಪ್ರಣಾಳಿಕೆ ಇರಿಸಿಕೊಂಡ ಅಸ್ಸಾಂ ಗಣ ಪರಿಷತ್‌ಗೆ 1980ರ ದಶಕದಲ್ಲಿ ಗಣನೀಯವಾಗಿ ಬೆಂಬಲ ದೊರೆಯಿತು. ಮುಂದೆ ಈ ಪಕ್ಷವೂ ಕೂಡಾ ಬಿಜೆಪಿಯೊಂದಿಗೆ ರಾಜಿ ಮಾಡಿಕೊಂಡಿತು. ಹೆಚ್ಚು ಕಡಿಮೆ ಇಂಥದ್ದೇ ಪರಿಸ್ಥಿತಿಯಲ್ಲಿ ಗುಜರಾತಿ ಮತ್ತು ದಕ್ಷಿಣ ಬಾರತೀಯರನ್ನು (‘ಮದ್ರಾಸಿ’ ಗಳನ್ನು) ಹೊರ ಹಾಕುವ ಉದ್ದೇಶದಿಂದ ಬೆಳೆದ ಮಹಾರಾಷ್ಟ್ರದ ಶಿವಸೇನೆಯು ಮರಾಠೀ ಹೆಮ್ಮೆಯನ್ನು ಹಿಂದೂ ಹೆಮ್ಮೆ ಜತೆ ಜೋಡಿಸಿಕೊಂಡು ಬೆಳೆಯಿತು ಮತ್ತು ರಾಷ್ಟ್ರಮಟ್ಟದಲ್ಲಿ ಬಿಜೆಪಿಯೊಂದಿಗೆ ಗೆಳೆತನ ಸಾಧಿಸಿಕೊಂಡಿತು. ಅದೇ ಬಿಜೆಪಿ ಶಿವಸೇನೆಯನ್ನು ಹೋಳಾಗಿಸಿ ಖುಷಿ ಪಡುತ್ತಿದೆ.  ಪಕ್ಷದ ಬುಡಕ್ಕೆ ಕೈ ಹಾಕಿನಾಯಕರನ್ನು ವಿಭಜಿಸಿ ಈಗ ಕಚ್ಚಾಡಿಕೊಳ್ಳುವಂತೆ ಮಾಡಿದೆ.

ಬಿಹಾರ ಚುನಾವಣೆಯಲ್ಲಿ ಚಿರಾಗ್ ಪಾಸ್ವಾನ್ ರನ್ನು ಮುಂದೆ ಬಿಟ್ಟು JDU ಹೆಚ್ಚು ಸೀಟು ಗಳಿಸದಂತೆ ಬಲೆ ಹೆಣದಿದ್ದ ಬಿಜೆಪಿ ಅದರಲ್ಲಿ ಯಶಸ್ವಿಯಾಗಿತ್ತು. ಪ್ರಾದೇಶಿಕ ಪಕ್ಷಗಳ ಪ್ರಾಭಲ್ಯವನ್ನು ಕಡಿಮೆ ಮಾಡುವುದು ಬಿಜೆಪಿಯ ಅಜೆಂಡವಾಗಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆಯನ್ನು, ಗುಜರಾತಿನಲ್ಲಿ ಜನತಾ ಪಕ್ಷವನ್ನು ನಾಶ ಮಾಡಿದಂತೆ ಈಗ ಅರುಣಾಚಲ ಪ್ರದೇಶದಲ್ಲಿ ಜೆಡಿಯು ಕಥೆ ಮುಗಿಸಿದೆ. ಮುಂದೆ ಬಿಹಾರದ ಮುಗಿಸುವ ಸಾಧ್ಯತೆಗಳು ಹೆಚ್ಚಿವೆ.

ಜೆಡಿಎಸ್‌ ಉದಯವಾಗಿದ್ದು ಹೇಗೆ? : ಜನತಾ ಪಾರ್ಟಿಯ ಭಾಗವಾಗಿ ಉದಯವಾದ ಜನತಾದಳ ಪಕ್ಷವು,  1994 ರಲ್ಲಿ ಕರ್ನಾಟಕದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ  115 ಸ್ಥಾನಗಳನ್ನು ಗೆಲ್ಲುವು ಮೂಲಕ ಸರ್ಕಾರ ರಚನೆ ಮಾಡಿತು. ಎಚ್‌ಡಿ ದೇವೇಗೌಡ 1994 ರಿಂದ 1996ರ ವರೆಗೆ ಮೂಕ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದರು. 1996 ರಲ್ಲಿ ಜೆಎಚ್‌.ಪಟೇಲ್‌ ಮುಖ್ಯಮಂತ್ರಿಯಾಗಿರಬೇಕು ಎಂದು ಸೂಚಿಸಿ ಪ್ರಧಾನಿಹುದ್ದೆಯನ್ನೇರಿದರು. ಜೆಎಚ್‌.ಪಟೇಲ್‌ 1996 ರಿಂದ 1999 ರ ವರಗೆ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದರು.  ಇದೇ ವೇಳೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜನತಾದಳ ಇಬ್ಬಾಗವಾಯಿತು. 1999 ರಲ್ಲಿ ಜನತಾ ದಳ (ಜಾತ್ಯಾತೀತ) (ಜೆಡಿಎಸ್), ಸಂಯುಕ್ತ ಜನತಾದಳ (ಜೆಡಿಯು) ಎಂದು ಇಬ್ಬಾಗವಾಯಿತು.

1999 ರಲ್ಲಿ ನಡೆದ ಚುನಾವಣೆಯಲ್ಲಿ ಜನತಾದಳ ಇಬ್ಬಾಗ ಲಾಭವನ್ನು ಪಡೆದು ಕಾಂಗ್ರೆಸ್‌ ಸರ್ಕಾರ ರಚನೆ ಮಾಡಿತು. ಜೆಡಿಎಸ್‌ 10 ಸ್ಥಾನಗಳನ್ನು ಪಡೆದರೆ ಜೆಡಿಯು 18 ಸ್ಥಾನಗಳನ್ನು ಪಡೆಯಿತು. 1999 ರಿಂದ ಇಲ್ಲಿಯವರೆಗ ಜೆಡಿಎಸ್‌ ಗಳಿಸಿದ ಮತವಿವರಗಳು ಈ ಕೆಳಗಿನಂತಿವೆ.

2004, 2006, 2018 ರಲ್ಲಿ ಮೂರು ಬಾರಿ ಸಮ್ಮಿಶ್ರ ಸರ್ಕಾರ ರಚಿಸುವ ಮಟ್ಟಿಗೆ ಜೆಡಿಎಸ್‌ ಪ್ರಭಾವ ಹೊಂದಿತ್ತು. 2004 ಮತ್ತು 2018 ರಲ್ಲಿ ಎರಡು ಬಾರಿ ಕಾಂಗ್ರೆಸ್‌ ಜೊತೆ ಹಾಗೂ 2006 ರಲ್ಲಿ ಬಿಜೆಪಿ ಜೊತೆ ಸೇರಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿತ್ತು.

ಪರ್ಯಾಯ ರಾಜಕಾರಣ ಹುಟ್ಟುಹಾಕಿದ್ದ ಜೆಡಿಎಸ್: ಬಿಜೆಪಿಯ ಕೋಮುವಾದ ನೀತಿ, ಕಾಂಗ್ರೆಸ್‌ನ ಮೃದು ಹಿಂದುತ್ವ ಹಾಗೂ ಉದಾರೀಕರಣ ನೀತಿಗೆ ಬೇಸತ್ತಿದ್ದ ಬಹುದೊಡ್ಡ ವಿಭಾಗ ಜೆಡಿಎಸ್‌ ಬೆನ್ನಿಗೆ ನಿಂತಿತ್ತು.  ಆ ಎರಡು ಪಕ್ಷಗಳಿಗೆ ನಡುಕು ಹುಟ್ಟಿಸುವ ಪರ್ಯಾಯ ರಾಜಕಾರಣಕ್ಕೆ ಜೆಡಿಎಸ್‌ ಬುನಾದಿ ಹಾಕಿತ್ತು. ರೈತರು, ಕಾರ್ಮಿಕರು, ಅಲ್ಪಸಂಖ್ಯಾತ ಸಮುದಾಯ ಹೀಗೆ ಬಹುದೊಡ್ಡ ವಿಭಾಗ ಜೆಡಿಎಸ್‌ ಗೆಲುವಿನಲ್ಲಿ ಪಾತ್ರವಹಿಸುತ್ತಾ ಬಂದಿದ್ದರು. ದೇವೇಗೌಡರು ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿಯಾಗಿದ್ದಾಗ ಮಾಡಿದ ಅಭಿವೃದ್ಧಿ ಕೆಲಸಗಳು ಪಕ್ಷದ ವರ್ಚಸ್ಸನ್ನು ಹೆಚ್ಚಿಸಿದ್ದವು. ಗ್ರಾಮೀಣ ಪ್ರದೇಶಕ್ಕೆ ನೀರು, ರಸ್ತೆ, ನೀರಾವರಿ ಸೌಲಭ್ಯ, ಸಕ್ಕರೆ ಕಾರ್ಖಾನೆ, ರೈತರ ಅನುಕೂಲಕ್ಕಾಗಿ ಕೃಷಿ ಸಬ್ಸಿಡಿ, ಟ್ರ್ಯಾಕ್ಟರ್‌ ಸಬ್ಸಿಡಿ, ರೈತರ ಸಾಲಮನ್ನದಂತಹ ಜನಪ್ರಿಯ ಯೋಜನೆಗಳ ಮೂಲಕ ಖ್ಯಾತಿಯನ್ನು ಹೊಂದಿತ್ತು. ರೈತರ ಪಕ್ಷ, ಬಡವರ ಪಕ್ಷ ಎಂದು ಕರೆಯಿಸಿಕೊಳ್ಳುತ್ತಿದ್ದ ಜೆಡಿಎಸ್‌ ಕ್ರಮೇಣವಾಗಿ ಕುಟುಂಬ ರಾಜಕಾರಣಕ್ಕೆ ಸೀಮಿತಗೊಂಡು ಪ್ರಭಾವ ಕುಸಿಯಲು ಕಾರಣವಾಯಿತು.

ಕುಸಿತ ಕಂಡ ಜೆಡಿಎಸ್‌ :  2006 ರಲ್ಲಿ ಬಿಜೆಪಿ ಜೊತೆ ಜೆಡಿಎಸ್‌, ಸರ್ಕಾರ ರಚನೆ ಮಾಡಿದಾಗ ಸಿದ್ದರಾಮಯ್ಯ ಸಿಡಿದೆದ್ದು ಹೊರಬಂದರು, ರಾಮಕೃಷ್ಣ ಹೆಗಡೆ, ದೇವೇಗೌಡ, ಜೆ.ಎಚ್‌.ಪಟೇಲ್‌ ಗರಡಿಯಲ್ಲಿ ಪಳಗಿದ್ದ ಸಿದ್ದರಾಮಯ್ಯ ಜೆಡಿಎಸ್‌ನ ಪ್ರಭಾವಿ ನಾಯಕರಾಗಿದ್ದರು. 2006 ರಲ್ಲಿ ಬಿಜೆಪಿ ಜೊತೆ ಸರ್ಕಾರ ರಚಿಸುವುದನ್ನು ವಿರೋಧಿಸಿ ಅಹಿಂದ ಸಂಘಟಿಸಲು ಮುಂದಾದರು. ಆಗಲಾದರು ಜೆಡಿಎಸ್‌ ಎಚ್ಚೆತ್ತು ಸಿದ್ದರಾಮಯ್ಯನವರ ಜೊತೆ ಮಾತುಕತೆಯಾಡಿ ಬಿಜೆಪಿ ಸಖ್ಯ ತೊರೆದೆ ಚುನಾವಣೆ ಎದುರಿಸಿದ್ದರೆ ಸಿದ್ದರಾಮಯ್ಯನವರು ಪುನಃ ಜೆಡಿಎಸ್‌ ಬರುವ ಸಾಧ್ಯತೆ ಇತ್ತು. ಜೆಡಿಎಸ್‌ ಆ ಮುತವರ್ಜಿ ವಹಿಸುವ ಬದಲು ತನ್ನ ಹಳ್ಳವನ್ನು ತಾನೇ ತೊಡಿಕೊಂಡಿತು. 2007 ರಲ್ಲಿ ನಡೆದ ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್‌ನಿಂದ ಸ್ಪರ್ಧಿಸಿದರು. ಬಹು ತುರುಸಾಗಿ ನಡೆದ ಆ ಚುನಾವಣೆಯಲ್ಲಿ ಸಿದ್ದರಾಮಯ್ಯ 257 ಮತಗಳಿಂದ ಗೆಲುವು ಸಾಧಿಸಿದರು.

ಸಿದ್ದರಾಮಯ್ಯರಂತ ಪ್ರಭಾವಿ ನಾಯಕರನ್ನು ಕಳೆದುಕೊಂಡ ಜೆಡಿಎಸ್‌ ನಿಧಾನಕ್ಕೆ ಕುಸಿತ ಕಾಣುತ್ತಾ ಬಂದರೂ ಅಲ್ಪಸಂಖ್ಯಾತ ವಿಭಾಗದ ವಿಶ್ವಾಸವನ್ನು ಗೆಲ್ಲುವಲ್ಲಿ ಮಹತ್ವದ ಪಾತ್ರವನ್ನು ವಹಿಸಿತ್ತು. ಜೊತೆಗೆ ರೈತರು, ರೈತ ಸಂಘಟನೆಗಳ ಬೆಂಬಲವೂ ಜೆಡಿಎಸ್‌ಗೆ ಇತ್ತು.  2013ರ ಚುನಾವಣೆಯಲ್ಲಿ 40 ಸ್ಥಾನಗಳನ್ನು ಗೆಲ್ಲುವ ಮೂಲಕ ಮಹತ್ವದ ಸಾಧನೆಯನ್ನು ಮಾಡಿತು. ಮೈಕೊಡವಿ ಎದ್ದು ನಿಲ್ಲಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಬಿಜೆಪಿ ಜೊತೆಗಿನ ಒಳ ಒಪ್ಪಂದ, ನಾಯಕರ ಕೊರತೆ, ಸರಿಯಾದ ನಿಲುವು ತೆಗೆದುಕೊಳ್ಳುವಲ್ಲಿನ ಗೊಂದಲ ಕಾರ್ಯಕರ್ತರನ್ನು ಚಲ್ಲಾಪಿಲ್ಲಿಯಾಗುವಂತೆ ಮಾಡಿತು.

ಜೆಡಿಎಸ್‌ ಮುಳುಗುತ್ತಾ? : ಕುಮಾರಸ್ವಾಮಿ ಯಾರೆಂಬುದು ಜನರಿಗೆ ಗೊತ್ತಾಗಿದ್ದು 2006 ರಲ್ಲಿ ಕಾಂಗ್ರೆಸ್‌- ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿದ್ಧ ಧರ್ಮಸಿಂಗ್‌ ಸರ್ಕಾರವನ್ನು ಪತನಗೊಳಿಸಿದಾಗ. 2006 ರಲ್ಲಿ 46 ಜನ ಶಾಸಕರ ಬೆಂಬಲದ ಮೂಲಕ ಮೈತ್ರಿಗೆ ಕೊನೆ ಎಳೆದು ಬಿಜೆಪಿ ಸಖ್ಯವನ್ನು ಬಯಸಿ ಮುಖ್ಯಮಂತ್ರಿಯಾದರು. ಒಂದುವರೆ ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಆಡಳಿತದ ರುಚಿ ಸವಿದ ಕುಮಾರಸ್ವಾಮಿ ಬಿಜೆಪಿ ಜೊತೆ ಸಖ್ಯ ಕಳೆದುಕೊಂಡರು. ಆದರೆ 2008ರಲ್ಲಿ ಬಿಜೆಪಿ ಆಡಳಿತಕ್ಕೆ ಬರಲು ಬಹು ದೊಡ್ಡ ಕೊಡುಗೆ ನೀಡಿದರು.

2008 ರಿಂದಲೂ ಯಡಿಯೂರಪ್ಪ ಗ್ಯಾಂಗ್‌ ಮತ್ತು ಬಿಜೆಪಿ, ಜೆಡಿಎಸ್‌ ಮೇಲೆ ಕತ್ತಿ ಮಸಿಯುತ್ತಿದೆ. ಸ್ವತಃ ಯಡಿಯೂರಪ್ಪನವರು, “ ನಮ್ಮ ಹೋರಾಟ ಕಾಂಗ್ರೆಸ್‌ ವಿರುದ್ಧ ಅಲ್ಲ, ಅಪ್ಪ ಮಕ್ಕಳ ಪಕ್ಷವನ್ನು ಇಲ್ಲವಾಗಿಸುವುದು, ಅವರಿಂದ ನಾನು ಸಾಕಷ್ಟು ನೋವು, ಅವಮಾನ ಅನುಭವಿಸಿದ್ದೇನೆ”, ಎಂದು  ಸದನದಲ್ಲಿ ಅದನ್ನು ಒಪ್ಪಿಕೊಂಡಿದ್ದರು.

ಇಷ್ಟು ದ್ವೇಷಕಾರುವ ಪಕ್ಷದ ಜೊತೆ ಈಗ ಕುಮಾರಸ್ವಾಮಿ ಸಖ್ಯ ಬಯಸಿರುವುದು ಪಕ್ಷದ ಹಿತದೃಷ್ಟಿ ಏನು ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಪಕ್ಷದ ಸಮಿತಿಯಲ್ಲಿ ಚರ್ಚಿಸದೆ ಈ ನಿರ್ಧಾರವನ್ನು ಮಾಡಲಾಗಿದೆ ಎಂದು ಆರೋಪಿಸಿ ಬಹಳಷ್ಟು ಅಲ್ಪಸಂಖ್ಯಾತ ನಾಯಕರು ಜೆಡಿಎಸ್‌ ತೊರೆಯುತ್ತಿದ್ದಾರೆ. ಬಿಜೆಪಿ ಜೊತೆ ಹೋದರೆ ನಮ್ಮ ರಾಜಕೀಯ ಬಲ ಕುಗ್ಗುತ್ತದೆ ಎಂದು 10 ಕೂ ಹೆಚ್ಚು ಶಾಸಕರು ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿದ್ದಾರೆ. ಬೆಜಿಪಿ ಜೆಡಿಎಸ್‌ ಸಖ್ಯ ಜೆಡಿಎಸ್‌ಗಿಂತ ಬಿಜೆಪಿಗೆ ಲಾಭವಾಗಲಿದೆ. ಹೈಕ ಭಾಗದ ಕೆಲ ಪ್ರದೇಶದಲ್ಲಿ ಜೆಡಿಎಸ್‌ ಪ್ರಾಬಲ್ಯವಿದೆ ಬಿಜೆಪಿ ಜೊತೆಗಿನ ಮೈತ್ರಿಯಿಂದ ಆ ಪ್ರಭಾವ ಸಂಪೂರ್ಣವಾಗಿ ಕುಸಿಯಲಿದೆ.  ಮೈಸೂರು, ರಾಮನಗರ, ಹಾಸನದಲ್ಲಿ ಬಿಜೆಪಿಯ ಪ್ರಾಬಲ್ಯವನ್ನು ಈ ಮೈತ್ರಿ ಹೆಚ್ಚಿಸಲಿದೆ.

ಈ ಮೈತ್ರಿ ಜೆಡಿಎಸ್‌ಗೆ ಲಾಭಕ್ಕಿಂತ ನಷ್ಟವೇ ಹೆಚ್ಚು, ಬಿಜೆಪಿ ಜೊತೆ ಮೈತ್ರಿ ಇದ್ದರೂ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಎರಡಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲು ಸಾಧ್ಯವಿಲ್ಲ. ಸ್ವಂತ ಬಲದಿಂದಲೇ ಎರಡು ಸ್ಥಾನ ಗೆಲ್ಲುವ ಸಾಮರ್ಥ್ಯ ಇರುವಾಗ ಈ ಮೈತ್ರಿ ಬೇಕಿತ್ತೆ? ಎಂದು ದಳಪತಿಗಳು ಯೋಚಿಸಬೇಕಿತ್ತು. ತನ್ನ ಜೇಬಿನಲ್ಲಿ ಮತವನ್ನು ತನ್ನದೆ ತಪ್ಪಿನಿಂದ ಬಿಜೆಪಿಯ ಕಡೆಗೆ ಕಳುಹಿಸುವ ಮೂಲಕ “ಜೆಡಿಎಸ್‌” ತನ್ನ ಹೆಣಕ್ಕೆ ಬಿಜಿಪಿ ಕಡೆಯೊಂದ ಕೊನೆಯ ಮೊಳೆಹೊಡೆಸಿಕೊಳ್ಳುತ್ತಿದೆಯೆ?

ಈ ವಿಡಿಯೋ ನೋಡಿ : ಬಿಜೆಪಿ – ಜೆಡಿಎಸ್‌ ಗೆ ರಾಜಕೀಯ ಸಿದ್ದಾಂತ ಇಲ್ಲ – ಸಿದ್ದರಾಮಯ್ಯ ಆರೋಪ

 

 

Donate Janashakthi Media

Leave a Reply

Your email address will not be published. Required fields are marked *