ಹಾವೇರಿ: ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ ಹುತಾತ್ಮ ಮೈಲಾರ ಮಹದೇವಪ್ಪನವರ ಜೀವನಗಾಥೆಯು ಯುವಜನತೆಗೆ ಸದಾಕಾಲವೂ ಸ್ಪೂರ್ತಿದಾಯಕ ವಿದ್ಯಾರ್ಥಿಗಳು ಅವರ ಜೀವನಗಾಥೆಯನ್ನು ಅರಿತುಕೊಂಡು ತಮ್ಮ ಬದುಕಿನಲ್ಲಿಯೂ ರೂಢಿಸಿಕೊಳ್ಳಬೇಕೆಂದು ಹಿರಿಯ ಚಿಂತಕರಾದ ಡಾ. ಐ.ಎ ಲೋಕಾಪುರ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಗರದ ಮೈಲಾರ ಮಹದೇವ ವೃತ್ತದಲ್ಲಿ ಶನಿವಾರ, ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಹಾಗೂ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಜಿಲ್ಲಾ ಸಮಿತಿಗಳು ಹಮ್ಮಿಕೊಂಡಿದ್ದ ಹುತಾತ್ಮ ಜ್ಯೋತಿ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು ಮಹಾತ್ಮ ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟವು ತರುಣ ಮೈಲಾರ ಮಹಾದೇವಪ್ಪನವರನ್ನು ಸೆಳೆದ ಪರಿಣಾಮವಾಗಿ ಬಹುಬೇಗನೆ ಗಾಂಧೀಜಿಯವರ ಅನುಯಾಯಿಯಾದರು. ಸ್ವಾತಂತ್ರ್ಯ ಹೋರಾಟದಲ್ಲಿ ಸಂಗಾತಿಗಳಾದ ತಿರುಕಪ್ಪ ಮಡಿವಾಳರ, ವೀರಯ್ಯ ಹಿರೇಮಠ ಅವರೊಂದಿಗೆ ಬ್ರಿಟಿಷರ ವಿರುದ್ಧ ಧೀರೋದತ್ತವಾಗಿ ಹೋರಾಡುತ್ತಲೇ ಹುತಾತ್ಮರಾದರು. ಅವರ ತ್ಯಾಗ, ಬಲಿದಾನವನ್ನು ವಿದ್ಯಾರ್ಥಿ ಯುವಜನತೆ ಅರಿಯಬೇಕು ಎಂದರು.
ಬಳಿಕ, ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ಮೈಲಾರ ಮಹಾದೇವಪ್ಪ ಅವರು ತಮ್ಮ ಸಂಗಾತಿಗಳ ಜೊತೆ ಸೇರಿಕೊಂಡು ಗಾಂಧೀಜಿ ಅವರ ಅನುಯಾಯಿಯಾಗಿದ್ದುಕೊಂಡೆ ಕ್ರಾಂತಿಕಾರಿ ಮಾರ್ಗದಲ್ಲಿ ಮುನ್ನಡೆದ ಪರಿಣಾಮ ಸಾಮ್ರಾಜ್ಯಶಾಹಿ ಬ್ರಿಟಿಷರ ಗುಂಡಿಗೆ ಧೈರ್ಯದಿಂದಲೆ ಎದೆಯೊಡ್ಡಿ ಹುತಾತ್ಮ ಚೇತನರಾದರು. ಇಂತಹ ವೀರಸೇನಾನಿಗಳ ತ್ಯಾಗ ಹಾಗೂ ದೇಶಪ್ರೇಮವನ್ನು ಸ್ಮರಿಸುವ ಜೊತೆಯಲ್ಲಿ ಅವರ ಧೈರ್ಯ, ಬದ್ಧತೆಯ ಆದರ್ಶಗಳನ್ನು ಯುವಜನತೆ ಮೈಗೂಡಿಸಿಕೊಂಡು ದೇಶ ಕಟ್ಟಲು ಮುಂದಾಗಬೇಕು ಎಂದು ಕರೆ ನೀಡಿದರು.
ಇದನ್ನೂ ಓದಿ : ಸರಕಾರಿ ಶಾಲೆ ವಿಲೀನ ವಿರೋಧಿಸಿ ವಿದ್ಯಾರ್ಥಿಗಳ ಪ್ರತಿಭಟನೆ
ಹುತಾತ್ಮ ಜ್ಯೋತಿ ಮೆರವಣಿಗೆ: ಹುತಾತ್ಮರ ಗೌರವ ಸ್ಮರಣಾರ್ಥ ಹುತಾತ್ಮ ಜ್ಯೋತಿ ಯಾತ್ರೆಯು ಮೈಲಾರ ಮಹದೇವ ವೃತ್ತದಿಂದ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ನಗರದ ಹೊರವಲಯದಲ್ಲಿರುವ ವೀರಸೌಧವನ್ನು ತಲುಪಿತು. ಮೆರವಣಿಗೆಯುದ್ದಕ್ಕೂ ಇಂಕಿಲಾಬ್ ಜಿಂದಾಬಾದ್, ಮೈಲಾರ ಮಹದೇವ ಅಮರ ರಹೇ, ತಿರುಕಪ್ಪ ಮಡಿವಾಳರ ಅಮರ ರಹೇ, ವೀರಯ್ಯ ಹಿರೇಮಠ ಅಮರ ರಹೇ. ಸ್ವಾತಂತ್ರ್ಯ ಪ್ರಜಾಪ್ರಭುತ್ವ ಸಮಾಜವಾದ ಚಿರಾಯುವಾಗಲಿ. ದೇಶದ ಸ್ವಾತಂತ್ರ್ಯ, ಐಕ್ಯತೆ, ಸೌಹಾರ್ದತೆ ಉಳಿಸುವ ಘೋಷಣೆಗಳು ಮೊಳಗಿದವು.
ಮಹದೇಪ್ಪ ಅವರ ಮೊಮ್ಮಗ ಎಚ್.ಎಸ್ ಮಹದೇವ, ಹಿರಿಯ ಸಾಹಿತಿ ಸತೀಶ ಕುಲಕರ್ಣಿ, ವಚನ್ ಮಹದೇವ, ಪರಮೇಶಪ್ಪ ಮೈಲಾರ ಹುತಾತ್ಮ ಜ್ಯೋತಿ ಸ್ವೀಕರಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಸ್ಎಫ್ಐ, ಡಿವೈಎಫ್ಐ ಮುಖಂಡರಾದ ಅರುಣ ಕಡಕೋಳ, ವಿವೇಕ ಫನಸೆ, ಕಾವ್ಯ ಹನಗೋಡಿಮಠ, ರವಿ ಬಂಕಾಪುರ, ಅಣ್ಣಾಸಿಂಗ್ ಕಹಾರ, ಅಲ್ತಾಪ್ ಯತ್ನಳ್ಳಿ, ಸ್ವಾತಿ ಕಹಾರ, ಐಶ್ವರ್ಯ ಪಿ.ಕೆ, ಮೇಘನಾ ಆರ್.ಕೆ, ಐಶ್ವರ್ಯ ಗಟ್ಟಿ, ಅಲಿ ಅಸ್ಗರ ಅಲಿ, ಅಹ್ಮದ್ ನದಾಫ್ ಸೇರಿದಂತೆ ಹಲವಾರು ವಿದ್ಯಾರ್ಥಿಗಳು ಹಾಗೂ ಯುವಜನರು ಪಾಲ್ಗೊಂಡಿದ್ದರು.