ದಾರಿಕಾಣದಾಗಿದೆ ಬಂಡವಾಳಶಾಹಿ ವ್ಯವಸ್ಥೆಗೆ

ವಿಶ್ವಾದ್ಯಂತ ನವ-ಫ್ಯಾಸಿಸಂ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿರುವುದನ್ನು ಮತ್ತು ನವ-ಉದಾರವಾದಿ ಬಂಡವಾಳಶಾಹಿ ವ್ಯವಸ್ಥೆಯು ದಾರಿಗಾಣದ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿರುವುದನ್ನು ನಾವೀಗಕಾಣುತ್ತಿದ್ದೇವೆ. ಮೊದಲನೆಯದು, ಬಂಡವಾಳಶಾಹಿಯು ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ತವರು ಎಂಬ ದಾವೆಯಟೊಳ್ಳುತನವನ್ನು ಎತ್ತಿತೋರಿದರೆ, ಎರಡನೆಯದು, ಬಂಡವಾಳಶಾಹಿವ್ಯವಸ್ಥೆಯಲ್ಲಿಒಂದು ಅಭೂತಪೂರ್ವವಾದ ಹತಾಶೆ ಮತ್ತು ಅಸಹಾಯಕತೆ ಉಂಟಾಗಿರುವುದನ್ನು ಬಯಲಿಗೆತರುತ್ತದೆ. ಇವು ಈ ಪ್ರಸ್ತುತ ವ್ಯವಸ್ಥೆಯು ಎಂತಹ ಗಂಭೀರ ಪೇಚಿಗೆ ಸಿಲುಕಿಕೊಂಡಿದೆ ಎಂಬುದಕ್ಕೆ ಸಾಕ್ಷಿಯಾಗಿವೆ. ದಾರಿ

-ಪ್ರೊ. ಪ್ರಭಾತ್ಪಟ್ನಾಯಕ್

-ಅನು: ಕೆ.ಎಂ.ನಾಗರಾಜ್

ವಿಶ್ವ ಬಂಡವಾಳಶಾಹಿಯು ಮುಂದಿನದಾರಿಗಾಣದಂತಹ ಒಂದು ಹಂತವನ್ನು ತಲುಪಿದೆ. ನವ-ಉದಾರವಾದಿ ಆಳ್ವಿಕೆಯಡಿಯಲ್ಲಿರುವ ಪ್ರತಿಯೊಂದು ದೇಶದಲ್ಲೂ ವರಮಾನ ಅಸಮಾನತೆಯಲ್ಲಿ ಅಗಾಧ ಏರಿಕೆಯು ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಸ್ಥಗಿತತೆಯನ್ನುತಂದಿದೆ. ಅಸಮಾನತೆಗಳ ಈ ಏರಿಕೆಯು, ಬೆಳೆಯುತ್ತಿರುವ ಉತ್ಪಾದನಾ ಸಾಮರ್ಥ್ಯದ ವೇಗಕ್ಕೆ ಸಮನಾಗಿ ಬೇಡಿಕೆಯು ಹೆಜ್ಜೆಹಾಕುತ್ತಿಲ್ಲ ಎಂಬುದನ್ನು ಮತ್ತು ಅದು ಆರ್ಥಿಕ ಬೆಳವಣಿಗೆಯನ್ನು ನಿಧಾನಗೊಳಿಸುವುದರಿಂದ ಅರ್ಥವ್ಯವಸ್ಥೆಯನ್ನು ಸ್ಥಗಿತಗೊಳಿಸುತ್ತದೆ ಮಾತ್ರವಲ್ಲದೆ ಹೆಚ್ಚಿನ ಮಟ್ಟದ ನಿರುದ್ಯೋಗಕ್ಕೆ ಕಾರಣವಾಗುತ್ತದೆ ಎಂಬುದನ್ನು ಅರ್ಥೈಸುತ್ತದೆ. ಇದುವೇ ವಿಶ್ವದ ಅರ್ಥವ್ಯವಸ್ಥೆಯು ಸಿಲುಕಿಕೊಂಡಿರುವ ಇಂದಿನ ಪರಿಸ್ಥಿತಿ. ಅರ್ಥವ್ಯವಸ್ಥೆಯ ಈ ಸ್ಥಗಿತತೆಯನ್ನು ಅಮೆರಿಕದಲ್ಲಿ ಎಬ್ಬಿಸಿದ ವಸತಿ ಗುಳ್ಳೆಯು ತಾತ್ಕಾಲಿಕವಾಗಿ ತಡೆಹಿಡಿದಿತ್ತಾದರೂ, 2008ರಲ್ಲಿ ಈ ಗುಳ್ಳೆಯು ಸಿಡಿದ ನಂತರ ಈ ಸ್ಥಗಿತತೆಯು ಇಡೀ ವಿಶ್ವದ ಅರ್ಥವ್ಯವಸ್ಥೆಯನ್ನು ಆವರಿಸಿಕೊಂಡಿದೆ. ದಾರಿ

ಈ ಸ್ಥಗಿತತೆಯಿಂದ ಹೊರಬರಲು ಯುದ್ಧಾನಂತರದ ಅವಧಿಯಲ್ಲಿ ಒಂದು ಅಂಗೀಕೃತ ವಿಧಾನವನ್ನು ಅನುಸರಿಸಲಾಯಿತು. ಅದೆಂದರೆ, ವಿತ್ತೀಯ ಕೊರತೆಯನ್ನು ಹೊಂದುವ ವಿಧಾನ ಅಥವಾ ಶ್ರೀಮಂತರ ಮೇಲೆ ಹೇರಿದ ಅಧಿಕ ತೆರಿಗೆಗಳಿಂದ ಒದಗಿಸಿಕೊಂಡ ಹಣದಿಂದ ಸರ್ಕಾರ ಬೃಹತ್‌ ವೆಚ್ಚಗಳನ್ನು ಕೈಗೊಳ್ಳುವ ವಿಧಾನ (ಈ ಎರಡೂ ವಿಧಾನಗಳೂ ಅರ್ಥ ವ್ಯವಸ್ಥೆಯನ್ನು ವಿಸ್ತರಿಸುವ ಪರಿಣಾಮವನ್ನು ಬೀರುವಂತವು). ಆದರೆ, ಈ ವಿಧಾನಗಳು ನವ-ಉದಾರವಾದದ ಅಡಿಯಲ್ಲಿ ಕೆಲಸಮಾಡುವುದಿಲ್ಲ. ಏಕೆಂದರೆ, ನವ-ಉದಾರವಾದದ ಅಡಿಯಲ್ಲಿ ಪ್ರಾಬಲ್ಯ ಹೊಂದಿರುವ ಜಾಗತೀಕರಣಗೊಂಡ ಹಣಕಾಸು ಬಂಡವಾಳವು ಬೃಹತ್‌ ವಿತ್ತೀಯ ಕೊರತೆಯನ್ನು ವಿರೋಧಿಸುತ್ತದೆ ಮತ್ತು ಶ್ರೀಮಂತರ ಮೇಲೆ ಹೆಚ್ಚು ತೆರಿಗೆ ವಿಧಿಸುವ ಕ್ರಮವನ್ನೂ ವಿರೋಧಿಸುತ್ತದೆ. ದಾರಿ

ಇದನ್ನೂ ಓದಿ: ಆರ್‌ಎಸ್‌ಎಸ್‌ ಚಟುವಟಿಕೆ ಪ್ರಶ್ನಿಸಿದ್ದಕ್ಕೆ ಪ್ರಿಯಾಂಕ್‌ ಖರ್ಗೆಗೆ ಬೆದರಿಕೆ ಕರೆ

ನವ-ಉದಾರವಾದವು ಅರ್ಥವ್ಯವಸ್ಥೆಯನ್ನು ಸ್ಥಗಿತತೆಗೆ ತಂದಿರುವುದರಿಂದ ಮತ್ತು ಅದರಿಂದಾಗಿ ನಿರುದ್ಯೋಗ ಏರಿರುವುದರಿಂದ, ಹಾಗೂ ನವ-ಉದಾರವಾದದ ಮಿತಿಯೊಳಗೆ ಅದನ್ನು ನಿವಾರಿಸಲಾಗದ ಕಾರಣದಿಂದ ಮಾತ್ರವಲ್ಲದೆ, ಅದೇ ಸಮಯದಲ್ಲಿ, ಹಣಕಾಸು ಬಂಡವಾಳವು ಕೊನೆಯ ಪಕ್ಷ ದೇಶಗಳ ಗಡಿಯಾಚೆ-ಈಚೆ ಹರಿದಾಡುವ ಆಳ್ವಿಕೆಯನ್ನು ಮೀರುವ ಅರ್ಥದಲ್ಲಾದರೂ, ನವ-ಉದಾರವಾದವನ್ನು ಮೀರಿ ಬಂಡವಾಳಶಾಹಿಯು ಒಂದು ಹೊಸ ಹಂತಕ್ಕೆ ಹೋಗುವುದೂ ಸಾಧ್ಯವಿಲ್ಲ. ಹಾಗಾಗಿ, ಅಂತಾರಾಷ್ಟ್ರೀಯ ಹಣಕಾಸು ಬಂಡವಾಳದ ಪ್ರಾಬಲ್ಯವು ಮೇಲುಗೈ ಸಾಧಿಸುವ ಅವಕಾಶವಿರುವವರೆಗೂ, ಬಂಡವಾಳಶಾಹಿಯು ಮುಂದೆ ಸಾಗಲಾಗದ ಒಂದು ಪರಿಸ್ಥಿತಿ ಉದ್ಭವಿಸುತ್ತದೆ. ದಾರಿ

ಬಂಡವಾಳಶಾಹಿಯ ಈ ರೀತಿಯಮುಂದೆದಾರಿಗಾಣದಂತಹ ಪರಿಸ್ಥಿತಿಯನ್ನು ಒಂದು ಐತಿಹಾಸಿಕ ಸನ್ನಿವೇಶದಲ್ಲಿ ನೋಡಬೇಕಾಗುತ್ತದೆ. ಮೊದಲನೆಯ ಮಹಾಯುದ್ಧದೊಂದಿಗಷ್ಟೇ ಕೊನೆಗೊಂಡ “ದೀರ್ಘ ಹತ್ತೊಂಬತ್ತನೇ ಶತಮಾನದ” ಬಹಳ ಕಾಲ ವಿಸ್ತರಿಸಿದ್ದ ವಿಕ್ಟೋರಿಯ ರಾಣಿಯಮತ್ತು ಎಡ್ವರ್ಡ್‍ ರಾಜನಆಳ್ವಿಕೆಯದೀರ್ಘಅವಧಿಯಉತ್ಕರ್ಷವು, ಬಂಡವಾಳಶಾಹಿ-ಪೂರ್ವ ವಸಾಹತುಶಾಹಿ ಮತ್ತು ಅರೆ-ವಸಾಹತುಶಾಹಿ ಮಾರುಕಟ್ಟೆಗಳಿಂದ ಸಂಪನ್ಮೂಲಗಳನ್ನು (ಮುಖ್ಯವಾಗಿ ಹಣ ಕೊಡದೆ) ತೆಗೆದುಕೊಳ್ಳುವುದರ ಮೇಲೆ ಮತ್ತು ಅವುಗಳ ಮೇಲೆ ಮಾಡುವ ಹಠಾತ್‌ ದಾಳಿಗಳಮೇಲೆ ಆಧಾರಿತವಾಗಿತ್ತು. ಈ ದಾಳಿಗಳು ಕೈಗಾರಿಕಾ ಬಂಡವಾಳಶಾಹಿಯು, ಮೊದಲು ಬ್ರಿಟನ್‌ನಿಂದ ಯುರೋಪ್‌ ಭೂಖಂಡಕ್ಕೆ, ನಂತರ ಕೆನಡಾ, ಯುಎಸ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾದಂತಹ ಯುರೋಪಿಯನ್ ವಸಾಹತುಗಳ ಸಮಶೀತೋಷ್ಣ ಪ್ರದೇಶಗಳಿಗೆ ವ್ಯಾಪಕವಾಗಿವಿಸ್ತರಿಸಿದವು. ವಸಾಹತುಶಾಹಿ ಮತ್ತು ಅರೆ-ವಸಾಹತುಶಾಹಿ ರಫ್ತುಗಳು ಮುಗಿದ ನಂತರ ಮತ್ತು ಭಾರತ ಹಾಗೂ ಚೀನಾದಂತಹ ಮಾರುಕಟ್ಟೆಗಳು ಕುಗ್ಗಿದ ನಂತರ ಈ ದೀರ್ಘ ಉತ್ಕರ್ಷವು ಕೊನೆಗೊಂಡಿತು. ಎರಡುಮಹಾಯುದ್ಧಗಳನಡುವಿನ ಅವಧಿಯ ‘ಮಹಾ ಆರ್ಥಿಕ ಕುಸಿತ’ವು ಈ ಬಾಹ್ಯ ಮೂಲಗಳು ಮತ್ತು ಮಾರುಕಟ್ಟೆಗಳ ಉತ್ತೇಜನವು ಖಾಲಿಯಾದುದರ ಅಭಿವ್ಯಕ್ತಿಯಾಗಿತ್ತು. ದಾರಿ

ಯುದ್ಧಾ ನಂತರದ ಅವಧಿಯಲ್ಲಿ ಬಂಡವಾಳಶಾಹಿಯು ಒಂದು ಹೊಸ ಉತ್ತೇಜನವನ್ನು ಪಡೆದುಕೊಂಡಿತು. ಅದು ಯಾವುದೆಂದರೆ, ಮತ್ತೊಂದು ದೀರ್ಘ ಉತ್ಕರ್ಷದತ್ತ ಒಯ್ದ ಸರ್ಕಾರೀ ಖರ್ಚು ವೆಚ್ಚಗಳೇ. ಈ ಅವಧಿಯನ್ನು ಕೆಲವೊಮ್ಮೆ “ಬಂಡವಾಳಶಾಹಿಯ ಸುವರ್ಣಯುಗ” ಎಂದು ಕರೆಯಲಾಗಿದೆ. ಪ್ರಭುತ್ವದ ಮಧ್ಯಪ್ರವೇಶವನ್ನು ಕಷ್ಟಕರವಾಗಿಸಿ ದನವ-ಉದಾರವಾದದ ಜಾರಿಯೊಂದಿಗೆ, ಈ ವ್ಯವಸ್ಥೆಯು ಮುಂದೆ ಹೋಗಲಾಗದ ಕುರುಡುಗಲ್ಲಿಗೆ ಈಗ ಬಂದು ನಿಂತಿದೆ. ಈ ಸನ್ನಿವೇಶವು 1930ರ ದಶಕದ ಮಹಾ ಕುಸಿತದಷ್ಟು ಆಳವಾಗಿಲ್ಲದಿದ್ದರೂ ಅಥವಾ ಅಗಾಧವಾಗಿಲ್ಲದಿದ್ದರೂ, ಒಂದು ಸಂಧಿಗ್ದ ಸನ್ನಿವೇಶವನ್ನು ಹೋಲುತ್ತದೆಮತ್ತು ಈ ಸಂಧಿಗ್ದತೆಯಿಂದ ಹೊರಬರುವ ಯಾವ ಸಾಧ್ಯತೆಯೂ ಕಾಣುತ್ತಿಲ್ಲ.”ಬಂಡವಾಳಶಾಹಿಗೆ ಅಸಾಧ್ಯ ಎಂಬ ಪರಿಸ್ಥಿತಿ ಯಾವುದೂ ಇಲ್ಲ” ಎಂಬ ಲೆನಿನ್ ಅವರ ಮಾತುಗಳನ್ನು ಮನನ ಮಾಡಿಕೊಂಡರೂ ಸಹ, ವ್ಯವಸ್ಥೆಯು ಸಿಲುಕಿಕೊಂಡಿರುವ ಕಷ್ಟಕರ ಪರಿಸ್ಥಿತಿಯನ್ನು ಕೀಳಂದಾಜು ಮಾಡಲಾಗದು.

ನವಫ್ಯಾಸಿಸಂನ ಉದಯ

ಬಂಡವಾಳಶಾಹಿ ವ್ಯವಸ್ಥೆಯು ಸಿಲುಕಿಕೊಂಡಿರುವ ಈ ಕಷ್ಟಕರ ಪರಿಸ್ಥಿತಿಯ ಎರಡು ಲಕ್ಷಣಗಳು ಸ್ಪಷ್ಟವಾಗಿವೆ. ವಿಶ್ವಾದ್ಯಂತ ಹೊರಹೊಮ್ಮುತ್ತಿರುವ ನವ-ಫ್ಯಾಸಿಸಂ ಮೊದಲನೆಯ ಲಕ್ಷಣ. ಫ್ಯಾಸಿಸಂ ಎರಡು ಸ್ತಂಭಗಳ ಮೇಲೆ ಪ್ರವರ್ಧಮಾನಕ್ಕೆ ಬರುತ್ತದೆ: ಒಂದೆಡೆ ಜನರನ್ನು ತೀವ್ರವಾಗಿ ದಮನಿಸುವುದು, ಮತ್ತೊಂದೆಡೆ ಕೆಲವು ದುರದೃಷ್ಟಕರ ಧಾರ್ಮಿಕ ಅಥವಾ ಜನಾಂಗೀಯ ಅಲ್ಪ ಸಂಖ್ಯಾತ ಗುಂಪಿನ ವಿರುದ್ಧ ದ್ವೇಷವನ್ನು ಹುಟ್ಟಿಹಾಕುವುದು. ಅವರನ್ನು “ಅನ್ಯರನ್ನಾಗಿಸುವ” ಉದ್ದೇಶಕ್ಕಾಗಿ ಸಮಾಜದಲ್ಲಿ ಮೊದಲೇ ಇರುವ ಭಿನ್ನತೆಗಳನ್ನು ಅದು ಬಳಸಿಕೊಳ್ಳುತ್ತದೆ.ಇವು ಆಧುನಿಕ-ಪೂರ್ವ ಅವಧಿಯ ಹಿಂದಿನಿಂದಲೂ ಬಂದ ಒಂದು ಪರಂಪರೆ ಎಂಬಂತೆ ಕಾಣಿಸಬಹುದು, ಆದರೆ ಸತ್ಯ ಅದಕ್ಕೆ ತದ್ವಿರುದ್ಧವಾಗಿದೆ. ದಾರಿ

ಫ್ಯಾಸಿಸಂ ಎಂಬುದು ಸಾರಭೂತವಾಗಿ ಒಂದು ಆಧುನಿಕ ವಿದ್ಯಮಾನ ಮತ್ತು ಅದು ನಿರ್ದಿಷ್ಟವಾಗಿ ಇತ್ತೀಚಿನ ಬಂಡವಾಳಶಾಹಿಗೆ ಸಂಬಂಧಿಸಿದ್ದಾಗಿದೆ. ಒಂದು ಅಲ್ಪಸಂಖ್ಯಾತ ಗುಂಪನ್ನು ಗುರಿಯಾಗಿಸಿಕೊಂಡು ಅದರ ವಿರುದ್ಧ ಬಹುಸಂಖ್ಯಾತ ಗುಂಪಿನೊಳಗೆ ಹುಟ್ಟಿಕೊಳ್ಳುವ ದ್ವೇಷವು ಅಂತಃಪ್ರೇರಣೆಯಿಂದೇನೂ ಹುಟ್ಟಿಕೊಳ್ಳುವುದಿಲ್ಲ. ಅದನ್ನು ಏಕಸ್ವಾಮ್ಯ ಬಂಡವಾಳದ ಸಹಾಯದಿಂದ ಮತ್ತು ಅದರ ಹಿತಾಸಕ್ತಿಗಾಗಿ ಉದ್ದೇಶಪೂರ್ವಕವಾಗಿ ಪ್ರಚೋದಿಸಲಾಗುತ್ತದೆ.

ಯಾವುದೇ ಆಧುನಿಕ ಸಮಾಜದ ಅಂಚಿನಲ್ಲಿರುವ ಫ್ಯಾಸಿಸ್ಟ್ ಗುಂಪುಗಳನ್ನು ರಂಗಸ್ಥಳಕ್ಕೆದ ಮಧ್ಯಕ್ಕೆ ತರಲು ಮತ್ತು ಅವರು ಹೊರಹಾಕುವ ದ್ವೇಷವನ್ನು ಉತ್ತೇಜಿಸಲು ದೊಡ್ಡ ದೊಡ್ಡ ವ್ಯವಹಾರೋದ್ದಿಮೆಗಳು ಅವುಗಳಿಗೆ ಹಣಕಾಸಿನ ನೆರವನ್ನು ಒದಗಿಸುತ್ತವೆ ಮತ್ತು ತಮ್ಮ ನಿಯಂತ್ರಣದಲ್ಲಿರುವ ಮಾಧ್ಯಮಗಳ ಬೆಂಬಲವನ್ನು ನೀಡುತ್ತವೆ. ಬಿಕ್ಕಟ್ಟಿನ ಅವಧಿಯಲ್ಲಿ ಏಕಸ್ವಾಮ್ಯ ಬಂಡವಾಳದ ಪ್ರಾಬಲ್ಯಕ್ಕೆ ಎದುರಾಗುವ ಯಾವುದೇ ಬೆದರಿಕೆಯನ್ನು ನಿವಾರಿಸುವ ರೀತಿಯಲ್ಲಿ ಸಂಕಥನವನ್ನು ಬದಲಾಯಿಸುವುದು ಅವರ ಉದ್ದೇಶ. ಈ ಪ್ರಾಬಲ್ಯಕ್ಕೆ ಪರಿಣಾಮಕಾರಿಯಾಗಿ ಸವಾಲು ಹಾಕುವುದು ಸಾಧ್ಯವಾಗದಂತೆ ದಮನಿತ ವರ್ಗಗಳನ್ನು ವಿಭಜಿಸುವುದು ಅವರ ಉದ್ದೇಶ. ಮತ್ತು, ಬಿಕ್ಕಟ್ಟಿನ ಸಮಯದಲ್ಲಿ ಉಂಟಾದ ಈ ಬೃಹತ್‌ ನಿರುದ್ಯೋಗವು, ಫ್ಯಾಸಿಸ್ಟ್ ಗುಂಪುಗಳಿಗೆ ಏಕಸ್ವಾಮ್ಯ ಬಂಡವಾಳಶಾಹಿಗಳು ಒದಗಿಸಿದ ಹಣದಿಂದ ನಿರುದ್ಯೋಗಿಗಳನ್ನು ಬಳಸಿಕೊಂಡು ತಮ್ಮ “ಉದ್ದೇಶ”ವನ್ನು ಈಡೇರಿಸಿಕೊಳ್ಳುವ ಕಾರ್ಯವನ್ನು ಸುಲಭಗೊಳಿಸುತ್ತದೆ. ದಾರಿ

1930ರ ದಶಕದಲ್ಲಿ ಬಂಡವಾಳಶಾಹಿ ಜಗತ್ತು ಮಹಾ ಕುಸಿತದ ಆಘಾತದಿಂದ ತತ್ತರಿಸುತ್ತಿದ್ದಾಗ ಸಂಭವಿಸಿದ ಈ ವಿದ್ಯಮಾನವು ಈಗ ಮತ್ತೊಮ್ಮೆ ಘಟಿಸುತ್ತಿದೆ.ಈ ಎರಡು ಸನ್ನಿವೇಶಗಳ ನಡುವಿನ ವ್ಯತ್ಯಾಸವೆಂದರೆ, ಅಂದಿನಂತಲ್ಲದೆ, ಇಂದಿನ ಫ್ಯಾಸಿಸ್ಟ್ ಗುಂಪುಗಳು ಬಂಡವಾಳಶಾಹಿಯನ್ನು ಅದರ ಪ್ರಸ್ತುತ ದಾರಿಗಾಣದ ಬಿಕ್ಕಟ್ಟಿನಿಂದ ಹೊರತರಲು ಅಸಮರ್ಥವಾಗಿವೆ. ಈ ಕಾರಣದಿಂದಾಗಿಯೇ ಇದನ್ನುಈಗ ‘ನವ’ಫ್ಯಾಸಿಸಂ ಎಂದು ಹೇಳಬಹುದಾಗಿದೆ. ಅಂದಿನ ಫ್ಯಾಸಿಸಂ ಅಧಿಕಾರಕ್ಕೆ ಬಂದ ದೇಶಗಳಲ್ಲಿ ಬೃಹತ್‌ ವಿತ್ತೀಯ ಕೊರತೆಯ ಮೂಲಕ ಮಿಲಿಟರಿ ವೆಚ್ಚಗಳನ್ನು ಹೆಚ್ಚಿಸುವ ಮಾರ್ಗವಾಗಿ ಮಹಾ ಕುಸಿತದಿಂದ ಬಂಡವಾಳಶಾಹಿಯು ಹೊರಬಂದಿತ್ತು. ವಿಷಯವನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ, ವಿತ್ತೀಯ ಕೊರತೆಗೆ ಹಣಕಾಸು ಬಂಡವಾಳವು ಹೊಂದಿದ್ದ ವಿರೋಧವನ್ನು ಫ್ಯಾಸಿಸಂ ಬದಿಗೊತ್ತಿತು; ಮೂಲಭೂತವಾಗಿ ಆಗಹಣಕಾಸು ಬಂಡವಾಳವು ರಾಷ್ಟ್ರೀಯವಾಗಿದ್ದುದರಿಂದ, ಅದು ಹಾಗೆ ತಳ್ಳಿಹಾಕಬಹುದಿತ್ತು.

ಆದರೆ ಇಂದಿನ ನವ-ಫ್ಯಾಸಿಸಂಗೆ, ಬೃಹತ್‌ ವಿತ್ತೀಯ ಕೊರತೆಗಳಿಗೆ ಹಣಕಾಸು ಬಂಡವಾಳವುತನ್ನ ವಿರೋಧವನ್ನು ಕೈಬಿಡುವಂತೆ ಒತ್ತಾಯಿಸುವುದು ಸಾಧ್ಯವಿಲ್ಲ, ಏಕೆಂದರೆ, ಹಣಕಾಸು ಬಂಡವಾಳವು ಇಂದು ಅಂತಾರಾಷ್ಟ್ರೀಯವಾಗಿದೆ. ಮತ್ತು ಇದರಿಂದಾಗಿಯೇ ಅಂತರ್‌-ಸಾಮ್ರಾಜ್ಯಶಾಹಿ ಪೈಪೋಟಿ ಎಂಬುದು ಇಂದು ಕಾಣುತ್ತಿಲ್ಲ.

ಇಂದಿನ ನವ-ಫ್ಯಾಸಿಸಂ ಯುದ್ಧಗಳಲ್ಲಿ ತೊಡಗದೇ ಇರಬಹುದು ಎಂಬ ಸಂಗತಿಯು, ಅದು ಮಾಮೂಲು ಚುನಾವಣಾ ಪ್ರಕ್ರಿಯೆಗೆ ಒಳಪಟ್ಟಿರುತ್ತದೆ ಮತ್ತು ಅದು ಅಧಿಕಾರದಿಂದ ಹೊರಹಾಕಲ್ಪಡಲೂ ಬಹುದು (ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳನ್ನು ಸಂಪೂರ್ಣವಾಗಿ ನಿಗ್ರಹಿಸದ ಪರಿಸ್ಥಿತಿಗಳಲ್ಲಿ) ಎಂಬುದನ್ನು ಸೂಚಿಸುತ್ತದೆ. ಅಂತೆಯೇ, ನವ-ಫ್ಯಾಸಿಸ್ಟ್‌ರನ್ನು ಚುನಾವಣೆಯಲ್ಲಿ ಸೋಲಿಸಿ ಅಧಿಕಾರಕ್ಕೆ ಬರುವ ಫ್ಯಾಸಿಸ್ಟ್ ವಿರೋಧಿ ಶಕ್ತಿಗಳು ನವ-ಉದಾರವಾದವನ್ನು ಮೀರುವ ಮೂಲಕ (ಮೀರುವುದು ಅತ್ಯಗತ್ಯವಾಗುತ್ತದೆ) ನವ-ಉದಾರವಾದದ ಬಿಕ್ಕಟ್ಟನ್ನು ನಿವಾರಿಸದ ಹೊರತು, ನವ-ಫ್ಯಾಸಿಸ್ಟ್‌ರು ಮತ್ತೆ ಮತ್ತೆ ಅಧಿಕಾರಕ್ಕೆ ಬರುತ್ತಾರೆ. ಅಮೆರಿಕದಲ್ಲಿ ಟ್ರಂಪ್‌ ಮಾಡಿದ್ದು ಇದನ್ನೇ.

ಎರಡನೇ ಲಕ್ಷಣ-ಟ್ರಂಪ್‍ ಸುಂಕಗಳು

ನವ-ಉದಾರವಾದಿ ಬಂಡವಾಳಶಾಹಿ ವ್ಯವಸ್ಥೆಯು ಸಿಲುಕಿಕೊಂಡಿರುವ ದಾರಿಗಾಣದ ಪರಿಸ್ಥಿತಿಯ ಎರಡನೆಯ ಲಕ್ಷಣವೆಂದರೆ, ನವ-ಫ್ಯಾಸಿಸಂನ ಬೆಳವಣಿಗೆಯೊಂದಿಗೇ, ಟ್ರಂಪ್ ಆಡಳಿತದಿಂದ ದೊಡ್ಡ ಪ್ರಮಾಣದ ಸುಂಕಗಳ ಹೇರಿಕೆ. ಇದು ನವ-ಉದಾರವಾದದಿಂದ ಭಾಗಶಃ ಹಿಂದಕ್ಕೆ ಸರಿಯುವುದನ್ನು ಸೂಚಿಸುತ್ತದೆಯಾದರೂ, ನವ-ಉದಾರವಾದದಿಂದ ಹೊರಬರುವ ಲಕ್ಷಣಗಳನ್ನೇನೂಸೂಚಿಸುವುದಿಲ್ಲ., ಏಕೆಂದರೆ, ಎಲ್ಲಕ್ಕಿಂತಲೂ ಮಿಗಿಲಾಗಿ ಹಣಕಾಸು ಹರಿವುಗಳನ್ನು ಒಳಗೊಂಡಂತೆ ಗಡಿಯಾಚೆಗಿನ ಬಂಡವಾಳ ಹರಿವಿನ ಆಳ್ವಿಕೆಯು ನಿರಂತರವಾಗಿ ಮುಂದುವರಿಯುತ್ತಿದೆ. ಇದುವೇ ತಾನೇನವ-ಉದಾರವಾದದ ತಿರುಳು. ಟ್ರಂಪ್ ಸುಂಕಗಳ ಹೇರಿಕೆಯು ನವ-ಉದಾರವಾದದ ಹಿಂದಿನ ಮುಕ್ತ-ವ್ಯಾಪಾರ-ಮುಕ್ತ-ಬಂಡವಾಳ-ಹರಿವಿನ ಆವೃತ್ತಿಯಲ್ಲಿ ಅಮೆರಿಕದಲ್ಲಿ ಉದ್ಯೋಗದ ಮಟ್ಟವನ್ನು ಹೆಚ್ಚಿಸುವುದು ಸಾಧ್ಯವಾಗಲಿಲ್ಲ ಎಂಬುದರ ಸ್ಪಷ್ಟ ಸೂಚನೆಯಾಗಿದೆ.

ಸುಂಕಗಳ ಹೇರಿಕೆಯೆಂದರೆ, ಇತರ ದೇಶಗಳಿಗೆ ನಷ್ಟವನ್ನುಂಟು ಮಾಡಿ ಅಮೆರಿಕದಲ್ಲಿ ಉದ್ಯೋಗಗಳನ್ನು ಹೆಚ್ಚಿಸುವ ಪ್ರಯತ್ನವೇ ಆಗಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಇದು ಅಮೆರಿಕದಿಂದ ನಿರುದ್ಯೋಗವನ್ನು ಇತರ ದೇಶಗಳಿಗೆ ರಫ್ತು ಮಾಡುವ ಪ್ರಯತ್ನಕ್ಕೆ ಸಮನಾಗಿರುತ್ತದೆ ಮತ್ತು “ನಿನ್ನ-ನೆರೆಯವರು-ಹಾಳಾಗಲಿ” ನೀತಿಯ ಅನುಸರಣೆಯಾಗುತ್ತದೆ. ಇಂಥಹ “ನಿನ್ನ-ನೆರೆಯವರು-ಹಾಳಾಗಲಿ” ನೀತಿಗಳನ್ನು ಸ್ಪರ್ಧಾತ್ಮಕ ವಿನಿಮಯ ದರದ ಅಪ-ಮೌಲ್ಯದ ರೂಪದಲ್ಲಿ 1930ರ ದಶಕದ ಮಹಾ ಹಿಂಜರಿತದ ಸಮಯದಲ್ಲಿಯೂ ಅನುಸರಿಸಲಾಗಿತ್ತು.ಆದರೆ, ಅದು ಯಶಸ್ವಿಯಾಗಲಿಲ್ಲ.

ನವ-ಉದಾರವಾದಿ ಆಳ್ವಿಕೆಯಿಂದ ಭಾಗಶಃ ಹಿಂದಕ್ಕೆ ಸರಿಯುವುದನ್ನು ಆರಂಭಿಸುವುದು ಅಮೆರಿಕಕ್ಕೆ ಮಾತ್ರ ಸಾಧ್ಯವಿತ್ತು. ಏಕೆಂದರೆ, ಬೇರೆಯಾವುದೇ ದೇಶವು ಹೆಚ್ಚಿನ ಸುಂಕಗಳನ್ನು ಈ ರೀತಿಯಲ್ಲಿ ವಿಧಿಸಿದ್ದರೆ, ಅದು”ಹೂಡಿಕೆದಾರರ ವಿಶ್ವಾಸವನ್ನು” ಕಳೆದುಕೊಳ್ಳುತ್ತಿತ್ತು. ಅಂದರೆ ಅಲ್ಲಿಂದ ಹಣಕಾಸು ಬಂಡವಾಳ ಬೇರೆಡೆಗೆ ಹಾರಿಹೋಗುತ್ತಿತ್ತು ಮತ್ತು ಅದರ ಕರೆನ್ಸಿಯ ಕುಸಿತಕ್ಕೆ ಕಾರಣವಾಗುತ್ತಿತ್ತು. ಆದರೆ, ಡಾಲರ್ ಎಷ್ಟು ಬಲವನ್ನು ಇಂದಿಗೂ ಉಳಿಸಿಕೊಂಡಿದೆಯೆಂದರೆ, ಸೆಪ್ಟೆಂಬರ್ 28ಕ್ಕೆ ಕೊನೆಗೊಂಡ ವಾರ್ಷಿಕ ಅವಧಿಯಲ್ಲಿ ಯೂರೋ ಕರೆನ್ಸಿಯ ಎದುರು ಡಾಲರ್ ಮೌಲ್ಯದಲ್ಲಿ ಹೆಚ್ಚೇನೂ ಕುಸಿತವಾಗದೇ (ಶೇ. 4.57ರಷ್ಟು ಮಾತ್ರ) ನವ-ಉದಾರವಾದಿ ವ್ಯವಸ್ಥೆಯಿಂದ ಅಮೆರಿಕ ಭಾಗಶಃ ಹಿಂದಕ್ಕೆ ಸರಿಯುವುದುಸಾಧ್ಯವಾಗಿದೆ.

ಟ್ರಂಪ್ ಆಡಳಿತವು ಆಶಿಸುವಷ್ಟು ದೊಡ್ಡ ಪ್ರಮಾಣದ ಆಂತರಿಕ ಉದ್ಯೋಗಗಳ ಹೆಚ್ಚಳವನ್ನು ಅಮೆರಿಕ ಕಾಣದಿರಬಹುದು, ಏಕೆಂದರೆ, ಪ್ರತೀಕಾರದ ಕ್ರಮಗಳು ಎದುರಾಗದಿದ್ದರೂ, ಸುಂಕಗಳ ರಕ್ಷಣಾತ್ಮಕ ಪರಿಣಾಮವನ್ನು ಅವು ತರುವ ಹೆಚ್ಚಿನ ಹಣದುಬ್ಬರವು ಭಾಗಶಃವಾಗಿ ಸರಿದೂಗಿಸುತ್ತದೆ. ಆದರೆ, ಅಮೆರಿಕದ ಹೆಚ್ಚಿಸಿದ ಸುಂಕಗಳು ವಿಶ್ವದ ಉಳಿದ ದೇಶಗಳಿಗೆ ಬಿಕ್ಕಟ್ಟನ್ನು ಖಂಡಿತವಾಗಿಯೂ ಸದ್ಯಕ್ಕಾದರೂ ಉಲ್ಬಣಗೊಳಿಸುತ್ತವೆ. ಅವೇನಾದರೂ ತಮ್ಮ ಆರ್ಥಿಕ ಕಾರ್ಯತಂತ್ರದಲ್ಲಿ ಕೆಲವು ಬದಲಾವಣೆ ಮಾಡಿಕೊಂಡರೂ, ಅದುವರೆಗೂ ಈ ಬಿಕ್ಕಟ್ಟನ್ನುಎದುರಿಸಬೇಕಾಗುತ್ತದೆ.

ಈ ಎರಡೂ ಲಕ್ಷಣಗಳು ಅತಿರೇಕದ ಕ್ರಮಗಳನ್ನು ಪ್ರತಿನಿಧಿಸುತ್ತವೆ. ನವ-ಫ್ಯಾಸಿಸ್ಟರು ಅಧಿಕಾರದ ಚುಕ್ಕಾಣಿ ಹಿಡಿಯುವುದು ಬಂಡವಾಳಶಾಹಿಯು ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ತವರು ಎಂಬ ದಾವೆಯ ಮುಖದ ಮೇಲೆ ರಾಚುತ್ತದೆ. ಅಂತೆಯೇ, ಈ ಕಾಲದ ಪ್ರಧಾನ ಬಂಡವಾಳಶಾಹಿ ಶಕ್ತಿಯು, “ನೆರೆಹೊರೆಯವನು ಹಾಳಾಗಲಿ” ಎಂಬ ನೀತಿಯನ್ನು, ಅದಕ್ಕೆ ಸದಾ ಬಲಿಪಶುಗಳಾಗುವ ಮೂರನೇ ಜಗತ್ತಿನ ದೇಶಗಳ ವಿರುದ್ಧವಾಗಿ ಮಾತ್ರವಲ್ಲದೆ, ಉಳಿದ ಮುಂದುವರೆದ ಬಂಡವಾಳಶಾಹೀ ದೇಶಗಳ ವಿರುದ್ಧವೂ ಸಹ ಅನುಸರಿಸುತ್ತಿರುವುದು, ಇತ್ತೀಚಿನ ನೆನಪುಗಳಲ್ಲಿ ಒಂದು ಅಭೂತಪೂರ್ವವಾದ ಹತಾಶೆ ಮತ್ತು ಅಸಹಾಯಕತೆಯನ್ನು ಬಯಲಿಗೆತರುತ್ತದೆ. ಈ ಅತಿರೇಕದ ಕ್ರಮಗಳು ಪ್ರಸ್ತುತ ವ್ಯವಸ್ಥೆಯು ಎದುರಿಸುತ್ತಿರುವ ಪೇಚಿನ ಗಂಭೀರತೆಗೆ ಸಾಕ್ಷಿಯಾಗಿವೆ.

ಇದನ್ನೂ ನೋಡಿ: ಸರ್ಕಾರಿ ಜಾಗಗಳಲ್ಲಿ RSS ಕಾರ್ಯಕ್ರಮ ನಿಷೇಧ | ಪ್ರಿಯಾಂಕ್‌ ಖರ್ಗೆಗೆ ಕೊಲೆ ಬೆದರಿಕೆ Janashakthi Media

Donate Janashakthi Media

Leave a Reply

Your email address will not be published. Required fields are marked *