– ವಸಂತರಾಜ ಎನ್.ಕೆ
ಕಳೆದ ವಾರ ಜಾಗತಿಕ ರಾಜಕಾರಣದಲ್ಲಿ ಗಮನಾರ್ಹವಾದ ಎರಡು ವಿದ್ಯಮಾನಗಳು ನಡೆದವು. ಒಂದು ಭಾರತದಲ್ಲಿ ಭಾರೀ ಪ್ರಚಾರ ಪಡೆದ ಪ್ರಧಾನಿ ಮೋದಿ ಅವರ ಅಧಿಕೃತ ಯು.ಎಸ್ ಭೇಟಿ. ಇನ್ನೊಂದು ಹಲವು ಜಾಗತಿಕ ಸಾಮಾಜಿಕ, ಶಾಂತಿ ಚಳುವಳಿಗಳು, ಜಾಗತಿಕ ಜನಪರ ಸಂಶೋಧನಾ ಸಂಸ್ಥೆಗಳು ಭಾಗವಹಿಸಿದ ಜಾಗತಿಕ ಸಭೆ. ಇವೆರಡಕ್ಕೆ ಎಲ್ಲಿಯ ಕನೆಕ್ಶನ್ ಎಂದು ಕೇಳಬಹುದು. ಅದಕ್ಕೆ ಉತ್ತರಿಸುವ ಪ್ರಯತ್ನವಿದು.
ಜೂನ್ 17ರಂದು “ನವ ಅಲಿಪ್ತ ಚಳುವಳಿ ಮತ್ತು ನವ ಶೀತಲ ಸಮರ’ ಎಂಬ ವಿಷಯದ ಕುರಿತು ಚರ್ಚೆ ನಡೆದ ಈ ಸಭೆಯಲ್ಲಿ ‘ನವ ಶೀತಲ ಸಮರ ನಿಲ್ಲಿಸಬೇಕು’, ‘ಅಲಿಪ್ತ ಚಳುವಳಿ ಕಟ್ಟಲು’ ಮೂರನೇ ಜಗತ್ತಿನ ದೇಶಗಳು ಮುಂದಾಗಬೇಕು ಎಂದು ಕರೆ ನೀಡಿದೆ. ‘ಶೀತಲ ಸಮರ ಬೇಡ ಅಭಿಯಾನ’, ಟ್ರೈ ಕೊಂಟಿನೆಂಟಲ್ ಇನ್ಸ್ಟಿಟ್ಯೂಟ್ ಆಫ‍್ ಸೋಶಿಯಲ್ ರಿಸರ್ಚ್, ಲ್ಯಾಟಿನ್ ಅಮೆರಿಕದ ALBA ಚಳುವಳಿ, ಪಾನ್-ಆಫ್ರಿಕನಿಸಂ ಟುಡೆ, ಇಂಟರ್-ನ್ಯಾಶನಲ್ ಸ್ಟ್ರಾಟೆಜಿ ಸೆಂಟರ್ ಮತ್ತು ಇಂಟರ್-ನ್ಯಾಶನಲ್ ಪೀಪಲ್ಸ್ ಅಸೆಂಭ್ಲಿ ಈ ಸಭೆಯನ್ನು ಜಂಟಿಯಾಗಿ ಸಂಘಟಿಸಿದ್ದವು. ಉಕ್ರೇನ್ ಯುದ್ಧದಲ್ಲಿ ಕೊನೆಗೊಂಡ ಕಳೆದ ಕೆಲವು ವರ್ಷಗಳಿಂದ ಯು.ಎಸ್-ಯುರೋ ಕೂಟಗಳು ರಶ್ಯ-ಚೀನಾ ಸೇರಿದಂತೆ ಎಲ್ಲ ದೇಶಗಳತ್ತ ತೋರಿಸುತ್ತಿರುವ ಆಕ್ರಾಮಕ ಧೋರಣೆಯನ್ನು ‘ನವ ಶೀತಲ ಸಮರ’ವೆಂದು ಕರೆಯಲಾಗುತ್ತಿದೆ.
ಶೀತಲ ಸಮರೋತ್ತರ ಯುಗದ ಕೊನೆಯತ್ತ
ಉಕ್ರೇನ್ ಯುದ್ಧದ ಸಂದರ್ಭದಲ್ಲಿ ರಷ್ಯಾದ ಮೇಲೆ ಹಾಕಿದ ಆರ್ಥಿಕ ದಿಗ್ಬಂಧನದಲ್ಲಿ ಜಾಗತಿಕ ದಕ್ಷಿಣ (ಗ್ಲೋಬಲ್ ಸೌತ್) ಎಂದು ಕರೆಯಲಾಗುವ ಅಭಿವೃದ್ಧಿಶೀಲ ದೇಶಗಳು ಭಾಗವಹಿಸಲು ನಿರಾಕರಿಸಿದ್ದು, ರಷ್ಯಾದ ತೈಲ ಖರೀದಿ ಮಾಡಬಾರದು ಎಂಬ ಅವರ ಫರ್ಮಾನಿಗೂ ಕ್ಯಾರೇ ಅನ್ನದ್ದು ಯು.ಎಸ್,-ಯುರೋ ಕೂಟದಲ್ಲಿ ತೀವ್ರ ಆತಂಕ, ಆಘಾತ ತಂದಿದೆ. ಯು.ಎಸ್ ಪರವಿದ್ದ ಬಲಪಂಥೀಯ ನಾಯಕರಾದ ನಾಟೋ ಸದಸ್ಯ ದೇಶವಾದ ತುರ್ಕಿಯ ನಾಯಕ ಎರ್ಡೊಗಾನ್ ಮತ್ತು ಭಾರತದ ಮೋದಿ ಸಹ ಈ ಸಂದರ್ಭದಲ್ಲಿ ಯು.ಎಸ್-ಯುರೋ ಕೂಟದ ಒತ್ತಡಕ್ಕೆ ಮಣಿಯದ್ದು ಅವರಿಗೆ ಆಶ್ಚರ್ಯ ತಂದಿದೆ. ಮಾತ್ರವಲ್ಲ, ಭಾರತ ಸೇರಿದಂತೆ ಜಾಗತಿಕ ದಕ್ಷಿಣದ ದೇಶಗಳು ಯುಕ್ರೇನ್ ಯುದ್ಧಕ್ಕೆ ರಷ್ಯಾವೇ ಕಾರಣವೆಂದು ಅದನ್ನು ಖಂಡಿಸಲು ಸಹ ನಿರಾಕರಿಸಿವೆ. ಈ ಯುದ್ಧ ಆರಂಭ ಮಾಡುವುದರಲ್ಲಿ ಯು.ಎಸ್-ಯುರೋ ಕೂಟದ ಪಾತ್ರವೂ ಇದೆಯೆಂದು ಹಲವು ದೇಶಗಳು ಪರೋಕ್ಷವಾಗಿ, ಕೆಲವು ದೇಶಗಳು ನೇರವಾಗಿ ಸೂಚಿಸಿವೆ. ಈ ನಡುವೆ ಚೀನಾದ ವಿರುದ್ಧ ಆರ್ಥಿಕ, ತಂತ್ರಜ್ಞಾನ ದಿಗ್ಬಂಧನದ ಯುದ್ಧ ಹೂಡಿದೆ. ಚೀನಾ, ತೈವಾನ್ ಗಳ ನಡುವೆ ಸಹ ಸಂಘರ್ಷದ ಸನ್ನಿವೇಶ ಮೂಡಿಸಲು ಯು.ಎಸ್ ಪ್ರಯತ್ನಿಸುತ್ತಿರುವುದನ್ನು ಜಾಗತಿಕ ದಕ್ಷಿಣದ ದೇಶಗಳು ಆತಂಕದಿಂದ ಗಮನಿಸಿವೆ.
ಅದೇ ಸಮಯದಲ್ಲಿ ಜಾಗತಿಕ ದಕ್ಷಿಣದ ದೇಶಗಳು ಆರ್ಥಿಕ ದಿಗ್ಬಂಧನ ತಪ್ಪಿಸಿಕೊಳ್ಳಲು ಅಂತರ್ರಾಷ್ಟ್ರೀಯ ವ್ಯಾಪಾರದಲ್ಲಿ ಡಾಲರ್ ಗೆ ಪ್ರತಿಯಾಗಿ ತಮ್ಮದೇ ಅಥವಾ ಬೇರೆ ಕರೆನ್ಸಿ ಬಳಸಿಕೊಳ್ಳುತ್ತಿರುವುದು ಯು.ಎಸ್ ಗೆ ತೀವ್ರ ಆಘಾತ ತಂದಿದೆ. ಅಂತರ್ರಾಷ್ಟ್ರೀಯ ವ್ಯಾಪಾರದಲ್ಲಿ ಡಾಲರ್ ಯು.ಎಸ್ ನ ಜಾಗತಿಕ ಯಜಮಾನಿಕೆಯ ಪ್ರಮುಖ ಅಂಶ.
ಅಂತರ್ರಾಷ್ಟ್ರೀಯ ವ್ಯವಸ್ಥೆಯಲ್ಲಿ ‘ಆಳವಾದ ಮತ್ತು ನಿರಂತರವಾದ ಬಿರುಕುಗಳು’ ಕಂಡು ಬಂದಿವೆ. ಜಾಗತಿಕ ಪಶ್ಚಿಮದ (ಯು.ಎಸ್, ಯುರೋ ಕೂಟ, ಜಪಾನ್ ಮತ್ತಿತರ ಅದರ ಸಹಚರರು) ಮತ್ತು ಜಾಗತಿಕ ಪೂರ್ವದ (ರಷ್ಯಾ, ಚೀನಾ ಮತ್ತು ಅದರ ಸಹಚರರು) ದೇಶಗಳು ವ್ಯೂಹಾತ್ಮಕ ಹಿತಾಸಕ್ತಿಗಳಲ್ಲಿ ದೂರ ಸರಿಯುತ್ತಿವೆ. ಜಾಗತಿಕ ದಕ್ಷಿಣ (ಭಾರತ, ಬ್ರೆಜಿಲ್, ದ.ಆಫ್ರಿಕಾ ಸೇರಿದಂತೆ ಏಶ್ಯಾ, ಆಫ್ರಿಕ, ಲ್ಯಾಟಿನ್ ಅಮೆರಿಕದ ಅಭಿವೃದ್ಧಿಶೀಲ ದೇಶಗಳು) ತಮ್ಮ ಹಿತಾಸಕ್ತಿಗಳನ್ನು ಕಾಪಾಡಲು ಪುನರ್ಸಂಘಟಿತಗೊಳ್ಳುತ್ತಿವೆ, ಎಂದು ಪ್ರಸಿದ್ಧ ಸ್ವಿಸ್ ಬ್ಯಾಂಕ್ ಕ್ರೆಡಿಟ್ ಸೂಸಿ ಯ 2023 ಮುನ್ನೋಟದ ವರದಿಯಲ್ಲಿ ಹೇಳಲಾಗಿದೆ. ಜಪಾನಿನ ವಿದೇಶಾಂಗ ಸಚಿವಾಲಯದ ವರದಿಯಲ್ಲಿ ಶೀತಲ ಸಮರೋತ್ತರ (ಸೋವಿಯೆಟ್ ವಿಘಟನೆಯೊಂದಿಗೆ ಮುಗಿದ ಶೀತಲ ಸಮರದ ನಂತರದ ಯು.ಎಸ್-ಯುರೋ-ಜಪಾನ್‌ಗಳ ಕೂಟದ ಏಕಛತ್ರಾಧಿಪತ್ಯದ) ಯುಗದ ಕೊನೆಯಲ್ಲಿದ್ದೇವೆ ಎಂದಿದೆ.
ಹೊಮ್ಮುತ್ತಿರುವ ನವ ಅಲಿಪ್ತ ಚಳುವಳಿ
ಯು.ಎಸ್-ಯುರೋ-ಜಪಾನ್ ಗಳ ಕೂಟ ಜಗತ್ತಿನ ಮೇಲೆ ಸಾಧಿಸಿದ ಯಜಮಾನಿಕೆಯ ಯುಗ ಮುಗಿಯುತ್ತಾ ಬಂದಿರುವುದಕ್ಕೆ ಹಲವು ಕಾರಣಗಳಿವೆ. ಒಂದು ಕಡೆ ಈ ಕೂಟ ಆರ್ಥಿಕವಾಗಿ ಹಿಂದೆಂದಿಗಿಂತಲೂ ದುರ್ಬಲವಾಗಿದೆ. ಇನ್ನೊಂದು ಕಡೆ ಚೀನಾ ಜಗತ್ತಿನ ಅತಿ ದೊಡ್ಡ ಆರ್ಥಿಕವಾಗಿ ಹೊಮ್ಮಿದೆ. ಜಾಗತಿಕ ಉತ್ತರ (ಎಲ್ಲ ಶ್ರೀಮಂತ ದೇಶಗಳ ಕೂಟ) ದ ಜಿಡಿಪಿ ಯನ್ನು ಹಿಂದಿಕ್ಕಿ, ಜಾಗತಿಕ ದಕ್ಷಿಣ (ರಷ್ಯಾ, ಚೀನಾ, ಭಾರತ ಸೇರಿದಂತೆ ಎಲ್ಲ ಅಭಿವೃದ್ಧಿ ಹೊಂದುತ್ತಿರುವ ದೇಶಗಳ) ಜಿಡಿಪಿ ಹೆಚ್ಚುತ್ತಿದೆ.. ಜಾಗತಿಕ ದಕ್ಷಿಣ ದ ದೇಶಗಳಲ್ಲಿ ಅಗಾಧ ಆಂತರಿಕ ಅಸಮಾನತೆ ಇದ್ದರೂ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಅವುಗಳಲ್ಲಿ ಪ್ರತ್ಯೇಕವಾಗಿಯೂ ಸಾಮೂಹಿಕವಾಗಿಯೂ ಹೊಸ ಆತ್ಮವಿಶ್ವಾಸ ಕಂಡು ಬಂದಿದೆ. ಜಾಗತಿಕ ಉತ್ತರದ ಆಣತಿಯನ್ನು ಮೊದಲಿನಂತೆ ಕೇಳಲು ಅವು ತಯಾರಿಲ್ಲ.
ಈಗಾಗಲೇ ಜಾಗತಿಕ ದಕ್ಷಿಣದ ದೇಶಗಳು ಪ್ರಾದೇಶಿಕ ಮತ್ತು ಅಂತರ್ರಾಷ್ಟ್ರೀಯ ಸಂಘಟನೆಗಳನ್ನು ಕಟ್ಟಿಕೊಂಡು ತಮ್ಮ ಹಿತಾಸಕ್ತಿ ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿವೆ. 2009ರಲ್ಲಿ ಸ್ಥಾಪಿತವಾದ ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದ.ಆಫ್ರಿಕಾ) ಕೂಟದ ಜಿಡಿಪಿ ಜಿ-7 ದೇಶಗಳ ಜಿಡಿಪಿ ಯನ್ನು ಮೀರಿ ಬೆಳೆದಿದೆ. ಬ್ರಿಕ್ಸ್ ಶೃಂಗಸಭೆ ಇದೇ ಅಗಸ್ಟ್‌ನಲ್ಲಿದ.ಆಫ್ರಿಕಾದಲ್ಲಿ ನಡೆಯಲಿದ್ದು ಇನ್ನೂ 12 ದೇಶಗಳು ಅದಕ್ಕೆ ಸೇರಲು ತುದಿಗಾಲಿನಲ್ಲಿ ನಿಂತಿವೆ. ಈ ಶೃಂಗ ಸಭೆಗೆ ಪೂರ್ವಭಾವಿಯಾಗಿ ನಡೆದ ವಿದೇಶ ಮಂತ್ರಿಗಳ ಸಭೆಯ ಹೇಳೀಕೆಯಲ್ಲಿ ‘ಏಕಪಕ್ಷೀಯ ದಿಗ್ಭಂಧನಗಳನ್ನು’ ಖಂಡಿಸಲಾಗಿದೆ. ಜಾಗತಿಕ ಉತ್ತರದ ಯಜಮಾನಿಕೆಯ ವಿಶ್ವ ಬ್ಯಾಂಕ್, ಐಎಂಎಫ್ ಗಳಿಗೆ ಬದಲಿಯಾದ ಅಂತರ್ರಾಷ್ಟ್ರೀಯ ಸಂಘಟನೆಗಳನ್ನು ಬ್ರಿಕ್ಸ್ ಕಟ್ಟಿ ಬೆಳೆಸುತ್ತಿದೆ. ಇದಲ್ಲದೆ ಭಾರತ, ಚೀನಾ, ರಷ್ಯಾ ಸೇರಿದಂತೆ ಯುರೇಶ್ಯಾದ 8 ದೇಶಗಳ ಸಂಘಟನೆ ಶಾಂಘಾಯ್ ಸಹಕಾರ ಸಂಘಟನೆ (ಎಸ್‌ಸಿಒ) 2001ರಿಂದ ಸಕ್ರಿಯವಾಗಿದೆ. ಲ್ಯಾಟಿನ್ ಅಮೆರಿಕ ಮತ್ತು ಕ್ಯಾರಿಬಿಯನ್ ಪ್ರದೇಶದ 32 ದೇಶಗಳ ಸಂಘಟನೆಯಾದ CELAC 2011ರಿಂದ ಕೆಲಸ ಮಾಡುತ್ತಿದ್ದು ಇಡೀ ಖಂಡದ ಹಿತಾಸಕ್ತಿ ಕಾಪಾಡಲು ಪ್ರಯತ್ನಿಸುತ್ತಿದೆ. ಅದೇ ರೀತಿ 1999ರಲ್ಲಿ ಲಿಬ್ಯಾದ ಆಗಿನ ನಾಯಕ ಗದ್ದಾಫಿ ಪ್ರಯತ್ನದಿಂದ ಸ್ಥಾಪಿತವಾದ ಆಫ್ರಿಕನ್ ಯೂನಿಯನ್ ಬಹಳ ಸಡಿಲವಾಗಿ ಸಂಘಟಿತವಾಗಿದ್ದರೂ ಆಫ್ರಿಕಾದ ದನಿ ಅಂತರ್ರಾಷ್ಟ್ರೀಯವಾಗಿ ಕೇಳಿ ಬರುವಂತೆ ಪ್ರಯತ್ನಿಸುತ್ತಿದೆ. ಯು.ಎಸ್-ಯುರೋ ಕೂಟ ಜಗತ್ತಿನ ಮೇಲೆ ಹೊರಿಸುತ್ತಿರುವ ‘ನವ ಶೀತಲ ಸಮರ’ವನ್ನು ವಿರೋಧಿಸಲು ಸಜ್ಜಾಗುತ್ತಿವೆ.
ವಿಶ್ವಸಂಸ್ಥೆಯ ಚಾರ್ಟರ್ ಸಾರ್ವಭೌಮತೆ, ಸಮಾನತೆ ಮತ್ತು ಪ್ರಜಾಸತ್ತಾತ್ಮಕ ನೀತಿಗಳ ಮೇಲೆ ಆಧಾರಿತವಾಗಿದ್ದರೂ, ಅದರ ಸಂಘಟನಾ ವಿನ್ಯಾಸವನ್ನು ಶ್ರೀಮಂತ ದೇಶಗಳು ತಮ್ಮ ಮೂಗಿಗೆ ನೇರಕ್ಕೆ ಅನುವಾಗುವಂತೆ ರೂಪಿಸಿದ್ದು ಜಾಗತಿಕ ದಕ್ಷಿಣದ ದೇಶಗಳ ಹಿತಾಸಕ್ತಿಗಳ ರಕ್ಷಣೆಯನ್ನು ಅದು ಮಾಡಲಾಗುತ್ತಿಲ್ಲ. ಹಾಗಾಗಿ ವಿಶ್ವಸಂಸ್ಥೆಯ ಸಂಘಟನಾ ಸುಧಾರಣೆಗಳಿಗಾಗಿ (ಭದ್ರತಾ ಸಮಿತಿಯ ವಿಸ್ತರಣೆ, ಹೆಚ್ಚಿನ ಪ್ರಾದೇಶಿಕ ಪ್ರಾತಿನಿಧ್ಯ, ಸಮಾನತೆ ಇತ್ಯಾದಿ) ಅಭಿವೃದ್ಧಿಶೀಲ ದೇಶಗಳು ಹೋರಾಡುತ್ತಿವೆ.
1961 ರಲ್ಲಿ ಯುಗೋಸ್ಲಾವಿಯದಲ್ಲಿ ಸ್ಥಾಪಿತವಾದ ಅಲಿಪ್ತ ಚಳುವಳಿ 20ನೆಯ ಶತಮಾನದ ಪ್ರಮುಖ ಜಾಗತಿಕ ವಿದ್ಯಮಾನವಾಗಿತ್ತು. ಯಾವುದೇ ಮಿಲಿಟರಿ ಕೂಟಕ್ಕೆ ಸೇರದೆ ಅಲಿಪ್ತ ವಾಗಿರುವುದು, ತಮ್ಮ ಸ್ವಾತಂತ್ರ್ಯ, ಸಾರ್ವಭೌಮತೆ ಕಾಪಾಡಲು ಸಾಮೂಹಿಕವಾಗಿ ಪ್ರಯತ್ನಿಸುವುದು ಅಲಿಪ್ತ ಚಳುವಳಿಯ ಮುಖ್ಯ ಧೋರಣೆಯಾಗಿತ್ತು. ನವ ಶೀತಲ ಸಮರವನ್ನು ಹಾಗೂ ಅದು ತರುವ ಜಾಗತಿಕ ವಿನಾಶವನ್ನು ತಪ್ಪಿಸಬೇಕಾದರೆ, ಹೊಸ ಸನ್ನಿವೇಶದಲ್ಲಿ ಹೊಸ ರೂಪದ ಪ್ರಸ್ತುತವಾದ ಹೊಸ ಗುರಿಗಳನ್ನು ಹೊಂದಿದ ‘ನವ ಅಲಿಪ್ತ ಚಳುವಳಿ’ಯ ಅಗತ್ಯವಿದೆ. ಮೇಲೆ ಹೇಳಿದ ಹಲವು ಕೂಟಗಳ, ಬೆಳವಣಿಗೆಗಳು ಈಗಾಗಲೇ ಇಂತಹ ಅಲಿಪ್ತ ಚಳುವಳಿ ರೂಪುಗೊಳ್ಳುತ್ತಿರುವ ಸೂಚನೆ ನೀಡುತ್ತಿವೆ.
ನವ ಅಲಿಪ್ತ ಚಳುವಳಿಯನ್ನು ಚಿವುಟಿ ಹಾಕಲು ಮೋದಿ ಓಲೈಕೆ
ಅದೇ ಸಮಯದಲ್ಲಿ ಉಕ್ರೇನ್ ಯುದ್ಧದ ಭಾಗವಾಗಿ ರಷ್ಯಾದ ವಿರುದ್ಧ ಆರ್ಥಿಕ ದಿಗ್ಬಂಧನಗಳು ಬ್ಯೂಮರಾಂಗ್ ಆಗಿದ್ದು, ಜೀವನಾವಶ್ಯಕ ವಸ್ತುಗಳ ಕೊರತೆ, ಬೆಲೆಏರಿಕೆ ಗಳು ಯುರೋಪಿನ ಜನರ ಜೀವನವನ್ನು ದುರ್ಭರಗೊಳಿಸಿವೆ, ವಿಶ್ವ ಯುದ್ಧಗಳ ಕಹಿ ನೆನಪನ್ನು ಮರುಕಳಿಸಿದೆ. ಜನತೆ ಈ ಯುದ್ಧ ನೀತಿಯನ್ನು ಪ್ರಶ್ನಿಸಲಾರಂಭಿಸಿದ್ದಾರೆ. ಯುರೋಪಿನ ಆಳುವ ವರ್ಗಗಳು ಹೆಚ್ಚು ಕಡಿಮೆ ಯು.ಎಸ್ ಆಣತಿಗೆ ಮಣಿದಿದ್ದರೂ, ಅದರ ಕೆಲವು ವಿಭಾಗಗಳು ಪ್ರತಿರೋಧ ಒಡ್ಡಲಾರಂಭಿಸಿವೆ. ಅವು ಯುರೋಪಿನ ವ್ಯೂಹಾತ್ಮಕ ಸ್ವಾತಂತ್ರ್ಯದ ಸೊಲ್ಲು ಎತ್ತಿವೆ. ಜರ್ಮನಿ ಮೊದಲಾದ ದೇಶಗಳಲ್ಲಿ ಹೊಸ ಶಾಂತಿ ಚಳುವಳಿ ಬೆಳೆಯಲಾರಂಭಿಸಿದೆ. ಇಂತಹ ಚಳುವಳಿ ಅಲಿಪ್ತ ಚಳುವಳಿಗೆ ಸೌಹಾರ್ದ ಬೆಂಬಲ ಸೂಚಿಸಿದೆ. ಇವೆಲ್ಲವನ್ನೂ ಮೇಲೆ ಹೇಳಿದ ಸಭೆಯಲ್ಲಿ ಚರ್ಚಿಸಲಾಯಿತು.
ಇದನ್ನೂ ಓದಿ:‘ಹೇಯ್ ಜೋ ಬೈಡನ್, ಮೋದಿಯನ್ನು ಪ್ರಶ್ನಿಸಿ…!’: ಅಮೆರಿಕಾದಲ್ಲಿ ಪ್ರಧಾನಿ ವಿರುದ್ಧ ಪ್ರತಿಭಟನೆ
ಈ ಬೆಳವಣಿಗೆಗಳನ್ನು ಯು.ಎಸ್ ಕೂಟ ಆತಂಕದಿಂದ ಗಮನಿಸುತ್ತಿದ್ದು ಇದಕ್ಕೆ ಪ್ರತಿಯಾಗಿ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಭಾರತ-ಚೀನಾ ಗಡಿ ವಿವಾದ, ಘರ್ಷಣೆಯ ಹಿನ್ನೆಲೆಯಲ್ಲಿ ಚೀನಾದ ವಿರುದ್ಧ ಭಾರತವನ್ನು ಬಳಸುವ ಮತ್ತು ಭಾರತವನ್ನು ಓಲೈಸಿ ನವ ಅಲಿಪ್ತ ಚಳುವಳಿಯ ತೆಕ್ಕೆಯಿಂದ ಹೊರ ತರುವುದು ಅವುಗಳಲ್ಲಿ ಒಂದು. ಇತ್ತೀಚಿನ ಹಿರೋಶಿಮಾದಲ್ಲಿ ನಡೆದ ಜಿ-7 ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ಮೋದಿಗೆ ಆಹ್ವಾನ, ಈಗ ಯು.ಎಸ್ ಗೆ ಅಧಿಕೃತ ಭೇಟಿ ಈ ಪ್ರಯತ್ನದ ಬಾಗಗಳು. ಈಗಾಗಲೇ ಭಾರತದ ಜತೆ ಹಲವು ಮಿಲಿಟರಿ ಒಪ್ಪಂದಗಳ ಸರಣಿಯನ್ನು ಕೈಗೊಳ್ಳಲಾಗಿದೆ. ಭಾರತವನ್ನು ನಾಟೋ ಪ್ಲಸ್ ನ ಭಾಗವಾಗಿಸುವ ಸೂಚನೆ ಕೊಡಲಾಗಿದೆ. ಚೀನಾ ವಿರುದ್ಧ ಯು.ಎಸ್ ಸಂಘಟಿಸಿರುವ ಕ್ವಾಡ್ ಕೂಟದಲ್ಲಿ ಭಾರತವನ್ನು ಸೇರಿಸಿ ತೈವಾನ್ ಮುಂಬರಬಹುದಾದ ಯುದ್ಧಕ್ಕೆ ಭಾರತವನ್ನು ಸೆಳೆಯುವುದು ಯು.ಎಸ್ ಗುರಿ. ಅದೇ ರೀತಿ ಪಶ್ಚಿಮ ಏಶ‍್ಯಾದ ಕೊಲ್ಲಿ ಪ್ರದೇಶದಲ್ಲಿ ಮೂಡುತ್ತಿರುವ ಎಲ್ಲ ಅರಬ್ ದೇಶಗಳ ಕೂಟದ ವಿರುದ್ಧ ಯು.ಎಸ್ ಕಟ್ಟುತ್ತಿರುವ I2U2 ಕೂಟದಲ್ಲೂ ಭಾರತ ಭಾಗಿಯಾಗಿದೆ. ಭಾರತವನ್ನುರಷ್ಯಾ, ಚೀನಾ ಇರುವ ಸಂಘಟನೆಗಳಿಂದ ದೂರ ಮಾಡುವುದು ಸಹ ಅವರ ಉದ್ದೇಶ.
ಯು.ಎಸ್ ಭೇಟಿಯಲ್ಲಿ ರಕ್ಷಣಾ ಉಪಕರಣ, ತಂತ್ರಜ್ಞಾನಗಳ ಮಾರಾಟಕ್ಕೆ ಒತ್ತು ಇದನ್ನು ಸ್ಪಷ್ಟ ಪಡಿಸುತ್ತದೆ. ಈಗಿನ ವಿದೇಶ ನೀತಿಯಲ್ಲಿ ಭಾರತ ಯು.ಎಸ್ ನ ಜೂನಿಯರ್ ಪಾರ್ಟನರ್ ಆಗಿದ್ದು ಭಾರತದ ಆಳುವ ವರ್ಗಗಳು ಇದನ್ನು ಸಂಭ‍್ರಮಿಸುತ್ತಿವೆ. ಆಗೊಮ್ಮೆ ಈಗೊಮ್ಮೆ ಪ್ರತಿರೋಧ ತೋರಿದರೂ, ಯು..ಎಸ್-ಯುರೋ ಕೂಟದಿಂದ ‘ವಿಶ್ವ ಗುರು’ ಎಂದು ಕರೆಸಿಕೊಳ್ಳುವ ಆಮಿಷಕ್ಕೆ ಬಿದ್ದಿದೆ. ಇವೆಲ್ಲದರಿಂದ ಮತ್ತು ಕುರುಡು ಚೀನಾ-ಭೀತಿ ಚೀನಾ-ದ್ವೇಷಗಳಿಂದಾಗಿ ತೈವಾನ್, ಉಕ್ರೇನ್‌ಗಳಲ್ಲಿ ಯು.ಎಸ್ ಕೂಟದ ಹಿಂಬಾಲಕವಾಗುವ ಸಾಧ‍್ಯತೆ ಇಲ್ಲದಿಲ್ಲ. ಅದನ್ನು ನಿರಾಕರಿಸಿ ಭಾರತ ತನ್ನ ಹಿತಾಸಕ್ತಿ ಕಾಪಾಡಲು ಜಾಗತಿಕ ದಕ್ಷಿಣದ ಸಂಘಟನೆಗಳನ್ನು ಗಟ್ಟಿಗೊಳಿಸಬೇಕು. ‘‘ನವ ಶೀತಲ ಸಮರ ನಿಲ್ಲಿಸಬೇಕು’ ಎಂದು ಒತ್ತಾಯಿಸಿ ‘ನವ ಅಲಿಪ್ತ ಚಳುವಳಿ ಕಟ್ಟಲು’ ಮುಂದಾಗುವುದರಲ್ಲಿ ಭಾರತದ ವ್ಯೂಹಾತ್ಮಕ ಹಿತಾಸಕ್ತಿ ಅಡಗಿದೆ.