‘ಹೇಯ್ ಜೋ ಬೈಡನ್, ಮೋದಿಯನ್ನು ಪ್ರಶ್ನಿಸಿ…!’: ಅಮೆರಿಕಾದಲ್ಲಿ ಪ್ರಧಾನಿ ವಿರುದ್ಧ ಪ್ರತಿಭಟನೆ

‘ಕ್ರೈಂ ಮಿನಿಸ್ಟರ್ ಆಫ್ ಇಂಡಿಯಾ’ ಎಂಬ ಹ್ಯಾಶ್‌ ಟ್ಯಾಗ್‌ನೊಂದಿಗೆ ಭಿತ್ತಿ ಫಲಕಗಳನ್ನು ಬಳಸಿ ಮೋದಿ ವಿರದ್ದ ಆಕ್ರೋಶ

ನ್ಯೂಯಾರ್ಕ್‌: ಅಮೆರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಘೋಷಣೆಯಿರುವ ವಾಹನಗಳು ನಗರದಾದ್ಯಂತ ಓಡಾಡಿಸಿ ಅವರ ವಿರುದ್ಧ ಪ್ರತಿಭಟನೆ ನಡೆಸಲಾಗಿದೆ. ‘ಹೇಯ್ ಜೋ ಬೈಡನ್, ಮೋದಿಯನ್ನು ಪ್ರಶ್ನಿಸಿ, ಭಾರತವೇಕೆ ನರಮೇಧದ ಹೊಸ್ತಿಲಲ್ಲಿದೆ’ ಎಂಬ ಫಲಕಗಳಿರುವ ವಾಹನಗಳು ನಗರದ ರಸ್ತೆಗಳಲ್ಲಿ ಓಡಾಡುತ್ತಿರುವ ಚಿತ್ರಗಳು ಮತ್ತು ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.

‘ಕ್ರೈಂ ಮಿನಿಸ್ಟರ್ ಆಫ್ ಇಂಡಿಯಾ’ ಎಂಬ ಹ್ಯಾಶ್‌ ಟ್ಯಾಗ್‌ನೊಂದಿಗೆ ಭಿತ್ತಿ ಫಲಕಗಳನ್ನು ಬಳಸಿ ಮೋದಿ ಅವರ ಅಮೆರಿಕ ಭೇಟಿ ವಿರೋಧಿಸಿ ನ್ಯೂಯಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಕುಸ್ತಿಪಟುಗಳ ಪ್ರತಿಭಟನೆ, ಉಮರ್ ಖಾಲಿದ್ ಸೇರಿದಂತೆ ಹಲವಾರು ಹೋರಾಟಗಾರರ ಬಂಧನ ಹಾಗೂ ಭಾರತದಲ್ಲಿನ ಹಿಂಸಾಚಾರಗಳ ಬಗ್ಗೆ ಮೋದಿಗೆ ಮಹತ್ವದ ಪ್ರಶ್ನೆಗಳನ್ನು ಕೇಳುವಂತೆ ಟ್ರಕ್‌ಗಳ ಪರದೆಗಳಲ್ಲಿ ಅಧ್ಯಕ್ಷ ಬಿಡೆನ್‌ ಅವರನ್ನು ಒತ್ತಾಯಿಸಲಾಗಿದೆ.

ಈ ನಡುವೆ, ವಿಶ್ವದ ಖ್ಯಾತ ಪತ್ರಿಕೆ ವಾಷಿಂಗ್ಟನ್ ಪೋಸ್ಟ್‌ನಲ್ಲಿ, ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯದ ವಿಷಯಗಳ ಕುರಿತು ಹಾಗೂ ದೇಶದ ಪತ್ರಕರ್ತರನ್ನು ರಕ್ಷಿಸುವ ಕುರಿತು ಬುಧವಾರ ಪೂರ್ಣ ಪುಟದ ಜಾಹೀರಾತನ್ನು ನೀಡಿದೆ. ಈ ಜಾಹಿರಾತಿನಲ್ಲಿ ಭಾರತದಲ್ಲಿ ಬಂಧಿತರಾಗಿರುವ ಪತ್ರಕರ್ತರಾದ ಆಸಿಫ್ ಸುಲ್ತಾನ್, ಗೌತಮ್ ನವಲಕ, ಸಜಾದ್ ಗುಲ್, ಫಹಾದ್ ಶಾ, ರೂಪೇಶ್ ಕುಮಾರ್ ಸಿಂಗ್ ಮತ್ತು ಇರ್ಫಾನ್ ಮೆಹ್ರಾಜ್ ಫೋಟೋಗಳನ್ನು ನೀಡಲಾಗಿದೆ.

ಇದನ್ನೂ ಓದಿ: ಮೋದಿ ಸರ್ಕಾರದಿಂದ ರಾಜ್ಯಕ್ಕೆ ಅಕ್ಕಿ ನಿರಾಕರಣೆ ರಾಜಕೀಯ: ಸಿಪಿಐ(ಎಂ) ಪ್ರತಿಭಟನೆ

“ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿದೆ, ಆದರೂ ಇದು ಮಾಧ್ಯಮಗಳಿಗೆ ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರಗಳಲ್ಲಿ ಒಂದಾಗಿದೆ. ಪತ್ರಿಕಾ ಸ್ವಾತಂತ್ರ್ಯಕ್ಕೆ ಅಪಾಯ ಹೆಚ್ಚುತ್ತಿದ್ದು, ಪತ್ರಕರ್ತರು ದೈಹಿಕ ಹಿಂಸೆ, ಕಿರುಕುಳ, ನಕಲಿ ಮೊಕದ್ದಮೆಗಳು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ದ್ವೇಷದ ಪ್ರಚಾರಗಳನ್ನು ಎದುರಿಸುತ್ತಿದ್ದಾರೆ” ಎಂದು ಜಾಹಿರಾತು ಹೇಳಿದೆ.

“ಪ್ರಜಾಪ್ರಭುತ್ವವನ್ನು ಗೌರವಿಸುವ ಪ್ರಪಂಚದಾದ್ಯಂತದ ನಾಯಕರು ಭಾರತದಲ್ಲಿ ಅಧಿಕಾರದಲ್ಲಿರುವವರಿಗೆ ಅಲ್ಲಿನ ಪತ್ರಕರ್ತರ ವಿರುದ್ಧದ ಬೆದರಿಕೆಗಳನ್ನು ನಿಲ್ಲಿಸುವಂತೆ ಒತ್ತಾಯಿಸಬೇಕು” ಎಂದು ಜಾಹೀರಾತು ಹೇಳಿದೆ.

ಈ ವಾರದ ಆರಂಭದಲ್ಲಿ, ಅಮೆರಿಕದ 75 ಸಂಸದರು ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ, ಇಂಟರ್ನೆಟ್ ನಿರ್ಬಂಧ ಮತ್ತು ಧಾರ್ಮಿಕ ಅಸಹಿಷ್ಣುತೆಯ ಬಗ್ಗೆ ಪ್ರಧಾನಿ ಮೋದಿಯವರೊಂದಿಗೆ ಚರ್ಚಿಸಲು ಒತ್ತಾಯಿಸಿ ಬಿಡೆನ್‌ಗೆ ಪತ್ರ ಬರೆದಿದ್ದರು.

ಪ್ರಧಾನಿ ಮೋದಿ ಇದೀಗ ಅಮೇರಿಕಾದಲ್ಲಿದ್ದು, ಯೋಗ ದಿನವನ್ನು ಅಲ್ಲೆ ಆಚರಿಸಿದ್ದರು. ಲೇಖಕ ನೀಲ್ ಡಿಗ್ರಾಸ್ ಟೈಸನ್ ಮತ್ತು ಉದ್ಯಮಿ ಎಲೋನ್ ಮಸ್ಕ್ ಅವರನ್ನು ಭೇಟಿಯಾಗಿದ್ದಾರೆ. ಪ್ರವಾಸದ ವೇಳೆ ಅವರು ಜಿಲ್ ಬಿಡೆನ್‌ಗೆ 7.5 ಕ್ಯಾರೆಟ್ ಹಸಿರು ವಜ್ರವನ್ನು ಉಡುಗೊರೆಯಾಗಿ ನೀಡಿದ್ದು, ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ಅವರನ್ನು ಭೇಟಿಯಾಗಿದ್ದಾರೆ.

 

 

Donate Janashakthi Media

Leave a Reply

Your email address will not be published. Required fields are marked *