ಬೆಂಗಳೂರು: ಅನುದಾನ ಬಿಡುಗಡೆ ಮಾಡಲು ಮೂರನೇ ವ್ಯಕ್ತಿ ಮೂಲಕ ಹಣಕ್ಕಾಗಿ ಸಚಿವರು ಬೇಡಿಕೆ ಇಡುತ್ತಿದ್ದಾರೆ. ತಕ್ಷಣವೇ ಮಧ್ಯಪ್ರವೇಶಿಸಬೇಕು ಎಂದು ಆಳಂದ ಶಾಸಕ ಬಿ.ಆರ್.ಪಾಟೀಲ್, ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಸೇರಿ 10ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೋಮವಾರ ಜುಲೈ-24 ರಂದು ಬರೆದಿದ್ದಾರೆ ಎನ್ನಲಾದ ಪತ್ರ ಬಹಿರಂಗವಾಗಿದ್ದು, ರಾಜಕೀಯ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ.
ಸಚಿವರ ನಡೆಯಿಂದ ಬೇಸತ್ತಿರುವ ಕೆಲವು ಶಾಸಕರು ಇದೇ 27 ರಂದು ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯಲ್ಲಿ ತಮ್ಮ ಆಕ್ರೋಶ ಹೊರಹಾಕಲು ಸಜ್ಜಾಗಿರುವ ಬೆನ್ನೆಲೆ, ಈ ಪತ್ರ ಹೊರಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪತ್ರ ಹರಿದಾಡುತ್ತಿದ್ದಂತೆ ಸ್ಪಷ್ಟೀಕರಣ ನೀಡಿರುವ ಬಿ.ಆರ್.ಪಾಟೀಲ್, ಶಾಸಕರ ಕುಂದುಕೊರತೆಗಳನ್ನು ಆಲಿಸಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ತಿರುಚಿ ಕಿಡಿಗೇಡಿಗಳು ನಕಲಿ ಪತ್ರ ಸೃಷ್ಟಿಸಿದ್ದಾರೆ. ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವರ ಮೇಲೆ ಕೆಲವು ಆರೋಪಗಳನ್ನು ಮಾಡುತ್ತಿರುವಂತೆ ಕುತಂತ್ರದಿಂದ ಸುಳ್ಳು ಹರಿಬಿಡಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಕರ್ನಾಟಕ ರಫ್ತಿನಲ್ಲಿ ನಂಬರ್ ಒನ್ ಸ್ಥಾನಕ್ಕೆ ಏರಬೇಕು:ಸಿಎಂ ಸಿದ್ದರಾಮಯ್ಯ
ನಕಲಿ ಎನ್ನಲಾದ ಪತ್ರದಲ್ಲಿ ಮಳವಳ್ಳಿ ಶಾಸಕ ಪಿ,ಎಂ.ನರೇಂದ್ರಸ್ವಾಮಿ, ಮುದ್ದೇಬಿಹಾಳ ಶಾಸಕ ಮಹಾಂತೇಶ ಕೌಜಲಗಿ ಅವರ ಸಹಿಯೂ ಇದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಿ.ಎಸ್.ನಾಡಗೌಡ ,ಮುಖ್ಯಮಂತ್ರಿಗೆ ಬರೆದ ಮೂಲ ಪತ್ರಕ್ಕೆ 33 ಶಾಸಕರು ಸಹಿಯಿದೆ. ಅಲ್ಲದೆ, ಮೂಲ ಪತ್ರದಲ್ಲಿ ಎಲ್ಲಿಯೂ ಸಚಿವರ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿಲ್ಲ ಎಂದು ಹೇಳಿದ್ದಾರೆ. ಅನುದಾನ ಬೇಡಿಕೆ ವರ್ಗಾವಣೆ ಶಿಫಾರಸನ್ನು ಮಾನ್ಯ ಮಾಡುವುದು ಸೇರಿದಂತೆ ಶಾಸಕರ ಬೇಡಿಕೆಗಳಿಗೆ ಸಚಿವರು ಸ್ಪಂದಿಸದಿರುವ ವಿಚಾರ ಸಚಿವ ಸಂಪುಟ ಸಭೆಯಲ್ಲಿಯೇ ಪ್ರಸ್ತಾಪ ಆಗಬಹುದು. ನಂತರ ನಡೆಯಲಿರುವ ಸಿಎಲ್‌ಪಿ ಸಭೆಯಲ್ಲಿ ಕೆಲವು ಶಾಸಕರು ತಮ್ಮ ಆಕ್ರೋಶ ,ಅಸಮಾಧಾನ ತೋಡಿಕೊಳ್ಳುವುದು ಖಚಿತ. ಕೆಲವರು ಈಗಾಗಲೇ ಈ ಸುಳಿವು ನೀಡಿದ್ದಾರೆ ಎಂದು ಕಾಂಗ್ರೆಸ್‌ನ ನಾಯಕರೊಬ್ಬರು ಹೇಳಿದರು.
ಇದೇ 28 ರಂದು ರಾಜ್ಯಕ್ಕೆ ಬರಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಈ ವಿಚಾರಗಳ ಬಗ್ಗೆ ಚರ್ಚಿಸಲು ಕೂಡಾ ಕೆಲವು ಶಾಸಕರು ಸಮಯ ಕೇಳಿದ್ದಾರೆ ಎಂಬ ಮಾಹಿತಿಯೂ ಇದೆ.
ಸಚಿವ ಸಂಪುಟ ಸಭೆಯ ಬಳಿಕ ಸಿಎಲ್‌ಪಿ ಸಭೆ: ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಹೋಟೆಲ್ ರ್ಯಾಡಿಸನ್ ಬ್ಲೂನಲ್ಲಿ ಇದೇ 27 ರಂದು ಸಂಜೆ ಶಾಸಕಾಂಗ ಪಕ್ಷದ ಸಭೆ ನಿಗದಿಯಾಗಿದೆ. ಈ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡಾ ಭಾಗವಹಿಸಲಿದ್ದಾರೆ. ಸಭೆಗೂ ಮೊದಲು ಸಚಿವ ಸಂಪುಟ ಸಭೆ ನಡೆಯಲಿದೆ.
ಬಿಜೆಪಿ ಕುತಂತ್ರ: ಬಿ.ಆರ್.ಪಾಟೀಲ ಕಲಬುರ್ಗಿ ನನ್ನ ಲೆಟರ್‌ಹೆಡ್‌ನಲ್ಲಿ ನಕಲಿ ಪತ್ರ ಸೃಷ್ಟಿಸಿ ಸಚಿವರೊಂದಿಗೆ ವೈಮನಸು ಸೃಷ್ಟಿಸಲು ಬಿಜೆಪಿ ಕುತಂತ್ರ ನಡೆಸಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಾನು ಬರೆದಿದ್ದಲ್ಲ ಎಂದು ಬಿ.ಆರ್.ಪಾಟೀಲ್ ಸ್ಪಷ್ಟಪಡಿಸಿದರು. ಹಳೆಯ ಮನೆ ವಿಳಾಸವಿರುವ ಪತ್ರವನ್ನು ಸೃಷ್ಟಿ ಮಾಡಲಾಗಿದೆ. ಜುಲೈ-24 ರಂದು ಪತ್ರ ಬರೆದಿದ್ದೇನೆ ಎಂದಿದೆ. ಅಂದು ನಾನು ಕಲಬುರ್ಗಿಯಲ್ಲೇ ಇದ್ದೆ. ಹೀಗಾಗಿ ಮುಖ್ಯಮಂತ್ರಿಗೆ ಈ ಪತ್ರ ನೀಡುವ ಪ್ರಶ್ನೆಯೇ ಬರುವುದಿಲ್ಲ. ಶಾಸಕಾಂಗ ಪಕ್ಷದ ಸಭೆ ನಡೆಸುವಂತೆ ಪತ್ರವೊಂದನ್ನು ಬರೆದಿದ್ದೇನೆ. ಅದರಲ್ಲಿ ವರ್ಗಾವಣೆ ಶಿಫಾರಸುಗಳಿಗೆ ಸಚಿವರು ಮನ್ನಣೆ ನೀಡುತ್ತಿಲ್ಲ. ಅನುದಾನ ಬಿಡುಗಡೆ ಮಾಡುವುದಕ್ಕೆ ಸಚಿವರು ಮೂರನೇ ವ್ಯಕ್ತಿಯೊಬ್ಬರ ಮೂಲಕ ಹಣದ ಬೇಡಿಕೆ ಇಟ್ಟಿದ್ದಾರೆ ಎಂದು ಉಲ್ಲೇಖಿಸಿಯೇ ಇಲ್ಲ. ಬಿಜೆಪಿಯವರು ಹಣ ಇಲ್ಲದಿದ್ದರೂ ಕಾಮಗಾರಿಗಳಿಗೆ ಮಂಜೂರಾತಿ ನೀಡಿದ್ದರು. ಅವುಗಳ ಬಗ್ಗೆ ಚರ್ಚಿಸಲು ಸಭೆ ಕರೆಯುವಂತೆ ನಾನು ಬರೆದ ಪತ್ರದಲ್ಲಿ ಒತ್ತಾಯಿಸಿದ್ದೇನೆ ಎಂದು ಹೇಳಿದರು.
ಸರ್ಕಾರಕ್ಕೆ ಬಾಲಗ್ರಹ ಪೀಡೆ: ಬೊಮ್ಮಾಯಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಬಾಲಗ್ರಹ ಪೀಡೆ ಶುರುವಾಗಿದ್ದು ಆಂತರಿಕ ಕಲಹ ಹೆಚ್ಚಾಗಿದೆ. ಎಂದು ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸಚಿವರ ಭ್ರಷ್ಟಚಾರ ಮತ್ತು ಅಭಿವೃದ್ಧಿ ಕಾರ್ಯಕ್ಕೆ ಅನುದಾನ ನೀಡದೇ ಇರುವುದರಿಂದ ಶಾಸಕರ ಅಸಮಾಧಾನ ಸ್ಪೋಟಗೊಳ್ಳುತ್ತಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಗ್ಯಾರೆಂಟಿಗಳಿಗೆ ಹಣ ನೀಡುವುದಕ್ಕೆ ಅನುದಾನ ಇಲ್ಲ ಎನ್ನುತ್ತಿದ್ದಾರೆ ಆದರೆ ವರ್ಗಾವಣೆಯಲ್ಲಿ ಭಾರಿ ಪ್ರಮಾಣದಲ್ಲಿ ಭ್ರಷ್ಟಚಾರ ನಡೆಯುತ್ತಿರುವುದು ಸ್ಪಷ್ಟವಾಗಿದೆ. ಇದನ್ನು ಶಾಸಕರೇ ಬಹಿರಂಗವಾಗಿ ಹೇಳಿದ್ದಾರೆ. ಸಚಿವರ ವಿರುದ್ಧ ಕಾಂಗ್ರೆಸ್ ಶಾಸಕರು ಅಸಮಾಧಾನ ಹೊರ ಹಾಕಿದ್ದಾರೆ. ಮುಜುಗರಕ್ಕೆ ಒಳಗಾದ ಸಿದ್ದರಾಮಯ್ಯ ಅರ್ಧಸತ್ಯ ಹೇಳಿದ್ದಾರೆ ಎಂದರು.
ಕ್ಷೇತ್ರಗಳ ಅಭಿವೃದ್ಧಿಗೆ ಪತ್ರ ಬರೆಯಲಾಗಿದೆ: ರಾಯರೆಡ್ಡಿ ಕೊಪ್ಪಳ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸಗಳಾಗಬೇಕು. ಸಚಿವರು ಮತ್ತು ಶಾಸಕರ ನಡುವೆ ಹೆಚ್ಚಿನ ಸ್ಪಂದನೆ ಇರಬೇಕು ಎಂಬ ಕಾರಣಕ್ಕಾಗಿ ಶಾಸಕ ಬಿ.ಆರ್.ಪಾಟಿಲ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿರುವ ಪತ್ರಕ್ಕೆ ಸಹಿ ಮಾಡಿದ್ದೇನೆ ಎಂದು ಬಸವರಾಜ ರಾಯರೆಡ್ಡಿ ಹೇಳಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು ಪತ್ರ ಬರೆದಿರುವ ವಿಚಾರದಲ್ಲಿ ಮುಚ್ಚುಮರೆ ಏನೂ ಇಲ್ಲ. ಪಾಟೀಲರು ಶಾಸಕಾಂಗ ಪಕ್ಷದ ಸಭೆ ಕರೆಯಲು ಪತ್ರ ಬರೆದಿದ್ದಾರೆ. ನಾನೂ ಸೇರಿದಂತೆ ಅನೇಕ ಶಾಸಕರು ಸಹಿ ಮಾಡಿದ್ದೇವೆ ಎಂದರು.
ವರ್ಗಾವಣೆ ವಿಚಾರವಾಗಿ ಕೆಲವು ಶಾಸಕರಿಗೆ ಅಸಮಾಧಾನ ಇರಬಹುದು. ಕೆಲವರು ಇದನ್ನು ಮುಕ್ತವಾಗಿ ಹೇಳುವುದಿಲ್ಲ. ನನಗಂತೂ ಏನೂ ಅಸಮಾಧಾನವಿಲ್ಲ. ಸಿದ್ದರಾಮಯ್ಯ ಅವರು ಭಾರತದ ಉತ್ತಮ ಮುಖ್ಯಮಂತ್ರಿ. ಇದು ಸಹಜವಾಗಿಯೇ ವಿರೋಧ ಪಕ್ಷಕ್ಕೆ ಆಹಾರವಾಗುತ್ತದೆ. ಇದರಲ್ಲಿ ಯಾವುದೇ ಆತಂಕಪಡುವ ಅಗತ್ಯವಿಲ್ಲ. ಸರ್ಕಾರಕ್ಕೆ ಹಾಗೂ ಮುಖ್ಯಮಂತ್ರಿಗಳಿಗೂ ಏನೂ ತೊಂದರೆಯಿಲ್ಲ ಎಂದು ಹೇಳಿದರು.
ಪತ್ರದಲ್ಲಿ ಏನಿದೆ?
ನಮ್ಮ ಕ್ಷೇತ್ರಕ್ಕೆ ಅನುದಾನ ನೀಡುವಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ 20ಕ್ಕೂ ಹೆಚ್ಚು ಸಚಿವರಿಗೆ ಮನವಿ ಮಾಡಿದ್ದರೂ ಸ್ಪಂದಿಸುತ್ತಿಲ್ಲ. ಇದರಿಂದ ಜನರ ಆಶೋತ್ತರ ಈಡೇರಿಸಲು ಸಾಧ್ಯವಾಗುತ್ತಿಲ್ಲ. ನಾವು ಸ್ಥಳೀಯ ಶಾಸಕರಾಗಿದ್ದರೂ ಅನುದಾನಕ್ಕಾಗಿ ಮೂರನೇ ವ್ಯಕ್ತಿಯ ಮೊರೆ ಹೋಗಬೇಕಾಗಿರುವುದು ಅತ್ಯಂತ ಬೇಸರದ ಸಂಗತಿ. ಅಲ್ಲದೆ ತಮಗೆ ಬೇಕಾದ ಅಧಿಕಾರಿಗಳಿಗೆ ಮಣೆ ಹಾಕಿ ಸಚಿವರು ಸ್ವಜನ ಪಕ್ಷಪಾತ ಮಾಡುತ್ತಿದ್ದಾರೆ. ನಮ್ಮ ಯಾವುದೇ ವರ್ಗಾವಣೆ ಶಿಫಾರಸು ಪತ್ರಗಳಿಗೆ ಮಾನ್ಯತೆ ಕೊಡುತ್ತಿಲ್ಲ. ಇದರಿಂದಾಗಿ ಯಾವ ಅಧಿಕಾರಿಯೂ ನಮ್ಮ ಕೆಲಸಗಳನ್ನು ಮಾಡಿಕೊಡುತ್ತಿಲ್ಲ. ನಮ್ಮ ಮಾತಿಗೆ ಬೆಲೆಯೂ ನೀಡುತ್ತಿಲ್ಲ. ತಾವು ತಕ್ಷಣವೇ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು. ನಮ್ಮ ವಿಶ್ವಾಸಕ್ಕೆ ಚ್ಯೂತಿ ಬಾರದಂತೆ ನಡೆದುಕೊಳ್ಳಬೇಕು ಎಂದರು.