`ದಿ ಕಾಶ್ಮೀರ್ ಫೈಲ್ಸ್’ ಚಲನಚಿತ್ರಕ್ಕೆ ತೆರಿಗೆ ವಿನಾಯಿತಿ: ರಾಜ್ಯ ಸರ್ಕಾರ ಘೋಷಣೆ

ಬೆಂಗಳೂರು: ಕಾಶ್ಮೀರ ಪಂಡಿತರ ಕುರಿತಾದ ನೈಜ ಘಟನೆ ಆಧಾರಿತ ಬಾಲಿವುಡ್ ಚಿತ್ರ ‘ದಿ ಕಾಶ್ಮೀರ ಫೈಲ್ಸ್’ ಚಲನಚಿತ್ರಕ್ಕೆ ಕರ್ನಾಟಕ ರಾಜ್ಯ ಸರ್ಕಾರವು ತೆರಿಗೆ ವಿನಾಯಿತಿಯನ್ನು ಘೋಷಿಸಿದೆ.

ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಮಾರ್ಚ್ 11ರಂದು ಬಿಡುಗಡೆಯಾಗಿದ್ದು, ಚಿತ್ರವು ಹಲವೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ‘ದಿ ಕಾಶ್ಮೀರ್ ಫೈಲ್ಸ್’ ಅನ್ನು ಹರಿಯಾಣ, ಗುಜರಾತ್ ಮತ್ತು ಮಧ್ಯಪ್ರದೇಶ ಸರ್ಕಾರಗಳು ತಮ್ಮ ತಮ್ಮ ರಾಜ್ಯಗಳಲ್ಲಿ ತೆರಿಗೆ ಮುಕ್ತಗೊಳಿಸಿದೆ. ಈ ಸಾಲಿಗೆ ಕರ್ನಾಟಕವೂ ಸೇರ್ಪಡೆಯಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ʻದಿ ಕಾಶ್ಮೀರ್ ಫೈಲ್ಸ್ʼ ಚಿತ್ರವನ್ನು ತೆರಿಗೆ ಮುಕ್ತ ಮಾಡಿರುವುದಾಗಿ ಘೋಷಣೆ ಮಾಡಿದ್ದಾರೆ.

ರಾಜ್ಯದಲ್ಲಿ ಈ ಚಿತ್ರವನ್ನು ಪ್ರೋತ್ಸಾಹಿಸುವ ಸಂಬಂಧ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಟ್ವೀಟ್ ಮಾಡುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಈ ಚಿತ್ರದಲ್ಲಿ….

ಕಾಶ್ಮೀರದ ಕುರಿತು ಬಾಲಿವುಡ್ ಚಿತ್ರರಂಗದಲ್ಲಿ ಈಗಾಗಲೇ ಹಲವಾರು ಸಾಕಷ್ಟು ಸಿನಿಮಾಗಳು ತಯಾರಾಗಿವೆ. ಆದರೆ, ನಿರ್ದೇಶಕರೊಬ್ಬರು ಕಾಶ್ಮೀರದ ಅತ್ಯಂತ ಸೂಕ್ಷ್ಮ ವಿಷಯದ ಆಧಾರದ ಮೇಲೆ ಚಿತ್ರ ರಚಿಸಿರುವುದು ಇದೇ ಮೊದಲು.

ಪ್ರಮುಖವಾಗಿ ಕಾಶ್ಮೀರಿ ಪಂಡಿತರ ವಿಚಾರವೇ ಇದರಲ್ಲಿ ಒಳಗೊಂಡ ಪ್ರಮುಖ ಅಂಶವಾಗಿದೆ. ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವು ಕಾಶ್ಮೀರಿ ಪಂಡಿತರ ಮೇಲಿನ ದೌರ್ಜನ್ಯ ಮತ್ತು ಅವರ ನಿರಾಶ್ರಿತರಾಗಿ ಅನುಭವಿಸಿದ ಕಷ್ಟಗಳ ಚಿತ್ರಿಕರಿಸಲಾಗಿದೆ. ಭಯೋತ್ಪಾದಕರು ಕಾಶ್ಮೀರಿ ಪಂಡಿತರನ್ನು ತಮ್ಮ ಸ್ವಂತ ಮನೆಗಳನ್ನು ತೊರೆದು ಓಡಿಹೋಗುವಂತೆ ಹೇಗೆ ಒತ್ತಾಯಿಸಿದರು ಎಂಬುದನ್ನು ಚಿತ್ರದಲ್ಲಿ ಎಳೆಎಳೆಯಾಗಿ ಬಿಡಿಸಲಾಗಿದೆ.

ದಿ ಕಾಶ್ಮೀರ್ ಫೈಲ್ಸ್ ಚಿತ್ರದಲ್ಲಿ ಅನುಪಮ್ ಖೇರ್ ಮತ್ತು ಮಿಥುನ್ ಚಕ್ರವರ್ತಿ ಸೇರಿದಂತೆ ಅನೇಕ ಹಿರಿಯರು ನಟಿಸಿದ್ದಾರೆ. ಇದಲ್ಲದೆ, ಚಿತ್ರದಲ್ಲಿ ಪಲ್ಲವಿ ಜೋಶಿ, ದರ್ಶನ್ ಕುಮಾರ್, ಚಿನ್ಮಯ್ ಮಾಂಡ್ಲೇಕರ್, ಪುನೀತ್ ಇಸ್ಸಾರ್, ಭಾಷಾ ಸುಂಬಳಿ ಮುಂತಾದ ನಟರಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *