ಪ್ರೊ. ಪ್ರಭಾತ್ ಪಟ್ನಾಯಕ್
ಅನು: ಕೆ.ಎಂ. ನಾಗರಾಜ್
ಹೀಗೆಂದು ಐಎಂಎಫ್ ಮತ್ತು ವಿಶ್ವ ಬ್ಯಾಂಕ್ ಎರಡೂ ಹೇಳುತ್ತಿವೆ. ಆದರೆ ಇದಕ್ಕೆ ಮುಖ್ಯವಾಗಿ ಉಕ್ರೇನ್ ಯುದ್ಧ ಮತ್ತು ಅದು ಉಂಟುಮಾಡಿದ ಹಣದುಬ್ಬರವೇ ಕಾರಣವೆಂಬ ಅವುಗಳ ವಿಶ್ಲೇಷಣೆ ದೋಷಯುತವಾಗಿದೆಯಷ್ಟೇ ಅಲ್ಲ, ಈ ಹಿಂಜರಿತ ಹೇಗೆ ಕೊನೆಗೊಳ್ಳುತ್ತದೆ ಎಂದೂ ತಿಳಿಯದಾಗಿದ್ದಾರೆ ಎಂಬುದು ಕಾಣುತ್ತಿದೆ. ಆರ್ಥಿಕ ಹಿಂಜರಿತದ ಬಿಕ್ಕಟ್ಟಿಗೆ ಉಕ್ರೇನ್ ಯುದ್ಧವೇ ಮುಖ್ಯ ಕಾರಣವಾಗಿದ್ದರೆ, ಕನಿಷ್ಠ ಪಕ್ಷ, ಯುದ್ಧವು ಶೀಘ್ರವಾಗಿ ಕೊನೆಗೊಳ್ಳಬೇಕೆಂದು ಅವರು ಅಪೇಕ್ಷಿಸಬೇಕಾಗಿತ್ತು. ಆದರೆ ಆ ಬಗ್ಗೆ ಅವು ಮೌನವಾಗಿವೆ. ಆರ್ಥಿಕ ಹಿಂಜರಿತವನ್ನು ಉಂಟುಮಾಡದ ರೀತಿಯ ಮತ್ತು ಬಡ್ಡಿ ದರಗಳ ಏರಿಕೆಯ ಮೂಲಕವಲ್ಲದೆ ಬೇರೆ ಯಾವುದೇ ವಿಧಾನದ ಮೂಲಕ ಹಣದುಬ್ಬರ ಬಿಕ್ಕಟ್ಟನ್ನು ನಿಭಾಯಿಸುವ ಬಗ್ಗೆಯೂ ಏನೂ ಹೇಳುತ್ತಿಲ್ಲ. ಇದು ಬ್ರೆಟ್ಟನ್ ವುಡ್ಸ್ ಸಂಸ್ಥೆಗಳ ಪುಕ್ಕಲುತನದ ವಿಷಯವಲ್ಲ. ವಿಷಯ ಬಹಳ ಗಹನವಾಗಿದೆ.
2023ರಲ್ಲಿ ವಿಶ್ವ ಜಿಡಿಪಿಯ ಮೂರನೇ ಒಂದು ಭಾಗದಷ್ಟು ಕುಗ್ಗಲಿದೆ. ಆದ್ದರಿಂದ, ಇಡೀ ವಿಶ್ವವೇ ಆರ್ಥಿಕ ಹಿಂಜರಿತಕ್ಕೆ ಒಳಗಾಗಲಿದೆ ಎಂಬುದನ್ನು ಐಎಂಎಫ್ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜೀಎವಾ ಅವರು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ. ಯುಎಸ್(ಅಮೆರಿಕಾ), ಯುರೋಪಿಯನ್ ಒಕ್ಕೂಟ ಮತ್ತು ಚೀನಾ ಈ ಮೂರೂ ಪ್ರಮುಖ ಅರ್ಥವ್ಯವಸ್ಥೆಗಳು ಮಂದಗತಿಯಲ್ಲಿರಲಿವೆ ಎಂಬುದಾಗಿ ಅವರು ಅಭಿಪ್ರಾಯಪಟ್ಟಿದ್ದಾರೆ. ಚೀನಾದ ಅರ್ಥವ್ಯವಸ್ಥೆಯ ಬಗ್ಗೆ ಹೇಳುವುದಾದರೆ, ಸಧ್ಯದಲ್ಲಿ ಅಲ್ಲಿ ಕೋವಿಡ್ ಉಲ್ಬಣಗೊಳ್ಳುತ್ತಿರುವ ಕಾರಣದಿಂದ ಅದು ಮಂದಗತಿಗೆ ಒಳಗಾಗಲಿದೆ. ಹಾಗಾಗಿ, ಈ ಮೂರರಲ್ಲಿ, ಯುಎಸ್ ಅರ್ಥವ್ಯವಸ್ಥೆಯ ಪರಿಸ್ಥಿತಿಯು ಅದರ ಕಾರ್ಮಿಕ ಮಾರುಕಟ್ಟೆಯು ತನ್ನ ಹಿಂದಿನ ಸ್ಥಿತಿಗೆ ಮರಳಲಿರುವ ಗುಣಲಕ್ಷಣದಿಂದಾಗಿ ಯುರೋಪಿಯನ್ ಒಕ್ಕೂಟ ಮತ್ತು ಚೀನಾಗಳಿಗಿಂತ ತುಲನಾತ್ಮಕವಾಗಿ ಉತ್ತಮವಾಗಿರುತ್ತದೆ ಮತ್ತು ಅಮೆರಿಕಾದ ಕಾರ್ಮಿಕ ಮಾರುಕಟ್ಟೆಯು ಹೊಂದಿರುವ ಚೇತರಿಕೆಯ ಅಂಶವು ಇಡೀ ವಿಶ್ವದ ಅರ್ಥವ್ಯವಸ್ಥೆಗೆ ಒಂದಿಷ್ಟು ಭರವಸೆ ಮೂಡಿಸುತ್ತದೆ ಎಂದು ಜಾರ್ಜೀಎವಾ ನಂಬುತ್ತಾರೆ.
ಇದನ್ನು ಓದಿ: 2023ರಲ್ಲಿ ಗಂಭೀರ ಸ್ವರೂಪದಲ್ಲಿ ಜಾಗತಿಕ ಆರ್ಥಿಕ ಹಿಂಜರಿತ: ವಿಶ್ವಸಂಸ್ಥೆ ಎಚ್ಚರಿಕೆ
ಜಾರ್ಜೀಎವಾ ಅವರ ಹೇಳಿಕೆಗಳಲ್ಲಿ ಎರಡು ವಿಡಂಬನಾತ್ಮಕ ಅಂಶಗಳಿವೆ. ಮೊದಲನೆಯದು, ಇಂದು ವಿಶ್ವ ಅರ್ಥವ್ಯವಸ್ಥೆಯ ಭವಿಷ್ಯವು ಅಮೆರಿಕಾದ ಕಾರ್ಮಿಕರ ವರಮಾನವು ಬಹಳಷ್ಟು ಕುಸಿಯದಿರುವ ಅಂಶದ ಮೇಲೆ ನಿಂತಿದೆ ಎಂಬುದನ್ನು ಐಎಂಎಫ್ ಕೂಡ ಸೂಚ್ಯವಾಗಿಯಾದರೂ ಒಪ್ಪಿಕೊಂಡಿದೆ ಎಂಬುದು. ತನ್ನ ‘ಸ್ಥಿರೀಕರಣ-ಸಂರಚನಾ ಹೊಂದಾಣಿಕೆ’ ನೀತಿಗಳ ಗತ್ಯ ಅಂಗವೆಂದು ವೇತನಗಳ ಕಡಿತವನ್ನು ವ್ಯವಸ್ಥಿತವಾಗಿ ಪ್ರತಿಪಾದಿಸುವ ಐಎಂಎಫ್, ಒಟ್ಟಾರೆ ಬೇಡಿಕೆಯಲ್ಲಿ ಕಾರ್ಮಿಕರ ವರಮಾನಗಳು ವಹಿಸುವ ಪಾತ್ರದ ಮಹತ್ವವನ್ನು ಒಪ್ಪಿಕೊಳ್ಳುತ್ತಿರುವುದು ನಿಜಕ್ಕೂ ಆಶ್ಚರ್ಯವೂ ಹೌದು, ಸ್ವಾಗತಾರ್ಹವೂ ಹೌದು. ಜಾರ್ಜೀಎವಾ ಅವರು ಅಮೆರಿಕಾದ ಕಾರ್ಮಿಕ ಮಾರುಕಟ್ಟೆಯ ಸ್ಥಿತಿಸ್ಥಾಪಕತ್ವವನ್ನು ಅಂದರೆ ಅದು ಹಿಂದಿದ್ದ ಸ್ಥಿತಿ-ಗತಿಗಳಿಗೆ ಮರಳುವ ಅಂಶವನ್ನು, ಆ ದೇಶದ ಆರ್ಥಿಕ ನಿರ್ವಹಣೆಯ ಪರಿಣಾಮವಾಗಿ ಮಾತ್ರ ನೋಡುತ್ತಿದ್ದಾರೆಯೇ ವಿನಃ ಅದರ ಕಾರಣವಾಗಿ ಅಲ್ಲ ಎಂದು ಅನೇಕ ಮಂದಿ ವಾದಿಸುತ್ತಾರೆ. ಆದರೆ, ಈ ಸ್ಥಿತಿಸ್ಥಾಪಕ ಅಂಶವನ್ನು “ನೆಮ್ಮದಿ” ಉಂಟುಮಾಡುವ ಅಂಶವಾಗಿ ಜಾರ್ಜೀಎವಾ ನೋಡುತ್ತಿರುವುದರಿಂದ (ಅವರ ಈ ಭಾವನೆ ಅಪ್ಪಟವಲ್ಲ ಎಂಬುದರ ಕಾರಣಗಳನ್ನು ನಾವು ಶೀಘ್ರದಲ್ಲೇ ನೋಡಲಿದ್ದೇವೆ), ಬೇಡಿಕೆಯನ್ನು ಉತ್ತೇಜಿಸುವಲ್ಲಿ ಕಾರ್ಮಿಕರ ವರಮಾನಗಳು ವಹಿಸುವ ಪಾತ್ರವನ್ನು ಅವರು ಒಪ್ಪಿಕೊಳ್ಳುವ ಬಗ್ಗೆ ಸಂದೇಹಪಡುವ ಅಗತ್ಯವಿಲ್ಲ.
ವಿಶ್ವ ಬಂಡವಾಳಶಾಹಿಯ ಭವಿಷ್ಯದ ಬಗ್ಗೆ ಅತ್ಯಂತ ಭೀಕರ ಭವಿಷ್ಯವಾಣಿ
‘ಸ್ಥಿರೀಕರಣ-ಸಂರಚನಾ ಹೊಂದಾಣಿಕೆ’ಯ ಐಎಂಎಫ್‌ನ ನೀತಿಗಳನ್ನು ಸಾಮಾನ್ಯವಾಗಿ ಬಿಕ್ಕಟ್ಟಿನಲ್ಲಿರುವ ದೇಶಗಳಿಗೆ ಅನ್ವಯಿಸಲಾಗುತ್ತದೆ.. ಈ ಕ್ರಮವು ಬಿಕ್ಕಟ್ಟನ್ನು ನಿವಾರಿಸಲು ಇರುವ ಸಾಧನವೇ ವಿನಃ ಅಭಿವೃದ್ಧಿಗೆ ನೆರವಾಗುವ ರಾಮಬಾಣವಲ್ಲ. ಆದ್ದರಿಂದ, ಐಎಂಎಫ್‌ನ ಗ್ರಹಿಕೆಯಯಲ್ಲಿ ಬದಲಾವಣೆಯನ್ನು ಕಾಣುವುದು ಸರಿಯಲ್ಲ ಎಂಬುದಾಗಿ ಕೆಲವರು ವಾದಿಸಬಹುದು. ಆದರೆ, ಐಎಂಎಫ್ ಈಗ ಏನು ಹೇಳುತ್ತಿದೆಯೊ ಅದು, ಈವರೆಗೆ ಅದು ಹೇಳುತ್ತಿದ್ದುದಕ್ಕಿಂತಲೂ ಖಂಡಿತವಾಗಿಯೂ ಭಿನ್ನವಾಗಿದೆ. ಯುಎಸ್ ಕಾರ್ಮಿಕ ಮಾರುಕಟ್ಟೆಯ ಸ್ಥಿತಿಸ್ಥಾಪಕತ್ವವು ಅದರ ಬೆಳವಣಿಗೆಗೆ ಅನುಕೂಲವಾಗಿದೆ ಎಂಬುದನ್ನು ಒಪ್ಪಿಕೊಳ್ಳುವ ಐಎಂಎಫ್, ಒಂದು ಪ್ರಶ್ನೆಯನ್ನು ಹುಟ್ಟುಹಾಕಿದೆ: ಬೇರೆ ದೇಶಗಳು ಬಿಕ್ಕಟ್ಟಿಗೆ ಒಳಗಾದಾಗ ಅವುಗಳ ಕಾರ್ಮಿಕ ಮಾರುಕಟ್ಟೆಗಳೂ ಸಹ, ಅದೇ ರೀತಿಯಲ್ಲಿ, ಸ್ಥಿತಿಸ್ಥಾಪಕತ್ವವನ್ನು ಸಾಧಿಸಲು ಏಕೆ ಪ್ರಯತ್ನಿಸಬಾರದು? ಮತ್ತು, ಆಮದು ನಿಯಂತ್ರಣ ಮತ್ತು ಬೆಲೆ ನಿಯಂತ್ರಣಗಳAತಹ ನೇರ ವಿಧಾನಗಳ ಮೂಲಕ ತಮ್ಮ ಬಿಕ್ಕಟ್ಟನ್ನು ಏಕೆ ನಿಭಾಯಿಸಿಕೊಳ್ಳಬಾರದು? ಯುಎಸ್ ಕಾರ್ಮಿಕ ಮಾರುಕಟ್ಟೆಯ ಸ್ಥಿತಿಸ್ಥಾಪಕತ್ವವು ಅದರ ಆರ್ಥಿಕತೆಗೆ ಅನುಕೂಲವಾಗಿದೆ ಮತ್ತು ಆ ಕಾರಣದಿಂದಾಗಿ ಅದು ಇಡೀ ವಿಶ್ವದ ಅರ್ಥವ್ಯವಸ್ಥೆಗೆ ಪ್ರಯೋಜನಕಾರಿಯಾಗುತ್ತದೆ ಎಂಬುದನ್ನು ಅನುಮೋದಿಸುವ ಕ್ರಮವು, ಕೊನೆಯ ಪಕ್ಷ, ಪ್ರಸ್ತುತ ನವ ಉದಾರವಾದಿ ಕಾಲಮಾನದಲ್ಲಿ ಐಎಂಎಫ್ ಪ್ರತಿಪಾದಿಸುವ ನೀತಿಗಳಿಗೆ ಮೂಲಭೂತವಾಗಿ ವಿರುದ್ಧವಾಗಿದೆ.
ಇದನ್ನು ಓದಿ: ರಾಜ್ಯದ ದುಡಿಯುವ ವರ್ಗದ ಸಾಮಾಜಿಕ ಆರ್ಥಿಕ ಸ್ಥಿತಿಗತಿಗಳತ್ತ ಒಂದು ನೋಟ
ಜಾರ್ಜೀಎವಾ ಅವರ ಹೇಳಿಕೆಗಳಲ್ಲಿನ ಎರಡನೇ ವಿಡಂಬನಾತ್ಮಕ ಅಂಶವೆಂದರೆ, ಕಾರ್ಮಿಕ ಮಾರುಕಟ್ಟೆಯ ಸ್ಥಿತಿಸ್ಥಾಪಕತ್ವವು ಆರ್ಥಿಕ ಬೆಳವಣಿಗೆಗೆ ಪ್ರಯೋಜನಕಾರಿಯಾಗಿರುವ ಸಮಯದಲ್ಲೇ ಅಲ್ಲಿರುವ ಹಣದುಬ್ಬರವನ್ನು ಹಾಗೆಯೇ ಉಳಿಸಿಕೊಳ್ಳುವುದರಿಂದ ಅಮೆರಿಕಾದ ಫೆಡರಲ್ ರಿಸರ್ವ್ ಬಡ್ಡಿ ದರಗಳನ್ನು ಮತ್ತಷ್ಟು ಏರಿಸಬೇಕಾಗುತ್ತದೆ ಎನ್ನುವ ಅರಿವು ಅವರಿಗಿದೆ ಎಂಬುದು. ಬಡ್ಡಿ ದರಗಳ ಏರಿಕೆಯು ಎರಡು ಸ್ಪಷ್ಟ ಪರಿಣಾಮಗಳನ್ನು ಹೊಂದಿದೆ. ಮೊದಲನೆಯದು, ಬಡ್ಡಿ ದರಗಳ ಏರಿಕೆಯು ಅಮೆರಿಕಾದ ಆರ್ಥಿಕ ಬೆಳವಣಿಗೆಯ ಮೇಲೆ ಬೀರುವ ಪರಿಣಾಮವು ಸದ್ಯಕ್ಕೆ ಕಡಿಮೆ ಇರುತ್ತದೆಯಾದರೂ, ಮುಂಬರುವ ತಿಂಗಳುಗಳಲ್ಲಿ ಬೆಳವಣಿಗೆಯು ಸಂಕುಚಿತಗೊಳ್ಳುವುದು ಅನಿವಾರ್ಯವಾಗುತ್ತದೆ. ಹೀಗಾಗಿ 2023ರಲ್ಲಿ ತುಲನಾತ್ಮಕವಾಗಿ ಉತ್ತಮವಾಗಿ ಕಾಣಿಸಿಕೊಳ್ಳುವ ಸಾಧನೆಯು ದೀರ್ಘಕಾಲ ಉಳಿಯುವಂತಹ ವಿದ್ಯಮಾನವಲ್ಲ. ಮತ್ತು, ಅಮೆರಿಕಾದ ಕಳಪೆ ಸಾಧನೆಯು ಇಡೀ ವಿಶ್ವ ಅರ್ಥವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರಿಂದ, ಚೀನಾದ ಕೋವಿಡ್ ಪರಿಸ್ಥಿತಿ ಗಣನೀಯವಾಗಿ ಸುಧಾರಿಸದ ಹೊರತು, ಮುಂಬರುವ ತಿಂಗಳುಗಳಲ್ಲಿ ವಿಶ್ವ ಆರ್ಥಿಕ ಹಿಂಜರಿತವು ಉಲ್ಬಣಗೊಳ್ಳುತ್ತದೆ ಎಂದಾಗುತ್ತದೆ. ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, 2023ರಲ್ಲಿ ವಿಶ್ವದ ಮೂರನೇ ಒಂದು ಭಾಗದಲ್ಲಿ ಮಾತ್ರ ಆರ್ಥಿಕ ಹಿಂಜರಿತವಿದ್ದರೂ, ನಂತರ ವಿಶ್ವದ ಬಹು ದೊಡ್ಡ ಭಾಗವು ಆರ್ಥಿಕ ಹಿಂಜರಿತಕ್ಕೆ ಬಲಿಯಾಗುತ್ತದೆ. ಇದು ಖಂಡಿತವಾಗಿಯೂ ಪ್ರಸಕ್ತ ಸಂಧಿಕಾಲದ ವಿಶ್ವ ಬಂಡವಾಳಶಾಹಿಯ ಭವಿಷ್ಯದ ಬಗ್ಗೆ ಅದರ ಯಾವುದೇ ಪ್ರಮುಖ ವಕ್ತಾರರು ಮಾಡಿದ ಅತ್ಯಂತ ಭೀಕರ ಭವಿಷ್ಯವಾಣಿಯೇ ಸರಿ.
ಇದನ್ನು ಓದಿ: ಆರ್ಥಿಕ ಬೆಳವಣಿಗೆಯಿರಲಿ, ಸ್ಥಗಿತತೆಯಿರಲಿ ಬಡತನ ಮಾತ್ರ ಬೆಳೆಯುತ್ತಲೇ ಹೋಗುತ್ತದೆ
ದೋಷಯುತ ವಿಶ್ಲೇಷಣೆ
ವಿಶ್ವ ಬ್ಯಾಂಕ್ ಕೂಡ ಬಂಡವಾಳಶಾಹಿ ಜಗತ್ತಿನಲ್ಲಿ ಸಂಭವಿಸಲಿರುವ ಆರ್ಥಿಕ ಹಿಂಜರಿತದ ಬಗ್ಗೆ ಎಚ್ಚರಿಕೆ ನೀಡುತ್ತಿದೆ ಮತ್ತು ವಿಶೇಷವಾಗಿ ಮೂರನೇ ಜಗತ್ತಿನ ದೇಶಗಳ ಮೇಲೆ ಅದರ ಪರಿಣಾಮಗಳ ಬಗ್ಗೆಯೂ ಚರ್ಚಿಸುತ್ತಿದೆ. ಸೆಪ್ಟೆಂಬರ್ 2022ರಲ್ಲಿ ಬಿಡುಗಡೆ ಮಾಡಿದ ಒಂದು ಲೇಖನದಲ್ಲಿ, 2023ರಲ್ಲಿ ವಿಶ್ವ ಅರ್ಥವ್ಯವಸ್ಥೆಯು ಶೇ. 1.9ರಷ್ಟು ಬೆಳವಣಿಗೆಯನ್ನು ದಾಖಲಿಸುವ ನಿರೀಕ್ಷೆಯನ್ನು ಅದು ವ್ಯಕ್ತಪಡಿಸಿದೆ. ಆದರೆ, ಐಎಂಎಫ್ ಮತ್ತು ವಿಶ್ವ ಬ್ಯಾಂಕ್ ಈ ಎರಡೂ ಸಂಸ್ಥೆಗಳೂ ಆರ್ಥಿಕ ಹಿಂಜರಿತಕ್ಕೆ ಮುಖ್ಯವಾಗಿ ಉಕ್ರೇನ್ ಯುದ್ಧ ಮತ್ತು ಅದು ಉಂಟುಮಾಡಿದ ಹಣದುಬ್ಬರವೇ ಕಾರಣವೆಂದು ಹೇಳುತ್ತವೆ (ಮತ್ತು, ಸಾಂಕ್ರಾಮಿಕವೂ ಸಹ ಹಣದುಬ್ಬರಕ್ಕೆ ಕಾರಣವಾಗಿದೆ ಎಂಬುದನ್ನು ಸಾಂದರ್ಭಿಕವಾಗಿ ಹೇಳಿವೆ). ಆದರೆ, ಈ ಹಣದುಬ್ಬರಕ್ಕೆ ಪ್ರತಿಕ್ರಿಯೆಯಾಗಿ ಕೈಗೊಂಡಿರುವ ಬಡ್ಡಿ ದರಗಳ ಸರ್ವಾಂಗೀಣ ಏರಿಕೆಯೇ ಪ್ರಸ್ತುತದಲ್ಲಿ ವಿಶ್ವವನ್ನು ಗಾಬರಿಗೊಳಿಸುವ ಮಟ್ಟದ ಆರ್ಥಿಕ ಹಿಂಜರಿತಕ್ಕೆ ಆಧಾರವಾಗಿದೆ ಎಂಬುದನ್ನು ಮತ್ತು ನವ ಉದಾರವಾದಿ ಅರ್ಥವ್ಯವಸ್ಥೆಯಿಂದ ಉದ್ಭವಿಸಿದ ಸಮಸ್ಯೆಗಳು ಬಿಕ್ಕಟ್ಟಿನ ತಳದಲ್ಲಿವೆ ಎಂಬುದನ್ನು ಈ ಸಂಸ್ಥೆಗಳು ಗುರುತಿಸುವುದೇ ಇಲ್ಲ.
ಮೊದಲಿಗೆ ಹೇಳುವುದಾದರೆ, ಐಎಂಎಫ್ ಮತ್ತು ವಿಶ್ವ ಬ್ಯಾಂಕ್‌ಗಳ ಈ ವಿಶ್ಲೇಷಣೆಯು ದೋಷಯುತವಾಗಿದೆ. ಉಕ್ರೇನ್ ಯುದ್ಧ ಆರಂಭವಾಗುವುದಕ್ಕೂ ಬಹಳ ದಿನಗಳ ಹಿಂದೆಯೇ, ಅಂದರೆ, ಕೊರೊನಾ ಸಾಂಕ್ರಾಮಿಕದಿAದ ವಿಶ್ವ ಅರ್ಥವ್ಯವಸ್ಥೆಯು ಚೇತರಿಸಿಕೊಳ್ಳಲಾರಂಭಿಸಿದ್ದ ಸಮಯದಲ್ಲೇ, ಹಣದುಬ್ಬರ ತಲೆ ಎತ್ತಿತ್ತು. ಆಗ, ಕೊರೊನಾ ಸಾಂಕ್ರಾಮಿಕದಿಂದಾಗಿ ಪೂರೈಕೆ ಸರಪಳಿಗಳಲ್ಲಿ ಉಂಟಾದ ಅಡಚಣೆಯೇ ಈ ಹಣದುಬ್ಬರಕ್ಕೆ ಕಾರಣವೆಂದು ಹೇಳಲಾಗಿತ್ತು. ಈ ವಿವರಣೆಯ ಬಗ್ಗೆ ಕೆಲವರು ತಮ್ಮ ಭಿನ್ನಾಭಿಪ್ರಾಯಗಳನ್ನು ಆಗಲೇ ವ್ಯಕ್ತಪಡಿಸಿದ್ದರು: ಯಾವುದೇ ವಾಸ್ತವಿಕ ಅಡಚಣೆಗಿಂತ ಹೆಚ್ಚಾಗಿ, ಕೊರತೆಗಳು ಸೃಷ್ಟಿಯಾಗುತ್ತವೆ ಎಂಬ ನಿರೀಕ್ಷೆಯಲ್ಲಿ ದೊಡ್ಡ ದೊಡ್ಡ ಉದ್ದಿಮೆಗಳು ತಮ್ಮ ಲಾಭವನ್ನು ವಿಪರೀತವಾಗಿ ಹೆಚ್ಚಿಸುತ್ತಿರುವ ಕಾರಣದಿಂದಾಗಿ ಹಣದುಬ್ಬರ ಏರಿಕೆಯಾಗುತ್ತಿದೆ ಎಂಬ ಅಂಶದ ಬಗ್ಗೆ ಅವರು ಗಮನ ಸೆಳೆದಿದ್ದರು. ಹಣದುಬ್ಬರ ಏರಿಕೆಯಾಗುತ್ತಿದ್ದ ಇಂತಹ ಒಂದು ಪರಿಸ್ಥಿತಿಯ ಹಿನ್ನೆಲೆಯಲ್ಲಿ ಉಕ್ರೇನ್ ಯುದ್ಧ ಸಂಭವಿಸಿತು. ಮತ್ತು, ರಷ್ಯಾದ ವಿರುದ್ಧ ನಿರ್ಬಂಧಗಳನ್ನು ವಿಧಿಸಿದ ಪಾಶ್ಚ್ಯಾತ್ಯ ಶಕ್ತಿಗಳು, ಹೊತ್ತಿ ಉರಿಯುತ್ತಿದ್ದ ಈ ಹಣದುಬ್ಬರದ ಬೆಂಕಿಗೆ ತುಪ್ಪ ಸುರಿದವು.
ಇದನ್ನು ಓದಿ: ಸುನಕ್ ಗೆ 27 ಲಕ್ಷ ಯು.ಕೆ ಕಾರ್ಮಿಕರ ಸರಣಿ ಮುಷ್ಕರಗಳ ಸವಾಲು
ಹಣದುಬ್ಬರ ಏರಿಕೆಯಾಗಲು ಉಕ್ರೇನ್ ಯುದ್ಧವು ಮೂಲ ಕಾರಣವಲ್ಲ ಎಂಬದನ್ನು ಕಚ್ಚಾ ತೈಲ ಬೆಲೆಗಳ ಏರಿಳಿತಗಳನ್ನು ಅವಲೋಕಿಸುವ ಮೂಲಕ ದೃಢಪಡಿಸಿಕೊಳ್ಳಬಹುದು. ಬ್ರೆಂಟ್ ಕಚ್ಚಾ ತೈಲದ ಬೆಲೆಗಳ ಏರಿಕೆಯು ಮುಖ್ಯವಾಗಿ 2021ರಲ್ಲಿ ವಿಶ್ವ ಅರ್ಥವ್ಯವಸ್ಥೆಯು ಕೊರೊನಾ ಸಾಂಕ್ರಾಮಿಕದಿAದ ಚೇತರಿಸಿಕೊಳ್ಳಲಾರಂಭಿಸಿದ ನಂತರ ಸಂಭವಿಸಿದೆ: 2021ರ ಆರಂಭದಲ್ಲಿ ಪ್ರತಿ ಬ್ಯಾರೆಲ್‌ಗೆ 50.37 ಡಾಲರ್‌ಗಳಷ್ಟಿದ್ದ ಕಚ್ಚಾ ತೈಲದ ಬೆಲೆಯು ಆ ವರ್ಷದ ಅಂತ್ಯದಲ್ಲಿ 77.24 ಡಾಲರ್‌ಗಳಿಗೆ ಏರಿತು. ಅಂದರೆ, 2021ರಲ್ಲಿ ಶೇ. 50ಕ್ಕಿಂತಲೂ ಹೆಚ್ಚು ಏರಿಕೆಯಾಗಿತ್ತು. ಉಕ್ರೇನ್ ಯುದ್ಧ ಸಂಭವಿಸಿದ 2022ರಲ್ಲಿ, ಪ್ರತಿ ಬ್ಯಾರೆಲ್‌ಗೆ 78.25 ಡಾಲರ್‌ಗಳಿಂದ 82.82 ಡಾಲರ್‌ಗಳಿಗೆ, ಅಂದರೆ, ತೈಲ ಬೆಲೆಗಳಲ್ಲಿ ಶೇಕಡಾ 5.8ರಷ್ಟು ಏರಿಕೆಯಾಗಿವೆ. ತೈಲ ಬೆಲೆಗಳು ಹಣದುಬ್ಬರವನ್ನು ಏರಿಸಿವೆ ಎಂದು ಹೇಳಲಾಗುತ್ತದೆಯಾದರೂ, ಉಕ್ರೇನ್ ಯುದ್ಧ ಆರಂಭವಾದ ನಂತರದಲ್ಲಿ ಕಂಡು ಬರುವ ಬೆಲೆ ಏರಿಕೆಯ ದರವು ಮುಂದುವರಿದ ಅನೇಕ ಬಂಡವಾಳಶಾಹಿ ದೇಶಗಳಲ್ಲಿರುವ ಪ್ರಸ್ತುತ ಹಣದುಬ್ಬರದ ದರಕ್ಕಿಂತಲೂ ಕಡಿಮೆ ಇದೆ. ಪಾಶ್ಚ್ಯಾತ್ಯ ದೇಶಗಳು ರಷ್ಯಾದ ವಿರುದ್ಧ ನಿರ್ಬಂಧಗಳನ್ನು ವಿಧಿಸಿದ ನಂತರ, ವಿಶ್ವ ತೈಲ ಬೆಲೆಗಳು 2022ರಲ್ಲಿ ಬ್ಯಾರೆಲ್‌ಗೆ 133.18 ಡಾಲರ್‌ಗಳ ಗರಿಷ್ಠ ಮಟ್ಟವನ್ನು ತಲುಪಿದವು, ನಿಜ. ಆದರೆ, ಆನಂತರ ಬೆಲೆಗಳು ತೀವ್ರವಾಗಿ ಇಳಿದದ್ದನ್ನು ನಾವು ನೋಡಿದೆವು. ಆದ್ದರಿಂದ, ಅನಿಷ್ಟಗಳಿಗೆ ಶನೀಶ್ವರನೇ ಹೊಣೆ ಎಂಬAತೆ, ಬೆಲೆ ಏರಿಕೆಗೆ ಉಕ್ರೇನ್ ಯುದ್ಧದ ಮೇಲೆ ಗೂಬೆ ಕೂರಿಸುವ ಕ್ರಮವು ತಪ್ಪುದಾರಿಗೆಳೆಯುವ ಕೆಲಸವಾಗುತ್ತದೆ ಮಾತ್ರವಲ್ಲ (ಏಕೆಂದರೆ, ಬೆಲೆ ಏರಿಕೆಯಾದದ್ದು ಯುದ್ಧದಿಂದಲೇ ಅಲ್ಲ, ನಿರ್ಬಂಧಗಳ ಕಾರಣದಿಂದಲೇ) ದೋಷಪೂರ್ಣವೂ ಆಗುತ್ತದೆ (ಏಕೆಂದರೆ ನಿರ್ಬಂಧ-ಪ್ರೇರಿತ ಬೆಲೆಗಳು ತಗ್ಗಿದ ನಂತರ ಸರಕು ಸಾಮಗ್ರಿಗಳ ಬೆಲೆಗಳು ಇಳಿಕೆಯಾಗಬೇಕಿತ್ತು).
ಇದನ್ನು ಓದಿ: ಉಲ್ಬಣಿಸಿದ ಬಿಕ್ಕಟ್ಟು ಪಲಾಯನದ ಮಹಾಪೂರ
ಮೊಸಳೆ ಕಣ್ಣೀರು
ಬ್ರೆಟ್ಟನ್ ವುಡ್ಸ್ ಸಂಸ್ಥೆಗಳ (ಐಎಂಎಫ್ ಮತ್ತು ವಿಶ್ವ ಬ್ಯಾಂಕ್) ವಿಶ್ಲೇಷಣೆ ಮಾತ್ರವೇ ದೋಷಪೂರಿತವಾಗಿದೆ ಎನ್ನುವಂತಿಲ್ಲ. ಅದಕ್ಕಿಂತಲೂ ಹೆಚ್ಚು ಗಮನಾರ್ಹವಾದ ಸಂಗತಿಯೆಂದರೆ, ಈ ವಿಶ್ವ ಆರ್ಥಿಕ ಹಿಂಜರಿತವು ಹೇಗೆ ಕೊನೆಗೊಳ್ಳುತ್ತದೆ ಎಂಬುದರ ಬಗ್ಗೆ, ಅವರದ್ದೇ ವಿಶ್ಲೇಷಣಾ ಪರಿಭಾಷೆಯ ಪ್ರಕಾರವೇ, ಅವರಿಗೇ ಅರಿವಿಲ್ಲ ಎಂಬುದು. ಅವರು ನಂಬುವಂತೆ, ಒಂದು ವೇಳೆ ಆರ್ಥಿಕ ಹಿಂಜರಿತದ ಬಿಕ್ಕಟ್ಟಿಗೆ ಉಕ್ರೇನ್ ಯುದ್ಧವೇ ಕಾರಣವಾಗಿದ್ದರೆ, ಕನಿಷ್ಠ ಪಕ್ಷ, ಯುದ್ಧವು ಶೀಘ್ರವಾಗಿ ಕೊನೆಗೊಳ್ಳಬೇಕೆಂದು ಅವರು ಅಪೇಕ್ಷಿಸಬೇಕಾಗಿತ್ತು. ಇಂತಹ ಒಂದು ಅಪೇಕ್ಷೆಯು, ರಷ್ಯಾದ ನೆತ್ತರು ಹರಿಸಿ ಅದು ಶರಣಾಗುವ ವರೆಗೂ ಯುದ್ಧವನ್ನು ಎಳೆದೊಯ್ಯ ಬಯಸುವ ಪಾಶ್ಚ್ಯಾತ್ಯ ಸಾಮ್ರಾಜ್ಯಶಾಹಿಗೆ ಸ್ವೀಕಾರಾರ್ಹವಲ್ಲ. ಆದುದರಿಂದಾಗಿಯೇ ಈ ಅವಳಿ ಸಂಸ್ಥೆಗಳು ಯುದ್ಧವನ್ನು ಕೊನೆಗೊಳಿಸುವ ಅಗತ್ಯದ ಬಗ್ಗೆ ಯಾವುದೇ ಅಭಿಪ್ರಾಯವನ್ನು ವ್ಯಕ್ತಪಡಿಸುವುದಿಲ್ಲ. ಯುದ್ಧವನ್ನು ಕೊನೆಗೊಳಿಸುವ ಬಗ್ಗೆ ಈ ಸಂಸ್ಥೆಗಳು ಮೌನ ತಳೆಯಲು ನಿರ್ಧರಿಸಿದ್ದರೂ ಸಹ, ಆರ್ಥಿಕ ಹಿಂಜರಿತವನ್ನು ಉಂಟುಮಾಡದ ರೀತಿಯ ಮತ್ತು ಬಡ್ಡಿ ದರಗಳ ಏರಿಕೆಯ ಮೂಲಕವಲ್ಲದೆ ಬೇರೆ ಯಾವುದೇ ವಿಧಾನದ ಮೂಲಕ ಹಣದುಬ್ಬರ ಬಿಕ್ಕಟ್ಟನ್ನು ನಿಭಾಯಿಸುವ ಬಗ್ಗೆ ಕೆಲವು ಅಭಿಪ್ರಾಯಗಳನ್ನಾದರೂ ಅವು ವ್ಯಕ್ತಪಡಿಸಬಹುದಿತ್ತು. ಆದರೆ, ಐಎಂಎಫ್ ಮತ್ತು ವಿಶ್ವ ಬ್ಯಾಂಕ್ ಸಂಸ್ಥೆಗಳು ಮುಕ್ತ ಮಾರುಕಟ್ಟೆ ವ್ಯವಸ್ಥೆಗೆ ಎಷ್ಟರಮಟ್ಟಿಗೆ ಬದ್ಧವಾಗಿವೆ ಎಂದರೆ, ಬಡ್ಡಿ ದರ ಹೆಚ್ಚಳದ ಪರಿಣಾಮವಾಗಿ ಉಂಟಾಗುವ ಆರ್ಥಿಕ ಹಿಂಜರಿತದ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಈ ಸಂಸ್ಥೆಗಳು ಹಣದುಬ್ಬರದ ನಿಯಂತ್ರಣಕ್ಕಾಗಿ ಬೇರೆ ಯಾವುದೇ ಕ್ರಮವನ್ನು (ನೇರ ಬೆಲೆ ನಿಯಂತ್ರಣದಂತಹ) ಯೋಚಿಸುವುದೂ ಸಾಧ್ಯವಿಲ್ಲ.
ಅಂತೆಯೇ, ವಿಶ್ವ ಬ್ಯಾಂಕ್ ಅಧ್ಯಕ್ಷ ಡೇವಿಡ್ ಮಾಲ್ಪಾಸ್ ಅವರು ಮುಂಬರುವ ತಿಂಗಳುಗಳಲ್ಲಿ ತೀವ್ರ ಹೊಡೆತಕ್ಕೆ ಒಳಗಾಗಲಿರುವ ಸಾಲದ ಹೊರೆ ಹೊತ್ತ ಮೂರನೇ ಜಗತ್ತಿನ ದೇಶಗಳೊಂದಿಗೆ ಮರುಕ ತೋರುತ್ತಾರಾದರೂ, ಮತ್ತು, ಈ ದೇಶಗಳ ಸಾಲದ ಹೊರೆಯ ಹೆಚ್ಚಿನ ಭಾಗವು ಹೆಚ್ಚಿನ ಬಡ್ಡಿ ದರಗಳಿಂದಾಗಿ ಉದ್ಭವಿಸಿದೆ ಎಂಬುದನ್ನು ಹೇಳುತ್ತಾರಾದರೂ, ಬಡ್ಡಿ ದರಗಳನ್ನು ಇಳಿಕೆ ಮಾಡುವ ಬಗ್ಗೆ ಅವರ ತುಟಿ ಪಿಟಕ್ ಎನ್ನುವುದಿಲ್ಲ. ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ವಿಶ್ವದ ಬಡವರಿಗೆ ಸಹಾಯ ಮಾಡುವ ಸಂದರ್ಭ ಬಂದಾಗ, ಎರಡೂ ಬ್ರೆಟ್ಟನ್ ವುಡ್ಸ್ ಸಂಸ್ಥೆಗಳು ಬಾಯಿ ತುಂಬಾ ಅಯ್ಯೊ ಪಾಪ ಎನ್ನುತ್ತವೆ, ಕೈ ಬಿಚ್ಚಬೇಕಾದ ಸಮಯ ಬಂದಾಗ ಕೈ ಕೊಡುತ್ತವೆ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಇದು ಬ್ರೆಟ್ಟನ್ ವುಡ್ಸ್ ಸಂಸ್ಥೆಗಳ ಪುಕ್ಕಲುತನದ ವಿಷಯವಲ್ಲ. ವಿಷಯ ಬಹಳ ಗಹನವಾಗಿದೆ. ಅಂದರೆ, ವಿಶ್ವ ಬಂಡವಾಳಶಾಹಿಯು ಇಂದು ಪಾರಾಗಲು ಸಾಧ್ಯವಿಲ್ಲದ ಒಂದು ನೈಜ ಬಿಕ್ಕಟ್ಟಿನಲ್ಲಿ ಸಿಲುಕಿದೆ. ನೂರಾರು ವರ್ಷಗಳ ಕಾಲಾವಧಿಯಲ್ಲಿ ವಿಕಸನಗೊಂಡ ಪಾಶ್ಚ್ಯಾತ್ಯ ಸಾಮ್ರಾಜ್ಯಶಾಹಿ ವ್ಯವಸ್ಥೆಯು ಹಾಗೆಯೇ ಉಳಿಯಬೇಕು ಎಂದಾದರೆ, ಮೆಟ್ರೋಪಾಲಿಟನ್ ಬಂಡವಾಳಶಾಹಿ ದೇಶಗಳು ಉಕ್ರೇನ್ ಯುದ್ಧವನ್ನು ಮುಂದುವರಿಸಲೇಬೇಕಾಗುತ್ತದೆ. ಹಾಗಾಗಿ, ಇಂತಹ ಪರಿಸ್ಥಿತಿಯಲ್ಲಿ, ಚತುರತೆಯಿಂದ ವ್ಯವಸ್ಥೆಗೊಳಿಸಿದ ಒಂದು ಆರ್ಥಿಕ ಹಿಂಜರಿತ ಉಂಟಾಗದಿದ್ದರೆ, ಪ್ರಸಕ್ತ ವೇಗದ ಹಣದುಬ್ಬರ ಮತ್ತು ಅದರ ಪರಿಣಾಮವಾಗಿ ಸೃಷ್ಟಿಯಾಗುವ ನಿರುದ್ಯೋಗ ಇವು ಅನಿವಾರ್ಯವಾಗುತ್ತವೆ. ಹಾಗಾಗಿ, ವಿಶ್ವ ಬಂಡವಾಳಶಾಹಿಯು ಈ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುವ ಸಂಗತಿಯು ಯಾವ ಆಶ್ಚರ್ಯವನ್ನೂ ಉಂಟುಮಾಡಬಾರದು. ಬಹಳ ಮುಖ್ಯವಾದ ವಿಷಯವೆಂದರೆ, ಅದನ್ನು ಪ್ರತಿರೋಧಿಸುವುದೇ ಆಗಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ