ಉಕ್ರೇನ್ ಬಿಕ್ಕಟ್ಟಿನ ಐಎಂಎಫ್ ಕೊಂಡಿ

ಪ್ರೊ.ಪ್ರಭಾತ್ ಪಟ್ನಾಯಕ್

ಐಎಂಎಫ್ ಸಾಲಕೊಡಲು ಹೇರಿದ ಸಂಬಳ ಕಡಿತ, ಸಬ್ಸಿಡಿ ಕಡಿತದ ‘ಮಿತವ್ಯಯ’ದ ಶರತ್ತುಗಳನ್ನು ಒಪ್ಪಲು ಉಕ್ರೇನಿನ ಹಿಂದಿನ ಅಧ್ಯಕ್ಷ ಯಾನುಕೋವಿಚ್ ಹಿಂಜರಿದರು, ಐಎಂಎಫ್ ನೊಂದಿಗೆ ನಡೆಸುತ್ತಿದ್ದ ಮಾತುಕತೆಯನ್ನು ನಿಲ್ಲಿಸಿ, ರಷ್ಯಾದೊಂದಿಗೆ ಮಾತುಕತೆ ಆರಂಭಿಸಿದರು. ಅದೇ ಒಂದು “ಅಕ್ಷಮ್ಯ ಅಪರಾಧ”ವಾಗಿ ಪರಿಣಮಿಸಿತು. ಯಾನುಕೋವಿಚ್ ಅವರ ವಿರುದ್ಧ ಒಂದು ಬೃಹತ್ ಪ್ರತಿಭಟನಾ ಅಭಿಯಾನವನ್ನು ಪ್ರಚೋದಿಸಲಾಯಿತು. ಯಾನುಕೋವಿಚ್-ವಿರೋಧಿ ಪ್ರದರ್ಶನಗಳಲ್ಲಿ ಮುಂಚೂಣಿಯಲ್ಲಿದ್ದ ಉಕ್ರೇನ್‌ನ ನಾಜಿ ಮಂದಿಗಳ ಸಹಾಯದಿಂದ ನಡೆಸಲಾದ ಅಮೆರಿಕಾ ಪ್ರಾಯೋಜಿತ ಕ್ಷಿಪ್ರಕ್ರಾಂತಿಯಲ್ಲಿ ಅವರನ್ನು ಪದಚ್ಯುತಗೊಳಿಸಲಾಯಿತು. ನಂತರ ಅಧಿಕಾರಕ್ಕೆ ಬಂದ ಝೆಲೆನ್ಸ್ಕಿ ಸರ್ಕಾರವು ನಾಗರಿಕರಿಗೆ ದೊರಕುತ್ತಿದ್ದ ಅನಿಲ ಸಬ್ಸಿಡಿಯನ್ನು ಅರ್ಧದಷ್ಟು ಕಡಿತಗೊಳಿಸುವ ಮೂಲಕ ತನ್ನ “ಸದುದ್ದೇಶಗಳನ್ನು” ಪ್ರದರ್ಶಿಸಿದ ನಂತರ ಐಎಂಎಫ್‌ನಿಂದ 27 ಬಿಲಿಯನ್ ಡಾಲರ್ ಸಾಲದ ವಚನ ಪಡೆಯಿತು. ಆದರೆ ಪುಟಿನ್ ಈಗ ಮಾಡುತ್ತಿರುವುದು ಐಎಂಎಫ್ ಅಥವ ಅಂತರರಾಷ್ಟ್ರೀಯ ಹಣಕಾಸು ಬಂಡವಾಳದ ಈ ಪ್ರಾಬಲ್ಯದ ವಿರುದ್ಧದ ಹೋರಾಟವಂತೂ ಖಂಡಿತಾ ಅಲ್ಲ.

ಸೋವಿಯತ್ ಒಕ್ಕೂಟದ ಒಂದು ಸದಸ್ಯ ಗಣರಾಜ್ಯವಾಗಿದ್ದ ಉಕ್ರೇನ್, ಸೋವಿಯತ್ ಒಕ್ಕೂಟದ ವಿಘಟನೆಯ ನಂತರ ಅದು ಅಮೆರಿಕಾ ನೇತೃತ್ವದ ಮಿಲಿಟರಿ ಕೂಟ(ನ್ಯಾಟೋ) ಸೇರುವ ಬಗ್ಗೆ ಮತ್ತು ತತ್ಸಂಬಂಧವಾಗಿ ರಷ್ಯಾ ತನ್ನ ಭದ್ರತೆಯ ದೃಷ್ಟಿಯಲ್ಲಿ ವ್ಯಕ್ತಪಡಿಸುತ್ತಿದ್ದ ಆತಂಕದ ಬಗ್ಗೆ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಚರ್ಚಿಸಲಾಗಿದೆ. ಆದರೆ, ಈ ಸಮಸ್ಯೆಯ ಜೊತೆಯಲ್ಲೇ, ಉಕ್ರೇನ್‌ಗೆ ಸಾಲಕೊಡುವ ಸಂಬಂಧವಾಗಿ ಐಎಂಎಫ್ ಸೃಷ್ಟಿಸುತ್ತಿದ್ದ ಸಮಸ್ಯೆಗಳ ಬಗ್ಗೆ ಮಾಧ್ಯಮಗಳು ಮೌನವಾಗಿವೆ. ಕಾರ್ಮಿಕ ವಿರೋಧಿ ಮತ್ತು ಜನ-ವಿರೋಧಿ (“ಮಿತವ್ಯಯ”ಎಂಬ ಹೆಸರಿನ) ಕ್ರಮಗಳ ಮೂಲಕ ಹೂಡಿಕೆಯಾಗುವ ಬಂಡವಾಳವು ಹೊರಗಿನಿಂದ ಹರಿದು ಬರಲು ಅನುವಾಗುವಂತೆ ದೇಶ ದೇಶಗಳ ಅರ್ಥವ್ಯವಸ್ಥೆಗಳನ್ನು “ಹೂಡಿಕೆದಾರ ಸ್ನೇಹಿ” ಯಾಗಿ ಸಜ್ಜುಗೊಳಿಸುವ ಕಾರ್ಯವನ್ನು ಐಎಂಎಫ್ ಮಾಡುತ್ತಿರುವುದು ಎಲ್ಲರಿಗೂ ತಿಳಿದ ವಿಷಯವೇ. ಈ ಪ್ರಕಾರವಾಗಿ ದೇಶ ದೇಶಗಳು ಹೊರಗಿನ ಬಂಡವಾಳದ ಹೂಡಿಕೆಗೆ ತೆರೆದುಕೊಂಡಾಗ, ಬಂಡವಾಳಗಾರರು ಆ ದೇಶಗಳ ಪ್ರಾಕೃತಿಕ ಸಂಪನ್ಮೂಲಗಳನ್ನು ಮತ್ತು ಭೂಮಿಯನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳುವುದು ಒಂದು ಕ್ರಮವಾಗುತ್ತದೆ. ಈ ಕಾರ್ಯಸಾಧನೆಗಾಗಿ ಐಎಂಎಫ್ ಸಾಮಾನ್ಯವಾಗಿ ಬಳಕೆ ಮಾಡುವ ಒಂದು ಕಾರ್ಯವಿಧಾನವೆಂದರೆ, ಪಾವತಿ ಶೇಷ (ವಿದೇಶ ವ್ಯಾಪಾರದ ಕೊರತೆ) ಸಮಸ್ಯೆ ಎದುರಾದ ದೇಶಗಳು ಐಎಂಎಫ್ ಸಾಲದ ಮೊರೆ ಹೋದಾಗ, ತಾನು ಸಾಲ ಕೊಡುವ ಸಮಯದಲ್ಲಿ ಕೆಲವು “ಷರತ್ತು” ಗಳನ್ನು ಹೇರುವುದು.

ಈ ರೀತಿಯ ಕಾರ್ಯನಿರ್ವಹಣೆಯ ಜೊತೆಗೆ, ಕೆಲವು ಸಂದರ್ಭಗಳಲ್ಲಿ ಒಂದು ನಿರ್ದಿಷ್ಟ-ವಿಶೇಷ ಪಾತ್ರವನ್ನೂ ಐಎಂಎಫ್ ವಹಿಸಿದೆ. ಅಂದರೆ, ಸಂದರ್ಭ ಒದಗಿದಾಗ ಐಎಂಎಫ್, ಅಮೆರಿಕಾದ ಶೀತಲ ಸಮರದ ಉದ್ದೇಶಗಳನ್ನು ಬೆಂಬಲಿಸಿದೆ. ಉಕ್ರೇನ್ ವಿಷಯದಲ್ಲಂತೂ ಅದನ್ನು ಸ್ಪಷ್ಟವಾಗಿ ಕಾಣಬಹುದು. ಉಕ್ರೇನ್ ಅರ್ಥವ್ಯವಸ್ಥೆಯನ್ನು “ಹೂಡಿಕೆದಾರ ಸ್ನೇಹಿ”ಯಾಗಿ ಸಜ್ಜುಗೊಳಿಸುವುದರ ಹೊರತಾಗಿ, ಉಕ್ರೇನ್ ಸಮಸ್ಯೆಯ ಆರಂಭದದಿಂದಲೂ ಅಮೆರಿಕಾದ ಹಿತಾಸಕ್ತಿಗಳನ್ನು ಪೂರೈಸುವಲ್ಲಿ ಐಎಂಎಫ್ ಕಾರ್ಯೋನ್ಮುಖವಾಗಿತ್ತು.

2014ರ ಮೊದಲು ವಿಕ್ಟರ್ ಯಾನುಕೋವಿಚ್ ಉಕ್ರೇನ್ ಅಧ್ಯಕ್ಷರಾಗಿದ್ದ ಕಾಲದಲ್ಲಿ ಐರೋಪ್ಯ ಒಕ್ಕೂಟದೊಂದಿಗಿನ ವ್ಯಾಪಾರ ಏಕೀಕರಣದ ಭಾಗವಾಗಿದ್ದ ಆ ದೇಶವು ಸಾಲ ಪಡೆಯುವ ಸಂಬಂಧವಾಗಿ ಐಎಂಎಫ್ ನೊಂದಿಗೆ ಮಾತುಕತೆ ನಡೆಸುತ್ತಿತ್ತು. ಉಕ್ರೇನ್‌ನಲ್ಲಿ ಉದ್ಯೋಗ ಸೃಷ್ಟಿಸುವ ಆರೋಗ್ಯ ಮತ್ತು ಶಿಕ್ಷಣದಂತಹ ಪ್ರಮುಖ ವಲಯಗಳ ಖರ್ಚುಗಳನ್ನು ಮತ್ತು ಉದ್ಯೋಗಿಗಳ ಸಂಖ್ಯೆಯನ್ನು “ಕಡಿಮೆ” ಮಾಡುವ, ಕೆಲಸಗಾರರ ವೇತನ ಕಡಿತ ಮಾಡುವ ಮತ್ತು ಎಲ್ಲಾ ನಾಗರಿಕರಿಗೂ ಕೈಗೆಟುಕುವ ದರದಲ್ಲಿ ಇಂಧನ ಒದಗಿಸುವ ನೈಸರ್ಗಿಕ ಅನಿಲದ ಮೇಲಿನ ಸಬ್ಸಿಡಿಯನ್ನು ಕಡಿತಗೊಳಿಸುವ “ಸುಧಾರಣೆ”ಗಳನ್ನು ಕೈಗೊಳ್ಳುವಂತೆ ಐಎಂಎಫ್ ಸೂಚಿಸಿತ್ತು. ಜನರ ಮೇಲೆ ಭಾರಿ ಹೊರೆಯನ್ನು ಹೇರುವ ಈ “ಸುಧಾರಣೆಗಳನ್ನು” ಜಾರಿ ಮಾಡಲು ಅಧ್ಯಕ್ಷ ಯನುಕೋವಿಚ್ ಹಿಂಜರಿದರು. ಹಾಗಾಗಿ, ಅವರು ಐಎಂಎಫ್ ನೊಂದಿಗೆ ನಡೆಸುತ್ತಿದ್ದ ಮಾತುಕತೆಯನ್ನು ನಿಲ್ಲಿಸಿ, ಬದಲಿಗೆ, ರಷ್ಯಾದೊಂದಿಗೆ ಮಾತುಕತೆ ಆರಂಭಿಸಿದರು.

ಯಾನುಕೋವಿಚ್ ಅವರ ಈ ನಿರ್ಧಾರವೇ ಒಂದು ಅಕ್ಷಮ್ಯ “ಅಪರಾಧ”ವಾಗಿ ಪರಿಣಮಿಸಿತು. “ಅಪರಾಧ” ಏಕೆಂದರೆ, ಐಎಂಎಫ್‌ನೊಂದಿಗಿನ ಮಾತುಕತೆಗಳನ್ನು ಮುರಿಯುವುದೆಂದರೆ, ನವ-ಉದಾರವಾದಿ ಆಳ್ವಿಕೆಯನ್ನು ಹೇರುವ ಉದ್ದೇಶದ ಅಂತರರಾಷ್ಟ್ರೀಯ ಹಣಕಾಸು ಬಂಡವಾಳದ ಹಿಡಿತದಿಂದ ಮಾತ್ರವಲ್ಲ, ಪಾಶ್ಚಿಮಾತ್ಯ ಸಾಮ್ರಾಜ್ಯಶಾಹಿ ಶಕ್ತಿಗಳಿಂದ, ಅದರಲ್ಲೂ ವಿಶೇಷವಾಗಿ ಅಮೆರಿಕಾದಿಂದ ಅರ್ಥಾತ್ ನ್ಯಾಟೋದಿಂದ ತಪ್ಪಿಸಿಕೊಳ್ಳುವುದಕ್ಕೆ ಸಮಾನವಾಗುತ್ತದೆ. ಈ ಅಂಶವನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ನ್ಯಾಟೋ ಮತ್ತು ಐಎಂಎಫ್ ಇವುಗಳನ್ನು ಪ್ರತ್ಯೇಕ ಸಂಸ್ಥೆಗಳಾಗಿ ನೋಡಲಾಗದು. ಈ ಪ್ರತಿಯೊಂದು ಸಂಸ್ಥೆಯೂ ತನ್ನದೇ ಆದ ಕಾರ್ಯಾಕ್ಷೇತ್ರದಲ್ಲಿ ತನ್ನದೇ ಆದ ಉದ್ದೇಶದೊಂದಿಗೆ ಕೆಲಸ ಮಾಡುತ್ತಿದೆ, ನಿಜ. ಈ ಸಂಸ್ಥೆಗಳು ಒಂದೇ ರೀತಿಯ ಉದ್ದೇಶಗಳನ್ನು ಹೊಂದಿವೆಯಾದರೂ, ಆ ಉದ್ದೇಶಗಳು ಒಂದರ ಮೇಲೊಂದು ಚಾಚಿಕೊಂಡಿವೆ. ಐಎಂಎಫ್ ಬದಲಿಗೆ ರಷ್ಯಾದತ್ತ ತಿರುಗಿದ ಯಾನುಕೋವಿಚ್ ಅವರ ಮೊಂಡು-ಧೈರ್ಯವನ್ನು ಕಂಡು ಕೋಪಗೊಂಡ ಅಮೆರಿಕ, ನಿರ್ಬಂಧಗಳ ಮೂಲಕ ಉಕ್ರೇನ್‌ಗೆ ಸಾಧ್ಯವಾದಷ್ಟು “ಹಾನಿ” ಉಂಟುಮಾಡಲು ನಿರ್ಧರಿಸಿತು. ಯಾನುಕೋವಿಚ್ ಅವರ ವಿರುದ್ಧ ಒಂದು ಬೃಹತ್ ಪ್ರತಿಭಟನಾ ಅಭಿಯಾನವನ್ನು ಪ್ರಚೋದಿಸಲಾಯಿತು. ಯಾನುಕೋವಿಚ್ ವಿರೋಧಿ ಪ್ರದರ್ಶನಗಳಲ್ಲಿ ಮುಂಚೂಣಿಯಲ್ಲಿದ್ದ ಉಕ್ರೇನ್‌ನ ನಾಜಿ ಮಂದಿಗಳ ಸಹಾಯದಿಂದ ನಡೆಸಲಾದ ಅಮೆರಿಕಾ ಪ್ರಾಯೋಜಿತ ಕ್ಷಿಪ್ರಕ್ರಾಂತಿಯಲ್ಲಿ ಅವರನ್ನು ಪದಚ್ಯುತಗೊಳಿಸಲಾಯಿತು. ಈ ಶಕ್ತಿಗಳು ಈಗ ಉಕ್ರೇನ್ ಸೇನೆಯ ಭಾಗವಾಗಿವೆ – ಹಿಂದೆ ಉಕ್ರೇನ್‌ನ ‘ರಾಷ್ಟ್ರೀಯ ಕಾವಲು ಪಡೆ’ಯ ಭಾಗವಾಗಿದ್ದ ತೀವ್ರ-ಬಲಪಂಥೀಯ, ಸರ್ವ-ಸ್ವಯಂಸೇವಕ, ಮಿಲಿಟರಿ ಪದಾತಿದಳವಾದ ಅಜೋವ್ ಬೆಟಾಲಿಯನ್‌ ಅನ್ನು ಔಪಚಾರಿಕವಾಗಿ ಉಕ್ರೇನ್ ಸೈನ್ಯದಲ್ಲಿ ಸೇರಿಸುವ ಮೂಲಕ.

2014ರ ಕ್ಷಿಪ್ರಕ್ರಾಂತಿಯ ನಂತರ ಅಧಿಕಾರಕ್ಕೆ ಬಂದ ಸರ್ಕಾರವು ಯುರೋಪಿಯನ್ ಒಕ್ಕೂಟದೊಂದಿಗೆ ಮಾತುಕತೆಗಳನ್ನು ಪುನರಾರಂಭಿಸಿತು. ನಾಗರಿಕರಿಗೆ ದೊರಕುತ್ತಿದ್ದ ಅನಿಲ ಸಬ್ಸಿಡಿಯನ್ನು ಅರ್ಧದಷ್ಟು ಕಡಿತಗೊಳಿಸುವ ಮೂಲಕ ತನ್ನ “ಸದುದ್ದೇಶಗಳನ್ನು” ಪ್ರದರ್ಶಿಸಿದ ನಂತರ ಉಕ್ರೇನ್ ಸರ್ಕಾರವು ಐಎಂಎಫ್‌ನಿಂದ 27 ಬಿಲಿಯನ್ ಡಾಲರ್ ಸಾಲದ ವಚನ ಪಡೆಯಿತು. ಈ ಸಾಲವು ಹಲವಾರು ವೈಲಕ್ಷಣ್ಯಗಳಿಂದ ಕೂಡಿತ್ತು. ಮೊದಲನೆಯದು, ಸಾಲದ ಈ ಮೊತ್ತವು, ಒಂದು ಸಾಧಾರಣ ಪರಿಸ್ಥಿತಿಯಲ್ಲಿ ಉಕ್ರೇನ್ ಮಟ್ಟದ ದೇಶವೊಂದಕ್ಕೆ ಐಎಂಎಫ್ ಒದಗಿಸುವ ಸಾಲಕ್ಕೆ ಹೋಲಿಸಿದರೆ ಆರು ಪಟ್ಟು ದೊಡ್ಡದಿತ್ತು. ಎರಡನೆಯದು, ಈ ಸಾಲವನ್ನು ಉಕ್ರೇನ್‌ನಲ್ಲಿ ನಡೆಯುತ್ತಿದ್ದ ಅಂತರ್ಯುದ್ಧದ ಸಮಯದಲ್ಲಿ ನೀಡಲಾಗಿತ್ತು. ಇದು ಐಎಂಎಫ್‌ನ ಸಾಮಾನ್ಯ ನಡವಳಿಕೆಗಳಿಗೆ ವಿರುದ್ಧವಾಗಿದೆ. ಮೂರನೆಯದು, ಸಾಲವನ್ನು ಉಕ್ರೇನ್ ಮರುಪಾವತಿಸುವುದು ಸಾಧ್ಯವಿಲ್ಲ ಎಂಬುದು ಮೊದಲೇ ಖಚಿತವಾಗಿತ್ತು. ಹಾಗಾಗಿ, ಅದನ್ನು ಮರಳಿ ಪಡೆಯುವ ಏಕೈಕ ಮಾರ್ಗವೆಂದರೆ, ಮೆಟ್ರೋಪಾಲಿಟನ್(ಮುಂದುವರೆದ ಪಾಶ್ಚಿಮಾತ್ಯ ಬಂಡವಾಳ ಕೇಂದ್ರಗಳ) ನಿಯಂತ್ರಣ ಕ್ರಮಗಳ ಮೂಲಕ ಆ ದೇಶದ ಭೂಮಿ ಮತ್ತು ಖನಿಜ ಸಂಪನ್ಮೂಲಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವುದು (ಅವುಗಳಲ್ಲಿ ಅತ್ಯಂತ ಪ್ರಮುಖವಾದುದು ನೈಸರ್ಗಿಕ ಅನಿಲ).

2014 ರಲ್ಲಿ ಉಕ್ರೇನ್‌ನಲ್ಲಿ ಐಎಂಎಫ್ ನೆಡೆಸಿದ ಕಾರ್ಯಾಚರಣೆಗಳು, ಹೊರಗಿನ ಬಂಡವಾಳದ ಹೂಡಿಕೆಗೆ ತೆರೆದುಕೊಳ್ಳುವಂತೆ ಒಂದು ದೇಶವನ್ನು ಸಜ್ಜುಗೊಳಿಸುವ ಅದರ ಕಾರುಬಾರಿನ ಜೊತೆಗೆ, ಅಧಿಕವಾಗಿ, ಅಮೆರಿಕಾದ ಶೀತಲ ಸಮರದ ಉದ್ದೇಶಗಳಿಗೆ ಸಹಾಯ ಮಾಡಿದವು. ಉಕ್ರೇನ್‌ನ ಮಾರುಕಟ್ಟೆಗಳು, ಭೂಮಿ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಮೆಟ್ರೋಪಾಲಿಟನ್ ಬಂಡವಾಳಕ್ಕೆ ತೆರೆದುಕೊಳ್ಳುವಂತೆ ಮಾಡುವ ಉದ್ದೇಶವನ್ನು 2014ರಲ್ಲಿ ಒಂದು ಸಣ್ಣ ಮೊತ್ತದ ಸಾಲದ ಮೂಲಕವೇ ಪೂರೈಸಿಕೊಳ್ಳಬಹುದಿತ್ತು. ಆದರೆ, ಒಂದು ಅಸಾಧಾರಣ ಗಾತ್ರದ ಈ ಸಾಲವು, ಅಮೆರಿಕದ ಆಡಳಿತ, ಉಕ್ರೇನ್‌ನ ಶ್ರೀಮಂತ ಕುಳಗಳು ಮತ್ತು ಐಎಂಎಫ್ ಇವುಗಳ ಸಂಬಂಧದ ಸ್ವರೂಪ ಮತ್ತು ಅವರ ಉದ್ದೇಶವೇನು ಎಂಬುದನ್ನು ತೋರಿಸುತ್ತದೆ: ಅಮೆರಿಕದ ಆಡಳಿತವು ಉಕ್ರೇನ್ ತನ್ನ ಕಕ್ಷೆಯೊಳಗೇ ಇರಬೇಕೆಂದು ಬಯಸುತ್ತದೆ, ಉಕ್ರೇನ್‌ನ ಶ್ರೀಮಂತ ಕುಳಗಳು ಡಾಲರ್ ಅಥವಾ ಯುರೋಗಳಲ್ಲಿ ತಮ್ಮ ಸಂಪತ್ತನ್ನು ದೇಶದಿಂದ ಹೊರಗೆ ಕೊಂಡೊಯ್ಯಲು ಬಯಸುತ್ತವೆ. ಕ್ಷಿಪ್ರಕ್ರಾಂತಿಯ ನಂತರ ಅಧಿಕಾರ ಹಿಡಿದ ಸರ್ಕಾರವು ಈ ಎಲ್ಲರ ಬಯಕೆಗಳು ಈಡೇರುವ ಅವಕಾಶವನ್ನು ಕಲ್ಪಿಸಿಕೊಡಬೇಕಾಗುತ್ತದೆ. ಈ ಎಲ್ಲ ಏರ್ಪಾಟುಗಳಿಗೆ ಐಎಂಎಫ್ ಸಾಲ ಒದಗುತ್ತದೆ.

ರಷ್ಯಾ ತನ್ನ ಮೇಲೆ ಆಕ್ರಮಣ ಮಾಡಿದ ಹಿನ್ನೆಲೆಯಲ್ಲಿ, ಉಕ್ರೇನ್, ಸಾಲಕ್ಕಾಗಿ ಐಎಂಎಫ್‌ ಅನ್ನು ಮತ್ತೆ ಸಂಪರ್ಕಿಸಿದೆ. ಐಎಂಎಫ್‌ನ ಪ್ರಸ್ತುತ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಾಲಿನಾ ಜಾರ್ಜಿವಾ ಅವರು ಉಕ್ರೇನ್ ಕೋರಿದ ಬೆಂಬಲವನ್ನು ಒದಗಿಸುವಂತೆ ಐಎಂಎಫ್ ನಿರ್ದೇಶಕ ಮಂಡಳಿಗೆ ಶಿಫಾರಸು ಮಾಡಿದ್ದಾರೆ. ಈ ಸಾಲದ ಪ್ರಮಾಣ ಎಷ್ಟು ಮತ್ತು ಅದನ್ನು ಕೇಳಿದ ಉದ್ದೇಶಗಳು ಇನ್ನೂ ಸ್ಪಷ್ಟವಿಲ್ಲ. ಆದರೆ, ಒಂದು ವಿಷಯವಂತೂ ಖಚಿತವಾಗಿದೆ: ಉಕ್ರೇನ್‌ನ ಪ್ರಸ್ತುತ ಬಿಕ್ಕಟ್ಟು ಕೊನೆಗೊಂಡ ನಂತರ, ಬಿಕ್ಕಟ್ಟಿನ ಪರಿಹಾರವು ಯಾವ ರೂಪದಲ್ಲಿದ್ದರೂ ಸರಿಯೇ, ಉಕ್ರೇನ್ ಯುರೋಪಿನಲ್ಲಿ ಎರಡನೇ ಗ್ರೀಸ್ ಆಗುತ್ತದೆ. ಗ್ರೀಸ್ ದೇಶದ ವಿಷಯದಲ್ಲೂ ಸಹ, ಐಎಂಎಫ್ ಆ ದೇಶಕ್ಕೆ ಕೊಟ್ಟ ಸಾಲವು, ಐಎಂಎಫ್‌ನ ರೀತಿ-ರಿವಾಜುಗಳಿಗೆ ಹೋಲಿಸಿದರೆ, ಅತಿ ದೊಡ್ಡದು. ಆ ಸಾಲದಲ್ಲಿ ಹೆಚ್ಚಿನ ಭಾಗವು, ನಿಜಕ್ಕೂ, ಗ್ರೀಸ್‌ಗೆ ಸಾಲ ನೀಡಿದ ಯುರೋಪಿಯನ್ ಬ್ಯಾಂಕುಗಳ ಹಣವನ್ನು ಮರಳಿಸುವ ಉದ್ದೇಶದ್ದಾಗಿತ್ತು. ಗ್ರೀಸ್ ಈಗ ಶಾಶ್ವತ ಸಾಲದ ಸುಳಿಯಲ್ಲಿ ಸಿಕ್ಕಿಬಿದ್ದಿದೆ.

ಐಎಂಎಫ್ ತನ್ನ ಆರಂಭದ ದಿನಗಳಿಂದ ಬಹಳಷ್ಟು ಬದಲಾಗಿದೆ. ಅಂತರರಾಷ್ಟ್ರೀಯ ಆಳ್ವಿಕೆಯ ಆರ್ಥಿಕ ಕಾರ್ಯತಂತ್ರದ ದೃಷ್ಟಿಯಲ್ಲಿ ನಿಯಂತ್ರಣ ನೀತಿಗಳನ್ನು ಅನುಸರಿಸಬೇಕೆಂಬ ಆಶಯದೊಂದಿಗೆ, 1944ರಲ್ಲಿ, ಅಮೆರಿಕಾದ ಬ್ರೆಟನ್ ವುಡ್ಸ್ ಎಂಬ ಒಂದು ಸ್ಥಳದಲ್ಲಿ ನಡೆದ ಒಂದು ಅಂತರರಾಷ್ಟ್ರೀಯ ಸಮಾವೇಶದಲ್ಲಿ ಈ ಸಂಸ್ಥೆಯನ್ನು ಆರಂಭಿಸಲಾಯಿತು. ಹೆಸರಾಂತ ಬ್ರಿಟಿಷ್ ಅರ್ಥಶಾಸ್ತ್ರಜ್ಞ ಜಾನ್ ಮೇನಾರ್ಡ್ ಕೀನ್ಸ್ (ಬ್ರಿಟನ್ ಪ್ರತಿನಿಧಿ) ಮತ್ತು ಹ್ಯಾರಿ ಡೆಕ್ಸ್ಟರ್ ವೈಟ್(ಅಮೇರಿಕದ ಪ್ರತಿನಿಧಿ) ಅಂತರರಾಷ್ಟ್ರೀಯ ಆಳ್ವಿಕೆಯಲ್ಲಿ ಡಿರಿಜಿಸ್ಟ್(ನಿಯಂತ್ರಕ) ಹಸ್ತಕ್ಷೇಪದ ಪ್ರಮುಖ ಪ್ರತಿಪಾದಕರಾಗಿದ್ದರು. ಪ್ರತಿಯೊಂದು ದೇಶವೂ ವ್ಯಾಪಾರ ಮತ್ತು ಬಂಡವಾಳದ ಹರಿವಿನ ಮೇಲೆ ನಿಯಂತ್ರಣಗಳನ್ನು ಹೇರುತ್ತಿದ್ದ ಅಂದಿನ ಸನ್ನಿವೇಶದಲ್ಲಿ, ಯಾವುದೇ ಒಂದು ದೇಶದಲ್ಲಿ ವಿದೇಶ ವ್ಯಾಪಾರದ ಶಿಲ್ಕು ತೀರಿಸುವ ಸಮಸ್ಯೆ ಉದ್ಭವಿಸಿದರೆ, ಆ ದೇಶದ ಅರ್ಥವ್ಯವಸ್ಥೆಯನ್ನು “ಸ್ಥಿರಗೊಳಿಸುವ” ಸಲುವಾಗಿ ಐಎಂಎಫ್‌ನಿಂದ ಸಾಲ ಪಡೆಯುವ ಅವಕಾಶವನ್ನು ಕಲ್ಪಿಸಲಾಯಿತು. ಇಂಥಹ ಒಂದು ಉದ್ದೇಶದ ಮೇಲೆ ಕಾರ್ಯನಿರ್ವಹಿಸುತ್ತಿದ್ದ ಐಎಂಎಫ್, ಕಾಲಕ್ರಮೇಣ “ರಚನಾತ್ಮಕ ಹೊಂದಾಣಿಕೆ”ಯ ನಾಯಕನಾಗಿ ವಿಕಸನಗೊಂಡಿತು. ಈ “ರಚನಾತ್ಮಕ ಹೊಂದಾಣಿಕೆ”ಯ ಹೆಸರಿನಲ್ಲಿ ಐಎಂಎಫ್, ಪಾವತಿ ಶೇಷದ (ವಿದೇಶ ವ್ಯಾಪಾರದ ಕೊರತೆ) ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಉದ್ದೇಶಕ್ಕಾಗಿ ಮತ್ತು ಆ ಮೂಲಕ ಅರ್ಥವ್ಯವಸ್ಥೆಯ ಸ್ಥಿರತೆಗಾಗಿ ಮಾತ್ರ ಸಾಲಗಳನ್ನು ನೀಡಲಿಲ್ಲ. ವಾಸ್ತವವಾಗಿ, ಐಎಂಎಫ್, ನವಉದಾರವಾದಿ ಆಳ್ವಿಕೆಯನ್ನು ಉತ್ತೇಜಿಸಿತು. ಅಂದರೆ, ವ್ಯಾಪಾರ ಮತ್ತು ಬಂಡವಾಳದ ಹರಿವಿನ ಮೇಲೆ ಎಲ್ಲ ನಿಯಂತ್ರಣಗಳನ್ನು ತೆಗೆದುಹಾಕುವ ನೀತಿಗಳನ್ನು, ಸಾರ್ವಜನಿಕ ವಲಯದ ಸ್ವತ್ತುಗಳನ್ನು ಖಾಸಗೀಕರಿಸುವ ನೀತಿಗಳನ್ನು ಮತ್ತು “ಕಾರ್ಮಿಕ ಮಾರುಕಟ್ಟೆಯಲ್ಲಿ ಹೊಂದಿಕೊಳ್ಳುವ/ನಮ್ಯತೆ” ನೀತಿಗಳನ್ನು (ಅಂದರೆ ಕಾರ್ಮಿಕ ಸಂಘಗಳನ್ನು ದುರ್ಬಲಗೊಳಿಸುವ ನೀತಿಗಳನ್ನು) ಪ್ರೋತ್ಸಾಹಿಸಿತು.

ಸಂಕ್ಷಿಪ್ತವಾಗಿ ಹೇಳುವುದಾದರೆ, ಡಿರಿಜಿಸ್ಟ್ ಆಳ್ವಿಕೆಯನ್ನು ಪ್ರೋತ್ಸಾಹಿಸಬೇಕಿದ್ದ ಐಎಂಎಫ್, ಡಿರಿಜಿಸ್ಟ್ ಆಳ್ವಿಕೆಯ ವಿನಾಶಕನಾಗಿ ಮಾರ್ಪಾಟಾಯಿತು ಮತ್ತು ನವ-ಉದಾರವಾದಿ ಆಳ್ವಿಕೆಯ ಆಯೋಜಕನಾಗಿ ಬದಲಾಯಿತು. ವಿಶ್ವದ ಮೂಲೆ ಮೂಲೆಯನ್ನೂ ಪ್ರವೇಶಿಸಲು ತುದಿಗಾಲಲ್ಲಿ ನಿಂತಿರುವ ಅಂತರರಾಷ್ಟ್ರೀಯ ಹಣಕಾಸು ಬಂಡವಾಳದ ಕೈಯಲ್ಲಿ ಒಂದು ಸಾಧನವಾಗಿ ಮಾರ್ಪಟ್ಟಿತು, ಐಎಂಎಫ್. ಅಂತರರಾಷ್ಟ್ರೀಯ ಹಣಕಾಸು ಬಂಡವಾಳದ ಸಾಧನ ಮಾತ್ರವಲ್ಲ, ಅದರ ಹಿಂದೆ ನಿಂತಿರುವ ಪಾಶ್ಚಿಮಾತ್ಯ ಮೆಟ್ರೋಪಾಲಿಟನ್ ಶಕ್ತಿಗಳ ಸಾಧನವಾಗಿಯೂ ಐಎಂಎಫ್ ಕಾರ್ಯನಿರ್ವಹಿಸುತ್ತದೆ. ಅಂತರರಾಷ್ಟ್ರೀಯ ಹಣಕಾಸು ಬಂಡವಾಳದ ಹಿತಾಸಕ್ತಿಗಳನ್ನು ರಕ್ಷಿಸುವಾಗ, ಅದು ಪಾಶ್ಚಿಮಾತ್ಯ ಮೆಟ್ರೋಪಾಲಿಟನ್ ಶಕ್ತಿಗಳ ಹಿತಾಸಕ್ತಿಗಳೊಂದಿಗೆ ಬೆರೆತುಕೊಳ್ಳುತ್ತದೆ.

ಪುಟಿನ್ ಮಾಡುತ್ತಿರುವುದನ್ನು ಯಾವ ರೀತಿಯಲ್ಲಿ ನೋಡಿದರೂ ಅದು ಅಂತರರಾಷ್ಟ್ರೀಯ ಹಣಕಾಸು ಬಂಡವಾಳದ ಪ್ರಾಬಲ್ಯದ ವಿರುದ್ಧದ ಹೋರಾಟವಲ್ಲ. ಅಂತರರಾಷ್ಟ್ರೀಯ ಹಣಕಾಸು ಬಂಡವಾಳದ ಹಿತಾಸಕ್ತಿಗಳಿಗಾಗಿ ಕಾರ್ಯನಿರ್ವಹಿಸುವ ಸಂಸ್ಥೆಯೊಂದು ತನ್ನ ನೆರೆಯ ದೇಶದ ಮೇಲೆ ಹಿಡಿತ ಸಾಧಿಸುವುದರ ವಿರುದ್ಧ ಸೈದ್ಧಾಂತಿಕ ಹೋರಾಟ ನಡೆಸುವ ಸಮಾಜವಾದಿಯೂ ಅಲ್ಲ, ಪುಟಿನ್. ಅವರ ಕಾಳಜಿ ಏನಿದ್ದರೂ ಅದು ರಷ್ಯಾದ ಭದ್ರತೆಯ ಬಗ್ಗೆ ಮಾತ್ರ. ಅವರ ಹೋರಾಟವು, ರಷ್ಯಾವನ್ನು ನ್ಯಾಟೋ ಸುತ್ತುವರೆಯದಯಂತೆ ಖಾತ್ರಿಪಡಿಸಿಕೊಳ್ಳುವುದಕ್ಕೆ ಮಾತ್ರ ಸೀಮಿತವಾಗಿದೆ. ಮತ್ತು, ಈ ಕಾರಣದಿಂದಾಗಿಯೇ, ಐಎಂಎಫ್ “ಸಹಾಯ”ದ ಬದಲಾಗಿ, ತಾನು ಯಾನುಕೋವಿಚ್‌ಗೆ ಸಹಾಯ ಹಸ್ತ ಚಾಚುವ ಪ್ರಸ್ತಾಪವನ್ನು ಪುಟಿನ್ ಮಾಡಿದ್ದರು. ವಿಷಯವನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಅಮೆರಿಕಾದ ಭೌಗೌಳಿಕ-ಸಾಮರಿಕ ಹಿತಾಸಕ್ತಿಗಳ ಪ್ರೋತ್ಸಾಹಕನಾಗಿ ಐಎಂಎಫ್ ವಹಿಸುವ ಪಾತ್ರದ ವಿರುದ್ಧವಾಗಿ ಮಾತ್ರ ಪುಟಿನ್ ಕಾಳಜಿ ವಹಿಸುತ್ತಾರೆ ವಿನಃ, ಐಎಂಎಫ್ ಸಾಮಾನ್ಯವಾಗಿ ವಹಿಸುವ ನವ-ಉದಾರವಾದದ ಪ್ರವರ್ತಕ ಪಾತ್ರದ ವಿರುದ್ಧವಾಗಿ ಅಲ್ಲ. ಒಂದು ವಾಸ್ತವಾಂಶವಾಗಿ ಹೇಳುವುದಾದರೆ, ನವ-ಉದಾರವಾದಿ ಆಳ್ವಿಕೆಯು ಹುಟ್ಟುಹಾಕುವ ಮಿತಿ ಮೀರಿದ ಅಸಮಾನತೆ ಮತ್ತು ಕಡು ಬಡತನ ಇವುಗಳಿಗಿಂತ ಬಹಳ ಭಿನ್ನವಾದದ್ದನ್ನೇನೂ ಪುಟಿನ್ ಸಾಧಿಸಿಲ್ಲ.

ಅನು: ಕೆ.ಎಂ.ನಾಗರಾಜ್

Donate Janashakthi Media

Leave a Reply

Your email address will not be published. Required fields are marked *