ಬೆಂಗಳೂರು: ನಗರದಲ್ಲಿ ವೈಟ್‌ಬೋರ್ಡ್ ಬೈಕ್ ಟ್ಯಾಕ್ಸಿಗಳನ್ನ ನಿಷೇಧಿಸುವಂತೆ ಬೆಂಗಳೂರು ಆಟೋರಿಕ್ಷಾ ಚಾಲಕರ ಸಂಘಟನೆಗಳ ಒಕ್ಕೂಟ ಸರ್ಕಾರಕ್ಕೆ ಮೂರು ದಿನಗಳ ಗಡುವು ನೀಡಿತ್ತು. ಆದ್ರೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಹೋರಾಟಕ್ಕೆ ಕರೆ ಕೊಟ್ಟಿತ್ತು. ಭಾನುವಾರ ಮಧ್ಯ ರಾತ್ರಿ 12 ಗಂಟೆಯಿಂದ ಸೋಮವಾರ ಮಧ್ಯರಾತ್ರಿ 12 ಗಂಟೆ ವರೆಗೆ ಆಟೋಗಳು ರಸ್ತೆಗೆ ಇಳಿಯಲ್ಲ ಎನ್ನಲಾಗಿತ್ತು. ಅಟೋ ಚಾಲಕರ ಈ ಪ್ರತಿಭಟನೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವೆಡೆ ಅಟೋ ಸಂಚಾರ ಯಥಾಸ್ಥಿತಿ ಇದ್ದದ್ದು ಕಂಡುಬಂದಿದೆ.
ಮೆಜೆಸ್ಟಿಕ್ ನಿಲ್ದಾಣ ಸೇರಿ ಹಲವೆಡೆ ಆಟೋಗಳ ಸಂಚಾರ ಯಥಾಸ್ಥಿತಿ ಇದೆ. ಆ್ಯಪ್ ಆಧಾರಿತ ಆಟೋಗಳು ಸೇರಿದಂತೆ ಇತರೆ ಆಟೋಗಳು ಲಭ್ಯವಾಗುತ್ತಿದೆ ಎಂದು ತಿಳಿದು ಬಂದಿದೆ. ಇನ್ನು ಮುಂಜಾನೆ 4 ಗಂಟೆಯಿಂದಲೇ ಬಿಎಂಟಿಸಿ ಬಸ್ ಸಂಚಾರ ಆರಂಭವಾಗಿದೆ. ಪ್ರಯಾಣಿಕರ ಸಂಖ್ಯೆ ನೋಡಿ ಮತ್ತಷ್ಟು ಬಸ್ ರೋಡಿಗಿಳಿಸಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಆಟೋರಿಕ್ಷಾ ಚಾಲಕರ ಸಂಘಟನೆಗಳ ಒಕ್ಕೂಟ ಬೆಳಗ್ಗೆ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಮುಂಭಾಗ ಅಟೋ ಚಾಲಕರು ಪ್ರತಿಭಟನೆ ನಡೆಸಿದ್ದಾರೆ.
ನಗರದಲ್ಲಿ ಆಟೋಗಳಿಗೆ ಬೈಕ್ ಟ್ಯಾಕ್ಸಿಗಳು ಸೆಡ್ಡು ಹೊಡೆದಿವೆ. ಕಡಿಮೆ ದುಡ್ಡು, ಟ್ರಾಫಿಕ್ ನಿಂದ ಕಿರಿಕಿರಿ ತಪ್ಪಿಸುತ್ತಿರುವ ಬೈಕ್ ಟ್ಯಾಕ್ಸಿಗೆ ಯುವಜನತೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾರೆ. ರ್ಯಾಪಿಡೋ, ಓಲಾ, ಉಬರ್ ನಂತಹ ಆ್ಯಪ್ ಆಧಾರಿತ ಬೈಕ್ ಟ್ಯಾಕ್ಸಿ ಸೇವೆಗಳು ಆಟೋಗಳಿಗೆ ನಷ್ಟ ಉಂಟುಮಾಡಿದೆ. ಇದ್ರಿಂದ ಬೈಕ್‌ಟ್ಯಾಕ್ಸಿ ವಿರುದ್ಧ ಸಿಡಿದೆದ್ದಿರೋ ಆಟೋ ಚಾಲಕರು ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ಬಂದ್‌ಗೆ 21 ಸಂಘಟನೆಗಳು ಬೆಂಬಲಿಸಿದ್ದು 2 ಲಕ್ಷ ಆಟೋಗಳು ರಸ್ತೆಗೆ ಇಳಿಯಲ್ಲ ಎನ್ನಲಾಗ್ತಿದೆ.
ಪ್ರಯಾಣಿಕರಿಂದ ಡಬಲ್ ರೇಟ್ ಕೇಳುತ್ತಿರುವ ಆಟೋ ಚಾಲಕರು : ಒಂದೆಡೆ ಆಟೋ ಚಾಲಕರು ಬಂದ್ ನಡೆಸಿದ್ರೆ ಇನ್ನೊಂದೆಡೆ ಅದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ಆಟೋ ಚಾಲಕರು ಪ್ರಯಾಣಿಕರ ಹಗಲು ದರೋಡೆಗೆ ಮುಂದಾಗಿದ್ದಾರೆ. ನಗರದ ಹಲವು ಕಡೆಗಳಲ್ಲಿ ಆಟೋಗಳ ಸಂಖ್ಯೆಯೂ ತೀರಾ ವಿರಳ ಆಗಿರೋದ್ರಿಂದ ಪ್ರಯಾಣಿಕರು ಸಂಚಾರಕ್ಕಾಗಿ ಪರದಾಟ ನಡೆಸಿದ್ದಾರೆ. ಹೀಗಾಗಿ ಇದನ್ನೇ ಬಂಡವಾಳವಾಗಿಸಿಕೊಂಡಿರುವ ಆಟೋ ಚಾಲಕರು ಪ್ರಯಾಣಿಕರಿಂದ ಡಬಲ್ ರೇಟ್ ಕೇಳಿ ಪೀಕುತ್ತಿದ್ದಾರೆ. ಪ್ರಯಾಣಿಕರು ದುಪ್ಪಟ್ಟು ದರ ಕೊಡೋಕೆ ಹಿಂದೇಟು ಹಾಕಿದರೂ, ಆಟೋಗಳು ಸಿಗದೆ ಇರೋ ಕಾರಣ ಅನಿವಾರ್ಯವಾಗಿ ಎರಡು ಪಟ್ಟು ಹೆಚ್ಚು ಹಣ ನೀಡಿ ಸಂಚಾರ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಸಾಮಾನ್ಯವಾಗಿ ಮೆಜೆಸ್ಟಿಕ್‌ನಿಂದ ಲಾಲ್‌ಬಾಗ್ 70-80 ರೂಪಾಯಿ ಸಾಮಾನ್ಯ ದಿನಗಳಲ್ಲಿ ಇರುತ್ತೆ. ಆದರೆ ಇಂದು ಕೆಲ ಆಟೋ ಚಾಲಕರು 150-200 ರೂಪಾಯಿ ತನಕ ಪೀಕುತ್ತಿದ್ದಾರೆ.
ಬಂದ್‌ಗೆ ಓಲಾ, ಊಬರ್ ಬೆಂಬಲವಿಲ್ಲ : ಈ ಮಧ್ಯೆ ಆಟೋ ಚಾಲಕರ ಮುಷ್ಕರಕ್ಕೆ ಓಲಾ ಮತ್ತು ಊಬರ್ ಸಂಸ್ಥೆ ಬೆಂಬಲ ನೀಡಿಲ್ಲ. ಈ ಬಗ್ಗೆ ಮಾತನಾಡಿರೋ ಓಲಾ, ಊಬರ್ ಅಸೊಶಿಯೇಶನ್ ಅಧ್ಯಕ್ಷ ತನ್ವೀರ್, ವಾಲೆಂಟೀಯರ್ ಆಗಿ ಮುಷ್ಕರ ಮಾಡೋದಾದ್ರೆ ಮಾಡ್ಲಿ, ಆದ್ರೆ ಯಾರೂ ಕೂಡ ಬಂದ್‌ನಲ್ಲಿ ಭಾಗಿಯಾಗಿಲ್ಲ. ಈಗಾಗಲೇ ಹಲವಾರು ಆಟೋ ಚಾಲಕರು ಲಾಗಿನ್ ಮಾಡಿಕೊಂಡಿದ್ದಾರೆ. ಎಂದು ಹೇಳಿದ್ದಾರೆ.