ಸಾರಿಗೆ ನೌಕರರ ವೇತನ ಶೇ.15ರಷ್ಟು ಹೆಚ್ಚಿಸಿ ಸರ್ಕಾರದಿಂದ ಆದೇಶ

ಬೆಂಗಳೂರು: ಸಾರಿಗೆ ನೌಕರರ ಸಂಘಟನೆಗಳ ವಿರೋಧದ ಮಧ್ಯೆಯೇ ನೌಕರರ ವೇತನವನ್ನು ಮಾ.1ರಿಂದ ಅನ್ವಯ ಆಗುವಂತೆ ಶೇ 15ರಷ್ಟು ಹೆಚ್ಚಿಸಿ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.

2019ರ ಡಿಸೆಂಬರ್‌ 31ರಂದು ಪಡೆಯುತ್ತಿದ್ದ ಮೂಲ ವೇತನವನ್ನು ಶೇ 15ರಷ್ಟು ಹೆಚ್ಚಿಸಿ, ಅದರಂತೆ ವೇತನ ಶ್ರೇಣಿಗಳನ್ನು ಪರಿಷ್ಕರಿಸಲು ನಿರ್ಧರಿಸಿದೆ.

ವೇತನ ಮತ್ತಿತರ ಹಿಂಬಾಕಿಯನ್ನು ಯಾವ ದಿನಾಂಕದಿಂದ ಪಾವತಿಸಬೇಕು ಎಂಬುದನ್ನು ಸರ್ಕಾರ ರಚಿಸಿರುವ ಏಕ ಸದಸ್ಯ(ಎಂ.ಆರ್. ಶ್ರೀನಿವಾಸಮೂರ್ತಿ) ಸಮಿತಿಯಿಂದ ಶಿಫಾರಸು ಪಡೆಯಲಾಗುವುದು. ಕಾರ್ಮಿಕ ಸಂಘಟನೆಗಳೂ ಸೇರಿ ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಒಂದು ತಿಂಗಳ ಕಾಲಮಿತಿಯಲ್ಲಿ ಸಮಿತಿಯು ಶಿಫಾರಸು ಮಾಡಬೇಕು ಎಂದು ಆದೇಶದಲ್ಲಿ ತಿಳಿಸಿದೆ.

ಸರ್ಕಾರ ಹೊರಡಿಸಿರುವ ಈ ಆದೇಶಕ್ಕೆ ನೌಕರರ ಸಂಘಟನೆಗಳ ವಿರೋಧ ವ್ಯಕ್ತಪಡಿಸಿವೆ. ಮುಷ್ಕರದ ನಿರ್ಧಾರದಲ್ಲಿ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿವೆ.

‘ಮೂಲ ವೇತನಕ್ಕೆ ಡಿ.ಎ ವಿಲೀನಗೊಳಿಸಿ ಪರಿಷ್ಕೃತ ವೇತನ ನೀಡಬೇಕು. ಶೇ 25ರಷ್ಟು ಹೆಚ್ಚಳ ಮಾಡಬೇಕು ಎಂಬುದು ನ‌ಮ್ಮ ಬೇಡಿಕೆಯಾಗಿದೆ. ಇದ್ಯಾವುದನ್ನೂ ಪರಿಗಣಿಸದೆ, ಸಂಘಟನೆಗಳೊಂದಿಗೆ ಚರ್ಚೆಯನ್ನೂ ನಡೆಸದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ. ಇದು ನೌಕರರಿಗೆ ಮಾಡಿರುವ ಅವಮಾನ’ ಎಂದು ನೌಕರರ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಎಚ್.ವಿ.ಅನಂತಸುಬ್ಬರಾವ್ ಹೇಳಿದರು.

ಇದನ್ನೂ ಓದಿ : ನೌಕರರ ವೇತನ ಶೇ 17ರಷ್ಟು ಹೆಚ್ಚಳ; ಸರ್ಕಾರ ಅಧಿಕೃತ ಆದೇಶ-ಏಪ್ರಿಲ್ 1 ರಿಂದ ಜಾರಿ

‘ವೇತನ ಮತ್ತು ಹಿಂಬಾಕಿಯನ್ನು ಯಾವ ಅವಧಿಯಿಂದ ನೀಡಬೇಕು ಎಂಬುದರ ಕುರಿತು ಏಕಸದಸ್ಯ ಸಮಿತಿ ತನ್ನ ವರದಿಯಲ್ಲಿ ಈಗಾಗಲೇ ಅಭಿಪ್ರಾಯ ತಿಳಿಸಿದೆ. ಅದೇ ಸಮಿತಿಯ ಶಿಫಾರಸು ಪಡೆಯುವುದರಲ್ಲಿ ಅರ್ಥವಿಲ್ಲ. ಸರ್ಕಾರದ ಈ ಆದೇಶ ನಮಗೆ ಸಮಾಧಾನ ತಂದಿಲ್ಲ. ಮಾರ್ಚ್ 21ರಿಂದ ಮುಷ್ಕರ ಆರಂಭಿಸುವ ನಿಮ್ಮ ನಿರ್ಧಾರದಲ್ಲಿ ಬದಲಾವಣೆ ಇಲ್ಲ. ಮುಷ್ಕರದ ಬಗ್ಗೆ ಚರ್ಚಿಸಲು ಶನಿವಾರ ಮತ್ತೊಂದು ಸುತ್ತಿನ ಸಭೆ ನಡೆಸಲಾಗುವುದು’ ಎಂದು ಸ್ಪಷ್ಪಪಡಿಸಿದರು.

Donate Janashakthi Media

Leave a Reply

Your email address will not be published. Required fields are marked *