ವಿಜಯನಗರ ಸಾಮ್ರಾಜ್ಯವನ್ನು ಪತನ ಮಾಡಿದ್ದು ಯಾರು..? ಎಂಬ ಚಾರಿತ್ರಿಕ ಪ್ರಶ್ನೆಯನ್ನು ಮುಂದಿಟ್ಟುಕೊಂಡು ವಸ್ತುನಿಷ್ಠವಾಗಿ ಅಧ್ಯಯನ ಮಾಡದೆ ಕೇವಲ ಧರ್ಮ ಧರ್ಮಗಳ ನಡುವೆ ದ್ವೇಷವನ್ನು ಹುಟ್ಟಾಕುವ ಹಿನ್ನೆಲೆಯಲ್ಲಿ ಚರಿತ್ರೆಯನ್ನು ಬರೆದು ಮುಗಿಸಿಬಿಡುತ್ತೇವೆ. ಇಂದಿನ ಸಂದರ್ಭಕ್ಕೆ ಬಹು ಇಷ್ಟವಾಗಿ ಹೊಂದಿಕೊಳ್ಳುವ ಹಾಗೆ ಮುಸ್ಲಿಮರು ಹಿಂದೂ ಸಾಮ್ರಾಜ್ಯವನ್ನು ಧಾರ್ಮಿಕ ಹಿನ್ನೆಲೆಯಿಂದ ಸರ್ವನಾಶ ಮಾಡಿದರು ಎಂಬ ಏಕೈಕ ಕಾರಣವನ್ನು ನೀಡಿ ದ್ವೇಷದ ಇತಿಹಾಸವನ್ನು ರಚನೆ ಮಾಡಿಕೊಂಡು ಕಿಂಚಿತ್ತು ಮರು ಪ್ರಶ್ನೆಗೆ ಎಡೆ ಮಾಡಿಕೊಡದ ಹಾಗೆ ಪೂರ್ಣವಿರಾಮವನ್ನು ಹಾಕುತ್ತೇವೆ. ಅಂಬೇಡ್ಕರ್
– ಎನ್ ಚಿನ್ನಸ್ವಾಮಿ ಸೋಸಲೆ
ಇಂಥದ್ದೇ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಬೋಧನೆ ಮಾಡುವ ಪಠ್ಯ ಪುಸ್ತಕಗಳಲ್ಲಿಯೂ ನಮೂದಿಸಿ, ಅದನ್ನೇ ರಾಷ್ಟ್ರೀಯತೆ ಎನ್ನುವ ರೀತಿಯಲ್ಲಿ ವರ್ಣ ರಂಜಿತವಾಗಿ ಬೋಧನೆ ಮಾಡುತ್ತಾ ಹೆಮ್ಮೆಪಡುತ್ತಿದ್ದೇವೆ. ಈ ಹಿನ್ನಲೆಯಿಂದ ಭಾರತದಲ್ಲಿ ನೆಲೆಸಿರುವ ಇನ್ನೊಂದು ಕೋಮಿನ ಮೇಲೆ ಇಲ್ಲಸಲ್ಲದೆ ದ್ವೇಷ ಕಾರುವಂತೆ – ಅವರು ಭಾರತದ ಸಂಸ್ಕೃತಿಯನ್ನು ನಾಶ ಮಾಡಲೆಂದೆ ಭಾರತದಲ್ಲಿ ನೆಲೆಸಿರುವುದು ಎಂಬ ಮನೋಭಾವನೆಯ ಅರ್ಥದಲ್ಲಿ ಬೋಧನೆ ಮಾಡುತ್ತ ಯುವ ಮನಸ್ಸುಗಳಲ್ಲಿ ಶಾಶ್ವತ ಕೋಮು ದ್ವೇಷದ ಭಾವನೆಯನ್ನು ಉಂಟು ಮಾಡುತ್ತಿದ್ದೇವೆ. ಅಂಬೇಡ್ಕರ್
ಇಂತಹ ದ್ವೇಷದ ಚರಿತ್ರೆ ರಚನೆ ಹಾಗು ಬೋಧನೆಯಿಂದ ಭಾರತ ಸಾಂಸ್ಕೃತಿಕವಾಗಿ ಕಳೆದುಕೊಂಡಿದ್ದೆ ಹೆಚ್ಚು – ಪಡೆದುಕೊಂಡದ್ದು ಕಡಿಮೆ. ಆದರೆ ನಾವೇ ಧರ್ಮದ ಹೆಸರಿನಲ್ಲಿ ಈ ನೆಲದ ಮೂಲ ನಿವಾಸಿಗಳನ್ನು ಅಸ್ಪೃಶ್ಯರನ್ನಾಗಿಸಿ ಶತಶತಮಾನಗಳಿಂದ ಅವರ ಮಾನವನಿಗೆ ಬದುಕಬೇಕಾದ ಮೂಲಭೂತ ಹಕ್ಕುಗಳಿಂದ ವಂಚಿಸಿದ್ದನ್ನು ಇದು ರಾಷ್ಟ್ರ ಹಾಗೂ ಧರ್ಮ ದ್ರೋಹದ ಕೆಲಸ ಎಂದು ಇಂತಹ ಸ್ವ- ಘೋಷಿತ ರಾಷ್ಟ್ರೀಯವಾದಿಗಳು ಕಿಂಚಿತ್ತು ಮನನ ಮಾಡಿಕೊಳ್ಳುವುದಿಲ್ಲ. ಅಶೋಕ ಸಾಮ್ರಾಟ ನಿಂದ ಮೈಸೂರು ಒಡೆಯರವರೆಗೂ ಅಧ್ಯಯನ ಮಾಡುವ ನಮಗೆ ಕೇವಲ ಧರ್ಮ ಧರ್ಮಗಳ ಸಂಘರ್ಷದ ದ್ವೇಷದ ಚರಿತ್ರೆಯೇ ಚರಿತ್ರೆ ಎಂದು ಇಂದು ಭಾರತದ ಚರಿತ್ರೆಯನ್ನು ನಿರ್ಮಾಣ ಮಾಡುವುದೆ – ಮಾಡಿರುವುದೆ ದುರಂತ. ಭಾರತದ ಚರಿತ್ರೆ ಇದಿಷ್ಟೇ ಅಲ್ಲ ಎಂಬ ಜನಸಂಸ್ಕೃತಿ ಹಿನ್ನೆಲೆಯ ಬೌದ್ಧಿಕತೆಯ ಮನವರಿಕೆ ಇರಬೇಕು. ಅಂಬೇಡ್ಕರ್
ಇದನ್ನೂ ಓದಿ: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲು ಮತಪತ್ರ: ತಿದ್ದುಪಡಿ ವಿಧೇಯಕ ಮಂಡನೆ
ಆದರೆ, ಮೇಲಿನ ರೀತಿಯ ಕೋಮು ದ್ವೇಷ ಭಾವನೆಯಿಂದ ಇಂದು ಭಾರತದ ಚರಿತ್ರೆ ರಚಿಸಿ ಯುವ ಮನಸುಗಳಿಗೆ ಬೋಧನೆ ಮಾಡಿ, ಆ ಮೂಲಕ ಅವರಲ್ಲಿ ಭಾರತೀಯತೆಯನ್ನು ಅನಾವರಣಗೊಳಿಸುತ್ತೇವೆ ಎಂಬ ಮನೋಭಾವನೆ ನಿರ್ಮಾಣ ಮಾಡಲು ಮುಂದಾಗುತ್ತಿರುವವರೇ…ಅಂದು ಭಾರತ ನೆಲದ ವಾರಸುದಾರರಾಗಿ, ಭಾರತೀಯರೇ ನಿರ್ಮಾಣ ಮಾಡಿದ ಬೌದ್ಧಧರ್ಮವನ್ನು ಭಾರತದಲ್ಲಿ ಸರ್ವನಾಶ ಮಾಡಲು ಮುಂದಾದದ್ದು ಎಂಬುವುದು ಚಾರಿತ್ರಿಕವಾಗಿ ಸತ್ಯವಾದುದು.
ಬುದ್ಧನ ನಾಡು ಭಾರತ ದೇಶಕ್ಕೆ ಆಗಮಿಸಿ ಭಾರತದಲ್ಲಿ ಭಾರತೀಯರ ಧರ್ಮವನ್ನು ನಾಶ ಮಾಡಲು ಅಜ್ಞಾನದಿಂದ ಹುಟ್ಟಾಕಿದ ಪುರಾಣದ ಹಿನ್ನೆಲೆಯ ಅಧರ್ಮದ ಉನ್ನಾರವನ್ನು ಮಾತ್ರ ಇವರ್ಯಾರು ಬರೆಯಲೇ ಇಲ್ಲ. ಇವರೇ ಏಕೆ ಬರಿಯಬೇಕಾಗಿತ್ತು ಎಂದರೆ, ವೇದ ಪುರಾಣ ಶಾಸ್ತ್ರಗಳ ಹಿನ್ನೆಲೆಯಿಂದ ಗುರುಕುಲ -ಅಗ್ರಹಾರ ಹಾಗೂ ಘಟಕಾಲಯ ಗಳಲ್ಲಿ ತಾವೇ ಪಡೆದುಕೊಂಡ ಸಾಂಪ್ರದಾಯಿಕ ವಿದ್ಯೆ ಹಾಗೂ ಶತಶತಮಾನಗಳಿಂದಲೂ ಅಕ್ಷರವನ್ನು ಏಕಸ್ವಾಮ್ಯಗೊಳಿಸಿಕೊಂಡಿದ್ದರು ಇವರೇ, ಅದಕ್ಕಾಗಿ ಇವರೇ ಬರೀಬೇಕಾಗಿತ್ತು. ಇವರ ಕುತಂತ್ರದ ಚರಿತ್ರೆಯನ್ನು ಬರಿಯಬೇಕಾದವರಿಗೆ ಇವರೇ ವರ್ಣ, ಧಾರ್ಮಿಕ ಹಾಗೂ ಸಾಮಾಜಿಕ ಹಿನ್ನೆಲೆಯಿಂದ ಅಕ್ಷರವನ್ನು ಕಲಿಸಲಿಲ್ಲ. ಈ ಹಿನ್ನೆಲೆಯ ಬಹುದೊಡ್ಡ ” ಅಪರಾಧವು ” ಇವರ ಮೇಲೆ ಶತಶತಮಾನದಿಂದಲೂ ಶಾಶ್ವತವಾಗಿ ಉಳಿದಿದೆ. ಜನರ ತೀರ್ಪಿನ ಪ್ರಕಾರ ಇಂತಹ ವಿಷಯದಲ್ಲಿ ಇವರು ಶಾಶ್ವತ ಅಪರಾಧಿಗಳೇ. ಅಂಬೇಡ್ಕರ್
ಸಾಮ್ರಾಟ ಅಶೋಕ ಭರತ ಖಂಡದ ಪ್ರಪ್ರಥಮ “ಬೌದ್ಧಿಕ” ಸಾಮ್ರಾಟ. ಇವನ ಆಳ್ವಿಕೆಯಲ್ಲಿ ಅಖಂಡ ಭಾರತಕ್ಕೆ ಬೌದ್ಧಧರ್ಮ ರಾಜ ಧರ್ಮವಾಗಿತ್ತು. ಇದಕ್ಕೆ ಸ್ಪಷ್ಟ ನಿರ್ದೇಶನ ದೇಶದಾದ್ಯಂತ ದೊರಕಿರುವ ‘ದೇವನಾಂಪ್ರಿಯ – ಪ್ರಿಯದರ್ಶನಿ ‘ ಎಂಬ ನಾಮಂಕಿತ ಶಾಸನಗಳೆ ಸಾಕ್ಷಿ . ಜನರ ಬದುಕಿನ ಸಮಸಂಸ್ಕೃತಿಯನ್ನು ಪ್ರತಿಪಾದನೆ ಮಾಡುವ, ಪುರಾಣವನ್ನು ತಿರಸ್ಕರಿಸಿ – ವಾಸ್ತವದ ಬದುಕಿನಡೆಗೆ ಮನುಷ್ಯರನ್ನು ಮನುಷ್ಯತ್ವದ ದಾರಿಯಲ್ಲಿ ಬದುಕಲು ಕೊಂಡೊಯ್ಯುವ ಭಾರತ ನೆಲದ ಜನರ ಬೌದ್ಧಧರ್ಮದ ಪ್ರತಿಪಾದಕ ಸಾಮ್ರಾಟ ಅಶೋಕ.
ಇವನ ಆಳ್ವಿಕೆಯ ಕಾಲವೇ ಭಾರತದ ಪ್ರಥಮ ಸುವರ್ಣ ಯುಗ. ಬೌದ್ಧ ಹಾಗೂ ಬೌದ್ಧ ಧರ್ಮೀರನ್ನು ಕಂಡ ಕಂಡಲ್ಲಿ ನಾಶ ಮಾಡಿದ ಗುಪ್ತರ ಸಾಮ್ರಾಜ್ಯ ಭಾರತದ ಪ್ರಥಮ ಪೂರ್ಣ ಯುಗ ಅಲ್ಲ ಎಂಬುದನ್ನು ಮೊದಲು ಅರಿಯಬೇಕಾಗಿದೆ. ಹಾಗೂ ಬೌದ್ಧ ಧರ್ಮ ಹಾಗೂ ಬೌದ್ಧ ಧರ್ಮೀಯರನ್ನು ನಾಶ ಮಾಡಿದ ವರ್ಗದವರೇ ಆ ಸಂದರ್ಭದಲ್ಲಿ ಬರೆದ ಕಾರಣಕ್ಕಾಗಿ ತಮ್ಮ ಅನುಕೂಲಕ್ಕೆ ಸಂಬಂಧಿಸಿದಂತೆ ಗುಪ್ತರ ಸಾಮ್ರಾಜ್ಯವನ್ನು ಸುವರ್ಣ ಯುಗ ಎಂದು ತಾವೇ ಬರೆದುಕೊಂಡರು. ನಾವು ಇವತ್ತು ಯಾವುದೇ ಹಿನ್ನೆಲೆಯ ಪ್ರಶ್ನೆ ಮಾಡದೆ ಓದುತ್ತಿದ್ದೇವೆ – ಬೋಧನೆ ಮಾಡುತ್ತಿದ್ದೇವೆ.
ಬೌದ್ಧ ಧರ್ಮ ಪ್ರತಿಪಾದನೆ ಮಾಡಿದ ಜನಮುಖಿ ಹಿನ್ನೆಲೆಯ ವಾಸ್ತವ ಸಿದ್ಧಾಂತದ ವಿರುದ್ಧ ದೇಶಕ್ಕೆ ಆಗಮಿಸಿ ಇಲ್ಲಿ ಉಳಿದುಕೊಳ್ಳಲು ಹಂಬಲಿಸುತ್ತಿದ್ದ ಒಂದು ವರ್ಗ, ತಮ್ಮ ಶ್ರೇಷ್ಠತೆಯನ್ನು ಉಳಿಸಿಕೊಳ್ಳಲು ಪುರಾಣದ ಮೂಲಕವೇ ಧರ್ಮವನ್ನು ಪ್ರತಿಪಾದನೆ ಮಾಡಿ – ಆ ಮೂಲಕ ದೇವರು ಹಾಗೂ ದೇವಸ್ಥಾನದ ಹಿನ್ನೆಲೆಯಿಂದ ತಾವು ಮಾತ್ರ ಶ್ರೇಷ್ಠರಾಗಿ ಬದುಕಲು ಅಂಬಲಿಸಲು ಮುಂದಾಗಿದ್ದವರಿಗೆ ಸಹಜವಾಗಿವೆ ಧರ್ಮ ದ್ವೇಷ ಹುಟ್ಟಿತು. ತಮ್ಮ ವೈಭವದ ನೀತಿಗೆ ವಿರುದ್ಧವಾಗಿರುವ ಬೌದ್ಧಧರ್ಮ ಹಾಗೂ ಆ ಧರ್ಮದ ಆಧಾರದ ಮೇಲೆ ಆಳ್ವಿಕೆ ಮಾಡುತ್ತಿದ್ದ ಮೌರ್ಯರ ಸಾಮ್ರಾಟ ಅಶೋಕನ ಸಾಮ್ರಾಜ್ಯವನ್ನು ಸರ್ವನಾಶಕ್ಕೆ ಪಣತೊಟ್ಟವರು.

ಇಂತಹ ಶಾಶ್ವತ ಕೋಮು ಭಾವನೆಯನ್ನು ಪ್ರತಿಪಾದನೆ ಮಾಡುವವರೇ ತಮ್ಮ ಪಾರಂಪರಿಕ ಧಾರ್ಮಿಕ ಕುತಂತ್ರದಿಂದಾಗಿ ಅಶೋಕನ ಸಾಮ್ರಾಜ್ಯ ನಾಶವಾಗಲು ಹಾಗೂ ಭಾರತ ನೆಲದ ಬೌದ್ಧ ಧರ್ಮ ಭಾರತದಿಂದ ಹೊರಬಾಗಲು ಚರಿತ್ರಿಕವಾಗಿ ‘ಕಾರಣ ‘ ಹಾಗೂ ಸ್ಪಷ್ಟವಾಗಿ ‘ ಸಾಕ್ಷಿ ‘ ಯಾದರು. ಇಂತಹ ಚರಿತ್ರೆ ಅವರ ಅಂಗೈಯಲ್ಲಿ ಶಾಶ್ವತವಾಗಿ ಇದ್ದರೂ ಸಹ ಅದನ್ನು ನೇರವಾಗಿ ನೋಡಲಾಗದೆ- ಅಂಕು ಆಗಿ ನೋಡಲು ಕನ್ನಡಿಯನ್ನು ಹುಡುಕಲು ಆರಂಭಿಸಿದರು. ಹೀಗೆ ಕನ್ನಡಿಯನ್ನು ನೋಡಿ ತಮ್ಮ ಮೂಗಿನ ನೇರಕ್ಕೆ ಅಂಕುಡೊಂಕಾಗಿ ಬರದದ್ದೇ ಇವತ್ತಿನ ಭಾರತದ ಚರಿತ್ರೆಯಾಗಿದೆ ಎಂಬುವುದೇ ಅಂಬೇಡ್ಕರ್ ಅವರ ಭಾರತದ ಚರಿತ್ರೆ ರಚನೆಯಲ್ಲಿ ಆಗಿರುವ ಲೋಪದ ವಾದ.
ಸಾಮ್ರಾಟ ಅಶೋಕ ಬೌದ್ಧ ಧರ್ಮಕ್ಕೆ ರಾಷ್ಟ್ರೀಯ ಧರ್ಮದ ಸ್ಥಾನ-ಮಾನವನ್ನು ನೀಡಿದ್ದನು . ಬೌದ್ಧ ಧರ್ಮದ ಜೀವಾಳದಂತೆ ಸಾಮ್ರಾಟನಾದವನು. ಮನುಷ್ಯತ್ವದ ದೇವರಿಗೆ ಹಾಗೂ ತನ್ನ ಜನರಿಗೆ ಪ್ರಿಯವಾಗುವ ರೀತಿಯಲ್ಲಿ ಶಿಸ್ತು ಬದ್ಧವಾಗಿ ಆಳ್ವಿಕೆ ಮಾಡಬೇಕೆಂಬ ಧರ್ಮದ ಸಾರವನ್ನು ಅನುಸರಿಸಿದವನು. ಈ ಹಿನ್ನೆಲೆಯಿಂದ ಜನಪರ ಕೆಲಸಗಳಿಗೆ ಹೆಚ್ಚು ಆದ್ಯತೆಯನ್ನು ನೀಡಿದವನು. ಬೌದ್ಧ ಧರ್ಮವನ್ನು ಭಾರತದಲ್ಲಿದೆ ನೆರೆಯ ರಾಷ್ಟ್ರಗಳಲ್ಲಿಯೂ ಪ್ರಚಾರ ಮಾಡಲು ತನ್ನ ಮಕ್ಕಳನ್ನೇ ಕಳುಹಿಸಿದವನು. ತನ್ನ ಆಳ್ವಿಕೆ ಹಾಗೂ ಧರ್ಮ ಪ್ರಚಾರಕ್ಕೆ ಭಾರತದಲ್ಲಿ ಪ್ರಪ್ರಥಮವಾಗಿ ಇತಿಹಾಸವನ್ನು ನಿರ್ಮಿಸುವ ಕಾರಣಕ್ಕಾಗಿ
” ಅಕ್ಷರ ಕ್ರಾಂತಿ” ಯನ್ನು ಆರಂಭಿಸಿದನು. ಭಾರತದಲ್ಲಿ ಅಶೋಕನ ಶಾಸನಗಳು ಅಕ್ಷರರೂಪದಲ್ಲಿ ದೊರಕಿದ ನಂತರವೇ ಭಾರತ ಇತಿಹಾಸದ ಕಾಲಕ್ಕೆ ಸೇರ್ಪಡೆಗೊಂಡದ್ದು. ಈ ಶಾಸನಗಳು ಸಿಗುವ ಪೂರ್ವದ ಕಾಲವನ್ನು ಇತಿಹಾಸ ಪೂರ್ವ ಎಂದು ಕರೆಯುತ್ತೇವೆ.
ಅಂದರೆ, ಭಾರತದ ಚರಿತ್ರೆ ಆರಂಭವಾಗುವುದೇ ಸಮಾನತೆ – ಸಹೋದರತೆ -ಭಾದೃತ್ವ – ಸ್ವಾತಂತ್ರ – ಮಹಿಳಾ ಸ್ವಾತಂತ್ರ್ಯ ಹಿನ್ನೆಲೆಯ ಚರಿತ್ರೆಯಿಂದ ಎಂಬುವುದನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಇದಕ್ಕೆ ಸಾಕ್ಷಿ ಅಶೋಕನು ಬರೆಸಿರುವ ‘ದೇವನಾಂಪ್ರಿಯ- ಪ್ರಿಯದರ್ಶಿನಿ’ ಶಾಸನಗಳೆ ಸಾಕ್ಷಿ. ಈ ಸಾಕ್ಷಿಗಳ ಕಾಲದಿಂದಲೇ ಭಾರತದ ಚರಿತ್ರೆ ಆರಂಭವಾಗುವುದು. ಇಂತಹ ‘ ಬೌದ್ಧಿಕ ‘ ಮನಸಿನ ಅಶೋಕನ ಸಾಮ್ರಾಜ್ಯವನ್ನು ನಾಶ ಮಾಡಿದರು ಯಾರು..? ಏಕೆ ಮಾಡಿದರು..? ಈ ಚರಿತ್ರೆಯನ್ನು ಸಹ ತಮ್ಮ ಮನದಲ್ಲಿ ಉದುಗಿರುವ ಶಾಶ್ವತವಾದ ಕೋಮು ಭಾವನೆಯ ಅಂಧಕಾರದಿಂದ ಉತ್ತರ ಸ್ಪಷ್ಟವಾಗಿದ್ದರೂ ಸಹ ಅಕ್ಷರ ಕಲಿಯುವುದು ಮಾತ್ರ ನಮ್ಮ ಪಾರಂಪರಿಕ ಸ್ವತ್ತು ಎಂದು ಶತಶತಮಾನಗಳಿಂದ ಹೇಳಿಕೊಂಡಿದ್ದವರು ಬರೆಯಲಿಲ್ಲ. ಅಂಬೇಡ್ಕರ್
ಇವರು ಒಂದಷ್ಟು ಪ್ರಪಂಚದ ಚರಿತ್ರೆಯನ್ನು ವರ್ಣಾತ್ಮಕವಾಗಿ ಬರೆದರು, ಆದರೆ ತಾವು ಬಂದು ನೆಲೆಸಿದ ತಮಗೆ ಆಶ್ರಯ ನೀಡಿದ ನೆಲದ ಚಿರಿತ್ರಿಯನ್ನು ಮಾತ್ರ ವಸ್ತುನಿಷ್ಠವಾಗಿ ಬರೆಯಲೇ ಇಲ್ಲ. ಆದರೆ ಬಹುದೊಡ್ಡ ದುರಂತವೆಂದರೆ ಶತಶತಮಾನಗಳಿಂದ ಅಕ್ಷರದಿಂದ ವಂಚಿತರಾದವರು ಇಂತಹ ವಸ್ತುನಿಷ್ಠ ಪ್ರಶ್ನೆಗಳಿಗೆ ತಮ್ಮ ಬದುಕು ಹಾಗೂ ಜೀವನದ ವಿಧಾನದಿಂದ ಉತ್ತರ ಗೊತ್ತಿದ್ದರೂ ಸಹ ಅವರಿಗೆ ಬರೆಯಲು ಸಾಧ್ಯವಾಗಲಿಲ್ಲ. ಕಾರಣ ಅವರನ್ನು ಶತಶತಮಾನಗಳಿಂದ ಅಕ್ಷರದಿಂದ ವಂಚಿಸಲಾಗಿತ್ತು. ಇದೆ ಭಾರತದ ಚರಿತ್ರೆ ವೈಭವ – ಸುಂದರ – ಭವ್ಯ- ಪರಾಕ್ರಮ – ಪ್ರಪಂಚಕ್ಕೆ ಮಾಧುರಿಯಾದ ಸಂಸ್ಕೃತಿಯ ಚರಿತ್ರೆ ಎಂದೇಲ್ಲ ಕರೆದುಕೊಂಡಿರುವ ಚರಿತ್ರೆಯ ಬುಡದಲ್ಲಿ ಇರುವ ಶಾಶ್ವತವಾದ ಕಗ್ಗತ್ತಲ ‘ ಕಪ್ಪು ‘ ಚರಿತ್ರೆಯಾಗಿ ಉಳಿದಿರುವುದು. ಇದು ಸೂರ್ಯ ಚಂದ್ರರಷ್ಟೇ ಸತ್ಯ.
ಅಂದರೆ , ಭರತ ಖಂಡದ ನೆಲದಲ್ಲಿ ಬೌದ್ಧ ಧರ್ಮವನ್ನು ಪುನರ್ ಸ್ಥಾಪಿಸಿ, ರಾಜಪ್ರಭುತ್ವದ ಧರ್ಮವನ್ನಾಗಿಸಿದ ಅಶೋಕನ ಮೌರ್ಯ ಸಾಮ್ರಾಜ್ಯವನ್ನು ನಾಶ ಮಾಡಿದವರೇ ಇಂದಿಗೂ ಸಹ ಭಾರತವನ್ನು ತಮ್ಮ ಹಿಡಿತದಲ್ಲಿ ಇಟ್ಟು ಕೊಂಡಿರುವುದು . ಅಥವಾ ಚರಿತ್ರೆಯಲ್ಲಿ ಹಾಗೆ ಬರೆದು ವರ್ಣಾತ್ಮಕವಾಗಿ ವಿವರಿಸಿರುವುದು. ವೇದ- ಪುರಾಣಗಳ ಮೂಲಕವೇ ಚರಿತೆಯನ್ನು ಸೃಷ್ಟಿ ಮಾಡಲು ಮುಂದಾದವರು ಅದೆಷ್ಟೋ ಜನರ ವೇದನೆಗಳನ್ನು ಬದಿಗೆ ಸರಿಸಿ ತಮಗೆ ತೋಚಿದ ಪುರಾಣದ ಹಿನ್ನೆಲೆಯಿಂದಲೇ ವೈಭವವಾಗಿ ಚರಿತ್ರೆಯನ್ನು ಬರೆದರು. ಅಂಬೇಡ್ಕರ್
ದುರಂತವೆಂದರೆ ಅಂದು ಇವರ ಅನುಕೂಲಕ್ಕೆ ತಕ್ಕಂತೆ ಬರೆದುಕೊಂಡ ಈ ಪುರಾಣಗಳೆ ಇಂದು ಚರಿತ್ರೆಯಾಗಿ ರೂಪಿತ ಗೊಳ್ಳುತ್ತಿರುವುದು ಭಾರತದ ಶ್ರಮದ ಚರಿತ್ರೆಗೆ ಮಾಡಿದ ಬಹುದೊಡ್ಡ ದ್ರೋಹ. ಭಾರತದ ಚರಿತ್ರೆಯಲ್ಲಿ ‘ ತೀರ್ಥ ‘ ಸಂಸ್ಕೃತಿ ಮೆರೆಇತು – ‘ಬೆವರಿನ ‘ ಸಂಸ್ಕೃತಿಗೆ ಇಲಿ ನೆಲೆಯೇ ಸಿಕ್ಕಲಿಲ್ಲ. ಈ ಹಂತದಲ್ಲಿ ಅಧ್ಯಯನ ಹಾಗೂ ಅಧ್ಯಯನದ ರಚನೆಕಾರ ಏಕಮುಖ ದೃಷ್ಟಿಕೋನದ ಬರವಣಿಗೆ ಬೌದ್ಧಧರ್ಮ ಸಿದ್ಧಾಂತದ ವಾಸ್ತವ ಚರಿತ್ರೆಯು ವೈದಿಕ ಧರ್ಮಗಳ ಬಣ್ಣ ಬಣ್ಣದ ಪುರಾಣ ಚರಿತ್ರೆಯ ಸುಳಿಯಲ್ಲಿ ಸಿಲುಕಿ ನಲುಗಿತು .

“ಅಶೋಕನ ಸಾಮ್ರಾಜ್ಯ ಹಾಗೂ ಭಾರತದಲ್ಲಿ ಬೌದ್ಧಧರ್ಮವನ್ನು ನಾಶ ಮಾಡಲು ಮುಂದಾದವರೇ , ಭಾರತದಲ್ಲಿ ಬೌದ್ಧಧರ್ಮ ಹಾಗೂ ಅಶೋಕ ಸಾಮ್ರಾಟನ ಬೌದ್ಧ ಸಾಮ್ರಾಜ್ಯದ ನಾಶದ ಬಗ್ಗೆ ಬರೆದ ಕಾರಣಕ್ಕಾಗಿ ಇತಿಹಾಸ ಪ್ರಶ್ನೆಯನ್ನು ಮಾಡದೆ ಧರ್ಮ ಹಾಗೂ ಜಾತಿಯ ಅಂಧಕಾರದಲ್ಲಿಯೇ ನಿಂತಲ್ಲೇ ನಿಂತಿತು. ಈ ಹಂತದಲ್ಲಿ ಚರಿತ್ರೆ ಸಂಪೂರ್ಣವಾಗಿ ವಸ್ತುನಿಷ್ಠತೆಯನ್ನು ಕಳೆದುಕೊಂಡಿತು ಎಂಬುವುದು ಅಂಬೇಡ್ಕರ್ ಅವರ ಸ್ಪಷ್ಟವಾದ ಮಾತುಗಳು.
ಹೀಗೆ, ಪ್ರಶ್ನೆ ಮಾಡಬೇಕಾದ ಚರಿತ್ರೆ- ಪ್ರಶ್ನೆ ಮಾಡದ ಹಾಗೆ ನಿರ್ಮಾಣಗೊಳ್ಳಲು ಪ್ರಮುಖ ಕಾರಣ ಅಶೋಕ ಸಾಮ್ರಾಟನ ಸಂದರ್ಭದಲ್ಲಿ , ಇಂದು ಇವರು ಭಾರತ ದೇಶದ ಧರ್ಮದ ವೈರಿಗಳು ಎಂದು ಕಂಡುಕೊಂಡಿರುವ ಮುಸ್ಲಿಮರು ಭಾರತದಲ್ಲಿ ಇಲ್ಲದೆ ಇದ್ದದ್ದು . ಭಾರತದಲ್ಲಿ ಮುಸ್ಲಿಂ ಪ್ರಭುತ್ವ ಆ ಸಂದರ್ಭದಲ್ಲಿ ಸ್ಥಾಪನೆಗೊಂಡಿದ್ದರೆ ಅಶೋಕನ ಸಾಮ್ರಾಜ್ಯದ ನಾಶದ ಬಗ್ಗೆ ಸಾಂಪ್ರದಾಯ ಅಕ್ಷರ ಸ್ವಾಮ್ಯದವರು ಬರೆಯುತ್ತಿದ್ದ ಅಕ್ಷರಗಳ ರೂಪ ವರ್ಣರಂಜಿತವಾಗಿ ಕೋಮು ದ್ವೇಷದ ಭಾವನೆಯನ್ನು ವ್ಯಕ್ತಪಡಿಸುವ ಮಾದರಿಯಲ್ಲಿ ಕಂಗೊಳಿಸುತ್ತಿತ್ತು. ಹೀಗೆ ಕಂಗೊಳಿಸುವಿಕೆಯಲ್ಲಿ ಕೋಮು ಭಾವನೆಯ ವಾಸನೆ ಕಣ್ಣು- ಕಿವಿ – ಇಲ್ಲದಿದ್ದರೂ ಸಹ ಇರುವುದಕ್ಕಿಂತಲು ಹೆಚ್ಚಿನ ರೀತಿಯಲ್ಲಿ ಬರ ಸಿಡಿಲಿನಂತೆ ರಾಚುತ್ತಿತ್ತು. ಸವಿಯದಿದ್ದರೂ ಸವಿಯುತ್ತಿತ್ತು.
ಅಶೋಕನ ಸಾಮ್ರಾಜ್ಯ ಹಾಗೂ ಭಾರತದಲ್ಲಿ ಆರಂಭದಲ್ಲಿ ಬೌದ್ಧಧರ್ಮವನ್ನು ನಾಶ ಮಾಡಲು ಮುಂದಾದವರ ಕುರಿತು ವಸ್ತುನಿಷ್ಠವಾಗಿ ಬರೆಯಲು ಅವರ ಮುಂದೆ ಅನೇಕ ದಾಖಲೆಗಳು ಸ್ಪಷ್ಟವಾಗಿದ್ದರೂ ಸಹ ಅದ್ಯಾವುದನ್ನು ಚಾರಿತ್ರಿಕವಾಗಿ ಪರಿಗಣಿಸದೆ, ಅಶೋಕ ಸಾಮ್ರಾಟನ ಸಾಮ್ರಾಜ್ಯವನ್ನು ನಾಶ ಮಾಡಿದವರೇ ಮುಂದಿನ ದಿನಗಳಲ್ಲಿ ಧಾರ್ಮಿಕ ಶ್ರೇಷ್ಠತೆಯ ಹಿನ್ನೆಲೆಯಿಂದ ಭಾರತದ ಚರಿತ್ರೆಯನ್ನು ಬರೆಯುವ ಶಾಶ್ವತ ಗುತ್ತಿಗೆಯನ್ನು ಪಡೆದುಕೊಂಡ ಕಾರಣಕ್ಕಾಗಿ ಅಶೋಕನ ಸಾಮ್ರಾಜ್ಯವನ್ನು ನಾಶ ಮಾಡಿದ ತಮ್ಮ ಸ್ವ-ಧರ್ಮದ ಅಂಧಕಾರ, ಅದಕ್ಕಾಗಿ ವೈಭವ ಪ್ರೇರಿತವಾಗಿ ಸೃಷ್ಟಿ ಮಾಡಿದ ಪುರಾಣ ಹಿನ್ನೆಲೆಯ ವೃತ್ತಿ ಆಧಾರಿತ ಜಾತಿಯ ಜನರ ಬವಣೆ, ಈ ಜನರಲ್ಲಿ ಶ್ರೇಷ್ಠತೆ ಹಾಗೂ ಕನಿಷ್ಠತೆಯನ್ನು ಗುರುತಿಸಿ ಅವರವರಲ್ಲೇ ಧರ್ಮದ ಸುಳಿಯಲ್ಲಿ ಸಿಲುಕಿ ಜಾತಿಯ ಅಂಧಕಾರದಲ್ಲಿ ಹೊಡೆದಾಳುವ ನೀತಿಯ ಅಧರ್ಮವನ್ನೇ ಧರ್ಮ ಎಂದು ಪ್ರತಿಪಾದನೆ ಮಾಡಿದ ಅಧರ್ಮ ಪ್ರತಿಪಾದಕರ ವಿವಿಧ ಸ್ಥರಗಳ ಬಗೆಗಳನ್ನು ದಾಖಲೆ ಸಹಿತ ವಸ್ತುನಿಷ್ಠವಾಗಿ ಬರೆಯಲೇ ಇಲ್ಲ”. ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬ ಚರಿತ್ರೆ ಕಾರರಿಗೂ ಕಾಡುವ ಪ್ರಶ್ನೆ ಎಂದರೆ ” ಅಪರಾಧಿಯೇ ತಾನು ಮಾಡಿದ ಅಪರಾಧ ಕುರಿತು ಬರೆದರೆ ನ್ಯಾಯ ದೊರೆಕಲು ಸಾಧ್ಯವೇ ” ಎಂಬ ಚಾರಿತ್ರಿಕ ಪ್ರಶ್ನೆ . ಈ ಹಂತದಲ್ಲಿ ಪ್ರತಿಯೊಬ್ಬರಿಗೂ ಕಾಡುತ್ತದೆ.
ಇದು ಒಂದು ಭಾಗ.
ಮತ್ತೊಂದು ಭಾಗ, ಈ ಕೆಳಗಿನಂತೆ ಸ್ವಾರಸ್ಯಕರವಾಗಿದೆ
12ನೇ ಶತಮಾನದಲ್ಲಿ ಕನ್ನಡ ನೆಲದಲ್ಲಿ ನಡೆದ ವಚನ ಸಾಹಿತ್ಯ ಕ್ರಾಂತಿ ಹಾಗೂ ಈ ಹಿನ್ನಲೆಯ ಸಾಮಾಜಿಕ ಹಾಗೂ ಧಾರ್ಮಿಕ ಪ್ರಜ್ಞ ಚಳುವಳಿಯ ನಂತರ ಇಂತಹ ಪ್ರಜ್ಞಾವಂತ ಸಮ ಸಮಾಜ ಪ್ರತಿಪಾದನೆ ಮಾಡುವ ಜನರಿಂದಲೇ 1336 ರಲ್ಲಿ ಕನ್ನಡ ನೆಲದಲ್ಲಿ ಸ್ಥಾಪನೆಗೊಂಡಂತೆ ವಿಜಯನಗರ ಸಾಮ್ರಾಜ್ಯ. ಈ ಸಾಮ್ರಾಜ್ಯ ಇವತ್ತಿನ ನಮ್ಮ ಕನ್ನಡ ನಾಡಿನ ಐತಿಹಾಸಿಕ ಸ್ಥಳ ಹಂಪಿಯನ್ನು ರಾಜಧಾನಿಯನ್ನಾಗಿಸಿ ಕೊಂಡು ದಕ್ಷಿಣ ಭಾರತದಲ್ಲಿ “ಸಮಸ್ತ ಜನರ” ಸಾಮ್ರಾಜ್ಯವಾಗಿ ಸ್ಥಾಪನೆಗೊಂಡದ್ದು ಐತಿಹಾಸಿಕವಾದದ್ದೆ ಆಗಿದೆ. ವಚನ ಚಳುವಳಿಯ ನಂತರ ಸ್ಥಾಪನೆಗೊಂಡ ಈ ಸಾಮ್ರಾಜ್ಯ ಯಾವುದೇ ಕಾರಣಕ್ಕೂ ಸಾಂಪ್ರದಾಯವಾದಿಗಳು ಬರೆದಂತೆ ವಿದ್ಯಾರಣ್ಯರಿಂದ ಸ್ಥಾಪನೆಗೊಂಡಿಲ್ಲ ಎಂಬುದು ಸ್ಪಷ್ಟ. ಮೇಲೆ ನಾನು ಉಲ್ಲೇಖಿಸಿದ ಸಾಂಪ್ರದಾಯಿಕ ಮನಸ್ಸುಗಳು ಹೀಗೆಲ್ಲಾ ಪುರಾಣದ ವರ್ಣನಾತ್ಮಕ ಹಿನ್ನೆಲೆಯಿಂದ ಬರದದ್ದು. ನಮ್ಮ ಸಾಂಪ್ರದಾಯಿಕ ಅಜ್ಞಾನದ ಹಿನ್ನೆಲೆಯಿಂದ ನಾವೆಲ್ಲರೂ ಒಪ್ಪಿಕೊಂಡದ್ದು. ಅಂಬೇಡ್ಕರ್
ಈ ಸಂಪ್ರದಾಯವಾದಿಗಳು ರಾಜನಿಂದ ಪಡೆದ ಎಲ್ಲಾ ಸವಲತ್ತುಗಳನ್ನು ವರುಣಾತ್ಮಕವಾಗಿ ವಿವರಿಸಿ, ಹಾಗೂ, ರಾಜರನ್ನು ಹೊಗಳುವ ನೆಪದಲ್ಲಿ ದೇವರ ಹೆಸರಿನಲ್ಲಿ ಕಾವ್ಯ ಸೃಷ್ಟಿಸಿದ ಎಲ್ಲಾ ಬಿರುದು ಬಾವಲಿಗಳನ್ನು ರಾಜನಿಗೆ ಅರ್ಪಿಸಿ, ಅವುಗಳೆಲ್ಲವನ್ನು ಶಾಸನ ರೂಪದಲ್ಲಿ ಬರೆಸಿ ಇದನ್ನೇ ಇಂದಿನ ವೈಭವದ ಚರಿತ್ರೆ ಎಂದು ದಾಖಲಿಸಿದರು. ಇವರ ಈ ವೈಭವದಿಂದ ವಿಜಯನಗರ ಸಾಮ್ರಾಜ್ಯದ ಪತನಕ್ಕೆ ಜನರು ಕೈಗೊಂಡ ತೀರ್ಮಾನಗಳನ್ನು ಇವರು ದಾಖಲಿಸಲೇ ಇಲ್ಲ. ಆದರೆ… ವಿಜಯನಗರ ಸಾಮ್ರಾಜ್ಯದ ಪತನವನ್ನು ಮಾತ್ರ ವಸ್ತುನಿಷ್ಠವಾಗಿ ಗ್ರಹಿಸದೆ ಕೇವಲ ಧಾರ್ಮಿಕ ಅಂಧಕಾರದ ಕೋಮು ದ್ವೇಷವನ್ನೇ ಹುಟ್ಟಾಕುವ ರೀತಿಯಲ್ಲಿ ಮುಸ್ಲಿಮರ ದಾಳಿಯಿಂದ ವಿಜಯನಗರ ನಾಶವಾಯಿತು ಎಂದು ಏಕಮುಖವಾಗಿ ಬರೆದು ಮುಗಿಸಿದರು. ಅಂಬೇಡ್ಕರ್
ಅಶೋಕನ ಮೌರ್ಯ ಸಾಮ್ರಾಜ್ಯವನ್ನು ” ಬೌದ್ಧ ಸಾಮ್ರಾಜ್ಯ” ಎಂದು ಕರೆಯದ – ಒಪ್ಪದ ಮನಸ್ಸುಗಳು ವಿಜಯನಗರ ಸಾಮ್ರಾಜ್ಯದ ವಿಷಯದಲ್ಲಿ ಮಾತ್ರ ತಮಗೆ ತಾವೇ ಏಕ ಸ್ವಾಮ್ಯತೆ ಪಡೆದವರ ರೀತಿಯಲ್ಲಿ ಇದನ್ನು “ಹಿಂದೂ ಸಾಮ್ರಾಜ್ಯ ” ಎಂದು ಕರೆದು- ಬರೆದು ವಿಜಯನಗರ ಸಾಮ್ರಾಜ್ಯಕ್ಕೆ ಧಾರ್ಮಿಕ ಅಂಧಕಾರದ ಭಾವನಾತ್ಮಕ ಹಾಗೂ ಅಜ್ಞಾನದ ವೈಭವದ ಲೇಪನವನ್ನು ಹಚ್ಚಿದರು. ಅಲ್ಲಿಗೆ ವಿಜಯನಗರ ಸಾಮ್ರಾಜ್ಯದ ಚರಿತ್ರೆ ವೈಭವ ಪ್ರೇರಿತ ಹಿನ್ನೆಲೆಯಿಂದ ಪ್ರಶ್ನಾರ್ಜಿತವಾಯಿತು. ಯಾವ ಚರಿತ್ರೆಗೆ ಧಾರ್ಮಿಕ ಲೇಪನ ದೊರಕುತ್ತದೆಯೋ ಅದು ಖಂಡಿತ ಪ್ರಶ್ನಾರ್ತಿತವಾಗುತ್ತದೆ ಎಂಬುವುದೇ ಅಂಬೇಡ್ಕರ್ ಅವರ ಚರಿತ್ರೆ ರಚನೆಯ ವಾದ.

ವಿಜಯನಗರ ಸಾಮ್ರಾಜ್ಯ ಕುರಿತು ಹೊರಬಂದಿರುವ ಶಾಸನಗಳು- ನಾಣ್ಯಗಳು- ಸ್ಮಾರಕಗಳು- ಹಸ್ತಪ್ರತಿಗಳು- ಸಾಹಿತ್ಯ- ಮೌಖಿಕ ಕಥನ – ಸ್ಥಳನಾಮ- ವ್ಯಕ್ತಿನಾಮ- ಆಚರಣೆ- ಸಂಪ್ರದಾಯಗಳು ವಿಜಯನಗರ ಚರಿತ್ರೆಗೆ ವಾಸ್ತವದ ಅಂಶಗಳನ್ನು ದಾಖಲೆ ಸಹಿತ ವಿಜಯದ ಸ್ಥಾಪನೆ ಹಾಗೂ ಅವನತಿ ಕುರಿತು ಸ್ಪಷ್ಟ ಮಾಹಿತಿಯನ್ನು ನೀಡಿದರೂ ಸಹ ಸಾಂಪ್ರದಾಯವಾದಿಗಳು ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ವಿದ್ಯಾರಣ್ಯರು ಕಾರಣವೆಂದು, ಇದರ ಅವನತಿಗೆ ಮುಸ್ಲಿಮರ ದಾಳಿಯೇ ಕಾರಣ ಎಂದು ಬರೆದು ಮುಗಿಸಿದರು. ಇಂತಹ ಒಂದೇ ಒಂದು ಸಾಂಪ್ರದಾಯಿಕ ಅಂಶ ಅನೇಕ ಚಾರಿತ್ರಿಕ ಹಿನ್ನೆಲೆಯ ವಾಸ್ತವ ಅಂಶಗಳನ್ನು ನಾಶ ಮಾಡಿತು. ಇದಕ್ಕೆ ಪ್ರಮುಖ ಕಾರಣ ಭಾರತೀಯರ ಮನದಲ್ಲಿ ಶಾಶ್ವತವಾಗಿ ಉಳಿದುದ್ದಿದ್ದೆ ಪುರಾಣ ಎಂಬ ಕಣ್ಣು ಕಿವಿ ಮೂಗು ಇಲ್ಲದ ಚರಿತ್ರೆ . ಈ ರೀತಿಯ ಪುರಾಣದ ಚರಿತ್ರಿಯ ಬರವಣಿಗೆಯಲ್ಲಿ ವಾಸ್ತವ ವಾಸ್ತವ ಇಲ್ಲ ಎಂಬುವುದು ಸ್ಪಷ್ಟವಾಗಿ ತಿಳಿದಿದ್ದರೂ ಸಹ ಅವರು ಉದ್ದೇಶಪೂರ್ವಕವಾಗಿಯೇ ಬರೆದದ್ದು ಎಂಬುದು ಸ್ಪಷ್ಟ. ಭಾರತದಲ್ಲಿ ಈ ಪ್ರಕ್ರಿಯೆ ಧಾರ್ಮಿಕ ಅಂಧಕಾರದ ಜನ ಬದುಕುತ್ತಿರುವ ಅಜ್ಞಾನದಷ್ಟೇ ಸತ್ಯ.
ಈ ಸಾಮ್ರಾಜ್ಯ 250 ವರ್ಷಗಳ ಕಾಲ ಕನ್ನಡ ನೆಲದಲ್ಲಿ, ಕನ್ನಡ ತನದಿಂದ ಅನೇಕ ಧರ್ಮ ಹಾಗೂ ಜಾತಿಯವರ ಸಮ್ಮಿಳನದಲ್ಲಿ ಸಹೋದರತೆ ಹಾಗೂ ಭಾತೃತ್ವದ ಹಿನ್ನೆಲೆಯಿಂದ ಬದುಕಿತ್ತು. ಆರಂಭದಿಂದ ಕೊನೆಯವರೆಗೂ ಅನೇಕ ಏಳು-ಬೀಳುಗಳ ನಡುವೆ ಆಳ್ವಿಕೆ ಮಾಡಿ, ಸಾಂಸ್ಕೃತಿಕವಾಗಿ ಮಹತ್ವದ ಕೊಡುಗೆಯನ್ನು ನೀಡಿ 1565 ರಲ್ಲಿ ಪತನಗೊಂಡಿತು . ಈ ಸಂದರ್ಭದಲ್ಲಿ ಮುಸ್ಲಿಮರು ಭಾರತ ಹಾಗೂ ಕನ್ನಡ ನೆಲದ ಒಂದಷ್ಟು ಪ್ರದೇಶಗಳಲ್ಲಿ ಪ್ರಭುತ್ವದ ವ್ಯಕ್ತಿಗಳಾಗಿ ಪ್ರಬಲವಾಗಿ ನೆಲೆ ನಿಂತಿದ್ದರು.
ವಿಜಯನಗರ ಸಾಮ್ರಾಜ್ಯದ ಉತ್ತರ ಭಾಗದ ಇಂದಿನ ನಮ್ಮ ಕನ್ನಡ ನೆಲದಲ್ಲಿಯೇ ಶಾಹಿ ಮನತನಗಳು ಆಳ್ವಿಕೆ ಮಾಡುತ್ತಿದ್ದ ಕಾರಣಕ್ಕಾಗಿ ಹಾಗೂ ಪ್ರಮುಖವಾಗಿ ವಿಜಯನಗರದ ಅಂತಿಮ ಯುದ್ಧದಲ್ಲಿ ಈ ಶಾಹಿ ಮನೆತನಗಳ ದಾಳಿಯ ಏಕೈಕ ಪ್ರಮುಖ ಕಾರಣದಿಂದಾಗಿ ವಿಜಯನಗರ ಸಾಮ್ರಾಜ್ಯ ಪತನವಾಗಲು “ಈ ಮುಸ್ಲಿಂರು ಹಿಂದು ಸಾಮ್ರಾಜ್ಯವನ್ನು ನಾಶ ಮಾಡಿದರು ” ಎಂದು ಬರೆದು ವಿಜಯನಗರ ಸಾಮ್ರಾಜ್ಯದ ಪತನಕ್ಕೆ ಅಳಿಸಲಾಗದ ಧಾರ್ಮಿಕ ಲೇಪನವನ್ನು ಹಚ್ಚಲಾಯಿತು. ವಿಜಯನಗರ ಸಾಮ್ರಾಜ್ಯದ ಸ್ಥಾಪನೆ ಹಾಗೂ ಅವನತಿ ಯಾವಾಗ ಧಾರ್ಮಿಕ ಅಂಧಕಾರದ ಲೇಪನಕ್ಕೆ ಸಿಲುಕಿತೋ ಈ ಎರಡು ಘಟನೆಗಳು ಸಹ ಚರಿತ್ರೆ ರಚನೆ ಹಾಗೂ ಬೋಧನೆ ವಿಷಯದಲ್ಲಿ ಪ್ರಶ್ನಾರ್ತಿತವಾದವು. ಇದು ವಿಜಯನಗರ ಸಾಮ್ರಾಜ್ಯದ ಮೊದಲ ಅವನತಿ. ಅಂದರೆ ಎಷ್ಟು ಸಂದರ್ಭದಲ್ಲಿ ಭಾರತದ ವಾಸ್ತವ ಚರಿತ್ರೆ ಆರಂಭದಲ್ಲಿ ಸತ್ತಿದೆ. ಭಾರತದ ಪುರಾಣ ಚರಿತ್ರೆ ಆರಂಭದಿಂದ ಕೊನೆಯವರೆಗೂ ಮೆರೆದಿದೆ.
ಹೀಗೆ ಬರೆದ ನಂತರ ವಿಜಯನಗರ ಸಾಮ್ರಾಜ್ಯದ ಪತನದ ಚರಿತ್ರೆ ಪ್ರಶ್ನಾರ್ತಿತವಾಗಿ ಉಳಿಯಿತು. ಇತಿಹಾಸದಲ್ಲಿ ಎಲ್ಲಿ ಪ್ರಶ್ನೆ ಹುಟ್ಟುವುದಿಲ್ಲವೋ ಅದು ತನಗೆ ತಾನೇ ದೇವರು ಹಾಗೂ ದೇವಾಲಯದ ಚರಿತ್ರೆಯಾಗಿಬಿಡುತ್ತದೆ. ಏಕೆಂದರೆ, ಭಾರತದಲ್ಲಿ ಶತಶತಮಾನಗಳಿಂದಲೂ ಸಂಪ್ರದಾಯವಾದಿಗಳು ದೇವರಿಗೆ ಪ್ರಶ್ನೆ ಮಾಡಿದ ಉದಾಹರಣೆಗಳು ಇಲ್ಲ. ಆದರೆ ಬೌದ್ಧ ಧರ್ಮದ ಅನುಯಾಯಿಗಳು ಹಾಗೂ ನೆಲ ಮೂಲ ಸಂಸ್ಕೃತಿಯ ದುಡಿಯುವ ಜನ ವರ್ಗ ದೇವರಿಗೆ ಅನೇಕ ಪ್ರಶ್ನೆಗಳನ್ನು ಮಾಡಿ ದೇವರನ್ನು ಇಕ್ಕಟ್ಟಿಕ್ಕೆ ಸಿಕ್ಕಿಸಿರುವ ಉದಾಹರಣೆಗಳು ಪುಂಖಾನು ಪುಂಖವಾಗಿ ಇವೆ. ಇವರ ಪ್ರಶ್ನೆಗಳಿಗೆ ಉತ್ತರ ಕೊಡಲಾಗದ ದೇವರನ್ನೇ ಇವರೇ ಕಲ್ಲಾಗಿ ನಿಲ್ಲಿಸಿರುವುದಕ್ಕೂ ನಿದರ್ಶನಗಳಿವೆ. ಇದೆ ನಿಜ ಭಾರತೀಯರ ಧಾರ್ಮಿಕತೆಯ ಚರಿತ್ರೆ.

ಹೌದು , ವಿಜಯನಗರ ಸಾಮ್ರಾಜ್ಯ ಪತನವಾಗಲು ಇರುವ 10 ಕಾರಣಗಳಲ್ಲಿ ಮುಸ್ಲಿಮರ ಒಗ್ಗಟ್ಟು ಹಾಗೂ ದಾಳಿ ಒಂದು ಎಂಬುದು ಸತ್ಯ. ಮಿಕ್ಕ ಒಂಬತ್ತು ಸ್ಥಳೀಯ ನಿಜವಾದ ಕಾರಣಗಳನ್ನು ಗೌಣವಾಗಿಸಿ, ಮುಸ್ಲಿಮರ ದಾಳಿಯಿಂದಲೇ ವಿಜಯನಗರ ಸಾಮ್ರಾಜ್ಯ ನಾಶವಾಯಿತು ಎಂಬರ್ಥದಲ್ಲಿ ಚರಿತ್ರೆ ನಿರ್ಮಾಣ ಮಾಡಿದ್ದು ಚಾರಿತ್ರಿಕವಾಗಿಯೂ ಸತ್ಯ . ಆದರೆ ವಿಜಯನಗರ ಸಾಮ್ರಾಜ್ಯದ ಪತನವನ್ನು ಕುರಿತು ಕಾಲಕಾಲದಿಂದಲೂ ಅಕ್ಷರವನ್ನು ತಮ್ಮ ಪಾರಂಪರಿಕ ಸ್ವತ್ತಾಗಿಸಿಕೊಂಡಿದ್ದರು ಬರದದ್ದು ಮಾತ್ರ ಮುಸ್ಲಿಮರ ಆಕ್ರಮಣದಿಂದ ಹಿಂದೂ ಸಾಮ್ರಾಜ್ಯ ನಾಶವಾಯಿತು ಎಂದು. ಇದು ಜನರಿಗೆ ರಂಜಿಸಿತು. ಏಕೆಂದರೆ ಇಂತಹ ಚರಿತ್ರೆ ರಚನೆ ತಮ್ಮ ಮನೆಯದಲ್ಲದೆ, ಮನೆ ಹೊರಗಿನವರ ಕುರಿತು ಕೇಳಿ ನೋಡಿ ಸಂತೋಷಕ್ಕಾಗಿ ಬರೆಯುವ ಚರಿತ್ರೆ . ಆದರೆ ತಮ್ಮ ಮನೆಯೊಳಗಿನ ಸಮಸ್ಯೆಯನ್ನು ಕುರಿತು ಯಾವ ಲೇಖಕರು ವಸ್ತುನಿಷ್ಠವಾಗಿ ಬರೆಯಲು ಮುಂದಾಗುವುದಿಲ್ಲ ಏಕೆಂದರೆ ಆ ಚರಿತ್ರೆ ಅವರದೇ ಆಗಿರುತ್ತದೆ ಅದಕ್ಕಾಗಿ. ವಿಜಯ ಸಾಮ್ರಾಜ್ಯದ ಪತನ ಚರಿತ್ರೆಯಲ್ಲಿ ಸಾಮ್ರಾಜ್ಯದ ಒಳಗಿನ ಚರಿತ್ರೆ ಸಂಪೂರ್ಣವಾಗಿ ಗೌಣವೇ ಆಗಿದೆ.
ಅಂದರೆ, ವಿಜಯನಗರ ಸಾಮ್ರಾಜ್ಯದ ನಾಶಕ್ಕೆ ಮನೆಯೊಳಗಿನ ಒಂಬತ್ತು ಸಮಸ್ಯಗಳ ಕುರಿತು ಅವರು ಬರೆಯಲೇ ಇಲ್ಲ. ಒಂಬತ್ತು ಸಮಸ್ಯೆಗಳಲ್ಲಿ ಸಾಮ್ರಾಜ್ಯದ ಒಳಗೆ ಅಂದಿನ ಸಂದರ್ಭದಲ್ಲಿ ಬುಗಿಲೆದ್ದಿದ್ದ ಅಂದರೆ ವಚನ ಚಳುವಳಿಯ ನಂತರ ಪ್ರಜ್ಞಾವಂತ ನೆಲ ಸಂಸ್ಕೃತಿಗೆ ಚಿಂತಕರು ಹುಟ್ಟಾಕಿದ ಸಮ ಸಂಸ್ಕೃತಿ ಹಿನ್ನೆಲೆಯ ಪ್ರತಿಪಾದನೆಗಾಗಿ ಹಾಗೂ ಇಂತಹ ಪ್ರಜ್ಞಾವಂತ ಚಳುವಳಿಯ ವಿರುದ್ಧ ಹುಟ್ಟಿಕೊಂಡ ಅಪ್ರಜ್ಞಾವಂತರ ನೆಲೆಯಲ್ಲಿ ಜೈನ, ಬೌದ್ಧ, ಶೈವ, ವೈಷ್ಣವ, ಲಿಂಗಾಯಿತ, ವೀರಶೈವ ಧರ್ಮಗಳ ಸಂಘರ್ಷಗಳು ಪ್ರಮುಖವಾದವುಗಳು . ಮುಂದುವರೆದು, ವಿಜಯನಗರ ಸಾಮ್ರಾಜ್ಯದ ಅಂತಿಮ ಸಂದರ್ಭದಲ್ಲಿ ಸ್ಥಳೀಯ ಪಾಳೆಪಟ್ಟುಗಳಿಗೆ ಸಾಮ್ರಾಜ್ಯದ ಪ್ರಭುತ್ವದೊಂದಿಗೆ ಉಂಟಾದ ಅಧಿಕಾರ ಹಂಚಿಕೆಯ ಮನಸ್ತಾಪ , ಜಾತಿ- ಜಾತಿಗಳ ನಡುವಿನ ಸ್ಪೃಶ್ಯತೆ ಹಾಗೂ ಅಸ್ಪೃಶ್ಯತೆಗಳ ಅಂತರದ ಬಹುದೊಡ್ಡ ಬೇದ ಬಾವ , 12ನೇ ಶತಮಾನದಲ್ಲಿ ಕನ್ನಡ ನೆಲದಲ್ಲಿ ನಡೆದಿದ್ದ ವಚನ ಸಾಹಿತ್ಯ ಹಾಗೂ ಚಳುವಳಿ – ವಚನಕಾರರು ಹಾಗೂ ಅವರು ಭೌತಿಕವಾಗಿ ಕನ್ನಡ ನೆಲದಲ್ಲಿ ಹುಟ್ಟಾಕಿದ ಸಮಸಂಸ್ಕೃತಿ ಚಿಂತನೆಯ ಚಳುವಳಿಯಿಂದ ಮಠ ಸಂಸ್ಕೃತಿ ಹೆಚ್ಚಾದದ್ದು.
ವಾಸ್ತವತೆ ಹೆಚ್ಚು ಮಾತನಾಡಲು ಆರಂಭಿಸಿದ್ದು ಹಾಗೂ ಪುರಾಣವನ್ನು ಬೌದ್ಧಿಕ ಹಿನ್ನೆಲೆಯಿಂದ ತಿರಸ್ಕರಿಸಲು ಮುಂದಾದದ್ದು ಸಹ ವಿಜಯನಗರದ ಅವನತಿಗೆ ಪ್ರಮುಖ ಕಾರಣವಾಯಿತು ಎಂಬ ಅಂಶವನ್ನು ಯಾರೂ ಸಹ ಚರ್ಚೆ ಮಾಡಿಲ್ಲ . ಮುಂದುವರೆದು 15ನೇ ಶತಮಾನದಲ್ಲಿ ಜನಸಾಮಾನ್ಯರ ಬದುಕಿನ ಮೇಲೆ ಪ್ರಜ್ಞೆಯನ್ನು ಉಂಟುಮಾಡಲು ಕ್ರಾಂತಿಯನ್ನೇ ಹುಟ್ಟಾಕಿದ ಕನಕ ಹಾಗೂ ಇತರೆ ಕೀರ್ತನಾಕಾರರು, ಸೂಫಿ ಸಂತರು , ವಿಜಯನಗರ ಪ್ರಭುದ್ಧ ವಾಗಿದ್ದ ಕಾಲದ 15ನೇ ಶತಮಾನದಲ್ಲಿ ಜನಸಾಮಾನ್ಯರಲ್ಲಿ ಬದುಕಿನ ಪ್ರಜ್ಞೆಯನ್ನು ಉಂಟು ಮಾಡಿದ ಜನರ ಬದುಕಿನ ಜನಪದದ ಜೀವಾಳವೇ ಆದ ಮಂಟೆಸ್ವಾಮಿ – ಮಾದಪ್ಪ – ರಾಜಪ್ಪಾಜಿ – ಸಿದ್ದಪ್ಪಾಜಿ- ಕೊಟ್ಟೂರಿನ ಕೊಟ್ರಪ್ಪ – ನಾಯಕನಹಟ್ಟಿ ತಿಪ್ಪೇಸ್ವಾಮಿ…ಇತ್ಯಾದಿ ಇತ್ಯಾದಿ ಹಿನ್ನೆಲೆಯ ಜನ ಸಂಸ್ಕೃತಿಯ ಪ್ರತಿಪಾದಕರು ವಿಜಯನಗರ ಸಾಮ್ರಾಜ್ಯದಲ್ಲಿ ಬೌದ್ಧಿಕ ಕ್ರಾಂತಿಯನ್ನು ಹುಟ್ಟಾಕಿದರು. ಇವರ ಬೌದ್ಧಿಕ ಕ್ರಾಂತಿ ಪ್ರಭುತ್ವ ಹಾಗೂ ವೈದಿಕ ಸಂಪ್ರದಾಯವನ್ನು ಜನ ಧಿಕ್ಕರಿಸಲು ಕಾರಣವಾಯಿತು. ಬೌದ್ಧಿಕ ಕಾರಣಗಳು ವಿಜಯನಗರ ಸಾಮ್ರಾಜ್ಯದ ಅವನತಿಗೆ ಪಾತ್ರವಹಿಸಿವೆ ಎಂದ ಹೇಳಿದೆ ಇದ್ದರೆ ಅದು ಸುಳ್ಳಾಗುತ್ತದೆ.
ಭಾರತಕ್ಕೆ ಸ್ವಾತಂತ್ರ್ಯ ಬರಲು ಹೇಗೆ ಹತ್ತರಲ್ಲಿ ಒಂದು ಕಾರಣವಾದರೂ ಅದೇ ಮಾದರಿಯಲ್ಲಿ ಬೌದ್ಧಿಕತೆಯ ವ್ಯಕ್ತಿಗಳು ಕಾರಣರಾದರು ಎಂಬುವುದು ಸತ್ಯ. ಅದೇ ರೀತಿ ವಿಜಯನಗರದ ಸ್ಥಾಪನೆ ಹಾಗೂ ಅವರತ್ತಿಗೂ ಸಹ ಇದೇ ಬೌದ್ಧಿಕತೆಯ ವಾರಸುದಾರರ ನೇತೃತ್ವವೂ ಸಹ ಕೆಲಸ ಮಾಡಿದೆ. ನಮ್ಮ ವಿಜಯನಗರ ಸಾಮ್ರಾಜ್ಯದ ಆರಂಭ ಹಾಗೂ ಅವನತಿ ಕುರಿತು ಬರೆದ ಸಾಂಪ್ರದಾಯವಾದಿ ಚರಿತ್ರೆ ಕಾರರು ಈ ಯಾವ ಅಂಶಗಳನ್ನು ಸ್ಪಷ್ಟವಾಗಿ ಬರೆಯಲೇ ಇಲ್ಲ. ಅವರು ಬರೆದದ್ದು ಆರಂಭದಲ್ಲಿ ” ಮೊಲ ಮತ್ತು ನಾಯಿಯ ಜಗಳದ ಕಥೆ ಹಿನ್ನೆಲೆಯಲ್ಲಿ ವೈದಿಕ ಸಂಪ್ರದಾಯದ ವಿದ್ಯಾರಣ್ಯರು ವಿಜಯನಗರವನ್ನು ಸ್ಥಾಪಿಸಿದರು – ಅಂತಿಮದಲ್ಲಿ ವಿಜಯದ ಸಾಮ್ರಾಜ್ಯದ ಅವನತಿಗೆ ವೈದಿಕರ ಯಾವ ಪಾತ್ರವನ್ನು ಉಲ್ಲೇಖಿಸದೆ ಕೇವಲ ಅವರ ಎದುರಾಳಿಗಳಾದ ಮುಸ್ಲಿಮರ ದಾಳಿಯಿಂದ ವಿಜಯನಗರ ಸಾಮ್ರಾಜ್ಯ ನಾಶವಾಯಿತು ” ಎಂದು ಬರೆದು ಮುಗಿಸಿದರು.
ವಿಜಯನಗರ ಪತನಕ್ಕೆ ಉಳಿದ ಒಂಬತ್ತು ಪ್ರಮುಖ ಕಾರಣಗಳನ್ನು ಸಾಕ್ಷಿ ಸಹಿತ ವಸ್ತುನಿಷ್ಠವಾಗಿ ಬರೆದರೆ ಅದು ಓದುಗರಿಗೆ ಹಾಗೂ ಧಾರ್ಮಿಕ ಅಂಧಕಾರದಲ್ಲಿ ಮುಳುಗಿರುವವರಿಗೆ ರಂಜಿಸಲು ಸಾಧ್ಯವಾಗುತ್ತಿರಲಿಲ್ಲ. ಮುಂದುವರೆದು ಈ ಹಿನ್ನೆಲೆಯಿಂದಲೇ ವೈಭವವಾಗಿ ಬದುಕುತ್ತಿರುವವರಿಗೆ ಬಹುದೊಡ್ಡ ಚಾರಿತ್ರಿಕ ನಷ್ಟವಾಗುತ್ತಿತ್ತು. ಈ ಹಿನ್ನಲೆಯಿಂದ ಇವರೇ ಸೃಷ್ಟಿ ಮಾಡಿದ್ದು ಇಂತಹ ಚರಿತ್ರೆ ರಚನೆ. ಮುಂದುವರೆದು ಇಂತಹ ಚರಿತ್ರೆಯನ್ನು ರಚನೆ ಮಾಡಿದರೆ ಅದು ಧರ್ಮದ್ರೋಹ ಹಾಗೂ ರಾಷ್ಟ್ರೀಯತೆಯ ದ್ರೋಹದ ಚರಿತ್ರೆ ಆಗುತ್ತದೆ ಎಂದು ಜನರಿಗೆ ನಂಬಿಸಿದರು. ರಾಷ್ಟ್ರೀಯತೆಯ ವೈಭವದ ಚರಿತ್ರೆಯನ್ನು ಬರೆಯುವಾಗ ಅಸ್ಪೃಶ್ಯತೆಯ ಚರಿತ್ರೆಯನ್ನು ದಾಖಲಿಸದೆ ಈ ಜನರ ಸಮ ಸಿದ್ದಾಂತದ ಬೆವರಿನ ಭವ್ಯ ಚರಿತ್ರೆಗೆ ಈ ಭಾರತ ದೇಶದ ಚರಿತ್ರೆ ರಚನಕಾರರು ಮಾಡಿರುವ ಮೋಸ ಅಷ್ಟಿಷ್ಟಲ್ಲ. ಆ ಕಾರಣದಿಂದ ಹತ್ತರಲ್ಲಿ ಮುಸ್ಲಿಮರ ದಾಳಿಯಿಂದಲೇ ವಿಜಯನಗರ ಸಾಮ್ರಾಜ್ಯ ನಾಶವಾಯಿತು ಎಂದು ಬರೆದ ಒಂದೇ ಒಂದು ಕೋಮು ದ್ವೇಷದ ಭಾವನೆ ವೈಭವವಾಗಿ ರಂಜಿಸಿತು. ಈ ರಂಜನೆ ಇಂದು ಚರಿತ್ರೆಯ ವಸ್ತುವಾಗಿ ರೂಪಿತವಾಗುತ್ತಿರುವುದು ದುರಂತ. ಅಂಬೇಡ್ಕರ್
ಆದರೆ, ಇಂದು ಹೀಗೆ ವರ್ಣನಾತ್ಮಕವಾಗಿ “ಅಂತಹ ಒಂದು” ಕಾರಣವನ್ನೇ ಮುಂದಿಟ್ಟುಕೊಂಡು ಬರೆಯುತ್ತಿರುವವರು ಅಂದು.. ಅಶೋಕನ ಬುದ್ಧನ ಸಾಮ್ರಾಜ್ಯ ಧಾರ್ಮಿಕ ಅಂಧಕಾರದ “ವೈದಿಕರ ದಾಳಿ ” ” ಕುತಂತ್ರ ” ದಿಂದ ಹೇಗೆ ಸಂಪೂರ್ಣವಾಗಿ ನಾಶಾಯಿತು ಎಂದು ದಾಖಲೆಗಳು ತಮ್ಮ ಕಣ್ಮುಂದೆ ಇದ್ದರೂ ಸಹ ಅವುಗಳನ್ನು ಪರಿಶೀಲಿಸಿ ವಸ್ತುನಿಷ್ಠವಾಗಿ ಬರೆಯಲಿಲ್ಲ. ಅಂಬೇಡ್ಕರ್
ಇದೇ… ಇಂದಿನ ಭಾರತದ ಚರಿತ್ರೆ ರಚನೆಯ ಸ್ವರೂಪ ಆಗಿದೆ ಎಂದು ಅಂಬೇಡ್ಕರ್ ಅವರು ಭಾರತ ಚರಿತ್ರೆ ರಚನೆ ಹಾಗೂ ಅದರ ಸ್ವರೂಪವನ್ನು ಸ್ಪಷ್ಟವಾಗಿ ದಾಖಲೆ ಸಹಿತ ಗುರುತಿಸುತ್ತಾರೆ.
ನಮ್ಮ ಮನೆಯ ಸಮಸ್ಯೆಗೆ ಎದುರಾಗಿರುವ ಮನೆಯೊಳಗಿನ ಸಮಸ್ಯೆಯನ್ನು ಮೊದಲು ನಾವು ಕಂಡಿಕೊಳ್ಳದೇ – ಮನೆಯ ಹೊರಗಿನವರ ಕುತಂತ್ರದಿಂದಲೇ ನಮ್ಮ ಮನೆಗೆ ಸಮಸ್ಯೆ ಆಗಿದೆ ಎಂದು ಏಕಮುಖವಾಗಿ ಪ್ರಶ್ನೆ ಮಾಡದೆ ನಾವು ತಿಳಿದುಕೊಂಡರೆ ಅದು ಚರಿತ್ರಿಕವಾಗಿ ನಮಗೆ ನಾವೇ ಮಾಡಿಕೊಳ್ಳುವ ದ್ರೋಹ. ಇಂಥದ್ದೇ ಈ ಎರಡು ಸಂದರ್ಭಗಳ ಚರಿತ್ರೆ ರಚನೆಯಲ್ಲಿ ಆಗಿರುವುದು.

ಅಶೋಕನ ಮೌರ್ಯ ಸಾಮ್ರಾಜ್ಯ ನಾಶವಾಗಲು ಮನೆ ಒಳಗಿನ ಸದಸ್ಯರೇ ಕಾರಣ ಹೊರತು, ಮನೆಯ ಹೊರಗಿನವರಲ್ಲ. ಈ ಮಾತು ವಿಜಯನಗರ ಸಾಮ್ರಾಜ್ಯದ ಪತನಕ್ಕೂ “ಹತ್ತರಲ್ಲಿ ಒಂಬತ್ತು ” ಭಾಗ ನೂರಕ್ಕೆ ನೂರು ಅನ್ವಯವಾಗುತ್ತದೆ. ಅಂಬೇಡ್ಕರ್
ಭಾರತದ ಚರಿತ್ರೆಯನ್ನು ಬರೆದವರು ನಾಲ್ಕು ವರ್ಣಶ್ರಮಗಳಲ್ಲಿ ಮೊದಲನೇ ವರ್ಣ ಎಂದು ಹೇಳಿಕೊಂಡ ನಾಲ್ಕು ಜನರಲ್ಲಿ ವಿದ್ಯಾವಂತರಾಗಿದ್ದ ಒಬ್ಬರು ಮಾತ್ರ. ಆದರೆ, ಭಾರತದ ಚರಿತ್ರೆಯನ್ನು ನಿರ್ಮಾಣ ಮಾಡಿದವರು ತೊಂಬತ್ತಾರು ಜನ ಎಂಬುವುದನ್ನು ಭಾರತದ ವಾಸ್ತವ ಹಿನ್ನೆಲೆಯ ಚರಿತ್ರೆ ರಚನಾಕಾರರು ಬಹು ಸೂಕ್ಷ್ಮವಾಗಿ ಗ್ರಹಿಸಬೇಕಾಗಿದೆ. ಇದು ಭಾರತದ ಸಂಸ್ಕೃತಿ ಹಾಗೂ ಚಾರಿತ್ರಿಕ ಹಿನ್ನೆಲೆಯಿಂದ ಸತ್ಯವಾದದ್ದು. ಈ ವಾಸ್ತವ ಸತ್ಯವನ್ನು ಅಂಬೇಡ್ಕರ್ ಅವರು ಬಹು ಸೂಕ್ಷ್ಮವಾಗಿ ಗ್ರಹಿಸಿ ಭಾರತದ ಚರಿತ್ರೆಯನ್ನು ರಚನೆ ಮಾಡುವ ಪ್ರತಿಯೊಬ್ಬರೂ ಅರಿಯಬೇಕಾಗಿದೆ. ಅಂಬೇಡ್ಕರ್
ಆದರೆ ಈ ತೊಂಬತ್ತಾರು ಜನರ ಚರಿತ್ರೆಯನ್ನು ಬರೆದವರು ಮೇಲೆ ಪ್ರಸ್ತಾಪಿಸಿದ ಹಾಗೆ ಭಾರತದಲ್ಲಿ ತಮ್ಮ ಸ್ವಾರ್ಥ ಸಾಧನೆಗಾಗಿನ ಭಾರತ ನೆಲದ ಬೌದ್ಧ ಧರ್ಮವನ್ನು ನಾಶ ಮಾಡಲು ಮುಂದಾದವರು ಎಂಬುವುದೇ ದುರಂತ. ಮುಂದುವರೆದು ಇವರೇ ತಮ್ಮ ಸ್ವಾರ್ಥಕ್ಕಾಗಿ ಕಾಲಕಾಲದಲ್ಲಿ ಭಾರತದ ಮೇಲೆ ದಾಳಿ ಮಾಡಿದ ಮುಸ್ಲಿಮರು ಭಾರತದಲ್ಲಿ ನೆಲೆ ನಿಲ್ಲಲು ಕಾರಣವಾದವರು ಎಂಬುವುದು ಸತ್ಯ. ಅಂದಿನ ಸಂದರ್ಭಕ್ಕೆ ತಮಗೆ ಅನುಕೂಲವಾಗುವ ರೀತಿಯಲ್ಲಿ ಹೇಗೆ ಚರಿತ್ರೆಯನ್ನು ಬರೆದರೂ… ಅದೇ ಮಾದರಿಯಲ್ಲಿ ಇಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮಗೆ ಅನ್ವಯವಾಗುವಂತೆ ಚರಿತ್ರೆಯನ್ನು ನಿರ್ಮಾಣ ಮಾಡುತ್ತಿದ್ದಾರೆ. ಚರಿತ್ರೆ ರಚನೆಯ ಸ್ವರೂಪ ಇದ್ದಂಗೆ ಇದೆ. ಆದರೆ ಬರೆಯುತ್ತಿರುವ ಜನರು ಇರುವ ಮನಸ್ಸುಗಳ ಕಾಲ- ಸನ್ನಿವೇಶ ಹಾಗೂ ಸಂದರ್ಭಗಳು ಇದ್ದಹಾಗೆಯೇ ಇದೆ. ಅಂದಿನ ರಾಜಪ್ರಭುತ್ವ ಹೋಗಿ – ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯ ಆಳ್ವಿಕೆ ಭಾರತಕ್ಕೆ ಬಂದಿದೆ ಅಷ್ಟೇ. ಅಂಬೇಡ್ಕರ್
ಈ ಎಲ್ಲಾ ಅಂಶಗಳನ್ನು ಸೂಕ್ಷ್ಮವಾಗಿ ಗ್ರಹಿಸಿದಾಗ ಶತಶತಮಾನಗಳಿಂದಲೂ ಅಕ್ಷರವನ್ನು ತಮ್ಮ ಸ್ವತ್ತಾಗಿಸಿಕೊಂಡಿದ್ದವರು ದೇವರು ಹಾಗೂ ದೇವಾಲಯ ನಿರ್ಮಿತ ಧರ್ಮದ ಹಿನ್ನೆಲೆಯಿಂದ ಪ್ರಶ್ನೆ ಮಾಡದ ಹಾಗೆ ಬರೆದು ಹಾಗೂ ಬರೆಯುತ್ತಿರುವ ಚರಿತ್ರೆಯೇ ಇಂದಿನ ಭಾರತ ಚರಿತ್ರೆಯಾಗಿದೆ.
ಈ ಮಾದರಿಯ ಚರಿತ್ರೆ ರಚನೆಯನ್ನೇ ಬಾಬಾಸಾಹೇಬ್ ಅಂಬೇಡ್ಕರ್ ಅವರು ತಮ್ಮ ಒಡಲಾಳದ ನೆಲಮೂಲ ಸಂಸ್ಕೃತಿಯ ಜ್ಞಾನದ ಮೂಲಕ ವಸ್ತುನಿಷ್ಠವಾಗಿ ಪ್ರಶ್ನೆ ಮಾಡಿದ್ದು ಹಾಗೂ ಆ ಪ್ರಶ್ನೆಗೆ ನಿಖರವಾದ ಉತ್ತರವನ್ನು ತಮ್ಮ ನಿಖರ ಸಂಶೋಧನೆಯ ಜನಸಂಸ್ಕೃತಿಯ ಆಧಾರದ ಮೂಲಕ ಸ್ಪಷ್ಟವಾಗಿ ಕಂಡುಕೊಂಡು ಬರೆದದ್ದು. ಆದರೆ ಅಂಬೇಡ್ಕರ್ ಅವರನ್ನು ಅವರು ಹುಟ್ಟಿದ ಜಾತಿಯ ಹಿನ್ನೆಲೆಯಿಂದ ಅಸ್ಪೃಶ್ಯರನ್ನಾಗಿಸಿದಂತೆ ಅವರ ಚಿಂತನೆ ಬರವಣಿಗೆ ಹಾಗು ಹೋರಾಟಗಳೆಲ್ಲವನ್ನು ಸಹ ಅಸ್ಪೃಶ್ಯತೆಗೆ ಒಳಪಡಿಸಿದ್ದು ಮಾತ್ರ ಭಾರತದ ಸ್ಪೃಶ್ಯ ಶಾಶ್ವತ ಅಜ್ಞಾನದ ಮನಸ್ಸುಗಳು ಎಂಬುವುದು ಸತ್ಯ. ಸ್ವಾತಂತ್ರ ಭಾರತದ 80 ವರ್ಷಗಳ ಹಿಂದಿನ ಸಂದರ್ಭದಲ್ಲಿಯೂ ಅಸ್ಪೃಶ್ಯರು ಎಂದು ಸ್ಪೃಶ್ಯದಿಂದ ಕರೆಸಿಕೊಂಡವರ ಪಾತ್ರವೂ ಹಂತದಲ್ಲಿ ಅಗಾಧವಾಗಿಯೇ ಇದೆ.
ಏಕೆಂದರೆ, ಇಂದಿಗೂ ಸಹ ಇವರಿಗೆ ಅಂಬೇಡ್ಕರ್ ಅವರು ಯಾರ ಪರವಾಗಿ – ಏಕೆ ಬರೆದರು ಎಂಬ ಪರಿಜ್ಞಾನ ಇಲ್ಲ. ಅಂಬೇಡ್ಕರ್ ಅವರು ಯಾರ ವಿರುದ್ಧವಾಗಿ ಏನೆಲ್ಲ ಚಾರಿತ್ರಿಕ ದಾಖಲೆಗಳೊಂದಿಗೆ ಬರೆದರೂ ಅವರಿಗೆ ಇದರ ಪ್ರಜ್ಞೆ ಇದೆ. ಆ ತಮ್ಮ ಪಾರಂಪರಿಕ ಧಾರ್ಮಿಕ ಅಂಧಕಾರದ ಪ್ರಜ್ಞೆ ಮೂಲಕವೇ ಅಂಬೇಡ್ಕರ್ ಅವರ ಚರಿತ್ರೆಯನ್ನು ಸಹ ಪುರಾಣಿಕರಿಸುತ್ತಾರೆ. ಇದರ ಅರಿವು ಇಂದಿನ ಚರಿತ್ರೆ ಕಾರರಿಗೆ ಸ್ಪಷ್ಟವಾಗಿ ಇರಬೇಕಾಗಿದೆ.
ಇದೆ ಅಂಬೇಡ್ಕರ್ ಅವರ ಭಾರತದ ಚರಿತ್ರೆ ರಚನೆ ಹಾಗೂ ಅದರ ಪ್ರಮುಖ ಉದ್ದೇಶದ ಚಾರಿತ್ರಿಕವಾದ.
ಇದನ್ನೂ ನೋಡಿ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ – ಹಾಸನ | ಉದ್ಘಾಟನಾ ಕಾರ್ಯಕ್ರಮದಲ್ಲಿ ಸೇರಿದ ಜನಸ್ತೋಮ Janashakthi Media
