2020ರಿಂದ ದೇಶದ ಸರ್ವೋಚ್ಚ ನ್ಯಾಯಾಲಯದ ಮುಂದಿರುವ 1991ರ ಪೂಜಾಸ್ಥಳಗಳ ಕಾಯ್ದೆಯನ್ನು ರದ್ದುಪಡಿಸಬೇಕೆಂದು ಕೇಳುವ ಮತ್ತು ಅಂತಹ ಅರ್ಜಿಗಳನ್ನು ವಿರೋಧಿಸುವ ಅರ್ಜಿಗಳ ವಿಚಾರಣೆ ಕೊನೆಗೂ ಡಿಸೆಂಬರ್ 12 ರಂದು ಆರಂಭವಾಗಿದೆ. ಹೊಸ ಮುಖ್ಯ ನ್ಯಾಯಾಮೂರ್ತಿಗಳ ನೇತೃತ್ವದ ವಿಶೇಷ ತ್ರಿಸದಸ್ಯ ಪೀಠ ವಿಚಾರಣೆಯ ಮೊದಲನೆಯ ದಿನವೇ ಮುಂದಿನ ಆದೇಶದ ವರೆಗೆ, ಪೂಜಾ ಸ್ಥಳಗಳ ಧಾರ್ಮಿಕ ಸ್ವರೂಪವನ್ನು ಪ್ರಶ್ನಿಸುವ ಯಾವುದೇ ಹೊಸ ದಾವೆಯನ್ನು ನೋಂದಾಯಿಸಿಕೊಳ್ಳಬಾರದು ಮತ್ತು ಯಾವುದೇ ಪ್ರಕ್ರಿಯೆಯನ್ನು ಆರಂಭಿಸಬಾರದು ಎಂದು ಕೆಳಗಣ ವಿಚಾರಣಾ ನ್ಯಾಯಾಲಯಗಳಿಗೆ ಆದೇಶ ನೀಡಿದೆ. ಅಗೆ
ಈಗಾಗಲೇ ಸಲ್ಲಿಸಿರುವ ಮೊಕದ್ದಮೆಗಳಲ್ಲಿ ಆರಂಭವಾಗಿರುವ ಪ್ರಕ್ರಿಯೆಗಳನ್ನು ನಿಲ್ಲಿಸಲು ಅದು ನಿರಾಕರಿಸಿದರೂ, ಈ ವ್ಯಾಜ್ಯಗಳಲ್ಲಿ ಒಳಗೊಂಡಿರುವ ಪೂಜಾ ಸ್ಥಳಗಳ ಯಥಾಸ್ಥಿತಿಗೆ ಮತ್ತಷ್ಟು ಪರಿಣಾಮ ಬೀರುವ ಯಾವುದೇ ಆದೇಶಗಳನ್ನು ಜಾರಿಗೊಳಿಸಬಾರದು ಎಂದೂ ಆದೇಶ ನೀಡಿದೆ. ಅಲ್ಲದೆ ಒಕ್ಕೂಟ ಸರಕಾರ ಇನ್ನು ನಾಲ್ಕು ವಾರದ ಒಳಗೆ ಪ್ರತಿ-ಅಫಿಡವಿಟ್ ಸಲ್ಲಿಸಬೇಕು ಎಂದೂ ನಿರ್ದೇಶಿಸಿದೆ. ಅಗೆ
ಕಳೆದ ನಾಲ್ಕು ವರ್ಷಗಳಲ್ಲಿ ಇಂತಹ ಈ ಹಿಂದಿನ ಆದೇಶಕ್ಕೆ ಎಂಟು ಬಾರಿ ವಿಸ್ತರಣೆಗಳನ್ನು ನೀಡಿದರೂ ಸರಕಾರ ಇನ್ನೂ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪಾಲಿಸಿಲ್ಲ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಎಂಟನೇ ಬಾರಿಗೆ ಸರಕಾರದ ಪರವಾಗಿ ಸಾಲಿಸಿಟರ್ ಜನರಲ್ ಇನ್ನಷ್ಟು ಸಮಯ ಕೇಳಿದಾಗ, ಆಗಿನ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಪೀಠ, ತಡಮಾಡದೆ ಅಕ್ಟೋಬರ್ 31, 2023ರ ವರೆಗೆ ಸಮಯ ನೀಡಿತು. ಅಗೆ
ಇದನ್ನೂ ಓದಿ: ಅಪ್ರಾಪ್ತ ಬಾಲಕಿ ಅತ್ಯಾಚಾರ ಎಸಗಿರುವಂತಹ ಶಿಕ್ಷಕನಿಗೆ ಕಠಿಣ ಶಿಕ್ಷೆ ಆಗಬೇಕು: ಡಾ.ಮೀನಾಕ್ಷಿ ಬಾಳಿ
ಇದನ್ನು ಆಕ್ಷೇಪಿಸಿದ ಅರ್ಜಿದಾರರಲ್ಲಿ ಒಬ್ಬರು ಸರಕಾರ ವಿಚಾರಣೆಯನ್ನು ವಿಳಂಬಗೊಳಿಸುತ್ತದೆಯಷ್ಟೇ ಎಂದು ದೂರಿದರು. ಆಗ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ “ಅದಕ್ಕಾಗಿ ಅಕ್ಟೋಬರ್ 31 ರ ವರೆಗೆ ಸಮಯ ಕೊಡುತ್ತಿದ್ದೇವೆ. ಅವರ ಸ್ಪಂದನೆ ಹೇಗಿರುತ್ತದೆ ನೋಡೋಣ” ಎಂದರಂತೆ. ( ದಿ ವೈರ್, ಜುಲೈ 11,2023). ಆದರೆ ಅಕ್ಟೋಬರ್ 31 ಬಂತು, ಹೋಯಿತು, ಸರಕಾರದ ಪ್ರತಿ-ಅಫಿಡವಿಟ್ ಮಾತ್ರ ಬರಲೇ ಇಲ್ಲ. ‘ನೋಡೋಣ’ ಎಂದ ನ್ಯಾಯಾಲಯವೂ ‘ನೋಡ’ಲಿಲ್ಲ. ಹೊಸ ಮುಖ್ಯ ನ್ಯಾಯ ಮೂರ್ತಿಗಳು ಅಧಿಕಾರ ವಹಿಸಿಕೊಂಡ ಮೇಲಷ್ಟೇ, ಈ ಅರ್ಜಿಗಳ ವಿಚಾರಣೆ ಆರಂಭವಾಗಿರುವುದು.
ಈ ಕಾಯ್ದೆಯನ್ನು ರದ್ದುಮಾಡಬೇಕೆಂಬ ಅರ್ಜಿಯನ್ನು ಮೊದಲು ಸಲ್ಲಿಸಿದ್ದ ಬಿಜೆಪಿ ಮುಖಂಡರು ಮತ್ತು ವಿಹೆಚ್‌ಪಿ ಮತ್ತಿತರರಿಗೆ 1991ರ ಕಾಯ್ದೆಯನ್ನು ರದ್ದು ಮಾಡುವ ತಮ್ಮ ಬೇಡಿಕೆ ಸರಿಯಾದದ್ದು ಮತ್ತು ನ್ಯಾಯಪೂರ್ಣವಾದದ್ದು ಎಂದು ಅಷ್ಟೊಂದು ಖಚಿತವಾಗಿದ್ದರೆ, ಆಳುವ ಪಕ್ಷ ತನ್ನ “ಭಾರೀ ಸಂಸದೀಯ
ಬಹುಮತ”ವನ್ನು ಬಳಸಿ ಅದನ್ನು ರದ್ದುಮಾಡಬೇಕೆಂದು ಕೇಳುವ ದಾರಿಯಲ್ಲಿ ಸಾಗಬಹುದಿತ್ತಲ್ಲ ಎಂದು ಹಿರಿಯ ಪತ್ರಕರ್ತ ಹರೀಶ್ ಖರೆಯವರು ಎತ್ತಿರುವ ಪ್ರಶ್ನೆ (ದಿ ವೈರ್,ಡಿ.10)ಇಲ್ಲಿ ಬಹಳ ಸಮಂಜಸವಾಗಿ ಕಾಣುತ್ತದೆ. ಆಗ ಸರಕಾರ ಈ ರೀತಿ ದೇಶದ ಸರ್ವೋಚ್ಚ ನ್ಯಾಯಾಲಯದ ಆದೇಶಗಳ ಬಗ್ಗೆಯೂ ಮೌನವಾಗಿರುವ
ಅಗತ್ಯವಿರುತ್ತಿರಲಿಲ್ಲವೇನೋ! ಅಗೆ
ಈಗ 10 ಧಾರ್ಮಿಕ ಸ್ಥಳಗಳ ಮೇಲೆ18 ಅರ್ಜಿಗಳು ನ್ಯಾಯಾಲಯಗಳ ಮುಂದಿವೆ, ಅವು ಹಲವೆಡೆಗಳಲ್ಲಿ ಗಂಭೀರ ಪರಿಸ್ಥಿತಿಯನ್ನು ಸೃಷ್ಟಿಸಿವೆ, ಈಗಾಗಲೇ ನಾಲ್ಕು ಜೀವಗಳನ್ನು ಬಲಿ ತೆಗೆದುಕೊಂಡಿವೆ. ಇಂತಹ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯದ ಈ ಮಧ್ಯಪ್ರವೇಶ ಬಂದಿರುವುದು, ಸಿವಿಲ್ ಕೋರ್ಟ್ ಗಳು ಸುಪ್ರಿಂ ಕೋರ್ಟಿನೊಂದಿಗೆ ಓಟದ ಸ್ಪರ್ಧೆಗೆ ಇಳಿಯಲು ಸಾಧ್ಯವಿಲ್ಲ ಎನ್ನುತ್ತ ನ್ಯಾಯಪೀಠ ಈ ಆದೇಶವನ್ನು ಪ್ರಕಟಿಸಿರುವುದು ಗಮನಾರ್ಹ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. ಅಗೆ
ವಾರಣಾಸಿಯ ಜ್ಞಾನವಾಪಿ ಮಸೀದಿಯ ಸರ್ವೆಗೆ ಜಿಲ್ಲಾ ನ್ಯಾಯಾಲಯ ಅವಕಾಶ ನೀಡಿದ್ದನ್ನು ಮುಂದುವರೆಸಲು ಆಗಿನ ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರ ನೇತೃತ್ವದ ಪೀಠ ಅವಕಾಶ ನೀಡಿದ್ದನ್ನು ಅನುಸರಿಸಿ 1991ರ ಪೂಜಾಸ್ಥಳಗಳ ಕಾಯ್ದೆಯನ್ನು ರದ್ದುಪಡಿಸಬೇಕೆಂದು ಕೇಳುವ ಇಂತಹ ಅರ್ಜಿಗಳ ಈ ಮಹಾಪೂರ ಬಂದಿವೆ ಎಂಬುದನ್ನು ಗಮನಿಸಬೇಕು. 2019ರಲ್ಲಿ ಬಾಬ್ರಿ ಮಸೀದಿ/ ರಾಮಜನ್ಮಭೂಮಿ ವ್ಯಾಜ್ಯದ ಮೇಲಿನ ತೀರ್ಪಿನಲ್ಲಿ ಸ್ವತಃ ನ್ಯಾಯಮೂರ್ತಿ ಚಂದ್ರಚೂಡ್ ಅವರೂ ಇದ್ದ ಐವರು ನ್ಯಾಯಾಧೀಶರ ಪೀಠ ಈ ಕಾಯ್ದೆಯ ಸಿಂಧುತ್ವವನ್ನು ಎತ್ತಿ ಹಿಡಿದಿತ್ತು,ಈಗಿರುವ ಯಾವುದೇ ಪೂಜಾಸ್ಥಳದ ವಿರುದ್ಧ ದಾವೆಗಳಿಗೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದೂ ಹೇಳಿತ್ತು ಎಂಬುದೂ ಕೂಡ ಇಲ್ಲಿ ಗಮನಾರ್ಹ (ಅದು ‘ದೈವಪ್ರೇರಣೆ’ಯ ತೀರ್ಪು, ಅದನ್ನು ಇವರೇ ಬರೆದದ್ದು ಎಂಬುದನ್ನೂ ಇತ್ತೀಚೆಗಷ್ಟೇ ಪ್ರಕಟಿಸಲಾಗಿದೆ). ಅಗೆ
“ಚರಿತ್ರೆ ನನ್ನ ಅಧಿಕಾರಾವಧಿಯನ್ನು
ಹೇಗೆ ವಿಮರ್ಶಿಸುತ್ತದೆ”
ಎಂದು ಹಿಂದಿನ ಮುಖ್ಯ ನ್ಯಾಯ ಮೂರ್ತಿಗಳು
ತಮ್ಮ ನಿವೃತ್ತಿಯ ಕೆಲವು ದಿನಗಳ ಮೊದಲು
ಜಿಜ್ಞಾಸೆ ವ್ಯಕ್ತಪಡಿಸಿದ್ದರಂತೆ
ವ್ಯಂಗ್ಯಚಿತ್ರ ಕೃಪೆ:
ಸತೀಶ ಆಚಾರ್ಯ
ಆದರೆ ಅದೇ ನ್ಯಾಯಮೂರ್ತಿ ಚಂದ್ರಚೂಡ್‌ರವರು ಮೇ 2022ರಲ್ಲಿ ಸರ್ವೆ ಮುಂದುವರೆಸಲು ಅನುಮತಿ ನೀಡುತ್ತ ಧಾರ್ಮಿಕ ಸ್ಥಳಗಳ ಸರ್ವೆ ನಡೆಸುವುದಕ್ಕೆ ಈ ಕಾಯ್ದೆಯಲ್ಲಿ ನಿಷೇಧವೇನೂ ಇಲ್ಲ ಎಂದು ಅದಕ್ಕೆ ಸಮರ್ಥನೆ ನೀಡಿದರು. ಈಗ ಇದಕ್ಕೆ ವ್ಯತಿರಿಕ್ತವಾಗಿ, ಅದೇ ನ್ಯಾಯಾಲಯದ ಪ್ರಸಕ್ತ ಮುಖ್ಯ ನ್ಯಾಯಮೂರ್ತಿಗಳ ಪೀಠ ಇಂತಹ ಎಲ್ಲ ಸರ್ವೇಗಳನ್ನು ಸದ್ಯಕ್ಕೆ ನಿಲ್ಲಿಸಬೇಕು ಎಂದು ಆದೇಶ ನೀಡಿರುವುದಲ್ಲದೆ, ಈ ಕಾಯ್ದೆ “ಈಗಾಗಲೇ ಸಾಂವಿಧಾನಿಕ ತತ್ವಗಳಲ್ಲಿ ಅಂತರ್ಗತವಾಗಿರುವುದರ ಪುನರುಚ್ಚಾರವಷ್ಟೇ ಎಂಬ ಒಂದು ಅಭಿಪ್ರಾಯವಿದೆ….ಐವರು ನ್ಯಾಯಾಧೀಶರ ಒಂದು ತೀರ್ಪು ಇದೆ….” ಎಂದು ಹೇಳಿರುವುದು ಮಹತ್ವದ ಸಂಗತಿ.
ಈ ವಿಚಾರಣೆ ಆರಂಭವಾಗುವ ಕೆಲವೇ ಗಂಟೆಗಳ ಮೊದಲು ಅಲಹಾಬಾದ್ ಹೈಕೋರ್ಟಿನ ಇಬ್ಬರು ನ್ಯಾಯಾಧೀಶರು, ಹೈಕೋರ್ಟಿನ ಆವರಣದಲ್ಲೇ ವಿಹೆಚ್‌ಪಿ ಏರ್ಪಡಿಸಿದ್ದ ಸಮಾರಂಭದಲ್ಲಿ ಭಾಗವಹಿಸಿದ್ದು, ಅಲ್ಲಿ ನ್ಯಾಯಮೂರ್ತಿ ಶೇಖರ್‌ಕುಮಾರ್ ಯಾದವ್ ಈ ದೇಶ ಬಹುಸಂಖ್ಯಾತರ ಆಧಾರದಲ್ಲಿ ನಡೆಯುತ್ತದೆ ಎಂದು ಸಾರಿರರುವುದು ಕೇವಲ ಕಾಕತಾಳೀಯವಲ್ಲ ಎನ್ನುತ್ತಾರೆ ರಾಜಕೀಯ ವೀಕ್ಷಕರು. ಈ ಭಾಷಣಕ್ಕೆ ವ್ಯಾಪಕ ಪ್ರಚಾರ ನೀಡಲಾಗಿದೆ, ಅದಕ್ಕೆ ಮೊದಲು ಪ್ರಧಾನಿಗಳು ಆಗಿನ ಮುಖ್ಯ ನ್ಯಾಯಾಧೀಶರ ಮನೆಯಲ್ಲಿ ಗಣೇಶ ಪೂಜೆಯಲ್ಲಿ ಭಾಗವಹಿಸಿದ್ದಕ್ಕೂ ಬಹಳ ಪ್ರಚಾರ ನೀಡಲಾಗಿದೆ ಎಂಬುದನ್ನೂ ಕೂಡ ಈ ಹಿನ್ನೆಲೆಯಲ್ಲಿ ಗಮನಿಸಬಹುದಾಗಿದೆ ಎಂದು ಅವರು ಹೇಳುತ್ತಾರೆ.
ವ್ಯಂಗ್ಯಚಿತ್ರ ಕೃಪೆ: ಪಿ. ಮಹಮ್ಮದ್
ಇದನ್ನೂ ನೋಡಿ: ಅಟ್ಟೆಯ ಚುಚ್ಚುವ ಉಳಿಯ ಮೊನೆಯಲ್ಲಿ, ಪ್ರತ್ಯಕ್ಷವಾದ Janashakthi Media