ವಲಸಿಗರನ್ನು ಪಂಜರದ ಪಶುಗಳಂತೆ ಕಾಣುವ ಅಮಾನವೀಯತೆ : ಬಂಡವಾಳಶಾಹಿಯ ಸೃಷ್ಟಿ

ಮುಂದುವರೆದ ಬಂಡವಾಳಶಾಹಿ ದೇಶಗಳಲ್ಲಿ ಜನಾಂಗಭೇದ ಎಂಬುದು ಒಂದು ಪೂರ್ವಾಗ್ರಹವಾಗಿ ಬಹು ಕಾಲದಿಂದಲೂ ಸುಪ್ತವಾಗಿ ಉಳಿದಿದೆ. ಬಿಕ್ಕಟ್ಟಿನ ಅವಧಿಗಳಲ್ಲಿ, ಅದು ಒಂದು ಹೊಸ ಪ್ರಚೋದನೆಯನ್ನು ಪಡೆಯುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಹಿಂದಿನ ಸಮಾಜವಾದಿ ದೇಶಗಳಲ್ಲಿ, ಟ್ರಂಪ್‌ಶಾಹಿಯಂತಹ ಒಂದು ಪ್ರವೃತ್ತಿಯ ಉತ್ಥಾನಕ್ಕಂತೂ ಯಾವುದೇ ಆಸ್ಪದವಿರಲಿಲ್ಲ. ನಾವು ಬಂಡವಾಳಶಾಹಿ ವ್ಯವಸ್ಥೆಯನ್ನು ಅನುಸರಿಸುವವರೆಗೂ, ಅದು ಕೋಟ್ಯಾಧಿಪತಿಗಳನ್ನು ಸೃಷ್ಟಿಸುತ್ತಿರಬಹುದಾದರೂ, ವಸಾಹತುಶಾಹಿ ಯುಗದಲ್ಲಿ ಅಂಟಿಕೊಂಡ “ಕೆಳವರ್ಗದ” ಭಾರತೀಯರು ಎಂಬ ಕಳಂಕವು ಎಂದಿಗೂ ಬಿಡುವುದಿಲ್ಲ. ದುಡಿಯುವ ಸಾಮಾನ್ಯ ಜನರನ್ನು ದನಗಳಂತೆ ನಡೆಸಿಕೊಳ್ಳುವುದು ಮುಂದುವರಿಯುತ್ತದೆ; ಒಂದು ಸಮಾಜವಾದಿ ಸಮಾಜ ಮಾತ್ರವೇ ನಿರುದ್ಯೋಗದ ಪಿಡುಗನ್ನು ಮತ್ತು ನಮ್ಮ ಜನರನ್ನು ಪಂಜರದ ಪಶುಗಳಂತೆ ನಡೆಸಿಕೊಳ್ಳುವ ದುರದೃಷ್ಟವನ್ನು ನಿವಾರಿಸಬಹುದು. ಪಶು

-ಪ್ರೊ.  ಪ್ರಭಾತ್ ಪಟ್ನಾಯಕ್
-ಅನು: ಕೆ.ಎಂ.ನಾಗರಾಜ್

ಪ್ರಖ್ಯಾತ ಮಾರ್ಕ್ಸ್ವಾದಿ ತತ್ವಶಾಸ್ತ್ರಜ್ಞ ಜಾರ್ಜ್ ಲುಕಾಕ್ಸ್, “ಅತ್ಯಂತ ಕೆಟ್ಟದ್ದಾದ ಸಮಾಜವಾದವೂ ಸಹ ಅತ್ಯುತ್ತಮವಾದ ಬಂಡವಾಳಶಾಹಿಗಿಂತ ಮೇಲು” ಎಂದು ಒಮ್ಮೆ ಹೇಳಿದ್ದರು. ಅವರ ಈ ಹೇಳಿಕೆಯು ಸೋವಿಯತ್ ಒಕ್ಕೂಟದಲ್ಲಿ ಮತ್ತು ಪೂರ್ವ ಯುರೋಪಿನಲ್ಲಿ ವಾಸ್ತವಿಕವಾಗಿ ಅಸ್ತಿತ್ವದಲ್ಲಿದ್ದ ಸಮಾಜವಾದದ ಬಗ್ಗೆ ಅವರು ಹೊಂದಿದ್ದ ಗ್ರಹಿಕೆಯನ್ನು ಆಧರಿಸಿತ್ತು. ಲುಕಾಕ್ಸ್ ವ್ಯಕ್ತಪಡಿಸಿದ ಈ ಅಭಿಪ್ರಾಯವನ್ನು ಅಂದಿನ ಪಾಶ್ಚ್ಯಾತ್ಯ ಎಡ ವಲಯಗಳೇ ಒಪ್ಪಿಕೊಂಡಿರಲಿಲ್ಲ. ಇತ್ತೀಚೆಗೆ ಮಹಿಳೆಯರು ಮತ್ತು ಮಕ್ಕಳೂ ಸೇರಿದಂತೆ, ಅಮೆರಿಕದಿಂದ ಗಡೀಪಾರು ಮಾಡಲಾದವರ ಕೈಗಳಿಗೆ ಕೋಳ ತೊಡಿಸಿ ಕಾಲುಗಳನ್ನು ಸರಪಳಿಯಿಂದ ಬಿಗಿದು ಮಿಲಿಟರಿ ವಿಮಾನಗಳಲ್ಲಿ ಭಾರತ ಮತ್ತು ಇತರ ಮೂರನೇ ಜಗತ್ತಿನ ದೇಶಗಳಿಗೆ ರವಾನಿಸಿದ ಇಡೀ ಪ್ರಸಂಗವು ಲುಕಾಕ್ಸ್ ಅವರ ಹೇಳಿಕೆಯನ್ನು ಜ್ಞಾಪಿಸುತ್ತದೆ. ಸೋವಿಯತ್ ಒಕ್ಕೂಟದಲ್ಲಿ ಮತ್ತು ಪೂರ್ವ ಯುರೋಪಿನಲ್ಲಿ ವಾಸ್ತವಿಕವಾಗಿ ಅಸ್ತಿತ್ವದಲ್ಲಿದ್ದ ಸಮಾಜವಾದದ ಕನಿಷ್ಠ ಎರಡು ಇಷ್ಟವಾಗುವ ಲಕ್ಷಣಗಳು ಅದನ್ನು ಯಾವುದೇ ಬಂಡವಾಳಶಾಹಿ ದೇಶದಿಂದ ಭಿನ್ನವಾಗಿಸುತ್ತವೆ. ಪಶು

ಮೊದಲನೆಯದು, ವಿಶ್ವದ ಪ್ರಮುಖ ಬಂಡವಾಳಶಾಹಿ ದೇಶವು ವಲಸಿಗರನ್ನು ಗಡೀಪಾರು ಮಾಡಿದ ಕ್ರಮದ ಹಿಂದಿರುವ ತಾತ್ಸಾರ, ನಿಜ ಹೇಳಬೇಕೆಂದರೆ ಜನಾಂಗದ್ವೇಷದಿಂದ ತುಂಬಿದ ತಾತ್ಸಾರ. ಸಮಾಜವಾದಿ ದೇಶಗಳು ಅಧಿಕೃತವಾಗಿ ಜನಾಂಗದ್ವೇಷದಿಂದ ಪೂರ್ಣವಾಗಿ ಮುಕ್ತವಾಗಿದ್ದವು. ಸಮಾಜವಾದಿ ಸರ್ಕಾರಗಳು ಅಧಿಕೃತವಾಗಿ ಹೊಂದಿದ್ದ ನಿಲುವುಗಳ ಹೊರತಾಗಿಯೂ, ಆ ದೇಶಗಳಲ್ಲಿಯೂ ಸಹ ಆ ಸಮಯದಲ್ಲಿ ಜನಾಂಗೀಯ ಪೂರ್ವಾಗ್ರಹಗಳು ಜನರ ಮನಸ್ಸಿನಲ್ಲಿ ಸುಪ್ತವಾಗಿದ್ದಿರಬಹುದು ಮತ್ತು ಆ ದೇಶಗಳಲ್ಲಿ ಸಮಾಜವಾದವು ಪತನವಾದ ನಂತರ ಈ ಪೂರ್ವಾಗ್ರಹಗಳು ಮುನ್ನೆಲೆಗೆ ಬಂದವು ಎಂಬುದನ್ನು ಬಲ್ಲೆವು. ಇತ್ತೀಚಿನ ದಿನಗಳಲ್ಲಿ ಮುಂದುವರಿದ ಬಂಡವಾಳಶಾಹಿ ದೇಶಗಳ ಪ್ರಗತಿಪರ ಶಕ್ತಿಗಳು ಅಲ್ಲಿ ಜನಾಂಗೀಯ ಸಹನೆಯ ಸಮಾಜವನ್ನು, ಜನಾಂಗೀಯವಾಗಿಯೂ ಸಹನಾಶೀಲವಾಗಿರುವ ಒಂದು ಸಮಾಜವನ್ನು ನಿರ್ಮಿಸುವಲ್ಲಿ ಅಪಾರ ಪ್ರಯತ್ನಗಳನ್ನು ಮಾಡುತ್ತಿವೆ ಎಂಬುದನ್ನೂ ಬಲ್ಲೆವು. ಇತ್ತೀಚಿಗೆ ಅಮೆರಿಕಾದಲ್ಲಿ ಗಡೀಪಾರು ಪ್ರಕರಣಗಳಲ್ಲಿ ತೋರಿದ ಅಮಾನವೀಯತೆ ವಸ್ತುತಃ ಬಂಡವಾಳಶಾಹಿಯದ್ದಲ್ಲ, ಬದಲಿಗೆ ಟ್ರಂಪ್‌ಶಾಹಿಯದ್ದು, ಅಂದರೆ, ಪ್ರಸ್ತುತ ಯುಎಸ್‌ನಲ್ಲಿ ಅಧಿಕಾರದ ಲಗಾಮು ಹೊಂದಿರುವ ನವ-ಫ್ಯಾಸಿಸ್ಟ್ ಕೂಟದ ಕಡು ಅಮಾನವೀಯತೆಯೇ ಅದಕ್ಕೆ ಕಾರಣ ಎಂದು ಅನೇಕರು ಹೇಳುತ್ತಾರೆ. ಪಶು

ಬಂಡವಾಳಶಾಹಿ, ಜನಾಂಗದ್ವೇಷ ಮತ್ತು ಟ್ರಂಪ್ಶಾಹಿ

ಟ್ರಂಪ್‌ಶಾಹಿ ಮತ್ತು ಬಂಡವಾಳಶಾಹಿ, ಇವೆರಡೂ ಒಂದೇ ಅಲ್ಲ ಎಂಬುದು ಹೌದಾದರೂ, ಟ್ರಂಪ್‌ಶಾಹಿ ಎಂಬದೊಂದು ಪೂರ್ತಿಯಾಗಿ ಭಿನ್ನವಾದ ಅನ್ಯಲೋಕದ ವಿದ್ಯಮಾನವೆಂದು ನೋಡುವುದು ತಪ್ಪಾಗುತ್ತದೆ. ಆಧುನಿಕ ಯುಗದಲ್ಲಿ ಜನಾಂಗಭೇದ ನೀತಿಯು ಸಾಮ್ರಾಜ್ಯಶಾಹಿಯ ಒಂದು ಉತ್ಪನ್ನ ಮತ್ತು ಈ ಸಾಮ್ರಾಜ್ಯಶಾಹಿ ಎಂಬುದಿಲ್ಲದೆ ಒಂದು ಉತ್ಪಾದನಾ ವಿಧಾನವಾಗಿ ಬಂಡವಾಳಶಾಹಿಯನ್ನು ಊಹಿಸಿಕೊಳ್ಳುವುದೂ ಸಾಧ್ಯವಿಲ್ಲ. ಬಂಡವಾಳಶಾಹಿಯ ಅಡಿಯ ಪ್ರಗತಿಶೀಲ ಪ್ರವೃತ್ತಿಗಳೂ ಸಹ ಸಾಮ್ರಾಜ್ಯಶಾಹಿಯನ್ನು ಭೂತಕಾಲದ ಶೋಷಣೆಯ ಒಂದು ಅಸಹ್ಯಕರ ವಿದ್ಯಮಾನವೆಂದು ಧಿಕ್ಕರಿಸುವುದಿಲ್ಲ. ಬದಲಿಗೆ, ಅದನ್ನು ದೂರದ ಸಮಾಜಗಳಿಗೆ ಪ್ರಗತಿಯನ್ನು ಮತ್ತು “ಆಧುನಿಕತೆ”ಯನ್ನು ತಂದ ಒಂದು ವಿದ್ಯಮಾನವೆಂದು ಅವು ನೋಡುತ್ತವೆ. ಅಂತಹ ಸಮಾಜಗಳು ತಾವಾಗಿಯೇ ಪ್ರಗತಿಯನ್ನು ಮತ್ತು “ಆಧುನಿಕತೆಯನ್ನು” ಸಾಧಿಸಲು ಅಸಮರ್ಥವಾಗಿವೆ, ಅವುಗಳಿಗೆ ಸಾಮ್ರಾಜ್ಯಶಾಹಿ ಹಿತಕಾರಿ ಎಂಬ ಈ ಕಣ್ಣೋಟದಲ್ಲಿ ಇಂತಹ ಸಾಮ್ರಾಜ್ಯಶಾಹಿ ಯೋಜನೆಯಲ್ಲಿ ತೊಡಗಿರುವಂತದ್ದು ಒಂದು ಶ್ರೇಷ್ಟ ಜನಾಂಗ ಎಂಬ ನಂಬಿಕೆ ಅಡಕವಾಗಿದೆ. ಪಶು

ಇದನ್ನೂ ಓದಿ: ಪೊಲೀಸ್ ಠಾಣೆಯಿಂದ ಕೇವಲ 100 ಮೀಟರ್ ದೂರದಲ್ಲಿ ನಿಲ್ಲಿಸಿದ್ದ ಬಸ್ಸಿನೊಳಗೆ ಪುಣೆಯ ಮಹಿಳೆ ಮೇಲೆ ಅತ್ಯಾಚಾರ

ಸಮಕಾಲೀನ ಮುಂದುವರೆದ ದೇಶಗಳಲ್ಲಿನ ಪ್ರಗತಿಶೀಲ ಪ್ರವೃತ್ತಿಯ ಆಶಯಗಳು ಎಷ್ಟೇ ಮಹೋನ್ನತವಾಗಿದ್ದರೂ, ಸಾಮ್ರಾಜ್ಯಶಾಹಿಯನ್ನು ಅದು ಧಿಕ್ಕರಿಸುವ ವರೆಗೂ ಅದು ಜನಾಂಗಭೇದ ನೀತಿಯ ಕಳಂಕದಿಂದ ತನ್ನನ್ನು ಮುಕ್ತಗೊಳಿಸಿಕೊಳ್ಳುವುದು ಸಾಧ್ಯವಿಲ್ಲ. ಮತ್ತು, ಅದು ಸಾಮ್ರಾಜ್ಯಶಾಹಿಯನ್ನು ಧಿಕ್ಕರಿಸುವುದಿಲ್ಲ ಎಂಬುದು ಈ ಎಲ್ಲ ಮುಂದುವರೆದ ದೇಶಗಳು ಬೆಂಬಲಿಸುವ ಎರಡು ಇತ್ತೀಚಿನ ಯುದ್ಧಗಳಿಗೆ – ಒಂದು ಇಡೀ ಜನತೆಯ ವಿರುದ್ಧ ನಡೆಸಿರುವ ನರಮೇಧ ಮತ್ತು ಇನ್ನೊಂದು ಪಾಶ್ಚ್ಯಾತ್ಯ ಸಾಮ್ರಾಜ್ಯಶಾಹಿ ವಿಸ್ತರಣೆಯ ಫಲ – ಎಲ್ಲ ಪ್ರಗತಿಪರ ಶಕ್ತಿಗಳ ಒಟ್ಟಾರೆ ಬೆಂಬಲದ ಮೂಲಕ ಸ್ಪಷ್ಟವಾಗುತ್ತದೆ. ಪಶು

ಬೇರೆ ರೀತಿಯಲ್ಲಿ ಹೇಳುವುದಾದರೆ, ಮುಂದುವರೆದ ದೇಶಗಳಲ್ಲಿ ಜನಾಂಗಭೇದ ಎಂಬುದು ಒಂದು ಪೂರ್ವಾಗ್ರಹವಾಗಿ ಬಹು ಕಾಲದಿಂದಲೂ ಸುಪ್ತವಾಗಿ ಉಳಿದಿದೆ. ಆಳುವ ವಲಯಗಳೊಳಗಿನ ಉದಾರವಾದಿಗಳೂ ಸೇರಿದಂತೆ, ಆಡಳಿತ ವಲಯಗಳಲ್ಲಿಯೂ ಸಹ ಅದು ಸುಪ್ತವಾಗಿಯೇ ಉಳಿದಿದೆ. ಬಿಕ್ಕಟ್ಟಿನ ಅವಧಿಗಳಲ್ಲಿ, ಏಕಸ್ವಾಮ್ಯ ಬಂಡವಾಳವು ತನ್ನ ಪ್ರಾಬಲ್ಯಕ್ಕೆ ಎದುರಾದ ಬೆದರಿಕೆಗಳ ವಿರುದ್ಧ ತನ್ನ ಸ್ಥಾನವನ್ನು ಬಲಪಡಿಸಿಕೊಳ್ಳಲು ಮತ್ತು ಕಾರ್ಮಿಕ ವರ್ಗವನ್ನು ವಿಭಜಿಸಲು ಕೆಲವು ಅದೃಷ್ಟಹೀನ ವಲಸಿಗ ಗುಂಪುಗಳನ್ನು “ಅನ್ಯ”ರನ್ನಾಗಿ ಬಿಂಬಿಸಲು ಬಳಸುವಾಗ ಈ ಜನಾಂಗಭೇದವು ಒಂದು ಹೊಸ ಪ್ರಚೋದನೆಯನ್ನು ಪಡೆಯುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಹಿಂದಿನ ಸಮಾಜವಾದಿ ದೇಶಗಳಲ್ಲಿ, ಆಳುವ ರಾಜಕೀಯ ವ್ಯವಸ್ಥೆಯು ಜನಾಂಗಭೇದವನ್ನು ಸಂಪೂರ್ಣವಾಗಿ ವಿರೋಧಿಸಿತ್ತು ಮತ್ತು ಸಮಾಜದಲ್ಲಿ ಅದರ ಯಾವುದೇ ಅಭಿವ್ಯಕ್ತಿಯನ್ನು ನಿಗ್ರಹಿಸಿತ್ತು. ಇದನ್ನು ಒಂದು ಹೇರಿಕೆಯ ಕ್ರಮ ಎಂದು ಅನೇಕರು ವಾದಿಸುತ್ತಾರೆ. ಆದರೆ ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಅದು ಒಂದು ಹೇರಿಕೆಯೋ. ಅಲ್ಲವೋ, ಟ್ರಂಪ್‌ಶಾಹಿಯಂತಹ ಒಂದು ಪ್ರವೃತ್ತಿಯ ಉತ್ಥಾನಕ್ಕೆ ಯಾವುದೇ ಅವಕಾಶಕ್ಕೆ ಅಲ್ಲಿ ಆಸ್ಪದವಿರಲಿಲ್ಲ. ಪಶು

ನಿರುದ್ಯೋಗದ ಪಿಡುಗಿನ ಅನಿವಾರ್ಯ ಫಲಿತ

ಹಿಂದಿನ ಸಮಾಜವಾದಿ ದೇಶಗಳ ಶ್ರೇಷ್ಠತೆಯನ್ನು ತೋರಿಸಿಕೊಟ್ಟ ಎರಡನೇ ಅಂಶವನ್ನು ನೋಡೋಣ. ಅದೆಂದರೆ, ಪೂರ್ಣ ಉದ್ಯೋಗದ ಸಾಧನೆ. ಪ್ರಾಸಂಗಿಕವಾಗಿ ಹೇಳುವುದಾದರೆ, ನಿರುದ್ಯೋಗ ಎಂಬುದನ್ನು ಅದು ತೊಡೆದು ಹಾಕಿತು. ಒಂದು ಪ್ರಮುಖವಾದ ಮತ್ತು ಸಾರಭೂತ ಅಂಶವಾದ ನಿರುದ್ಯೋಗವನ್ನು ಅದು ತೊಡೆದುಹಾಕಿತು. ಮುಂದುವರಿದ ಬಂಡವಾಳಶಾಹಿ ದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ವಲಸಿಗರ ಮೇಲಿನ ದ್ವೇಷಕ್ಕೆ ಇದುಒಂದು ಬಹು ಪ್ರಮುಖ ಕಾರಣ. ಅದನ್ನು ಹಿಂದಿನ ಸಮಾಜವಾದಿ ದೇಶಗಳು ನಿವಾರಿಸಿದವು. ಪಶು

ಮೂರನೆಯ ಜಗತ್ತಿನ ದೇಶಗಳ ಜನ ಅಮೆರಿಕದಂತಹ ದೇಶಗಳಿಗೆ ವಲಸೆ ಹೋಗ ಬಯಸುವ ಕಾರಣವೆಂದರೆ, ಈ ದೇಶಗಳಲ್ಲಿರುವ ಅತಿಯಾದ ನಿರುದ್ಯೋಗವೇ. ನಿಜ, ವಲಸೆ ಹೋಗುವವರು ನಿರ್ಗತಿಕರೇನಲ್ಲ. ಪ್ರತಿಯೊಬ್ಬ ವಲಸಿಗನೂ “ಕತ್ತೆ ಮಾರ್ಗ”ದ ಮೂಲಕ ಅಮೆರಿಕವನ್ನು ಪ್ರವೇಶಿಸಲು ವ್ಯವಸ್ಥೆಗೊಳಿಸಿದ ಮಧ್ಯವರ್ತಿಗಳಿಗೆ 40-50 ಲಕ್ಷ ರೂ.ಗಳಷ್ಟು ಹಣವನ್ನು ತೆರಬೇಕಾಗುತ್ತದೆ ಎಂಬ ಅಂಶವು ಅವನ ಬಳಿ ಅಷ್ಟೋ-ಇಷ್ಟೋ ಜೀವನೋಪಾಯ ಇತ್ತು ಎಂಬುದನ್ನು ತೋರಿಸುತ್ತದೆ. ವಲಸೆ ಹೋಗುವ ಅವನ ಬಯಕೆಯು ಖಂಡಿತವಾಗಿಯೂ ಎರಡು ಅಂಶಗಳಿಂದ ಉಂಟಾಗುತ್ತದೆ: ಅರ್ಹತೆಗೆ ತಕ್ಕ ಉದ್ಯೋಗ ಮತ್ತು ಉದ್ಯೋಗಕ್ಕೆ ತಕ್ಕ ಪ್ರತಿಫಲ ದೊರಕದಿರುವ ಪರಿಸ್ಥಿತಿ, ಮತ್ತು, ಅವನ ಸಮಾಜದಲ್ಲಿ ನೆಲೆಸಿರುವ ಅಗಾಧ ಅಸಮಾನತೆಯ ಪರಿಸ್ಥಿತಿಯಲ್ಲಿ ಅವನು ಹೊಂದಿರುವ ಸ್ಥಾನ-ಮಾನ ಮತ್ತು ಅವನಿಗೆ ಒದಗಿದ ಸ್ಥಿತಿ-ಗತಿಗಳು ಅವನನ್ನು ಅತೃಪ್ತನನ್ನಾಗಿ ಮಾಡಿರುವುದು. ಈ ಎರಡೂ ಅಂಶಗಳು ದೇಶದಲ್ಲಿ ಬಂಡವಾಳಶಾಹಿಯನ್ನು ಬೆಳೆಸುವ ಯೋಜನೆಯ ಕಾರಣದಿಂದಾಗಿ ಉದ್ಭವಿಸುತ್ತವೆ. ದೇಶದ ಜಿಡಿಪಿಯ ಬೆಳವಣಿಗೆ ದರ ಎಷ್ಟೇ ಉನ್ನತವಾಗಿರಲಿ, ಜಿಡಿಪಿಯ ಗಾತ್ರ ಎಷ್ಟೇ ಟ್ರಿಲಿಯನ್ ಡಾಲರ್ ಆಗಿರಲಿ, ಈ ಅಂಶಗಳು ಮಾತ್ರ ಇದ್ದೇ ಇರುತ್ತವೆ. ಹಾಗಾಗಿ, ಕೆಲವು ಜನವಿಭಾಗಗಳಲ್ಲಿ ವಲಸೆ ಹೋಗುವ ಬಯಕೆ ಕೂಡ. ಪಶು

ದೇಶಕ್ಕೆ ಸ್ವಾತಂತ್ರ್ಯ ಬಂದ 75 ವರ್ಷಗಳ ನಂತರವೂ, ಜನ ಹತಾಶೆಯಿಂದ ಯಾವುದನ್ನೂ ಲೆಕ್ಕಿಸದೆ, ಇಂತಹ ವಲಸಿಗರನ್ನು ಪ್ರಾಣಿಗಳಂತೆ ನಡೆಸಿಕೊಳ್ಳುವ ಮತ್ತು ಅವರನ್ನು ಪಂಜರದಲ್ಲಿ ಕೂಡಹಾಕಿ ಮನೆಗೆ ಸಾಗಿಸುವಂತಹ ಅಪಾಯವಿದ್ದರೂ ಲೆಕ್ಕಿಸದೆ, ವಲಸೆ ಹೋಗ ಬಯಸುವ ಒಂದು ಸಮಾಜವನ್ನು ಹೊಂದಿದ್ದೇವೆ ಎಂಬುದು ಒಂದು ನಾಚಿಕೆಗೇಡಿನ ಸಂಗತಿಯೇ ಸರಿ. ಇದು, ಮೂರನೇ ಜಗತ್ತಿನ ದೇಶಗಳಲ್ಲಿ ಇಂದು ಬಂಡವಾಳಶಾಹಿ ಸಮಾಜವನ್ನು ನಿರ್ಮಿಸುವ ಪ್ರಯತ್ನದ ಒಂದು ಅನಿವಾರ್ಯ ಫಲಿತಾಂಶವೇ ಆಗಿದೆ. ಪಶು

ಮತ್ತೊಂದೆಡೆಯಲ್ಲಿ, ಸ್ವತಃ ಅಮೆರಿಕನ್ ಸಮಾಜವೇ ಹಲವಾರು ವರ್ಷಗಳ ಹಿಂದೆ ಯುರೋಪಿನಿಂದ ವಲಸೆ ಬಂದು ಸ್ಥಳೀಯ ಜನರಿಗೆ ಸೇರಿದ ಭೂಮಿಯನ್ನು ಕಿತ್ತುಕೊಂಡು ವಲಸೆಯ ಮೂಲಕವೇ ಅಸ್ತಿತ್ವಕ್ಕೆ ಬಂದಿದ್ದರೂ ಸಹ, ಟ್ರಂಪ್ ವಲಸಿಗರನ್ನು ನಿರ್ಭಿಡೆಯಿಂದ ಗಡೀಪಾರು ಮಾಡಲು ಸಾಧ್ಯವಾಗಿರುವುದು, ಅಮೆರಿಕದಲ್ಲಿ ಉಂಟಾಗಿರುವ ಸಾಮೂಹಿಕ ನಿರುದ್ಯೋಗದಿಂದಲೇ. ಬೂರ್ಜ್ವಾ ಆರ್ಥಿಕ ಸಿದ್ಧಾಂತವು, ಒಂದು ಬಂಡವಾಳಶಾಹಿ ಅರ್ಥವ್ಯವಸ್ಥೆಯ ದೀರ್ಘಕಾಲೀನ ಬೆಳವಣಿಗೆಯು ಅದರ ಕಾರ್ಮಿಕ ಬಲದ ಬೆಳವಣಿಗೆಯ ದರವನ್ನು ಅವಲಂಬಿಸಿರುತ್ತದೆ ಎಂಬ ಒಂದು ಸಂಪೂರ್ಣ ಹುಸಿ ವಾದವನ್ನು ಮುಂದಿಡುತ್ತದೆ. ಅದು ಒಂದು ವೇಳೆ ನಿಜವೇ ಆಗಿದ್ದರೆ, ಅಮೆರಿಕಕ್ಕೆ ವಲಸೆ ಬರುವವರನ್ನು ಆ ದೇಶದ ಅರ್ಥವ್ಯವಸ್ಥೆಯ ಬೆಳವಣಿಗೆಯ ದರವನ್ನು ಹೆಚ್ಚಿಸುವ ಒಂದು ಸಾಧನವಾಗಿ ಬರಮಾಡಿಕೊಳ್ಳಬೇಕಾಗಿತ್ತು. ಹಾಗೆ ಆಗಲಿಲ್ಲ. ಮಾತ್ರವಲ್ಲ, ಈ ನಿರುದ್ಯೋಗದ ಪಿಡುಗು, ವಲಸೆಯ ಬಗ್ಗೆ ಟ್ರಂಪ್ ತಳೆದಿರುವ ಕಠಿಣ ನಿಲುವು ಜನಪ್ರಿಯವಾಗುವಂತೆ ಮಾಡಿದೆ. ಪಶು

ಒಟ್ಟಿನಲ್ಲಿ ಪರಿಸ್ಥಿತಿಯ ವಿಪರ್ಯಾಸವೆಂದರೆ, ಜರ್ಮನಿಯ ಸಹ್ರಾ ವಾಗೆನ್‌ನೆಕ್ಟ್ ರವರ ಅತ್ಯಂತ ಎಡಪಂಥೀಯ ಪಕ್ಷವು ಕೂಡ ವಲಸೆಯ ಬಗ್ಗೆ ಜರ್ಮನಿಯ ಅಧಿಕಾರಾರೂಢ ಬಲಪಂಥೀಯ ವ್ಯವಸ್ಥೆಯ ನಿಲುವಿಗಿಂತ ಭಿನ್ನವಾಗಿರದಂತಹ ನಿಲುವು ತಳೆಯುವಂತಾಗಿದೆ. ಈ ಪಕ್ಷ ತನ್ನ ಮಾತೃಪಕ್ಷವಾದ ಎಡಪಂಥೀಯ ‘ಡಿ ಲಿಂಕ್’ ಪಕ್ಷವು ನಾಟೋ ಕೂಟ ನಡೆಸುತ್ತಿರುವ ಯುದ್ಧಗಳಿಗೆ ಪರೋಕ್ಷ ಬೆಂಬಲ ನೀಡಿದ್ದನ್ನು ವಿರೋಧಿಸಿ ಅದರಿಂದ ಹೊರಬಂದ ಪಕ್ಷ ಎಂಬುದನ್ನು ಗಮನಿಸಬೇಕು. ನಿರುದ್ಯೋಗದ ಪಿಡುಗು ಎಷ್ಟೊಂದು ವ್ಯಾಪಕವಾಗಿದೆಯೆಂದರೆ, ಅದು ವಲಸಿಗರ ಮೂಲ ದೇಶ ಮತ್ತು ಅವರು ವಲಸೆಹೊಗಬೇಕೆಂದಿರುವ ದೇಶ ಎರಡನ್ನೂ ಬಾಧಿಸುತ್ತಿದೆ. ಇದು ಬಂಡವಾಳಶಾಹಿಯ ಅಸ್ತಿತ್ವದುದ್ದಕ್ಕೂ ನೆರಳಿನಂತೆ ಅದನ್ನು ಹಿಂಬಾಲಿಸಿರುವ ಪಿಡುಗು. ಅದು ಪ್ರಸ್ತುತ ಬಿಕ್ಕಟ್ಟಿನ ಸಂದರ್ಭದಲ್ಲಿ ಒಂದು ವಿಷಕಾರೀ ಸ್ವರೂಪವನ್ನು ಪಡೆದಿದ್ದು, ನಾವೀಗ ನೋಡುತ್ತಿರುವ ಅಮಾನವೀಯತೆಯ, ಜನರನ್ನು ದನಗಳಂತೆ ಕಾಣುವ ಮತ್ತು ಅವರನ್ನು ಸರಪಳಿಗಳಲ್ಲಿ ಬಿಗಿದು ಗಡೀಪಾರು ಮಾಡುವ ಅಮಾನವೀಯತೆಯ ಹಿಂದೆ ಇರುವ ಅಂಶವಾಗಿದೆ. ಪಶು

‘ಕೆಳವರ್ಗ’ದವರು ಎಂಬ ವಸಾಹತುಶಾಹೀ ಕಳಂಕ

ಇದಕ್ಕೆ ವ್ಯತಿರಿಕ್ತವಾಗಿ, ಹಿಂದಿನ ಸಮಾಜವಾದಿ ಸಮಾಜಗಳು ಈ ಪಿಡುಗಿನಿಂದ ಸಂಪೂರ್ಣವಾಗಿ ಮುಕ್ತವಾಗಿದ್ದವು. ವಾಸ್ತವವಾಗಿ ಅವುಗಳಿಗೆ ಎದುರಾದುದು ನಿರುದ್ಯೋಗವಲ್ಲ. ಬದಲಿಗೆ, ಕಾರ್ಮಿಕರ ಕೊರತೆಯನ್ನು ಅವು ಎದುರಿಸಿದವು. ಮಾರ್ಕ್ಸ್ವಾದಿ ಅರ್ಥಶಾಸ್ತ್ರಜ್ಞ ಮೈಕೆಲ್ ಕಲೆಕಿಯ ಮಾರ್ಗವನ್ನು ಅನುಸರಿಸಿದ ಪ್ರಸಿದ್ಧ ಹಂಗೇರಿಯನ್ ಅರ್ಥಶಾಸ್ತ್ರಜ್ಞ ಯನೋಸ್ ಕೊರ್ನೈ (ಅವರೇನೂ ಸಮಾಜವಾದಿಯಲ್ಲ), “ಬೇಡಿಕೆ-ನಿರ್ಬಂಧಿತ” ಮತ್ತು “ಸಂಪನ್ಮೂಲ-ನಿರ್ಬಂಧಿತ” ಅರ್ಥವ್ಯವಸ್ಥೆಗಳ ನಡುವೆವ್ಯತ್ಯಾಸವಿದೆ ಎಂದರು. ಬಂಡವಾಳಶಾಹಿ ಅರ್ಥವ್ಯವಸ್ಥೆಯು ಒಂದು ಬೇಡಿಕೆ-ನಿರ್ಬಂಧಿತ ವ್ಯವಸ್ಥೆಯಾಗಿದೆ ಮತ್ತು ಸಮಾಜವಾದಿ ಅರ್ಥವ್ಯವಸ್ಥೆಯು ಸಂಪನ್ಮೂಲ-ನಿರ್ಬಂಧಿತ ವ್ಯವಸ್ಥೆಯಾಗಿದೆ ಎಂದು ಅವರು ಹೇಳಿದರು. ಪಶು

ಕೊರತೆ, ಪಡಿತರ ಮತ್ತು ಸರತಿ ಸಾಲುಗಳು ಹಿಂದಿನ ಸಮಾಜವಾದಿ ಸಮಾಜಗಳ ಲಕ್ಷಣಗಳು ಎಂದು ಹೇಳಲಾಗಿತ್ತು; ಅಂದರೆ, ಸಂಪನ್ಮೂಲಗಳ ಪೂರ್ಣ ಬಳಕೆಯೊಂದಿಗೆ ಅವರು ಉತ್ಪಾದಿಸಬಹುದಾದ ಸರಕುಗಳ ಪ್ರಮಾಣವು ಜನರ ಕೊಳ್ಳುವ ಶಕ್ತಿಗಿಂತ ಕಡಿಮೆಯಿತ್ತು ; ಲಭ್ಯವಿರುವ ಶ್ರಮಿಕ ಬಲವನ್ನೂ ಒಳಗೊಂಡಂತೆ ಸಂಪನ್ಮೂಲಗಳನ್ನು ಪೂರ್ಣವಾಗಿ ಬಳಸಿಕೊಳ್ಳಲಾಗಿತ್ತು. ವಾಸ್ತವವಾಗಿ, ಈ ಸಮಾಜವಾದಿ ಸಮಾಜಗಳು ಆಧುನಿಕ ಕಾಲದಲ್ಲಿ ಪೂರ್ಣ ಉದ್ಯೋಗವನ್ನು ಹೊಂದಿದ ಏಕ ಮಾತ್ರ ಸಮಾಜಗಳಾಗಿವೆ. ಎಷ್ಟರಮಟ್ಟಿಗೆ ಎಂದರೆ, ಅವು ಉತ್ಪಾದನೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯ ದರದ ಗಮನಾರ್ಹ ಏರಿಕೆಯ ಮೂಲಕ ಶ್ರಮಿಕ ಬಲವನ್ನು ಹೆಚ್ಚಿಸಿಕೊಳ್ಳಬೇಕಾಯಿತು. ಇದು ಒಂದು ಭಾರೀ ಆಳವಾದಸಾಮಾಜಿಕ ಪರಿಣಾಮವನ್ನೇ ಬೀರಿತು. ಉದ್ಯೋಗವು ಒದಗಿಸುವ ಆದಾಯ ಗಳಿಕೆಯಷ್ಟೇ ಅಲ್ಲ, ನಿರುದ್ಯೋಗದೊಂದಿಗೆ ಅನಿವಾರ್ಯವಾಗಿ ಬರುವ ಸ್ವಾಭಿಮಾನವನ್ನು ಕಳಕೊಳ್ಳುವ ಪರಿಸ್ಥಿತಿಯಿಂದ ಅವರು ಬಾಧೆಪಡಬೇಕಾಗಿರಲಿಲ್ಲ. ಪಶು

ಅನೇಕ ಬರಹಗಾರರು, ಎಡಪಂಥೀಯ ಬರಹಗಾರರೂ ಕೂಡ ಹಿಂದೆ ಅಸ್ತಿತ್ವದಲ್ಲಿದ್ದ ಸಮಾಜವಾದಿ ಸಮಾಜಗಳ ವಿರುದ್ಧವಾಗಿ ಬಹಳಷ್ಟು ಬರೆದಿದ್ದಾರೆ. ಸಮಾಜವಾದಿ ವ್ಯವಸ್ಥೆಯ ಕುಸಿತದ ನಂತರ, ನಮ್ಮಂತಹ ಸಮಾಜಗಳಲ್ಲಿ ಬಂಡವಾಳಶಾಹಿ ವ್ಯವಸ್ಥೆಗೆ ಪರ್ಯಾಯವೇ ಇಲ್ಲ ಎಂಬ ಅಭಿಪ್ರಾಯವನ್ನು ಸೃಷ್ಟಿಸಲಾಗಿದೆ. ಸತ್ಯವೆಂದರೆ, ನಾವು ಬಂಡವಾಳಶಾಹಿ ವ್ಯವಸ್ಥೆಯನ್ನು ಅನುಸರಿಸುವವರೆಗೂ, ಅದು ಕೋಟ್ಯಾಧಿಪತಿಗಳನ್ನು ಸೃಷ್ಟಿಸುತ್ತಿರಬಹುದಾದರೂ, ವಸಾಹತುಶಾಹಿ ಯುಗದಲ್ಲಿ ನಮ್ಮ ಜನರಿಗೆ ಅಂಟಿಕೊಂಡ “ಕೆಳವರ್ಗದ” ಭಾರತೀಯರು ಎಂಬ ಕಳಂಕವು ಎಂದಿಗೂ ಬಿಡುವುದಿಲ್ಲ. ಪಶು

ದುಡಿಯುವ ಸಾಮಾನ್ಯ ಜನರನ್ನು ದನಗಳಂತೆ ನಡೆಸಿಕೊಳ್ಳುವುದು ಮುಂದುವರಿಯುತ್ತದೆ; ಅವರಲ್ಲಿ ಕೆಲವರು ಉತ್ತಮ ಜೀವನವನ್ನು ಅರಸಿ ಸಾಗರದಾಚೆಗೆ ಹೋಗಿಯೇ ಹೋಗುತ್ತಾರೆ, ಅವರನ್ನು ಕೈಕಾಲುಗಳಿಗೆ ಕೋಳ ಬಿಗಿದು ಹಿಂದಕ್ಕೆ ಅಟ್ಟಲಾಗುತ್ತದೆ. ಒಂದು ಸಮಾಜವಾದಿ ಸಮಾಜ ಮಾತ್ರವೇ ನಿರುದ್ಯೋಗದ ಪಿಡುಗನ್ನು ಮತ್ತು ನಮ್ಮ ಜನರನ್ನು ಪಂಜರದ ಪಶುಗಳಂತೆ ನಡೆಸಿಕೊಳ್ಳುವ ದುರದೃಷ್ಟವನ್ನು ನಿವಾರಿಸಬಹುದು. ನಮ್ಮ ದೇಶದಲ್ಲಿ ಹಿಂದಿನ ತಪ್ಪುಗಳಿಂದ ಕಲಿಯುವ ಮೂಲಕ ಇಂತಹ ಒಂದು ಉತ್ತಮವಾದ ಸಮಾಜವಾದಿ ಸಮಾಜವನ್ನು ನಿರ್ಮಿಸಲು ನಮಗೆ ಸಾಧ್ಯವಿದೆ. ಪಶು

ಇದನ್ನೂ ನೋಡಿ: ತ್ರಿಭಾಷ ಸೂತ್ರ ಮತ್ತು ಕಲಿಕಾ ಮಾಧ್ಯಮ – ನಿರಂಜನಾರಾಧ್ಯ.ವಿ.ಪಿJanashakthi Media

Donate Janashakthi Media

Leave a Reply

Your email address will not be published. Required fields are marked *