ಬಂಡವಾಳಶಾಹಿ ವ್ಯವಸ್ಥೆಯ ಚೌಕಟ್ಟಿನೊಳಗೇ ಸಾಮೂಹಿಕ ಬಡತನಕ್ಕೆ ಒಂದು ಪ್ರತ್ಯೌಷದಿಯೆಂದು ಪ್ರಚುರಪಡಿಸಿದ ಮೈಕ್ರೋಫೈನಾನ್ಸ್ ಅಥವ ಕಿರುಸಾಲವ್ಯವಸ್ಥೆಯೇ ಮಹಿಳೆಯರೂ ಸೇರಿದಂತೆ ಜನರನ್ನು ಮತ್ತಷ್ಟು ದಾರಿದ್ರ್ಯಕ್ಕೆ ತಳ್ಳುವ ಒಂದು ಸಾಧನವಾಗಿದೆ ಎಂಬುದನ್ನು ಎಐಡಿಡಬ್ಲ್ಯುಎ ಸುಮಾರು 9,000 ಮಹಿಳೆಯರ ಕಿರು-ಸಾಲದ ಅನುಭವಗಳನ್ನು ಸಂಗ್ರಹಿಸಿ ನಡೆಸಿದ ಒಂದು ಸಮಗ್ರ ಅಧ್ಯಯನವು ಬಹಿರಂಗಪಡಿಸಿದೆ. ಒಂದು ಧ್ರುವದಲ್ಲಿ ಸಂಪತ್ತನ್ನು ಮತ್ತೊಂದು ಧ್ರುವದಲ್ಲಿ ಬಡತನವನ್ನು ಸೃಷ್ಟಿಸುವ ಪ್ರವೃತ್ತಿ ಬಂಡವಾಳಶಾಹಿ ವ್ಯವಸ್ಥೆಯೊಳಗೇ ಅಂತರ್ಗತವಾಗಿರುವಾಗ, ಸಂಪತ್ತಿನ ಅಸಮಾನ ಹಂಚಿಕೆಯ ದುಷ್ಪರಿಣಾಮಗಳನ್ನು ನಿವಾರಿಸಲು ಬಂಡವಾಳಶಾಹಿ ವ್ಯವಸ್ಥೆಯೊಳಗೇ ಕಿರುಸಾಲದಂತಹ ವ್ಯವಸ್ಥೆಗಳನ್ನು ರೂಪಿಸಬಹುದು ಎಂದು ನಂಬುವುದು ಒಂದು ಹುಚ್ಚು ಕಲ್ಪನೆಯಾಗುತ್ತದೆ. ಮತ್ತು ಅದನ್ನು ಒಂದು ಹುಚ್ಚು ಕಲ್ಪನೆಯಾಗಿ ಮಾಡಿರುವುದು ಕೂಡ ಸ್ವತಃ ಬಂಡವಾಳವೇ ಹೊರತು ಬೇರೆ ಯಾವುದೂ ಅಲ್ಲ. ಬಂಡವಾಳಶಾಹಿಯ
ಪ್ರೊ. ಪ್ರಭಾತ್ ಪಟ್ನಾಯಕ್
ಅನು: ಕೆ. ಎಂ. ನಾಗರಾಜ್
ಬಂಡವಾಳಶಾಹಿಯು ತನ್ನ “ಅತಿರೇಕಗಳನ್ನು” ಸರಿಪಡಿಸಿಕೊಳ್ಳುವ ಮೂಲಕ ʻಸ್ಥಿರೀಕರಣ’ ಗೊಳ್ಳುತ್ತದೆ, ಆಮೂಲಕ ತನ್ನ ಅಸ್ತಿತ್ವಕ್ಕೆ ಎದುರಾಗುವ ಯಾವುದೇ ಸಾಮಾಜಿಕ ಸವಾಲನ್ನು ಮುಂಚಿತವಾಗಿಯೇ ತಡೆಯುತ್ತದೆ ಎಂಬ ಒಂದು ದೃಷ್ಟಿಕೋನವು ಅರ್ಥಶಾಸ್ತ್ರಜ್ಞರಲ್ಲಿ ಯಾವಾಗಲೂ ಒಂದಲ್ಲ ಒಂದು ರೂಪದಲ್ಲಿ ಗಟ್ಟಿಯಾಗಿ ಉಳಿದಿದೆ. ಇದು ಬಂಡವಾಳಶಾಹಿಯ “ಅತಿರೇಕಗಳನ್ನು” ತೊಡೆದುಹಾಕುವ ಏಕೈಕ ಮಾರ್ಗವೆಂದರೆ ಬಂಡವಾಳಶಾಹಿಯನ್ನೇ ಮೀರುವುದು ಎಂಬ ಮಾರ್ಕ್ಸ್ವಾದಿ ಗ್ರಹಿಕೆಗೆ ಸಂಪೂರ್ಣ ವ್ಯತಿರಿಕ್ತವಾಗಿದೆ. ಬಂಡವಾಳಶಾಹಿಯನ್ನು ಸರಿಪಡಿಸಲಾಗಿದೆ, ಅದರಿಂದಾಗಿ ‘ಸ್ಥಿರೀಕರಣ’ಗೊಂಡಿದೆ ಎಂಬ ಈ ದೃಷ್ಟಿಕೋನವು ಒಂದು ರೀತಿಯ ಹುಚ್ಚು ಕಲ್ಪನೆ ಎಂಬುದು ಪದೇ ಪದೇ ಕಂಡುಬಂದಿದೆಯಾದರೂ, ಈ ದೃಷ್ಟಿಕೋನವು ಒಂದಲ್ಲ ಒಂದು ರೂಪದಲ್ಲಿ ನಿರಂತವಾಗಿ ಉಳಿದಿದೆ.
ಇಂಗ್ಲಿಷ್ ಅರ್ಥಶಾಸ್ತ್ರಜ್ಞ ಜಾನ್ ಮೇನಾರ್ಡ್ ಕೀನ್ಸ್ ಅವರು ಬಂಡವಾಳಶಾಹಿ ವ್ಯವಸ್ಥೆಯು ಸದಾ ಕಾಲವೂ ಎದುರಿಸುತ್ತಿರುವ ಬೃಹತ್ ಪ್ರಮಾಣದ ಅನಿಯಂತ್ರಿತ ನಿರುದ್ಯೋಗವನ್ನು ಒಳಗೊಂಡ ಅಂಶವೇ ಈ “ಅತಿರೇಕದ” ಸ್ಥಿತಿ ಎಂಬುದಾಗಿ ಕಂಡಿದ್ದಾರೆ. ಬೃಹತ್ ಪ್ರಮಾಣದ ಈ ನಿರುದ್ಯೋಗವು ಆರ್ಥಿಕ ಕುಸಿತಗಳ ಸಂದರ್ಭದಲ್ಲಿ ಮಾತ್ರ ಇರುವ ಸಮಸ್ಯೆಯಲ್ಲ, ದಿನನಿತ್ಯವೂ ಸಹ ಸಾಧಾರಣವಾಗಿ ಇದ್ದೇ ಇರುವ ಸಮಸ್ಯೆಯೇ. ಕೀನ್ಸ್ ಅವರ ಪ್ರಕಾರ ಈ ಸಮಸ್ಯೆಯನ್ನು ಪರಿಹರಿಸುವ ವಿಧಾನವೆಂದರೆ ಪ್ರಭುತ್ವದ ಮಧ್ಯಪ್ರವೇಶದ ಮೂಲಕ ವ್ಯವಸ್ಥೆಯೊಳಗೆ ಬೇಡಿಕೆಯನ್ನು ತುಂಬುವುದೇ ಆಗಿತ್ತು. ಆದರೆ, ಕೀನ್ಸ್ ಪ್ರೇರಿತ ಪ್ರಭುತ್ವದ ಮಧ್ಯಪ್ರವೇಶದ ಮೂಲಕ “ಸರಿಪಡಿಸಲಾಗಿದೆ” ಎಂದು ಹೇಳಲಾದ ಬಂಡವಾಳಶಾಹಿಯು ಸ್ಥಿರೀಕರಣಗೊಳ್ಳುವ ಬದಲು, ಗಣನೀಯ ನಿರುದ್ಯೋಗ ಪರಿಸ್ಥಿತಿಯಲ್ಲಿ ಮತ್ತೊಮ್ಮೆ ಸಿಲುಕಿಕೊಂಡಿತು. ಈ ಬಗ್ಗೆ ಪ್ರಭುತ್ವವು ಹೊಸ ಪರಿಸ್ಥಿತಿಯಲ್ಲಿ ಏನನ್ನೂ ಮಾಡಲಾಗಲಿಲ್ಲ.
ಇದನ್ನೂ ಓದಿ: ಕಠ್ಮಂಡು |ಪ್ರತಿಭಟನೆ ಹಿಂಸಾಚಾರ 25 ಮಂದಿ ಮೃತ – ಪ್ರಧಾನಿ ಕೆ.ಪಿ.ಶರ್ಮಾ ಓಲಿ ರಾಜೀನಾಮೆ
ಒಂದು ಭಿನ್ನ ಸನ್ನಿವೇಶದಲ್ಲಿ, ಮೂರನೇ ಜಗತ್ತಿನ ಸಮಾಜಗಳಲ್ಲಿ ಬಂಡವಾಳಶಾಹಿಯು ಉಂಟುಮಾಡಿದ ಮತ್ತು ಕಾಲಕ್ರಮೇಣ ಹೆಚ್ಚುತ್ತಲೇ ಹೋಗುವ ಸಾಮೂಹಿಕ ಬಡತನವನ್ನು ಕಿರು-ಸಾಲಗಳ(ಮೈಕ್ರೋ-ಕ್ರೆಡಿಟ್) ಮೂಲಕ ಹಿಮ್ಮೆಟ್ಟಿಸಬಹುದು ಮತ್ತು ಸಂಪನ್ಮೂಲಗಳಿಂದ ವಂಚಿತರಾಗುವ ಜನರ ಸಂಖ್ಯೆಯು ನಿರಂತರವಾಗಿ ಬೆಳೆಯುವ ಪರಿಸ್ಥಿತಿಯನ್ನು ತಪ್ಪಿಸಬಹುದು ಮತ್ತು ಆ ಮೂಲಕ ಬಂಡವಾಳಶಾಹಿ ವ್ಯವಸ್ಥೆಯನ್ನು ಮೀರುವ ಅಗತ್ಯವಿಲ್ಲದೇ ಅದನ್ನು ಸ್ಥಿರಗೊಳಿಸಬಹುದು ಎಂಬ ಒಂದು ದೃಷ್ಟಿಕೋನವನ್ನು ಮುಂದಿಡಲಾಯಿತು. ಶೋಷಣಾರಹಿತ ಷರತ್ತುಗಳ ಮೇಲೆ ಸಾಲ ಪಡೆಯುವುದು ಕೆಲವು ಅಂಚಿಗೆ ತಳ್ಳಲ್ಪಟ್ಟ ಕುಟುಂಬಗಳಿಗೆ ಸಾಧ್ಯವಾಗದೇ ಇರಬಹುದಾದರೂ, ಇಂತಹ ತೊಡಕುಗಳನ್ನು ಅವರು ಸ್ವ-ಸಹಾಯ ಗುಂಪುಗಳನ್ನು ರಚಿಸಿಕೊಳ್ಳುವ ಮೂಲಕ ನಿವಾರಿಸಿಕೊಳ್ಳಬಹುದು. ಈ ಸ್ವ-ಸಹಾಯ ಗುಂಪುಗಳು ಸುಲಭ ಷರತ್ತುಗಳ ಮೇಲೆ ಬ್ಯಾಂಕ್‌ಗಳಿಂದ ಸಾಲ ಪಡೆಯಬಹುದು. ಕಿರುಸಾಲಗಳನ್ನು ಪಡೆದು ಕಿರು-ಉದ್ಯಮಗಳನ್ನು ಆರಂಭಿಸುವ ಮೂಲಕ ಅವರು ತಮ್ಮ ಶೋಚನೀಯ ಜೀವನ ಪರಿಸ್ಥಿತಿಯನ್ನು ಉತ್ತಮಗೊಳಿಸಿಕೊಳ್ಳಬಹುದು ಎಂಬ ಒಂದು ಕಲ್ಪನೆಯನ್ನು ವಿಶ್ವ ಬ್ಯಾಂಕ್ ಉತ್ಸಾಹದಿಂದ ಮುಂದಿಟ್ಟಿತು.
ವ್ಯತಿರಿಕ್ತ ಅನುಭವ
ವಿಶ್ವ ಬ್ಯಾಂಕಿನ ಈ ದೃಷ್ಟಿಕೋನದಲ್ಲಿರುವ ಒಂದು ಗಮನಾರ್ಹವಾದ ಅಂಶವೆಂದರೆ, ಪ್ರಭುತ್ವವು ಬಂಡವಾಳಶಾಹಿಯು ಹೊಂದಿರುವ ಸ್ವಯಂಸ್ಫೂರ್ತತೆಯ ಪ್ರವೃತ್ತಿಗಳ ಮೇಲೆ ನಿರ್ಬಂಧಗಳನ್ನು ಹೇರುವ ಪ್ರಯತ್ನ ಇದರ ಭಾಗವಾಗಿರಲಿಲ್ಲ. ಉದಾಹರಣೆಗೆ, ಭಾರತದಲ್ಲಿ ಬ್ಯಾಂಕಿಂಗ್ ಸಂಸ್ಥೆಗಳು ನೀಡುವ ಸಾಲವನ್ನು ಕುಟುಂಬ ಒಡೆತನದ ಏಕಸ್ವಾಮ್ಯ ಕಂಪೆನಿಗಳಿಂದ ಕೃಷಿಗೆ ಮತ್ತು ಸಣ್ಣ ಸಾಲಗಾರರತ್ತ ಭಾಗಶಃ ತಿರುಗಿಸಲು ಬ್ಯಾಂಕ್ ರಾಷ್ಟ್ರೀಕರಣವನ್ನು ಬಳಸಲಾಯಿತು. ಈ ಕ್ರಮದ ಪರಿಣಾಮವಾಗಿ ಬಂಡವಾಳವನ್ನು ಕೇಂದ್ರೀಕರಿಸುವ ಬಂಡವಾಳಶಾಹಿ ಪ್ರಕ್ರಿಯೆಯ ಸ್ವಯಂಸ್ಫೂರ್ತತೆಯ ಪ್ರವೃತ್ತಿಯನ್ನು ಮಧ್ಯಪ್ರವೇಶದ ಮೂಲಕ ವಾಸ್ತವವಾಗಿ ಭಾಗಶಃ ಹಿಮ್ಮೆಟ್ಟಿಸುವಂತಾಯಿತು.

ಆದರೆ, ಕಿರು-ಸಾಲದ ಬಗ್ಗೆ ವಿಶ್ವ ಬ್ಯಾಂಕ್ ಹೊಂದಿದ್ದ ದೃಷ್ಟಿಕೋನವು ಯಾವುದೇ ರಾಷ್ಟ್ರೀಕರಣವನ್ನಾಗಲಿ ಅಥವಾ ಬಂಡವಾಳಶಾಹಿಯ ಪ್ರವೃತ್ತಿಗಳಲ್ಲಿ ಪ್ರಭುತ್ವದ ಯಾವುದೇ ಮಧ್ಯಪ್ರವೇಶವನ್ನಾಗಲಿ ಒಳಗೊಂಡಿರಲಿಲ್ಲ. ಬಂಡವಾಳಶಾಹಿ ಚೌಕಟ್ಟಿನೊಳಗೆಯೇ ಕಿರು ಸಾಲ ಒದಗಿಸುವ ಮೂಲಕ ಬಡತನ ಮತ್ತು ನಿರುದ್ಯೋಗ ಕಣ್ಮರೆಯಾಗುವ ಸಾಧ್ಯತೆಯನ್ನು ಅದು ಕಲ್ಪಿಸಿಕೊಂಡಿತು (ವಿಶ್ವ ಬ್ಯಾಂಕ್‌ನಂತಹ ಸಂಸ್ಥೆಗಳು ಬಂಡವಾಳಶಾಹಿಗೆ ಯಾವುದೇ ಪ್ರವೃತ್ತಿ ಇದೆ ಎಂದು ನೋಡುವುದಿಲ್ಲ ಎಂಬುದು ತಿಳಿದಿರುವ ವಿಷಯವೇ ಆಗಿದೆ). ಹಾಗಾಗಿ, ಅವರ ಮಟ್ಟಿಗೆ ಇದು “ಉಂಡೂ ಹೊಗುವ ಮತ್ತು ಕೊಂಡೂ ಹೋಗುವ” ಒಂದು ಪ್ರಕರಣವೇ ಸರಿ. ಅವರ ಪ್ರಕಾರ, ಬಂಡವಾಳಶಾಹಿಯ ವ್ಯವಸ್ಥೆಯೊಳಗೆ ಬಡತನವನ್ನು ಹೋಗಲಾಡಿಸಲು ನಿರುದ್ಯೋಗಿಗಳಿಗೆ ಅಥವಾ ಅರೆ-ಉದ್ಯೋಗಿಗಳಿಗೆ ಬಂಡವಾಳಶಾಹಿ ಉದ್ದಿಮೆಗಳಲ್ಲೇ ಉದ್ಯೋಗ ಕಲ್ಪಿಸಬೇಕು ಎಂದೇನೂ ಅಲ್ಲ, ಬಡವರಿಗೆ ಕಿರು ಸಾಲಗಳನ್ನು ಒದಗಿಸಿ ಕಿರು-ಉದ್ಯಮಗಳನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸುವ ಮೂಲಕ ಬಡತನವನ್ನು ನಿವಾರಿಸಬಹುದು.
ಇದು ಎಲ್ಲ ಅನುಭವಗಳಿಗೂ ವ್ಯತಿರಿಕ್ತವಾಗಿದೆ ಎಂದು ಬೇರೆ ಹೇಳಬೇಕಾಗಿಲ್ಲ. ಕಿರು-ಉದ್ಯಮಗಳು ಆರಂಭವಾಗಿರುವ ಎಲ್ಲಿಯಾದರೂ ಅವು ಬಡವರಿಗೆ ಸಹಾಯವಾಗುವಲ್ಲಿ ಯಶಸ್ವಿಯಾಗಿದ್ದರೆ, ಅದು ಪ್ರಭುತ್ವದ ಗಮನಾರ್ಹ ಮಧ್ಯಪ್ರವೇಶದ ಮೂಲಕವೇ ಹೊರತು, ಅನಿಯಂತ್ರಿತ ಬಂಡವಾಳಶಾಹಿಯ ಮೂಲಕ ಅಲ್ಲ. ಈ ನಿಟ್ಟಿನಲ್ಲಿ ಕೇರಳದ ‘ಕುಟುಂಬಶ್ರೀ’ ಪ್ರಯೋಗವು ಒಂದು ಉತ್ತಮ ಉದಾಹರಣೆಯಾಗಿ ಉಳಿದಿದೆ. ಅಲ್ಲಿ, ರಾಜ್ಯ ಸರ್ಕಾರದ ಧನ ಸಹಾಯದಿಂದ ಆರಂಭವಾದ ಒಂದು ದೊಡ್ಡ ರಾಜ್ಯವ್ಯಾಪೀ ಮಹಿಳಾ ಸಹಕಾರಿ ಸಂಘವು ವೈವಿಧ್ಯಮಯ ಚಟುವಟಿಕೆಗಳನ್ನು ನಡೆಸುವಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಆದರೂ, ವಿಶ್ವಬ್ಯಾಂಕ್ ಮತ್ತು ಅದರ ದೃಷ್ಟಿಕೋನದ ಬಗ್ಗೆ ಸಹಾನುಭೂತಿ ಹೊಂದಿರುವ ಅರ್ಥಶಾಸ್ತ್ರಜ್ಞರ ಒಂದು ವಿಭಾಗವು, ಅನಿಯಂತ್ರಿತ ಬಂಡವಾಳಶಾಹಿಯ ಚೌಕಟ್ಟಿನೊಳಗೆ ಬಡತನವನ್ನು ನಿವಾರಿಸುವ ಕಿರು-ಸಾಲ ಮತ್ತು ಕಿರು-ಉದ್ಯಮಗಳ ಈ ಹುಚ್ಚು ಕಲ್ಪನೆಯನ್ನು ನಂಬುತ್ತಲೇ ಇದ್ದಾರೆ ಮತ್ತು ಅದನ್ನು ಪ್ರಚುರಪಡಿಸುವಲ್ಲ್ಲಿ ನಿರತರಾಗಿದ್ದಾರೆ.
ಮುಖ್ಯ ಶೋಧಗಳು
ಈಗ, ಅಖಿಲ ಭಾರತ ಜನವಾದೀ ಮಹಿಳಾ ಸಂಘಟನೆಯು (ಎಐಡಿಡಬ್ಲ್ಯುಎ) ಸುಮಾರು 9,000 ಮಹಿಳೆಯರನ್ನು ಕಿರು-ಸಾಲದ ತಮ್ಮ ಅನುಭವವನ್ನು ಹಂಚಿಕೊಳ್ಳುವಂತೆ ಸಂಪರ್ಕಿಸುವ ಮೂಲಕ ನಡೆಸಿದ ಒಂದು ಸಮಗ್ರ ಅಧ್ಯಯನವು, ನಿಜಕ್ಕೂ ಆತಂಕಕಾರಿಯಾದ ಒಂದು ಚಿತ್ರಣವನ್ನು ಬಹಿರಂಗಪಡಿಸಿದೆ. ಈ ಸಂಬಂಧವಾಗಿ ಆಗಸ್ಟ್ 23-24 ರಂದು ದೆಹಲಿಯಲ್ಲಿ ನಡೆದ ಸಾರ್ವಜನಿಕ ವಿಚಾರಣೆಯಲ್ಲಿ ಹಲವಾರು ಸಾಕ್ಷಿಗಳು ಪ್ರಸ್ತುತಪಡಿಸಿದ ಸಾಕ್ಷ್ಯಗಳೊಂದಿಗೆ ಜನವಾದೀ ಮಹಿಳಾ ಸಂಘಟನೆಯ ಅಧ್ಯಯನದ ಮುಖ್ಯ ಶೋಧಗಳು ಈ ಕೆಳಗಿನಂತಿವೆ.
ಮೊದಲನೆಯದಾಗಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಂತಹ ಸಾರ್ವಜನಿಕ ವಲಯದ ಬ್ಯಾಂಕ್‌ಗಳೂ ಸೇರಿದಂತೆ ವಾಣಿಜ್ಯ ಬ್ಯಾಂಕ್‌ಗಳು, ಮಹಿಳಾ ಸಾಲಗಾರರಿಗೆ ಜಾಮೀನು ಅಥವಾ ಮೇಲಾಧಾರ ಮತ್ತು ಅವರು ಪಡೆಯಲು ಕಷ್ಟವಾಗಿರುವ ಕೆಲವು ದಾಖಲೆಗಳನ್ನು ಒದಗಿಸದ ಹೊರತು ಒಂದು ಬಿಡಿಗಾಸಿನ ಸಾಲವನ್ನೂ ನೀಡುವುದಿಲ್ಲ. ಪರಿಣಾಮವಾಗಿ, ಅಂಚಿನಲ್ಲಿರುವ ಕುಟುಂಬಗಳ ಮಹಿಳಾ ಸಾಲಗಾರರು ನೇರ ಸಾಂಸ್ಥಿಕ ಸಾಲದಿಂದ ಹೆಚ್ಚು ಕಡಿಮೆ ಸಂಪೂರ್ಣವಾಗಿ ಹೊರಗಿಡಲ್ಪಡುತ್ತಾರೆ.
ಎರಡನೆಯದು,ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸುವ ಈ ವಾಣಿಜ್ಯ ಬ್ಯಾಂಕ್‌ಗಳು ಬಂಡವಾಳಶಾಹಿಗಳಿಂದ ನಿಯಂತ್ರಿಸಲ್ಪಡುವ ಬ್ಯಾಂಕೇತರ ಹಣಕಾಸು ಕಂಪನಿಗಳಿಗೆ (ಎನ್‌ಬಿಎಫ್‌ಸಿ) ಮತ್ತು ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಗೆ (ಎಂಎಫ್‌ಐ) ಸಾಲ ನೀಡುತ್ತವೆ. ಈ ಸಂಸ್ಥೆಗಳು ಬ್ಯಾಂಕುಗಳಿಂದ ಶೇ. 10ಕ್ಕಿಂತ ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯುತ್ತವೆ ಮತ್ತು ಅದನ್ನು ಅಂತಿಮ ಸಾಲಗಾರರಿಗೆ ಶೇ. 21ರಿಂದ ಶೇ. 26ರವರೆಗಿನ ದರದಲ್ಲಿ ಸಾಲ ನೀಡುತ್ತವೆ. ಅದಕ್ಕಿಂತಲೂ ಮಿಗಿಲಾಗಿ, ಹಿಂದಿನ ಕಾಲದ ಹಳ್ಳಿಯ ಲೇವಾದೇವಿಯ ಆಧುನಿಕ ಪ್ರತಿರೂಪವಾಗಿರುವ ಅಂತಹ ಸಾಲಗಳನ್ನು ಆದ್ಯತೆಯ ವಲಯದ ಸಾಲವೆಂದು ಪರಿಗಣಿಸಲಾಗುತ್ತದೆ!
ಮೂರನೆಯದು, ಈ ಎನ್‌ಬಿಎಫ್‌ಸಿಗಳು(ಬ್ಯಾಂಕೇತರ ಹಣಕಾಸು ಸಂಸ್ಥೆಗಳು) ಮತ್ತು ಮೈಕ್ರೊಫೈನಾನ್ಸ್ ಸಂಸ್ಥೆಗಳು ಜನರನ್ನು ಸಾಲ ಪಡೆಯುವಂತೆ ಪುಸಲಾಯಿಸುತ್ತವೆ. ಆಧಾರ್ ಕಾರ್ಡ್ ಗಳಂತಹ ಸುಲಭವಾಗಿ ಲಭ್ಯವಿರುವ ದಾಖಲೆಗಳನ್ನು ಹೊರತುಪಡಿಸಿ ಸಾಲಗಾರರಿಂದ ಬಹಳ ಕಡಿಮೆ ದಾಖಲೆಗಳನ್ನು ಪಡೆಯುತ್ತವೆ. ಆದರೆ, ಸಾಲ ತೆಗೆದುಕೊಂಡ ನಂತರ, ಕಂತುಗಳನ್ನು (ಇಎಂಐ) ಪಾವತಿಸುವಂತೆ ಅವು ಮಹಿಳೆಯರಿಗೆ ನಿರಂತರವಾಗಿ ಕಿರುಕುಳ ನೀಡುತ್ತವೆ ಮತ್ತು ಅವರನ್ನು ಹೊಲಸು ಮಾತುಗಳಲ್ಲಿ ಹೀಯಾಳಿಸುವುದರ ಜೊತೆಗೆ ಅವರನ್ನು ದೈಹಿಕ ಕಿರುಕುಳಗಳಿಗೂ ಒಳಪಡಿಸುತ್ತವೆ.
ನಾಲ್ಕನೆಯದು, ಮಹಿಳೆಯರು ತಮ್ಮ ಮಕ್ಕಳ ಶಿಕ್ಷಣ ವೆಚ್ಚಗಳಿಗಾಗಿ ಮತ್ತು ಹಠಾತ್ ಅನಾರೋಗ್ಯದ ಸಂದರ್ಭದಲ್ಲಿ ಆರೋಗ್ಯ ವೆಚ್ಚವನ್ನು ಭರಿಸಲು ಸಾಲ ತೆಗೆದುಕೊಳ್ಳಬೇಕಾಗುತ್ತದೆ. ಮುಂದಿನ ದಿಗಳಲ್ಲಿ ಅವರ ವರಮಾನವು ಏರಿಕೆಯಾಗದ ಕಾರಣದಿಂದ ಸಾಲದ ಮರುಪಾವತಿ ಕಷ್ಟಕರವಾಗುತ್ತದೆ. ಈ ಸಾಲಗಳ ಮೇಲೆ ಹೇರಿದ ಅತಿ ದುಬಾರಿ ಬಡ್ಡಿ ದರಗಳು ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸುತ್ತವೆ. ಪರಿಣಾಮವಾಗಿ, ಸಾಲಗಾರರು ಕಂಡ ಕಂಡವರಿಂದ ಇನ್ನೂ ಹೆಚ್ಚು ದುಬಾರಿ ಬಡ್ಡಿಯ ಮೇಲೆ ಹೊಸ ಹೊಸ ಸಾಲ ತೆಗೆದುಕೊಳ್ಳುವ ಒತ್ತಾಯಕ್ಕೆ ಒಳಗಾಗುತ್ತಾರೆ. ಹಿಂದಿನ ಸಾಲವನ್ನು ತೀರಿಸಲು ಮತ್ತೊಂದು ಹೊಸ ಸಾಲ ಮಾಡಬೇಕಾಗುತ್ತದೆ. ಹೀಗೆ ಅವರು ಅನಿವಾರ್ಯವಾಗಿ ಸಾಲದ ಒಂದು ವಿಷ ವರ್ತುಲದಲ್ಲಿ ಸಿಕ್ಕಿಕೊಳ್ಳುತ್ತಾರೆ. ಇದರಿಂದ ತಪ್ಪಿಸಿಕೊಳ್ಳುವುದು ಸಾಧ್ಯವಾಗುವುದೇ ಇಲ್ಲ. ಹೀಗಾಗಿ, ಬಂಡವಾಳಶಾಹಿ ವ್ಯವಸ್ಥೆಯೊಳಗಿನ ಸಾಮೂಹಿಕ ಬಡತನಕ್ಕೆ ಪರಿಹಾರವಾಗಬೇಕಿದ್ದ ಮೈಕ್ರೋಕ್ರೆಡಿಟ್ ಅಥವ ಕಿರುಸಾಲ, ಮಹಿಳೆಯರು ಸೇರಿದಂತೆ ಜನರನ್ನು ಇನ್ನೂ ಹೆಚ್ಚಿನ ಬಡತನಕ್ಕೆ ತಳ್ಳುವ ಒಂದು ಸಾಧನವಾಗುತ್ತದೆ.
ಏಕೆ ಈ ಪಾತ್ರ ಬದಲಾವಣೆ?
ವಿಪರ್ಯಾಸವೆಂದರೆ, ಬಂಡವಾಳಶಾಹಿ ವ್ಯವಸ್ಥೆಯೊಳಗೆ ಬಡತನವನ್ನು ನಿವಾರಿಸುವುದರ ಬದಲು ಅದನ್ನು ಹೆಚ್ಚಿಸುವ ಕಿರುಸಾಲವ್ಯವಸ್ಥೆಯ ಈ ಪಾತ್ರ ಬದಲಾವಣೆಯು ಬಂಡವಾಳಶಾಹಿಯ ಕಾರ್ಯವೈಖರಿಯಿಂದಾಗಿಯೇ ಸಂಭವಿಸುತ್ತದೆ. ಬಡತನ ನಿರ್ಮೂಲನೆಯ ಒಂದು ಸಾಧನವೆಂದು ಪರಿಗಣಿಸಲ್ಪಟ್ಟದ್ದನ್ನು ಬಡತನ ಹೆಚ್ಚಿಸುವ ಒಂದು ಸಾಧನವಾಗಿ ಪರಿವರ್ತಿಸುವ ಬಂಡವಾಳಶಾಹಿಯ ಕಾರ್ಯವೈಖರಿಯಲ್ಲಿ ಎರಡು ವಿಧಾನಗಳಿವೆ.
ಮೊದಲನೆಯದು, ಬಂಡವಾಳಶಾಹಿಯ ಕಾರ್ಯವೈಖರಿಯ ಸ್ಥೂಲ ಆರ್ಥಿಕ ಪರಿಣಾಮ. ಈ ಪರಿಣಾಮಗಳು ಅನೇಕ ವಿಧಾನಗಳ ಮೂಲಕ ಪ್ರಕಟಗೊಳ್ಳುತ್ತವೆ: ಖಾಸಗೀಕರಣದ ಮೂಲಕ – ಶಿಕ್ಷಣ ಮತ್ತು ಆರೋಗ್ಯ ಸೇವೆಗಳ ವೆಚ್ಚಗಳು ಹೆಚ್ಚುವುದರಿಂದ ಕುಟುಂಬಗಳು ಸಾಲ ಮಾಡಬೇಕಾಗುತ್ತದೆ ಮತ್ತು ಈ ಸಾಲಗಳನ್ನು ಸುಲಭವಾಗಿ ಮರುಪಾವತಿಸುವುದು ಸಾಧ್ಯವಾಗುವುದಿಲ್ಲ; ಮತ್ತು, ಬಿಕ್ಕಟ್ಟಿನ ಮೂಲಕ – ವಸ್ತು ಉತ್ಪಾದಕ ವಲಯಗಳ ಸ್ಥಗಿತತೆಯಿಂದಾಗಿ ವ್ಯವಸ್ಥೆಯು ಅನಿವಾರ್ಯವಾಗಿ ತೊಂದರೆಗೊಳಗಾಗುತ್ತದೆ.
ಅದರ ಪರಿಣಾಮವಾಗಿ ಉದ್ಯೋಗಾವಕಾಶಗಳು ಕಡಿಮೆಯಾಗುತ್ತವೆ. ಅದರ ಪರಿಣಾಮವಾಗಿ ಕುಟುಂಬಗಳ ವರಮಾನ ಇಳಿಯುತ್ತದೆ. ಆದ್ದರಿಂದ ಕುಟುಂಬಗಳು ಮತ್ತಷ್ಟು ಸಾಲಕ್ಕೆ ತಳ್ಳಲ್ಪಡುತ್ತವೆ. ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಬಂಡವಾಳಶಾಹಿಯಲ್ಲಿ ಅಂತರ್ಗತವಾಗಿರುವ ಬಡತನವನ್ನು ಹೆಚ್ಚಿಸುವ ಪ್ರವೃತ್ತಿಗೆ ಒಂದು ಪರ್ಯಾಯವಾಗಿ ಕಾರ್ಯನಿರ್ವಹಿಸುವುದೆಂದು ಭಾವಿಸಲಾದ ಮೈಕ್ರೋಕ್ರೆಡಿಟ್ ಅಥವ ಕಿರುಸಾಲ ವ್ಯವಸ್ಥೆಯು ಬಂಡವಾಳಶಾಹಿಯ ಈ ಪ್ರವೃತ್ತಿಯ ಕಾರ್ಯಾಚರಣೆಯೊಳಗೆ ಸಿಲುಕಿಕೊಳ್ಳುತ್ತದೆ ಮತ್ತು ಕಾಲಾನಂತರದಲ್ಲಿ ಬುಡಮೇಲಾಗುತ್ತದೆ, ಏಕೆಂದರೆ, ಈ ಪ್ರವೃತ್ತಿಯನ್ನು ಒಟ್ಟಾರೆ ಆರ್ಥಿಕ ಮಟ್ಟದಲ್ಲಿ ಅದು ತಡೆಯುವುದು ಸಾಧ್ಯವಿಲ್ಲ.
ಬಡತನ ನಿವಾರಣೆಯ ಮೂಲಕ ಬಂಡವಾಳಶಾಹಿ ವ್ಯವಸ್ಥೆಯನ್ನು ಸ್ಥಿರಗೊಳಿಸುತ್ತದೆ ಎಂದು ಭಾವಿಸಲಾದ ಈ ಕಿರುಸಾಲ ವ್ಯವಸ್ಥೆಯನ್ನು ಬಂಡವಾಳಶಾಹಿಯು ಹಾಳುಗೈಯ್ಯುವ ಎರಡನೆಯ ಮಾರ್ಗವೆಂದರೆ ಕಿರುಸಾಲ ವ್ಯವಸ್ಥೆಯೊಳಗೆ ಅದರ ಪ್ರವೇಶವೇ. ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಬಂಡವಾಳಶಾಹಿಯು ಕಿರುಸಾಲ ವ್ಯವಸ್ಥೆಯನ್ನು ಅದರ ಪಾಡಿಗೆ ಬಿಡುವುದಿಲ್ಲ. ಲಾಭಗಳಿಸುವ ಎಲ್ಲ ಅವಕಾಶಗಳನ್ನು ಮೂಸುವಂತೆಯೇ ಈ ಕಿರುಸಾಲ ವ್ಯವಸ್ಥೆಯನ್ನೂ ಅದು ಪ್ರವೇಶಿಸುತ್ತದೆ. ಪರಿಣಾಮವಾಗಿ, ಅಂಚಿನಲ್ಲಿರುವ ಕುಟುಂಬಗಳ ಮಹಿಳೆಯರ ಸ್ವ-ಸಹಾಯ ಗುಂಪುಗಳು ಕಡಿಮೆ ದರದ ಬಡ್ಡಿಯ ಮೇಲೆ ಸಾಂಸ್ಥಿಕ ಸಾಲವನ್ನು ಪಡೆಯುವುದರ ಬದಲು, ಬಂಡವಾಳಶಾಹಿಗಳಿಂದ ನಿಯಂತ್ರಿಸಲ್ಪಡುವ ಎನ್‌ಬಿಎಫ್‌ಸಿಗಳು(ಬ್ಯಾಂಕೇತರ ಹಣಕಾಸು ಸಂಸ್ಥೆಗಳು) ಮತ್ತು ಮೈಕ್ರೊಫೈನಾನ್ಸ್ ಸಂಸ್ಥೆಗಳು ಈ ಅಗ್ಗದ ಸಾಂಸ್ಥಿಕ ಸಾಲಗಳನ್ನು ಪಡೆಯುತ್ತವೆ ಮತ್ತು ಈ ರೀತಿಯಲ್ಲಿ ಪಡೆದ ಸಾಲಗಳನ್ನು ಅಂಚಿನಲ್ಲಿರುವ ಕುಟುಂಬಗಳಿಗೆ ನೀಡುವ ಸಾಲಗಳ ಮೇಲಿನ ಬಡ್ಡಿಯನ್ನು ಬಹು ದುಬಾರಿ ದರಗಳಲ್ಲಿ ವಿಧಿಸುವ ಮೂಲಕ ಅವು ಅಪಾರ ಲಾಭಗಳಿಸುತ್ತವೆ.
ಮಿಲಿಟರಿ ಉಪಕರಣಗಳ ತಯಾರಿಕೆಯೂ ಸೇರಿದಂತೆ, ಒಂದು ಚಿಲ್ಲರೆ ವ್ಯಾಪಾರದಿಂದ ಹಿಡಿದು ಹಣಕಾಸಿನ ಬೃಹತ್ ವ್ಯವಹಾರಗಳ ವರೆಗಿನ ಲಾಭಗಳಿಸುವ ಯಾವ ವಲಯವನ್ನೂ ಬಿಡದೆ ಪ್ರವೇಶಿಸುವ ಅವಕಾಶವನ್ನು ಆಘ್ರಾಣಿಸುವ ಪ್ರವೃತ್ತಿ ಹೊಂದಿರುವ ಬಂಡವಾಳವು ತನ್ನ ಒಳ ಕಾಯಿಲೆಗೆ ಮದ್ದು ತಯಾರಿಸುವ ಕಿರುಸಾಲ ವಲಯವನ್ನೂ ಬಿಡದೆ ಪ್ರವೇಶಿಸುತ್ತದೆ ಎಂಬುದು ಒಂದು ಆಶ್ಚರ್ಯದ ವಿಷಯವೇ ಅಲ್ಲ.
ಬಂಡವಾಳಶಾಹಿಯಲ್ಲಿ ಅಂತರ್ಗತವಾಗಿರುವ ಒಂದು ಧ್ರುವದಲ್ಲಿ ಸಂಪತ್ತನ್ನು ಮತ್ತೊಂದು ಧ್ರುವದಲ್ಲಿ ಬಡತನವನ್ನೂ ಸೃಷ್ಟಿಸುವ ಪ್ರವೃತ್ತಿಯನ್ನು ತಡೆದು ನಿಲ್ಲಿಸಬಹುದು ಮತ್ತು ಈ ರೀತಿಯಲ್ಲಿ ಈ ವ್ಯವಸ್ಥೆಯನ್ನು ಸ್ಥಿರೀಕರಿಸಬಹುದು ಎಂದು ನಂಬುವುದು ಒಂದು ಹುಚ್ಚು ಕಲ್ಪನೆಯಾಗುತ್ತದೆ. ಸಂಪತ್ತಿನ ಅಸಮಾನ ಹಂಚಿಕೆಯ ಪರಿಣಾಮಗಳನ್ನು ಎದುರಿಸಲು ಬಂಡವಾಳಶಾಹಿ ವ್ಯವಸ್ಥೆಯೊಳಗೆ ಕಿರುಸಾಲದಂತಹ ವ್ಯವಸ್ಥೆಗಳನ್ನು ರೂಪಿಸಬಹುದು ಎಂದು ನಂಬುವುದು ಒಂದು ಹುಚ್ಚು ಕಲ್ಪನೆಯಾಗುತ್ತದೆ. ಅಂತಹ ಎಲ್ಲಾ ನಂಬಿಕೆಗಳನ್ನೂ ಒಂದು ಹುಚ್ಚು ಕಲ್ಪನೆಯಾಗಿ ಪರಿವರ್ತಿಸುವಂತದ್ದು ಸ್ವತಃ ಬಂಡವಾಳವೇ ಹೊರತು ಬೇರೆ ಯಾವುದೂ ಅಲ್ಲ.
ಇದನ್ನೂ ನೋಡಿ: ನಿನ್ನ ಹೆರಿಗೆಗೆ ಆಸ್ಪತ್ರೆ ಮಾಡಿಸೋಣ …. ಏನ್ರೀ ದೇಶಪಾಂಡೆ ಇದು? ಅವಹೇಳನಕಾರಿ ಹೇಳಿಕೆಗೆ ಆಕ್ರೋಶJanashakthi Media
