ಇಬ್ಬರು ನ್ಯಾಯಾಧೀಶರ ಪೀಠದ ಏಪ್ರಿಲ್ 8 ರ ತೀರ್ಪು, ಸಂವಿಧಾನದ ಮೌನಗಳನ್ನು ರಾಜ್ಯಗಳ ಸ್ವಾಯತ್ತತೆ ಮತ್ತು ಜನತೆಯ ಸಾರ್ವಭೌಮತ್ವದ ವಿರುದ್ಧದ ಆಯುಧಗಳಾಗಿ ಪರಿವರ್ತಿಸಲು ನ್ಯಾಯಾಂಗವು ಅನುಮತಿ ನೀಡುವುದಿಲ್ಲ ಎಂಬ ನಿರೀಕ್ಷೆಯನ್ನು ನೀಡಿತು. ಆದರೆ ಈಗ ಸುಪ್ರೀಂ ಕೋರ್ಟ್‌ನ ಸಲಹಾ ಅಭಿಪ್ರಾಯವು ಪ್ರಸ್ತುತ ರಾಜಕೀಯ ಪ್ರಸಂಗವು ಒಡ್ಡಿರುವ ಸವಾಲನ್ನು ಎದುರಿಸಿ ನಿಲ್ಲುವಲ್ಲಿ ವಿಫಲವಾಗಿದೆ. ಅದು ಅಧಿಕಾರಗಳ ಪ್ರತ್ಯೇಕತೆ ಎಂಬ ಬಾಹ್ಯೋಪಚಾರದ ಸಿದ್ಧಾಂತದ ಬಲಿಪೀಠದಲ್ಲಿ ಸಾಪ್ರಜಾಪ್ರಭುತ್ವದ ಸಾರವನ್ನು ಬಲಿಕೊಟ್ಟಿದೆ ಮತ್ತು ಹಾಗೆ ಮಾಡುವುದರ ಮೂಲಕಈಗಾಗಲೇ ಸಾಂವಿಧಾನಿಕ ಸಂಸ್ಥೆಗಳನ್ನು ತಮ್ಮ ಸಂಕುಚಿತ ಗುರಿ ಸಾಧನೆಗಳಿಗೆ ಬಗ್ಗಿಸುತ್ತಿರುವವರನ್ನು ಬಲಪಡಿಸಿದೆ. ಆದ್ದರಿಂದ ರಾಜ್ಯಪಾಲರ ಹುದ್ದೆಯೂ ಸೇರಿದಂತೆ ಸಾಂವಿಧಾನಿಕ ಹುದ್ದೆಗಳನ್ನು ಜನತೆಯ ಇಚ್ಛೆಗೆ ಉತ್ತರದಾಯಿಯಾಗಬೇಕಾದ ಚೌಕಟ್ಟಿನೊಳಕ್ಕೆ ತರಬೇಕೆಂದು ಒತ್ತಾಯಿಸುವ ಕೆಲಸವನ್ನು ಈಗ ಪ್ರಜಾಪ್ರಭುತ್ವ ಚಳುವಳಿ, ಪ್ರಗತಿಪರ ರಾಜಕೀಯ ಶಕ್ತಿಗಳು, ಸ್ವತಂತ್ರ ಮಾಧ್ಯಮಗಳು ಮತ್ತು ಜನತೆ ಮಾಡಬೇಕಾಗಿದೆ.
-ಎಂ ಎ ಬೇಬಿ
ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳ ಅಧಿಕಾರಗಳ ಕುರಿತ ರಾಷ್ಟ್ರಪತಿಗಳ ಉಲ್ಲೇಖದ ಮೇಲೆ ಸುಪ್ರೀಂ ಕೋರ್ಟ್‌ನ ಇತ್ತೀಚಿನ ಸಲಹಾ ಅಭಿಪ್ರಾಯ ಭಾರತೀಯ ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆಗೆ ಒಂದು ಆಳವಾದ ತೊಂದರೆ ನೀಡುವ ಕ್ಷಣವಾಗಿದೆ. ಚುನಾಯಿತ ಶಾಸಕಾಂಗಗಳ ಮೇಲ್ಮೆಯನ್ನು ಬಲಪಡಿಸುವ ಮತ್ತು ಹೆಚ್ಚೆಚ್ಚು ಪಕ್ಷಪಾತಿಯಾಗುತ್ತಿರುವ ರಾಜ್ಯಪಾಲರುಗಳ ಆಳ್ವಿಕೆಯನ್ನು ನಿಗ್ರಹಿಸುವ ಬದಲು, ನ್ಯಾಯಾಲಯದ ಉತ್ತರವು ಅಮೂರ್ತತೆಗೆ ಜಾರುತ್ತದೆ ಮತ್ತು ಬಿಕ್ಕಟ್ಟಿಗೆ ಕಾರಣವಾದ ಆಚರಣೆಗಳನ್ನೇ ಮತ್ತಷ್ಟು ಬಲಪಡಿಸುತ್ತದೆ.
ಒಂದಾದ ಮೇಲೆ ಒಂದರಂತೆ, ಹಲವು ರಾಜ್ಯಗಳಲ್ಲಿ, ಕೇಂದ್ರ ಸರ್ಕಾರದಿಂದ ನೇಮಿಸಲ್ಪಟ್ಟ ರಾಜ್ಯಪಾಲರು – ರಾಜ್ಯ ಶಾಸಕಾಂಗಗಳು ಅಂಗೀಕರಿಸಿದ ಮಸೂದೆಗಳ ಮೇಲೆ ತಿಂಗಳುಗಳು, ಕೆಲವೊಮ್ಮೆವರ್ಷಗಳ ಕಾಲ ಸುಮ್ಮನೇ ಕೂತಿದ್ದಾರೆ – ಈ ಮೂಲಕ ಜನಪ್ರಿಯ ಇಚ್ಛೆಯ ವಿರುದ್ಧ ಒಂದು ಸಾಂವಿಧಾನಿಕ ಹುದ್ದೆಯನ್ನು ನಿಷೇಧಾಧಿಕಾರದ ತಾಣವೇ ಆಗಿ ಪರಿವರ್ತಿಸಿದ್ದಾರೆ. ಶಾಸಕಾಂಗವು ಅಂಗೀಕರಿಸಿ ರಾಜಭವನಕ್ಕೆ ಕಳುಹಿಸುವ ಮಸೂದೆಗಳನ್ನು ಮತ್ತೆ ಹಿಂದಿರುಗಿ ಬಾರದಂತಹ ಕುಳಿಗೆ ಹಾಕುವಂತಾಗಿದೆ; ಅವಕ್ಕೆ ಒಪ್ಪಿಗೆ ಸಿಕ್ಕಿದೆಯೇ, ಅಥವ ವಾಪಾಸು ಮಾಡಲಾಗುತ್ತಿದೆಯೇ, ಅಥವ ಅದರ ಬಗ್ಗೆ ಅಭಿಪ್ರಾಯ ಕಾದಿರಿಸಲಾಗಿದೆಯೇ ಎಂಬ ಬಗ್ಗೆ ಯಾವುದೇ ಸೂಚನೆ ಸಿಗದಂತಾಗುತ್ತಿದೆ. ಇದು ʻಆದಷ್ಟು ಬೇಗನೇʼ ಕ್ರಮ ಕೈ ಗೊಳ್ಳಬೇಕು ಎನ್ನುವ ಸಂವಿಧಾನದ 200 ನೇ ವಿಧಿಯ ಆಶಯದ ನೇರ ಉಲ್ಲಂಘನೆಯಾಗುತ್ತದೆ.
ಇದನ್ನೂ ಓದಿ: ಕೆಎಸ್‌ಸಿಎ ಅಧ್ಯಕ್ಷ ಚುನಾವಣೆ: ಕೆ.ಎನ್. ಶಾಂತಕುಮಾರ್ ಮರುಪ್ರವೇಶಕ್ಕೆ ಹೈಕೋರ್ಟ್ ಅವಕಾಶ
ಲಜ್ಜೆಗೆಟ್ಟ ಅಡಚಣೆ ತಂತ್ರ
ಇದೊಂದು ಆಡಳಿತಾತ್ಮಕ ಆಕಸ್ಮಿಕವಲ್ಲ, ಬದಲಾಗಿ ಒಂದು ರಾಜಕೀಯ ವಿಧಾನವೇ ಆಗಿದೆ. ರಾಜ್ಯಪಾಲರುಗಳ ಈ ಲಜ್ಜೆಗೆಟ್ಟ ಅಡ ಚಣೆತಂತ್ರ ಕೇಂದ್ರದಲ್ಲಿ ಆಳ್ವಿಕೆ ನಡೆಸುತ್ತಿರುವ ಮೈತ್ರಿಕೂಟದ ಭಾಗವಾಗಿರದ ಪಕ್ಷಗಳ ಸರ್ಕಾರಗಳ ವಿರುದ್ಧ ಮಾತ್ರ ನಿರ್ದೇಶಿಸಲ್ಪಟ್ಟಿದೆ, ಬಿಜೆಪಿ ಅಥವಾ ಅದರ ಮಿತ್ರಪಕ್ಷಗಳು ನಡೆಸುವ ರಾಜ್ಯ ಸರ್ಕಾರಗಳ ಶಾಸಕಾಂಗ ಕಾರ್ಯಸೂಚಿಗಳಿಗೆ ಇಂತಹ ಅಡಚಣೆಗಳು ಎದುರಾಗುತ್ತಿಲ್ಲ. ರಾಜ್ಯಪಾಲರ ಹುದ್ದೆಯನ್ನು ಹೀಗೆಪಕ್ಷಪಾತೀ ನಿಯಂತ್ರಣದ ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ, ಸಂವಿಧಾನದಲ್ಲಿ ಕಲ್ಪಿಸಲಾಗಿರುವ ಒಕ್ಕೂಟ ಸಮತೋಲನವನ್ನು ದುರ್ಬಲಗೊಳಿಸಲಾಗುತ್ತಿದೆ ಮತ್ತು ಇದುಚುನಾಯಿತ ಶಾಸಕಾಂಗಗಳು ಜನರ ಸಾರ್ವಭೌಮ ಇಚ್ಛೆಯನ್ನು ವ್ಯಕ್ತಪಡಿಸಬೇಕು ಎಂಬ ಸಂವಿಧಾನದ ಮೂಲ ತತ್ವವನ್ನು ನಾಶಪಡಿಸುತ್ತಿದೆ.

ಇಂತಹ ಅಸಾಧಾರಣ ಸಾಂವಿಧಾನಿಕ ವಿಧ್ವಂಸಕ ಪರಿಸ್ಥಿತಿಯೇ ತಮ್ಮಮಸೂದೆಗಳನ್ನು ಉದ್ದೇಶಪೂರ್ವಕವಾಗಿ ಸ್ಥಗಿತಗೊಳಿಸುವುದರ ವಿರುದ್ಧ ರಾಜ್ಯ ಸರ್ಕಾರಗಳು ಪರಿಹಾರವನ್ನು ಕೋರಿ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಲು ಕಾರಣವಾಯಿತು. ಇಬ್ಬರು ನ್ಯಾಯಾಧೀಶರ ಪೀಠದ ಏಪ್ರಿಲ್ 8 ರ ತೀರ್ಪು, ಒಂದು ಅಸಾಧಾರಣ ಬಿಕ್ಕಟ್ಟಿಗೆ ಸೂಕ್ತವಾಗಿ ದಿಟ್ಟ ಮಧ್ಯ ಪ್ರವೇಶದೊಂದಿಗೆ ಸ್ಪಂದಿಸಿತು, ರಾಜ್ಯಪಾಲರ ಅನಿರ್ದಿಷ್ಟ ವಿಳಂಬಗಳು ‘ಕಾನೂನು ಬಾಹಿರ’ ಮತ್ತು ಸಾಂವಿಧಾನಿಕ ಯೋಜನೆಗೆ ವಿರುದ್ಧವಾಗಿವೆ ಎಂದು ಗುರುತಿಸಿತು, ಮತ್ತು ಸಾಂವಿಧಾನಿಕ ಅಧಿಕಾರ ಹೊಂದಿರುವವರು ತಮ್ಮ ಮುಂದೆ ಬರುವ ಮಸೂದೆಗಳನ್ನು ಕುರಿತಂತೆ ನಿರ್ದಿಷ್ಟ ಸಮಯ- ಚೌಕಟ್ಟಿನೊಳಗೆ ಕಾರ್ಯನಿರ್ವಹಿಸಬೇಕೆಂದು ಹೇಳಿತು. ಆ ತೀರ್ಪು ಕಾರ್ಯಾಂಗದ ಅಡಚಣೆಯ ವಿರುದ್ಧ ಪ್ರಾತಿನಿಧಿಕ ಪ್ರಜಾಪ್ರಭುತ್ವವನ್ನು ರಕ್ಷಿಸಲುಸಿದ್ಧ ಎಂದು ಸೂಚಿಸಿತು.
200 ನೇ ವಿಧಿಯ ಅಡಿಯಲ್ಲಿ ರಾಜ್ಯಪಾಲರಿಗೆ ಕೇವಲ ಮೂರು ಆಯ್ಕೆಗಳಿವೆ -ಒಪ್ಪಿಗೆ, ತಡೆಹಿಡಿಯುವುದು ಮತ್ತು ಹಿಂತಿರುಗಿಸುವುದು, ಅಥವಾ ರಾಷ್ಟ್ರಪತಿಗಳಿಗೆ ಕಾಯ್ದಿರಿಸುವುದು, ಮತ್ತು ಶಾಸಕಾಂಗವು ಪುನಃ ಅಂಗೀಕರಿಸಿದ ಮಸೂದೆಗಳು ಒಪ್ಪಿಗೆಯನ್ನು ಪಡೆಯಬೇಕು ಎಂದು ಸ್ಪಷ್ಟಪಡಿಸುವ ಮೂಲಕ, ನ್ಯಾಯಾಲಯವು ರಾಜ್ಯಗಳಲ್ಲಿ ಕಾನೂನು ರಚನೆಯ ಪ್ರಕ್ರಿಯೆಯಲ್ಲಿ ವಿವೇಕವನ್ನು ಪುನಃಸ್ಥಾಪಿಸಿದೆ ಎಂದು ಸ್ವಲ್ಪ ಸಮಯ ಅನಿಸಿತು. ಸಂವಿಧಾನದ ಮೌನಗಳನ್ನು ರಾಜ್ಯಗಳ ಸ್ವಾಯತ್ತತೆ ಮತ್ತು ಜನತೆಯ ಸಾರ್ವಭೌಮತ್ವದ ವಿರುದ್ಧದ ಆಯುಧಗಳಾಗಿ ಪರಿವರ್ತಿಸಲು ನ್ಯಾಯಾಂಗವು ಅನುಮತಿ ನೀಡುವುದಿಲ್ಲ ಎಂಬ ನಿರೀಕ್ಷೆಯನ್ನು ಅದು ನೀಡಿತು.
ಸಂವಿಧಾನ ಸಭೆಯ ಚರ್ಚೆಗಳ ಸಮಯದಲ್ಲಿ, ರಾಜ್ಯಪಾಲರ ಹುದ್ದೆಯ ದುರುಪಯೋಗದ ಸಾಧ್ಯತೆ ಮತ್ತು ಪ್ರಜಾಪ್ರಭುತ್ವ ರಾಜಕೀಯ ವ್ಯವಸ್ಥೆಯಲ್ಲಿ ಆಯ್ಕೆಯಾಗದ ಪ್ರಭುತ್ವ ಮುಖ್ಯಸ್ಥರು ತಟಸ್ಥರಾಗಿರುತ್ತಾರೆಯೇ ಎಂಬ ಬಗ್ಗೆ ಸಂದೇಹಗಳು ವ್ಯಕ್ತವಾಗಿದ್ದವು. ಮೇ 31, 1949 ರಂದು, ಅಂಬೇಡ್ಕರ್ “ಈ ಸದನದಲ್ಲಿರುವ ಎಲ್ಲರಿಗೂ ತಿಳಿದಿರುವಂತೆ, ರಾಜ್ಯಪಾಲರು ಯಾವುದೇ ರೀತಿಯ ಕಾರ್ಯಗಳನ್ನು ಹೊಂದಿರುವುದಿಲ್ಲ – ಪರಿಚಿತ ನುಡಿಗಟ್ಟಿನಲ್ಲಿಹೇಳುವಂತೆ, “ಅವರು ತಮ್ಮ ವಿವೇಚನೆಯಿಂದ ಅಥವಾ ಅವರ ವೈಯಕ್ತಿಕ ತೀರ್ಪಿನಲ್ಲಿ ನಿರ್ವಹಿಸಬೇಕಾದ ಯಾವುದೇ ಕೆಲಸಗಳು” ಇರುವುದಿಲ್ಲಎಂದು ಕರಡು ಸಮಿತಿ ಭಾವಿಸಿದೆ. ಹೊಸ ಸಂವಿಧಾನದ ತತ್ವಗಳ ಪ್ರಕಾರ, ಅವರು ಎಲ್ಲಾ ವಿಷಯಗಳಲ್ಲಿ ತಮ್ಮ ಮಂತ್ರಿಮಂಡಲದ ಸಲಹೆಯನ್ನು ಅನುಸರಿಸಬೇಕು” ಎಂದು ಹೇಳಿದರು.
ಮುಂದುವರೆದು ಅವರು “ನಾನು ಹೇಳಿದಂತೆ, ಈ ಕಾರ್ಯ ನಿರ್ವಾಹಕರು ಒಬ್ಬ ಶುದ್ಧ ಅಲಂಕಾರಿಕ ಕಾರ್ಯ ನಿರ್ವಾಹಕರಾಗಿರುತ್ತಾರೆ” ಎಂದು ಸ್ಪಷ್ಟವಾಗಿ ಹೇಳಿದರು. ಚರ್ಚೆಗಳಲ್ಲಿ ಭಾಗವಹಿಸುವವರು ರಾಜ್ಯಪಾಲರು ಉನ್ನತ ಸ್ಥಾನಮಾನದ ವ್ಯಕ್ತಿಗಳಾಗಿರಬೇಕು, ಸ್ಥಳೀಯ ರಾಜಕೀಯದಿಂದ ಅಲಿಪ್ತರಾಗಿರಬೇಕು, ಅವರ ಜ್ಞಾನ ಮತ್ತು ಅನುಭವವು ಮಾರ್ಗದರ್ಶಕ ಶಕ್ತಿಯಾಗಿರಬೇಕೇ ವಿನಹ ಸಂಘರ್ಷದ ಅಂಶವಾಗಿರಬಾರದು ಎಂದು ಒತ್ತಿ ಹೇಳಿದರು. ಸಂಕ್ಷಿಪ್ತವಾಗಿ ಹೇಳುವುದಾದರೆ, ಅವರು ಅಕಳಂಕ ಸಮಗ್ರತೆಯನ್ನು ಹೊಂದಿರಬೇಕು.
ಆತಂಕಗಳು ನಿಜವಾಗುತ್ತಿವೆ
ಸಂವಿಧಾನ ಸಭೆಯಲ್ಲಿ ವ್ಯಕ್ತಪಡಿಸಿದ ಆತಂಕಗಳು ಇಂದು ಸಂಪೂರ್ಣವಾಗಿ ನಿಜವೆಂದುಸಾಬೀತಾಗುತ್ತಿವೆ. ರಾಜ್ಯಪಾಲರು ಹೆಚ್ಚೆಚ್ಚಾಗಿಕೇಂದ್ರದಲ್ಲಿ ಆಳುವ ಪಕ್ಷದ ರಾಜಕೀಯ ಏಜೆಂಟರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ದಿನನಿತ್ಯದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ, ಮಸೂದೆಗಳನ್ನು ನಿರ್ಬಂಧಿಸುತ್ತಿದ್ದಾರೆ ಅಥವಾ ವಿಳಂಬ ಮಾಡುತ್ತಿದ್ದಾರೆ ಮತ್ತು ಅವರನ್ನು ಪಕ್ಷಪಾತಿಯೆಂದೇ ಗುರುತಿಸಬಹುದಾದ ಸಾರ್ವಜನಿಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರ ಆಯ್ಕೆ ಅಥವಾ ನೇಮಕಾತಿಯಲ್ಲಿ ಯಾವುದೇ ಪ್ರಜಾಪ್ರಭುತ್ವದ ಅಂಶವಿಲ್ಲ. ಅವರು ತಮ್ಮ ಹುದ್ದೆಗೆ ಸಂಪೂರ್ಣವಾಗಿ ಕೇಂದ್ರ ಕಾರ್ಯಾಂಗಕ್ಕೆ ಋಣಿಯಾಗಿರುತ್ತಾರೆ ಮತ್ತು ಅವರ ನಡವಳಿಕೆಯು ಈ ಅವಲಂಬನೆಯನ್ನು ಬಿಂಬಿಸುತ್ತದೆ. ಸಾಂವಿಧಾನಿಕವಾಗಿ ಕಂಡರಿಸಿದ ನಿಷ್ಪಕ್ಷಪಾತ ಪ್ರಭುತ್ವ ಮುಖ್ಯಸ್ಥರು ಈಗಕೇಂದ್ರೀಕೃತ ರಾಜಕೀಯ ನಿಯಂತ್ರಣವನ್ನು ಮರೆಮಾಚಲು ಅನುಕೂಲ ಮಾಡಿಕೊಡುವವವರಾಗಿ ಬಯಲಾಗುತ್ತಿದ್ದಾರೆ.
ಇದಕ್ಕೂ ರಾಷ್ಟ್ರಪತಿ ಹುದ್ದೆಗೂ ಇರುವ ವ್ಯತ್ಯಾಸವನ್ನು ಗಮನಿಸಬೇಕು. ರಾಜ್ಯಪಾಲರಂತಲ್ಲದೆ, ರಾಷ್ಟ್ರಪತಿಗಳನ್ನು ಪರೋಕ್ಷವಾಗಿ ಆಯ್ಕೆ ಮಾಡಲಾಗುತ್ತದೆ, ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳೆರಡರಿಂದಲೂ ಮತದಾರರು ಆರಿಸುತ್ತಾರೆ. ಇದು ಈ ಹುದ್ದೆಯನ್ನು ಔಪಚಾರಿಕವಾಗಿಯಾದರೂ ಒಟ್ಟು ಪ್ರಜಾಪ್ರಭುತ್ವ ಕ್ಷೇತ್ರಕ್ಕೆ ಜವಾಬುದಾರರಾಗಿ ಮಾಡುತ್ತದೆ. ರಾಷ್ಟ್ರಪತಿಗಳು ಸಹ ತಮ್ಮಆಯ್ಕೆಗೆ ಆಳುವ ಮೈತ್ರಿಕೂಟಕ್ಕೆ ಋಣಿಯಾಗಿದ್ದರೂ ಐತಿಹಾಸಿಕವಾಗಿ ಸಂಸತ್ತಿನ ಶಾಸನಕ್ಕೆ ಒಪ್ಪಿಗೆ ನೀಡುವುದನ್ನು ಅನಿರ್ದಿಷ್ಟವಾಗಿ ತಡೆಹಿಡಿಯುವ ಮೂಲಕ ಅಥವಾ ರಾಷ್ಟ್ರಪತಿ ಹುದ್ದೆಯನ್ನು ದಿನನಿತ್ಯದ ಮುಖಾಮುಖಿಯ ಕ್ಷೇತ್ರವನ್ನಾಗಿ ಪರಿವರ್ತಿಸುವ ಮೂಲಕ ಕೇಂದ್ರ ಸರ್ಕಾರ ಬಹಿರಂಗವಾಗಿ ಮುಜುಗರಕ್ಕೀಡಾಗುವುದನ್ನು ತಪ್ಪಿಸಿದ್ದಾರೆ.
ಆದರೂ ಸಂವಿಧಾನ ಪೀಠವು ಈಗ ಈ ಎರಡೂ ಹುದ್ದೆಗಳು ಒಂದೇ ರೀತಿಯ ವಿನಾಯಿತಿಗಳನ್ನು ಹೊಂದಿವೆ ಮತ್ತು ಅವುಗಳ ಶಾಸಕಾಂಗ ಕಾರ್ಯನಿರ್ವಹಣೆಯ ಮೇಲೆ ಯಾವುದೇ ಗಂಭೀರ ನ್ಯಾಯಾಂಗ ಮೇಲ್ವಿಚಾರಣೆ ಖಂಡಿತವಾಗಿಯೂ‘ಅಧಿಕಾರಗಳ ಪ್ರತ್ಯೇಕತೆ’ಯತತ್ವವನ್ನುಉಲ್ಲಂಘಿಸುತ್ತದೆ ಎಂದು ಪರಿಗಣಿಸಲು ಮುಂದಾಗಿದೆ.ಈ ಮೂಲಕನಾಮನಿರ್ದೇಶಿತ ಮತ್ತುರಾಜಕೀಯವಾಗಿ ಅವಲಂಬಿತರಾದ ರಾಜ್ಯಪಾಲರನ್ನು ರಾಜ್ಯಗಳಲ್ಲಿ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಬುಡಮೇಲು ಮಾಡಲು ಆ ಹುದ್ದೆಯನ್ನುಬಳಸಲಾಗುತ್ತಿರುವ ಕ್ಷಣದಲ್ಲಿಯೇ ನ್ಯಾಯಾಂಗ ಪರಿಶೀಲನೆಗೆಮೀರಿದವರುಎಂಬಸ್ಥಾನದಲ್ಲಿಇರಿಸಲಾಗುತ್ತಿದೆ.
ದುರುಪಯೋಗದ ಈ ಮೂರ್ತ ಮಾದರಿ ತಮ್ಮ ಮುಂದಿರುವಾಗ ಸಂವಿಧಾನ ಪೀಠವು, ಅಧಿಕಾರಗಳ ಪ್ರತ್ಯೇಕತೆ, ಸಾಂಸ್ಥಿಕ ಸೌಹಾರ್ದತೆ ಮತ್ತು ನ್ಯಾಯಾಂಗದ ಸಂಯಮ ಎಂದೆಲ್ಲಾ ಉನ್ನತ ತಾತ್ವಿಕ ಅನ್ವೇಷಣೆ ಕೈಗೊಳ್ಳಲು ಹೊರಟಿದೆ. 200 ಮತ್ತು 201 ನೇ ವಿಧಿಗಳ ಅಡಿಯಲ್ಲಿ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳ ಅಧಿಕಾರ ಚಲಾವಣೆಯ ಪ್ರಶ್ನೆಯನ್ನು ನ್ಯಾಯ ತೀರ್ಮಾನಕ್ಕೆ ಒಳಪಡಿಸಲಾಗದು ಎಂದು ಅದು ತೀರ್ಮಾನಿಸಿದೆ. ಸ್ಪಷ್ಟ ಸಮಯದ ಚೌಕಟ್ಟನ್ನು ವಿಧಿಸುವ ಈ ಹಿಂದಿನ ತನ್ನದೇ ಕ್ರಮ ‘ನ್ಯಾಯಾಂಗೀಯ ಗಡಿಯನ್ನು ಮೀರಿದ’ ಕ್ರಮ ಎಂದು ತಿರಸ್ಕರಿಸಿದೆ ಮತ್ತು ಸಾಂವಿಧಾನಿಕ ಸಂಧಿವಾತವನ್ನು ತಡೆಗಟ್ಟುವ ಜವಾಬ್ದಾರಿಯಿಂದ ಕೈ ತೊಳೆದುಕೊಂಡಿದೆ.
ಅಂಜು ಬುರುಕತನ – ಮತ್ತಷ್ಟು ಕಿಡಿಗೇಡಿತನಕ್ಕೆ ಪ್ರೋತ್ಸಾಹ
ನ್ಯಾಯಾಲಯಗಳು ಸಾಂವಿಧಾನಿಕ ಅಧಿಕಾರಿಗಳಿಗೆ ಒಂದು ‘ವಿವೇಕಯುತ’ ಸಮಯದೊಳಗೆ ಕಾರ್ಯನಿರ್ವಹಿಸುವಂತೆ ‘ಸೀಮಿತ ನಿರ್ದೇಶನ’ ವನ್ನಷ್ಟೇ ನೀಡಬಹುದು ಎಂದು ಸೂಚಿಸಲಾಗಿದೆ. ಆದರೆ ಯಾವುದು ವಿವೇಕಯುತ ಎಂದು ನಿರೂಪಿಸಿಲ್ಲ ಅಥವ ವಿವೇಕಯುತವಲ್ಲದ ವಿಳಂಬದ ಅರ್ಥಪೂರ್ಣ ಪರಿಣಾಮಗಳ ಬಗ್ಗೆ ಒತ್ತು ನೀಡಿಲ್ಲ. ನಿರ್ದಿಷ್ಟ ಸಮಯದ ಮಿತಿ ಅಥವಾ ಜಾರಿಗೊಳಿಸಬಹುದಾದ ಮಾನದಂಡವಿಲ್ಲದೆ ‘ವಿವೇಕಯುತತೆ’ ಎಂಬುದು ಒಂದು ಟೊಳ್ಳು ನುಡಿಗಟ್ಟು ಆಗುತ್ತದೆ. ಇದು ರಾಜ್ಯಪಾಲರು ಮಸೂದೆಗಳ ಮೇಲೆ ಸುಮ್ಮನೆ ಕೂತಿರಲು ಅನುವು ಮಾಡಿಕೊಡುತ್ತದೆ, ತಾವು ಔಪಚಾರಿಕವಾಗಿ ವಿವೇಚನೆಯ ಮುಖವಾಡವನ್ನು ಕಾಯ್ದುಕೊಳ್ಳುವವರೆಗೆ ಪರಿಣಾಮಕಾರಿ ಪರಿಹಾರಗಳೊಂದಿಗೆ ನ್ಯಾಯಾಂಗವು ಮಧ್ಯಪ್ರವೇಶಿಸುವುದಿಲ್ಲ ಎಂಬ ವಿಶ್ವಾಸವನ್ನು ಅವರಿಗೆ ಕೊಡುತ್ತದೆ.
ಈ ಅಂಜು ಬುರುಕತನವು ಎಸ್ ಆರ್ ಬೊಮ್ಮಾಯಿ ತೀರ್ಪಿನಂತಹ ಐತಿಹಾಸಿಕ ಮಧ್ಯಪ್ರವೇಶಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿರುವುದು ಕಣ್ಣಿಗೆ ರಾಚುವಂತಿದೆ. ಆ ತೀರ್ಪು ಸರ್ಕಾರದ ಬಹುಮತವನ್ನು ಸದನದಲ್ಲಿ ಪರೀಕ್ಷಿಸಬೇಕು, ಅದನ್ನು ರಾಜ್ಯಪಾಲರ ವೈಯಕ್ತಿಕ ತೃಪ್ತಿಯಿಂದ ನಿರ್ಧರಿಸಲಾಗದು ಎಂದು ಸ್ಪಷ್ಟವಾಗಿ ಹೇಳಿತ್ತು. ಆ ನಿರ್ಧಾರವು 356 ನೇ ವಿಧಿಯ ರಾಜಕೀಯ ದುರುಪಯೋಗದ ವಿರುದ್ಧ ದೃಢವಾದ ನ್ಯಾಯಾಂಗ ನಿಲುವನ್ನು ತೋರಿಸಿತು ಮತ್ತು ಕೇಂದ್ರೀಯ ಸ್ವೇಚ್ಛಾಚಾರದ ವಿಕಾರ ರೂಪವನ್ನು ತಡೆಗಟ್ಟಲು ಸಹಾಯ ಮಾಡಿತು.
ಇಂದು, ರಾಜ್ಯಪಾಲರು ಮತ್ತೊಮ್ಮೆ – ಈ ಬಾರಿ ಸರ್ಕಾರಗಳನ್ನು ವಜಾಗೊಳಿಸುವ ಬದಲು ಶಾಸಕಾಂಗ ಅಡಚಣೆಯ ಮೂಲಕ – ಒಕ್ಕೂಟ ಉದ್ವಿಗ್ನತೆಯ ಕೇಂದ್ರಬಿಂದುವಾಗಿರುವಾಗ ಸಾಂವಿಧಾನಿಕ ಒಕ್ಕೂಟತತ್ವದ ಬಲವಾದ ರಕ್ಷಣೆಯ ಬೊಮ್ಮಾಯಿ ಮಾರ್ಗವನ್ನು ಅನುಸರಿಸಬಾರದು ಎಂಬ ನಿಲುವನ್ನು ನ್ಯಾಯಾಲಯ ಆಯ್ಕೆ ಮಾಡಿಕೊಂಡಿದೆ. ಚುನಾಯಿತ ಶಾಸಕಾಂಗದ ಇಚ್ಛೆಯುಮಾತ್ರವೇ, ಅದು ಸ್ಪಷ್ಟವಾಗಿಯೂ ಸಂವಿಧಾನ ಬಾಹಿರವಾಗಿರದಿದ್ದರೆ, ಮೇಲುಗೈ ಹೊಂದಬೇಕು ಎಂದು ಒತ್ತಾಯಿಸುವ ಬದಲು, ಸಲಹಾ ಅಭಿಪ್ರಾಯವು ರಾಜ್ಯಪಾಲರ ಮೌನವನ್ನು ಪರಾಮರ್ಶಿಸಲಾಗದ ಸಾಂವಿಧಾನಿಕ ಆಚರಣೆಎಂದು ಪರಿವರ್ತಿಸುತ್ತದೆ, ಇದರಿಂದಾಗಿ ಮತ್ತಷ್ಟು ಕಿಡಿಗೇಡಿತನಕ್ಕೆ ಪ್ರೋತ್ಸಾಹ ನೀಡುತ್ತದೆ.
ಮೋದಿ ಸರ್ಕಾರದ ಕಳೆದ ಹನ್ನೊಂದುವರೆ ವರ್ಷಗಳಲ್ಲಿ, ಭಾರತದ ಒಕ್ಕೂಟ ರಚನೆಯು ನಿರಂತರ ಒತ್ತಡಕ್ಕೆ ಒಳಗಾಗಿದೆ. ಕೇಂದ್ರ-ರಾಜ್ಯ ಸಂಬಂಧಗಳು ಅಧಿಕಾರವನ್ನು ಕೇಂದ್ರೀಕರಿಸಲು, ಆರ್ಥಿಕ ಸ್ವಾಯತ್ತತೆಯನ್ನು ದುರ್ಬಲಗೊಳಿಸಲು ಮತ್ತು ರಾಜಕೀಯ ವಿರೋಧಿಗಳ ಶಕ್ತಿಗುಂದಿಸಲು ಸಾಂಸ್ಥಿಕ ಸೆರೆ ಹಾಗೂ ಹಣಕಾಸು ಬಲವಂತದ ವ್ಯವಸ್ಥಿತ ಪ್ರಯತ್ನಗಳಿಗೆ ಗುರಿಯಾಗಿರುವುದು ಕಾಣಬಂದಿದೆ. ಕೇಂದ್ರ ಪ್ರಾಯೋಜಿತ ಯೋಜನೆಗಳ ವಿನ್ಯಾಸದಿಂದ ಹಿಡಿದು ನಿಧಿಗಳನ್ನು ಮನಬಂದಂತೆ ಬಿಡುಗಡೆ ಮಾಡುವ ಅಥವಾ ತಡೆಹಿಡಿಯುವ ಕ್ರಮದವರೆಗೆ, ಕೇಂದ್ರವು ತನ್ನ ಹಣಕಾಸಿನ ಪ್ರಾಬಲ್ಯವನ್ನು ತನ್ನ ರಾಜಕೀಯ ಮತ್ತು ಆರ್ಥಿಕ ಕಾರ್ಯಸೂಚಿಯನ್ನುಅನುಸರಿಸುವಂತೆ ಮಾಡಲು ಸತತವಾಗಿ ಬಳಸಿಕೊಂಡಿದೆ. ನೈಸರ್ಗಿಕ ವಿಪತ್ತುಗಳಿಂದ ಪರಿಹಾರ ನೀಡಲು ಉದ್ದೇಶಿಸಲಾದ ಹಣವನ್ನು ಸಹ ರಾಜ್ಯ ಸರ್ಕಾರಗಳಿಗೆ, ಕೇವಲ ರಾಜಕೀಯ ಹಗೆ ಸಾಧಿಸಲಿಕ್ಕಾಗಿಯೇ ತಡೆ ಹಿಡಿಯಲಾಗಿದೆ.
ಸಾಂವಿಧಾನಿಕ ನಿಬಂಧನೆಗಳು ನಿರ್ಜೀವ ಅಕ್ಷರಗಳಲ್ಲ
ಇಂತಹ ಪರಿಸರದಲ್ಲಿ, ರಾಜ್ಯಪಾಲರನ್ನು ಬಿಜೆಪಿಯೇತರ ಆಡಳಿತದ ರಾಜ್ಯಗಳ ಮೇಲೆ ಹೆಚ್ಚುವರಿ ನಿಯಂತ್ರಣದ ಸನ್ನೆಗೋಲಾಗಿ ನಿಯೋಜಿಸಲಾಗಿದೆ. ಜನ ಕಲ್ಯಾಣ, ಶಿಕ್ಷಣ, ಆರೋಗ್ಯ ಅಥವಾ ಸಾಮಾಜಿಕ ನ್ಯಾಯದಲ್ಲಿ ಪರ್ಯಾಯ ನೀತಿ ಆಯ್ಕೆಗಳನ್ನು ಒಳಗೊಂಡಿರುವ ಶಾಸಕಾಂಗ ಉಪಕ್ರಮಗಳನ್ನು ನಿಲ್ಲಿಸಲಾಗಿದೆ ಅಥವ ಪ್ರಶ್ನಿಸಲಾಗಿದೆ- ಸಾಂವಿಧಾನಿಕ ಆಧಾರದ ಮೇಲೆ ಅಲ್ಲ, ಬದಲಿಗೆಅವು ಕೇಂದ್ರದಲ್ಲಿಆಳುವಪಕ್ಷದ ಸೈದ್ಧಾಂತಿಕ ಮಾರ್ಗಕ್ಕೆ ಅನುಸಾರವಾಗಿ ಇಲ್ಲ ಎಂಬ ಕಾರಣಕ್ಕೆ. ರಾಜ್ಯ ಸರ್ಕಾರಗಳು ಕೇಂದ್ರದ ಆದೇಶಗಳನ್ನುಪಾಲಿಸಿದರೆ ಮಾತ್ರವೇ ಒಕ್ಕೂಟ ವ್ಯವಸ್ಥೆಯನ್ನು ಗೌರವಿಸಲಾಗುತ್ತದೆ ಎಂಬ ಸಂದೇಶ ಇಲ್ಲಿ ಸ್ಪಷ್ಟವಾಗಿದೆ.
ಬಲವಂತದ ಒಕ್ಕೂಟತತ್ವ ಮತ್ತು ಆಕ್ರಮಣಕಾರಿ ಕೇಂದ್ರೀಕರಣದ ಈ ಪರಿಸ್ಥಿತಿಗಳಲ್ಲಿ, ‘ಅಧಿಕಾರಗಳ ಪ್ರತ್ಯೇಕತೆ’ ಎಂಬುದರ ಒಂದು ಸಂಕುಚಿತ ವ್ಯಾಖ್ಯಾನದ ಮರೆಯಲ್ಲಿ ಅಡಗಿಕೊಳ್ಳಲು ಹೋಗದೆ, ಪ್ರಜಾಸತ್ತಾತ್ಮಕ ಆಯ್ಕೆಯನ್ನು ಬಲಪಡಿಸುವ ಮತ್ತು ರಾಜ್ಯದ ಸ್ವಾಯತ್ತತೆಯನ್ನು ರಕ್ಷಿಸುವ ರೀತಿಯಲ್ಲಿ ಸಂವಿಧಾನವನ್ನು ವ್ಯಾಖ್ಯಾನಿಸುವುದು ಸುಪ್ರೀಂ ಕೋರ್ಟ್‌ನ ಕರ್ತವ್ಯ. ಸಾಂವಿಧಾನಿಕ ನಿಬಂಧನೆಗಳು ನಿರ್ಜೀವ ಅಕ್ಷರಗಳಲ್ಲ; ಅವುಗಳನ್ನು ಕ್ರಿಯಾತ್ಮಕವಾಗಿ, ಕಾಲದ ಅಗತ್ಯಗಳಿಗೆ ಅನುಗುಣವಾಗಿ ಮತ್ತು ಚುನಾಯಿತ ಸರ್ಕಾರಗಳ ಮೂಲಕ ವ್ಯಕ್ತಪಡಿಸಿದ ಜನತೆಯ ಸಾರ್ವ ಭೌಮತ್ವದ ಬಗ್ಗೆ ನಿಸ್ಸಂದಿಗ್ಧ ಪಕ್ಷಪಾತದೊಂದಿಗೆ ಓದಬೇಕು,.
ಇದನ್ನೂ ನೋಡಿ: ‘ರೈತ, ಕಾರ್ಮಿಕ, ಜನ ವಿರೋಧಿ ಸರ್ಕಾರ ಉಳಿಯುವುದಿಲ್ಲ’ | ಕರಡು ದಹಿಸಿ ಆಕ್ರೋಶ Janashakthi Media
ನಿಜವಾಗಿಯೂ ಪ್ರಗತಿಪರವಾದ 200 ಮತ್ತು 201 ನೇ ವಿಧಿಗಳ ವ್ಯಾಖ್ಯಾನವು ಪ್ರಾತಿನಿಧಿಕ ಪ್ರಜಾಪ್ರಭುತ್ವವನ್ನು ಸೋಲಿಸಲು ಸಾಂವಿಧಾನಿಕ ಮೌನಗಳನ್ನು ಬಳಸಲಾಗದು ಎಂದು ಗುರುತಿಸಬೇಕಾಗಿತ್ತು. ಅದು ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ಒಂದು ನಿರ್ದಿಷ್ಟ, ಜಾರಿಗೊಳಿಸಬಹುದಾದ ಸಮಯದ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸಬೇಕು ಮತ್ತು ಹಾಗೆ ಮಾಡಲು ವಿಫಲವಾದರೆ ಅದುಸಾಂವಿಧಾನಿಕ ತಪ್ಪುಎಂದಾಗುತ್ತದೆ, ಅದಕ್ಕೆ ನ್ಯಾಯಾಲಯಗಳು ಪರಿಣಾಮಕಾರಿ ಪರಿಹಾರಗಳನ್ನು ರೂಪಿಸಬಹುದಾಗಿದೆ ಎಂದು ದೃಢಪಡಿಸಬೇಕಾಗಿತ್ತು. ಇಂತಹದೊಂದುನಿಲುವು, ಕಾರ್ಯಾಂಗದ ಅಧಿಕಾರಗಳನ್ನು ಕಸಿದುಕೊಳ್ಳುವಂತದ್ದಲ್ಲ, ಮಾತ್ರವೇಅಲ್ಲ, ಚುನಾಯಿತರಲ್ಲದ ಅಧಿಕಾರಸ್ಥರು ಜನರ ಇಚ್ಛೆಯನ್ನು ಮೀರಿವರ್ತಿಸಲು ಸಾಧ್ಯವಿಲ್ಲ ಎಂಬ ಮೂಲ ಪ್ರಜಾಪ್ರಭುತ್ವ ತತ್ವವನ್ನು ಎತ್ತಿಹಿಡಿಯುತ್ತಿತ್ತು.
ಸಮಯಸೂಚಿಗಳನ್ನು ನಿಗದಿಪಡಿಸಲು ನಿರಾಕರಿಸುವ ಮೂಲಕ ಮತ್ತು ಈ ಕ್ಷೇತ್ರದಲ್ಲಿ ರಾಜ್ಯಪಾಲರ ಕ್ರಮಗಳು ನ್ಯಾಯಾಂಗ ಪರಾಮರ್ಶೆಗೆ ಮೀರಿದವುಗಳು ಎಂದೇ ಘೋಷಿಸಿ, ಸುಪ್ರೀಂ ಕೋರ್ಟ್‌ನ ಸಲಹಾ ಅಭಿಪ್ರಾಯವು ಪ್ರಸ್ತುತ ರಾಜಕೀಯ ಪ್ರಸಂಗವು ಒಡ್ಡಿರುವ ಸವಾಲನ್ನು ಎದುರಿಸಿ ನಿಲ್ಲುವಲ್ಲಿ ವಿಫಲವಾಗಿದೆ. ಅದು ಅಧಿಕಾರಗಳ ಪ್ರತ್ಯೇಕತೆ ಎಂಬ ಬಾಹ್ಯೋಪಚಾರದ ಸಿದ್ಧಾಂತದ ಬಲಿಪೀಠದಲ್ಲಿ ಪ್ರಜಾಪ್ರಭುತ್ವದ ಸಾರವನ್ನು ಬಲಿಕೊಟ್ಟಿದೆ ಮತ್ತು ಹಾಗೆ ಮಾಡುವುದರ ಮೂಲಕ ಇದು, ಈಗಾಗಲೇ ಸಾಂವಿಧಾನಿಕ ಸಂಸ್ಥೆಗಳನ್ನು ತಮ್ಮ ಸಂಕುಚಿತ ಗುರಿ ಸಾಧನೆಗಳಿಗೆ ಬಗ್ಗಿಸುತ್ತಿರುವವರನ್ನು ಬಲಪಡಿಸಿದೆ.
ರಾಜ್ಯಪಾಲರ ಹುದ್ದೆಯೂ ಸೇರಿದಂತೆ ಸಾಂವಿಧಾನಿಕ ಹುದ್ದೆಗಳನ್ನು ಜನತೆಯ ಇಚ್ಛೆಗೆ ಉತ್ತರದಾಯಿಯಾಗಬೇಕಾದ ಚೌಕಟ್ಟಿನೊಳಕ್ಕೆ ತರಬೇಕೆಂದು ಒತ್ತಾಯಿಸುವ ಕೆಲಸವು ಈಗ ಪ್ರಜಾಪ್ರಭುತ್ವ ಚಳುವಳಿ, ಪ್ರಗತಿಪರ ರಾಜಕೀಯ ಶಕ್ತಿಗಳು, ಸ್ವತಂತ್ರ ಮಾಧ್ಯಮಗಳು ಮತ್ತು ಜನತೆಯ ಮೇಲಿದೆ. ಸಂವಿಧಾನವು ಜನತೆಗೆ ಸೇರಿದ್ದು, ಆಯ್ಕೆಯಾಗದ ಅಥವಾ ಪಕ್ಷಪಾತೀ ಅಧಿಕಾರಸ್ಥರಿಗೆ ಸೇರಿದ್ದಲ್ಲ. ಆ ಚೈತನ್ಯವನ್ನು ಮರಳಿ ಪಡೆಯಲು ರಾಜಕೀಯ ಹೋರಾಟ ಮತ್ತು ಉನ್ನತ ನ್ಯಾಯಾಂಗ ಸೇರಿದಂತೆ ಪ್ರಭುತ್ವದ ಪ್ರತಿಯೊಂದು ಅಂಗವೂ ಅದರ ವ್ಯಾಖ್ಯಾನ ಮತ್ತು ಆಚರಣೆಯನ್ನು ಪ್ರಜಾಪ್ರಭುತ್ವ, ಒಕ್ಕೂಟವಾದ, ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯದ ತತ್ವಗಳಿಗೆ ಅನುಸಾರವಾಗಿಯೇ ಮಾಡಬೇಕು ಎಂದು ಮತ್ತೆ ಹೊಸದಾಗಿ ಆಗ್ರಹಿಸುವುದು ಇವೆರಡೂ ಅಗತ್ಯವಾಗಿವೆ.
(ಕೃಪೆ: ಪೀಪಲ್ಸ್ ಡೆಮಾಕ್ರಸಿ ವಾರ ಪತ್ರಿಕೆ ಅನು: ಕೆ.ವಿ.)

ವ್ಯಂಗ್ಯಚಿತ್ರ ಕೃಪೆ:
ಪಿ.ಮಹಮ್ಮದ್, ಫೇಸ್‍ಬುಕ್
