ಬೆಂಗಳೂರು – ರಾಜಕೀಯ ಪ್ರಬಲ ಎದುರಾಳಿ ಕ್ಷೇತ್ರಗಳಲ್ಲಿ ಇನ್ನೂ ಕಾಂಗ್ರೆಸ್ ಟಕೆಟ್ ಘೋಷಣೆ ಮಾಡದೇ ಆ ಕ್ಷೇತ್ರವನ್ನ ಖಾಲಿ ಬಿಟ್ಟಿರುವುದು ಕುತೂಹಲಕ್ಕೆ ಕಾರಣವಾಗಿದೆ. ಈಗಾಗಲೇ 124 ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನ ಘೋಷಿಸಿದ್ದು, ಇನ್ನೂ ಎರಡನೇ ಪಟ್ಟಿ ಏಪ್ರಿಲ್ ಮೊದಲ ವಾರದಂದು ಬಿಡುಗಡೆಯಾಗಲಿದೆ.
ಈಗಾಗಲೇ ಟಿಕೆಟ್ ಕುರಿತು ಸಾಕಷ್ಟು ಸಭೆಗಳನ್ನ ನಡೆಸಿರುವ ಕಾಂಗ್ರೆಸ್ ನಾಯಕರು ಅನ್ಯ ಪಕ್ಷಗಳಿಂದ ಬರುವ ನಾಯಕರಿಗೆ 25 ರಿಂದ 30 ಸ್ಥಾನಗಳನ್ನ ಕಾಯ್ದಿರಿಸಿದ್ದಾರೆ ಎಂಬ ಮಾಹಿತಿ ಕಾಂಗ್ರೆಸ್ ಮೂಲಗಳಿಂದ ತಿಳಿದು ಬಂದಿದೆ.
ಕೊನೆಯ ಹಂತದಲ್ಲಿ ಟಿಕೆಟ್ ಘೋಷಣೆಗೆ ಸಿದ್ದತೆ :
ಆಪರೇಷನ್ ಹಸ್ತ ದ ಮೂಲಕ ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಗಾಳ ಹಾಕಿರುವ ಕಾಂಗ್ರೆಸ್ ಪ್ರಬಲ ಎದುರಾಳಿ ಕ್ಷೇತ್ರಗಳಿ ಅಭ್ಯರ್ಥಿ ಆಯ್ಕೆಯನ್ನ ಸಸ್ಪೆನ್ಸ್ ಆಗಿ ಇಟ್ಟಿದೆ.ಇತ್ತ ಆಪರೇಷನ್ ಕಮಲದ ಮೂಲಕ ಬಿಜೆಪಿ ಸೇರ್ಪಡೆಯಾದ ಕೆಲ ನಾಯಕರು ಮತ್ತೆ ಮಾತೃ ಪಕ್ಷಕ್ಕೆ ಬರಲಿದ್ದಾರೆ ಎಂಬ ಚರ್ಚೆಗಳು ಶುರುವಾಗಿದ್ದು, ಕಾಂಗ್ರೆಸ್ ನಾಯಕರು ಕಾದುನೋಡುವ ತಂತ್ರಗಾರಿಕೆಯನ್ನ ನಡೆಸಿ ಅಂತಿಮವಾಗಿ ಕೊನೆಯ ಹಂತದಲ್ಲಿ ಟಿಕೆಟ್ ಘೋಷಣೆ ಮಾಡಬೇಕು ಎಂಬ ಲೆಕ್ಕಾಚಾರವನ್ನ ಹಾಕಿಕೊಂಡಿದ್ದಾರೆ ಎಂದು ಮಾಹಿತಿಗಳು ಲಭ್ಯವಾಗಿದೆ.
ಇನ್ನೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಶಿಗ್ಗಾಂವಿ ಕ್ಷೇತ್ರಕ್ಕೆ ಕಾಂಗ್ರೆಸ್‍ನಿಂದ ವಿನಯ್ ಕುಲಕರ್ಣಿ ಅವರನ್ನು ಕಣಕ್ಕೆ ಇಳಿಸಲು ಕಾಂಗ್ರೆಸ್ ಚಿಂತನೆ ಹೊಂದಿದೆ. ಆದರೆ, ವಿನಯ್ ಕುಲಕರ್ಣಿ ಅವರು ಧಾರವಾಡದಿಂದ ಸ್ಪರ್ಧಿಸುವ ಬಯಕೆ ಹೊಂದಿದ್ದಾರೆ ಎನ್ನಲಾಗಿದೆ. ಹೀಗಾಗಿ ಶಿಗ್ಗಾಂವಿ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಹೆಸರು ಪ್ರಕಟಿಸಿಲ್ಲ. ಜತೆಗೆ, ವಿನಯ್ ಕುಲಕರ್ಣಿ ಅವರಿಗೆ ಅವರ ಬಯಕೆಯ ಕ್ಷೇತ್ರಕ್ಕೂ ಹೆಸರು ಪ್ರಕಟಿಸಿಲ್ಲ. ಹೀಗಾಗಿ ಕಾದು ನೋಡಿ ಅಭ್ಯರ್ಥಿಯನ್ನ ಕಣಕ್ಕಿಳಿಸಲು ಕಾಂಗ್ರೆಸ್ ನಾಯಕರು ಚಿಂತನೆ ನಡೆಸಿದ್ದಾರೆ.
ಇದನ್ನೂ ಓದಿ : ವಿಧಾನಸಭಾ ಚುನಾವಣೆ; 124 ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮೊದಲ ಪಟ್ಟಿ ಬಿಡುಗಡೆ-ವರುಣದಿಂದ ಸಿದ್ದು, ಕನಕಪುರದಿಂದ ಡಿಕೆಶಿ ಸ್ಪರ್ಧೆ
ಹಲವು ಕ್ಷೇತ್ರಗಳಲ್ಲಿ ಟಿಕೆಟ್ ಘೋಷಣೆ ಸಸ್ಪನ್ಸ್ :
ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿರುವ ಯಡಿಯೂರಪ್ಪ ಅವರು, ತಮ್ಮ ಪುತ್ರ ವಿಜಯೇಂದ್ರ ಶಿಕಾರಿಪುರ ಕ್ಷೇತ್ರವನ್ನ ಬಿಟ್ಟುಕೊಟ್ಟಿದ್ದು, ಈ ಕ್ಷೇತ್ರದಲ್ಲೂ ಅಭ್ಯರ್ಥಿಯ ಹೆಸರನ್ನ ಕಾಂಗ್ರೆಸ್ ಪ್ರಕಟಿಸಿಲ್ಲ. ಅಲ್ಲದೇ ಸಚಿವರಾದ ಆರ್. ಅಶೋಕ್ ಕ್ಷೇತ್ರವಾದ ಪದ್ಮನಾಭನಗರ, ಮುರುಗೇಶ್ ನಿರಾಣಿಯವರ ಬೀಳಗಿ ಕ್ಷೇತ್ರ, ಬಿ. ಶ್ರೀರಾಮುಲು ಅವರ ಮೊಳಕಾಲ್ಮೂರು, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಶಿರಸಿ, ಬಸವನಗೌಡ ಪಾಟೀಲ್ ಯತ್ನಾಳ್ ಅವರ ವಿಜಯಪುರ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಘೋಷಣೆ ಸಸ್ಪನ್ಸ್ ಆಗಿ ಉಳಿದಿದೆ.
ಇನ್ನೂ ಜಗದೀಶ್ ಶೆಟ್ಟರ್ ಅವರ ಕ್ಷೇತ್ರವಾದ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್, ಈಶ್ವರಪ್ಪ ಅವರ ಶಿವಮೊಗ್ಗ, ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಚನ್ನಪಟ್ಟಣ ಸೇರಿದಂತೆ ಪ್ರಮುಖ ಎದುರಾಳಿ ಪಕ್ಷಗಳ ನಾಯಕರ ಕ್ಷೇತ್ರಗಳಿಗೆ ಟಿಕೆಟ್ ಘೋಷಣೆಯಾಗಿಲ್ಲ. ಹೊಸ ಪಕ್ಷವಾದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಕಟ್ಟಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಸ್ಪರ್ಧಿಸಲಿರುವ ಗಂಗಾವತಿ ಕ್ಷೇತ್ರಕ್ಕೂ ಟಿಕೆಟ್ ಘೋಷಣೆ ಮಾಡಿಲ್ಲ.
ಇದನ್ನೂ ಓದಿ : ಕೈ ಅಭ್ಯರ್ಥಿಗಳ ಮೊದಲ ಪಟ್ಟಿ ನಾಳೆ ಬಿಡುಗಡೆ : ಡಿ.ಕೆ.ಶಿವಕುಮಾರ್
ಕಾದು ನೋಡುವ ಕೈ ತಂತ್ರ :
ಕಾಂಗ್ರೆಸ್-ಜೆಡಿಎಸ್ ತೊರೆದು ಬಿಜೆಪಿ ಸರ್ಕಾರ ರಚನೆಗೆ ಕಾರಣವಾದ 17 ಕ್ಷೇತ್ರಗಳ ಪೈಕಿ ಎಂಟು ರಮೇಶ್ ಜಾರಕಿಹೊಳಿ- ಗೋಕಾಕ್, ಎಸ್.ಟಿ. ಸೋಮಶೇಖರ್- ಯಶವಂತಪುರ, ಗೋಪಾಲಯ್ಯ- ಮಹಾಲಕ್ಷ್ಮೇಲೇಔಟ್, ಬೈರತಿ ಬಸವರಾಜ- ಕೆ.ಆರ್. ಪುರ, ಶಿವರಾಮ ಹೆಬ್ಬಾರ್- ಯಲ್ಲಾಪುರ, ಡಾ. ಕೆ. ಸುಧಾಕರ್- ಚಿಕ್ಕಬಳ್ಳಾಪುರ, ಮಹೇಶ್ ಕುಮಟಳ್ಳಿ- ಅಥಣಿ, ನಾರಾಯಣ ಗೌಡ- ಕೆ.ಆರ್. ಪೇಟೆ ಕ್ಷೇತ್ರಗಳಿಗೂ ಟಿಕೆಟ್ ಘೋಷಣೆ ಮಾಡದೇ ಕಾಂಗ್ರೆಸ್ ನಾಯಕರು ಅನ್ಯ ಪಕ್ಷಗಳ ನಾಯಕರಿಗಾಗಿ ಕೆಲ ಕ್ಷೇತ್ರಗಳನ್ನ ಕಾಯ್ದಿರಿಸಿ, ಕಾದು ನೋಡುವ ತಂತ್ರಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ