ಬೆಂಗಳೂರು: ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ನಡೆದ ಪರಿಷ್ಕರಣೆಯಲ್ಲಿ ಪಠ್ಯದಲ್ಲಿ ಅನೇಕ ಮುಖ್ಯವಾದ ವಿಚಾರಗಳನ್ನು ಕೈ ಬಿಟ್ಟು, ಅನಗತ್ಯವಾಗಿ ಕೋಮು ವಿಚಾರಗಳನ್ನು ತುರುಕಿ ಎಳೆ ಮಕ್ಕಳಿಗೆ ವಿಷ ಉಣಿಸುವ ಕೆಲಸ ಮಾಡಿತ್ತು. ಹಾಗಾಗಿ ಆ ಪಠ್ಯಗಳನ್ನು ಯಥಾವತ್ತಾಗಿ ವಿತರಿಸುವುದನ್ನು ನಿಲ್ಲಿಸಬೇಕು. ಹಾಗೂ ಪಠ್ಯಪುಸ್ತಕ ಪರಿಷ್ಕರಣೆಗೆ ತಕ್ಷಣವೇ ಸಮಿತಿ ರಚಿಸಬೇಕು ಎಂದು ಸಮಾನ ಮನಸ್ಕರ ಒಕ್ಕೂಟ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.
ಸೋಮವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಹಿರಿಯ ಸಾಹಿತಿ, ಕಲಾವಿದರು, ಹಾಗೂ ಜನಪರ ಸಂಘಟನೆಗಳ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಖುದ್ದು ಭೇಟಿ ಮಾಡಿದರು. ಸುದೀರ್ಘ ಪತ್ರದ ಮುಖೇನ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದೆ.
ಸಾಹಿತಿಗಳಾದ ಡಾ.ಕೆ.ಮರುಳಸಿದ್ದಪ್ಪ, ಪ್ರೊ.ಎಸ್.ಜಿ.ಸಿದ್ದರಾಮಯ್ಯ ನೇತೃತ್ವದ, ಪ್ರೊ.ರವಿವರ್ಮಕುಮಾರ್, ಪ್ರೊ.ರಾಜೇಂದ್ರ ಚಿನ್ನಿ, ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ಪ್ರೊ.ಎಲ್.ಎನ್.ಮುಕುಂದರಾಜ್, ಡಾ.ಬಂಜಗೆರೆ ಜಯಪ್ರಕಾಶ್, ಡಾ.ವಿಜಯಮ್ಮ, ದಿನೇಶ್ ಅಮೀನ್ ಮಟ್ಟು, ಡಾ.ವಸುಂಧರಾ ಭೂಪತಿ, ಡಾ.ನಿರಂಜನಾರಾಧ್ಯ, ಕೆ.ಎಸ್, ವಿಮಲಾ ಮುಂತಾದವರನ್ನು ಒಳಗೊಂಡ ನಿಯೋಗ ಭೇಟಿ ಮಾಡಿ ಶಿಕ್ಷಣ ಕ್ಷೇತ್ರವನ್ನು ಬಲಪಡಿಸಲು ಒತ್ತಾಯಿಸಿದೆ.
ಹಿಂದಿನ ಸರ್ಕಾರ ಶಿಕ್ಷಣವನ್ನು ಸಂಪೂರ್ಣವಾಗಿ ರಾಜಕಾರಣಕ್ಕೆ ಬಳಸಿಕೊಳ್ಳುವ ಮೂಲಕ ಹಾಳು ಮಾಡಿದ್ದಲ್ಲದೆ ಸಾಕಷ್ಟು ಗೊಂದಲ ಸೃಷ್ಟಿಸಿತ್ತು . ಪೊಳ್ಳು ರಾಷ್ಟ್ರೀಯತೆಯ ಹೆಸರಿನಲ್ಲಿ ಎಳೆ ಮಕ್ಕಳಿಗೆ ವಿಷ ಉಣಿಸುವ ಕೆಲಸ ಮಾಡಿತ್ತು. ಹೀಗಾಗಿ ಈಗಾಗಲೇ ಮುದ್ರಿತವಾಗಿ ಬಿಇಒ ಕಚೇರಿ/ಶಾಲೆಗಳಿಗೆ ತಲುಪಿರುವ ಕಲುಷಿತ ಪುಸ್ತಕಗಳನ್ನು ಯಥಾವತ್ತಾಗಿ ಮಕ್ಕಳಿಗೆ ವಿತರಿಸದಿರಲು ಸ್ಪಷ್ಟ ಸೂಚನೆಯನ್ನು ಸಂಬಂಧಿಸಿದ ಅಧಿಕಾರಿಗಳಿಗೆ ನೀಡಬೇಕು ಎಂದು ಒಕ್ಕೂಟ ಮನವಿ ಮಾಡಿಕೊಂಡಿದೆ.
ಮಾತ್ರವಲ್ಲ ಈ ಪಠ್ಯಪುಸ್ತಕಗಳಲ್ಲಿ ಬದಲಾಗಿದ್ದ ಪ್ರಮುಖ ಪಾಠಗಳನ್ನು ಮತ್ತು ಕಲಿಕಾಂಶಗಳನ್ನು ತೆಗೆದು ಹಾಕಿ ವಿತರಿಸಲು ಆಯಾ ವ್ಯಾಪ್ತಿಯ ಸಿಆರ್ಪಿ ಮತ್ತು ಶಾಲೆಯ ಶಿಕ್ಷಕರನ್ನು ಹೊಣೆ ಮಾಡಬೇಕು. ಜೊತೆಗೆ, ಈ ವಿಷಯಗಳನ್ನು ಕಲಿಕೆ ಮತ್ತು ಮೌಲ್ಯಮಾಪನದಿಂದ ಕೈಬಿಡಲು ಸ್ಪಷ್ಟ ಸೂಚನೆ ನೀಡಬೇಕು. ಅಲ್ಲದೆ ಈ ಎಲ್ಲಾ ಪುಸ್ತಕಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಇಂದಿನ ಬದಲಾವಣೆಗೆ ತಕ್ಕಂತೆ ಪಠ್ಯಪುಸ್ತಕಗಳನ್ನು ಪರಿಷ್ಕರಿಸಲು ಕೂಡಲೇ ಒಂದು ತಜ್ಞರ ಸಮಿತಿಯನ್ನು ರಚಿಸಬೇಕು ಎಂದು ಒಕ್ಕೂಟ ಕೋರಿಕೊಂಡಿದೆ.
ಇದನ್ನೂ ಓದಿ : ಶಾಲಾ ಪಠ್ಯಪುಸ್ತಕಗಳ ಮರುಪರಿಷ್ಕರಣೆ ಸಮಿತಿ ರದ್ದುಪಡಿಸಲು ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ
ಕಳೆದ 4-5 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಶಿಕ್ಷಕರ ನೇಮಕಾತಿಗೆ ಕ್ರಮ ಕೈಗೊಳ್ಳಬೇಕು. 13,352 ಶಿಕ್ಷಕರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದ್ದು, ಶಾಲೆ ಪ್ರಾರಂಭವಾಗುವ ಮುನ್ನ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಸರಕಾರಿ ಶಾಲೆಯಲ್ಲಿ ಮಕ್ಕಳಿ ದ್ದರೂ ಶೂನ್ಯ ಶಿಕ್ಷಕರಿರುವ ಶಾಲೆಗ ಳಿಗೆ ಕೂಡಲೇ ಈ ಖಾಯಂ ಶಿಕ್ಷಕರ ನೇಮಕವಾಗಬೇಕು. ಬಾಕಿ ಖಾಲಿ ಉಳಿಯುವ ಹುದ್ಧೆಗಳಿಗೆ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರನ್ನು ಜೂನ್ 15ರ ಒಳಗಾಗಿ ನೇಮಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು. ಶಾಲೆ ಪ್ರಾರಂಭಕ್ಕೆ ಮುನ್ನ ಎಲ್ಲ ಮಕ್ಕಳಿಗೆ ದೊರೆಯಬೇಕಾದ ಉತ್ತೇಜಕಗಳಾದ ಪಠ್ಯಪುಸ್ತಕ, ಸಮವಸ್ತ್ರ, ಶೂ ಮತ್ತು ಸಾಕ್ಸ್‌ಗಳನ್ನು ಸಕಾಲಕ್ಕೆ ಒದಗಿಸಬೇಕು ಎಂದು ಆಗ್ರಹಿಸಿದೆ.
ಶಾಲಾ ಹಂತದಲ್ಲಿ ಮಕ್ಕಳ ಕಲಿಕೆಗೆ ತೊಂದರೆಯಾಗದಂತೆ ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 1ರಿಂದ 12ನೇ ತರಗತಿಯ ಎಲ್ಲ ಮಕ್ಕಳಿಗೆ ಉಚಿತ ಬಸ್ ಪಾಸ್ ನೀಡಬೇಕು. ಇದು ಶಾಲಾ ಲಾಗಿನ್ ನಲ್ಲಿಯೇ ದೊರೆಯುವಂತೆ ಮಾಡು ವುದು. ಸರಕಾರಿ ಶಾಲೆಗಳಲ್ಲಿ ಬಳಸುವ ವಿದ್ಯುತ್ ಹಾಗೂ ನೀರಿನ ಬಳಕೆಯ ಬಿಲ್ ಶುಲ್ಕ ಮನ್ನಾ ಮಾಡಬೇಕು. ಪ್ರೌಢ ಶಿಕ್ಷಣ ಮುಂದುವರಿಸಲು ಅನುಕೂಲವಾಗುವಂತೆ ಹೆಣ್ಣು ಹಾಗೂ ಗಂಡು ಮಕ್ಕಳಿಗೆ ಸಿಗುತ್ತಿದ್ದ ಸೈಕಲ್ ವಿತರಣೆಯು ನಾಲ್ಕು ವರ್ಷಗಳಿಂದ ಸ್ಥಗಿತವಾಗಿದ್ದು, ಅದನ್ನು ಕೂಡಲೇ ವಿತರಿಸಬೇಕು. ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವ ಭಾಗವಾಗಿ ಮಧ್ಯಾಹ್ನದ ಬಿಸಿಯೂಟದ ವೆಚ್ಚಕ್ಕೆ ಈಗಿರುವ ಪ್ರತಿ ಮಗುವಿನ ಯುನಿಟ್ ವೆಚ್ಚವನ್ನು ಹೆಚ್ಚಿಸಬೇಕು. ಪದವಿ ಪೂರ್ವ ಕಾಲೇಜುಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಇಂದಿರಾ ಕ್ಯಾಂಟೀನ್ ಮಾದರಿಯಲ್ಲಿ ಮಧ್ಯಾಹ್ನ ಉಚಿತ ಊಟ ಒದಗಿಸಬೇಕು. ಯಾವುದೇ ನೆಪಹೇಳಿ ಸರಕಾರಿ ಶಾಲೆಗಳನ್ನು ಸಾಮೂಹಿಕವಾಗಿ ಮುಚ್ಚುವ ಅಥವಾ ವಿಲೀನಗೊಳಿಸುವ ಪ್ರಕ್ರಿಯೆಯನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದೆ.
ಇದನ್ನೂ ಓದಿ : ಪಠ್ಯಪುಸ್ತಕ ಮರು ಪರಿಷ್ಕರಣೆ ಸಮಿತಿ ವಜಾ-ಸಚಿವರ ರಾಜೀನಾಮೆಗೆ ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆ
ವಿಶ್ವವಿದ್ಯಾಲಯಗಳಲ್ಲಿನ ಸಿಂಡಿಕೇಟ್ ಕೋಮುವಾದಿ ಮನಸ್ಥಿತಿಗಳ ಸದಸ್ಯರ ಬದಲಾಯಿಸಿ, ಜಾತ್ಯತೀತ ನಿಲುವಿನ ಸದಸ್ಯರ ನೇಮಕ ಮಾಡಬೇಕು. ಹಿಜಾಬ್ ವಿವಾದದಿಂದಾಗಿ ಸಾವಿರಾರು ಹೆಣ್ಣುಮಕ್ಕಳು ಶಿಕ್ಷಣ ವಂಚಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಮವಸ್ತ್ರ ಕುರಿತ ಸರ್ಕಾರಿ ಆದೇಶವನ್ನು ಪರಿಷ್ಕರಿಸಬೇಕು ಎಂದು ಸಮಾನ ಮನಸ್ಕರ ಒಕ್ಕೂಟ ಸಿಎಂ ಸಿದ್ದರಾಮಯ್ಯನವರಿಗೆ ಆಗ್ರಹ ಮಾಡಿದೆ.
ತಮ್ಮನ್ನು ಭೇಟಿಯಾದ ನಿಯೋಗಕ್ಕೆ ಮುಖ್ಯಮಂತ್ರಿಗಳು, ಮಕ್ಕಳ ಮನಸ್ಸಿಗೆ ವಿಷ ತುಂಬುವ ಪಠ್ಯ ಮತ್ತು ಪಾಠಗಳಿಗೆ ಅವಕಾಶ ಕೊಡುವುದಿಲ್ಲ. ಪಠ್ಯಪುಸ್ತಕ ಪರಿಷ್ಕರಣೆ ಸುದೀರ್ಘ ಸಮಯ ತೆಗೆದುಕೊಳ್ಳುವ ಪ್ರಕ್ರಿಯೆ. ಮರುಮುದ್ರಣವೂ ವೆಚ್ಚದಾಯಕ. ಶೈಕ್ಷಣಿಕ ವರ್ಷ ಆರಂಭವಾಗಿರುವುದರಿಂದ ಈಗ ಅಂತಹ ಸಾಹಸ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಸದ್ಯಕ್ಕೆ ಪಠ್ಯಪುಸ್ತಕದಲ್ಲಿರುವ ಸಾಮಾಜಿಕ, ಪ್ರಾದೇಶಕ ಅಸಮಾನತೆಗೆ ಕಾರಣವಾದ ಕೆಲ ಪಾಠಗಳನ್ನು ಕೈಬಿಟ್ಟು, ಪೂರಕವಾದ ಕೆಲ ಪಾಠಗಳನ್ನು ಸೇರಿಸಿಕೊಂಡು ಪಾಠ ಮಾಡಲು ಸುತ್ತೋಲೆ ಹೊರಡಿಸಲಿದ್ದೇವೆ. ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡಲು ಬಿಡುವುದಿಲ್ಲ ಎಂಬ ಭರವಸೆ ನೀಡಿದ್ದಾರೆ.