ಒಬಿಸಿ ಕೋಟಾದಡಿ ಮುಸ್ಲಿಮರಿಗೆ ನೀಡಿದ್ದ ಶೇ4ರಷ್ಟು ಮೀಸಲಾತಿ ಜಾರಿ ಸದ್ಯಕ್ಕಿಲ್ಲ

ವದೆಹಲಿ : ಕರ್ನಾಟಕದಲ್ಲಿ ಮುಸ್ಲಿಮರಿಗೆ ನೀಡಿದ್ದ ಶೇ 4ರಷ್ಟು ಒಬಿಸಿ ಕೋಟಾ ಮೀಸಲಾತಿಯನ್ನು ರದ್ದುಗೊಳಿಸಿರುವ ನಿರ್ಧಾರವನ್ನು ಇನ್ನೂ ಒಂದು ವಾರದವರೆಗೆ ಜಾರಿಗೊಳಿಸುವುದಿಲ್ಲ ಎಂದು ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ನ್ಯಾಯಮೂರ್ತಿಗಳಾದ ಕೆ.ಎಂ. ಜೋಸೆಫ್‌ ಹಾಗೂ ಬಿ.ವಿ.ನಾಗರತ್ನ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠದ ಎದುರು ಕರ್ನಾಟಕ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ‘ಪ್ರಮಾಣಪತ್ರ ಸಲ್ಲಿಸಲು ಸರ್ಕಾರಕ್ಕೆ ಹೆಚ್ಚಿನ ಕಾಲಾವಕಾಶ ಬೇಕಿದೆ’ ಎಂದರು.

ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್‌ ಸಿಬಲ್‌, ‘ರಾಜ್ಯ ಸರ್ಕಾರವು ವಾರದೊಳಗೆ ಪ್ರತಿಕ್ರಿಯೆ ನೀಡಬೇಕು. ವಿಚಾರಣೆಯನ್ನು ಇದೇ 25ಕ್ಕೆ ಮುಂದೂಡಬಹುದು’ ಎಂದು ಸಲಹೆ ನೀಡಿದರು. ಇದಕ್ಕೆ ಒಪ್ಪಿದ ಪೀಠವು ವಿಚಾರಣೆಯನ್ನು ಏಪ್ರಿಲ್‌ 25ಕ್ಕೆ ಮುಂದೂಡಿತು. ಪ್ರತಿಕ್ರಿಯೆ ನೀಡಲು ಏಪ್ರಿಲ್‌ 17ರವರೆಗೆ ಕಾಲಾವಕಾಶ ನೀಡುವಂತೆ ರಾಜ್ಯ ಸರ್ಕಾರ ಕಳೆದ ವಾರ ಕೋರಿತ್ತು. ಮುಸ್ಲಿಮರಿಗೆ ಇದ್ದ ಶೇ 4ರಷ್ಟು ಮೀಸಲಾತಿಯನ್ನು ರದ್ದುಪಡಿಸಿ ಕರ್ನಾಟಕ ಸರ್ಕಾರವು ಮಾರ್ಚ್‌ 27ರಂದು ಆದೇಶ ಹೊರಡಿಸಿತ್ತು.ಇದನ್ನು ಪ್ರಶ್ನಿಸಿ ಎಲ್‌. ಗುಲಾಮ್ ರಸೂಲ್‌ ಮತ್ತು ಇತರರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.

ಇದನ್ನೂ ಓದಿ : ಮೀಸಲಾತಿ ಮರುಹಂಚಿಕೆ: ಆದೇಶ ಪ್ರಕಟ

ಪ್ರಕರಣದ ವಿಚಾರಣೆ ನಡೆಸಿದ್ದ ಪೀಠವು, ‘ರಾಜ್ಯ ಸರ್ಕಾರದ ನಿರ್ಧಾರವು ದೋಷಪೂರಿತ ಹಾಗೂ ಪ್ರಮಾದದಿಂದ ಕೂಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ’ ಎಂದು ಕಳೆದ ಗುರುವಾರ ಹೇಳಿತ್ತು. ‘ಮಾರ್ಚ್‌ 27ರ ಆದೇಶದ ಆಧಾರದ ಮೇಲೆ ಯಾವುದೇ ಶೈಕ್ಷಣಿಕ ಸಂಸ್ಥೆಗಳಿಗೆ ಪ್ರವೇಶಾತಿ ನೀಡುವುದಿಲ್ಲ ಮತ್ತು ಯಾವುದೇ ಉದ್ಯೋಗಗಳಿಗೆ ನೇಮಕಾತಿ ಮಾಡುವುದಿಲ್ಲ’ ಎಂದು ಸರ್ಕಾರ ಭರವಸೆ ನೀಡಿತ್ತು.

ಮುಸ್ಲಿಮರಿಗೆ ಇದ್ದ ಶೇ 4ರಷ್ಟು ಮೀಸಲಾತಿಯನ್ನು ಲಿಂಗಾಯತರಿಗೆ ಹಾಗೂ ಒಕ್ಕಲಿಗರಿಗೆ ತಲಾ ಶೇ 2ರಷ್ಟು ಹಂಚುವ ನಿರ್ಣಯವನ್ನು ಕರ್ನಾಟಕ ಸರ್ಕಾರ ಮಾಡಿತ್ತು. ಮುಸ್ಲಿಮರನ್ನು ಆರ್ಥಿಕವಾಗಿ ದುರ್ಬಲ ವರ್ಗದ (ಇಡಬ್ಲ್ಯುಎಸ್‌) ಪಟ್ಟಿಗೆ ಸೇರಿಸುವ ನಿರ್ಧಾರವನ್ನೂ ತೆಗೆದುಕೊಂಡಿತ್ತು.

Donate Janashakthi Media

Leave a Reply

Your email address will not be published. Required fields are marked *